logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಶಕ, ಕಲ್ಪ
(ಭೂವಿ) ಭೂವಿಜ್ಞಾನದಲ್ಲಿ ಅತ್ಯುನ್ನತ ದರ್ಜೆಯ ಕಾಲ ವಿಭಜನೆ. ಇದು ಒಂದು ಅಥವಾ ಹೆಚ್ಚು ಅವಧಿಗಳನ್ನು ಒಳ ಗೊಂಡಿರುತ್ತದೆ. ಮೂರು ಮುಖ್ಯ ಕಲ್ಪಗಳು : ಸೀನೋಜೋಯಿಕ್ (ವರ್ತಮಾನದಿಂದ ೬೫ ಮಿಲಿಯನ್ ವರ್ಷ ಪ್ರಾಚೀನ), ಮೀಸೊಜೋಯಿಕ್ (೬೫ ಮಿವಪ್ರಾ - ೨೪೮ಮಿವಪ್ರಾ) ಮತ್ತು ಪೇಲಿಯೊಜೋಯಿಕ್ (೨೪೮ ಮಿವಪ್ರಾ - ೫೯೦ ಮಿವಪ್ರಾ)
era

ಶಕಲ
(ಭೌ) ನೋಡಿ : ಕ್ವಾಂಟಮ್
quantum

ಶಕಲ ಸಂಖ್ಯೆಗಳು
(ಭೌ) ನೋಡಿ : ಕ್ವಾಂಟಮ್ ಸಂಖ್ಯೆಗಳು
quntum numbers

ಶಕಲಬಲವಿಜ್ಞಾನ
(ಭೌ) ನೋಡಿ: ಕ್ವಾಂಟಮ್ ಮೆಕ್ಯಾನಿಕ್ಸ್/ಯಾಂತ್ರ
quntum mechanics

ಶಂಕುಜ
(ಗ) ವರ್ತುಳೀಯ ಶಂಕುವನ್ನು (ಇದು ಲಂಬ ವರ್ತುಳೀಯವೇ ಆಗಿರಬೇಕೆಂದೇನೂ ಇಲ್ಲ) ಸಮತಲ ಛೇದಿಸಿದಾಗ ದೊರೆಯುವ ಎರಡು ಆಯಾಮಗಳ ವಕ್ರ. ಶೃಂಗದಿಂದ ಉಭಯದಿಶೆಗಳಿಗೂ ಶಂಕು ವ್ಯಾಪಿಸಿದೆ ಎಂದು ಅಂಗೀಕರಿಸುತ್ತೇವೆ. ಛೇದಕ ತಲ ಶಂಕುವಿನ ಯಾವುದೇ ಜನಕ ರೇಖೆಗೆ ಸಮಾಂತರವಾಗಿಲ್ಲದಾಗ, ಶೃಂಗದ ಮೂಲಕ ಛೇದಕ ತಲಕ್ಕೆ ಸಮಾಂತರವಾಗಿ ಎಳೆದ ಸಮತಲ ಜನಕರೇಖೆಯೊಂದನ್ನೂ ಒಳಗೊಳ್ಳದಿದ್ದರೆ ದೀರ್ಘವೃತ್ತವೂ, ಎರಡು ರೇಖೆಗಳನ್ನೂ ಒಳಗೊಂಡಿದ್ದರೆ ಅತಿಪರವಲಯವೂ ದೊರೆಯುತ್ತದೆ. ಲಂಬ ವೃತ್ತೀಯ ಶಂಕುವಿನ ರಚನೆಗೆ ಪರ್ಯಾಯ ವಿಧಾನವುಂಟು. ದತ್ತ ಸಮತಲದಲ್ಲಿ S ಯಾವುದೇ ಸ್ಥಿರಬಿಂದುವಾಗಿರಲಿ, l ಇದರ ಮೂಲಕ ಸಾಗದ ಸ್ಥಿರರೇಖೆ ಆಗಿರಲಿ, ಮತ್ತು P ಎಂಬ ಚರಬಿಂದು ಈ ಸಮತಲದಲ್ಲಿ (ಒಂದು ಸ್ಥಿರಾಂಕ) ಆಗಿರುವಂತೆ ಚಲಿಸಲಿ. ಇಲ್ಲಿ Pಯಿಂದ l ಗೆ ಎಳೆದ ಲಂಬದ ಪಾದ M. ಈಗ ಮೂರು ಸನ್ನಿವೇಶಗಳು ಏರ್ಪಡುತ್ತವೆ: e<1 ಆಗಿರುವಾಗ Pಯ ಪಥ ದೀರ್ಘವೃತ್ತ; e =1ಆಗಿರುವಾಗ ಪರವಲಯ; e>1ಆಗಿರುವಾಗ ಅತಿಪರವಲಯ. ಇಲ್ಲಿ Sಗೆ ಶಂಕುಜದ ನಾಭಿ ಎಂದೂ lಗೆ ನಿಯತಾ ಎಂದೂ eಗೆ ಉತ್ಕೇಂದ್ರತೆ ಎಂದೂ ಹೆಸರು. SP / PM = e ಗುಣವನ್ನು ನಾಭೀ-ನಿಯತಾಗುಣ ಎನ್ನುತ್ತೇವೆ. e = 0 ಆಗುವಾಗ ಶಂಕುಜವು ವೃತ್ತವಾಗುತ್ತದೆ. ಛೇದಕ ತಲ ಆಧಾರವೃತ್ತಕ್ಕೆ ಸಮಾಂತರವಾಗಿ ಇರುವ ಸನ್ನಿವೇಶವಿದು. x, y ಚರಗಳಲ್ಲಿ ಯಾವುದೇ ಎರಡನೆಯ ಡಿಗ್ರಿ ಸಮೀಕರಣ, ಸಾಧಾರಣವಾಗಿ, ಶಂಕುಜವನ್ನು ಪ್ರತಿನಿಧಿಸುತ್ತದೆ. ax2+2 hxy+by2+ 2 gx+ 2 fy+c = 0
conic

ಶಂಕುಜಜನಿತ
(ಗ) ಶಂಕುಜ ತನ್ನ ಒಂದು ಅಕ್ಷದ ಸುತ್ತ ಆವರ್ತಿಸಿದಾಗ ದೊರೆಯುವ ಘನಾಕೃತಿ: ಆವರ್ತಿತ ದೀರ್ಘ ವೃತ್ತಜ, ಆವರ್ತಿತ ಪರವಲಯಜ, ಆವರ್ತಿತ ಅತಿ ಪರವಲಯಜ
conoid

ಶಂಕುಧಾರಿ
(ಸ) ಪೈನೇಲೀಸ್ ಗಣಕ್ಕೆ ಸೇರಿದ ನಿತ್ಯ ಹರಿದ್ವರ್ಣ ಮರ. ಶಂಕು ಆಕಾರದ ಕಾಯಿ ಬಿಡುತ್ತದೆ. ಇಂಥ ಮರಗಳು ಉತ್ತರ ಧ್ರುವ ಸಮೀಪದ ಟಂಡ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಿತ್ಯಹರಿದ್ವರ್ಣ ಕಾಡು
conifer

ಶಕುನದ ಹಕ್ಕಿ
(ಪ್ರಾ) ನೋಡಿ: ಕಾಜಾಣ
drongo

ಶಂಕುಮುಂಡ
(ಗ) ಶಂಕುವಿನ ಮೇಲ್ಭಾಗವನ್ನು ಆಧಾರತಲಕ್ಕೆ ಸಮಾಂತರವಾಗಿ ಛೇದಿಸಿದಾಗ ಲಭಿಸುವ ಶಂಕು ಭಾಗ
frustum of a cone

ಶಕ್ತಿ
(ಭೌ) ಪ್ರತೀಕ E. ಕಾರ್ಯ ಮಾಡಬಲ್ಲ ಕ್ಷಮತೆ. ಇದರಲ್ಲಿ ವ್ಯಾಪಕವಾಗಿ ಎರಡು ವಿಭಾಗಗಳು: ವಿಭವಶಕ್ತಿ, ಚಲನಶಕ್ತಿ. ವಸ್ತುವಿನ ಸ್ಥಾನದಿಂದಾಗಿ ಅದರಲ್ಲಿ ನಿಹಿತವಾಗಿರುವ ಕಾರ್ಯಕ್ಷಮತೆ, ಕೋಶಗಳಲ್ಲಿ ಹಿಡಿದಿಟ್ಟಿರುವ ವಿದ್ಯುಚ್ಛಕ್ತಿ, ಪದಾರ್ಥಗಳಲ್ಲಿ ಅಂತರ್ಗತವಾಗಿರುವ ಬೈಜಿಕ ಶಕ್ತಿ ಎಲ್ಲವೂ ವಿಭವ ಶಕ್ತಿಗಳೇ. ಚಲಿಸುತ್ತಿರುವ ವಸ್ತುವಿನಲ್ಲಿ ನಿಹಿತವಾಗಿರುವ ಶಕ್ತಿ ಚಲನಶಕ್ತಿ. ಈ ಶಕ್ತಿಗಳು ಪರಸ್ಪರ ಪರಿವರ್ತನೀಯ. ಗುರುತ್ವ ವಿಭವಶಕ್ತಿಗೆ ಸೂತ್ರ mgh. ಚಲನ ಶಕ್ತಿಗೆ ಸೂತ್ರ ½ mv2. ಇಲ್ಲಿ m ವಸ್ತುವಿನ ರಾಶಿ, g ಗುರುತ್ವ ವೇಗೋತ್ಕರ್ಷ, h ವಸ್ತುವಿನ ಸ್ಥಾನೋನ್ನತಿ ಮತ್ತು v ಅದರ ವೇಗ. ಯಾಂತ್ರಿಕಶಕ್ತಿಯನ್ನು ಉಷ್ಣಶಕ್ತಿಯನ್ನಾಗಿಯೂ ಉಷ್ಣಶಕ್ತಿಯನ್ನು ದ್ಯುತಿಶಕ್ತಿಯನ್ನಾಗಿಯೂ ಇತ್ಯಾದಿ ಪರಿವರ್ತಿಸುವುದು ಸಾಧ್ಯ. ವಿದ್ಯುಚ್ಛಕ್ತಿಯನ್ನು ಧಾರಕ (ಕೆಪಾಸಿಟರ್)ಗಳಲ್ಲಿ ಸಂಗ್ರಹಿಸಿ ಇಡಬಹುದು. ಧಾರಕವನ್ನು ವಿಸರ್ಜಿಸಿ ಸಂಗ್ರಹಿಸಿದ್ದ ವಿದ್ಯುಚ್ಛಕ್ತಿಯನ್ನು ಪುನಃ ಪಡೆಯಬಹುದು. ಕಾಯವೊಂದು ವಿರೂಪಗೊಂಡಾಗ ಅಥವಾ ಅದರ ವಿನ್ಯಾಸ ಬದಲಿದಾಗ ಅದರಲ್ಲಿ ಸ್ಥಿತಿಸ್ಥಾಪಕ ವಿಭವಶಕ್ತಿ ದಾಸ್ತಾನಾಗುತ್ತದೆ (ಉದಾ: ಒತ್ತಿ ಹಿಡಿದ ಸ್ಪ್ರಿಂಗ್). ತರಂಗ ಚಲನೆಯ ಎಲ್ಲ ರೂಪಗಳಲ್ಲೂ ಶಕ್ತಿ ಇರುತ್ತದೆ. ವಿದ್ಯುತ್ಕಾಂತೀಯ ಅಲೆಗಳಲ್ಲಿ ಶಕ್ತಿಯು ವಿದ್ಯುತ್ ಹಾಗೂ ಕಾಂತೀಯ ಕ್ಷೇತ್ರಗಳಲ್ಲಿ ದಾಸ್ತಾನು ಆಗಿರುತ್ತದೆ. ಯಾವುದೇ ಸಂವೃತ ವ್ಯವಸ್ಥೆಯಲ್ಲಿ ಒಟ್ಟು ಶಕ್ತಿಯು ನಿಯತವಾಗಿರುತ್ತದೆ. ಇದೇ ಶಕ್ತಿ ಸಂರಕ್ಷಣ ನಿಯಮ. ಶಕ್ತಿ ಅವಿನಾಶಿನಿ. ಶಕ್ತಿಯ ಎಸ್‌ಐ ಏಕಮಾನ: ಜೂಲ್. ಸಿಜಿಎಸ್ ಏಕಮಾನ : ಅರ್ಗ್. ೧ ಅರ್ಗ್ = ೧೦-೭ ಜೂಲ್‌ಗಳು
energy


logo