logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆನಯಾನ್
(ಭೌ) ಋಣ ಅಯಾನ್. ವಿದ್ಯುದ್ವಿಭಾಜ್ಯದಲ್ಲಿ ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್‌ಗಳನ್ನು ಗಳಿಸಿ ಆ ಕಾರಣ ದಿಂದಾಗಿ ಆನೋಡ್ (ಧನ ವಿದ್ಯುದ್ವಾರ) ಕಡೆಗೆ ಆಕರ್ಷಿತ ವಾಗುವ ಪರಮಾಣು ಅಥವಾ ಅಣು
anion

ಆನಿಕ್ಸ್
(ಭೂವಿ) ಬೇರೆ ಬೇರೆ ಬಣ್ಣಗಳ ಪದರುಗಳುಳ್ಳ ಸಿಲಿಕದ ಒಂದು ಗುಪ್ತ ಸ್ಫಟಿಕೀಯ ಬಗೆ. ಬಿಳಿ, ಕಂದು ಹಾಗೂ ಕಪ್ಪು ಬಣ್ಣಗಳ ಪದರಗಳು ಈ ಪ್ರಶಸ್ತ ಖನಿಜದಲ್ಲಿ ಪರ್ಯಾಯವಾಗಿ ಕಂಡುಬರುತ್ತವೆ. ಕಲ್ಲುಬ್ಬು ಕೆತ್ತನೆಗಳಲ್ಲಿ ಬಳಕೆ. ಬಿಳಿ ಬಣ್ಣದ ಮೇಲ್ಪದರದಲ್ಲಿ ಉಬ್ಬು ಚಿತ್ರ ಅಥವಾ ಉಬ್ಬು ಪ್ರತಿಮೆ ಕೆತ್ತಿ ಕೆಳಗಿನ ಕಂದು, ಕಪ್ಪು ಪದರಗಳನ್ನು ಹಿನ್ನೆಲೆಯಾಗಿ ಬಿಡಲಾಗುತ್ತದೆ
onyx

ಆನಿಮೊನಿ
(ಸ) ಸ್ವಲ್ಪಮಟ್ಟಿಗೆ ಪಾಪಿ (ಗಸಗಸೆ ಜಾತಿ) ಮತ್ತು ಸೇವಂತಿಗೆ ಗಿಡಗಳಂತೆ ಅಂದದ ಹೂ (ಗಾಳಿ ಹೂವು) ಬಿಡುವ ಉದ್ಯಾನ ಸಸ್ಯ. ಇದರ ಬಿಳುಪು ನಸುಗೆಂಪು, ಕಂದು, ಕೇಸರಿ ಮತ್ತು ನೀಲಿ ಬಣ್ಣಗಳ ಹೂಗಳು ಜನರಿಗೆ ಅಚ್ಚುಮೆಚ್ಚು. ಮನೆಗಳಲ್ಲಿ ಕುಂಡಸಸ್ಯಗಳಾಗಿಯೂ ಬೆಳೆಸುವುದುಂಟು. (ಪ್ರಾ) ಕಡಲತಳದಲ್ಲಿ ಕಾಣಸಿಗುವ ಸೀಲೆಂಟರೇಟ ಗುಂಪಿನ ಜೀವಿ
anemone

ಆನಿಸೋಲ್
(ರ) ಫೀನೈಲ್ ಮೀಥೈಲ್ ಈಥರ್; ಪ್ರತೀಕ C6H5.O.CH3. ನಿರ್ವರ್ಣ ದ್ರವ. ಕುಬಿಂ ೧೫೫0 ಸೆ, ಸುಗಂಧ ತಯಾರಿಕೆಯಲ್ಲಿ ಬಳಕೆ. ಇದೊಂದು ಜಂತುನಾಶಕ
anisole

ಆನುವಂಶಿಕ ತಪಾಸಣೆ
(ಜೀ) ಗಂಡು- ಹೆಣ್ಣುಗಳಲ್ಲಿ ರಕ್ತ ಪರೀಕ್ಷೆ, ಊತಕ ಕೃಷಿ ಇತ್ಯಾದಿ ವಿಧಾನಗಳಿಂದ ಆನುವಂಶೀಯ ಕಾಯಿಲೆಗಳನ್ನು ಪರೀಕ್ಷಿಸುವ ಕ್ರಮ. ಇದರಿಂದ ಅಪ್ರಭಾವಿ ಜೀನ್‌ಅನ್ನು ಉದಾ: ಆಫ್ರಿಕ ಜನಾಂಗಗಳಲ್ಲಿ ವ್ಯಾಪಕ ವಾಗಿ ಕಂಡುಬರುವ ಸಿಕಲ್-ಸೆಲ್ ಅನೀಮಿಯಗೆ ಕಾರಣವಾದ ಜೀನ್‌ಅನ್ನು, ಪತ್ತೆ ಹಚ್ಚಬಹುದು
genetic screening

ಆನುವಂಶಿಕ ಪರಿವರ್ತನೆ
(ಜೀ) ಒಂದು ಬ್ಯಾಕ್ಟೀರಿಯ/ಜೀವಕೋಶದ ಡಿಎನ್‌ಎ ತುಣುಕು ಮತ್ತೊಂದು ಬ್ಯಾಕ್ಟೀರಿಯ / ಜೀವಕೋಶದೊಳಕ್ಕೆ ಸೇರಿ ಆನುವಂಶಿಕವಾಗಿ ಜೀವಿ ಅಥವಾ ಕೋಶದಲ್ಲಿ ಪರಿವರ್ತನೆ ಉಂಟುಮಾಡುವುದು
genetic transformation

ಆನುವಂಶಿಕ ವರ್ಗಾವಣೆ
(ಜೀ) ಒಂದು ಬ್ಯಾಕ್ಟೀರಿಯದ ಆನುವಂಶಿಕ ಗುಣಗಳನ್ನು ಬ್ಯಾಕ್ಟೀರಿಯೋ ಫೇಜ್ ಎಂಬ ವೈರಸ್‌ಗಳು ಮತ್ತೊಂದು ಬ್ಯಾಕ್ಟೀರಿಯಾಗೆ ವರ್ಗಾಯಿಸುವ ವಿಧಾನ. ಈ ವಿಧಾನದಲ್ಲಿ ಬ್ಯಾಕ್ಟೀರಿಯೋ ಫೇಜ್‌ಗಳು ಮಧ್ಯವರ್ತಿಗಳಂತೆ ಅಥವಾ ವಾಹಕಗಳಂತೆ ಕಾರ್ಯನಿರ್ವಹಿಸುತ್ತವೆ
genetic transduction

ಆನುವಂಶಿಕ ಸಲಹೆ
(ಜೀ) ತಲೆಮಾರುಗಳ ಆನುವಂಶಿಕ ನ್ಯೂನತೆಗಳ ವಿಶ್ಲೇಷಣೆಯಿಂದ ಮುಂಬರುವ ಪೀಳಿಗೆಗಳಲ್ಲಿ ಅಂತಹ ನ್ಯೂನತೆಗಳು ತಲೆದೋರದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುವುದು
genetic counselling

ಆನುವಂಶಿಕತೆ
(ವೈ) ಸ್ವಭಾವ ಮತ್ತು ಶಾರೀರಿಕ ಲಕ್ಷಣಗಳು ತಂದೆ ತಾಯಿಯರಿಂದ ಮುಂದಿನ ಸಂತತಿಗೆ ಸಾಗುವ ಗುಣ. ಪ್ರಾಣಿಯಲ್ಲಿ, ಸಸ್ಯದಲ್ಲಿ ಆನುವಂಶಿಕವಾಗಿ ಬಂದ ಗುಣಲಕ್ಷಣಗಳು
heredity

ಆನುಷಂಗಿಕ
(ಸಾ) ಅನುಭವ ನಿಂತ ಅನಂತರವೂ ಗೋಚರವಾಗುತ್ತಿರುವಂತೆ ಭಾಸವಾಗುವ ಗೌಣ ಭಾವನೆ. ಅಕಸ್ಮಾತ್ತಾಗಿ ಸಂಭವಿಸುವ ಅನುದ್ದಿಷ್ಟ ಘಟನೆ. ಅನುಗತ
incidental


logo