logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಉರುವಲಿ
(ನಾ)
ಉರುವಲು, ಆವಿಗೆ ಸುಡಲು ಬಳಸುವ ಸೌದೆ, ಮುಳ್ಳು, ಕಟ್ಟಿಗೆ, ಬಿದಿರು, ತೊಗರೆ ಕಟ್ಟಿಗೆ, ಸೊಪ್ಪು-ಸೆದೆ, ಮುಂತಾದದ್ದು. ದುಂಡಾದ ಮಣ್ಣಿನ ಪಾತ್ರೆ. ಪಕ್ಷಿಗಳು ನೀರು ಕುಡಿಯಲು, ನೀರಾಟ-ಆಡಲು ಮನೆಯ ಮುಂದೆ ಇಡುವ ಅಗಲಬಾಯಿಯ ಮಣ್ಣಿನ ಪಾತ್ರೆ, ದಾರಕಟ್ಟಿ ಇದನ್ನು ತೂಗು ಕೂಡ ಬಿಡುವರು.

ಊರಗರಿ
(ನಾ)
ಆಯದ ಒಂದು ವಿಧಾನ, ಸುಗ್ಗಿಯ ಸಮಯದಲ್ಲಿ ರೈತರಿಗೆ ಕೊಡುವ ದವಸ ಧಾನ್ಯದ ಕಾಣಿಕೆ. ಬೀದರ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಊಳ್ಗ
(ನಾ)
ಧಾನ್ಯಗಳನ್ನು ತುಂಬಿಡಲು ಬಳಸುವ ದೊಡ್ಡ ಆಕಾರದ ಮಣ್ಣಿನ ಸಾಧನ, ದೊಡ್ಡ ಗಡಿಗೆ

ಎಣ್ಣೆ ಗುಂಡಿಗೆ
(ನಾ)
ಎಣ್ಣೆ ಸಂಗ್ರಹಿಸಿ ಇಡುವ ಮಣ್ಣಿನ ದುಂಡಗಿನ ಪಾತ್ರೆ, ಎಣ್ಣೆ ಕುಡಿಕೆ, ಎಣ್ಣೆಮಗಿ, ಎಣ್ಣೆಗಡಿಗೆ

ಎತ್ತೊಲೆ
(ನಾ)
ಸ್ಥಳದಿಂದ ಸ್ಥಳಕ್ಕೆ ಸಾಗಿಸಬಹುದಾದ ಮಣ್ಣಿನ ಒಲೆ

ಎರಡು ಸುತ್ತಿನ ಸ್ವಾರಿ
(ನಾ)
ದೊಡ್ಡ ಕೈಚಟಿಗೆ ಕುಂಬಾರಗಿತ್ತಿಯರು ಬೋಸಿಗೆ ಕೈಯಿಂದ ಎರಡು ಸುತ್ತು ಹಚ್ಚಿ ಮಾಡಿದ ಸ್ವಾರಿ ಮೊಸರು ಕಡೆದು ಮಜ್ಜಿಗೆ ಮಾಡಲು ಇದನ್ನು ಉಪಯೋಗಿಸುವರು.

ಎರೆಮಣ್ಣು
(ನಾ)
ಮಡಿಕೆ ತಯಾರಿಸಲು ಬಳಸುವ ಮಣ್ಣು, ಹಾಸನ, ತುಮಕೂರು ಪ್ರದೇಶಗಳಲ್ಲಿ ಕೆರೆ-ಕುಂಟೆಗಳಿಂದ ಈ ಮಣ್ಣನ್ನು ಕುಂಬಾರರು ತರುವರು.

ಏಣು
(ನಾ)
ಗಡಿಗೆಯ ಅಂಚು, ತುದಿ.

ಐರಣಿ
(ನಾ)
ಮಣ್ಣಿನ ಪಂಚಕಲಶ, ಈ ಪದ ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದೆ.

ಐರಾಣಿ
(ನಾ)
ಮದುವೆ ಸಂದರ್ಭದಲ್ಲಿ ಕುಂಬಾರನ ಮನೆಯಿಂದ ತರುವ ಬಣ್ಣ ಹಚ್ಚಿದ ಪವಿತ್ರ ಮಡಕೆಗಳು, ಐರಾಣಿಗಡಗೆಗಳಲ್ಲಿ ಒಂದು ಅಂಬ್ಲಿ ಗಡಿಗೆ, ಎರಡು ಕೊಡ, ಐದು ಮಗಿ, ಒಂದು ಬಿಂದಿಗೆ, ಐದು ಮುಚ್ಚಳ, ಎರಡು ದೀಪದ ಪಣತಿ ಇತ್ಯಾದಿಗಳು ಇರುತ್ತವೆ. ಐರಾಣಿಗೆ ಐರಣಿ, ಆಮ್ರಾಣಿ, ಅರಣಿ, ಐರಣಿ. ಆರಿವೇಣಿ, ಕೇಲು ಎಂಬ ಹೆಸರುಗಳಿಂದ ಕರೆಯುವರು. ಮದುವೆ ಹಿಂದಿನ ದಿನ ಮನೆಯವರು ಮುತ್ತೈದೆಯರನ್ನು ಕರೆದುಕೊಂಡು ಬಾಜಬಜಂತ್ರಿ ಸಮೇತ ಐರಾಣಿ ತರಲು ಕುಂಬಾರನ ಮನೆಗೆ ಬೆಳಗಿನ ಜಾವದಲ್ಲಿ ಹೋಗುವರು. ಕುಂಬಾರನ ಮನೆಯ ಅಂಗಳದಲ್ಲಿ ಕಂಬಳಿಹಾಸಿ, ಅದರ ಮೇಲೆ ಸುಣ್ಣ-ಬಣ್ಣ ಹಚ್ಚಿದ ಐರಾಣಿಗಳನ್ನು ಇಟ್ಟು ವಾದ್ಯವೃಂದದವರೊಂದಿಗೆ ಪೂಜೆ ಮಾಡುವರು. ನಂತರ ಮುತ್ತೈದೆಯರು ಐರಾಣಿ ಹೊತ್ತು ಮದುವೆ ಮನೆಗೆ ಹೋಗುವರು. ನಾಡಿನ ಎಲ್ಲ ಭಾಗಗಳಲ್ಲಿ ಈ ಪದ್ಧತಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯ ದಿನದಂದು ಐರಣಿಯನ್ನು ಚಿತ್ರದಲ್ಲಿ ಬಿಡಿಸಿ ಅದನ್ನು ಪೂಜಿಸುವರು. ಪಂಚ ಕಲಶಗಳನ್ನು ಪಂಚ ಮಠಾಧೀಶರ ಸಂಕೇತವೆಂದು ಭಾವಿಸುವರು. "ಐರಾಣಿ ತರಲ್ಹೊಂಟಾರ ಐದೆಯರು ಬಾಜಾ ಬಜಂತ್ರಿ ಮುಂದೆ ಮುಂದೆ| ಜಾಣ ಕುಂಬಾರಣ್ಣ ಐರಾಣಿ ಕೊಟ್ಟಿಹನು" (ಜಾನಪದ)
">


logo