logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

RSS
ಆರ್‌ಎಸ್‌ಎಸ್
(ರೂಪಿಸಬೇಕಿದೆ)
ರಿಚ್ ಸೈಟ್ ಸಮ್ಮರಿ; ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು - ಅವುಗಳನ್ನು ಪ್ರತ್ಯೇಕವಾಗಿ ಸಂದರ್ಶಿಸುವ ಅಗತ್ಯವಿಲ್ಲದೆ - ನೇರವಾಗಿ ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನ
ವಿಶ್ವವ್ಯಾಪಿ ಜಾಲದಲ್ಲಿ ಪ್ರತಿ ವಿಷಯಕ್ಕೂ ಸಂಬಂಧಪಟ್ಟ ಲಕ್ಷಗಟ್ಟಲೆ ಜಾಲತಾಣಗಳಿವೆ. ಆ ಪೈಕಿ ಹಲವು ತಾಣಗಳಲ್ಲಿ ನಮಗೆ ಇಷ್ಟವಾಗುವ - ಉಪಯುಕ್ತವೆನಿಸುವ ಮಾಹಿತಿ ದೊರಕುವುದು ಸಾಮಾನ್ಯ. ಆದರೆ ಅಷ್ಟೂ ಜಾಲತಾಣಗಳ ವಿಳಾಸ ನೆನಪಿಟ್ಟುಕೊಳ್ಳುವುದು, ಅಲ್ಲಿ ಪ್ರಕಟವಾಗುವ ಹೊಸ ಬರಹಗಳನ್ನು ಗಮನಿಸುವುದು ಕಷ್ಟದ ಕೆಲಸ. ವಿವಿಧ ತಾಣಗಳಲ್ಲಿ ಪ್ರಕಟವಾಗುವ ಹೊಸ ಬರಹಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಿ ಈ ಸಮಸ್ಯೆಯನ್ನು ಕೊಂಚಮಟ್ಟಿಗೆ ಪರಿಹರಿಸುವ ತಂತ್ರಜ್ಞಾನವೇ ಆರ್‌ಎಸ್‌ಎಸ್, ಅರ್ಥಾತ್ 'ರಿಚ್ ಸೈಟ್ ಸಮ್ಮರಿ'. ರಿಯಲಿ ಸಿಂಪಲ್ ಸಿಂಡಿಕೇಶನ್ ಎಂದೂ ಕರೆಸಿಕೊಳ್ಳುವ ಈ ವ್ಯವಸ್ಥೆಯನ್ನು ಬಳಸಿ ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ಪಡೆದ ಮಾಹಿತಿಯನ್ನು ಒಟ್ಟುಸೇರಿಸಿ ಒಂದೇಕಡೆ ಪ್ರದರ್ಶಿಸುವ ಹಲವಾರು ಜಾಲತಾಣಗಳಿವೆ. ಅಷ್ಟೇ ಅಲ್ಲ, ನಮ್ಮ ಆಯ್ಕೆಯ ತಾಣಗಳಿಂದ ಆರ್‌ಎಸ್‌ಎಸ್ ಫೀಡ್ ಪಡೆದು ಆ ಲೇಖನಗಳನ್ನೆಲ್ಲ ಒಂದೇಕಡೆ ನೋಡಲು ನೆರವಾಗುವ ತಂತ್ರಾಂಶಗಳು - ಮೊಬೈಲ್ ಆಪ್‌ಗಳೂ ಇವೆ. ಕೆಲವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂತಹ ತಂತ್ರಾಂಶಗಳ ಬಳಕೆ ಈಗ ಕಡಿಮೆಯಾಗಿದೆಯಾದರೂ ಒಟ್ಟಾರೆಯಾಗಿ ಆರ್‌ಎಸ್‌ಎಸ್ ವ್ಯವಸ್ಥೆ ಜಾಲಲೋಕದಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಯಾಗುತ್ತಿದೆ.

RGB
ಆರ್‌ಜಿಬಿ
(ರೂಪಿಸಬೇಕಿದೆ)
ಡಿಜಿಟಲ್ ಜಗತ್ತಿನ ಎಲ್ಲ ಬಣ್ಣಗಳಿಗೂ ಮೂಲವಾದ ಕೆಂಪು, ಹಸಿರು ಹಾಗೂ ನೀಲಿ (ರೆಡ್-ಗ್ರೀನ್-ಬ್ಲೂ) ಬಣ್ಣಗಳನ್ನು ಸೂಚಿಸುವ ಹೆಸರು
ಪ್ರಾಥಮಿಕ ಬಣ್ಣಗಳನ್ನು (ಪ್ರೈಮರಿ ಕಲರ್ಸ್) ಸೇರಿಸಿ ಹೊಸ ಬಣ್ಣಗಳನ್ನು ರೂಪಿಸಿಕೊಳ್ಳುವುದು ಹೊಸ ಸಂಗತಿಯೇನಲ್ಲ. ಯಾವ ಬಣ್ಣಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಕ್ಕಳು ಶಾಲೆಯ ದಿನಗಳಲ್ಲೇ ಆಸಕ್ತಿಯಿಂದ ಕಲಿಯುತ್ತಾರೆ. ಉದಾ: ಹಳದಿ ಮತ್ತು ನೀಲಿ ಸೇರಿಸಿದರೆ ಹಸಿರು ಬಣ್ಣ ಬರುತ್ತದೆ. ಭೌತಿಕ ಜಗತ್ತಿನಲ್ಲಿರುವಂತೆ ಡಿಜಿಟಲ್ ಜಗತ್ತಿನಲ್ಲೂ ಅಸಂಖ್ಯ ಬಣ್ಣಗಳು ನಮ್ಮ ಮುಂದೆ ಕಾಣಸಿಗುತ್ತವಲ್ಲ, ಅಲ್ಲಿಯೂ ಇಂತಹುದೇ ತಂತ್ರ ಬಳಕೆಯಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲಿ ನಮಗೆ ಕಾಣಿಸುವ ಎಲ್ಲ ಬಣ್ಣಗಳೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಬೆಳಕಿನ ಸಂಯೋಜನೆಯಿಂದ ರೂಪುಗೊಂಡಿರುತ್ತವೆ. ಮೂರೂ ಬಣ್ಣಗಳ ಇಂಗ್ಲಿಷ್ ಹೆಸರಿನ (ರೆಡ್-ಗ್ರೀನ್-ಬ್ಲೂ) ಮೊದಲ ಅಕ್ಷರಗಳನ್ನು ಸೇರಿಸಿ ಈ ವ್ಯವಸ್ಥೆಯನ್ನು ಆರ್‌ಜಿಬಿ ಎಂದು ಕರೆಯಲಾಗುತ್ತದೆ. ನಮ್ಮ ಆಯ್ಕೆಯ ಬಣ್ಣ ಕಾಣಬೇಕಾದರೆ ಈ ಮೂರು ಬಣ್ಣಗಳು ಯಾವ ಪ್ರಮಾಣದಲ್ಲಿ ಬೆರೆಯಬೇಕು ಎನ್ನುವುದನ್ನು ಪ್ರತ್ಯೇಕ ಸಂಖ್ಯೆಗಳು ಸೂಚಿಸುತ್ತವೆ. ಮೂರೂ ಬಣ್ಣಗಳನ್ನು ಸೊನ್ನೆಯ ಮಟ್ಟದಲ್ಲಿಟ್ಟರೆ ಕಪ್ಪು, ಗರಿಷ್ಠ ಮಟ್ಟಕ್ಕೆ ಕೊಂಡೊಯ್ದರೆ ಬಿಳಿ, ಕೆಂಪು-ಹಸಿರು ಮಾತ್ರವೇ ಬಳಕೆಯಾದರೆ ಕಂದುಬಣ್ಣ - ಹೀಗೆ ಮೂರು ಬಣ್ಣಗಳ ಪ್ರಮಾಣವನ್ನು ಬದಲಿಸುತ್ತ ಹೋದಂತೆ ಹೊಸ ಬಣ್ಣಗಳು ಸೃಷ್ಟಿಯಾಗುತ್ತವೆ. ಅಂದಹಾಗೆ ಆರ್‌ಜಿಬಿ ಸಂಯೋಜನೆಯಲ್ಲಿ ರೂಪುಗೊಂಡ ಬಣ್ಣಗಳು ಪರದೆಯ ಮೇಲೆ ಪ್ರದರ್ಶನಕ್ಕೆ ಹೊಂದುವಷ್ಟು ಚೆನ್ನಾಗಿ ಮುದ್ರಣಕ್ಕೆ ಹೊಂದಿಕೊಳ್ಳುವುದಿಲ್ಲ. ಏಕೆಂದರೆ ಮುದ್ರಣದಲ್ಲಿ ಕೈಗೆ ಮೆತ್ತುವ ಉತ್ಪಾದಿತ ಬಣ್ಣಗಳು ಬಳಕೆಯಾಗುತ್ತವೆ. ಹಾಗಾಗಿ ಮುದ್ರಣವನ್ನೇ ಉದ್ದೇಶವಾಗಿಟ್ಟುಕೊಂಡು ಕಂಪ್ಯೂಟರ್ ಚಿತ್ರಗಳನ್ನು ರೂಪಿಸುವಾಗ ಆರ್‌ಜಿಬಿ ಬದಲಿಗೆ 'ಸಿಎಂವೈಕೆ'ಯನ್ನೂ ಬಳಸಲಾಗುತ್ತದೆ. ಆರ್‌ಜಿಬಿಯಲ್ಲಿ ಕೆಂಪು, ಹಸಿರು, ನೀಲಿ ಇದ್ದಂತೆ ಸಿಎಂವೈಕೆಯಲ್ಲಿ ಸಿಯಾನ್ (ಹಸಿರು ಛಾಯೆಯ ನೀಲಿ), ಮಜೆಂಟಾ (ಕಡುಗೆಂಪು), ಹಳದಿ ಹಾಗೂ ಕಪ್ಪು ಬಣ್ಣಗಳನ್ನು ಬಳಸಲಾಗುತ್ತದೆ.

Algorithm
ಆಲ್ಗರಿದಮ್
ಕ್ರಮಾವಳಿ
ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬೇಕಾದ ಹೆಜ್ಜೆಗಳ ಸರಣಿ
ಪ್ರೋಗ್ರಾಮ್ ಬರೆಯಲು ಹೊರಟಾಗ ಅದರ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕಾಗುತ್ತದೆ. ಇಂತಹ ಹೆಜ್ಜೆಗಳ ಸರಣಿಯೇ ಆಲ್ಗರಿದಮ್. ಪ್ರೋಗ್ರಾಮ್‌ಗೆ ನೀಡಲಾಗುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್‌ನ ಕೆಲಸ. ಉಳಿಸಿಟ್ಟ ಕಡತದ ಮೇಲೆ ಕ್ಲಿಕ್ಕಿಸಿದಾಗ ಅದು ತೆಗೆದುಕೊಳ್ಳುವುದರಿಂದ ಹಿಡಿದು ಅತ್ಯಂತ ಕ್ಲಿಷ್ಟವಾದ ಸಮಸ್ಯೆಯನ್ನು ಬಿಡಿಸುವವರೆಗೆ ಕಂಪ್ಯೂಟರಿನಲ್ಲಿ ಯಾವ ಕೆಲಸ ಆಗಬೇಕಾದರೂ ಅದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಆ ಪ್ರೋಗ್ರಾಮಿನ ಆಲ್ಗರಿದಮ್ ಪರಿಗಣಿಸಿರಬೇಕು. ಪ್ರೋಗ್ರಾಮ್ ಬರೆಯುವ ಮುನ್ನ ಅದರ ತರ್ಕ (ಲಾಜಿಕ್) ಹೇಗಿರಬೇಕು ಎನ್ನುವುದನ್ನು ಅಂತಿಮಗೊಳಿಸುವಲ್ಲಿ ಆಲ್ಗರಿದಮ್‌ನದೇ ಪ್ರಮುಖ ಪಾತ್ರ. ಪ್ರೋಗ್ರಾಮ್ ಬರೆಯಲು ಹೊರಟಿರುವುದು ಯಾವ ಭಾಷೆಯಲ್ಲೇ (ಸಿ++, ಜಾವಾ ಇತ್ಯಾದಿ) ಆಗಲಿ, ಆ ಕೆಲಸ ಶುರುಮಾಡುವ ಮೊದಲು ನಮ್ಮ ಉದ್ದೇಶಕ್ಕೆ ಹೊಂದುವ ಸಮರ್ಥ ಆಲ್ಗರಿದಮ್ ಅನ್ನು ಆರಿಸಿಕೊಳ್ಳುವುದು ಪ್ರೋಗ್ರಾಮಿಂಗ್‌ನ ಮಹತ್ವದ ಹೆಜ್ಜೆಗಳಲ್ಲೊಂದು. ವೇಗ, ಸಂಪನ್ಮೂಲದ ಬಳಕೆ, ಅನುಷ್ಠಾನದ ಜಟಿಲತೆ ಮುಂತಾದ ಅಂಶಗಳಮೇಲೆ ವಿವಿಧ ಆಲ್ಗರಿದಮ್‌ಗಳನ್ನು ಹೋಲಿಸಿ ಅವುಗಳ ಪೈಕಿ ಅತ್ಯಂತ ಸೂಕ್ತವೆಂದು ತೋರುವುದನ್ನಷ್ಟೆ ಆಯ್ದುಕೊಂಡು ಮುಂದುವರೆಯುವುದು ಸಾಮಾನ್ಯ ಅಭ್ಯಾಸ. ಹೀಗೆ ಆರಿಸಲಾದ ಆಲ್ಗರಿದಮ್‌ನ ತರ್ಕ ಎಷ್ಟು ಸಮರ್ಥವಾಗಿರುತ್ತದೋ ಅಂತಿಮವಾಗಿ ಸಿದ್ಧವಾಗುವ ಪ್ರೋಗ್ರಾಮಿನ ಸಾಮರ್ಥ್ಯದ ಪ್ರಮಾಣವೂ ಅಷ್ಟೇ ಇರುತ್ತದೆ.

Aspect Ratio
ಆಸ್ಪೆಕ್ಟ್ ರೇಶಿಯೋ
(ರೂಪಿಸಬೇಕಿದೆ)
ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತ
ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತವನ್ನು ಅದರ 'ಆಸ್ಪೆಕ್ಟ್ ರೇಶಿಯೋ' ಸೂಚಿಸುತ್ತದೆ. ಉದಾಹರಣೆಗೆ ಒಂದು ಚಿತ್ರದ ಅಗಲ ಅದರ ಎತ್ತರದ ಒಂದೂವರೆಪಟ್ಟು ದೊಡ್ಡದಿದೆ ಎನ್ನುವುದಾದರೆ ಅದರ ಆಸ್ಪೆಕ್ಟ್ ರೇಶಿಯೋ ೩:೨ ಆಗಿರುತ್ತದೆ. ಪ್ರದರ್ಶಕಗಳು (ಡಿಸ್ಪ್ಲೇ) ಹಾಗೂ ಮುದ್ರಿತ ಛಾಯಾಚಿತ್ರಗಳ ಉದ್ದ-ಅಗಲಗಳ ಅನುಪಾತವನ್ನು ಪ್ರತಿನಿಧಿಸಲೂ ಆಸ್ಪೆಕ್ಟ್ ರೇಶಿಯೋವನ್ನೇ ಬಳಸಲಾಗುತ್ತದೆ. ಚಿತ್ರಗಳನ್ನು ಮುದ್ರಿಸುವಾಗ ಹಾಗೂ ಬೇರೆಬೇರೆ ಗಾತ್ರದ ಪರದೆಗಳ ಮೇಲೆ ಪ್ರದರ್ಶಿಸುವಾಗ ಅದರ ಆಸ್ಪೆಕ್ಟ್ ರೇಶಿಯೋ ಕಡೆಗೆ ಗಮನಹರಿಸಬೇಕಾದ್ದು ಅನಿವಾರ್ಯ. ಉದಾಹರಣೆಗೆ ೪:೩ ಆಸ್ಪೆಕ್ಟ್ ರೇಶಿಯೋದಲ್ಲಿ ತೆಗೆದ ಚಿತ್ರವನ್ನು ನೀವು ೬"x೪" ಗಾತ್ರದಲ್ಲಿ ಮುದ್ರಿಸಹೊರಟರೆ ಚಿತ್ರದ ಸ್ವಲ್ಪ ಭಾಗ ಕತ್ತರಿಸಿಹೋಗುತ್ತದೆ. ಅದೇ ೩:೨ ಆಸ್ಪೆಕ್ಟ್ ರೇಶಿಯೋದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ೬"x೪" ಗಾತ್ರದಲ್ಲಿ ಪೂರ್ಣವಾಗಿ ಮುದ್ರಿಸಿಕೊಳ್ಳಬಹುದು. ೪:೩ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರ ೬"x೪.೫" ಗಾತ್ರದಲ್ಲಿ ಸರಿಯಾಗಿ ಮುದ್ರಣವಾಗುತ್ತದೆ. ಇದೇರೀತಿ ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಟೀವಿಯಲ್ಲಿ ೩:೨ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನು ನೋಡಿದರೆ ಎರಡೂ ಬದಿಗಳಲ್ಲಿ ಕಪ್ಪು ಬಣ್ಣ ಕಾಣಿಸುತ್ತದೆ; ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನೇ ನೋಡಿದರೆ ಈ ಸಮಸ್ಯೆ ಇರದು! ಬಹುತೇಕ ಕ್ಯಾಮೆರಾಗಳಲ್ಲಿ ಚಿತ್ರ ಕ್ಲಿಕ್ಕಿಸುವ ಮುನ್ನವೇ ನಮಗೆ ಬೇಕಾದ ಆಸ್ಪೆಕ್ಟ್ ರೇಶಿಯೋ ಹೊಂದಿಸಿಕೊಳ್ಳುವುದು ಸಾಧ್ಯ. ಕ್ಲಿಕ್ಕಿಸಿದ ನಂತರದಲ್ಲಿ ಚಿತ್ರದ ಒಂದಷ್ಟು ಭಾಗವನ್ನು ಕತ್ತರಿಸುವ ಮೂಲಕ ಅವುಗಳ ಆಸ್ಪೆಕ್ಟ್ ರೇಶಿಯೋ ಬದಲಿಸಿಕೊಳ್ಳಬಹುದು. ಕಂಪ್ಯೂಟರಿನಲ್ಲಿ ಚಿತ್ರಗಳನ್ನು ಹಿಗ್ಗಿಸಲು ಇಲ್ಲವೇ ಕುಗ್ಗಿಸಲು ಪ್ರಯತ್ನಿಸುವಾಗ ಅವುಗಳ ಮೂಲ ಆಸ್ಪೆಕ್ಟ್ ರೇಶಿಯೋ ಉಳಿಸಿಕೊಳ್ಳಬೇಕಾಗುತ್ತದೆ.
">

Inkjet
ಇಂಕ್‌ಜೆಟ್
(ರೂಪಿಸಬೇಕಿದೆ)
ಕಾಗದದ ಮೇಲೆ ಬಣ್ಣದ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವ ತಂತ್ರಜ್ಞಾನ; ಈ ತಂತ್ರಜ್ಞಾನ ಬಳಸುವ ಪ್ರಿಂಟರುಗಳನ್ನೂ ಇದೇ ಹೆಸರಿನಿಂದ ಗುರುತಿಸಲಾಗುತ್ತದೆ.
ಇಂದಿನ ಐಟಿ ಯುಗದಲ್ಲಿ ನಾವು ಬಹುತೇಕ ಕಡತ-ದಾಖಲೆಗಳನ್ನು ಡಿಜಿಟಲ್ ರೂಪದಲ್ಲೇ ಬಳಸುತ್ತೇವೆ, ನಿಜ. ಹಾಗೆಂದು ಮುದ್ರಿತ ಪ್ರತಿಗಳ ಬಳಕೆ ಸಂಪೂರ್ಣವಾಗೇನೂ ನಿಂತಿಲ್ಲ. ಕಂಪ್ಯೂಟರಿನಲ್ಲಿ ರೂಪಿಸಿದ ಅಥವಾ ಡೌನ್‌ಲೋಡ್ ಮಾಡಿಕೊಂಡ ಕಡತವನ್ನು ಮುದ್ರಿಸಲು ನಾವು ಈಗಲೂ ಪ್ರಿಂಟರಿನ ಮೊರೆಹೋಗುತ್ತಲೇ ಇರುತ್ತೇವೆ. ಈ ಉದ್ದೇಶಕ್ಕಾಗಿ ಬಳಕೆಯಾಗುವ ಹಲವು ಬಗೆಯ ಪ್ರಿಂಟರುಗಳ ಪೈಕಿ ಇಂಕ್‌ಜೆಟ್ ಪ್ರಿಂಟರ್ ಕೂಡ ಒಂದು. ಪ್ರಿಂಟರಿನೊಳಗೆ ಹಾದುಬರುವ ಕಾಗದದ ಮೇಲೆ ಬಣ್ಣದ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವುದು ಈ ಪ್ರಿಂಟರಿನ ಕಾರ್ಯವಿಧಾನ. 'ಇಂಕ್‌ಜೆಟ್' ಎಂಬ ಹೆಸರಿಗೂ ಇದೇ ಕಾರಣ. ಬಹುತೇಕ ಇಂಕ್‌ಜೆಟ್ ಪ್ರಿಂಟರುಗಳಲ್ಲಿ ಇಂಕ್ ತುಂಬಿದ ಎರಡು ಪುಟ್ಟ ಡಬ್ಬಿ(ಕಾರ್ಟ್‌ರಿಜ್)ಗಳಿರುತ್ತವೆ. ಈ ಪೈಕಿ ಒಂದರಲ್ಲಿ ಕಪ್ಪು ಬಣ್ಣದ ಇಂಕ್ ಇದ್ದರೆ ಇನ್ನೊಂದರಲ್ಲಿ ಪ್ರಾಥಮಿಕ ಬಣ್ಣಗಳನ್ನು ಪ್ರತ್ಯೇಕವಾಗಿ ತುಂಬಿಟ್ಟಿರುತ್ತಾರೆ. ಸಿಂಪಡಣೆಗೆ ಮುನ್ನ ಇವನ್ನು ನಿಗದಿತ ಪ್ರಮಾಣದಲ್ಲಿ ಬೆರೆಸುವ ಮೂಲಕ ಕಾಗದದ ಮೇಲೆ ಬೇಕಾದ ಬಣ್ಣವನ್ನು ಮೂಡಿಸುವುದು ಸಾಧ್ಯವಾಗುತ್ತದೆ. ಲೇಸರ್ ಪ್ರಿಂಟರಿನ ಹೋಲಿಕೆಯಲ್ಲಿ ಇಂಕ್‌ಜೆಟ್ ಪ್ರಿಂಟರುಗಳ ಬೆಲೆ ಬಹಳ ಕಡಿಮೆ (ಮುದ್ರಣ ಗುಣಮಟ್ಟವೂ ಕೊಂಚ ಕಡಿಮೆಯೇ). ಹೀಗಾಗಿ ಮನೆಗಳಲ್ಲಿ ಪ್ರಿಂಟರ್ ಬಳಸುವ ಬಹುತೇಕ ಮಂದಿ ಇಂಕ್‌ಜೆಟ್ ಪ್ರಿಂಟರುಗಳನ್ನೇ ಇಷ್ಟಪಟ್ಟು ಬಳಸುತ್ತಾರೆ.

Internet of Things
ಇಂಟರ್‍‍ನೆಟ್ ಆಫ್ ಥಿಂಗ್ಸ್
ವಸ್ತುಗಳ ಅಂತರಜಾಲ
ನಿತ್ಯದ ಬಳಕೆಯ ವಸ್ತುಗಳನ್ನೂ ಅಂತರಜಾಲದ ವ್ಯಾಪ್ತಿಗೆ ತಂದು ಅವುಗಳೊಡನೆ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಪರಿಕಲ್ಪನೆ
ಇಂಟರ್‌ನೆಟ್ ಎಂದಾಕ್ಷಣ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳಷ್ಟೇ ನಮ್ಮ ಮನಸ್ಸಿಗೆ ಬರುವುದು ಸಾಮಾನ್ಯ. ಅಂತರಜಾಲ ಸಂಪರ್ಕವನ್ನು ಇಂತಹ ಸಾಧನಗಳಿಗಷ್ಟೇ ಸೀಮಿತಗೊಳಿಸದೆ ನಿತ್ಯದ ಬಳಕೆಯ ವಸ್ತುಗಳನ್ನೂ ಅದರ ವ್ಯಾಪ್ತಿಗೆ ತರುವ, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ಪರಿಕಲ್ಪನೆಯೇ ಐಓಟಿ: ಇಂಟರ್‌ನೆಟ್ ಆಫ್ ಥಿಂಗ್ಸ್, ಅಂದರೆ ವಸ್ತುಗಳ ಅಂತರಜಾಲ. ನಾವು ದಿನನಿತ್ಯವೂ ಬಳಸುವ ನೂರಾರು, ಸಾವಿರಾರು ಸಂಖ್ಯೆಯ ವಸ್ತುಗಳು (ಥಿಂಗ್ಸ್) ಬೃಹತ್ ಜಾಲವೊಂದರ ಭಾಗವಾಗಿ ಬೆಳೆದಾಗ ರೂಪುಗೊಳ್ಳುವುದೇ ವಸ್ತುಗಳ ಅಂತರಜಾಲ. ನಮ್ಮ ಪರಿಚಯದ ಅಂತರಜಾಲದಲ್ಲಿ ಹೇಗೆ ಲ್ಯಾಪ್‌ಟಾಪ್-ಡೆಸ್ಕ್‌ಟಾಪುಗಳು, ಸರ್ವರುಗಳು, ಮೊಬೈಲ್-ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂಪರ್ಕಿತವಾಗಿವೆಯೋ ಹಾಗೆ ವಸ್ತುಗಳ ಈ ಅಂತರಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಸಾಧನ ಜಾಲದ ಸಂಪರ್ಕ ಪಡೆದುಕೊಳ್ಳಬಲ್ಲದು. ಗೃಹೋಪಯೋಗಿ ವಸ್ತುಗಳು - ವಾಹನಗಳು ಮಾತ್ರವೇ ಅಲ್ಲ, ನಮ್ಮ ದೇಹದೊಳಗೆ ಸೇರಿ ಆರೋಗ್ಯವನ್ನೂ ನಮ್ಮ ಓಡಾಟವನ್ನೂ ಗಮನಿಸಿಕೊಳ್ಳುವ ಸೆನ್ಸರುಗಳಂತಹ ಅತಿಸೂಕ್ಷ್ಮ ವಸ್ತುಗಳೂ ಈ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲವು; ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದು ವ್ಯಕ್ತಿಯ ಗಮನಕ್ಕೆ ಬರುವ ಮುನ್ನವೇ ಅವನ ವೈದ್ಯರ ಗಮನಕ್ಕೆ ಬರುವಂತೆ ಮಾಡಬಲ್ಲವು. ಮನುಷ್ಯರಷ್ಟೇ ಏಕೆ, ಜಾನುವಾರುಗಳ ಬಗ್ಗೆ ನಿಗಾವಹಿಸುವುದು - ಯಂತ್ರಗಳ ಸ್ಥಿತಿಗತಿ ತಿಳಿದುಕೊಳ್ಳುವುದು ಮುಂತಾದವನ್ನೂ ಇಂತಹ ಜಾಲ ಸಾಧ್ಯವಾಗಿಸುತ್ತದೆ. ಅಂದಹಾಗೆ ಇಂತಹುದೊಂದು ಜಾಗತಿಕ ವ್ಯವಸ್ಥೆಯ ಬಗೆಗೆ ಯೋಚಿಸಿ ಅದನ್ನು 'ಇಂಟರ್‌ನೆಟ್ ಆಫ್ ಥಿಂಗ್ಸ್' ಎಂದು ಕರೆದ ಶ್ರೇಯ ಕೆವಿನ್ ಆಶ್‌ಟನ್ ಎಂಬ ತಂತ್ರಜ್ಞನಿಗೆ ಸಲ್ಲುತ್ತದೆ. ಐಓಟಿ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು ನಮ್ಮ ಆರೋಗ್ಯ ಗಮನಿಸಿಕೊಳ್ಳುವ ಸ್ಮಾರ್ಟ್‌ವಾಚುಗಳು, ಮೊಬೈಲ್ ಬಳಸಿ ನಿಯಂತ್ರಿಸಬಹುದಾದ ಲೈಟ್ ಬಲ್ಬುಗಳಂತಹ ಸಾಧನಗಳು ಈಗಾಗಲೇ ಮಾರುಕಟ್ಟೆಗೂ ಬಂದುಬಿಟ್ಟಿವೆ.

Internet
ಇಂಟರ್‍‍ನೆಟ್
ಅಂತರಜಾಲ
ಅನೇಕ ಕಂಪ್ಯೂಟರ್ ಜಾಲಗಳ ಅಂತರ್‌ಸಂಪರ್ಕದಿಂದ ರೂಪುಗೊಂಡ ಮಹಾಜಾಲ
ಒಂದಕ್ಕಿಂತ ಹೆಚ್ಚು ಕಂಪ್ಯೂಟರುಗಳನ್ನು ಪರಸ್ಪರ ಸಂಪರ್ಕಿಸಿದ ಜಾಲಗಳನ್ನು (ನೆಟ್‌ವರ್ಕ್) ಕಚೇರಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ, ಬಸ್ಸು-ರೈಲು-ವಿಮಾನ ಸಂಸ್ಥೆಗಳಲ್ಲಿ ಬಳಸುವುದನ್ನು ನಾವು ನೋಡಿದ್ದೇವೆ. ಒಂದು ಕಂಪ್ಯೂಟರಿನಿಂದ ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ಸಾಧಿಸಿಕೊಳ್ಳಲು ಇಂತಹ ಜಾಲಗಳು ಸಹಾಯಮಾಡುತ್ತವೆ. ಇಂತಹ ಹಲವು ಜಾಲಗಳು ಒಟ್ಟುಸೇರಿದರೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಲ್ಲ ಎಂಬ ಉದ್ದೇಶದಿಂದ ರೂಪುಗೊಂಡದ್ದೇ ಇಂಟರ್‌ನೆಟ್, ಅಂದರೆ ಅಂತರಜಾಲ. ಈ ಹೆಸರಿನ ಭಾವಾರ್ಥ 'ಇಂಟರ್ ಕನೆಕ್ಷನ್ ಆಫ್ ನೆಟ್‌ವರ್ಕ್ಸ್' ಎಂದು. ಅನೇಕ ಜಾಲಗಳ ಅಂತರ್‌ಸಂಪರ್ಕದಿಂದ ರೂಪುಗೊಂಡ ಮಹಾಜಾಲ ಇದು. ಸಂವಹನದ ಪರಿಕಲ್ಪನೆಯನ್ನೇ ಆಮೂಲಾಗ್ರವಾಗಿ ಬದಲಿಸಿದ ಹೆಗ್ಗಳಿಕೆ ಈ ಅಂತರಜಾಲದ್ದು. ವಿಶ್ವದ ವಿವಿಧೆಡೆಗಳಲ್ಲಿರುವ ಕಂಪ್ಯೂಟರುಗಳು, ಮೊಬೈಲ್ ಫೋನುಗಳು, ಸಂಬಂಧಿತ ಸಾಧನಗಳು, ಲ್ಯಾನ್ - ವ್ಯಾನ್ ಮುಂತಾದ ಜಾಲಗಳೆಲ್ಲ ಸೇರಿ ಅಂತರಜಾಲ ರೂಪುಗೊಂಡಿದೆ. ವಿವಿಧ ಯಂತ್ರಾಂಶಗಳು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗಳೆಲ್ಲ ಇದರ ಭಾಗಗಳು. ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನಕ್ಕೂ ಅಂತರಜಾಲದಲ್ಲಿರುವ ಇತರ ಎಲ್ಲ ಸಾಧನಗಳ ಜೊತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಅವಕಾಶ ಇರುತ್ತದೆ. ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್ ವೈಡ್ ವೆಬ್) ಮೂಲಸೌಕರ್ಯ ಒದಗಿಸುವುದು ಇದೇ ಅಂತರಜಾಲದ ಜವಾಬ್ದಾರಿ. ಅಂತರಜಾಲದಲ್ಲಿರುವ ಸಾಧನಗಳ ನಡುವಿನ ಸಂಪರ್ಕ ಹೇಗಿರಬೇಕು ಎಂದು ನಿರ್ದೇಶಿಸುವುದು 'ಟಿಸಿಪಿ/ಐಪಿ' ಎಂಬ ಶಿಷ್ಟಾಚಾರ. ಇದು 'ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೋಟೋಕಾಲ್/ಇಂಟರ್‌ನೆಟ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ.

Interface
ಇಂಟರ್‌ಫೇಸ್
ಅಂತರ ಸಂಪರ್ಕ ಸಾಧನ
ವಿದ್ಯುನ್ಮಾನ ಸಾಧನಗಳು ಹಾಗೂ ಬಳಕೆದಾರರ ನಡುವೆ - ಅಥವಾ - ಒಂದಕ್ಕಿಂತ ಹೆಚ್ಚು ವಿದ್ಯುನ್ಮಾನ ಸಾಧನಗಳ ನಡುವೆ ಪರಸ್ಪರ ಸಂವಹನವನ್ನು ಸಾಧ್ಯವಾಗಿಸುವ ವ್ಯವಸ್ಥೆ
ಕಂಪ್ಯೂಟರ್, ಮೊಬೈಲ್ ಫೋನ್ ಮುಂತಾದ ಸಾಧನಗಳನ್ನು ಬಳಸುವಾಗ ಪ್ರತಿ ಕ್ಷಣದಲ್ಲೂ ಒಂದಲ್ಲ ಒಂದು ರೀತಿಯ ಸಂವಹನ ನಡೆಯುತ್ತಿರುತ್ತದೆ. ಈ ಸಂವಹನ ಬಳಕೆದಾರರ ಜೊತೆಯಲ್ಲಿರಬಹುದು, ತಂತ್ರಾಂಶಗಳ ನಡುವೆ ಇರಬಹುದು ಇಲ್ಲವೇ ಎರಡು ಯಂತ್ರಾಂಶಗಳ ನಡುವೆಯೂ ನಡೆಯಬಹುದು. ಇಂತಹ ಪ್ರತಿ ಸಂವಹನಕ್ಕೂ ಸೂಕ್ತ ವ್ಯವಸ್ಥೆಯೊಂದರ ಅಗತ್ಯ ಇರುತ್ತದೆ: ಬಳಕೆದಾರರು ತಮ್ಮ ಅಗತ್ಯಗಳನ್ನು ಸೂಚಿಸಲು (ಮೌಸ್-ಟಚ್‌ಸ್ಕ್ರೀನ್ ಇತ್ಯಾದಿಗಳ ಮೂಲಕ) ತಂತ್ರಾಂಶದ ಪರದೆ ನೆರವಾಗುತ್ತದಲ್ಲ, ಅಂಥದ್ದು. ಇದೇ ರೀತಿ ಪರಸ್ಪರ ಸಂಪರ್ಕಿಸುವ ಸಾಧ್ಯತೆ (ಉದಾ: ಕೇಬಲ್ ಮೂಲಕ) ಇದ್ದರೆ ಮಾತ್ರವೇ ಯಂತ್ರಾಂಶಗಳ ನಡುವಿನ ಸಂವಹನ ಸಾಧ್ಯವಾಗುತ್ತದೆ. 'ಇಂಟರ್‌ಫೇಸ್', ಅಂದರೆ ಅಂತರ ಸಂಪರ್ಕ ಸಾಧನ ಎಂದು ಗುರುತಿಸುವುದು ಈ ಬಗೆಯ ವ್ಯವಸ್ಥೆಗಳನ್ನೇ. ಈ ಪೈಕಿ ಬಳಕೆದಾರರೊಡನೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗೆ 'ಯುಐ' (ಯೂಸರ್ ಇಂಟರ್‌ಫೇಸ್) ಎಂದು ಹೆಸರು. ಇದೇ ರೀತಿ ಯಂತ್ರಾಂಶಗಳ ನಡುವೆ ಸಂಪರ್ಕ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಹಾರ್ಡ್‌ವೇರ್ ಇಂಟರ್‌ಫೇಸ್ ಎಂದು ಕರೆಯುತ್ತಾರೆ: ಕಂಪ್ಯೂಟರಿನಲ್ಲಿ - ಮೊಬೈಲಿನಲ್ಲಿ ಇರುವ ಯುಎಸ್‌ಬಿ ಪೋರ್ಟ್ ಇದಕ್ಕೊಂದು ಉದಾಹರಣೆ. ಅಂದಹಾಗೆ ಇಂಟರ್‌ಫೇಸ್‌ಗಳ ಬಳಕೆ ಕಂಪ್ಯೂಟರು-ಮೊಬೈಲ್ ಫೋನುಗಳಿಗಷ್ಟೇ ಸೀಮಿತವೇನಲ್ಲ. ಡಿವಿಡಿ ಪ್ಲೇಯರ್ - ಸೆಟ್ ಟಾಪ್ ಬಾಕ್ಸ್ ಇತ್ಯಾದಿಗಳೊಡನೆ ಟೀವಿಯ ಸಂಪರ್ಕ ಸಾಧ್ಯವಾಗಿಸುವುದು, ಡಿಜಿಟಲ್ ಕ್ಯಾಮೆರಾದಿಂದ ಫೋಟೋಗಳನ್ನು ವರ್ಗಾಯಿಸಲು ನೆರವಾಗುವುದು - ಇವೆಲ್ಲವೂ ಇಂಟರ್‌ಫೇಸ್‌ಗಳದೇ ಕೆಲಸ.

Intranet
ಇಂಟ್ರಾನೆಟ್
(ರೂಪಿಸಬೇಕಿದೆ)
ನಿರ್ದಿಷ್ಟ ಉದ್ದೇಶ ಅಥವಾ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ ಖಾಸಗಿ ಜಾಲ (ನೆಟ್‌ವರ್ಕ್)
ಇಂಟರ್‌ನೆಟ್, ಅಂದರೆ ಅಂತರಜಾಲದ ಪರಿಚಯ ನಮ್ಮೆಲ್ಲರಿಗೂ ಇದೆ. ಪ್ರಪಂಚದ ವಿವಿಧೆಡೆಗಳಲ್ಲಿರುವ ವಿದ್ಯುನ್ಮಾನ ಸಾಧನಗಳು ಹಾಗೂ ಅವುಗಳ ಜಾಲಗಳೆಲ್ಲ ಒಟ್ಟುಸೇರಿ ರೂಪುಗೊಂಡಿರುವ ಬೃಹತ್ ಜಾಲ (ನೆಟ್‌ವರ್ಕ್) ಇದು. ಯಾರು ಬೇಕಾದರೂ ಅಂತರಜಾಲದ ಭಾಗವಾಗುವುದು, ಅದರ ಸೌಲಭ್ಯಗಳನ್ನು ಬಳಸುವುದು ಸಾಧ್ಯ. ಅಂತರಜಾಲದ ಈ ಮುಕ್ತ ಸ್ವರೂಪ ಒಳ್ಳೆಯದೇ ಆದರೂ ಇದು ಎಲ್ಲ ಉಪಯೋಗಗಳಿಗೂ ಸರಿಹೊಂದುವುದಿಲ್ಲ. ಹಲವು ಸಂದರ್ಭಗಳಲ್ಲಿ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು ಮಾತ್ರ ಬಳಸಬಹುದಾದ ವ್ಯವಸ್ಥೆ) ನಮ್ಮ ಜಾಲಕ್ಕೆ ನಿರ್ದಿಷ್ಟ ಬಳಕೆದಾರರಿಗಷ್ಟೇ ಪ್ರವೇಶ ನೀಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವುದೇ ಇಂಟ್ರಾನೆಟ್. ಹೆಸರೇ ಹೇಳುವಂತೆ ಇಂಟ್ರಾನೆಟ್ ಎನ್ನುವುದು ಒಂದು ಮಿತಿಯೊಳಗೆ ಮಾತ್ರವೇ ಕಾರ್ಯನಿರ್ವಹಿಸುವ ಖಾಸಗಿ ಜಾಲ. ಒಂದು ಕಟ್ಟಡದೊಳಗಿನ ಬಳಕೆದಾರರು, ಒಂದು ಸಂಸ್ಥೆಯ ಉದ್ಯೋಗಿಗಳು - ಹೀಗೆ ಇಂಟ್ರಾನೆಟ್‌ಗಳನ್ನು ನಿರ್ದಿಷ್ಟ ಬಳಕೆದಾರರು ಮಾತ್ರವೇ ಸಂಪರ್ಕಿಸುವುದು ಸಾಧ್ಯ. ಅಂದಹಾಗೆ ಇಂಟ್ರಾನೆಟ್‌ಗಳಿಗೆ ಭೌಗೋಳಿಕ ಮಿತಿ ಇರಲೇಬೇಕೆಂದೇನೂ ಇಲ್ಲ. ಒಂದು ಸಂಸ್ಥೆಯ ಉದ್ಯೋಗಿಗಳು - ಅವರು ಯಾವ ಊರಿನಲ್ಲಿ, ಯಾವ ದೇಶದಲ್ಲೇ ಇದ್ದರೂ - ಬಳಸಲು ಸಾಧ್ಯವಾಗುವಂತಹ ಇಂಟ್ರಾನೆಟ್‌ಗಳನ್ನು ರೂಪಿಸುವುದು ಸಾಧ್ಯವಿದೆ. ಇಂತಹ ಸಂಪರ್ಕಗಳನ್ನು ಸಾಧ್ಯವಾಗಿಸಲು ಅಂತರಜಾಲದ ನೆರವು ಪಡೆದುಕೊಳ್ಳುವುದೂ ಅಪರೂಪವೇನಲ್ಲ. ಈ ಉದ್ದೇಶಕ್ಕಾಗಿ ವಿಪಿಎನ್‌ನಂತಹ ತಂತ್ರಜ್ಞಾನಗಳೂ ಬಳಕೆಯಾಗುತ್ತವೆ.

ERP
ಇಆರ್‌ಪಿ
(ರೂಪಿಸಬೇಕಿದೆ)
ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್; ಯಾವುದೇ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಟ್ಟಿಗೆ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುವ ತಂತ್ರಾಂಶದ ಹೆಸರು.
ಕಂಪ್ಯೂಟರೀಕರಣವಾಗಿರುವ ಸಣ್ಣ-ದೊಡ್ಡ ಸಂಸ್ಥೆಗಳಲ್ಲಿ ಇಆರ್‌ಪಿ, ಅಂದರೆ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ತಂತ್ರಾಂಶಗಳ ಬಳಕೆ ಸಾಮಾನ್ಯ. ನಿರ್ದಿಷ್ಟ ಸಂಸ್ಥೆಯ ಎಲ್ಲ ವಿಭಾಗಗಳ ಅಗತ್ಯಗಳಿಗೂ ಒದಗಿಬರುವುದು ಈ ತಂತ್ರಾಂಶದ ವೈಶಿಷ್ಟ್ಯ. ಯಾವುದೇ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಟ್ಟಿಗೆ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುವ ಮೂಲಕ ಅಲ್ಲಿನ ಕೆಲಸಗಳ ನಿರ್ವಹಣೆಯನ್ನೂ ಉತ್ತಮಗೊಳಿಸುತ್ತದೆ. ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಆರ್‌ಪಿ ವ್ಯವಸ್ಥೆಯಲ್ಲಿ ಶೇಖರಿಸಿಡಬಹುದು. ಆಸ್ತಿಪಾಸ್ತಿ ವಿವರ, ಉತ್ಪನ್ನಗಳು ಖರ್ಚಾಗುತ್ತಿರುವ ಪ್ರಮಾಣ, ಬಂದಿರುವ ಖರೀದಿ ಆದೇಶಗಳು, ಗೋದಾಮಿನಲ್ಲಿರುವ ಕಚ್ಚಾವಸ್ತುಗಳ ವಿವರ, ಮುಂದಿನ ತಿಂಗಳು ಬೇಕಾಗಬಹುದಾದ ಕಚ್ಚಾವಸ್ತುವಿನ ಪ್ರಮಾಣದ ಅಂದಾಜು, ಅದರ ತಯಾರಕರಿಗೆ ಕೊಡಬೇಕಾದ ಬಾಕಿ, ಖರ್ಚುವೆಚ್ಚ ಲಾಭನಷ್ಟಗಳ ಲೆಕ್ಕ, ಉದ್ಯೋಗಿಗಳ ಸಂಬಳ, ಗ್ರಾಹಕರ ವಿವರ - ಹೀಗೆ ಪ್ರತಿಯೊಂದು ವಿವರವನ್ನೂ ಇಆರ್‌ಪಿಯ ಘಟಕಗಳು ಸಂಗ್ರಹಿಸಿಟ್ಟುಕೊಳ್ಳಬಲ್ಲವು. ಈ ಎಲ್ಲ ಘಟಕಗಳೂ ಒಂದರ ಜೊತೆಗೊಂದು ಸಂಪರ್ಕದಲ್ಲಿರುವುದರಿಂದ ವಿಭಾಗಗಳ ನಡುವಿನ ಮಾಹಿತಿಯ ಹರಿವು ಸರಾಗವಾಗುತ್ತದೆ, ಸಂಸ್ಥೆಯ ಕಾರ್ಯನಿರ್ವಹಣೆ ಹೆಚ್ಚು ಸಕ್ಷಮವಾಗುತ್ತದೆ. ಯಾರಿಗೆ ಯಾವ ಮಾಹಿತಿ ಲಭ್ಯವಾಗಬೇಕು ಅಥವಾ ಲಭ್ಯವಾಗಬಾರದು ಎಂಬುದನ್ನೂ ಕೂಡ ಇಆರ್‌ಪಿ ತಂತ್ರಾಂಶಗಳಲ್ಲಿ ಬಹಳ ಸುಲಭವಾಗಿ ನಿಗದಿಪಡಿಸಬಹುದು. ಎಸ್‌ಎಪಿ ಹಾಗೂ ಅರೇಕಲ್ ಸಂಸ್ಥೆಗಳು ಇಆರ್‌ಪಿ ತಂತ್ರಾಂಶಗಳ ಪ್ರಮುಖ ತಯಾರಕರು. ಹಲವು ಇಆರ್‌ಪಿ ತಂತ್ರಾಂಶಗಳೊಡನೆ ಹೊಂದಿಕೊಂಡು ಕೆಲಸಮಾಡುವ, ಅದರಲ್ಲಿರುವ ವಿವರಗಳ ಕುರಿತು ವರದಿಗಳನ್ನು ನೀಡುವ ಬಿಸಿನೆಸ್ ಇಂಟೆಲಿಜೆನ್ಸ್ ತಂತ್ರಾಂಶಗಳೂ ಇವೆ.


logo