ಅಂಬಲಿ ಸ್ವಾರಿ, ಅಂಬ್ಲಿ ಗಡಿಗೆ, ಗಂಜಿಗಡಿಗೆ, ಅಂಬ್ಲಿ ಮಡಿಕೆ, ಜೋಳ, ರಾಗಿ ಮತ್ತು ಹುರಳಿ ಅಂಬಲಿ ಮಾಡಲು ಬಳಸುವ ಗಡಿಗೆ. ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಬಳಸುವರು.
"ಅಂಬ್ಲಿ ಮಡಿಕೆ, ಅಮಟೆಕಾಯಿ ಹಾಲಕ್ಕಿ ಊಟ" (ಹಾಲಕ್ಕಿ ಜನರು ಮಾಡುವ ಊಟ) (ವಿಷ್ಣು ನಾಯ್ಕ)
ಗಂಜಿಗಡಿಗೆ ಇಳಿಸುವಾಗ ಪಲ್ಯಚಟಿಗೆ ತಯ್ಯಾರ (ತುಳುಗಾದೆ)
">
ಅಗ್ಗಿಷ್ಟಿಗೆ
(ನಾ)
ಅಗ್ಗಿಟಿಕೆ, ಅಗ್ಗಿಷ್ಟಿ, ಕುಮಟಿ, ಅಗ್ನಿ ಕುಂಡ, ಅಂಗಾರದಾನಿಕೆ ಬೆಂಕಿಯನ್ನು ಹೊತ್ತಿಸುವ ಒಂದು ಬಗೆಯ ಒಲೆ.
ಗಡಿಗೆಯ ತಳಭಾಗವನ್ನು ದುಂಡಾಗಿ ಒಡೆದು, ಅದನ್ನು ಬೋರಲಾಗಿಟ್ಟು, ಅದರ ಬಾಯಿಗೆ ಒಂದು ಮುಚ್ಚಳವನ್ನು ಹಾಕಿ, ಅದರ ತುಂಬಾ ಇದ್ದಿಲು ಹಾಕಿ ಕೆಂಡವನ್ನು ಮಾಡುವ ಸಾಧನ. ಪ್ರತ್ಯೇಕವಾಗಿ ಕೂಡ ಅಗ್ಗಿಷ್ಟಿಕೆ ಮಾಡುವರು. ಇದಕ್ಕೆ ಕಾಶ್ಮೀರದಲ್ಲಿ ಕಂಗರ್ ಎಂದೂ ಬೀದರ ಜಿಲ್ಲೆಯಲ್ಲಿ 'ಥಾಳಿ' ಎಂದು ಕರೆಯುವರು. ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡ್ಯೋಯ್ಯಬಹುದು. ಚಳಿ ಪ್ರದೇಶದಲ್ಲಿ ಮಲಗುವ ಮಂಚದ ಕೆಳಗೆ ಇದನ್ನು ಇಡುವರು. ಬಾಣಂತಿಯರು, ದಮ್ಮು ಕಾಯಿಲೆಯವರು ಅಗ್ಗಿಷ್ಟಿಗೆ ಕೆಂಡವನ್ನು ಕಾಯಿಸುವರು. ಅಕ್ಕಸಾಲಿಗರು ಬೆಳ್ಳಿ - ಬಂಗಾರದ ಸಾಮಾನುಗಳನ್ನು ತಯಾರಿಸಲು ಬಳಸುವರು.
"ಅಗ್ಗಿಷ್ಟಿಕೆಯಲ್ಲಿ ಹೊಗೆಯಾಡಿದಂತೆ ಹೆಡೆಯಾಡುವುದು ಕಿರುಕುಳ" (ರಾಗೌ)
ಅಕ್ಕಸಾಲಿ ಮಾಡಿದ್ದು ಅಗ್ಗಿಷ್ಟಿಕೆಗೆ ಅಗಸ ಮಾಡಿದ್ದು ಬಟ್ಟೆಗೆ. (ಗಾದೆ)
">
ಅಗೋಳಿ
(ನಾ)
ಅನ್ನ ಬೇಯಿಸಲು ಬಳಸುವ ಅಗಲ ಬಾಯಿಯ ಗಡಿಗೆ. ದಕ್ಷಿಣಕನ್ನಡದಲ್ಲಿ ಈ ಪದ ವಿಶೇಷವಾಗಿ ಪ್ರಯೋಗದಲ್ಲಿದೆ.
ಅಚ್ಚು
(ನಾ,ಕ್ರಿ)
ಮುದ್ರೆ, ಪಡಿಅಚ್ಚು (a seal, a mark) ಅಚ್ಚೊತ್ತು ಮಣ್ಣಿನಲ್ಲಿ, ಮರದಲ್ಲಿ, ಲೋಹದಲ್ಲಿ ಮತ್ತು ಪ್ಲಾಸ್ಟಿಕ್ ಆಫ್ ಪ್ಯಾರಿಸ್-ನಲ್ಲಿ ತಮಗೆ ಬೇಕಾದ ಆಕಾರವನ್ನು ಕೊರೆದುಕೊಂಡು ಪಡಿಯಚ್ಚನ್ನು ತಯಾರಿಸುವರು. ಮಧ್ಯಭಾಗದಲ್ಲಿ ಸ್ವಲ್ಪ ತಗ್ಗಾಗಿರುವ ಮುಚ್ಚಳದಂತಹ ಒಂದು ಅಚ್ಚನ್ನು ತಯಾರಿಸಿಕೊಂಡು ವಿಶೇಷವಾಗಿ ಕುಂಬಾರ ಹೆಣ್ಣು ಮಕ್ಕಳು ವಿವಿಧ ಪ್ರಕಾರದ ಮಡಿಕೆ ಮತ್ತು ಮುಚ್ಚಳಗಳನ್ನು ತಯಾರಿಸುವರು. ವಿವಿಧ ವಿಗ್ರಹ, ಆಟಿಕೆ ಸಾಮಾನುಗಳನ್ನು ತಯಾರಿಸಲು ಅಚ್ಚುಗಳನ್ನು ಬಳಸುವರು. ಅಚ್ಚಿಗೂ, ಮುಚ್ಚಳಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಚ್ಚಿನ ಒಳತಳ ಮುಚ್ಚಳಕ್ಕಿಂತ ಆಳವಾಗಿರುತ್ತದೆ. ಅಚ್ಚಿಗೆ ದಿಂಡು ಅಲಂಕರಣ ಮಾಡಲು ಎತ್ತಿನ ಕೊಂಬಿನ ಚಿಕ್ಕ ತುಂಡಿನಲ್ಲಿ ಇಲ್ಲವೆ ಮಣ್ಣಿನ ತುಂಡಿನಲ್ಲಿ ಎಲೆ, ಹೂ ಮೊದಲಾದ ಅಚ್ಚುಗಳಿಂದ ಮಡಕೆ ಹಸಿ ಇದ್ದಾಗ ಈ ಅಚ್ಚುಗಳನ್ನು ಒತ್ತಿ ಅಲಂಕಾರ ಮಾಡುವರು. ಸೊಳದಲ್ಲಿ ರಂಧ್ರ ಕೊರೆದು ಅಚ್ಚು ಸಿಕ್ಕಿಸಿ ಮಡಕೆಯ ಮೇಲೆ ಒತ್ತುವದು ಹೆಚ್ಚು ಬಳಕೆಯಲ್ಲಿದೆ. ಪ್ರಾಚ್ಯ ಶಾಸ್ತ್ರಜ್ಞರಾದ ಅ. ಸುಂದರ ಅವರು ನಡೆಸಿದ ಬೆಳಗಾವಿ ಜಿಲ್ಲೆಯ ವಡಂಗಾವ್ ಮತ್ತು ಮಾಧವಪುರ ಉತ್ಖನನದಲ್ಲಿ ಸಣ್ಣ ನಾಣ್ಯಗಳನ್ನು ತಯಾರಿಸುತ್ತಿದ್ದ ಸುಟ್ಟ ಮಣ್ಣಿನ ಚಪ್ಪಟೆಯ ದುಂಡು ಅಚ್ಚುಗಳು ದೊರೆತಿವೆ.
ಪರ್ಯಾಯ ಪದ: ಕೊಂಬಿನ ಅಚ್ಚು ತೀಡೊ ಅಚ್ಚು
ಅಡಕಲು ಗಡಿಗೆ
(ನಾ)
ಒಂದರಮೇಲೊಂದು ಏರಿಸಿಟ್ಟ ಗಡಿಗೆಗಳು. ಗ್ರಾಮೀಣ ಜನರು ಕಾಳು-ಕಡಿ ಹಣ ಮತ್ತು ಆಹಾರ ಪದಾರ್ಥಗಳನ್ನು ಹಾಕಿಡಲು ಗಡಿಗೆಗಳನ್ನು ಒಂದರ ಮೇಲೊಂದು ಏರಿಸಿಡುವರು.ಈ ಅಡಕಲು 5-6 ಅಡಿ ಎತ್ತರದವರೆಗೆ ಏರಿಸುವುದರಿಂದ ಅದು ಬೀಳಬಾರದೆಂದು ನೆಲದ ಮೇಲೆ ಸಿಂಬೆಯಾಕಾರದಲ್ಲಿ ಸ್ವಲ್ಪ ತಗ್ಗು ಮಾಡುವರು. ತಳಭಾಗದಲ್ಲಿ ಮೊದಲು ದೊಡ್ಡಗಡಿಗೆಗಳನ್ನಿಟ್ಟು ನಂತರ ಗಡಿಗೆಗಳನ್ನು ಏರಿಸುವರು. ಅಡಕಲು ಗಡಿಗೆಯನ್ನು ಅಡುಗೆ ಮನೆ ಇಲ್ಲವೆ ಅಡುಗೆ ಮನೆ ಸಮೀಪದ ಕೋಣೆಯಲ್ಲಿ ಇಡುವರು.
"ಅಡಕಿಲ ಮಡಕೆಗಳಂ ಸಯ್ತಿಡಲರೆವುದೆ ನಾಯ್ಗಳೊಡೆವುದಲ್ಲದೆ?" (ನಯಸೇನ)
ಅಡಕಲಾಗ ಆರು ಕಾಸು ಸೊಂಟದಾಗ ಮೂರು ಕಾಸು (ಗಾದೆ)
">
ಅಡಿಗಾರ್
(ನಾ)
ಅನ್ನ ಬೇಯಿಸುವ ಗಡಿಗೆ, ಇದು ತುಳುಪದ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿದೆ.
ಆಡುಮಡಕೆ
(ನಾ)
ಅಡುಗೆ ಮಾಡುವ ಪಾತ್ರೆ, ಬೆಂಕಿಯಿಂದ ಅಡುಗೆ ಮಾಡುವದಕ್ಕೆ ಅನುಕೂಲವಾದ ವಿಶಿಷ್ಟ ರಚನೆಯ ಮಣ್ಣಿನ ಪಾಕ ಪಾತ್ರೆ. ಕುಕ್-ರ್ (cooker)
ಅಮ್ಮನಗುಳ್ಳಿ
(ನಾ)
ಗ್ರಾಮ ದೇವತೆಯ ಉತ್ಸವದ ದಿನ ದೇವಾಲಯಕ್ಕೆ ತೆಗೆದುಕೊಂಡು ಹೋಗುವ ಕುಳ್ಳಿ, ಕುಡಿಕೆ, ಕುಡಿಕೆಯ ಕಂಠದ ಕೆಳಗೆ ಪಾದವನ್ನು ಮಾಡುವರು.
ಅರ್ಲು
(ನಾ)
ಅರಲು, ಜಿಗುಟಾದ ಮಣ್ಣು ನೀರು ಹಾಕಿ ತುಳಿದು ಹದಮಾಡಿಟ್ಟ ಕೆಸರು.
"ಬೆರಳ ಸ್ಪರುಶದಿಂದ ಅರಲು
ಕುಂಭ ಕುಂಭವಾಗುತಿರಲು"
(ಶಂಕರ ಮೋಕಾಶಿ ಪುಣೇಕರ್)
">
ಅಲ್ಟಿ
(ನಾ)
ಸುಣ್ಣ, ಹತ್ತಿ, ಆಡಿನ ಹಾಲು ಸೇರಿಸಿ ಮಿಶ್ರಮಾಡಿ ಅರೆದ ಕಣಕ. ಇದನ್ನು ಬಿರುಕು ಬಿಟ್ಟ ತೂತು ಬಿದ್ದ ಮಡಕೆಗಳಿಗೆ ಹಚ್ಚುವರು. ಮಡಿಕೆ ಒಡೆದು ಅದು ಕಳಚಿ ಬೀಳುವದಿಲ್ಲ. ಅಷ್ಟು ಗಟ್ಟಿಯಾಗಿರುತ್ತದೆ. ಈ ಶಬ್ದ ಧಾರವಾಡ, ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಯೋಗದಲ್ಲಿದೆ.
ನೋಡಿ ಕಿಟ್ಟ