logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಆಡುಮಡಕೆ
(ನಾ)
ಅಡುಗೆ ಮಾಡುವ ಪಾತ್ರೆ, ಬೆಂಕಿಯಿಂದ ಅಡುಗೆ ಮಾಡುವದಕ್ಕೆ ಅನುಕೂಲವಾದ ವಿಶಿಷ್ಟ ರಚನೆಯ ಮಣ್ಣಿನ ಪಾಕ ಪಾತ್ರೆ. ಕುಕ್-ರ್ (cooker)

ಆಯ
(ನಾ)
ಆದಾಯ, ವರಮಾನ, ಹುಟ್ಟುವಳಿ, ಹಳ್ಳಿಗಳಲ್ಲಿ ವಂಶಪರಂಪರೆಯಿಂದ ಸೇವೆ ಸಲ್ಲಿಸಿಕೊಂಡು ಬಂದಿರುವವರಿಗೆ ಕಣದಲ್ಲಿ ರಾಶಿ ಮಾಡುವಾಗ ನಿರ್ದಿಷ್ಟ ಪ್ರಮಾಣದಲ್ಲಿ ಕೊಡಲ್ಪಡುವ ಧಾನ್ಯ-ವರ್ಷಾಶನ. ಗ್ರಾಮೀಣ ಸಮುದಾಯದ ಒಂದು ಭಾಗವಾಗಿದ್ದ ಕುಂಬಾರನು, ದೈನಂದಿನ ಅವಶ್ಯಕತೆಗೆ ಬೇಕಾದ ಮಡಿಕೆ ಕುಡಿಕೆಗಳನ್ನು ಪೂರೈಸುತಿದ್ದುದರಿಂದ ಇತರೆ ಕಸಬುದಾರರಂತೆ ಆಯ ಪದ್ಧತಿಗೆ ಒಳಗಾಗಿದ್ದ. ಸುಗ್ಗಿಯ ಕಾಲದಲ್ಲಿ ರೈತರು ಕುಂಬಾರನ ಸೇವೆಗೆ ಪ್ರತಿಯಾಗಿ ತಾವು ಬೆಳೆದ ದವಸ ಧಾನ್ಯಗಳನ್ನು ಆಯ ರೂಪದಲ್ಲಿ ಕೊಡುತ್ತಿದ್ದರು. ಈಗಲೂ ಈ ಪದ್ಧತಿ ಹಳ್ಳಿಗಳಲ್ಲಿ ಇದೆ. ಆಯ ಪದ್ಧತಿ ಹಳ್ಳಿಯ ಕಂಬಾರ, ಬಡಿಗ, ಮುಂತಾದ ಕಸಬುದಾರರಿಗೆ ಹೆಚ್ಚಿನ ಆದಾಯವನ್ನು ಒದಗಿಸುತ್ತಿದ್ದರಿಂದ ಇದು ಬಡ ಕಸಬುದಾರರಿಗೆ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾದ ಪದ್ಧತಿಯಾಗಿತ್ತು. ಈ ಆಯ ಪದ್ಧತಿ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಇದ್ದುದು ತಿಳಿದುಬರುತ್ತದೆ. ಆಯಾ ಹಾಕುವಾಗಲೇ ನ್ಯಾಯ ಬಂತು (ಗಾದೆ)

ಆಲುಕ
(ನಾ)
ನೀರನ್ನು ಹಾಕಿಡುವ ಸಣ್ಣ ಪಾತ್ರೆ, ಹೂಜಿ

ಆವಿಗೆ
(ನಾ)
ಆವುಗೆ, ಆವಿ, ಕುಂಬಾರನ ಆವಿಗೆ, ಕುಂಬಾರನು ಮಡಿಕೆಗಳನ್ನು ಸುಡಲು ಉಪಯೋಗಿಸುವ ಒಲೆ-ಭಟ್ಟಿ, ಕುಂಬಾರಿಕೆಯ ಮೂಲಭೂತ ಆವಶ್ಯಕತೆಗಳಲ್ಲಿ ಆವಿಗೆಯು ಮುಖ್ಯ. ಅವಿಗೆಯನ್ನು ಕಲ್ಲು ಮಣ್ಣುಗಳಿಂದ ಇಲ್ಲವೆ ಇಟ್ಟಿಗೆಗಳಿಂದ ಕಟ್ಟುವರು. ಆವಿಗೆಯ ಗಾತ್ರಕ್ಕನುಗುಣವಾಗಿ ಅದರ ಬಾಯಿಗಳಿರುತ್ತವೆ. ಆವಿಗೆ ಚಿಕ್ಕದಾಗಿದ್ದರೆ ಒಂದು ಬಾಯಿ ಮಧ್ಯಮವಾಗಿದ್ದರೆ ಎರಡು ಬಾಯಿಗಳು ಮತ್ತೂ ದೊಡ್ಡದಾಗಿದ್ದರೆ ಮೂರು ಬಾಯಿಗಳಿರುತ್ತವೆ. ಆವಿಗೆಗಳನ್ನು ಸಾಮಾನ್ಯವಾಗಿ ಆಯತಾಕಾರದಲ್ಲಿ ಮತ್ತು ವೃತ್ತಾಕಾರದಲ್ಲಿ ಕಟ್ಟುವರು. 1. ಆಯತಾಕಾರದ ಅವಿಗೆ ಸಾಮಾನ್ಯವಾಗಿ 4-5 ಮೀಟರ್ ಉದ್ದವಾಗಿರುವುದು. ಮುಂಭಾಗದಲ್ಲಿ ಕಡಿಮೆ ಅಗಲವೂ ಹಿಂಭಾಗದಲ್ಲಿ ಹೆಚ್ಚು ಅಗಲವೂ ಆಗಿರುವುದು. ಅಂದರೆ ಮುಂಭಾಗದಲ್ಲಿ ಸುಮಾರು 2.5 ಮೀಟರ್ ಅಗಲವಿರುವುದು. ಹಿಂಭಾಗದಲ್ಲಿ 4 ಮೀಟರ್ ಅಗಲ ಇರುವುದು. ಮುಂಭಾಗದ ಬಾಯಿಯ ಹತ್ತಿರದ ಗೋಡೆ 2 ಮೀ ರಿಂದ 1.5 ಮೀಟರ್ ಎತ್ತರವಾಗಿದ್ದರೆ ಹಿಂಭಾಗಕ್ಕೆ ಎತ್ತರ ಕಡಿಮೆಯಾಗುತ್ತ ಹೋಗಿ 0.75 ಮೀಟರ್-ಗೆ ನಿಲ್ಲುತ್ತದೆ. 2. ವೃತ್ತಾಕಾರದ ಆವಿಗೆ ವರ್ತುಲಾಕಾರದಲ್ಲಿ ಇದ್ದು, ಸುಮಾರು 2 ಮೀಟರ್ ಎತ್ತರವಾಗಿರುವುದು. 3. ವಿದ್ಯುತ್ ಆವಿಷ್ಕಾರವಾದಾಗಿನಿಂದ ವಿದ್ಯುತ್ ಆವಿಗೆಗಳು ಬಳಕೆಗೆ ಬಂದಿವೆ. 4. ಇತ್ತೀಚಿನ ದಿನಗಳಲ್ಲಿ ಫೈಬರ್ ಕವಚದ ಒಲೆಗಳೂ ಬಂದಿವೆ, ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಅಲ್ಲದೆ ಕೇವಲ 3-4 ಗಂಟೆಗಳಲ್ಲಿ ಮಡಕೆಗಳನ್ನು ಸುಡಬಹುದು. ಕ್ರಿ.ಶ. ಪೂರ್ವ ಸುಮಾರು ಒಂದು ಸಾವಿರ ವರ್ಷಗಳ ಪೂರ್ವದಲ್ಲಿ ಕೋರಿಯಾ, ಚೀನಾ, ಜಪಾನ್ ದೇಶಗಳಲ್ಲಿ ಕುಂಬಾರರು ಮಡಕೆಗಳನ್ನು ಸುಡಲು ಆವಿಗೆಯನ್ನು ಬಳಸುತ್ತಿದ್ದರೆಂದು ತಿಳಿದು ಬರುತ್ತದೆ. 1. "ಆವಿಗೆಯ ಕಿಚ್ಚಿನಂತೆ ಸುಳಿ ಸುಳಿದು ಬೆಂದೆ" (ಅಕ್ಕಮಹಾದೇವಿ) 2. "ಆವಗೆಯೊಳಗೆ ತಂಪುಗಳುಂಟೆ" (ಭೀಮ ಕವಿ) 3. "ಆವಿಗೆಯ ಬಲು ಗಿಚ್ಚಿನುರಿಯೊಳು ಬೇವ ಮಡಕೆಗಳಂತ" (ಮಹಲಿಂಗರಂಗ) ಕುಂಬಾರನ ಆವಿಗೆಯಲ್ಲಿ ಚೆಂಬು ಹುಡುಕಿದ ಹಾಗೆ.(ಗಾದೆ)
">

ಆವಿಗೆ ಇಡು
(ಕ್ರಿ)
ಆವಿಗೆ ಕಟ್ಟು, ಮಡಿಕೆಗಳನ್ನು ಆವಿಗೆಯಲ್ಲಿಟ್ಟು ಸುಡುವುದು. ಆವಿಗೆ ಕಟ್ಟುವಾಗ ಮೊದಲು ದೊಡ್ಡ ದೊಡ್ಡ ಗಡಿಗೆ, ಹರಿವಾಣ, ಪಚೇಲಿ, ಕೊಡ ಇತ್ಯಾದಿಗಳನ್ನು ಕೆಳಭಾಗದಲ್ಲಿ ಜೋಡಿಸುವರು. ಆನಂತರ ಚಿಕ್ಕ, ಚಿಕ್ಕ, ಗಡಿಗೆ, ಚಟಿಕೆ ಮುಂತಾದವುಗಳನ್ನು ಬೋರಲಾಗಿ ಹೊಂದಿಸುವರು. ಹೀಗೆ ಹೊಂದಿಸುವಾಗ ಉರಿ ಎಲ್ಲಡೆ ಹರಡಲು ಅನುಕೂಲವಾಗಲೆಂದು ಅಲ್ಲಲ್ಲಿ ಒಡೆದ ಮಡಿಕೆ ಚೂರು, ಬೋಕಿಗಳನ್ನು ಆನಿಕೆಯಾಗಿ ಹಚ್ಚುವರು. ಎಲ್ಲ ಮಡಿಕೆ-ಕುಡಿಕೆಗಳನ್ನು ಜೋಡಿಸಿಯಾದ ಮೇಲೆ ಕೊನೆಯಲ್ಲಿ ಮುಚ್ಚಳಗಳನ್ನು ಬೋರಲಾಗಿ ಹೊಂದಿಸುವರು ಆಮೇಲೆ ಆವಿಗೆಯ ಮೇಲ್ಭಾಗದಲ್ಲಿ ಸೊಪ್ಪು, ಹುಲ್ಲು ಸೆದೆಯನ್ನು ಹರಡಿ ಅದರ ಮೇಲೆ ಹಸಿಯಾದ ಬೂದಿಯನ್ನು ಮೇಲು ಹೊದಿಕೆಯಾಗಿ ಮುಚ್ಚುವರು. ಆವಿಗೆ ಕಟ್ಟುವಾಗ ತಳದಲ್ಲಿ ಉರುವಲು ಮುಚ್ಚುವರು. ಆವಿಗೆ ಕಟ್ಟುವಾಗ ತಳದಲ್ಲಿ ಉರುವಲು ಕಿಚ್ಚು ಎಲ್ಲಡೆ ಪಸರಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಮರದ ತುಂಡುಗಳನ್ನು ಇಟ್ಟು, ಆವಿಗೆಯ ಹಿಂಭಾಗದಲ್ಲಿ ಹೊಗೆ ಹೋಗಲು ಕಿಂಡಿಗಳನ್ನು ಬಿಡುವರು. ಆಮೇಲೆ ಆವಿಗೆಯ ಬಾಯಿಯ ಮೂಲಕ ಬೆಂಕಿಯನ್ನು ಹಾಕಿ ಉರುವಲನ್ನು ಮೆಲ್ಲಕೆ ಒಳಕ್ಕೆ ಚಾಚುತ್ತ ಆವಿಗೆ ಸುಡಲು ಆರಂಭಿಸುವರು.

ಆವಿಗೆ ಕಾಯಿಸು
(ಕ್ರಿ)
ಆವಿಗೆ ಬಿಸಿ ಮಾಡುವುದು, ಆವಿಗೆಯಲ್ಲಿ ಮಡಕೆಗಳನ್ನು ಸುಡಲು ಇಟ್ಟ ನಂತರ ಆರಂಭದಲ್ಲಿ ಆವಿಗೆಯ ಬಾಯಿಯ ಮುಂದುಗಡೆ ಸಗಣಿ. ಕುಳ್ಳು ಚಿಕ್ಕ, ಚಿಕ್ಕ, ಕಟ್ಟಿಗೆಯ ತುಂಡುಗಳನ್ನಿಟ್ಟು ಬೆಂಕಿ ಹೊತ್ತಿಸುವುದು. ನಿಧಾನವಾಗಿ ಒಂದೆರಡು ಗಂಟೆ ಆವಿಗೆ ಕಾಯಿಸುವರು. ಒಂದೇ ಬಾರಿಗೆ ಹೆಚ್ಚು ಉರಿ ಹಾಕಿದಲ್ಲಿ ಹಸಿ ಮಡಕೆಗಳು ಸೀಳು ಬಿಡುವ ಸಂಭವ ಹೆಚ್ಚು ಆವಿಗೆ ಪೂರ್ಣವಾಗಿ ಬಿಸಿಯಾದ ಮೇಲೆ ಉರಿಯನ್ನು ಮೆಲ್ಲ ಮೆಲ್ಲನೆ ಚಾಚುಗೋಲಿನಿಂದ ಆವಿಗೆ ಒಳಕ್ಕೆ ತಳ್ಳುವರು.

ಆವಿಗೆ ಕಿಚ್ಚು
(ನಾ)
ಆವಿಗೆಯ ಬೆಂಕಿ, ಜ್ವಾಲೆ, ಉರಿ, ಮಣ್ಣಿನ ಮಡಿಕೆಗಳು ಚೆನ್ನಾಗಿ ಸುಟ್ಟು ಗಟ್ಟಿಯಾಗಬೇಕಾದರೆ ಅದಕ್ಕೆ ಹೆಚ್ಚು ಉಷ್ಣತೆ ಅಗತ್ಯ ಆದ್ದರಿಂದ ಆವಿಗೆಯಲ್ಲಿ ಕಿಚ್ಚು ಪ್ರಬಲವಾಗಿ ಎಲ್ಲೆಡೆ ಹರಡಿಕೊಳ್ಳುವಂತೆ ಉರುವಲಿಗಾಗಿ ಮುಳ್ಳಿನ ಕಂಟಿ, ಕಟ್ಟಿಗೆ, ಸ್ಥಳೀಯವಾಗಿ ದೊರೆಯುವ ಸೌದೆಗಳನ್ನು ಬಳಸುವರು. ಆವಿಗೆಯ ಕಿಚ್ಚು ಹೆಚ್ಚಾಗುತ್ತ ಹೋದಂತೆ ಮಡಿಕೆಗಳೆಲ್ಲವು ಕಾದ-ಕಬ್ಬಿಣದಂತೆ ಕೆಂಪಗಾಗುತ್ತ ಹೋಗುತ್ತವೆ. ಆಗಾಗ ಬ್ಯಾಕೋಲಿನಿಂದ ಕಿಚ್ಚನ್ನು ಹಿಂದೆ ಸರಿಸುವರು. ಹೀಗೆ ಇಡೀ ಆವಿಗೆ ಕೆಂಡಮಯವಾಗಿ ಕಂಡಾಗ ಮಡಿಕೆಗಳೆಲ್ಲವೂ ಚೆನ್ನಾಗಿ ಸುಟ್ಟಿವೆ ಎಂದು ಖಚಿತವಾಗುವುದು.

ಆವಿಗೆ ಕಿಡಿ
(ನಾ)
ಕಿಡಿ, ಬೆಂಕಿ, ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುತ್ತಿರುವಾಗ ಆವಿಗೆ ಬಿಸಿಯಾಗಿ ಬೆಂಕಿಯ ಕಿಡಿಗಳು ಆವಿಗೆಯ ಹಿಂದೆ ಇಟ್ಟಿರುವ ಕಿಂಡಿಗಳ ಮೂಲಕ ಹೊರಬರುತ್ತವೆ. ಆವಿಗೆ ಕಾಯುತ್ತಿರುವುದಕ್ಕೆ ಇದು ಸೂಚನೆ.

ಆವಿಗೆ ಕಿಂಡಿ
(ನಾ)
ಆವಿಗೆಯ ಹಿಂಭಾಗದಲ್ಲಿ ಮಾಡಿದ ಕಿಂಡಿ. ಒಡೆದ ಗಡಿಗೆಗಳ ಕಂಠಗಳನ್ನು ಇಟ್ಟು ಈ ಕಿಂಡಿಗಳನ್ನು ಬಿಡುವರು. ಈ ಕಿಂಡಿಯ ಮೂಲಕ ಆವಿಗೆಯ ಹೊಗೆ ಹೊರಕ್ಕೆ ಹೋಗಲು ಅನುಕೂಲವಾಗುವುದು. ಆವಿಗೆಯ ಹಿಂಭಾಗದಲ್ಲಿ ಸುಮಾರು 4-5 ಇಂಥ ಕಿಂಡಿಗಳನ್ನು ಬಿಡುವರು, ಆವಿಗೆ ಸುಡುತ್ತ ಹೋದಂತೆ ಹೊಗೆ ಕಡಿಮೆಯಾಗಿ ಈ ಕಿಂಡಿಗಳ ಮೂಲಕ ಉರಿ-ಜ್ವಾಲೆ ಹೊರಬರಲಾರಂಭಿಸುವುದು. ಇದು ಆವಿಗೆಯಲ್ಲಿನ ಮಡಿಕೆಗಳೆಲ್ಲವೂ ಚೆನ್ನಾಗಿ ಸುಟ್ಟಿವೆ ಎಂಬುದನ್ನು ಸೂಚಿಸುವುದು.

ಆವಿಗೆ ಬಾಯಿ
(ನಾ)
ಆವಿಗೆಯ ತಳದಲ್ಲಿ ಉರಿ ಹಚ್ಚಿ ಮಡಕೆ ಸುಡಲು ಆವಿಗೆಯ ಮುಂಭಾಗದ ಗೋಡೆಯಲ್ಲಿ ಮಾಡಿರುವ ಸುಮಾರು 75 ಸೆಂ.ಮೀ. ಅಗಲ 75 ಸೆಂ. ಮೀ. ಎತ್ತರದ ಕಿಂಡಿ. ಕಮಾನಾಕೃತಿಯಲ್ಲಿ ಕೂಡ ಬಾಯಿಯನ್ನು ಮಾಡುವರು. ಸಾಮಾನ್ಯವಾಗಿ ಒಂದು ಇಲ್ಲವೆ ಎರಡು ಬಾಯಿಗಳನ್ನು ಮಾಡುವ ರೂಢಿ ಇದೆ.


logo