logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಯಂತ್ರ
ಉಪಕರಣ (ನಾರೀರೂಪದ ಯಂತ್ರಂ ಚಾರುತರಂ ನೋಡೆ ನೋಡೆ ಕರಗಿದುದು ಈ ಸಂಸಾರದನಿತ್ಯತೆ ಮನದೊಳ್ ಬೇರೂಱದುದು: ಆದಿಪು, ೯. ೪೪)

ಯಂತ್ರಮುಕ್ತ
ಯಂತ್ರದ ಮೂಲಕ ಪ್ರಯೋಗಿಸಬೇಕಾದ ಆಯುಧ (ಅಸಿ ಮುಸಲ ಕಣಯ ಕಂಪಣ ಗದಾದಂಡ ತೋಮರ ಆದಿ ಆಮುಕ್ತಾಮುಕ್ತ ಪಾಣಿಮುಕ್ತ ಯಂತ್ರಮುಕ್ತಂಗಳಪ್ಪ ನಿಜನಿಶಿತ ನಿಖಿಳಾಯುಧಂಗಳಂ: ಪುಷ್ಪದಂಪು, ೮. ೨೮ ವ)

ಯಃ ಪಲಾಯಃ ಸ ಜೀವತಿ
ಯಾವನು ಪಲಾಯನ ಮಾಡುತ್ತಾನೋ ಅವನು ಬದುಕುತ್ತಾನೆ (ಯಃ ಪಲಾಯಃ ಸ ಜೀವತಿ ಎಂದೋಡುವ ತನ್ನ ಮೆಯ್ದುನೆನಿಪ್ಪಾ ರುಕ್ಮಿಗಂ .. .. ಶ್ರುತಿಪೂರಮಾಯ್ತು ಜಯಭೆರಿನಾದವಾ ಕೃಷ್ಣನಾ: ಜಗನ್ನಾವಿ, ೧೭. ೫೭)

ಯಕ್ಷ
ಒಂದು ದೇವಯೋನಿ (ಖೇಚರ ಕಿನ್ನರ ಯಕ್ಷ ಪಿಶಾಚರ್ ಗಂಧರ್ವರ್ ಅಪ್ಸರಪ್ರಕರಂ ದೊಷಾಚರರ್ ಎಂದು ಅದ್ಭುತಗುಣಗೋಚರರವರ್ ಎಯ್ದೆ ದೇವಯೋನಿಗಳೆನಿಪರ್: ಅಭಿಧಾವ, ೧. ೧. ೫೪) ಯಕ್ಷಮುಖ್ಯ, ಕುಬೇರ (ಧನಪತಿ ಯಕ್ಷಂ ಶ್ರೀದಂ .. .. ಧನದಂ ಕುಬೇರಂ ಅಳಕಾಧಿನಾಯಕಂ: ಅಭಿಧಾವ, ೧. ೧. ೪೬); [ಜೈನ] ವ್ಯಂತರ ದೇವತೆಗಳ ಒಂದು ವರ್ಗ (ಆನೀ ವಟವೃಕ್ಷ ನಿವಾಸಿಯೆಂ ಮನೋಹರನೆಂಬ ಯಕ್ಷನೆಂ: ವಡ್ಡಾರಾ, ಪು. ೫೬, ಸಾ. ೧೬)

ಯಕ್ಷಕರ್ದಮ
ಪರಿಮಳ, ಲೇಪನ ದ್ರವ್ಯ (ಕಾಳಾಗರುಕಾಶ್ಮೀರ ಕಸ್ತೂರಿ ಕರ್ಪೂರ ಯಕ್ಷಕರ್ದಮಕ್ಷೆದದೊಳಂ ನದೀತರಂಗಘಗಳಂ ವಿಚಿತ್ರವರ್ಣಂ ಮಾಡಿ: ಆದಿಪು, ೧೧. ೧೩೯ ವ)

ಯಕ್ಷಿ
[ಜೈನ] ಪ್ರತಿಯೊಬ್ಬ ತೀರ್ಥಂಕರನ ಬಳಿ ಇರುವ ಶಾಸನ ದೇವತೆ (ಯಕ್ಷಿ ಬರೆ ಕಂಡು ತಾಂ ಪ್ರತ್ಯಕ್ಷಂ ಕರೆದೆನ್ನಂ ಇತ್ತಳೀ ಪುತ್ರನಂ: ಕರ್ಣನೇಮಿ, ೬. ೪೦)

ಯಕ್ಷೆಂದ್ರ
ಯಕ್ಷರ ಒಡೆಯ, ಕುಬೇರ (ಕುಂದದ ಶರನಿಧಿ ಯಕ್ಷೇಂದ್ರನಿಧಿಯಿದೆನೆ ಸೊಗಯಿಸುಗುಂ: ರಾಜಶೇವಿ, ೬. ೧೧೩)

ಯಜನ
ಯಾಗ ಮಾಡುವಿಕೆ (ಅಂತು ಭವಿಷ್ಯದ್ ದ್ವಿಜವರ್ಣಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನವಿಶಿಷ್ಟವೃತ್ತಿಯುಮಂ: ಆದಿಪು, ೮. ೭೩ ವ)

ಯಜಮಾನ
ಎಂಟು ಮೂರ್ತಿಗಳ ಶಿವನ ಒಂದು ಮೂರ್ತಿ (ಗೋಕರ್ಣನಾಥನಂ ಗೌರೀನಾಥನಂ ಅವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರೈಲೋಕ್ಯಸಂಗೀತಕೀರ್ತಿಯಂ ಕಂಡು ಕೆಯ್ಗಳಂ ಮುಗಿದು: ಪಂಪಭಾ, ೪. ೨೬ ವ); ಯಾಗಕರ್ತ (ಧರ್ಮಪುತ್ರಂ ಸಪತ್ನಿ ಯಜಮಾನನಾಗಿರ್ದಾಗಳ್: ಪಂಪಭಾ, ೬. ೩೩ ವ)

ಯಜ್ಞ
ಯಾಗ ಕ್ರತು ಯಾಗಂ ಅಧ್ವರಮ ಸಪ್ತತಂತು ಸತ್ರಂ ಮಖಂ ಸವಂ ಯಜ್ಞಂ: ಅಭಿಧಾವ, ೧. ೧೧. ೪೧)


logo