logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕೊರ್ಕೆ
(ನಾ)
ಬಟ್ಟಲದಂತಹ ಮಣ್ಣಿನ ಪಾತ್ರೆ.

ಕೊಡ
(ನಾ)
ಹೊಳೆ, ಹಳ್ಳ, ಬಾವಿಯಿಂದ ನೀರು ತರುವ ಕುಂಭ. ಕೆಲ ಭಾಗಗಳಲ್ಲಿ ಕೊಡ ಎತ್ತುವ ಸ್ಪರ್ಧೆ ಇದೆ. ಶಿವಮೊಗ್ಗಾಜಿಲ್ಲೆಯಲ್ಲಿ ಜೂಜಿನ ಕೊಡದ ಸ್ಪರ್ಧೆ ನಡೆಸುವರು. ಎಣ್ಣೆ, ತುಪ್ಪ ಮುಂತಾದವುಗಳನ್ನು ತುಂಬಿಡಲು ಕೊಡವನ್ನು ಬಳಸುತ್ತಿದ್ದರು. ಎಣ್ಣೆಯನ್ನು ಅಳೆಯುವ ಪ್ರಮಾಣವಾಗಿ ಕೂಡ ಬಳಕೆಯಲ್ಲಿತ್ತೆಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖವಿದೆ. 'ಕೊಡವಾಲ ಕೆಡಿಸುವೊಡಾಮ್ಲ ವೆನಿತಾಗಬೇಕು' (ರಾಘವಾಂಕ) 'ಹುಳಿಹಿಂಡಿ ಕೊಡ ಹಾಲು ಬೀದಿಪಾಲ್ಮಾಡದಿರು' (ಕೆ. ಸಿ. ಶಿವಪ್ಪ) ತುಂಬಿದ ಕೊಡ ತುಳುಕುವುದಿಲ್ಲ.| (ಗಾದೆ) ಧನಿಮನಿಗೆ ದೌಲತ್ತ ಬಂದ್ರ ತೊತ್ತಿಗೆ ಮೂರ ಕೊಡಜಾಸ್ತಿ (ಗಾದೆ)

ಕೊಡತಿ
(ನಾ)
ಮಣ್ಣಿನ ಗಟ್ಟಿ ಹೆಂಟೆಯನ್ನು ಒಡೆಯುವ ಕೊಡತಿ, ಸುತ್ತಿಗೆ

ಕೊಣಮಿಗೆ
(ನಾ)
ರೊಟ್ಟಿ ಮಾಡುವ ಮಣ್ಣಿನ ಪರಾತ, ಬಡವರು ಇದನ್ನು ಹೆಚ್ಚಾಗಿ ಬಳಸುವರು.

ಕೊಪ್ಪರಿಗೆ
(ನಾ)
ಅಗಲ ಬಾಯಿಯ ದೊಡ್ಡ ಪಾತ್ರೆ. ಹಿಂದಿನ ಕಾಲದಲ್ಲಿ ಮದುವೆ ಸಮಾರಂಭಗಳಲ್ಲಿ ಹುಗ್ಗಿ, ಅನ್ನ, ಸಾರು ಮಾಡಲು ಬಳಸುತ್ತಿದ ಮಣ್ಣಿನ ಪಾತ್ರೆ.

ಕೊಮ್ಮೆ
(ನಾ)
ಧಾನ್ಯ ಸಂಗ್ರಹಿಸಿಡುವ ಕುಡಾಣ, ವಾಡೆ 1-2 ಮೀಟರ್ ಎತ್ತರವಿರುವುದು. ತಳದಲ್ಲಿ ಹಲ್ತಿ ಇದ್ದು, ನಡು ಡುಮ್ಮ, ಇದ್ದು, ಕಂಠದಲ್ಲಿ ಮತ್ತು ಹಲ್ತಿ ಇರುವುದು. ಎಮ್ಮೆ ಹಾಲು ಚೆಂದ ಕೊಮ್ಮೆ ರಾಗಿ ಚೆಂದ (ಗಾದೆ) ನಿಮ್ಮನೆ ಎಮ್ಮೆ ಇದ್ದರೆ ನಮ್ಮನೇ ಕೊಮ್ಮೆ ಇದೆ (ಗಾದೆ)

ಕೊರೆ
(ಕ್ರಿ)
ತಿಗುರಿಯ ಮೇಲೆ ಗೇಯ್ದ ಟೊಳ್ಳಾದ ಲಳಿಗೆಯನ್ನು ಕವಳಿದಾರದಿಂದ ಬೇರ್ಪಡಿಸುವುದು.

ಕೊರೆದಾರ
(ನಾ)
ಕವಳಿ ದಾರ - ನೋಡಿ

ಕೊಳಗ
(ನಾ)
ಹಿಂದಿನಕಾಲದಲ್ಲಿ ಧಾನ್ಯಗಳನ್ನು ಅಳೆಯಲು ಬಳಸುತ್ತಿದ ಮಣ್ಣಿನ ಅಳತೆ 1. ಪ್ರಮಾಣ - 4 ಮಾನ = 1 ಬಳ್ಳ: 4 ಬಳ್ಳ = 1 ಕೊಳಗ 'ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ ಕೊಳಗ ಬಳಲದು' (ಬಸವಣ್ಣ) 'ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು' (ಅಲ್ಲಮ)

ಕೊಳೆಮುಚ್ಚು
(ಕ್ರಿ)
ಗಡಿಗೆ ತಳದಲ್ಲಿನ ತೆರೆದಭಾಗವನ್ನು ಸೊಳದಿಂದ ತಟ್ಟುವ ಕ್ರಿಯೆ. ಗಡಿಗೆ ಕುಂಡಿ ಮುಚ್ಚುವುದು.


logo