logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜಲವಿದ್ಯುತ್ತು
(ತಂ) ಎತ್ತರದಲ್ಲಿ ಶೇಖರ ಗೊಂಡಿರುವ ನೀರಿನ ವಿಭವಶಕ್ತಿಯನ್ನು ಚಲನಶಕ್ತಿಯಾಗಿ ಮಾರ್ಪಡಿಸಿ (ಅಂದರೆ ಆ ಜಲಸಾಮರ್ಥ್ಯದ ನೆರವಿನಿಂದ ತಿರುಬಾನಿಯೂ ಅದಕ್ಕೆ ಲಗತ್ತಿಸಿದ ವಿದ್ಯುಜ್ಜನಕವೂ ಕಾರ್ಯಪ್ರವೃತ್ತ ವಾಗುವಂತೆ ಮಾಡಿ) ಉತ್ಪಾದಿಸಿದ ವಿದ್ಯುತ್ತು. ಇದು ವಿದ್ಯುತ್ ಉತ್ಪಾದನೆಯ ಮೂರು ವಿಧಾನಗಳಲ್ಲೊಂದು. ಉಳಿದೆರಡು: ಫಾಸಿಲ್ ಇಂಧನ ಜನಿತ (ಉಷ್ಣ) ವಿದ್ಯುತ್ತು, ಇನ್ನೊಂದು ನ್ಯೂಕ್ಲಿಯರ್ ಇಂಧನ ಜನಿತ (ಪರಮಾಣು) ವಿದ್ಯುತ್ತು
hydroelectric power

ಜಲವಿಭಜನೆ
(ರ) ನೀರಿನ ಪರಿಣಾಮವಾಗಿ ಯಾವುದೇ ಸಂಯುಕ್ತದ ಒಂದು ರಾಸಾಯನಿಕ ಬಂಧ ಒಡೆದು ಎರಡು ಭಾಗಗಳಿಗೂ ನೀರಿನ H ಮತ್ತು OH ಹಂಚಿಕೊಳ್ಳುವ ಕ್ರಿಯೆ. AB+H2O O HA+BOH ಎಂಬ ಮಾದರಿಯದು. ಲವಣದ ಮೇಲೆ ನೀರಿನ ಇಂಥ ಕ್ರಿಯೆಯಿಂದಾಗಿ ಆಮ್ಲ ಮತ್ತು ಪ್ರತ್ಯಾಮ್ಲಗಳು ಉಂಟಾಗುತ್ತವೆ
hydrolysis

ಜಲವಿಭಾಜಕ
(ಭೂವಿ) ನೀರ ಹರಿವಿನ ಅಥವಾ ಬಸಿತದ ದಿಶೆಗಳನ್ನು ಬೇರ್ಪಡಿಸುವ ಏಣು, ಗಡಿ. ಎಂದೇ ಒಂದು ಜಲವಿಭಾಜಕ ಕುರಿತಂತೆ ಎರಡು ಜಲಾನಯನ ಪ್ರದೇಶಗಳಿರುತ್ತವೆ. ಉದಾ: ಪಶ್ಚಿಮ ಘಟ್ಟಗಳು
watershed

ಜಲವೈಜ್ಞಾನಿಕ ಆಯವ್ಯಯ
(ಸಾ) ಜಲಾನಯನ ಪ್ರದೇಶ, ಜಲಕುಹರ, ಮಣ್ಣಿನ ವಲಯ, ಸರೋವರ, ಜಲಾಶಯ ಮುಂತಾದ ಜಲಭಂಡಾರಗಳಿಗೆ ಒಳಸುರಿಯುವ ಮತ್ತು ಅವುಗಳಿಂದ ಹೊರಹರಿಯುವ ನೀರಿನ ಪ್ರಮಾಣಗಳ ಲೆಕ್ಕಾಚಾರ: ಬಾಷ್ಪೀಭವನ, ಅವಕ್ಷೇಪಣ, ಬಸಿದು ಹೋಗುವ ನೀರು ಮತ್ತು ನೀರಿನ ದಾಸ್ತಾನಿನಲ್ಲಿ ಆಗುವ ವ್ಯತ್ಯಯ ಮುಂತಾದವುಗಳ ನಡುವಿನ ಸಂಬಂಧ
hydrologic budget

ಜಲವೈಜ್ಞಾನಿಕ ಚಕ್ರ
(ಭೂವಿ) ಭೂ ಮತ್ತು ವಾಯುಗೋಳಗಳ ನಡುವೆ ನಿರಂತರವಾಗಿ ಜರಗುತ್ತಿರುವ ನೀರಿನ ಪರಿಚಲನೆ. ಸಾಗರದಿಂದ ಬಾಷ್ಪೀಭವನದ ಮೂಲಕ ವಾಯು ಮಂಡಲವನ್ನು ಸೇರಿದ ನೀರು ಮಳೆಯಾಗಿ ನೆಲವನ್ನೂ ಸಾಗರವನ್ನೂ ಸೇರುತ್ತದೆ. ನೆಲಕ್ಕೆ ಬಿದ್ದ ನೀರು ಅಂತಿಮವಾಗಿ ಬಾಷ್ಪವಿಸರ್ಜನೆ ಮತ್ತು ಬಾಷ್ಪೀಭವನಗಳ ಮೂಲಕ ಮತ್ತೆ ವಾಯುಮಂಡಲಕ್ಕೆ ಜಮೆಯಾಗುತ್ತದೆ
hydrologic cycle

ಜಲವೈದ್ಯ
(ವೈ) ಕೇವಲ ನೀರಿನ ಉಪಯೋಗದಿಂದಲೇ ಸಕಲ ವ್ಯಾಧಿಗಳನ್ನೂ ಗುಣಪಡಿಸಬಹುದೆಂದು ಪರಿಗಣಿಸಿ ಆಚರಿಸುವ ಚಿಕಿತ್ಸಾ ವಿಧಾನ. ಪ್ರಕೃತಿಯಲ್ಲಿ ದೊರೆಯುವ ಚಿಲುಮೆ ನೀರನ್ನು ಸೇವಿಸುವುದು, ಸ್ನಾನ, ಮುಳುಗಡೆ ಮುಂತಾದವು ಈ ಚಿಕಿತ್ಸೆಯ ಮುಖ್ಯ ವಿಧಾನಗಳು. ಪ್ರಾಚೀನ ಗ್ರೀಕರೂ ರೋಮನರೂ ವ್ಯಾಪಕವಾಗಿ ಬಳಸುತ್ತಿದ್ದರು. ಜಲಚಿಕಿತ್ಸೆಯಿಂದ ಒದಗುವ ಅನುಕೂಲ ಸೀಮಿತವಾದರೂ ಇದರ ಬಗೆಗೆ ಜನರ, ವೈದ್ಯರ ನಂಬಿಕೆ ಗಾಢವಾಗಿಯೇ ಇದೆ
hydropathy

ಜಲಶಕ್ತಿ
(ತಂ) ನೋಡಿ: ಜಲವಿದ್ಯುತ್ತು
water power

ಜಲಸಂಧಿ
(ಭೂವಿ) ಎರಡು ಸಮುದ್ರಗಳನ್ನು ಅಥವಾ ವಿಶಾಲ ಜಲಭಾಗಗಳನ್ನು ಕೂಡಿಸುವ ಇಕ್ಕಟ್ಟಾದ ಜಲವಿಭಾಗ. ಜಲಕಂಠ. ಕನ್ಯಾಕುಮಾರಿ ಬಳಿ ಇರುವುದು ಪಾಕ್ ಜಲಸಂಧಿ. ಆಫ್ರಿಕದ ವಾಯುವ್ಯ ಮತ್ತು ಸ್ಪೈನ್‌ನ ದಕ್ಷಿಣ ತುದಿ ಸೇರಿಸುವುದು ಜಿಬ್ರಾಲ್ಟರ್ ಜಲಸಂಧಿ. ದ. ಅಮೆರಿಕದ ದಕ್ಷಿಣ ತುದಿ ಮತ್ತು ಚಿಲಿಯ ಟಿಯೆರಾಡೆಲ್ಫಿಯಾಗೋ ದ್ವೀಪ ಕೂಡಿಸುವುದು ಮೆಗಲಾನ್ ಜಲಸಂಧಿ
strait

ಜಲಸ್ಥಿತಿ ಒತ್ತಡ
(ಸಾವಿ) ನಿರ್ದಿಷ್ಟ ಆಳದಲ್ಲಿ ಕಂಡುಬರುವ ನೀರಿನ ಒತ್ತಡ. ಇದು ಈ ಆಳದ ಮೇಲಿರುವ ನೀರಿನ ರಾಶಿಯ ತೂಕವನ್ನು ಅವಲಂಬಿಸಿರುತ್ತದೆ. ಅಟ್ಮಾಸ್ಫಿಯರ್ ಎಂಬ ಏಕಮಾನದಲ್ಲಿ ಅಳತೆ (೧ ಅಟ್ಮಾಸ್ಫಿಯರ್ =೧.೦೩೩ ಕಿ.ಗ್ರಾ/ಚ.ಸೆಂಮೀ). ಇದು ಸಮುದ್ರ ಮಟ್ಟದಲ್ಲಿನ ವಾಯುಮಂಡಲದ ಸರಾಸರಿ ಒತ್ತಡ. ೧೦,೦೦೦ ಮೀ. ಸಾಗರ ಆಳದಲ್ಲಿ ೧ ಸಾವಿರ ಅಟ್ಮಾಸ್ಫಿಯರ್ ಒತ್ತಡವಿರುತ್ತದೆ
hydrostatic pressure

ಜಲಾಂಡಕ
(ಪ್ರಾ) ಮೀನು, ಕಪ್ಪೆ, ಮೃದ್ವಂಗಿ ಇತ್ಯಾದಿ ಜಲಚರ ಪ್ರಾಣಿಗಳು ಹಾಕಿದ ಸಣ್ಣ ಸಣ್ಣ ಮೊಟ್ಟೆಗಳು ನೀರಿನ ಮೇಲೆ ಸಂಗ್ರಹಗೊಂಡಿರುವುದು
spawn


logo