logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಏಂ
ಏನು ಕಾರಣ, ಏಕೆ (ಇಱವಂತು ನಿನಗೆ ಮನದೊಳ್ ತಱಸಲವುಂಟಪ್ಪೊಡೆ ಎಲವೊ ದೇವೇಶನಂ ಏಂ ಸೆಱೆವಿಡಿದೆ: ಪಂಪಭಾ, ೧೦. ೧೨೧)

ಏಂ ಗಳ
ಏನಪ್ಪಾ! ಹಾಗಲ್ಲವೇ (ಪಸಿವನಾಮೇಗೊಂಡು ಏಂ ಗಳ ಗೆಯ್ವೆವು: ಆದಿಪು, ೭. ೭೩)

ಏಂ ಪಿರಿದೋ
ಏನು ದೊಡ್ಡದೋ! (ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨)

ಏಕ
ಸಮಾನವಿಲ್ಲದ, ಶ್ರೇಷ್ಠ (ಏಕಂ ಕೂಟಸ್ಥಂ ನಿನ್ನಾಕಾರ ತ್ರಿತಯವಾದ ವಿಭುತೆ ಸಮಗ್ರಂ: ಜಗನ್ನಾವಿ, ೪. ೮೦)

ಏಕಕ
ಒಬ್ಬಂಟಿ (ರಾಜವ್ರಜಪರಿಷತ್ ಪರಿವೃಷ್ಟಿತ ಪ್ರಭುವೇಕೆ ತೊಟ್ಟನೆ ಏಕಕನಾದಂ: ಕರ್ಣನೇಮಿ , ೧೪. ೮೭)

ಏಕಕುಂಡಲ
ಬಲರಾಮ (ಆರ್ಪಿನ ತಱಸಲದಂ ಕಂಡಂ ಏಕಕುಂಡಲನೆ ವಲಂ: ಪಂಪರಾ, ೬. ೧೩೫)

ಏಕಗ್ರಾಹಿ
ಒಂದೇ ಪಟ್ಟು ಹಿಡಿದವನು (ಆಗಳ್ ಅಂಗರಾಜಂಗೆ ಶಲ್ಯಂ ಕಿನಿಸಿ ಮುಳಿಸಿನೊಳೆ ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒಱಂಟಂಗಂರಥಮಂ ಎಸಗೆಂ ಎಂದು ವರೂಥದಿಂದ ಇೞದು ಪೋಗೆ: ಪಂಪಭಾ, ೧೨. ೨೦೫ ವ)

ಏಕಚಕ್ರ
ಒಬ್ಬನೇ ರಾಜನ ಆಳ್ವಿಕೆಗೊಳಪಟ್ಟದ್ದು (ತದ್ಭೂಪತಿಗೆ ಅಖಿಳಧರಾಚಕ್ರಂ ಆಯ್ತು ಏಕಚಕ್ರಂ: ಸುಕುಮಾಚ, ೯. ೭೩)

ಏಕಚ್ಛತ್ರಚ್ಛಾಯೆ
ಒಂದೇ ಕೊಡೆಯ ನೆರಳು, ಒಬ್ಬ ರಾಜನ ಆಳ್ವಿಕೆ (ಅಂತು ಭರತಂ ಭರತಮಂಡಲಮಂ ಏಕಛತ್ರಚ್ಛಾಯೆಯಿಂದಂ ಪ್ರತಿಪಾಲಿಸುತ್ತಮಿರೆಯಿರೆ: ಆದಿಪು, ೫. ೪ ವ)

ಏಕಚ್ಛತ್ರೀಕೃತ
ಒಂದೇ ಆಳ್ವಿಕೆಗೊಳಪಡಿಸಿದ (ಅತೆ ಏಕಚ್ಛತ್ರೀಕೃತ ಭರತವರ್ಷನುಂ: ಚಂದ್ರಪ್ರಪು, ೭. ೩೫ ವ)


logo