logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಆವಿಗೆ ಕಿಂಡಿ
(ನಾ)
ಆವಿಗೆಯ ಹಿಂಭಾಗದಲ್ಲಿ ಮಾಡಿದ ಕಿಂಡಿ. ಒಡೆದ ಗಡಿಗೆಗಳ ಕಂಠಗಳನ್ನು ಇಟ್ಟು ಈ ಕಿಂಡಿಗಳನ್ನು ಬಿಡುವರು. ಈ ಕಿಂಡಿಯ ಮೂಲಕ ಆವಿಗೆಯ ಹೊಗೆ ಹೊರಕ್ಕೆ ಹೋಗಲು ಅನುಕೂಲವಾಗುವುದು. ಆವಿಗೆಯ ಹಿಂಭಾಗದಲ್ಲಿ ಸುಮಾರು 4-5 ಇಂಥ ಕಿಂಡಿಗಳನ್ನು ಬಿಡುವರು, ಆವಿಗೆ ಸುಡುತ್ತ ಹೋದಂತೆ ಹೊಗೆ ಕಡಿಮೆಯಾಗಿ ಈ ಕಿಂಡಿಗಳ ಮೂಲಕ ಉರಿ-ಜ್ವಾಲೆ ಹೊರಬರಲಾರಂಭಿಸುವುದು. ಇದು ಆವಿಗೆಯಲ್ಲಿನ ಮಡಿಕೆಗಳೆಲ್ಲವೂ ಚೆನ್ನಾಗಿ ಸುಟ್ಟಿವೆ ಎಂಬುದನ್ನು ಸೂಚಿಸುವುದು.

ಆವಿಗೆ ಬಾಯಿ
(ನಾ)
ಆವಿಗೆಯ ತಳದಲ್ಲಿ ಉರಿ ಹಚ್ಚಿ ಮಡಕೆ ಸುಡಲು ಆವಿಗೆಯ ಮುಂಭಾಗದ ಗೋಡೆಯಲ್ಲಿ ಮಾಡಿರುವ ಸುಮಾರು 75 ಸೆಂ.ಮೀ. ಅಗಲ 75 ಸೆಂ. ಮೀ. ಎತ್ತರದ ಕಿಂಡಿ. ಕಮಾನಾಕೃತಿಯಲ್ಲಿ ಕೂಡ ಬಾಯಿಯನ್ನು ಮಾಡುವರು. ಸಾಮಾನ್ಯವಾಗಿ ಒಂದು ಇಲ್ಲವೆ ಎರಡು ಬಾಯಿಗಳನ್ನು ಮಾಡುವ ರೂಢಿ ಇದೆ.

ಆವಿಗೆ ಮುಚ್ಚು
(ಕ್ರಿ)
ಆವಿಗೆ ಮುಚ್ಚುವುದು, ಆವಿಗೆಯಲ್ಲಿನ ಮಡಿಕೆಗಳೆಲ್ಲವೂ ಸುಟ್ಟಮೇಲೆ, ಆದರ ಬಾಯಿ ಮತ್ತು ಕಿಂಡಿಗಳನ್ನು ಮುಚ್ಚುವ ಕ್ರಿಯೆ. ಆವಿಗೆಯಲ್ಲಿನ ಮಡಿಕೆಗಳೆಲ್ಲವೂ ಸುಟ್ಟು ಹಿಂಭಾಗದ ಕಿಂಡಿಗಳಿಂದ ಉರಿ ಉಗಳಲು ಆರಂಭವಾಗುತ್ತದೆ. ಆಗ ಬೆಂದ ಮಡಿಕೆಗಳೆಲ್ಲ ಕೆಂಪಗೆ ಕೆಂಡದಂತೆ ಕಾಣುವವು ಅದು ಮಡಿಕೆಗಳೆಲ್ಲವೂ ಚೆನ್ನಾಗಿ ಸುಟ್ಟಿವೆ ಎಂಬುದರ ಸೂಚನೆ. ಈ ಸೂಚನೆ ಬಂದ ಮೇಲೆ ಮೊದಲು ಆವಿಗೆಯ ಬಾಯಿಯನ್ನು ಬೂದಿಯಿಂದ ಚೆನ್ನಾಗಿ ಮುಚ್ಚುವರು. ಅನಂತರ ಹಿಂಭಾಗದ ಕಿಂಡಿಗಳನ್ನು ಮುಚ್ಚಳಗಳನ್ನಿಟ್ಟು ಹಸಿಬೂದಿಯಿಂದ ಮುಚ್ಚುವರು. ಆಮೇಲೆ ಮತ್ತೊಮ್ಮೆ ಆವಿಗೆಯ ಮೇಲ್ಭಾಗದ ತುಂಬ ಬೂದಿಯನ್ನು ತೆಳುವಾಗಿ ಹರಡಿ ಮೆತ್ತಗೆ ಕೈಯಿಂದ ಒತ್ತುವರು. ನಂತರ ಅದರ ಮೇಲೆ ಸ್ವಲ್ಪ ನೀರನ್ನು ಸಿಂಪಡಿಸುವರು. ಹೀಗೆ ಆವಿಗೆಯನ್ನು 8 ರಿಂದ 10 ತಾಸು ಮುಚ್ಚಿರುವುದರಿಂದ, ಒಳಗಿನ ಕೆಂಡದಿಂದ ಮಡಿಕೆಗಳೆಲ್ಲವೂ ಸಂಪೂರ್ಣವಾಗಿ ಬೆಂದು ಗಟ್ಟಿಯಾಗುವವು.

ಆವಿಗೆ ತೆಗೆ
(ಕ್ರಿ)
ಆವಿಗೆ ಕೆದರು, ಸುಟ್ಟ ಮಡಿಕೆಗಳನ್ನು ಆವಿಗೆಯಿಂದ ಹೊರತೆಗೆಯುವ ಕ್ರಿಯೆ. ಆವಿಗೆ ಮುಚ್ಚಿದ ಮರುದಿವಸ, ಅಂದರೆ 8-10 ತಾಸುಗಳ ನಂತರ ಈ ಕಾರ್ಯ ನಡೆಯುವುದು. ಆವಿಗೆಯ ಮೇಲ್ಭಾಗದಲ್ಲಿ ಹೊದಿಸಿದ್ದ ಬೂದಿಯನ್ನು ಸಲಕಿಯಿಂದ ನಿಧಾನವಾಗಿ ಎಳೆದು ತೆಗೆಯುವರು. ಅಲ್ಲಲ್ಲಿ ಉಳಿದ ಬೂದಿಯನ್ನು ಬೋಕಿ ಒಡೆದ ಮಡಿಕೆ ಚೂರುಗಳಿಂದ ಬಳೆಯುವರು. ಅನಂತರ ಕೈಯಲ್ಲಿ ಬಟ್ಟೆಯನ್ನು ಹಿಡಿದುಕೊಂಡು ಗಡಿಗೆಗಳನ್ನು ಹೊರಗೆ ತೆಗೆದಿಡುವರು. ಗಂಡಸರು, ಹೆಂಗಸರು, ಮಕ್ಕಳು ಹೀಗೆ ಎಲ್ಲಾ ಸದಸ್ಯರು ಪಾಲುಗೊಳ್ಳುವರು. ಮಡಿಕೆಗಳೆಲ್ಲವೂ ಆರಿದ ಮೇಲೆ ಆಯಾ ಆಕಾರದ ಮಡಿಕೆಗಳನ್ನು ಪ್ರತ್ಯೇಕಿಸಿ ಇಡುವರು. ಆಗ ಅವು ಮಾರಾಟಕ್ಕೆ ಸಿದ್ದಗೊಂಡ ಮಡಿಕೆಗಳು.

ಆವಿಗೆ ಮನೆ
(ನಾ)
ಒಣಗಿದ ಹಸಿ ಮಡಕೆಗಳನ್ನು ಸುಡುವ ಆವಿಗೆ ಇರುವ ಕೊಟ್ಟಿಗೆ. ಗಾಳಿ, ಮಳೆ ಬಿಸಿಲಿನಿಂದ ಇದು ರಕ್ಷಣೆ ಒದಗಿಸುತ್ತದೆ. ಸಾಮಾನ್ಯವಾಗಿ ಕುಂಬಾರರು ವಾಸದ ಮನೆಯ ಹಿಂದೆ ನಾಡಹಂಚನ್ನು ಮಾಡಿಗೆ ಹೊದಿಸಿ ಕೊಟ್ಟಿಗೆ ರೂಪದಲ್ಲಿ ಆವಿಗೆ ಮನೆ ನಿರ್ಮಿಸುವರು. ಬಯಲು ಸೀಮೆಯಲ್ಲಿ ಕುಂಬಾರರು ಬಯಲು ಆವಿಗೆಯಲ್ಲೇ ಮಡಿಕೆ ಸುಡುವರು.

ಇಲಕಿ
(ನಾ)
ಇಲ, ಕಂಠ ತಟ್ಟಿದ ಹಸಿಮಡಕೆಗಳನ್ನು ಒಣಗಿಸಲು ಇಡಲು ಬಳಸುವ ಸಾಧನ. ಗಡಿಗೆಯನ್ನು ನಡುವೆ ದುಂಡಾಗಿ ಒಡೆದು, ಅದರ ಕಂಠವನ್ನು ಕೆಳಮುಖವಾಗಿ ಇಟ್ಟು ಅದರ ಒಳಗಡೆ ಹಸಿ-ಮಡಿಕೆಯನ್ನು ಇಟ್ಟು ಮತ್ತು ಆನಿಕೆಗಾಗಿ ಅಲ್ಲಲ್ಲಿ ಒಡೆದ ಮಡಿಕೆ ಚೂರುಗಳನ್ನು ಇಡುವರು. ಮಡಕೆ ಸುಡುವಾಗ ಆವಿಗೆಯ ಹಿಂದ ಹೊಗೆ ಹೋಗಲು ಕೂಡ ಇಲಕಿಯನ್ನು ಬಳಸುವರು.

ಇಸಾಳಿ
(ನಾ)
ಮಣ್ಣಿನಿಂದ ಮಾಡಿದ ಕೊಳವೆ, ಪೈಪು ಇದು ಸುಮಾರು ಒಂದು ಮೀಟರ್ ಉದ್ದವಿದ್ದು, ಅಗಲಕ್ಕೆ ಬೇಕಾದ ಸೈಜಿನಲ್ಲಿ ತಯಾರಿಸುವರು. ಇವುಗಳನ್ನು ಪೈಪುಗಳಂತೆ ಒಂದಕ್ಕೊಂದು ಜೋಡಿಸುವ ರೀತಿಯಲ್ಲಿ ತಯಾರಿಸುವದೂ ಉಂಟು. ಇದರಿಂದ ಎಷ್ಟು ಉದ್ದಬೇಕೋ ಅಷ್ಟು ಉದ್ದ ಜೋಡಿಸಿಕೊಳ್ಳಬಹುದು. ಇವುಗಳನ್ನು ಅಡುಗೆ ಮನೆಯ ಹೊಗೆ ಹೊರಗೆ ಹೋಗಲು, ಬೆಳಕಿಂಡಿ ಬಿಡಲು, ಮಾಳಿಗೆ ನೀರು ಹರಿ ಬಿಡಲು ಉಪಯೋಗಿಸವರು.

ಈಸುಕೋಲು
(ನಾ)
ಒಂದು ಬಗೆಯ ತಂತಿಯ ಪೊರಕೆ. ಮಣ್ಣನ್ನು ಹದ ಮಾಡುವ ಮುನ್ನ ಅದರಲ್ಲಿನ ಕಸ ಕಡ್ಡಿಗಳನ್ನು ಬೇರ್ಪಡಿಸಲು ಮಣ್ಣನ್ನು ಎಳೆಯಲು ಉಪಯೋಗಿಸುವರು. ಈ ಪದ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.

ಉಜ್ಜು
(ಕ್ರಿ)
ಸವರು, ತೀಡು ಮಣಿಸರ, ಗಜ್ಜುಗದಿಂದ, ಉಜ್ಜುಕಲ್ಲಿನಿಂದ ಅರೆ ಒಣಗಿದ ಮಡಕೆಗಳನ್ನು ಉಜ್ಜಿ ನುಣುಪುಗೊಳಿಸುವುದು. ಪರ್ಯಾಯ ಪದ: ಉಜ್ಜು ಸರ

ಉದಾನಿ
(ನಾ)
ಅಗಲ ಬಾಯಿಯ ಪಂಚಾರತಿ. ಇದಕ್ಕೆ ಹಿಡಿಕೆ ಇರುತ್ತದೆ. ಲೋಬಾನಾ ಹಾಕಿಡಲು ಇದನ್ನು ಬಳಸುವರು.


logo