logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಥಯಮೀನ್
(ರ) ವೈಟಮಿನ್ ಬಿ೧. ಸೂತ್ರ C12H17ON4SCl. ಬಿ ಕಾಂಪ್ಲೆಕ್ಸ್ ವೈಟಮಿನ್‌ಗಳ ಪೈಕಿ ಒಂದು. ನೀರಿನಲ್ಲೂ ಆಲ್ಕಹಾಲ್‌ನಲ್ಲೂ ವಿಲೇಯವಾಗುವ ಬಿಳಿ ಸ್ಫಟಿಕೀಯ ಪುಡಿ. ಜೀವಿಗಳಲ್ಲಿ ಕಾರ್ಬೊಹೈಡ್ರೇಟ್‌ಗಳ ಉಪಾಪಚಯಕ್ಕೆ ಅತ್ಯವಶ್ಯ. ಯಕೃತ್ತು, ಹಾಲು, ಮೊಟ್ಟೆ ಹಾಗೂ ಹಣ್ಣುಗಳಲ್ಲಿ ಲಭ್ಯ. ಇದರ ಕೊರತೆ ಬೆರಿಬೆರಿ ರೋಗಕ್ಕೂ ನರಸಂಬಂಧಿ ವ್ಯಾಧಿಗಳಿಗೂ ಕಾರಣವಾಗುತ್ತದೆ
thaimine

ಥಯಮೈಡ್
(ರ) ಅಮೈಡ್‌ಗಳ ರಚನೆಯೇ ಇದ್ದು ಆಕ್ಸಿಜನ್ (O) ಸ್ಥಳದಲ್ಲಿ ಸಲ್ಫರ್ (S) ಇರುವ ಪದಾರ್ಥಗಳ ಗುಂಪಿನ ಪೈಕಿ ಯಾವುದೇ ಒಂದು. ಥಯೊಅಸಿಟಮೈಡ್ ಒಂದು ಉದಾಹರಣೆ. CH3.CS.NH2
thaimide

ಥಯೊನಿಲ್
(ರ) ಸಲ್ಫರ್ ಮಾನಾಕ್ಸೈಡ್ ಗುಂಪಿಗೆ ಸೇರಿದ್ದು
thionyl

ಥಯೊಸಲ್ಫೇಟ್
(ರ) S2O3 ಗುಂಪನ್ನು ಒಳಗೊಂಡಿರುವ ಯಾವುದೇ ಪದಾರ್ಥ. ಥಯೊಸಲ್ಫ್ಯೂರಿಕ್ ಆಮ್ಲದ (H2SO3) ಲವಣ/ಎಸ್ಟರ್. ಉದಾ: ಸೋಡಿಯಮ್ ಹೈಡ್ರಾಕ್ಸೈಡ್ ಹಾಗೂ ಥಯೊಸಲ್ಫ್ಯೂರಿಕ್ ಆಮ್ಲಗಳ ಕ್ರಿಯೆಯ ಫಲವಾಗಿ ಸೋಡಿಯಮ್ ಥಯೊಸಲ್ಫೇಟ್ ಉತ್ಪಾದನೆಯಾಗುತ್ತದೆ. ‘ಥಯೊ’ ಎಂಬ ಪೂರ್ವ ಪ್ರತ್ಯಯ ಸಲ್ಫರ್ (ಗಂಧಕ) ಸೂಚಕ
thiosulphate

ಥರ್ಮಾಮೀಟರ್
(ವೈ) ಉಷ್ಣತೆಯನ್ನು ಅಳೆಯಲು ಬಳಸುವ ಒಂದು ಉಪಕರಣ. ತಾಪಮಾಪಕ. ಇದರಲ್ಲಿ ಉದ್ದೇಶಕ್ಕನುಗುಣವಾಗಿ ನಾನಾ ಮಾದರಿಯ ಉಷ್ಣತಾಮಾಪಕಗಳುಂಟು. ಆದರೆ ಎಲ್ಲವೂ, ಉಷ್ಣತೆ ಹೆಚ್ಚು ಕಡಿಮೆ ಆದಂತೆ ವಸ್ತುವಿನ ಯಾವುದಾದರೊಂದು ಗುಣದಲ್ಲೂ ಹೆಚ್ಚು ಕಡಿಮೆ ಆಗುತ್ತದೆಂಬ ಸೂತ್ರವನ್ನು ಉಪಯೋಗಿಸಿಕೊಂಡು ಉಷ್ಣತೆಯನ್ನು ಅಳೆಯುತ್ತವೆ. ಉದಾ: ನಳಿಕೆಯಲ್ಲಿ-ದ್ರವ-ಥರ್ಮಾ ಮೀಟರುಗಳು: ದ್ರವದ (ಸಾಮಾನ್ಯವಾಗಿ ಪಾದರಸದ ಅಥವಾ ರಂಗು ಸೇರಿಸಿದ ಆಲ್ಕಹಾಲ್‌ನ) ವ್ಯಾಕೋಚನವನ್ನು ಅವಲಂಬಿಸಿ ಉಷ್ಣತೆಯನ್ನು ಅಳೆಯುತ್ತವೆ. ದ್ವಿಲೋಹ ಥರ್ಮಾಮೀಟರುಗಳು : ಎರಡು ವಿಷಮ ಲೋಹಗಳ ಅಸಮ ವ್ಯಾಕೋಚನವನ್ನು ಅವಲಂಬಿಸಿ ಉಷ್ಣತೆಯನ್ನು ಅಳೆಯುತ್ತವೆ. ಈ ಲೋಹಗಳನ್ನು ಕೂಡಿಸಿದ ಸುರುಳಿಗೆ ಲಗತ್ತಾದ ಫಲಕದ ಮೇಲಿನ ಸೂಚಿಯು ಚಲಿಸುತ್ತ ಉಷ್ಣತೆಯ ಪ್ರಮಾಣವನ್ನು ತಿಳಿಸುತ್ತದೆ. ಅನಿಲ ಥರ್ಮಾಮೀಟರುಗಳು: ಸ್ಥಿರ ಗಾತ್ರದಲ್ಲಿರಿಸಿದ ಅನಿಲದ ಒತ್ತಡದಲ್ಲಿ ಆಗುವ ವ್ಯತ್ಯಾಸವನ್ನು ಅವಲಂಬಿಸಿ ಉಷ್ಣತೆಯನ್ನು ಅಳೆಯುತ್ತವೆ. ಇವು ನಳಿಕೆಯಲ್ಲಿ-ದ್ರವ-ಥರ್ಮಾಮೀಟರುಗಳಿಗಿಂತ ಹೆಚ್ಚು ನಿಷ್ಕೃಷ್ಟ. ಪ್ರತಿರೋಧ ಥರ್ಮಾಮೀಟರುಗಳು: ಉಷ್ಣತೆಯಲ್ಲಿ ವ್ಯತ್ಯಾಸ ವಾದಾಗ ವಾಹಕ ಅಥವಾ ಅರೆವಾಹಕಗಳ ಪ್ರತಿರೋಧದಲ್ಲಾಗುವ ವ್ಯತ್ಯಯವನ್ನು ಅವಲಂಬಿಸಿರುತ್ತವೆ. ಪ್ಲಾಟಿನಮ್, ನಿಕಲ್ ಹಾಗೂ ತಾಮ್ರ ಇವುಗಳಲ್ಲಿ ಸಾಮಾನ್ಯವಾಗಿ ಬಳಸುವ ಲೋಹಗಳು
thermometer

ಥರ್ಮಾಸ್ ಫ್ಲಾಸ್ಕ್
(ತಂ) ನೋಡಿ : ಡಿವಾರ್ ಜಾಡಿ
thermos flask

ಥರ್ಮಿಯಾನಿಕ್ ಪ್ರವಾಹ
(ಭೌ) ತಪ್ತ ಕ್ಯಾಥೋಡ್‌ನಿಂದ ಹೊರಟು ಇತರ ಎಲೆಕ್ಟ್ರೋಡ್‌ಗಳತ್ತ ಹರಿಯುವ ಎಲೆಕ್ಟ್ರಾನ್ ಹೊನಲು
thermionic current

ಥರ್ಮಿಯಾನಿಕ್ಸ್
(ಭೌ) ತಪ್ತ ಕಾಯಗಳು ನಿರ್ದ್ರವ್ಯತೆ ಯಲ್ಲಿ ಉತ್ಸರ್ಜಿಸುವ ಎಲೆಕ್ಟ್ರಾನ್‌ಗಳ ಪರಿಣಾಮವನ್ನೂ ವರ್ತನೆ ಯನ್ನೂ ಅಂಥ ಎಲೆಕ್ಟ್ರಾನ್‌ಗಳ ನಿಯಂತ್ರಣ ವಿಧಾನಗಳನ್ನೂ ಅಭ್ಯಸಿಸುವ ವಿಜ್ಞಾನ ವಿಭಾಗ
thermionics

ಥರ್ಮಿಯಾನ್
(ಭೌ) ಕಾಸಿದ ವಸ್ತು ಉತ್ಸರ್ಜಿಸುವ ಧನಾವಿಷ್ಟ ಇಲ್ಲವೇ ಋಣಾವಿಷ್ಟ ಕಣ. ಉದಾ: ಥರ್ಮಿಯಾನಿಕ್ ನಾಳದ ತಪ್ತ ಕ್ಯಾಥೋಡ್ ಉತ್ಸರ್ಜಿಸುವ ಕಣ
thermion

ಥರ್ಮಿಸ್ಟರ್
(ಭೌ) ಈ ಅರೆವಾಹಕದಲ್ಲಿ ಉಷ್ಣತೆಯ ಏರಿಕೆಯೊಂದಿಗೆ ವಿದ್ಯುತ್ ರೋಧ ತೀವ್ರವಾಗಿ ಇಳಿಯುತ್ತದೆ. ಉದಾ: ೨೦0ಸೆನಲ್ಲಿ ರೋಧ ೧೦೫ ಓಮ್ ದರ್ಜೆಯಲ್ಲಿದ್ದರೆ ೧೦೦0ಸೆನಲ್ಲಿ ಕೇವಲ ೧೦ ಓಮ್ ದರ್ಜೆಯಲ್ಲಿರುತ್ತದೆ. thermal resistor ಪದಗಳ ಹ್ರಸ್ವರೂಪವಿದು. ನಿರ್ವಾತ ಮಾಪಕಗಳಲ್ಲಿ, ತಡವಾಗಿ ಕೆಲಸ ಮಾಡುವ ಸ್ವಿಚ್‌ಗಳಲ್ಲಿ ಹಾಗೂ ವೋಲ್ಟೇಜ್ ನಿಯಂತ್ರಕಗಳಲ್ಲಿ ಬಳಕೆ
thermistor


logo