logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

QR Code
ಕ್ಯೂಆರ್ ಕೋಡ್
(ರೂಪಿಸಬೇಕಿದೆ)
ಕ್ವಿಕ್ ರೆಸ್ಪಾನ್ಸ್ ಕೋಡ್; ಹಲವು ಬಗೆಯ ಮಾಹಿತಿಯನ್ನು ಪ್ರತಿನಿಧಿಸಬಲ್ಲ ಚೌಕಾಕಾರದ ಸಂಕೇತ. ಎರಡು ಆಯಾಮದ ಬಾರ್‌ಕೋಡ್.
"ಹೆಚ್ಚಿನ ಮಾಹಿತಿಗಾಗಿ ಈ ಸಂಕೇತವನ್ನು ಸ್ಕ್ಯಾನ್ ಮಾಡಿ" ಎನ್ನುವ ಸಂದೇಶದ ಜೊತೆಗೆ ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕಗಳು ಮುದ್ರಿತವಾಗಿರುವುದನ್ನು ನಾವು ಬಹಳಷ್ಟು ಕಡೆ ನೋಡುತ್ತೇವಲ್ಲ, ಆ ಸಂಕೇತದ ಹೆಸರು ಕ್ಯೂಆರ್ ಕೋಡ್. ಇಲ್ಲಿ ಕ್ಯೂಆರ್ ಎನ್ನುವುದು 'ಕ್ವಿಕ್ ರೆಸ್ಪಾನ್ಸ್' ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತಿರುತ್ತೇವೆ. ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ. ಬಾರ್‌ಕೋಡ್‌ಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ತನ್ನೊಳಗೆ ಇಟ್ಟುಕೊಂಡಿರುವುದು ಈ ಸಂಕೇತಗಳ ಹೆಚ್ಚುಗಾರಿಕೆ. ಅಂಗಡಿಯಲ್ಲಿಟ್ಟ ವಸ್ತುಗಳ ವಿವರಣಾ ಚೀಟಿಯಿಂದ ಪ್ರಾರಂಭಿಸಿ ಜಾಹೀರಾತುಗಳವರೆಗೆ ಕ್ಯೂಆರ್ ಕೋಡ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಜಾಲತಾಣಗಳ ವಿಳಾಸವನ್ನು ಸೂಚಿಸಲೂ ಇವನ್ನು ಬಳಸಬಹುದು. ನಮ್ಮ ಸಂಪರ್ಕ ವಿವರಗಳನ್ನು - ಇಮೇಲ್, ವೆಬ್‌ಸೈಟ್, ದೂರವಾಣಿ ಸಂಖ್ಯೆ ಇತ್ಯಾದಿ - ಪ್ರತಿನಿಧಿಸಲು ಕ್ಯೂಆರ್ ಕೋಡ್ ರೂಪಿಸಿಕೊಂಡು ಅದನ್ನು ನಮ್ಮ ವಿಸಿಟಿಂಗ್ ಕಾರ್ಡಿನಲ್ಲಿ ಮುದ್ರಿಸಿಕೊಳ್ಳುವುದೂ ಸಾಧ್ಯ (ಕ್ಯೂಆರ್ ಕೋಡ್ ರೂಪಿಸಿಕೊಡುವ ಅನೇಕ ಉಚಿತ ಸವಲತ್ತುಗಳು ವಿಶ್ವವ್ಯಾಪಿ ಜಾಲದಲ್ಲಿವೆ). ಕ್ಯೂಆರ್ ಕೋಡ್‌ಗಳು ಮೊದಲ ಬಾರಿ ಬಳಕೆಯಾದದ್ದು ಆಟೊಮೊಬೈಲ್ ಕ್ಷೇತ್ರದಲ್ಲಿ. ಇದರಲ್ಲಿ ಅಡಕವಾಗಿರುವ ಮಾಹಿತಿಯನ್ನು ಓದಲು ಮೊದಲಿಗೆ ಕ್ಯೂಆರ್ ಕೋಡ್ ರೀಡರ್ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲ ಸ್ಮಾರ್ಟ್‌ಫೋನುಗಳಲ್ಲೂ ಕ್ಯಾಮೆರಾ ಬಳಸಿ ಈ ಸಂಕೇತಗಳನ್ನು ಗುರುತಿಸುವ ತಂತ್ರಾಂಶ ಲಭ್ಯವಿರುವುದರಿಂದ ಪ್ರತ್ಯೇಕ ಉಪಕರಣದ ಆವಶ್ಯಕತೆ ಇಲ್ಲ (ಕ್ಯೂಆರ್ ಕೋಡ್ ಸ್ಕ್ಯಾನರ್ ತಂತ್ರಾಂಶವನ್ನು ನಿಮ್ಮ ಮೊಬೈಲಿನ ಆಪ್ ಸ್ಟೋರಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು).
">

QWERTY
ಕ್ವರ್ಟಿ
(ರೂಪಿಸಬೇಕಿದೆ)
ಸದ್ಯ ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಾಗುವ ಇಂಗ್ಲಿಷ್ ಕೀಲಿಮಣೆಗಳಲ್ಲಿರುವ ಕೀಲಿಗಳ ವಿನ್ಯಾಸವನ್ನು ಸೂಚಿಸುವ ಹೆಸರು
ಕಂಪ್ಯೂಟರಿನ ಕೀಬೋರ್ಡ್ ನಮಗೆಲ್ಲ ಗೊತ್ತು. ಇಂಗ್ಲಿಷ್ ಅಕ್ಷರ 'ಎ' ಪಕ್ಕದಲ್ಲಿ 'ಎಸ್', 'ಬಿ'-'ಸಿ'ಗಳ ನಡುವೆ 'ವಿ', 'ಡಿ' ನಂತರ 'ಎಫ್' - ಹೀಗೆ ಇಲ್ಲಿನ ಕೀಲಿಗಳ ಜೋಡಣೆ ತೀರಾ ವಿಚಿತ್ರ ಎನ್ನುವುದೂ ನಮ್ಮ ಗಮನಕ್ಕೆ ಬಂದಿರುತ್ತದೆ. ಕೀಲಿಮಣೆಯ ಮೊದಲ ಸಾಲಿನಲ್ಲಿ ಕಾಣುವ Q - W - E - R - T - Y ಯಂತೂ ಎಷ್ಟು ಪರಿಚಿತವೆಂದರೆ ಕೀಲಿಮಣೆಗಳನ್ನು 'ಕ್ವರ್ಟಿ ಕೀಬೋರ್ಡ್'ಗಳೆಂದು ಕರೆಯುವ ಅಭ್ಯಾಸವೇ ಬೆಳೆದುಬಂದಿದೆ. ಈ ಜೋಡಣೆ ಮೊದಲಿಗೆ ಕಾಣಿಸಿಕೊಂಡದ್ದು ಟೈಪ್‌ರೈಟರುಗಳಲ್ಲಿ, ಸುಮಾರು ಎರಡು ಶತಮಾನಕ್ಕೂ ಹಿಂದೆ! ಇದನ್ನು ರೂಪಿಸಿದ ಶ್ರೇಯ ಕ್ರಿಸ್ಟೋಫರ್ ಶೋಲ್ಸ್ (೧೮೧೯ - ೧೮೯೦) ಎಂಬಾತನಿಗೆ ಸಲ್ಲುತ್ತದೆ. ಟೈಪ್‌ರೈಟರಿನಲ್ಲಿ ಟೈಪಿಸುವಾಗ ಅಕ್ಷರದ ಅಚ್ಚುಗಳು ಒಂದಕ್ಕೊಂದು ಸಿಕ್ಕಿಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಅವನು ಈ ವಿನ್ಯಾಸ ರೂಪಿಸಿದನಂತೆ. ಜೊತೆಯಾಗಿ ಬಳಕೆಯಾಗುವ ಅಕ್ಷರಗಳು ಪರಸ್ಪರ ದೂರದಲ್ಲಿರುವಂತೆ ನೋಡಿಕೊಳ್ಳಲು ಅವನು ರೂಪಿಸಿದ ಸೂತ್ರವೇ ಕ್ವರ್ಟಿ. ಈ ಜೋಡಣೆ ಬಳಸಿದ ಟೈಪ್‌ರೈಟರ್ ವಿನ್ಯಾಸಕ್ಕೆ ಪೇಟೆಂಟ್ ದೊರೆತದ್ದು ೧೮೬೮ರಲ್ಲಿ. ಈ ವಿನ್ಯಾಸ ಟೈಪ್‌ರೈಟರುಗಳಲ್ಲಿ ಅದೆಷ್ಟು ಜನಪ್ರಿಯವಾಯಿತೆಂದರೆ ನಂತರದ ದಿನಗಳಲ್ಲಿ ಬಂದ ಕಂಪ್ಯೂಟರುಗಳೂ ಇದೇ ವಿನ್ಯಾಸವನ್ನು ಬಳಸಿದವು. ಟೈಪ್‌ರೈಟರುಗಳೊಡನೆ ದೂರದ ಸಂಬಂಧವೂ ಇರದ, ಭೌತಿಕ ಕೀಲಿಮಣೆಯೇ ಇಲ್ಲದ ಸ್ಮಾರ್ಟ್‌ಫೋನುಗಳಲ್ಲೂ ಈ ವಿನ್ಯಾಸ ಬಳಕೆಯಲ್ಲಿದೆ.


logo