logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಗನೃಪ
ಅಂಗರಾಜ್ಯದ ದೊರೆ, ಕರ್ಣ (ಅಂದು ಭೋಂಕನೆ ಕಂಡಂ ಗಂಗಾಂಗನೆಯಂ ಕಾಣ್ಬವೊಲ್ ಅಂಗನೃಪಂ ಮುಂದೆ ನಿಂದ ಕೊಂತಿಯನಾಗಳ್: ಪಂಪಭಾ, ೯. ೭೩)

ಅಂಗಭವ
ಮಗ (ಅಂಗಭವ ಕೋಮಲಾಂಗ ಆಲಿಂಗನಸುಖ ದೊರೆಗೆ ವಾರದಲ್ತೆ ಕುಳಿರ್ ಕೋೞ್ಚೆಂಗಡಲೊಳ್ ಮುೞುಗಿದೊಡಂ ತಿಂಗಳ ತಣ್ಗದಿರ ಜೊಂಪದೊಳ್ ನೆಲಸಿದೊಡಂ: ಮಲ್ಲಿನಾಪು, ೩, ೯೭)

ಅಂಗಮಹೀತಳ
ಅಂಗದೇಶ (ಮಂಗಳವಱೆಗಳ್ ಶುಭವಚನಂಗಳ್ ಚಮರರುಹಂಗಳ್ ಆ ಶ್ವೇತಚ್ಛತ್ರಂಗಳ್ ಅಮರ್ದೆಸೆಯೆ ಕರ್ಣಂಗೆ ಅಂಗಮಹೀತಳವಿಭೂತಿಯಂ ನೆಱೆಯಿತ್ತಂ: ಪಂಪಭಾ, ೮. ೭೩)

ಅಂಗಮಹೀಶ
ಅಂಗರಾಜ್ಯಾಧಿಪತಿ, ಕರ್ಣ (ತನ್ನೀವಳವಿಂ ಪಾರ್ವಂಗಂ ಅಳಿಪಿ ಬೇಡಿದ ಪಾರ್ವಂಗಂ ಪಿರಿದನಿತ್ತಂ ಅಂಗಮಹೀಶಂ: ಪಂಪಭಾ, ೯. ೭೨)

ಅಂಗಯಷ್ಟಿ
ಯಷ್ಟಿ[ಕೋಲು]ಯಂತೆ ತೆಳ್ಳಗಿರುವ ದೇಹ (ಪದೆಪಿನ ಮಾತುಗಳ್ ಪಲವುಮಂ ಬಿಡದಾಡಿದೊಡಲ್ಲಿ ಬರ್ಪುದಾವುದು ಗಡ ದೇವ ಮತ್ ನಯನದೊಳ್ ನಯನಂ ಕರದೊಳ್ ಕರಾಬ್ಜಂ ಅಂಗದೊಳ್ ಎಸೆವ ಅಂಗಯಷ್ಟಿ: ಕಾದಂಸಂ, ೬. ೪)

ಅಂಗಯ್ಸು
ಸ್ವೀಕರಿಸು (ನೀನಿಂ ಮನಮೊಲ್ದು ಅದಂ ಅಂಗಯ್ಸು ಎನಲ್ ಅನುನಯದಿಂದಂದು ತಾಳ್ದಿದಂ ಬಹುವಿದ್ಯೆಗಳಂ: ಕರ್ಣನೇಮಿ, ೪. ೪)

ಅಂಗರಕ್ಕೆ
[ಅಂಗರಕ್ಷಾ] ಮೈಗಾವಲ ಭಟ (ಅಂಗರಕ್ಕರ ನೆರದೊಳ್ .. .. ಬರೆ ನೃಪಾಂಗನೆಯರ್ಕಳ್: ಶಾಂತಿಪು, ೧೦. ೧೪೮); ಮೈಯ ರಕ್ಷಣೆಯ ವಸ್ತು, ಕವಚ (ಸಂಗರಕ್ಕೆ ತಾನಂಗರಕ್ಕೆ ರಘುಜಂಗೆಂಬಂತೆ: ಪಂಪರಾ, ೧೪. ೩೭)

ಅಂಗರಕ್ಷಾವಳಿ
ರಾಜನ ಮೈಗಾವಲ ದಳ (ವಿಷಯ ಗೃಹಾಮಾತ್ಯ ದಂಡಾಧಿನಾಥಾವಳಿ ಧರ್ಮಾಧ್ಯಕ್ಷ ಕೋಶಾಧಿಪ ತಳವರ ಹಾಸ್ಯಾದಿ ತಂತ್ರಾಳಿಪಾಳಾವಳಿ ರಾಜಶ್ರೇಷ್ಠಿ ಸೇನಾಪರಿಕರಣ ಪುರೋಧೋಧಿಕಾರ ಅಂಗರಕ್ಷಾವಳಿ ಮುಖ್ಯಂಬೆತ್ತ ಬಾಹತ್ತರದೆಸಕದ ನಾನಾ ನಿಯೋಗಿಪ್ರತಾನಂ: ಶಾಂತೀಶ್ವಪು, ೧೫. ೯೦)

ಅಂಗರವೋಳಿಗೆ
[ಅಂಗಾರಸ್ಫೋಟಿಕಾ] ಕೆಂಡದ ಮೇಲೆ ಸುಟ್ಟ ರೊಟ್ಟಿ (ಪೊಂಗಿರ್ದಂಗರವೋಳಿಗೆಯಂ ಗರಗರನಪ್ಪ ತುಪ್ಪಮಂ: ಪಾರ್ಶ್ವನಾಪು, ೮. ೫೬)

ಅಂಗರಾಗ
ಮೈಗೆ ಹಚ್ಚಿಕೊಳ್ಳುವ ಪರಿಮಳದ್ರವ್ಯ (ಮಱುದೆವಸಂ ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಸೆಱೆಯೆನಿಪ ಅಂಗರಾಗಮಂ ಇಳೇಶ್ವರವಲ್ಲಭೆಯಟ್ಟಲ್ ಉಯ್ದೊಡೆ: ಪಂಪಭಾ, ೮. ೭೩)


logo