logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧಗಂ
ಧಸಕ್ ಎನ್ನುವಂತೆ ಅನುಕರಣ ಪದ (ನಿನ್ನನೊರ್ವನಂ ಪಗೆವಡೆಯೊಡ್ಡುಗಳಂ ಒಡೆಯಲ್ಕೆ ಪೇೞ್ದು ಎರ್ದೆ ಧಗಂ ಎನೆ ಸೈರಿಸುವ ಉಪಾಯಮಾವುದು ಕಱುವೇ: ಪಂಪಭಾ, ೧೧. ೯೧)

ಧಗದ್ಧಗಿತರವ
ಧಗಧಗ ಎಂಬ ಶಬ್ದ (ಧೃತಧಗದ್ಧಗಿತರವನಿರ್ಮಳಶಿಖಾಳಿಯಂ ಸತತಗತಿ ಪಥಮನಡರ್ವುಜ್ಜ್ವಳಜ್ವಾಳೆಯಂ: ಆದಿಪು, ೭. ೨೭ ವ)

ಧನ
ಹಣ (ದ್ರವಿಣಂ ದ್ರವ್ಯಂ ವಸು ಅರ್ಥ ವಿತ್ತ ರೈ ರಿಕ್ಥ ಸಾರ ಧನವೇಕಾರ್ಥಂ: ಅಭಿಧಾವ, ೧. ೬. ೧೨)

ಧನಂಜಯ
ಅರ್ಜುನ (ಅನ್ನೆಗಂ ತನ್ನ ಮಯ್ದುನನಪ್ಪ ಅಮೋಘಾಸ್ತ್ರಧನಂಜಯನ ಬರವಿನ ಸಂತಸದೊಸಗೆ ಪಡೆಮಾತಂ ಮುಂದುವರಿದಱಪುವಂತೆ: ಪಂಪಭಾ, ೪. ೩೨ ವ); ಅಗ್ನಿ (ಕೆಂಜೆಡೆ ಬಾಂದೊಱೆಯಿಂದೆ ಧನಂಜಯಂ ಅಹಿಪಂ ವಿಷಂ ವಿಭೂತಿ ಕಪಾಲಂ .. .. ರಂಜಿಸಲ್ ಅಭವಂ ಸ್ವರೂಪದಿಂದೆಸೆದಂ: ತ್ರಿಷಷ್ಟಿಪು, ೫೩. ೧೪); ಬೆಂಕಿ (ಯಾಮಿನೀವ್ಯೋಮದಂತೆ ಸಿತರುಚಿದಾಳ್ದು ಧನಂಜಯನಂತೆ ರುದ್ರಾಕ್ಷದಿಂ ರಂಜಿಸಿ: ರಾಜಶೇವಿ, ೧೦. ೫೭ ವ)

ಧನಂಜಯಾಂಬಕ
ಉರಿಗಣ್ಣ, ಶಿವ (ಪಾಂಡುಪುತ್ರನಾತಂ ಜಡಿದೊತ್ತೆ ಜಾಱ ಪೆಱಸಾರ್ವನೆ ಧೀರ ಧನಂಜಯಾಂಬಕಂ: ಶಬರಶಂ, ೪. ೪೪)

ಧನಕೋಶ
ಕೋಶಾಗಾರ (ಧನಕೋಶಂ ನವಹೇಮತಾಮರಸಕೋಶಂ ದೇಶಮಾಸೈಕತಾವನಿದೇಶಂ ಸಹಕಾರಿ ಸಾರಸಹಕಾರಂಮಂತ್ರಿ ಮಂದಾನಿಳಂ; ಚಂದ್ರಪ್ರಪು, ೧೧. ೫೯)

ಧನದ
ಕುಬೇರ (ಧನದಂ ಕಾಂಚನಪಂಚರತ್ನಮಯಂ ರಯವಷ್ಟಿಯಂ ಮಡುವಲ್ಲಿ: ಆದಿಪು, ೭. ೨೪); ಹಣ ನೀಡುವವನು (ಧನದರಲ್ಲದ ಧನದರಿಲ್ಲ ತಕ್ಕರಲ್ಲದೆ ಟಕ್ಕರಿಲ್ಲ ಜನ್ನಮಲ್ಲದೆ ಬನ್ನಮಿಲ್ಲ: ಅಜಿತಪು, ೧. ೨೦ ವ)

ಧನದನಿವಾಸ
ಕುಬೇರನ ಆವಾಸ, ಶ್ರೀಮಂತನ ಮನೆ (ಧನದನಿವಾಸದಿಂ ಮಣಿಮಯೋಜ್ವಳದೇವಕುಲಳಗಳಿಂದೆ ನಂದನವನದಿಂ: ಪಾರ್ಶ್ವನಾಪು, ೧. ೧೧೧)

ಧನದಪತಿ
ಕುಬೇರ (ಅದಱ ವಿಶಾಳತೆವೆತ್ತಿರ್ಪ ತತ್ಪ್ರಥಮಶಾಳದೊಳಗ್ರ ಸುರಪತಿ ಪಿತೃಪತಿ ಶರಧಿಪತಿ ಧನದಪತಿಗಳ ಕೇಳೀವಿಲಾಸಶೋಭಿತಂಗಳಪ್ಪ ನಾಲ್ಕುಂ ದೆಸೆಗಳ ಮಣಿರತ್ನಹರ್ಮ್ಯಂಗಳುಮಂ: ಶಾಂತೀಶ್ವಪು, ೧೬. ೩೧ ವ)

ಧನದಮಿತ್ರ
ಕುಬೇರನ ಸ್ನೇಹಿತ, ಶಿವ (ಕಲ್ಯಾಣಭೂಭೃತ್ ಸದನ ಧನದಮಿತ್ರಂ .. .. ನಂದಿಕೇಶಂ ಮಹೇಶಂ: ರಾಜಶೇವಿ, ೧. ೧ )


logo