logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲಾಬ್‌ಸ್ಟರ್
(ಪ್ರಾ) ನೆಫ್ರೊಪಿಡೀ ಗಣ, ಹೋಮರಿಡೀ ಕುಟುಂಬಕ್ಕೆ ಸೇರಿದ ಯಾವುದೇ ಸಮುದ್ರವಾಸಿ ವಲ್ಕವಂತ ಪ್ರಾಣಿ. ಹತ್ತು ಕಾಲುಗಳು, ಉದ್ದ ಬಾಲ, ಉಬ್ಬುಗಣ್ಣು ನೀಲಿ ಛಾಯೆಯ ಕಪ್ಪು ಬಣ್ಣ, ಮುಂದಿನ ಎರಡು ಕಾಲುಗಳು ಚಿಮುಟದಂತಿರುವುದು - ಇವು ಈ ಪ್ರಾಣಿಗಳ ವೈಲಕ್ಷ್ಯಣ್ಯ. ಆಹಾರವಾಗಿ ಬಳಕೆ. ಕಡಲೇಡಿ, ಚೇಳೇಡಿ
lobster

ಲಾಭ
(ಭೌ) ಸಲಕರಣೆಯ ಮೇಲೆ ಹಾಕಿದ ಹಾಗೂ ಅದರಿಂದ ದೊರೆತ ಬಲಗಳ ನಡುವಿನ ಸಂಬಂಧ
advantage

ಲಾರ್ವ
(ಪ್ರಾ) ೧. ಮೊಟ್ಟೆಯೊಡೆದು ಹೊರಬಂದು ಬಳಿಕ ಗೂಡು ಕಟ್ಟುವವರೆಗಿನ, ಅಂದರೆ ಪೊರೆಹುಳು ಸ್ಥಿತಿಗೆ ಬರುವ ವರೆಗಿನ ಕೀಟದ ರೂಪ. ಉದಾ : ಕಂಬಳಿಹುಳು. ೨. ತಾಯಿಯ ಗರ್ಭದಿಂದ ಅಥವಾ ಮೊಟ್ಟೆಯಿಂದ ಹೊರಬಂದಾಗ, ಸಂಪೂರ್ಣ ಬೆಳೆದ ಸ್ಥಿತಿಗಿಂತ ಭಿನ್ನವಾಗಿದ್ದು ರೂಪಾಂತರ ಹೊಂದಲಿರುವ ಅಥವಾ ರೂಪಾಂತರ ಹೊಂದುವುದಕ್ಕೆ ಮುಂಚಿನ ಅಪೂರ್ಣ ರೂಪ. ಉದಾ : ಕಪ್ಪೆಯ ಗೊದಮೊಟ್ಟೆ ಮರಿ. ಬಾಲದ ಮರಿ
larva

ಲಾವಾ
(ಭೂವಿ) ಜ್ವಾಲಾಮುಖಿಯ ಬಾಯಿಯಿಂದ ಅಥವಾ ಭೂಮಿಯ ಬಿರುಕುಗಳ ಮೂಲಕ ಭೂಮಿಯ ಮೇಲಕ್ಕೆ ಅಥವಾ ಸಮುದ್ರದ ತಳದಿಂದ ಹೊರಕ್ಕೆ ಹೊಮ್ಮುವ, ನೀರಾವಿ ಮತ್ತು ಅನಿಲಗಳನ್ನೊಳಗೊಂಡ, ಕರಗಿದ ಶಿಲಾ ಪದಾರ್ಥ. ರಾಸಾಯನಿಕವಾಗಿ ಇದರ ಸಂಯೋಜನೆಯಲ್ಲಿ ಆಮ್ಲೀಯದಿಂದ ಪ್ರತ್ಯಾಮ್ಲೀಯದವರೆಗೆ ವ್ಯತ್ಯಾಸವಿರುತ್ತದೆ. ಇದು ಸ್ಫಟಿಕೀಕರಿಸದೆ ಗಾಜಿನಂತೆ ಹಾಗೆಯೇ ಇರಬಹುದು ಇಲ್ಲವೇ ಸಂಪೂರ್ಣವಾಗಿ ಸ್ಫಟಿಕ ಶಿಲೆಯಾಗಿ ಮಾರ್ಪಾಟಾಗಿ ಇರಬಹುದು. ಶಿಲಾರಸ
lava

ಲಾಳಿ
(ತಂ) ನೇಯ್ಗೆಯಲ್ಲಿ ಹಾಸು ಎಳೆಗಳ ನಡುವೆ ಹೊಕ್ಕು ಎಳೆಗಳನ್ನು ಹಾಯಿಸುವ ದೋಣಿ ಆಕಾರದ ಲೋಹದ ತುದಿಗಳುಳ್ಳ ಸಾಧನ
shuttle

ಲಾಳಿಕೆ
(ತಂ) ದ್ರವ, ಹುಡಿ ಮೊದಲಾದವನ್ನು ಕಿರಿದಾದ ಬಾಯೊಳಕ್ಕೆ ಸಾಗಿಸಲು ಉಪಯೋಗಿಸುವ, ಅಗಲ ಕಿರಿದಾಗುತ್ತ ಹೋಗುವ ಕೊಳವೆ. ಆಲಿಕೆ, ಪನ್ನಾಲೆ
funnel

ಲಿಕರ್
(ರ) ಸ್ರಾವದ ಅಥವಾ ರಾಸಾಯನಿಕ ಕ್ರಿಯೆಯ ಉತ್ಪನ್ನವಾಗಿ ಬಂದ ದ್ರವ; ತೊಳೆಯಲು ತೋಯಿಸಿಡಲು ಅನು ಗೊಳಿಸಿದ ದ್ರವ; ಸಾರಾಯಿ ತಯಾರಿಕೆಯಲ್ಲಿ ಉಪಯೋಗಿಸುವ ನೀರು; ಧಾನ್ಯದಿಂದ ತಯಾರಿಸಿದ ಏಲ್, ಬಿಯರ್, ಪೋರ್ಟರ್ ಮೊದಲಾದ ಮದ್ಯ. ಧಾನ್ಯ ಮದ್ಯ. (ವೈ) ಗೊತ್ತಾದ ಔಷಧಿಯನ್ನು ನೀರಿನಲ್ಲಿ ವಿಲೀನಿಸಿದ ದ್ರಾವಣ. ಉದಾ : ಅಮೋನಿಯ ದ್ರಾವಣ
liquor

ಲಿಕ್ವೇಷನ್
(ತಂ) ಮಿಶ್ರಲೋಹದಲ್ಲಿರುವ ಒಂದು ಲೋಹವಷ್ಟೆ ಕರಗುವ ಮಟ್ಟಕ್ಕೆ ಆ ಮಿಶ್ರಲೋಹವನ್ನು ಕಾಸಿ ಅಥವಾ ದ್ರವೀಕರಿಸಿ ಹಾಗೆ ಅದರಲ್ಲಿರುವ ಒಂದು ಲೋಹವನ್ನು ಮತ್ತೊಂದರಿಂದ ಪ್ರತ್ಯೇಕಿಸುವ ಪ್ರಕ್ರಿಯೆ. ದ್ರವೀಕರಣ
liquation

ಲಿಂಗ
(ಪ್ರಾ) ಮುಖ್ಯವಾಗಿ ಸಂತಾನೋತ್ಪತ್ತಿಯಲ್ಲಿ ನಿರ್ವಹಿಸುವ ಪಾತ್ರಕ್ಕೆ ಸಂಬಂಧಿಸಿದಂತೆ ಗಂಡು ಹಾಗೂ ಹೆಣ್ಣು ಜೀವಿಗಳನ್ನು ಪ್ರತ್ಯೇಕಿಸಿ ತೋರಿಸುವ ರಾಚನಿಕ, ಕ್ರಿಯಾತ್ಮಕ ಲಕ್ಷಣಗಳ ಮೊತ್ತ
sex

ಲಿಂಗ ನಿರ್ಧರಣೆ
(ವೈ) ಲೈಂಗಿಕ ಕ್ರೋಮೊಸೋಮ್‌ಗಳು ಒಂದುಗೂಡಿರುವ ರೀತಿಯನ್ನು ಆಧರಿಸಿ ಹುಟ್ಟಲಿರುವ ಜೀವಿ ಯಾವ ಲಿಂಗಕ್ಕೆ ಸೇರಿದೆ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ. XX ಕ್ರೋಮೊಸೋಮ್‌ಗಳು ಕೂಡಿದಾಗ ಹೆಣ್ಣು, XY ಕ್ರೋಮೊಸೋಮ್‌ಗಳು ಕೂಡಿದಾಗ ಗಂಡು ಜನನವಾಗುತ್ತದೆ
sex determination


logo