logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಶುಮಾಳಿ
ಕಿರಣಗಳ ಮಾಲೆಯುಳ್ಳವನು, ಸೂರ್ಯ (ಅವರ್ಗೆ ಪುಟ್ಟಿದ ಮಗಂ ಉಗ್ರಪ್ರತಾಪ ವಿಜಿತಾಂಶುಮಾಳಿ ಮಣಿಮಾಳಿಯೆಂಬೊಂ: ಆದಿಪು, ೨. ೧೪ ವ)

ಅಂಶುಶೀತ
ತಂಪಾದ ಕಿರಣ (ವಿಧುಸಂಜಾತ ಅಂಶೂಶೀತಂ ವಿಸೃಮರಶಿಶಿರಂ ವ್ಯೋಮಗಂಗಾತುಷಾರಂ: ಉದ್ಭಟಕಾ, ೧. ೨)

ಅಂಸ
(ಆನೆಯ) ಹೆಗಲು (ವಿಪುಲೋಪತಾಂಸನುಂ ಸಮಪಾರ್ಶ್ವನುಂ: ಅಜಿತಪು, ೪. ೨೦ ವ); ಭುಜ (ಉನ್ನತಾಂಸಂ ಅರುಣೋಂಭೋಜಸ್ಫುರತ್ಪಾಣಿ ರಂಜಿತರಂಭೋರು ಬೆಡಂಗುವೀಱೆ: ರಾಜಶೇವಿ, ೪. ೮೨)

ಅಂಹಃ
ಪಾಪ (ಚಾರುವಿಧಾಗ್ನಿಕಾರ್ಯಪ್ರಾರಂಭ ಮಹಾದ್ವಿಜನ್ಮಘೋಷದಿಂ ಅಂಹೋದೂರಮುಂ ಅವನಿತಳ ಅಳಂಕಾರಂ ಸಂಸಾರಸಾರಗಂಗಾದ್ವಾರಂ: ಪಂಪಭಾ, ೪.೧೫)

ಅಂಹೋದೂರ
ಪಾಪದಿಂದ ದೂರವಾದುದು (ಚಾರು ವಿವಿಧಾಗ್ನಿಕಾರ್ಯ ಮಹಾದ್ವಿಜನ್ಮಘೋಷದಿಂ ಅಂಹೋದೂರಮುಮಂ ಅವನಿತಳಾಳಂಕಾರಂ ಸಂಸಾರಸಾರಂ ಗಂಗಾದ್ವಾರಂ: ಪಂಪಭಾ, ೪. ೧೫)

ಅಂಹೋಭಾರ
ಪಾಪಭಾರ (ವಸುಂಧರೆಯ ಅನ್ಯಾಯ ಪಥವರ್ತಿ ನಿಚಿತ ಅಂಹೋಭಾರಮಂ ನೀಗುಗುಂ: ಆಚವರ್ಧ, ೭. ೬೩)

ಅಃ
[ಕತ್ತರಿಸಿ ಕೊಡುವಾಗ, ನೋವಿನಿಂದ] ಅಯ್ಯೋ ಎಂಬ ಉದ್ಗಾರ (ಎಂದುಂ ಪೋಗೆಂದನೆ ಮಾಣೆಂದನೆ ಪೆಱತೊದನೀವೆನೆಂದನೆ ನೊಂದು ಅಃ ಎಂದನೆ ಸೆರಗಿಲ್ಲದೆ ಪಿಡಿಯೆಂದನಿದೇಂ ಕಲಿಯೊ ಚಾಗಿಯೋ ರವಿತನಯಂ: ಪಂಪಭಾ, ೧. ೧೦೨)

ಅಃಕಡ
ಗರಡಿಮನೆ (ಎತ್ತಿ ಬಿಸುಡುವ ಬಿಸುಡಲ್ ಮರಳ್ದೆದ್ದು ಕೆಡಪಿ ಬಿಡದಬ್ಬರಿಸುವ ಕಲಿಮಲ್ಲರಿಂದಂ ಅಃಕಡಮೆಸೆಗುಂ: ತ್ರಿಷಷ್ಟಿಪು, ೧೭. ೧೪)

ಅಕಂಪಿತಶರೀರ
ನಡುಗದ, ದೃಢವಾದ ಮೈಯುಳ್ಳ (ಪರಮಯೋಗಿಯಿರ್ಪಂದದಿಂದಕಂಪಿತಶರೀರನಿರ್ದುದು ಜಲಾಶಯೋಪಾಂತದೊಳ್ ಬಕಂ: ಪಂಪರಾ, ೭. ೯೧)

ಅಕಟ
ಅಯ್ಯೋ ಎಂಬ ಅರ್ಥದ ಉದ್ಗಾರ (ಆಯೆಡೆಗೆ ಬಂದನಕಟೆಂದು ತಡವರಿಸಿ: ಧರ್ಮಾಮೃ, ೨. ೩೪ ವ)


logo