logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂತರ್ನಿವೇಶನ
(ವೈ) ೧. ಸ್ತನಿಯ ಅಂಡ ವಾಹಕ ನಾಳದಲ್ಲಿ ನಿಷೇಚಿತವಾದ ಅಂಡವನ್ನು ಸೇರಿಸುವುದು. ಅಲ್ಲಿ ಅದು ೬-೭ ದಿವಸಗಳಲ್ಲಿ ಸತತವಾಗಿ ವಿಭಜನೆಗೊಂಡು ಜೀವಕೋಶಗಳ ಒಂದು ಚೆಂಡನ್ನು (ಬ್ಲಾಸ್ಟೋಸಿಸ್ಟ್) ರೂಪಿಸುತ್ತದೆ. ಇದು ಗರ್ಭಾಶಯದ ಒಳಪೊರೆಯಲ್ಲಿ ಬಂದು ನಾಟಿಕೊಳ್ಳುತ್ತದೆ. ೨. ಕೃತಕವಾಗಿ ರೂಪಿಸಿದ ಹಲ್ಲುಗೂಡಿನಲ್ಲಿ ನೈಜ ಹಲ್ಲನ್ನು ನಾಟುವುದು. ೩. ಊತಕ ಬದಲಿ ಜೋಡಣೆಯಲ್ಲಿ ಊತಕವನ್ನು ಉಪಕರಣದ ನೆರವಿನಿಂದ ನೆಡುವುದು. ೪. ಮೂಳೆಮುರಿತದಲ್ಲಿ ಯಾಂತ್ರಿಕ ದುರಸ್ತಿಗಾಗಿ ವೈವಿಧ್ಯಮಯವಾದ ಸಾಧನಗಳನ್ನು ಶರೀರದೊಳಗೆ ಸ್ಥಾಪಿಸುವುದು. ೫. ವಸ್ತುಗಳನ್ನು ಚರ್ಮದ ಅಡಿಯಲ್ಲಿ ಇಡುವುದು. ಚರ್ಮ ತಳ ಅಂತರ್ನಿವೇಶನ. ೬. ನರ ವೊಂದನ್ನು ಮತ್ತೊಂದು ನರದ ಹೊದಿಕೆಯಲ್ಲಿ ನಾಟುವುದು. ನರ ಅಂತರ್ನಿವೇಶನ. ೭. ಚರ್ಮದ ಕೆಳಗೆ ಅಥವಾ ಸ್ನಾಯುವಿನೊಳಗೆ ಔಷಧಯುಕ್ತ ಕಿರುಗೋಲಿಯನ್ನು (ಪೆಲ್ಲೆಟ್) ಸ್ಥಾಪಿಸುವುದು. ಕಿರುಗೋಲಿ ಅಂತರ್ನಿವೇಶನ
implantation

ಅಂತರ್ನಿಷೇಚನ
(ಸ) ಒಂದೇ ಸಸ್ಯದ ಎರಡು ಹೂಗಳ ನಡುವೆ ಸಂಭವಿಸುವ ಪರಾಗಸ್ಪರ್ಶ. (ಪ್ರಾ) ತೀರ ಸಮೀಪ ಸಂಬಂಧಿ ಮಾತಾಪಿತೃ ಯುಗ್ಮಕಗಳ ನಡುವೆ ಆಗುವ ಸಂಯೋಗ. ಅಂತರ್ವಿವಾಹ. ಸಗೋತ್ರ ವಿವಾಹ
endogamy

ಅಂತರ್ಮುಖಿ
(ವೈ) ತನ್ನದೇ ಆದ ಆಲೋಚನೆಗಳಲ್ಲಿ ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಸ್ತು ವಿಷಯಗಳ ಬಗ್ಗೆ ಆಸಕ್ತಿ ಇಲ್ಲದವನು. ಅಂತರ್ವರ್ತಿ. ನೋಡಿ: ಬಹಿರ್ಮುಖಿ
introvert

ಅಂತರ್ಲೇಖನ
(ಗ) ಒಂದು ತ್ರಿಭುಜದ ಒಳಗೆ ಮೂರು ಭುಜಗಳೂ ಒಂದು ವೃತ್ತಕ್ಕೆ ಸ್ಪರ್ಶರೇಖೆಗಳಾಗುವಂತೆ ವೃತ್ತವನ್ನು ರಚಿಸುವುದು. ತ್ರಿಭುಜದ ಬದಲಿಗೆ ಇನ್ನೂ ಹೆಚ್ಚು ಭುಜಗಳನ್ನು ಹೊಂದಿರುವ ಒಂದು ಬಹುಭುಜ (ಪಾಲಿಗನ್)ವೂ ಆಗಿರಬಹುದು
endogeny

ಅಂತರ್ವರ್ಧನ
(ಜೀ) ಸಸ್ಯದ ಅಥವಾ ದೇಹದ ಒಳಭಾಗದಿಂದ ಬೆಳವಣಿಗೆ ಆಗುವುದು
endogeny

ಅಂತರ್ವಲನ
(ಪ್ರಾ) ಕೊಳವೆಯೊಳಕ್ಕೆ ಮಡಚುವುದು. ಹೊರಮೈ ಒಳಮೈ ಆಗುವಂತೆ ಶರೀರದ ಯಾವುದೇ ಭಾಗವನ್ನು ಒಳಕ್ಕೆ ಮಡಚುವುದು. ಬ್ಲಾಸ್ಟುಲದ ಭಿತ್ತಿಯ ಒಂದು ಭಾಗವನ್ನು ಗ್ಯಾಸ್ಟುಲ ಆಗುವಂತೆ ಆವರಿಸುವುದು
invagination

ಅಂತರ್ವಲಿತ
(ಗ) ಸಮತಲ ವಕ್ರರೇಖೆಯನ್ನು ಸುತ್ತಿರುವ ಅನಮ್ಯ ದಾರವನ್ನು ಬಿಗಿಯಾಗಿ ಎಳೆದು ಬಿಚ್ಚುತ್ತ ಇರುವಾಗ ದಾರದ ಮೇಲಿನ ಯಾವುದೇ ಸ್ಥಿರ ಬಿಂದುವನ್ನು ರೇಖಿಸುವ ಪಥ. ನೋಡಿ: ಕೇಂದ್ರಜ. ಪ್ರತಿಯೊಂದು ವಕ್ರರೇಖೆಗೂ ಅಸಂಖ್ಯ ಆಂತರ್ವಲಿತಗಳು ಇವೆ. (ಸ) ಅಂಚುಗಳು ಒಳಮುಖಿಯಾಗಿ ಸುರುಳಿ ಸುತ್ತಿರುವುದು
involute

ಅಂತರ್ವಿಷ್ಟ
(ಸ) ಇತರ ಕಾಯಗಳ ನಡುವೆ ಅಥವಾ ಕಾಂಡ, ತಂತು, ಹೈಫ ಇತ್ಯಾದಿಗಳ ನಡುವೆ ಇರಿಸಿದ. (ತಂ) ಎರಡು ಮೂಲ ಘಟಕಗಳ ನಡುವೆ ಜೋಡಿಸಿದ. (ಖ) ಸೌರವರ್ಷಕ್ಕೆ ಸರಿ ಹೊಂದಿಸಲು ಚಾಂದ್ರವರ್ಷಕ್ಕೆ ಸೇರಿಸಿದ ಅಧಿಕಮಾಸ. ಸಾಧಾರಣ ವರ್ಷಕ್ಕೆ (೩೬೫ ದಿವಸಗಳು) ಸೇರಿಸಿದ ಅಧಿಕ ದಿನ (ಫೆಬ್ರವರಿ ೨೯)
intercalary

ಅಂತರ್ವಿಷ್ಟನ
(ಖ) ಅಧಿಕಗೊಳಿಸುವುದು. ಪಂಚಾಂಗ ವರ್ಷವನ್ನು ಋತು ವರ್ಷದೊಂದಿಗೆ ಸರಿ ಹೊಂದಿಸಲು ಪಂಚಾಂಗ ವರ್ಷಕ್ಕೆ ಅಧಿಕ ದಿನಗಳನ್ನು ಸೇರಿಸುವುದು. (ಭೂವಿ) ಶಿಲಾಸ್ತರಗಳ ಮಧ್ಯದಲ್ಲಿ ಸೇರಿಸುವುದು
intercalation

ಅಂತರ್ವಿಷ್ಟ ಫಲನ
(ಗ) A ಮತ್ತು B ಗಣಗಳಲ್ಲಿ A B ಆಗಿರುವಾಗ A ಸರ್ವತ್ರ ಎಲ್ಲ xಗಳಿಗೂ f(x)=x ಆಗಿರುವಂಥ ಫಲನ. f(A)=B ಆದಾಗ ಅಂತರ್ವಿಷ್ಟ ಫಲನ ಅನನ್ಯ (ತಾದಾತ್ಮ್ಯ) ಫಲನವಾಗಿರುತ್ತದೆ
inclusion function


logo