logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ತಂದೂರಿ ಒಲೆ
(ನಾ)
ಪರಾಟ ಬೇಯಿಸುವ ಒಲೆ, ವಾಡೆ ಆಕೃತಿಯಲ್ಲಿದ್ದು ಸುಮಾರು ಒಂದು ಮೀಟರ್ ಎತ್ತರವಿರುತ್ತದೆ. ಇಟ್ಟಿಗೆಯಿಂದಲೂ ಕೂಡ ಮಾಡುವರು ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಯ ಕುಂಬಾರರು ತಂದೂರಿ ಒಲೆ ಮಾಡುವರು. ತಂದೂರಿ ರೋಟಿ ಮಾಡಲು ಡಾಬಾಗಳಲ್ಲಿ ತಂದೂರಿ ಒಲೆ ಬಳಸುವರು.

ತಟ್ಟು
(ಕ್ರಿ)
ಬಡಿ, ಸೊಳದಿಂದ ಹಸಿಮಡಿಕೆಗಳನ್ನು ಬಡಿದು ರೂಪಗೊಳಿಸುವುದು

ತತ್ರಾಣಿ
(ನಾ)
ನೀರು ಕುಡಿಯಲು ಬಳಸುವ ಚಪ್ಪಟೆಯಾದ ಮಣ್ಣಿನ ಪಾತ್ರೆ. ಇದಕ್ಕೆ ಎರಡೂ ಕಡೆ ಹೊಟ್ಟೆ ಉಬ್ಬಿದ್ದು, ಕುತ್ತಿಗೆ ಸಣ್ಣದಾಗಿರುತ್ತದೆ ಬಯಲು ಸೀಮೆಯ ರೈತರು ಹೊಲಕ್ಕೆ ಹೋಗುವಾಗ ತತ್ರಾಣಿಯ ತುಂಬ ನೀರನ್ನು ತುಂಬಿಕೊಂಡು ಬಗಲಿಗೆ ಹಾಕಿಕೊಂಡು ಹೋಗುವರು. ತತ್ರಾಣಿಯನ್ನು ಮಧ್ಯದಲ್ಲಿ ಹಗ್ಗಕಟ್ಟಲು ಅನುಕೂಲವಾಗಲೆಂದು ಸುಮಾರು ಐದು ಸೆಂ. ಮೀ. ಅಗಲಕ್ಕೆ ಏಣು ಮಾಡಿ ಜಾಗ ಮಾಡಿರುತ್ತಾರೆ. ತತ್ರಾಣಿಯ ನೀರು ತಂಪಾಗಿರುವುದು. 'ಬನ್ನಿಗಿಡದಡಿಯಲಿ ತತ್ರಾಣಿ ತಣ್ಣೀರ ಕುಡಿದು ಬುತ್ತಿಯನುಂಡು ಸೊಂಪಾಗಿರೆ' (ಚೆನ್ನವೀರಕಣವಿ) ಹೊಲಕ ಹೊಂಟಾನ ಹೊಟ್ಟಿ ಡುಮ್ಮ (ಒಗಟು)

ತಲೆಬೋಳಮಗಿ
(ನಾ)
ಬಾಯಿಗೆ ಕಂಠವಿಲ್ಲದ ಬೋಳು ಗಡಿಗೆ, ಶವ ಸಂಸ್ಕಾರದ ಸಮಯದಲ್ಲಿ ಈ ಗಡಿಗೆಯ ತುಂಬ ನೀರು ತುಂಬಿ ಮೃತರ ಹಿರಿಯಮಗ ಇದನ್ನು ಹೆಗಲಲ್ಲಿ ಹೊತ್ತುಕೊಂಡು ಸಿದಗಿಯ ಗೋರಿಯ ಸುತ್ತಲೂ ಮೂರು ಸುತ್ತು ಹಾಕಿ ಹಿಂದಕ್ಕೆ ಚೆಲ್ಲುವನು ಈ ಪದ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದೆ.

ತಸ್ತಿ
(ನಾ)
ಪಚೇಲಿ, ನೀರು ಕಾಯಿಸುವ ಗಡಿಗೆ, ಇದರಬಾಯಿ ಅಗಲವಿದ್ದು ತಳದಪ್ಪವಿರುತ್ತದೆ. ನೋಡಿ - ಪಚೇಲಿ

ತಿಗುರಿ
(ನಾ)
ತಿಹುರಿ, ತಿಗರಿ, ತಿರುಗುಣಿ ಕುಂಬಾರನ ಚಕ್ರ, ಕುಂಬಾರನ ಗಾಲಿ ಕುಂಬಾರಿಕೆಯ ಸಾಧನ ಸಲಕರಣೆಗಳಲ್ಲಿ ತಿಗುರಿ ಮುಖ್ಯ. ತಿಗರಿಯ ಹಣೆ ಮತ್ತು ಕೈಗಳನ್ನು ಕಟ್ಟಿಗೆಯಿಂದ ಮಾಡಿಸಿ, ತಮಗೆ ಬೇಕಾದ ಅಳತೆಗೆ ಕುಂಬಾರರು ಮಣ್ಣಿನಿಂದ ತಿಗರಿಯನ್ನು ಮಾಡಿಕೊಳ್ಳುವರು. ಉತ್ತರ ಪ್ರದೇಶ್, ಬಿಹಾರ್, ರಾಜಾಸ್ಥಾನ, ಪಂಜಾಬದ ಕೆಲಭಾಗಗಳಲ್ಲಿ ಕಲ್ಲಿನ ಚಕ್ರದ ಬಳಕೆ ಕೂಡ ಇದೆ. ಪ್ರಾಚ್ಯ ವಿದ್ವಾಂಸರ ಪ್ರಕಾರ ವಿಶ್ವಕ್ಕೆ ಮೊದಲು ತಿಗುರಿಯನ್ನು ಪರಿಚಯಿಸಿದವರು ಸುಮೇರಿಯನ್-ರು. ಈಜಿಪ್ಟಿಯನ್ನರು ತಮ್ಮ ಜನಾಂಗದ ಆರಾಧ್ಯದೇವರಾದ ಶನುಮ್-ನು ತಿಗರಿಯನ್ನು ಕುಂಬಾರನಿಗೆ ಕೊಟ್ಟನೆಂದು ನಂಬುವರು. 'ದಂಡಭ್ರಹ್ಮಂ ಕುಲಾಲ ಚಕ್ರದೋಳ್' (ಅಗ್ಗಳದೇವ) 'ತಿರುಗತದ ತಿಗರಿ ಹರವಿ, ಗಡಗಿ ಮಡಕಿ ಹಡೀತದ ಕುಂಬಾರನ ತಿಗುರಿ' (ಬೇಂದ್ರೆ)

ತಿಗುರಿ ಕಣ್ಣು
(ನಾ)
ತಿಗುರಿಯ ಹಣೆಯಲ್ಲಿ ಕೂಡಿಸಲಾದ ಬೆಣಚುಕಲ್ಲಿನಲ್ಲಿ ಗೋಲಾಕಾರವಾಗಿ ಮಾಡಲಾದ ತಗ್ಗು ಗುಬ್ಬಕಲ್ಲು ನೋಡಿ.

ತಿಗುರಿ ಗುಳಿ
(ನಾ)
ತಿಗುರಿಯ ಸುತ್ತಿನಲ್ಲಿ ಮಾಡಿರುವ ಒಂದು ಒಂದುವರೆ ಸೆ. ಮೀ. ಅಗಲದ ಒಂದು ಸೆ.ಮಿ. ಆಳದ ಗುಳಿ ಅದರಲ್ಲಿ ಕೋಲನ್ನು ಇಟ್ಟು ತಿರುಗಿಸಿ ತಿಗುರಿಯನ್ನು ಚಾಲು ಮಾಡುವರು.

ತಿಗುರಿ ಕೋಲು
(ನಾ)
ಕುಂಬಾರಗೋಲು, ತಿಗರಿ ಬಡಿಗೆ, ತಿಗುರಿಯನ್ನು ತಿರುಗಿಸಲು ಬಳಸುವ ಬಿದರಿನ ಕೋಲು. ಇದು ಸುಮಾರು ಒಂದುವರೆಯಿಂದ ಎರಡು ಮೀಟರ್ ಉದ್ದವಿರುವುದು. 'ಪಂದಿ ತಿರುಗುವ ಪದದೊಳ್ ಕೇ ಲಂ ಮಾಡುವ ತಿಗುರಿಯ ಕೋಲಂತೆ' (ಮಲ್ಲಿಕಾರ್ಜುನ)

ತಿಗುರಿ ಗೂಟ
(ನಾ)
ಶೂಲ, ತಿಗರಿ ತಿರುಗಿಸಲು, ನೆಲದಲ್ಲಿ ಹುಗಿದ ಕಟ್ಟಗೆಯ ಗೂಟ. ಇದನ್ನು ಕಟ್ಟಿಗೆಯಿಂದ ಮಾಡಿದ್ದು, ಇದರ ತುದಿ ಭಾಗದಲ್ಲಿ ಮೊನಚಾಗಿದ್ದು, ತಳ ಭಾಗದಲ್ಲಿ ದಪ್ಪಾಗಿ ಇರುವುದು. ಇದು ಸುಮಾರು ಒಂದು ಮೀಟರ್ ಉದ್ದವಾಗಿದ್ದು, 45 ಸೆಂ.ಮೀ.ನಷ್ಟು ನೆಲದ ಮೇಲ್ಗಡೆ ಇರುವಂತೆ ನೆಲದಲ್ಲಿ ತಗ್ಗುತೆಗೆದು ಭಧ್ರಪಡಿಸುವರು, ತಿಗರಿ ಹಾಕುವಾಗ ಗೂಟದ ಮೊನಚಾದ ತುದಿಯನ್ನು ತಿಗರಿ ಕಲ್ಲಿನಲ್ಲಿ ಇಟ್ಟು ತಿಗರಿ ತಿರುಗಿಸುವರು.


logo