logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಏಱು
ಗಾಯ, ಹೊಡೆತ (ಕಿವಿಯಂ ಪಳಂಚೆ ಕುಮುದೋತ್ತಂಸಕ್ಕೆ ಎಱಪ ಅಳಿಗಳ ದನಿ ನೋವಳೆಗಱಯಿಂದುಡಿವ ಏಱನೊಳಗಂ ಎಳವುವ ತೆಱದಿಂ: ಆಚವರ್ಧ, ೪. ೩೭); ಅಡರು (ಏಱನೆ ಸೂಱೆಗೊಂಡು ನುಡಿವೀ ನುಡಿಯಲ್ಲದೆ ಮತ್ತಂ ಆಸನಂದೋಱುವ ಬಲ್ಪುದೋಱುವ ಎರ್ದೆದೋಱುವ ಕಯ್ಪೆಸರಂಗಳ್ ಎಮ್ಮಂ ಉಂತೆ ಏಱವು: ಪಂಪಭಾ, ೮. ೨೦); ಮೇಲಕ್ಕೆ ಹತ್ತು ಮತ್ತು ಗಾಯವಡೆ (ಏಱು ಆರೋಹಣೇ ಸಮಗ್ರತ್ವೇ ಕ್ಷತೇ ಚ: ಶಬ್ದಮದ, ಧಾ ೮೪೬)

ಏಱುಂಜವ್ವನ
ಹೆಚ್ಚಾಗುತ್ತಿರುವ ಯೌವನ (ಏಱುಂಜವ್ವನದೊಳ್ ಸೊಕ್ಕೇಱದ ನೀಱೆಯರ: ಶಬ್ದಮದ, ೧೮೧, ಪ್ರ ೫); ಹೊಸ ಹರೆಯ (ಅಂಗಜಲಕ್ಷ್ಮಿಗಿದುವೆ ಪುದಿದ ಏಱುಂಜವ್ವನ: ಪುಷ್ಪದಂಪು, ೮. ೭೯)

ಏಱುಗಾಣ್
ಗಾಯ ಹೊಂದು (ವಾರಿಜಾಕ್ಷೆಜ್ವಳ ಪದತಳದಾದ ಏಱುಗಂಡಳ್ಕೆ: ಕರ್ಣನೇಮಿ, ೧೪. ೯೭)

ಏಱುವೇೞ್
ಯುದ್ಧಗಳನ್ನು ಹೇಳುವ (ಭಗವತಿಯ ಏಱುವೇೞ್ವ ತೆರದಿಂ ಕಥೆಯಾಯ್ತು ಇವರೇಱು: ಪಂಪಭಾ: ೧೦. ೧೬)

ಏಱೆಗೊಳ್
ಆವರಿಸು (ಎಂದು ತನ್ನಂ ಏಱೆಗೊಂಡ ಮುಳಿಸಿನೊಳ್ ನೆಱನಲ್ಲದುದಂ ಮಾಡಿ ನೆಱನೆತ್ತೆ: ಶಾಂತಿಪು, ೭. ೬೦ ವ)

ಏೞ್
ಎದ್ದು ನಿಲ್ಲು (ಏೞ್ ಉತ್ಥಾಪನೇ: ಶಬ್ದಮದ, ಧಾ, ೯೧೮); ಎಚ್ಚರಗೊಳ್ಳು (ಕೞದವರ್ಗೆ ಅೞ್ವುದು ಅೞ್ತೊಡೆ ಅವರೇೞ್ವರೇ: ಆದಿಪು, ೩. ೫೩); ಒಂದು ಸಂಖ್ಯೆ (ಪ್ರಥಮಾದಿ ಭೇದ ನಿರ್ಧಾರಣದಿಂದದಂ ಪಿಡಿದು ನಿಲ್ವ ವಿಭಕ್ತಿಗಳ್ ಏೞೆನಿಕ್ಕುಂ: ಕವಿರಾಮಾ, ೧. ೧೧೪)

ಏೞಗ
ಏಳಗ, ಟಗರು (ತನ್ನ ಕೀರ್ತ್ಯಂಗನೆಯ ಏೞಗಮಂ ಒಸೆದೇಱ ಮಿಗೆ ಬಂಧುಗಳುಮಂ ಆ ತಂದೆಯೊಡನೆ ಪೊರೆಯೇಱಸಿದಂ: ಪಾರ್ಶ್ವನಾಪು, ೭. ೯೪)

ಏೞಡಿ
[ಆಪ್ತರೊಡನೆ ಇಡುವ] ಏಳು ಹೆಜ್ಜೆ (ನೀನಾವ ಪ್ರಾಣಿಗಾದೊಡಂ ಮುನಿವಲ್ಲಿ ಪೆಱಗೆ ಏೞಡಿಯಂ ಪಿಂಗಿ ಬೞಕ್ಕಂ ನಿನ್ನ ಮೆಚ್ಚಿದಂತೆ ಮಾಡು ಎಂಬುದುಂ: ಧರ್ಮಾಮೃ, ೨. ೧೨೮ ವ)

ಏೞದಂ
ತಿರಸ್ಕಾರಗೊಳ್ಳು (ದಿಗಂಬರ ರಾಜಹಂಸಸಂಕುಳಂ ಇತರಾರ್ಥಯುಕ್ತಸಮಯಂ ಕರಂ ಏೞದಮಾಗೆ: ಪಾರ್ಶ್ವನಾಪು, ೪. ೬೩)

ಏೞದಿಕೆ
ತಿರಸ್ಕಾರ (ವನಿತಾವಶ್ಯಾಂಜನಕ್ಕೆ ಏೞದಿಕೆಯಂ ಅಬಲೋನ್ಮಾದಚೂರ್ರ್‍ಅನಕ್ಕೆ ಸತ್ಕೀರ್ತನಮಂ .. .. ಉತ್ಪಾದಿಸುವುದು ನೃಪರೂಪಂ: ಮಲ್ಲಿನಾಪು, ೩. ೨೮)


logo