logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲತಾಪ್ರತಾನ
ಬಳ್ಳಿಗಳ ಗುಂಪು (ಚಳತ್ ಅನಿಳ ಆಹತ ಕ್ಷುಭಿತ ಭಂಗುರತುಂಗತರಂಗಮಾಳಿಕಾವಳನ ಸಮುಚ್ಚಳತ್ ಮಣಿಗಣ ಆತ್ತ ಮರೀಚಿಲತಾಪ್ರತಾನಸಂವಳಿಯಿತ: ಪಂಪಭಾ, ೪. ೨೫)

ಲತಾಭವನ
ಬಳ್ಳಿಮಾಡ (ಸುರಪನ್ನಗಕಿನ್ನರಸೈನ್ಯಮೆಲ್ಲಂ ಅಂಬಿನ ಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳ್ ಎಂಬಿನಿತುಂ ಅವು ಅೞ ತೞ್ಗೆ: ಪಂಪಭಾ, ೫. ೧೦೪)

ಲತಾಲಲಿತೆ
ಬಳ್ಳಿಯಂತೆ ಕೋಮಲೆ (ಆಗಳೆ ಮಗನಂ ಪೆತ್ತವೊಲಾಗಿ ಲತಾಲಲಿತೆ ನೊಸಲ ಕಣ್ಬೆತ್ತವೊಲ್: ಪಂಪಭಾ, ೯. ೭೫)

ಲತಾವಾಸ
ಲತಾಗೃಹ (ಸದಮಳ ಮುಕ್ತಾವಳಿಯಿಂ ಪೊದೆಯಿಸಿದನೊ ಚೈತ್ರನೆನೆ ತದೀಯಲತಾವಾಸದ ವಿಚಕಿಲಕುಟ್ಮಲ ವಿಸರದ ಪದಪು ಅದಂ ದೇವಿ ನಾಡೆ ನೋಡುತ್ತಿರ್ದಳ್: ಶಾಂತೀಶ್ವಪು, ೫. ೧೨೫)

ಲತಿಕಾಂಗ
ಬಳ್ಳಿಮೈ (ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟು ಅಲರ್ಗಣ್ಣ ನೋಟಂ ಉಣ್ಮಿದ ಬೆಮರ್ ಓಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂದಿದ ಲತಿಕಾಂಗಂ: ಪಂಪಭಾ, ೪. ೬೦)

ಲತಿಕಾಗೃಹ
ಲತಾಗೃಹ (ಓರೊರ್ಮೆ ಸುರಭಿಪರಿಮಳೋದ್ಗಾರಿ ಸ್ಮೇರಕುಸುಮಮಂಜರೀನಿಕರಭರವಿನ ಲತಿಕಾಗೃಹಂಗಳೊಳ್ ಭ್ರಮರಮಿಥುನದಂತೆ ಪುಷ್ಪಾಪಚಯದಿಂ ಭ್ರಮಿಸಿಯುಂ; ಚಂದ್ರಪ್ರಪು, ೩. ೨೮ ವ)

ಲತಿಗ
ಒಂದು ಬಗೆಯ ಮೀನು (ಗಱಮೀನ್ ಸೀಗುಡಿ .. .. ಕುಚ್ಚ ಲತಿಗಂ ಕಾಗೆಂಡೆ .. .. ಬಣ್ಣಮೀನ್ ಎನಿಪೆಲ್ಲಂ ಬೀಳ್ದುವಾ ತಾಣದೊಳ್: ರಾಜಶೇವಿ, ೫. ೧೧೫)

ಲತೆ
ಬಳ್ಳಿ (ಲತೆಗಳ್ ಜಂಗಮರೂಪದಿಂದೆ ನೆರದುವೋ ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಲತೆವನೆ
ಲತಾಗೃಹ (ಲತೆವನೆಯೊಳಗಣ ತಣ್ಬುೞಲ ತಾಣದೊಳ್ ಕುಸುಮದೆಸೞ ಪಸೆಯಂ ಸೀತಾಪತಿಗೆ ಸಮೆದಂ ಸುಮಿತ್ರಾಸುತಂ: ಪಂಪರಾ, ೮. ೩)

ಲಪನ
ಮುಖಸೌಂದರ್ಯ (ನಗರಲಲನೆಯ ಲಪನಕ್ಕೆ ಕೇಳೀಲೀಲಾಲಲಾಮಲಕ್ಷ್ಮಿಯಂ ತಾಳ್ದಿ: ಆದಿಪು, ೬. ೧೦೬ ವ)


logo