logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಓಕ್
(ಸ) ಫ್ಯಾಗೇಸೀ ಕುಟುಂಬ ಹಾಗೂ ಕ್ವರ್ಕಸ್ ಜಾತಿಗೆ ಸೇರಿದ ಗಟ್ಟಿ ದಾರುವಿನ ದೊಡ್ಡ ಮರ. ಸಮಶೀತೋಷ್ಣವಲಯದ ಪ್ರಮುಖ ಬೆಳೆ. ಉಷ್ಣ ವಲಯದ ಎತ್ತರ ತಂಪು ಹವೆ ಪ್ರದೇಶಗಳಲ್ಲೂ ಬೆಳೆಯುತ್ತದೆ. ದೀರ್ಘ ಕಾಲ ಬಾಳಿಕೆ ಬರುವು ದರಿಂದ ಈ ಮರದ ದಾರುವನ್ನು ಕಟ್ಟಡ ನಿರ್ಮಾಣದಲ್ಲಿ ಬಳಸ ಲಾಗುತ್ತದೆ. ಇದರಿಂದ ದೊರೆಯುವ ಟ್ಯಾನಿನ್‌ಗಳನ್ನು ಚರ್ಮ ಹದಮಾಡಲು ಬಳಸಲಾಗುತ್ತದೆ
oak

ಓಜೋನ್
(ರ) O3. ಮೂರು ಆಕ್ಸಿಜನ್ ಪರಮಾಣುಗಳು ಕೂಡಿ ಆದ ಆಕ್ಸಿಜನ್‌ನ ಭಿನ್ನರೂಪಿ. ಕಟುವಾಸನೆಯ ಅನಿಲ. ಅಣು ತೂಕ ೪೮. ದ್ರಬಿಂ -೧೯೨.೭0 ಸೆ. ಕುಬಿಂ -೧೧೧.೯0 ಸೆ. ತಣ್ಣೀರಿನಲ್ಲಿ ಹಾಗೂ ಕ್ಷಾರಗಳಲ್ಲಿ ವಿಲೇಯ. ತಣ್ಣೀರಿನಲ್ಲಿ ಅಲ್ಪ ವಿಲೇಯ. ಟರ್ಪೆಂಟೈನ್ ಎಣ್ಣೆ, ಕಾರ್ಬನ್ ಟೆಟ್ರಕ್ಲೋರೈಡ್ (CCl4) ಮತ್ತು ಗ್ಲೇಷಿಯಲ್ (೧೦೦% ಶುದ್ಧ) ಅಸಿಟಿಕ್ ಆಮ್ಲ ಗಳಿಂದ ಹೀರಲ್ಪಡುತ್ತದೆ. ದ್ರವ ಓಜೋನ್ ಕಡುನೀಲಿ ಬಣ್ಣದ್ದು. ಪ್ರಬಲ ಉತ್ಕರ್ಷಕ. ಆಕ್ಸಿಜನ್ ಅಥವಾ ಗಾಳಿಯ ಮೇಲೆ ಸೂರ್ಯನ ಅತಿನೇರಿಳೆ ಕಿರಣಗಳ ಕ್ರಿಯೆಯಿಂದ ಅಥವಾ ವಿದ್ಯುತ್ ಕರೋನ ವಿಸರ್ಜನೆಯಿಂದ ಸ್ತರಗೋಲದಲ್ಲಿ ಉತ್ಪಾದನೆಯಾಗುತ್ತದೆ. ಸೂರ್ಯನ ಅತಿನೇರಿಳೆ ಕಿರಣಗಳ ಮಾರಕ ಪರಿಣಾಮಗಳಿಂದ ಭೂಮಿ ಮೇಲಿನ ಜೀವಿಗಳಿಗೆ ಹಾನಿ ತಟ್ಟದಂತೆ ರಕ್ಷಣೆ ಒದಗಿಸುತ್ತದೆ. ಓಜೋನ್ ಅನಿಲವನ್ನು ಸಿ.ಎಫ್. ಶೋನ್ ಬೀನ್ (೧೮೩೯-೮೦) ಶೋಧಿಸಿದರು. ವಾಯು ಹಾಗೂ ಜಲ ಶುದ್ಧೀಕರಣದಲ್ಲಿ ಮತ್ತು ಚೆಲುವೆಕಾರಿಯಾಗಿ ಬಳಕೆ
ozone

ಓಜೋನ್ ಪದರ
(ಖ) ವಾಯುಮಂಡಲದಲ್ಲಿ ಓಜೋನ್ ಅನಿಲದ ಅತ್ಯಧಿಕ ಭಾಗ ಒಗ್ಗೂಡಿರುವ ಸ್ತರ. ಭೂಮಿಯಿಂದ ೧೫-೫೦ ಕಿ.ಮೀ. ಎತ್ತರದಲ್ಲಿ ವ್ಯಾಪಿಸಿದೆ. ಸ್ತರ ಗೋಳದ (ನೋಡಿ) ಒಂದು ಭಾಗ. ಸೂರ್ಯನಿಂದ ಭೂಮಿಯ ಮೇಲೆ ಬೀಳುವ ಅತಿನೇರಿಳೆ ವಿಕಿರಣದ ಅಧಿಕಾಂಶವನ್ನು ಈ ಪದರ ಹೀರಿಕೊಂಡು ಸ್ತರಗೋಳದ ಉಷ್ಣತೆಯ ಹೆಚ್ಚಳಕ್ಕೆ ಕಾರಣ ವಾಗುತ್ತದೆ. ಹೀಗಾಗಿ ಈ ವಲಯದಲ್ಲಿ ವಾಯುಅಣುಗಳ ಊರ್ಧ್ವ ಚಲನೆ ಇರುವುದಿಲ್ಲ. ಎಂದೇ ಓಜೋನ್ ಪದರ ಸ್ಥಿರ ಕವಚದಂತೆ ವರ್ತಿಸುತ್ತದೆ. ಭೂಮಿಯಲ್ಲಿಯ ಜೀವಿಗಳಿಗೆ ಇದು ಸೌರ ಅತಿನೇರಿಳೆ ವಿಕಿರಣದ ವಿರುದ್ಧ ರಕ್ಷಣೆ ಒದಗಿಸುತ್ತದೆ. ಸಮಭಾಜಕೀಯ ವಲಯದಲ್ಲಿ ಓಜೋನ್ ಪದರ ಅತ್ಯಂತ ತೆಳು. ಆದ್ದರಿಂದ ಈ ವಲಯದಲ್ಲಿಯ ಜನ ಹೆಚ್ಚಿನ ಅತಿನೇರಿಳೆ ವಿಕಿರಣಕ್ಕೆ ಈಡಾಗಿ ಚರ್ಮ ಕ್ಯಾನ್ಸರ್ ಇತ್ಯಾದಿ ವ್ಯಾಧಿಗಳಿಗೆ ಸುಲಭಗ್ರಾಸ ವಾಗುವುದು ಕಂಡುಬಂದಿದೆ. ಧ್ರುವ ವಲಯಗಳಲ್ಲಿ ಓಜೋನ್ ಪದರ ದಪ್ಪ ಗರಿಷ್ಠ. ಈ ಪದರದಲ್ಲಿ ೧೯೮೦ರಿಂದ ಈಚೆಗೆ ಹಲವಾರು ರಂಧ್ರಗಳು ತಲೆದೋರಿರುವುದನ್ನು ಪತ್ತೆ ಹಚ್ಚಲಾಗಿದೆ. ವಿಮಾನ ಗಳಿಂದ ಹೊಮ್ಮುವ ನೈಟ್ರೊಜನ್ ಆಕ್ಸೈಡ್‌ಗಳು, ಶೀತಕಯಂತ್ರ ಇತ್ಯಾದಿಗಳಿಂದ ಹೊಮ್ಮುವ ಕ್ಲೊರೊಫ್ಲೂರೊಕಾರ್ಬನ್‌ಗಳು ಹಾಗೂ ಹ್ಯಾಲೊಜೆನ್‌ಗಳು ಈ ರಂಧ್ರಗಳು ಏರ್ಪಟ್ಟಿರುವುದಕ್ಕೆ ಕಾರಣವೆಂದು ಭಾವಿಸಲಾಗಿದೆ. ನೋಡಿ: ವಾಯುಮಂಡಲ
ozone layer

ಓಜೋನ್ ರಂಧ್ರ
(ಖ) ಭೂಮಿಯನ್ನು ೧೫ರಿಂದ ೫೦ ಕಿಮೀ ಎತ್ತರದಲ್ಲಿ ಆವರಿಸಿರುವ ಓಜೋನ್‌ಪದರದಲ್ಲಿ ೧೯೮೦ರ ದಶಕದಲ್ಲಿ ಗಮನಿಸಲಾಗಿರುವ ಓಜೋನ್ ವಿರಳತೆ. ಮನುಷ್ಯಕೃತ ಕ್ಲೋರೊಫ್ಲೂರೊಕಾರ್ಬನ್‌ಗಳಂಥ ಪದಾರ್ಥಗಳು ಓಜೋನ್ ಪದರದೊಂದಿಗೆ ವರ್ತಿಸಿ ಅದನ್ನು ನಾಶಗೊಳಿಸುತ್ತಿರುವುದರ ದುಷ್ಪರಿಣಾಮವಿದು. ಸೂರ್ಯನಿಂದ ಬರುವ ಉಚ್ಚಶಕ್ತಿ ಅತಿ ನೇರಿಳೆ ವಿಕಿರಣವನ್ನು ಓಜೋನ್ ಪದರ ತಡೆಹಿಡಿಯುವುದರಿಂದ ಭೂಮಿಯ ಮೇಲೆ ವಾಸಿಸುತ್ತಿರುವ ಜೀವಿಗಳಿಗೆ ಒದಗುವ ಸಹಜ ರಕ್ಷಣೆ ಇದರಿಂದಾಗಿ ಕ್ಷೀಣಿಸುತ್ತಿದೆಯೊ ಎಂಬ ಅನುಮಾನವಿದೆ
ozone hole

ಓಟ್
(ಸ) ಗ್ರಾಮಿನೀ ಅಥವಾ ಪೋಯೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಹುಲ್ಲು/ಧಾನ್ಯ ಸಸ್ಯ. ಅವಿನಸೇಟಿವ ವೈಜ್ಞಾನಿಕ ನಾಮ. ಪ್ರಪಂಚದ ಪ್ರಧಾನ ಧಾನ್ಯ ಸಸ್ಯಗಳಲ್ಲಿ ಗೋದಿ, ಬತ್ತ ಮತ್ತು ಮುಸುಕಿನ ಜೋಳದ ತರುವಾಯ ಇದಕ್ಕೆ ನಾಲ್ಕನೇ ಸ್ಥಾನ. ದನ ಗಳಿಗೂ, ಕುದುರೆಗಳಿಗೂ ಒಳ್ಳೆಯ ಮೇವು. ಅಧಿಕ ಪೋಷಕಾಂಶ ಗಳಿದ್ದು ಮಾನವಾಹಾರವಾಗಿಯೂ ಬಳಕೆಯಲ್ಲಿದೆ. ತೋಕೆ ಗೋದಿ
oat

ಓಡ
(ಸಾ) ಹೊಳೆ ಕಾಲುವೆಗಳಲ್ಲಿ ಸಂಚರಿಸುವ, ಹಾಯಿಗಳು ಇರುವ ಅಥವಾ ಇಲ್ಲದಿರುವ ಚಪ್ಪಟೆ ತಳದ ಸರಕು ಸಾಗಣೆ ದೋಣಿ. ಹರಿಗೋಲು
barge

ಓಡುಗಾಲಹಕ್ಕಿ
(ಪ್ರಾ) ಓಡುವುದಕ್ಕೆ ಅನುಕೂಲವಾದಂಥ ಶರೀರ ರಚನೆಯುಳ್ಳ ಹಕ್ಕಿ
cursorial bird

ಓಡುದಾರಿ
(ತಂ) ೧. ದ್ರವ ಪ್ರವಾಹ ಹರಿಯಲು ಮಾಡಿದ ಅಥವಾ ನದಿ ನಿರ್ಮಿಸಿದ ಮಾರ್ಗ ಅಥವಾ ಪಾತ್ರ. ೨. ವಿಮಾನಗಳ ಇಳಿಕೆ ಅಥವಾ ಹಾರಿಕೆಗಾಗಿ ವಿಶೇಷವಾಗಿ ನಿರ್ಮಿಸಿದ ಗಡಸು ಮಟ್ಟಸ ಮಾರ್ಗ. ಓಡುಪಥ
runway

ಓಡುದೋಣಿ
(ತಂ) ಹುಟ್ಟು , ಹಾಯಿ ಅಥವಾ ಯಾಂತ್ರಿಕ ಶಕ್ತಿಯಿಂದ ಚಲಿಸುವ ಪಂದ್ಯದ ದೋಣಿ
yacht

ಓಡೋಮೀಟರ್
(ತಂ) ದೂರಮಾಪಕ. ಚಲಿಸಿದ ದೂರ ಅಳೆಯುವ ಚಕ್ರವುಳ್ಳ ಸಾಧನ.
odometer


logo