logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ರಕ್ತ
(ವೈ) ಹೃದಯದ ಸಂಕೋಚನ ವ್ಯಾಕೋಚನಗಳ ಫಲವಾಗಿ ದೇಹದ ನಾಳಗಳ ಮೂಲಕ ಸದಾ ಹರಿಯುತ್ತಿದ್ದು ಊತಕಗಳಿಗೆ ಆಕ್ಸಿಜನ್, ಪೋಷಕ ಹಾಗೂ ಹಾರ್ಮೋನ್‌ಗಳನ್ನು ತಲಪಿಸುವ ಮತ್ತು ಅವುಗಳಿಂದ ತ್ಯಾಜ್ಯ ಪದಾರ್ಥಗಳನ್ನು ವಿಸರ್ಜನಾಂಗಗಳಿಗೆ ಸಾಗಿಸುವ ಸಂಕೀರ್ಣ ರಸ. ಶರೀರದಲ್ಲಿ ಸಮ ಪ್ರಮಾಣದ ಉಷ್ಣತೆ ಇರುವಂತೆ ಮಾಡುವುದರಲ್ಲಿ ಇದರದು ಮುಖ್ಯ ಪಾತ್ರ. ಕೆಂಪು ಕಣಗಳು, ಬಿಳಿ ಕಣಗಳು, ಕಿರುಫಲಕಗಳು, (ಚಪ್ಪಟಕಗಳು) ನೀರು (೭೭.೫-೭೯%), ಪ್ರೋಟೀನ್‌ಗಳು, ಕಿಣ್ವಗಳು, ಲಿಪಿಡ್‌ಗಳು, ಹಾರ್ಮೋನ್‌ಗಳು, ರೋಗರಕ್ಷಣ ಕಾಯಗಳು, ರಕ್ತಸಕ್ಕರೆ, ವೈಟಮಿನ್‌ಗಳು ಹಾಗೂ ಇನಾರ್ಗ್ಯಾನಿಕ್ ವಸ್ತುಗಳು ಇದರ ಪ್ರಧಾನ ಘಟಕಗಳು. ಸಾಮಾನ್ಯವಾಗಿ ವಯಸ್ಕ ಮಾನವ ಶರೀರದಲ್ಲಿ ಸುಮಾರು ೬.೨ ಲೀಟರ್‌ಗಳಷ್ಟು ರಕ್ತ ಇರುತ್ತದೆ. ಇದರ ತೂಕ ಶರೀರತೂಕದ ಸುಮಾರು ಶೇ. ೫ರಷ್ಟಾಗಿರುತ್ತದೆ. ಮೂರನೇ ಒಂದು ಪಾಲಿನಷ್ಟು ರಕ್ತನಷ್ಟವಾದಾಗ, ಮರುಪೂರಣ ಮಾಡದಿದ್ದಲ್ಲಿ, ಸಾವು ಸಂಭವಿಸುತ್ತದೆ. ಆದರೂ ಯುಕ್ತ ಅಂತರಗಳಲ್ಲಿ ಅರೆಲೀಟರ್‌ನಷ್ಟು ರಕ್ತದಾನ ಮಾಡುವ ಸಾಧ್ಯತೆಯೂ ಇದೆ. ರಕ್ತ ಹೆಪ್ಪುಗಟ್ಟುವುದರಲ್ಲಿ ರಕ್ತಸ್ರಾವ ತಡೆಯುವುದರಲ್ಲಿ ಚಪ್ಪಟಕಗಳ ಪಾತ್ರ ಹಿರಿದು. ನೆತ್ತರು, ರುಧಿರ
blood

ರಕ್ತ ಒತ್ತಡ
(ವೈ) ಶರೀರದ ಧಮನಿಗಳಲ್ಲಿ ರಕ್ತ ಪರಿಚಲನೆಯ ಕಾರಣವಾಗಿ ನಾಳ ಭಿತ್ತಿಗಳ ಮೇಲೆ ಬೀಳುವ ಒತ್ತಡ. ಹೃದಯದ ಹೃತ್ಕುಕ್ಷಿಗಳು ಸಂಕುಚಿಸಿದಾಗ ಈ ಒತ್ತಡ ಅತ್ಯಧಿಕ (ಸಿಸ್ಟಾಲಿಕ್-ಸಂಕೋಚನ-ಒತ್ತಡ). ಹೃದಯವು ರಕ್ತದಿಂದ ತುಂಬಿಕೊಳ್ಳುತ್ತಿರುವಾಗ ಈ ಒತ್ತಡ ಅತ್ಯಲ್ಪಮಟ್ಟ (ಡಯಸ್ಟಾಲಿಕ್-ವ್ಯಾಕೋಚನ-ಒತ್ತಡ)ದಲ್ಲಿ ಇರುತ್ತದೆ. ಸ್ಫಿಗ್ಮೊ ಮಾನೊಮೀಟರ್ ನಿಂದ ಇವನ್ನು ಅಳೆಯಲಾಗುತ್ತದೆ. ಆರೋಗ್ಯವಂತರಾದ ವಯಸ್ಕರಲ್ಲಿ ಇದು ಸಾಮಾನ್ಯವಾಗಿ ೧೨೦/೮೦ ಮಿಮೀ ಪಾದರಸ ಇರುತ್ತದೆ. ನೆತ್ತರೊತ್ತಡ. ನೋಡಿ: ಸಂಕೋಚನ ಒತ್ತಡ. ವ್ಯಾಕೋಚನ ಒತ್ತಡ
blood pressure

ರಕ್ತ ಕಣ
(ವೈ) ಸಾಮಾನ್ಯವಾಗಿ, ರಕ್ತದಲ್ಲಿ ತೇಲುತ್ತಿರುವ ಒಂದು ಕೋಶ. ಕೆಂಪು/ಬಿಳಿ (ಶ್ವೇತ) ಕಣ
blood corpuscle

ರಕ್ತ ಕಣ ಎಣಿಕೆ
(ಪ್ರಾ) ನಿರ್ದಿಷ್ಟ ಪ್ರಮಾಣದ ದುರ್ಬಲ ರಕ್ತದಲ್ಲಿರುವ ಕಣಗಳನ್ನು ಎಣಿಸುವ ಮೂಲಕ ೧ ಘನ ಮಿಲಿಮೀಟರ್ ರಕ್ತದಲ್ಲಿಯ ಕೆಂಪು ಅಥವಾ ಬಿಳಿ ಕಣಗಳ ಸಂಖ್ಯೆಯನ್ನು ಲೆಕ್ಕ ಮಾಡುವುದು
blood count

ರಕ್ತ ಕಣಕಾರಕ
(ಪ್ರಾ) ಸೈಟೊಪ್ಲಾಸಮ್‌ನಲ್ಲಿ ಕೆಂಪು ರಕ್ತಕಣದ ನ್ಯೂಕ್ಲಿಯಸ್‌ವುಳ್ಳ ಒಳಚರ್ಮದ ಭ್ರೂಣಾವಸ್ಥೆ ಕೋಶ
erythroblast

ರಕ್ತ ಕೊರತೆ
(ವೈ) ದೇಹದ ಒಂದು ಭಾಗಕ್ಕೆ ರಕ್ತ ಸರಬರಾಜಿನ ಕೊರತೆ. ಇದರಿಂದ ಊತಕಗಳಲ್ಲಿ ಆಕ್ಸಿಜನ್ ಪೂರೈಕೆ ಸಾಲದಾಗುತ್ತದೆ
ischaemia

ರಕ್ತ ಘನೀಭವನ
(ವೈ) ರಕ್ತನಾಳದಲ್ಲಿ ಅಥವಾ ಯಾವುದೇ ಅಂಗದಲ್ಲಿ ರಕ್ತ ಹೆಪ್ಪುಗಟ್ಟುವ ವ್ಯಾಧಿ
thrombosis

ರಕ್ತ ನಾಶ
(ವೈ) ತೀವ್ರವಾದ ರಕ್ತಹೀನತೆ, ರಕ್ತ ನಷ್ಟ
exsanguination

ರಕ್ತ ಪರಿಚಲನೆ
(ಜೀ) ಹೃದಯದಿಂದ ರೇಚಿಸಲ್ಪಟ್ಟ ರಕ್ತ ದೇಹದ ಅಂಗೋಪಾಂಗಗಳ ಮೂಲಕ ಚಲಿಸಿ ಮತ್ತೆ ಅಲ್ಲಿಗೆ ಫುಪ್ಪುಸ ಮಾರ್ಗವಾಗಿ ಮರಳುವ ಚಲನೆ
circulation of blood

ರಕ್ತ ಪರೀಕ್ಷೆ
(ವೈ) ವ್ಯಾಧಿ ನಿದಾನ, ರಕ್ತವರ್ಗ ನಿರ್ಧರಣೆ ಮುಂತಾದವುಗಳ ಸಲುವಾಗಿ ನಡೆಸುವ ತಪಾಸಣೆ
blood test


logo