logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಂದು
ಕೂಡು, ಸೇರು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦); ಪಡೆ, ಹೊಂದು (ವಿನೋದಕೇಳಿಯಂ ತೊಱೆವಾತಮ ಪಂದೆಯವನೆಂಬ ನಿಂದೆಯನೊಂದುವನಿದು ರಾಜಧರ್ಮಮೇ: ರಾಜಶೇವಿ, ೩೩. ೨೦); ಒಂದು ಸಂಖ್ಯೆ (ಒಂದುಂ ಎಡಂಬಡುಂ ಪೊರೆಯುಂ ಇಲ್ಲ ಅವರ್ಗೆ ಎಂಬುದಂ ಎಯ್ದೆ ನಂಬಿ ನಾಡಂ ದಯೆಗೆಯ್ದು ನೀಂ ಕುಡುವಿನಂ: ಪಂಪಭಾ, ೯. ೪೩)

ಒಂದುಗುಂದು
ಒಂದೂ [ಸ್ವಲ್ಪವೂ] ಕಡಿಮೆಯಾಗದೆ (ಪ್ರಯತ್ನದೆ ಬಿಗಿದಿರ್ದ ಎರೞ್ದೊಣೆ ಮಿಸುಪ್ಪ ಅಸಿ ಖೇಟಕಂ ಇಂತಿವು ಒಂದುಗುಂದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದಂ ಅರ್ಜುನಂ: ಪಂಪಭಾ, ೭. ೭೯)

ಒಂದು ತಲೆಯಾಗೋಡು
ಒಂದೆ ದಿಕ್ಕಿಗೆ ತಲೆತಿರುಗಿಸಿಕೊಂಡು ಓಡು (ಅಂತು ದ್ರೋಣಂ ಎೞೆಗೋಣಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮಂ ಒಂದು ತಲೆಯಾಗೋಡುವ ಕೌರವ್ಯಧ್ವಜಿನಿಯುಮಂ ಬೇಱೊಂದು ಮೊನೆಯೊಳ್ ಕಾದುತಿರ್ದ ಅಶ್ವತ್ಥಾಮಂ ಕಂಡು: ಪಂಪಭಾ, ೧೨. ೩೦ ವ)

ಒಂದುತ್ತರಂ
ಒಂದಿಷ್ಟು ಅಧಿಕವಾಗಿ (ರಥಮಂ ಬಂದೇಱ ಮಗನ ಮನಕತಂ ಒಂದುತ್ತರಮೆರ್ದೆಯನಲೆಯೆ ನರನಿಂತೆಂದಂ: ಪಂಪಭಾ, ೧೧. ೧೧೪)

ಒಂದು ಪತ್ತೆಂಟು ಪಲಗೆ
ಒಂದು ಹತ್ತೆಂಟು ಆಟ, ಅಂದರೆ ಕೆಲವು ಆಟಗಳು (ಮಡಿಮಡಿಗುಱುವುದುಂ ಒಂದು ಪತ್ತೆಂಟು ಪಲಗೆಯಂ ಮೆೞ್ಪಡಿಸಲೆಂದು ಸೋಲ್ತು ಸೋಲದೊಳ್ ಏವಯಿಸಿಯಿನ್ನೊಡ್ಡಂ ಕೊಳ್ಳಿಂ ಎಂದು: ಪಂಪಭಾ, ೬. ೭೧ ವ)

ಒಂದುಮಾಡಿಕೊ
ಒಟ್ಟಾಗು (ತಂತಮ್ಮ ಚತುರ್ವಲಂಗಳಂ ಒಂದುಮಾಡಿಕೊಂಡು ಕಾಲಾಗ್ನಿಯಂ ಕೀಡಿ ಸುತ್ತುವಂತೆ ಕರ್ಣನಂ ಸುತ್ತಿ ಮುತ್ತಿಕೊಂಡು: ಪಂಪಭಾ, ೧೨. ೧೧೮ ವ)

ಒಂದೆ ಗಡ
ಒಂದೆ ಅಲ್ಲವೆ, ಒಂದು ವಿಷಯ (ಒಂದೆ ಗಡ ಹರಿಯ ಪೇೞ್ದೊಂದಂದದೆ ನರನೆಸಗುವಂತೆ ಕರ್ಣನುಂ ಎನ್ನೆಂದ ಒಂದೋಜೆಯೊಳ್ ಎಸಗದೊಡೆ: ಪಂಪಭಾ, ೧೨. ೧೦೧)

ಒಂದೆ ಪಸೆಯೊಳಿರಿಸು
ಒಂದೇ ಹಸೆಯ ಮೇಲೆ ಕುಳ್ಳಿರಿಸು, ಒಟ್ಟಿಗೆ (ಅಂತು ಸ್ವಯಂಬರದೊಳ್ ನೆಱೆದರಸುಮಕ್ಕಳೊಳ್ ಅಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ: ಪಂಪಭಾ, ೧. ೧೦೬ ವ)

ಒಂದೆ ಮೆಯ್
ಏಕಾಕಿ (ಅತ್ತ ವಿಜಯಕಟಕಜನಂ ಅಂಬುಧಿತಟದೊಳಿರ್ದ ಅರಸನೊಂದೆ ಮೆಯ್ಯೊಳ್ ಪೋಗಿ ಬಾರದೆ ತಡೆದುದರ್ಕೆ ಕಟ್ಟುಕಡೆದು: ಆದಿಪು, ೧೨. ೧೨೪ ವ)

ಒಂದೆವಸ
ಒಂದು ದಿವಸ (ಇಂದುವಿಮಾನಂ ಒಂದೆವಸ ರಾಹುವಿಮಾನಂ ಅದೊರ್ಮೆಗೊರ್ಮೆ ಸಾರ್ತಂದಿರೆ ಚಂದ್ರನುಂ ಕ್ರಮದೆ ತೋಱುವಂ: ಸಮಯಪ, ೧೧. ೪೨)


logo