logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚತುರ್ದಶಮನು
ಹದಿನಾಲ್ಕು ಮಂದಿ ಮನುಗಳು; (ವೈದಿಕ) ಸ್ವಾಯಂಭುವ, ಸ್ವಾರೋಚಿತ, ಉತ್ತಮ, ತಾಮಸ, ರೈವತ, ಚಾಕ್ಷುಷ, ವೈವಸ್ವತ, ಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ, ಇಂದ್ರಸಾವರ್ಣಿ; [ಜೈನ] ಪ್ರತಿಶ್ರುತಿ, ಸನ್ಮತಿ, ಕ್ಷೇಮಂಕರ, ಕ್ಷೇಮಂಧರ, ಸೀಮಂಕರ, ಸೀಮಂಧರ, ವಿಮಲವಾಹನ, ಚಕ್ಷುಷ್ಮಂತ, ಯಶಸ್ವಿ, ಅಭಿಚಂದ್ರ, ಚಂದ್ರಾಭ, ಮರುದ್ದೇವ, ಪ್ರಸೇನಜಿತು, ನಾಭಿರಾಜ (ಅಜ್ಞಾನತ್ರಯರಹಿತರ್ .. .. ಅಧಿಕಪ್ರಜ್ಞರ್ ಪುಟ್ಟುವರೀ ನೆಲನಾಜ್ಞಾಮುದ್ರಿತಮೆನಲ್ ಚತುರ್ದಶ ಮನುಗಳ್: ಪಂಪರಾ, ೧. ೬೯)

ಚತುರ್ದಶ ಮಹಾನದಿ
ಹದಿನಾಲ್ಕು (ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾಜನಕ್ಕಂ: ಪಂಪಭಾ, ೧೪. ೧೭ ವ) [ಮಹಾನದಿಗಳು: ಸರಸ್ವತೀ, ಭಾಗೀರಥೀ, ಯಮುನಾ, ಗೋದಾವರೀ, ಕೃಷ್ಣವೇಣೀ, ತಾಮ್ರಪರ್ಣಿ, ಸುವರ್ಣಮುಖೀ, ನರ್ಮದಾ, ತುಂಗಭದ್ರಾ, ಚಂದ್ರಭಾಗಾ, ಚರ್ಮಣ್ವತೀ, ಕುಮುದ್ವತೀ, ಸರಯೂ, ಫಲ್ಗುನೀ]

ಚತುರ್ದಶಲೋಕ
ಹದಿನಾಲ್ಕು ಲೋಕಗಳು: ಭೂ, ಭುವ, ಸುವ, ಮಹ, ಜನ, ತಪ, ಸತ್ಯ, ಎಂಬ ಊರ್ಧ್ವಲೋಕಗಳು ಮತ್ತು ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಪಾತಾಳ ಎಂಬ ಏಳು ಅಧೋಲೋಕಗಳು (ಚತುರ್ದಶಲೋಕಮನೆಯ್ದೆ ಗರ್ಭದೊಳ್ ಧರಿಯಿಸಿದಚ್ಯುತಂ ಬಳೆಯೆತನ್ನುದರಾಂತರಾಳದೊಳ್: ಜಗನ್ನಾವಿ, ೨. ೯೮)

ಚತುರ್ನಿಕಾಯ
[ಜೈನ] ಭವನವಾಸಿ, ವ್ಯಂತರ, ಜ್ಯೋತಿಷ್ಯ, ಕಲ್ಪವಾಸಿಗಳೆಂಬ ನಾಲ್ಕು ಪ್ರಕಾರದ ದೇವತಾಸಮೂಹ (ದ್ವಾರಾವತೀಪುರಮನೆಯ್ದಿ ಬಹಿಃಪಪ್ರದೇಶದೊಳ್ ನಿಲೆ ಚತುರ್ನಿಕಾಯ ಅಮರೇಂದ್ರವೃಂದವೊಂದಿ: ಕರ್ಣನೇಮಿ. ೮. ೧೧೧ ವ)

ಚತುರ್ನಿಕಾಯಾಮರ
ಭುವನ, ವನ, ಜ್ಯೋತಿ, ಕಲ್ಪ ಇವುಗಳ ದೇವತೆಗಳು (ಅಂತು ಚತುರ್ನಿಕಾಯಾಮರಜನಂ ಬೆರಸುಂ ಅಮರರಾಜಂ ಅಮರನಗರಿಗೆ ಪೋದಂ: ಅಜಿತಪು, ೫, ೬೦ ವ)

ಚತುರ್ನೃಪವಿದ್ಯೆ
ರಾಜನು ಕಲಿಯಬೇಕಾದ ವಿದ್ಯೆಗಳು; ಸಾಮ, ದಾನ, ಭೇದ, ದಂಡ (ತ್ರಿವಿಧಶಕ್ತಿಪ್ರಯುಕ್ತನುಂ ಚತುರ್ನೃಪವಿದ್ಯಾವಿಶರದನುಂ: ಚಂದ್ರಪ್ರಪು, ೭. ೩೫ ವ)

ಚತುರ್ಬಲ
ಚತುರಂಗಬಲ (ಘೂರ್ಣಿತ ಅರ್ಣವಮಂ ಒತ್ತರಿಸಿತ್ತು ಚತುರ್ಬಲ ಆರ್ಣವಂ: ಪಂಪಭಾ, ೧೦. ೨೮)

ಚತುರ್ಭಕ್ತಿ
[ಜೈನ] ನಾಲ್ಕು ಭಕ್ತಿಗಳು (ಅರ್ಹತ್‌ಭಕ್ತಿ ಆಚಾರ್ಯಭಕ್ತಿ ಬಹುಶ್ರುತ ಭಕ್ತಿ ಶ್ರುತಭಕ್ತಿ ಎಂಬ ಚತುರ್ಭಕ್ತಿಯುಂ: ಚಂದ್ರಪ್ರಪು, ೧೦. ೨೨)

ಚತುರ್ಭುಜ
ನಾಲ್ಕು ತೋಳು(ಗಳುಳ್ಳವನು), ಕೃಷ್ಣ, ವಾಸುದೇವ (ಸತ್ಯಭಾಮೆಯಂ ಸಕಳಜನಸ್ತುತ್ಯಂ ಖಚರಾಗ್ರಣಿ ಕೃತಕೃತ್ಯಂಗೆ ಚತುರ್ಭುಜಂಗೆ ತಂದಿತ್ತಂ: ಕರ್ಣನೇಮಿ, ೭. ೩೬)

ಚತುರ್ಮುಖ
ನಾಲ್ಕುಮುಖಗಳವನು, ಬ್ರಹ್ಮ ಇರ್ದಂ ಜಗತ್ಪತಿಯೊಡ್ಡೋಲಗದೊಳ್ ಚತುರ್ಮುಖಂ .. .. ವಾಣೀವಧೂಟೀಸಖಂ: ಜಗನ್ನಾವಿ, ೧. ೨೬); [ಜೈನ] ಮಹಾಸಾಮಂತರು ಮಾಡುವ ಜಿನಪೂಜೆ ಮಹಾಮಂಂಡಳಿಕ ಪ್ರಮುಖ ಮಕುಟಬದ್ಧರ್ ಮಾೞ್ಪ ಚತುರ್ಮುಖಮುಂ: ಆದಿಪು, ೧೫. ೧೩ ವ)


logo