logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಗಜವ್ರಜ
ಆನೆಯ ಹಿಂಡು (ಅಂಬಿನ ಬಂಬಲೊಳಂ ಜೋಡಾಗಿ ಕೋಡನೂಱ ಕೆಡೆದ ಗಜವ್ರಜಂಗಳ ಡೊಣೆವುಗಳಿಂದ ಒಱೆತು ಪರಿವ ನೆತ್ತರ ಕಡಲ್ಗಳೊಳ್ ಮಿಳಿರ್ವ: ಪಂಪಭಾ, ೧೦. ೧೧೬ ವ)

ಗಜಶಿಕ್ಷೆ
ಆನೆಯನ್ನು ಪಳಗಿಸುವುದು (ತುರಗಾರೋಹಣದಿಂದೊರ್ಮೆ ಗಜಶಿಕ್ಷಾಲೀಲೆಯಿಂದೊರ್ಮೆ: ಚಂದ್ರಪ್ರಪು, ೪. ೨೮)

ಗಜಱು
ಗದರು (ದೆಸೆಗೆತ್ತಂ ಗಜಱುತ್ತುಮಿರ್ಪ ಪುಲಿಯಿಂ ನೀಳಾಭ್ರಮಂ ದಂತಿಗೆತ್ತು ಸಿಡಿಲ್ದು ಆಗಸಕೆ ಎಯ್ದೆ ಪಾಯ್ವ ಪಲವುಂ ಸಿಂಗಂಗಳಿಂದೆತ್ತಗುರ್ವಿಸಿ: ಪಂಪಭಾ, ೭. ೨೬); ಆರ್ಭಟ, ಗರ್ಜನೆ (ಪಾವಿಲ್ಲದೆಡೆಯೊಳ್ ಕಪ್ಪೆಗಳೆ ತಮ್ಮ ಗಜಱೆ ಗಜಱಾಗಿರ್ಪುವು ಪಾವು ಬರೆ ಗಜಱುಗೆಟ್ಟು ಸತ್ತಂತಿರ್ಪುವು: ಧರ್ಮಾಮೃ, ೧. ೧೭೪)

ಗಜಾಗಮಜ್ಞ
ಆನೆಗಳ ಬಗೆಗಿನ ಶಾಸ್ತ್ರವನ್ನು ಬಲ್ಲವನು (ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳಕಾಪ್ಯ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ: ಪಂಪಭಾ, ೨. ೩೪ ವ)

ಗಜಾರಾತಿ
ಗಜವೈರಿ, ಸಿಂಹ (ಗಜಾರಾತಿಯನಾಂತ ದಂತಿಗೆಣೆಯಾಗಾಂ ಮಾಡಿ ನಿನ್ನಂ .. .. ಮಾಡುವೆಂ: ಚಂದ್ರಪ್ರಪು, ೫. ೭೫)

ಗಜಾರಿ
ಗಜಾರಾತಿ (ಗಜಮಸ್ತಕದೊಳ್ ಪಾಯ್ದುವು ಗಜಾರಿ ಪಾಯ್ವಂತೆ ನಿಶಿತ ಬಾಣಾವಳಿಗಳ್: ಶಾಂತಿಪು, ೪. ೧೮)

ಗಜೆ
ಗದೆ (ವರುಣಂ ಪೊಱಮಡುವಂತೆ ನಾನಾಭರಣಾಳಂಕೃತ ಮಣಿಮಕುಟ ವಿರಾಜಿತಂ ಗಜೆಯಂ ಪಿಡಿದು ಪೊಱಮಟ್ಠಾಗಳ್: ಹರಿವಂಶ, ೧೨. ೪೬ ವ)

ಗಜೋನ್ಮೀಲನ
ಆನೆ ಕಣ್ಣು ತೆರೆಯುವುದು, ಸರಿಯಾಗಿ ನೋಡುವುದು (ಅಪರಾಜಿತಂ .. .. ಕಿಱದು ಲೋಕಜ್ಞತೆಯೊಂದಿರ್ಪುದಱಂ ರಸಭಂಗಂ ಮಾಡದೆ ಗಜೋನ್ಮೀಲನಂಗೆಯ್ದು: ಶಾಂತಿಪು, ೨. ೨೨ ವ)

ಗಜೋಪಜೀವಿ
ಮಾವತಿಗ (ಸರ್ವದೋಷ ಪ್ರದುಷ್ಟ ಗಜಂಗಳಂ ಉಪಲಾಲನೆಯೊಳಂ ಇಚ್ಛಾನುವರ್ತನದೊಳಂ ಅಳವಡಿಸುವ ಕುಶಲ ಗಜೋಪಜೀವಿಯಂತೆ: ಶಾಂತಿಪು, ೩. ೭೨ ವ)

ಗಟ್ಟ
ಬೆಟ್ಟ ಸಾಲು (ಕುರುಡನಪಪ್ಪ ಪೊಲಂಬಿಗನಂ ನಂಬಿ ಗಟ್ಟದ ಇಟ್ಟೆಡೆಯೊಳ್ ಇರುಳ್ ದೂರದೇಶಕ್ಕೆ ಪಯಣಂಬೋಪನೆಂಬಾತನುಂ: ಧರ್ಮಾಮೃ, ೭. ೨೨ ವ)


logo