logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Word Processor
ವರ್ಡ್ ಪ್ರಾಸೆಸರ್
ಪದಸಂಸ್ಕಾರಕ
ಕಡತಗಳ ರಚನೆ, ಸಂಪಾದನೆ, ಪುಟವಿನ್ಯಾಸ ಹಾಗೂ ಮುದ್ರಣದಲ್ಲಿ ನೆರವಾಗುವ ತಂತ್ರಾಂಶ
ಕಂಪ್ಯೂಟರಿನ ಅಸಂಖ್ಯ ಉಪಯೋಗಗಳ ಪೈಕಿ ಕಡತಗಳ ರಚನೆ, ಸಂಪಾದನೆ, ಪುಟವಿನ್ಯಾಸ ಹಾಗೂ ಮುದ್ರಣಕ್ಕೆ ಪ್ರಮುಖ ಸ್ಥಾನವಿದೆ. ಇವಿಷ್ಟೂ ಅಂಶಗಳನ್ನು ಒಟ್ಟುಸೇರಿಸಿ 'ವರ್ಡ್ ಪ್ರಾಸೆಸಿಂಗ್' (ಪದಸಂಸ್ಕರಣೆ) ಎಂದು ಗುರುತಿಸಲಾಗುತ್ತದೆ. ಪದಸಂಸ್ಕರಣೆಯ ಈ ಕೆಲಸದಲ್ಲಿ ನೆರವಾಗುವ ತಂತ್ರಾಂಶಗಳನ್ನು ವರ್ಡ್ ಪ್ರಾಸೆಸರ್, ಅಂದರೆ ಪದಸಂಸ್ಕಾರಕಗಳೆಂದು ಕರೆಯುತ್ತಾರೆ. ಅಂದಹಾಗೆ ಪದಸಂಸ್ಕಾರಕಗಳಲ್ಲಿರುವುದು ಕಡತಗಳ ರಚನೆ ಹಾಗೂ ವಿನ್ಯಾಸಕ್ಕೆ ಬೇಕಾದ ಸೌಲಭ್ಯಗಳಷ್ಟೇ ಅಲ್ಲ. ಕಡತದಲ್ಲಿರುವ ಪದಗಳ ಸಂಖ್ಯೆಯನ್ನು ತಿಳಿಸುವ, ಅಕ್ಷರದೋಷ - ವ್ಯಾಕರಣದ ತಪ್ಪುಗಳನ್ನು ತೋರಿಸುವ, ಕಡತದಲ್ಲಿ ಮಾಡಲಾದ ಬದಲಾವಣೆಗಳ ಇತಿಹಾಸವನ್ನು ತೋರಿಸುವಂತಹ ಅನುಕೂಲಗಳೂ ಅನೇಕ ಪದಸಂಸ್ಕಾರಕಗಳಲ್ಲಿರುತ್ತವೆ. ಪಠ್ಯವನ್ನಷ್ಟೇ ಟೈಪ್ ಮಾಡಿ ಉಳಿಸಿಡಲು ಸಹಾಯಮಾಡುವ ನೋಟ್‌ಪ್ಯಾಡ್‌ನಂತಹ ಸರಳ ತಂತ್ರಾಂಶಗಳಿಂದ ಪ್ರಾರಂಭಿಸಿ ಪತ್ರಿಕೆ-ಪುಸ್ತಕಗಳ ವಿನ್ಯಾಸದಲ್ಲಿ ಬಳಕೆಯಾಗುವ ಇನ್‌ಡಿಸೈನ್‌ನಂತಹ ತಂತ್ರಾಂಶಗಳವರೆಗೆ ವಿವಿಧ ಉದ್ದೇಶಗಳಿಗಾಗಿ ಬೇರೆಬೇರೆ ಪದಸಂಸ್ಕಾರಕಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಮೈಕ್ರೋಸಾಫ್ಟ್ ಆಫೀಸ್, ಓಪನ್‌ಆಫೀಸ್, ಲಿಬ್ರೆಆಫೀಸ್ ಮುಂತಾದ ಎಲ್ಲ ತಂತ್ರಾಂಶಸಂಗ್ರಹಗಳಲ್ಲೂ ಒಂದೊಂದು ಪದಸಂಸ್ಕಾರಕ ಇರುತ್ತದೆ. ಮೈಕ್ರೋಸಾಫ್ಟ್‌ನ ಆಫೀಸ್ ತಂತ್ರಾಂಶಸಂಗ್ರಹದ ಭಾಗವಾದ 'ಮೈಕ್ರೋಸಾಫ್ಟ್ ವರ್ಡ್' ಸಾಕಷ್ಟು ಹೆಸರುಮಾಡಿರುವ, ವ್ಯಾಪಕವಾಗಿ ಬಳಕೆಯಾಗುವ ಇಂತಹ ಪದಸಂಸ್ಕಾರಕಗಳಲ್ಲೊಂದು. ಕನ್ನಡದಲ್ಲಿ ಕಡತಗಳ ಸೃಷ್ಟಿಯನ್ನು ಸಾಧ್ಯವಾಗಿಸುವ ಬರಹ, ನುಡಿ, ಪದ ಮುಂತಾದ ತಂತ್ರಾಂಶಗಳೂ ಪದಸಂಸ್ಕಾರಕಗಳೇ.

Worldwide Web
ವರ್ಲ್ಡ್​ವೈಡ್ ವೆಬ್
ವಿಶ್ವವ್ಯಾಪಿ ಜಾಲ
ಜಾಲತಾಣಗಳು (ವೆಬ್‌ಸೈಟ್), ಅವುಗಳ ಪುಟಗಳು (ವೆಬ್‌ಪೇಜ್) ಹಾಗೂ ಕಡತಗಳ (ಡಾಕ್ಯುಮೆಂಟ್ಸ್) ಮೂಲಕ ಅಂತರಜಾಲದಲ್ಲಿ ಮಾಹಿತಿಯನ್ನು ಪ್ರಕಟಿಸಲು ಸಾಧ್ಯವಾಗಿಸುವ ವ್ಯವಸ್ಥೆ
ಬಹುತೇಕ ಎಲ್ಲ ಜಾಲತಾಣಗಳ ವಿಳಾಸಗಳೂ 'WWW' ಎಂಬ ಮೂರು ಅಕ್ಷರಗಳಿಂದ ಪ್ರಾರಂಭವಾಗುತ್ತವಲ್ಲ, ಇದು 'ವರ್ಲ್ಡ್‌ವೈಡ್ ವೆಬ್' ಎಂಬ ಹೆಸರಿನ ಸಂಕ್ಷಿಪ್ತರೂಪ. ಕನ್ನಡದಲ್ಲಿ ವಿಶ್ವವ್ಯಾಪಿ ಜಾಲವೆಂದು ಕರೆಯುವುದು ಇದನ್ನೇ. ಸಾಮಾನ್ಯ ಬಳಕೆಯಲ್ಲಿ ಅಂತರಜಾಲ (ಇಂಟರ್‌ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಹೆಸರುಗಳನ್ನು ಪರ್ಯಾಯವಾಗಿ ಬಳಸಲಾಗುತ್ತದೆ, ನಿಜ. ಆದರೆ ಇವೆರಡೂ ಒಂದೇ ಅಲ್ಲ: ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಭಾಗ ಅಷ್ಟೇ. ವಿಶ್ವದ ವಿವಿಧೆಡೆಗಳಲ್ಲಿರುವ ಕಂಪ್ಯೂಟರುಗಳು, ಮೊಬೈಲ್ ಫೋನುಗಳು, ಸಂಬಂಧಿತ ಸಾಧನಗಳು, ಅವುಗಳು ಸೇರಿ ರೂಪುಗೊಂಡಿರುವ ಜಾಲಗಳು - ಇವೆಲ್ಲ ಸೇರಿ ರೂಪುಗೊಂಡಿರುವುದೇ ಅಂತರಜಾಲ. ವಿವಿಧ ಯಂತ್ರಾಂಶಗಳು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗಳೆಲ್ಲ ಇದರ ಭಾಗಗಳು. ಜಾಲತಾಣಗಳು (ವೆಬ್‌ಸೈಟ್), ಅವುಗಳ ಪುಟಗಳು (ವೆಬ್‌ಪೇಜ್) ಹಾಗೂ ಕಡತಗಳ (ಡಾಕ್ಯುಮೆಂಟ್ಸ್) ಮೂಲಕ ಅಂತರಜಾಲದಲ್ಲಿ ಮಾಹಿತಿಯನ್ನು ಪ್ರಕಟಿಸಲು ಸಾಧ್ಯವಾಗಿಸುವುದು ವಿಶ್ವವ್ಯಾಪಿ ಜಾಲ. ಹೀಗೆ ಪ್ರಕಟಿಸಿದ ಬಹುಮಾಧ್ಯಮ (ಮಲ್ಟಿಮೀಡಿಯಾ) ಮಾಹಿತಿಯನ್ನು ನಿರ್ದಿಷ್ಟ ವಿಳಾಸಗಳ (ಯುಆರೆಲ್) ಮೂಲಕ ಪಡೆದುಕೊಳ್ಳುವುದು, ಕೊಂಡಿಗಳ (ಹೈಪರ್‌ಲಿಂಕ್) ಮೂಲಕ ವಿವಿಧ ಆಕರಗಳ ನಡುವೆ ಸಂಪರ್ಕ ಕಲ್ಪಿಸುವುದು ವಿಶ್ವವ್ಯಾಪಿ ಜಾಲದಿಂದಾಗಿ ಸಾಧ್ಯವಾಗುತ್ತದೆ. ವಿಶ್ವವ್ಯಾಪಿ ಜಾಲವನ್ನು ರೂಪಿಸಿದ ಶ್ರೇಯ ಬ್ರಿಟಿಷ್ ವಿಜ್ಞಾನಿ ಟಿಮ್ ಬರ್ನರ್‍ಸ್-ಲೀ ಅವರಿಗೆ ಸಲ್ಲುತ್ತದೆ.

Wikipedia
ವಿಕಿಪೀಡಿಯ
(ರೂಪಿಸಬೇಕಿದೆ)
ಯಾರು ಬೇಕಾದರೂ ಸಂಪಾದಿಸಬಹುದಾದ ಮುಕ್ತ ಆನ್‌ಲೈನ್ ವಿಶ್ವಕೋಶ
ಯಾವುದೋ ವಿಷಯದ ಕುರಿತು ಗೂಗಲ್ ಸರ್ಚ್ ಮಾಡುವಾಗ ಬಹಳಷ್ಟು ಸಾರಿ ಅಲ್ಲಿ ಕಾಣುವ ಫಲಿತಾಂಶಗಳಲ್ಲಿ ವಿಕಿಪೀಡಿಯ ತಾಣಕ್ಕೆ ಅಗ್ರಸ್ಥಾನ ಇರುತ್ತದೆ. ಈ ವಿಕಿಪೀಡಿಯ ಎನ್ನುವುದೊಂದು ವಿಶ್ವಕೋಶ. ಹಿಂದೆ ಗ್ರಂಥಾಲಯದ ಕಪಾಟಿನಲ್ಲಿರುತ್ತಿದ್ದ ದೊಡ್ಡದೊಡ್ಡ ಪುಸ್ತಕಗಳ ರೂಪದ ವಿಶ್ವಕೋಶಕ್ಕೂ ವಿಕಿಪೀಡಿಯಕ್ಕೂ ಬಹಳ ವ್ಯತ್ಯಾಸವಿದೆ. ಇದು ಮುದ್ರಿತ ರೂಪದಲ್ಲಿಲ್ಲ ಮತ್ತು ಇದನ್ನು ಬಳಸಲು ಹಣ ಕೊಡಬೇಕಿಲ್ಲ ಎನ್ನುವುದು ಒಂದು ವ್ಯತ್ಯಾಸವಾದರೆ ಇದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು, ಅಲ್ಲಿರುವ ಮಾಹಿತಿಯನ್ನು ಉತ್ತಮಪಡಿಸಬಹುದು ಎನ್ನುವುದು ಇನ್ನೊಂದು ಮುಖ್ಯವಾದ ವ್ಯತ್ಯಾಸ. ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದ ಕೀರ್ತಿ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಅವರದ್ದು. ಕನ್ನಡವೂ ಸೇರಿದಂತೆ ಪ್ರಪಂಚದ ೨೫೦ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಅಂದಹಾಗೆ ವಿಕಿ ಎಂಬ ಶಬ್ದ ಹವಾಯಿ ಭಾಷೆಯದ್ದು. ಆ ಭಾಷೆಯಲ್ಲಿ ವಿಕಿ ಎಂದರೆ 'ಚುರುಕಾದ' ಅಥವಾ 'ಚಟುವಟಿಕೆಯ' ಎಂದು ಅರ್ಥವಂತೆ.

Wearable
ವೇರಬಲ್
(ರೂಪಿಸಬೇಕಿದೆ)
ವಾಚುಗಳು, ಕನ್ನಡಕ, ಆಭರಣ, ಬಟ್ಟೆ ಸೇರಿದಂತೆ ವಿವಿಧ ರೂಪಗಳಲ್ಲಿರಬಹುದಾದ, ಧರಿಸಬಹುದಾದ, ಕಂಪ್ಯೂಟರ್
ಈಗ ಎಲ್ಲೆಲ್ಲೂ ಕಂಪ್ಯೂಟರುಗಳೇ: ಕಚೇರಿಯಲ್ಲಿ, ಮನೆಯ ಮೇಜಿನ ಮೇಲೆ ಇರುವುದು ಸಾಲದೆಂದು ಈಗ ಕಾರಿನೊಳಗೂ ಕಂಪ್ಯೂಟರ್ ಇದೆ. ಮನೆಯ ಟೀವಿ - ಅಂಗೈಯ ಮೊಬೈಲುಗಳೂ ಕಂಪ್ಯೂಟರುಗಳಾಗಿಬಿಟ್ಟಿವೆ. ಇಷ್ಟೆಲ್ಲ ಆದಮೇಲೆ ನಮ್ಮ ಮೈಮೇಲೂ ಕಂಪ್ಯೂಟರುಗಳಿದ್ದರೆ ಏನು ತಪ್ಪು? ತಂತ್ರಜ್ಞಾನ ಜಗತ್ತಿನಲ್ಲಿ ಆಗಿಂದಾಗ್ಗೆ ಕೇಳಿಬರುವ 'ವೇರಬಲ್' ಅಥವಾ 'ವೇರಬಲ್ ಕಂಪ್ಯೂಟರ್' ಎನ್ನುವ ಹೆಸರು ಹೀಗೆ ಧರಿಸಬಹುದಾದ ಕಂಪ್ಯೂಟರುಗಳನ್ನು ಸೂಚಿಸುತ್ತದೆ. ವಾಚುಗಳು, ಕನ್ನಡಕ, ಆಭರಣ, ಬಟ್ಟೆ - ಹೀಗೆ ವೇರಬಲ್ ಕಂಪ್ಯೂಟರುಗಳು ಹಲವು ರೂಪಗಳಲ್ಲಿರುವುದು ಸಾಧ್ಯ. ವೇರಬಲ್ ಕಂಪ್ಯೂಟರುಗಳ ಪೈಕಿ ಸ್ಮಾರ್ಟ್‌ವಾಚುಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿವೆ. ಮೊಬೈಲಿಗೆ ಬರುವ ಕರೆಗಳ, ಇಮೇಲ್ ಮತ್ತಿತರ ಸಂದೇಶಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲದೆ ದೈಹಿಕ ಚಟುವಟಿಕೆಗಳ ಕುರಿತು (ಎಷ್ಟು ವ್ಯಾಯಾಮ ಮಾಡಿದ್ದೇವೆ, ಎಷ್ಟು ಹೊತ್ತು ನಿದ್ರಿಸಿದ್ದೇವೆ ಇತ್ಯಾದಿ) ಮಾಹಿತಿಯನ್ನೂ ನೀಡುವುದು ಈ ವಾಚುಗಳ ವೈಶಿಷ್ಟ್ಯ. ದೈಹಿಕ ಚಟುವಟಿಕೆಗಳ ಬಗೆಗಷ್ಟೇ ಗಮನಹರಿಸುವ ಫಿಟ್‌ನೆಸ್ ಟ್ರಾಕರ್‌ಗಳೆಂಬ (ನೋಡಲು ಕೈಗಡಿಯಾರದಂತೆಯೇ ಕಾಣುವ) ಸಾಧನಗಳೂ ಇವೆ. ಈ ಸಾಧನಗಳು ಮಾಡುವ ಕೆಲ ಕೆಲಸಗಳನ್ನು ಹೈಟೆಕ್ ಆಭರಣಗಳಿಗೆ - ಉಡುಪುಗಳಿಗೆ ವಹಿಸಿಕೊಡುವ ಪ್ರಯತ್ನಗಳೂ ನಡೆದಿವೆ. ಅಂದಹಾಗೆ ವೇರಬಲ್ ಕಂಪ್ಯೂಟರುಗಳು ವೈಯಕ್ತಿಕ ಬಳಕೆಗಷ್ಟೇ ಸೀಮಿತವೇನಲ್ಲ. ಕಾರ್ಖಾನೆ ತಪಾಸಣೆ, ಯಂತ್ರಗಳ ನಿರ್ವಹಣೆ, ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲೂ ಹಲಬಗೆಯ ವೇರಬಲ್ ಕಂಪ್ಯೂಟರುಗಳು ಬಳಕೆಯಾಗುತ್ತವೆ.

Wi-FI
ವೈ-ಫೈ
(ರೂಪಿಸಬೇಕಿದೆ)
ನಿಸ್ತಂತು ಅಂತರಜಾಲ ಸಂಪರ್ಕ
ವೈರು - ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ. ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ - ಟ್ಯಾಬ್ಲೆಟ್ - ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್ ಟೀವಿ - ಸ್ಮಾರ್ಟ್ ವಾಚ್ - ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ. ಅಂದಹಾಗೆ 'ವೈ-ಫೈ' ಹೆಸರಿನ ಹಿನ್ನೆಲೆ ಕುರಿತು ಕೊಂಚ ಗೊಂದಲವಿದೆ. 'ಹೈ-ಫೈ' ಎಲ್ಲರಿಗೂ ಪರಿಚಯವಿತ್ತಲ್ಲ, ಅದನ್ನೇ ಅನುಸರಿಸಿ ವೈ-ಫೈ ಎನ್ನುವ ಹೆಸರು ರೂಪಿಸಲಾಯಿತು ಎನ್ನುವುದನ್ನು ಅನೇಕರು ಒಪ್ಪುತ್ತಾರೆ. ಈ ತಂತ್ರಜ್ಞಾನ ಪರಿಚಯವಾದ ಹೊಸತರಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ 'ವೈರ್‌ಲೆಸ್ ಫಿಡೆಲಿಟಿ' ಎನ್ನುವ ಹೆಸರಿನ ಪ್ರಸ್ತಾಪವೂ ಇತ್ತು; 'ವೈ-ಫೈ' ಎನ್ನುವುದು ಅದೇ ಹೆಸರಿನ ಹ್ರಸ್ವರೂಪ ಎನ್ನುವುದು ಇನ್ನು ಕೆಲವರ ಅನಿಸಿಕೆ. ವೈರು - ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ. ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ - ಟ್ಯಾಬ್ಲೆಟ್ - ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್ ಟೀವಿ - ಸ್ಮಾರ್ಟ್ ವಾಚ್ - ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ. ಅಂದಹಾಗೆ 'ವೈ-ಫೈ' ಹೆಸರಿನ ಹಿನ್ನೆಲೆ ಕುರಿತು ಕೊಂಚ ಗೊಂದಲವಿದೆ. 'ಹೈ-ಫೈ' ಎಲ್ಲರಿಗೂ ಪರಿಚಯವಿತ್ತಲ್ಲ, ಅದನ್ನೇ ಅನುಸರಿಸಿ ವೈ-ಫೈ ಎನ್ನುವ ಹೆಸರು ರೂಪಿಸಲಾಯಿತು ಎನ್ನುವುದನ್ನು ಅನೇಕರು ಒಪ್ಪುತ್ತಾರೆ. ಈ ತಂತ್ರಜ್ಞಾನ ಪರಿಚಯವಾದ ಹೊಸತರಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ 'ವೈರ್‌ಲೆಸ್ ಫಿಡೆಲಿಟಿ' ಎನ್ನುವ ಹೆಸರಿನ ಪ್ರಸ್ತಾಪವೂ ಇತ್ತು; 'ವೈ-ಫೈ' ಎನ್ನುವುದು ಅದೇ ಹೆಸರಿನ ಹ್ರಸ್ವರೂಪ ಎನ್ನುವುದು ಇನ್ನು ಕೆಲವರ ಅನಿಸಿಕೆ.

Wireless Charging
ವೈರ್‌ಲೆಸ್ ಚಾರ್ಜಿಂಗ್
(ರೂಪಿಸಬೇಕಿದೆ)
ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ ಬಳಸಿ ವಿದ್ಯುನ್ಮಾನ ಸಾಧನಗಳನ್ನು ಚಾರ್ಜ್ ಮಾಡುವ ನಿಸ್ತಂತು ವ್ಯವಸ್ಥೆ
ನಮ್ಮ ಮೊಬೈಲ್ ಯಾವಾಗಲೂ ಸಕ್ರಿಯವಾಗಿರಬೇಕಾದರೆ ಅದರಲ್ಲಿ ಸಾಕಷ್ಟು ಚಾರ್ಜ್ ಇರುವಂತೆ ನೋಡಿಕೊಳ್ಳುವುದು ಅನಿವಾರ್ಯ. ಮೊಬೈಲನ್ನು ಚಾರ್ಜ್ ಮಾಡುವ ಮಾರ್ಗಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಒಂದು. ನಾವೆಲ್ಲ ಸಾಮಾನ್ಯವಾಗಿ ಮಾಡುವಂತೆ ಕೇಬಲ್‌ನ ಒಂದು ತುದಿಯನ್ನು ಚಾರ್ಜರಿಗೂ ಇನ್ನೊಂದನ್ನು ಮೊಬೈಲಿಗೂ ಚುಚ್ಚಿಡುವ ಬದಲು ಇಲ್ಲಿ ಪುಟ್ಟದೊಂದು ಫಲಕದ (ಚಾರ್ಜಿಂಗ್ ಪ್ಯಾಡ್) ಮೇಲೆ ಮೊಬೈಲನ್ನು ಇಟ್ಟರೆ ಸಾಕು, ಅದು ಚಾರ್ಜ್ ಆಗಲು ಶುರುವಾಗುತ್ತದೆ! ಅಡುಗೆಮನೆಯ ಆಧುನಿಕ ಒಲೆಯಂತೆ ಇಲ್ಲೂ ಬಳಕೆಯಾಗುವುದು ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ. ಇಂಡಕ್ಷನ್ ಒಲೆಯಲ್ಲಿ ಈ ವಿದ್ಯಮಾನ ಆಹಾರ ಪದಾರ್ಥಗಳನ್ನು ಬಿಸಿಮಾಡಿದರೆ ಮೊಬೈಲ್ ಚಾರ್ಜರಿನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಆದರೆ ನೆನಪಿಡಿ, ಎಲ್ಲ ಗ್ಯಾಜೆಟ್‌ಗಳನ್ನೂ ಈ ವಿಧಾನದ ಮೂಲಕ ಚಾರ್ಜ್ ಮಾಡುವಂತಿಲ್ಲ್ಲ; ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಮಾದರಿಗಳು ಮಾತ್ರವೇ ಹೀಗೆ ಚಾರ್ಜ್ ಆಗಬಲ್ಲವು. ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಬಳಸಿ ಇತರ ಸಾಧನಗಳನ್ನೂ ಚಾರ್ಜ್ ಮಾಡಲು ಕೆಲ ಹೆಚ್ಚುವರಿ ಸಲಕರಣೆಗಳು ಮಾರುಕಟ್ಟೆಯಲ್ಲಿ ಸಿಗುತ್ತವಾದರೂ ಅದನ್ನು ನಮ್ಮ ಜವಾಬ್ದಾರಿ ಹಾಗೂ ಎಚ್ಚರಿಕೆಯಲ್ಲೇ ಬಳಸಬೇಕು.

Wildcard
ವೈಲ್ಡ್‌ಕಾರ್ಡ್
(ರೂಪಿಸಬೇಕಿದೆ)
ಕಂಪ್ಯೂಟರಿಗೆ ನೀಡುವ ಆದೇಶದಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಅಕ್ಷರ - ಅಂಕಿ - ಲೇಖನಚಿಹ್ನೆಗಳನ್ನು ಪ್ರತಿನಿಧಿಸುವ ಚಿಹ್ನೆ
ಅರ್ಹತಾ ಸುತ್ತುಗಳಲ್ಲಿ ಭಾಗವಹಿಸದೆ ಸ್ಪರ್ಧೆಯ ಮುಂದಿನ ಹಂತಕ್ಕೆ ನೇರ ಪ್ರವೇಶ ಪಡೆಯುವವರಿಗೆ 'ವೈಲ್ಡ್ ಕಾರ್ಡ್' ಸ್ಪರ್ಧಿಗಳೆಂಬ ಹೆಸರಿರುವುದನ್ನು ನಾವು ಕೇಳಿರುತ್ತೇವೆ. ಕಂಪ್ಯೂಟರ್ ಜಗತ್ತಿನಲ್ಲಿ ಕೆಲ ಚಿಹ್ನೆಗಳನ್ನೂ ಈ ಹೆಸರಿನಿಂದ ಗುರುತಿಸಲಾಗುತ್ತದೆ. 'ವೈಲ್ಡ್‌ಕಾರ್ಡ್ ಕ್ಯಾರೆಕ್ಟರ್' ಎಂದು ಕರೆಸಿಕೊಳ್ಳುವ ಈ ಚಿಹ್ನೆಗಳು ಕಂಪ್ಯೂಟರಿಗೆ ನೀಡುವ ಆದೇಶದಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಅಕ್ಷರ - ಅಂಕಿ - ಲೇಖನಚಿಹ್ನೆಗಳನ್ನು ಪ್ರತಿನಿಧಿಸಬಲ್ಲವು. ನಿಮಗೆ 'notes' ಎಂಬ ಪದದಿಂದ ಪ್ರಾರಂಭವಾಗುವ ಹೆಸರುಳ್ಳ ಎಲ್ಲ ಕಡತಗಳನ್ನೂ ನೋಡಬೇಕಿದೆ ಎಂದುಕೊಳ್ಳೋಣ. ಸರ್ಚ್ ಪರದೆಯಲ್ಲಿ 'notes*' ಎಂದು ಟೈಪ್ ಮಾಡಿದರೆ ನಿಮ್ಮ ಕಂಪ್ಯೂಟರ್ ಅಂತಹ ಎಲ್ಲ ಕಡತಗಳನ್ನೂ (notes1.txt, notes-kannada.doc - ಹೀಗೆ) ಪಟ್ಟಿಮಾಡಿ ತೋರಿಸುತ್ತದೆ. ಇಲ್ಲಿ '*' ಎನ್ನುವುದು ಒಂದಕ್ಕಿಂತ ಹೆಚ್ಚಿನ ಸಂಭಾವ್ಯ ಅಕ್ಷರಗಳನ್ನು ಸೂಚಿಸುವ ವೈಲ್ಡ್‌ಕಾರ್ಡ್ ಕ್ಯಾರೆಕ್ಟರ್. ಇದನ್ನು ಗೂಗಲ್ ಸರ್ಚ್‌ನಲ್ಲೂ ಬಳಸುವುದು ಸಾಧ್ಯ - ಕಪ್ಪೆ ಅರಭಟ್ಟನ ಶಾಸನದ ಪಠ್ಯವನ್ನು '* ಕಲಿಗೆ * ವಿಪರೀತನ್' ಎಂದು ಬಿಟ್ಟಪದ ತುಂಬಿಸುವ ರೀತಿಯಲ್ಲಿ ಗೂಗಲಿಸಿದರೆ ವೈಲ್ಡ್‌ಕಾರ್ಡ್ ಕ್ಯಾರೆಕ್ಟರುಗಳ ಸ್ಥಳಕ್ಕೆ ಬರಬೇಕಾದ ಸರಿಯಾದ ಪದಗಳನ್ನು ('ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್') ಹುಡುಕಿಕೊಳ್ಳಬಹುದು. ಇದೇರೀತಿ ವಿವಿಧ ತಂತ್ರಾಂಶಗಳಲ್ಲಿ '?', '%' ಮುಂತಾದ ಚಿಹ್ನೆಗಳೂ ವೈಲ್ಡ್‌ಕಾರ್ಡ್ ಕ್ಯಾರೆಕ್ಟರ್‌ಗಳಾಗಿ ಬಳಕೆಯಾಗುತ್ತವೆ. ಈ ಪೈಕಿ '?' ಅನ್ನು ಒಂದು ಅಕ್ಷರದ ಬದಲಿಗೆ ಹಾಗೂ '%' ಅನ್ನು ಹೆಚ್ಚಿನ ಸಂಖ್ಯೆಯ ಅಕ್ಷರಗಳ ಬದಲಿಗೆ ('*'ನಂತೆ) ಬಳಸುವುದು ಸಂಪ್ರದಾಯ.

Wallet
ವ್ಯಾಲೆಟ್
(ರೂಪಿಸಬೇಕಿದೆ)
ಗ್ರಾಹಕರಿಂದ ಮುಂಚಿತವಾಗಿ ಹಣ ಪಡೆದು ಅದನ್ನು ನಿರ್ದಿಷ್ಟ ಸೇವೆಗಳಿಗೆ ಪ್ರತಿಯಾಗಿ ಬಳಸಲು ಅನುವುಮಾಡಿಕೊಡುವ ಆನ್‌ಲೈನ್ ವ್ಯವಸ್ಥೆ
ಗ್ರಾಹಕರಿಂದ ಮುಂಚಿತವಾಗಿಯೇ ಹಣ ಪಡೆದು ಅದು ಮುಗಿಯುವವರೆಗೂ ನಿರ್ದಿಷ್ಟ ಸೇವೆಗಳನ್ನು ಒದಗಿಸುವ ವ್ಯವಸ್ಥೆಯೇ ವ್ಯಾಲೆಟ್. ಜೇಬಿನಲ್ಲೋ ಬ್ಯಾಗಿನಲ್ಲೋ ಇಟ್ಟುಕೊಳ್ಳುವ ಪರ್ಸನ್ನು ವ್ಯಾಲೆಟ್ ಎಂದು ಕರೆಯುತ್ತೇವಲ್ಲ, ಇದೂ ಅಂತಹುದೇ ಪರ್ಸು; ಕಣ್ಣಿಗೆ ಕಾಣುವುದಿಲ್ಲ ಅಷ್ಟೆ! ಜಾಲತಾಣಗಳು ಹಾಗೂ ಮೊಬೈಲ್ ಆಪ್‌ಗಳ ಮೂಲಕ ಇವನ್ನು ಬಳಸಬಹುದು. ವ್ಯಾಲೆಟ್‌ಗಳಲ್ಲಿ ಹಲವು ವಿಧ. ನೀವು ಕೊಟ್ಟ ಹಣವನ್ನು ಒಂದೇ ಕಡೆ ಬಳಸಬೇಕು ಎನ್ನುವುದಾದರೆ ಅದನ್ನು 'ಕ್ಲೋಸ್ಡ್ (ಮುಚ್ಚಿದ) ವ್ಯಾಲೆಟ್' ಎಂದು ಕರೆಯುತ್ತಾರೆ. ಒಮ್ಮೆ ದುಡ್ಡು ಸೇರಿಸಿದರೆ ಅದನ್ನು ಹಲವೆಡೆ ಬಳಸುವುದು ಸಾಧ್ಯ ಎನ್ನುವುದಾದರೆ ಅದು 'ಸೆಮಿ-ಕ್ಲೋಸ್ಡ್ (ಅರೆಮುಚ್ಚಿದ) ವ್ಯಾಲೆಟ್'. ಇಂತಹ ವ್ಯಾಲೆಟ್‌ಗೆ ಸೇರಿಸಿದ ಹಣವನ್ನು ಒಂದಕ್ಕಿಂತ ಹೆಚ್ಚು ಸೇವೆಗಳಿಗೆ ಪಾವತಿಸಲು ಬಳಸಬಹುದು; ಆದರೆ ವಾಪಸ್ ಪಡೆಯುವಂತಿಲ್ಲ ಅಷ್ಟೇ. ವ್ಯಾಲೆಟ್‌ಗೆ ಸೇರಿಸಿದ ದುಡ್ಡನ್ನು ವಿವಿಧ ಸೇವೆಗಳಿಗೆ ಪಾವತಿಸಲು ಬಳಸುವ ಜೊತೆಗೆ ಅಗತ್ಯಬಿದ್ದಾಗ ಮರಳಿ ಪಡೆಯುವ ಆಯ್ಕೆಯೂ ಇದ್ದರೆ ಅಂತಹ ವ್ಯಾಲೆಟ್‌ಗಳನ್ನು 'ಓಪನ್ (ತೆರೆದ) ವ್ಯಾಲೆಟ್' ಎಂದು ಕರೆಯುತ್ತಾರೆ.

WHOIS
ಹೂಈಸ್
(ರೂಪಿಸಬೇಕಿದೆ)
ಯಾವುದೇ ಜಾಲತಾಣ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ - ಅವರ ಸಂಪರ್ಕ ವಿವರಗಳೇನು ಎನ್ನುವುದನ್ನೆಲ್ಲ ತಿಳಿಸುವ ವ್ಯವಸ್ಥೆ
ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ. ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ. ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ 'ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು 'ದಿ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್' (ಐಕ್ಯಾನ್) ಎಂಬ ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ. ಹೀಗೆ ಸಂಗ್ರಹವಾಗುತ್ತದಲ್ಲ ಮಾಹಿತಿ, ಅಂತರಜಾಲದ ಮುಕ್ತ ಸ್ವರೂಪಕ್ಕೆ ಅನುಗುಣವಾಗಿ ಅದನ್ನೂ ಮುಕ್ತವಾಗಿ ತೆರೆದಿಡಲಾಗುತ್ತದೆ. ಅಂದರೆ, ಯಾವುದೇ ಜಾಲತಾಣ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ - ಅವರ ಸಂಪರ್ಕ ವಿವರಗಳೇನು ಎನ್ನುವುದನ್ನೆಲ್ಲ ಯಾರು ಬೇಕಾದರೂ ತಿಳಿಯುವುದು ಸಾಧ್ಯ. ಈ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆಯೇ 'ಹೂ ಈಸ್' (WHOIS). ಐಕ್ಯಾನ್ ಸಂಸ್ಥೆ ನಿರ್ವಹಿಸುವ whois.icann.orgಗೆ ಭೇಟಿನೀಡಿ ಅಲ್ಲಿ ನಾವು ತಿಳಿಯಬೇಕೆಂದಿರುವ ತಾಣದ ವಿಳಾಸ ದಾಖಲಿಸಿದರೆ ಸಾಕು, ಅದರ ನೋಂದಣಿ ಕುರಿತ ವಿವರಗಳನ್ನು ಪಡೆದುಕೊಳ್ಳುವುದು ಸಾಧ್ಯ. ಹೀಗೆ ದೊರಕುವ ಮಾಹಿತಿಯನ್ನು ಸ್ಪಾಮ್ ಸಂದೇಶಗಳನ್ನು ಕಳಿಸಲು, ಫಿಶಿಂಗ್ ಪ್ರಯತ್ನಗಳನ್ನು ನಡೆಸಲು ಬಳಸುವ ಸಾಧ್ಯತೆ ಇರುತ್ತದಲ್ಲ, ಹಾಗಾಗಿ ಹೂ ಈಸ್ ಜಾಲತಾಣದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆಯ ಮೂಲಕ ನಮ್ಮ ಖಾಸಗಿ ಮಾಹಿತಿ ಎಲ್ಲರಿಗೂ ಕಾಣದಂತೆ ಮಾಡುವ 'ಡೊಮೈನ್ ಪ್ರೈವಸಿ' ಸೌಲಭ್ಯವನ್ನೂ ಹಲವು ರಿಜಿಸ್ಟ್ರಾರ್‌ಗಳು ಪರಿಚಯಿಸಿದ್ದಾರೆ (ಬಹಳಷ್ಟು ಸಾರಿ ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ).


logo