logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Onsite
ಆನ್‌ಸೈಟ್
(ರೂಪಿಸಬೇಕಿದೆ)
ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಉದ್ಯೋಗಿಗಳು ತಮ್ಮ ಗ್ರಾಹಕರ ಕಚೇರಿಯಲ್ಲೇ ಕುಳಿತು ಅವರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಪರಿಕಲ್ಪನೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರ ಪರಿಚಯವಿದ್ದರೆ ನೀವು 'ಆನ್‌ಸೈಟ್' ಎಂಬ ಪದವನ್ನು ಕೇಳಿರುವ ಸಾಧ್ಯತೆ ಹೆಚ್ಚು. 'ಆನ್‌ಸೈಟ್' ಹೆಸರಿನಲ್ಲಿ ವಿದೇಶಕ್ಕೆ ಹಾರುವವರನ್ನೂ ನೀವು ನೋಡಿರಬಹುದು. ಈ ಪದ ಮೂಲತಃ ಐಟಿ ಕ್ಷೇತ್ರದ್ದೇನಲ್ಲ; ಮಾಹಿತಿ ತಂತ್ರಜ್ಞಾನ ಕೆಲಸಗಳ ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಸಂದರ್ಭದಲ್ಲಿ ಐಟಿ ಕ್ಷೇತ್ರವನ್ನು ಪ್ರವೇಶಿಸಿದ ಪದ ಇದು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅವರ ಕಚೇರಿಯಲ್ಲೇ ಕೆಲಸ ನಡೆಯುವ ಸನ್ನಿವೇಶವನ್ನು ಇದು ಪ್ರತಿನಿಧಿಸುತ್ತದೆ. ವಾರಂಟಿ ಅವಧಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆಗೆ ತಂತ್ರಜ್ಞರು ನಮ್ಮ ಮನೆಗೇ ಬರುವ ಸೇವೆಯನ್ನು 'ಆನ್‌ಸೈಟ್ ವಾರಂಟಿ' ಎಂದು ಕರೆಯುತ್ತಾರಲ್ಲ, ಇದೂ ಹಾಗೆಯೇ. ಹಿಂದೆ ಆನ್‌ಸೈಟ್ ಕೆಲಸ ಬಹುತೇಕ ವಿದೇಶಗಳಲ್ಲೇ ನಡೆಯುತ್ತಿತ್ತು; ಆದರೆ ಬದಲಾದ ಸನ್ನಿವೇಶದಲ್ಲಿ ಬನಶಂಕರಿಯಲ್ಲಿನ ಕಚೇರಿ ಉದ್ಯೋಗಿಗಳು ಹೊಸೂರು ರಸ್ತೆಯಲ್ಲಿರುವ ಗ್ರಾಹಕರ ಕಚೇರಿಗೆ ಆನ್‌ಸೈಟ್ ಹೋಗುವುದು ಅಪರೂಪವೇನೂ ಅಲ್ಲ. ಇದರ ಬದಲು ಗ್ರಾಹಕರಿಂದ ಕೆಲಸವನ್ನಷ್ಟೇ ಪಡೆದುಕೊಂಡು ಅದನ್ನು ಬೇರೆಡೆ ಇರುವ ತಮ್ಮ ಕಚೇರಿಯಿಂದ ನಿರ್ವಹಿಸುವುದನ್ನು 'ಆಫ್‌ಶೋರ್' (ಕಡಲದಂಡೆಯ ಆಚೆ) ಎಂದು ಗುರುತಿಸುತ್ತಾರೆ. ಸಮುದ್ರ ದಡದಿಂದ ದೂರ ಸಮುದ್ರದಲ್ಲಿ ನಡೆಯುವ ತೈಲ ಅನ್ವೇಷಣೆಯ ಕೆಲಸವನ್ನು ಈ ಪದ ಮೂಲತಃ ಪ್ರತಿನಿಧಿಸುತ್ತಿತ್ತಂತೆ. ವಿದೇಶಿ ಕೆಲಸಗಳ ಹೊರಗುತ್ತಿಗೆಯ ಬಹುಪಾಲು ಭಾರತದಂತಹ ದೇಶಗಳಿಗೆ ಬರುತ್ತಿದ್ದುದೇ ಐಟಿ ಕ್ಷೇತ್ರದಲ್ಲಿ ಈ ಪ್ರಯೋಗ ಪ್ರಾರಂಭವಾದುದರ ಮೂಲ ಎನ್ನಬಹುದು. ಒಂದೇ ದೇಶದಲ್ಲಿ, ಆದರೆ ಕಡಿಮೆ ಖರ್ಚಿನ ಬೇರೆ ಊರಿನಲ್ಲಿ ನಡೆಯುವ ಕೆಲಸಗಳನ್ನು 'ಆನ್‌ಶೋರ್' ಹಾಗೂ ಸಮೀಪದಲ್ಲೇ ಇರುವ (ಸರಿಸುಮಾರು ಅದೇ ಕಾಲಮಾನ ಬಳಸುವ) ಮತ್ತೊಂದು ದೇಶದಲ್ಲಿ ನಡೆಯುವ ಕೆಲಸಗಳನ್ನು 'ನಿಯರ್‌ಶೋರ್' ಎಂದು ಗುರುತಿಸುವ ಅಭ್ಯಾಸವೂ ಇದೆ.

Operating System
ಆಪರೇಟಿಂಗ್ ಸಿಸ್ಟಂ
ಕಾರ್ಯಾಚರಣ ವ್ಯವಸ್ಥೆ
ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ವ್ಯವಸ್ಥೆ
ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಮುಂತಾದ ಯಾವುದೇ ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ವ್ಯವಸ್ಥೆಯನ್ನು ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣ ವ್ಯವಸ್ಥೆ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ವಿಂಡೋಸ್ - ಲಿನಕ್ಸ್, ಮೊಬೈಲಿನ ಆಂಡ್ರಾಯ್ಡ್ - ಐಓಎಸ್‌ಗಳೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ. ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಅವನ್ನೆಲ್ಲ ಬಳಸಿ ಯಾವ ಕೆಲಸ ಮಾಡಬೇಕೆಂದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು. ಕಂಪ್ಯೂಟರಿನ ಉದಾಹರಣೆ ತೆಗೆದುಕೊಂಡರೆ ನಾವು ಸ್ವಿಚ್ ಒತ್ತಿದಾಗ ಅದು ಮೊದಲಿಗೆ ಪ್ರಾರಂಭಿಸುವುದು ಈ ಕಾರ್ಯಾಚರಣ ವ್ಯವಸ್ಥೆಯನ್ನೇ ('ಬೂಟ್' ಮಾಡುವುದು ಎನ್ನುವುದು ಇದಕ್ಕೇ). ಒಮ್ಮೆ ಕಂಪ್ಯೂಟರ್ ಬೂಟ್ ಆದಮೇಲೆ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಕಾರ್ಯಾಚರಣ ವ್ಯವಸ್ಥೆಯ ಸಹಾಯ ಬೇಕು. ಬೇರೆ ತಂತ್ರಾಂಶಗಳನ್ನು ತೆರೆಯಲು, ಅವುಗಳನ್ನು ಬಳಸಿ ಕೆಲಸಮಾಡಲು, ಮಾಡಿದ ಕೆಲಸವನ್ನು ಉಳಿಸಿಡಲು, ಕಡೆಗೆ ಹೊಸ ತಂತ್ರಾಂಶಗಳನ್ನು ರೂಪಿಸಲಿಕ್ಕೂ ಈ ವ್ಯವಸ್ಥೆ ಸಹಾಯಮಾಡುತ್ತದೆ.

Optical Media
ಆಪ್ಟಿಕಲ್ ಮೀಡಿಯಾ
(ರೂಪಿಸಬೇಕಿದೆ)
ಮಾಹಿತಿಯನ್ನು ಉಳಿಸಿಡಲು - ಮತ್ತೆ ಓದಲು ಬೆಳಕಿನ ಕಿರಣಗಳನ್ನು ಬಳಸುವ ಸಿ.ಡಿ., ಡಿವಿಡಿ ಮುಂತಾದ ಸಾಧನಗಳು
ಕಂಪ್ಯೂಟರ್ ಲೋಕದಲ್ಲಿ ಮಾಹಿತಿ ಶೇಖರಣೆಗೆ ಬಳಸುವ ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಸಿ.ಡಿ., ಡಿವಿಡಿ ಮುಂತಾದ ಸಾಧನಗಳನ್ನು ಸ್ಟೋರೇಜ್ ಮೀಡಿಯಾ ಎಂದು ಗುರುತಿಸುವ ಅಭ್ಯಾಸವಿದೆ. ಸಾಮಾನ್ಯ ಬಳಕೆಯಲ್ಲಿ ಈ ಹೆಸರನ್ನು 'ಮೀಡಿಯಾ' ಎಂದು ಹ್ರಸ್ವಗೊಳಿಸಿ ಬಳಸಲಾಗುತ್ತದೆ. ಬೇರೆಬೇರೆ ರೀತಿಯ ಶೇಖರಣಾ ಸಾಧನಗಳು ಬೇರೆಬೇರೆ ತಂತ್ರಜ್ಞಾನಗಳನ್ನು ಬಳಸುತ್ತವೆ. ಈ ಪೈಕಿ ಮಾಹಿತಿಯನ್ನು ಉಳಿಸಿಡಲು - ಮತ್ತೆ ಓದಲು ಬೆಳಕಿನ ಕಿರಣಗಳನ್ನು ಬಳಸುವ ಸಾಧನಗಳನ್ನು 'ಆಪ್ಟಿಕಲ್ ಮೀಡಿಯಾ' ಎಂದು ಕರೆಯುತ್ತಾರೆ (ಆಪ್ಟಿಕಲ್ = ಬೆಳಕಿಗೆ ಸಂಬಂಧಿಸಿದ). ಸಿ.ಡಿ., ಡಿವಿಡಿ, ಬ್ಲೂರೇ ಡಿಸ್ಕ್ ಮುಂತಾದ ಎಲ್ಲ ಸಾಧನಗಳೂ ಆಪ್ಟಿಕಲ್ ಮೀಡಿಯಾ ಗುಂಪಿಗೆ ಸೇರುತ್ತವೆ. ವಿಶೇಷ ಲೇಪನವಿರುವ ಪ್ಲಾಸ್ಟಿಕ್ಕಿನ ತಟ್ಟೆಯ ಮೇಲೆ ಲೇಸರ್ ಕಿರಣಗಳ ಸಹಾಯದಿಂದ ಮಾಹಿತಿಯನ್ನು ಉಳಿಸಿಡುವುದು, ಮತ್ತೆ ಅದೇ ಕಿರಣಗಳ ಸಹಾಯದಿಂದ ಮಾಹಿತಿಯನ್ನು ಓದುವುದು ಈ ಸಾಧನಗಳ ವೈಶಿಷ್ಟ್ಯ. ಇವುಗಳನ್ನು ಆಪ್ಟಿಕಲ್ ಡಿಸ್ಕ್‌ಗಳೆಂದೂ ಕರೆಯಲಾಗುತ್ತದೆ. ಆಪ್ಟಿಕಲ್ ಡಿಸ್ಕ್‌ಗಳಿಗೆ ಮಾಹಿತಿ ಸೇರಿಸಲು - ಅವುಗಳಲ್ಲಿರುವ ಮಾಹಿತಿಯನ್ನು ಓದಲು ನೆರವಾಗುವ ಸಾಧನಗಳನ್ನು 'ಆಪ್ಟಿಕಲ್ ಡ್ರೈವ್'ಗಳೆಂದು ಕರೆಯುತ್ತಾರೆ. ಕಂಪ್ಯೂಟರಿನಲ್ಲಷ್ಟೇ ಅಲ್ಲ, ಡಿವಿಡಿ-ಬ್ಲೂರೇ ಪ್ಲೇಯರುಗಳಲ್ಲೂ ಇವು ಬಳಕೆಯಾಗುತ್ತವೆ. ಪೆನ್‌ಡ್ರೈವ್‌ನಂತಹ ಫ್ಲ್ಯಾಶ್ ಮೆಮೊರಿ ಆಧರಿತ ಸಾಧನಗಳು, ಎಕ್ಸ್‌ಟರ್ನಲ್ ಹಾರ್ಡ್ ಡಿಸ್ಕ್‌ಗಳು ಹಾಗೂ ಕ್ಲೌಡ್ ಆಧರಿತ ಆನ್‌ಲೈನ್ ಶೇಖರಣಾ ಸೇವೆಗಳ ಜನಪ್ರಿಯತೆ ಹೆಚ್ಚಿದಂತೆ ಆಪ್ಟಿಕಲ್ ಡಿಸ್ಕ್‌ಗಳ ಬಳಕೆ ನಿಧಾನಕ್ಕೆ ಕಡಿಮೆಯಾಗುತ್ತಿದೆ.

OEM
ಓಇಎಮ್
ಸಲಕರಣೆಯ ಮೂಲ ಉತ್ಪಾದಕ
ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರರ್; ಬೇರೊಂದು ಸಂಸ್ಥೆಯ ಉತ್ಪನ್ನದಲ್ಲಿ ಬಳಸಲು ನಿರ್ದಿಷ್ಟ ಭಾಗಗಳನ್ನು ತಯಾರಿಸಿಕೊಡುವ ಸಂಸ್ಥೆ
ಇಂದಿನ ವಿದ್ಯುನ್ಮಾನ ಉಪಕರಣಗಳೆಲ್ಲ ರೂಪುಗೊಳ್ಳುವುದು ಭಾರೀ ಸಂಖ್ಯೆಯ ಬಿಡಿಭಾಗಗಳ ಜೋಡಣೆಯಿಂದ. ಈ ಬಿಡಿಭಾಗಗಳೆಲ್ಲ ಅದೆಷ್ಟು ಸಂಕೀರ್ಣವಾಗಿರುತ್ತವೆ ಎಂದರೆ ಅವನ್ನೆಲ್ಲ ಒಂದೇ ಸಂಸ್ಥೆ ತಯಾರಿಸುವುದು ಹೆಚ್ಚೂಕಡಿಮೆ ಅಸಾಧ್ಯವೇ ಎನ್ನಬೇಕು. ಹಾಗಾಗಿಯೇ ಇಂತಹ ಯಾವುದೇ ಉತ್ಪನ್ನದ ನಿರ್ಮಾತೃ ಎಂದು ಒಂದೇ ಸಂಸ್ಥೆಯ ಹೆಸರಿದ್ದರೂ ಆ ಉತ್ಪನ್ನದೊಳಗಿರುವ ವಿವಿಧ ಭಾಗಗಳನ್ನು ಬೇರೆಬೇರೆ ಸಂಸ್ಥೆಗಳು ತಯಾರಿಸಿರುವುದು ಸಾಮಾನ್ಯ ಸಂಗತಿ. ಮೊಬೈಲ್ ಫೋನಿನ ಉದಾಹರಣೆಯನ್ನೇ ತೆಗೆದುಕೊಂಡರೆ ಬೇರೆಬೇರೆ ಸಂಸ್ಥೆಗಳು ನಿರ್ಮಿಸಿದ ಪ್ರಾಸೆಸರ್, ಕ್ಯಾಮೆರಾ, ಸ್ಪೀಕರುಗಳನ್ನೆಲ್ಲ ತೆಗೆದುಕೊಂಡು ಒಟ್ಟುಸೇರಿಸಿ ಇನ್ನೊಂದು ಸಂಸ್ಥೆ ಮೊಬೈಲನ್ನು ತಯಾರಿಸುತ್ತದೆ. ಕಂಪ್ಯೂಟರು-ಕ್ಯಾಮೆರಾ-ಟೀವಿಗಳಲ್ಲೂ ಅಷ್ಟೇ, ಅವುಗಳ ನಿರ್ದಿಷ್ಟ ಭಾಗಗಳನ್ನು ತಯಾರಿಸುವುದನ್ನಷ್ಟೇ ತಮ್ಮ ಕೆಲಸವಾಗಿಟ್ಟುಕೊಂಡ ಅನೇಕ ಸಂಸ್ಥೆಗಳಿವೆ. ಹೀಗೆ ಬೇರೊಂದು ಸಂಸ್ಥೆಯ ಉತ್ಪನ್ನದಲ್ಲಿ ಬಳಸಲು ನಿರ್ದಿಷ್ಟ ಭಾಗಗಳನ್ನು ತಯಾರಿಸಿಕೊಡುವ ಸಂಸ್ಥೆಗಳನ್ನು ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರರ್ (ಸಲಕರಣೆಯ ಮೂಲ ಉತ್ಪಾದಕ) ಅಥವಾ 'ಓಇಎಮ್' ಎಂದು ಕರೆಯುತ್ತಾರೆ. ಉದಾಹರಣೆಗೆ ಎಬಿಸಿ ಎನ್ನುವ ಸಂಸ್ಥೆಯ ಮೊಬೈಲಿನಲ್ಲಿ ಎಕ್ಸ್ ಎನ್ನುವ ಸಂಸ್ಥೆಯ ಕ್ಯಾಮೆರಾ ಬಳಕೆಯಾಗಿದ್ದರೆ ಎಕ್ಸ್ ಸಂಸ್ಥೆಯನ್ನು ಓಇಎಮ್ ಎಂದು ಗುರುತಿಸಲಾಗುತ್ತದೆ. ಅಂದಹಾಗೆ ಓಇಎಮ್ ಪರಿಕಲ್ಪನೆ ಬಳಕೆಯಲ್ಲಿರುವುದು ವಿದ್ಯುನ್ಮಾನ ಕ್ಷೇತ್ರದಲ್ಲಷ್ಟೇ ಅಲ್ಲ, ಯಂತ್ರೋಪಕರಣ - ವಾಹನ ಮುಂತಾದ ಇನ್ನೂ ಹಲವಾರು ಸಾಧನಗಳ ನಿರ್ಮಾಣದಲ್ಲೂ ಓಇಎಮ್‌ಗಳ ನೆರವು ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ.

OFC
ಓಎಫ್‌ಸಿ
(ರೂಪಿಸಬೇಕಿದೆ)
ಆಪ್ಟಿಕಲ್ ಫೈಬರ್ ಕೇಬಲ್; ಅತಿವೇಗದ ಮಾಹಿತಿ ಸಂವಹನದಲ್ಲಿ ಬಳಕೆಯಾಗುವ ಈ ಕೇಬಲ್ಲುಗಳೊಳಗೆ ಆಪ್ಟಿಕಲ್ ಫೈಬರ್‌ಗಳೆಂಬ ಗಾಜಿನ ಎಳೆಗಳು ಇರುತ್ತವೆ.
ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗೆ ಆಪ್ಟಿಕಲ್ ಫೈಬರ್ ಕೇಬಲ್ಲುಗಳಿರುತ್ತವೆ, ಮತ್ತು ಇಂತಹ ಪ್ರತಿಯೊಂದು ಕೇಬಲ್ಲಿನೊಳಗೂ ಒಂದಷ್ಟು ಆಪ್ಟಿಕಲ್ ಫೈಬರ್‌ಗಳಿರುತ್ತವೆ. ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ರೂಪುಗೊಳ್ಳುವ ಎಳೆಗಳು ಅವು. ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಬೆಳಕಿನ ಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ರವಾನಿಸುವುದು ಸಾಧ್ಯ. ಹೀಗೆ ರವಾನಿಸಲಾದ ಮಾಹಿತಿ ಸುಲಭವಾಗಿ ಅನೇಕ ಕಿಲೋಮೀಟರುಗಳಷ್ಟು ದೂರ ಕ್ರಮಿಸಬಲ್ಲದು. ಆಪ್ಟಿಕಲ್ ಫೈಬರ್ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಈ ಎಳೆಯೊಳಗೇ ಸಂಪೂರ್ಣವಾಗಿ ಪ್ರತಿಫಲಿತವಾಗುತ್ತವೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ತೀರಾ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಹೆಚ್ಚಾಗಿರುತ್ತದೆ. ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ.

OTA
ಓಟಿಎ
(ರೂಪಿಸಬೇಕಿದೆ)
ಓವರ್ ದಿ ಏರ್; ಮೊಬೈಲಿನಂತಹ ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ತಂತ್ರಾಂಶಗಳನ್ನು ಕಂಪ್ಯೂಟರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ಗೊಡವೆಯಿಲ್ಲದೆ ನೇರವಾಗಿ ಅಪ್‌ಡೇಟ್ ಮಾಡಿಕೊಳ್ಳುವ ಸುಲಭ ವಿಧಾನ
ಒಂದು ಕಾಲವಿತ್ತು, ಯಾವುದೋ ತಂತ್ರಾಂಶವನ್ನು ಅಪ್‌ಡೇಟ್ ಮಾಡಬೇಕೆಂದರೆ ಗೆಳೆಯರಿಂದ ಸೀಡಿ ಕಡತರಬೇಕಿತ್ತು - ಇಲ್ಲವೇ - ಹೊಸ ಆವೃತ್ತಿಗೆ ಕಾದು ಅದನ್ನು ಡೌನ್‌ಲೋಡ್ ಮಾಡಿ ಬಳಸಬೇಕಿತ್ತು. ಈ ವಿಧಾನ ಕಂಪ್ಯೂಟರುಗಳಲ್ಲಿ ಕೊಂಚಮಟ್ಟಿಗೆ ಸರಿಯೆನಿಸಬಹುದಾದರೂ ಮೊಬೈಲಿನ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಅಷ್ಟೇನೂ ಸೂಕ್ತವೆನಿಸುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಮಾರ್ಗವೇ ಓಟಿಎ, ಅಂದರೆ 'ಓವರ್ ದಿ ಏರ್'. ಮೊಬೈಲಿನ ತಂತ್ರಾಂಶಗಳನ್ನು ಕಂಪ್ಯೂಟರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ಗೊಡವೆಯಿಲ್ಲದೆ ಅಪ್‌ಡೇಟ್ ಮಾಡಿಕೊಳ್ಳುವ ಸುಲಭ ವಿಧಾನ ಇದು. ಸ್ಮಾರ್ಟ್‌ಫೋನಿನ ಕಾರ್ಯಾಚರಣ ವ್ಯವಸ್ಥೆಗೆ ಆಗಿಂದಾಗ್ಗೆ ಅಪ್‌ಡೇಟ್‌ಗಳು ಬರುತ್ತಿರುತ್ತವಲ್ಲ, ಅವು ಇದೇ ವಿಧಾನವನ್ನು ಬಳಸುತ್ತವೆ. ಸೆಟ್‌ಟಾಪ್ ಬಾಕ್ಸಿನ ತಂತ್ರಾಂಶ ಅಪ್‌ಡೇಟ್ ಆಗುವುದೂ ಇದೇ ವಿಧಾನದಲ್ಲಿ. ಸ್ಮಾರ್ಟ್‌ಫೋನ್ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಲು ಅಂತರಜಾಲ ಸಂಪರ್ಕ ಬಳಕೆಯಾದರೆ ಸೆಟ್‌ಟಾಪ್ ಬಾಕ್ಸ್ ತಂತ್ರಾಂಶವನ್ನು ಉಪಗ್ರಹ ಸಂಕೇತಗಳ ಮೂಲಕವೇ ಅಪ್‌ಡೇಟ್ ಮಾಡಲಾಗುತ್ತದೆ. ತಂತ್ರಾಂಶದ ಹೊಸ ಆವೃತ್ತಿಯನ್ನು ಬಳಕೆದಾರರಿಗೆ ತಲುಪಿಸಲು ಓಟಿಎ ಅಪ್‌ಡೇಟ್‌ಗಳನ್ನು ಬಳಸಲಾಗುತ್ತದೆ. ತಂತ್ರಾಂಶದಲ್ಲಿ ಪತ್ತೆಯಾಗುವ ಕೊರತೆಗಳನ್ನು, ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸಲಿಕ್ಕೂ ಈ ಮಾರ್ಗ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಓಟಿಎ ಮಾರ್ಗದಲ್ಲಿ ಫೋನಿನ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಲು ಅಂತರಜಾಲ ಸಂಪರ್ಕ ಬೇಕಲ್ಲ, ಅದಕ್ಕೆ ಮೊಬೈಲ್ ಇಂಟರ್‌ನೆಟ್ ಬಳಸಬಹುದೋ ವೈ-ಫೈ ಸಂಪರ್ಕವನ್ನೇ ಕಾಯಬೇಕೋ ಎನ್ನುವುದನ್ನು ನಾವೇ ಸೂಚಿಸಬಹುದು.

OTT
ಓಟಿಟಿ
(ರೂಪಿಸಬೇಕಿದೆ)
ಓವರ್ ದ ಟಾಪ್; ಇತರ ದೂರಸಂಪರ್ಕ ಸಂಸ್ಥೆಗಳು ಜಾಲವನ್ನು ಬಳಸಿಕೊಂಡು ತಮ್ಮ ಸೇವೆ ಒದಗಿಸುವ ಉತ್ಪನ್ನಗಳನ್ನು ಈ ಹೆಸರಿನಿಂದ ಗುರುತಿಸಲಾಗುತ್ತದೆ.
ಮೊಬೈಲ್ ಫೋನ್ ಮೂಲಕ ನಾವು ಎರಡು ಬಗೆಯ ಸಂಸ್ಥೆಗಳ ಸೇವೆಗಳನ್ನು ಪಡೆದುಕೊಳ್ಳುತ್ತೇವೆ: ಮೊದಲ ಬಗೆಯವು ತಮ್ಮ ಸೇವೆ ಒದಗಿಸಲು ತಮ್ಮದೇ ಆದ ಮೊಬೈಲ್ ಜಾಲವನ್ನು ಸ್ಥಾಪಿಸಿ ನಿರ್ವಹಿಸುತ್ತವೆ; ಎರಡನೆಯವು ಇಂತಹ ಸಂಸ್ಥೆಗಳ ಜಾಲವನ್ನು ಬಳಸಿಕೊಂಡು ತಮ್ಮ ಸೇವೆ ಒದಗಿಸುತ್ತವೆ. ವಾಟ್ಸ್‌ಆಪ್ ಸಂದೇಶಗಳು, ಸ್ಕೈಪ್ ಕರೆಗಳೆಲ್ಲ ಕೆಲಸಮಾಡುವುದು ಹೀಗೆಯೇ. ಇದನ್ನೆಲ್ಲ ಬಳಸುವಾಗ ಮೊಬೈಲ್ ಗ್ರಾಹಕರು ಬಳಸಿದ ಡೇಟಾ ಪ್ರಮಾಣಕ್ಕೆ ಸರಿಯಾಗಿ ಶುಲ್ಕ ಪಾವತಿಸುತ್ತಾರೆಯೇ ಹೊರತು ಕರೆಮಾಡಿದ್ದಕ್ಕೆ ಇಷ್ಟು, ಸಂದೇಶ ಕಳಿಸಿದ್ದಕ್ಕೆ ಇಷ್ಟು ಎಂದು (ಮೊಬೈಲ್ ಸೇವೆಗಳಲ್ಲಿ ಮಾಡುವಂತೆ) ಪ್ರತ್ಯೇಕ ಶುಲ್ಕವನ್ನೇನೂ ಪಾವತಿಸುವುದಿಲ್ಲ. ದೂರಸಂಪರ್ಕ ಜಗತ್ತಿನ ಪರಿಭಾಷೆಯಲ್ಲಿ ಇಂತಹ ಸೇವೆಗಳನ್ನು 'ಓವರ್ ದ ಟಾಪ್' (ಓಟಿಟಿ) ಸೇವೆಗಳೆಂದು ಗುರುತಿಸಲಾಗುತ್ತದೆ. ವಾಟ್ಸ್‌ಆಪ್-ಸ್ಕೈಪ್‌ನಂತಹ ವ್ಯವಸ್ಥೆಗಳು ಇತರ ಸಂಸ್ಥೆಗಳು ಒದಗಿಸುವ ಅಂತರಜಾಲ ಸಂಪರ್ಕವನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಸೇವೆಗಳನ್ನು ಒದಗಿಸುತ್ತವಲ್ಲ, ಹಾಗಾಗಿಯೇ ಈ ಹೆಸರು ಹುಟ್ಟಿಕೊಂಡಿದೆ (ಓಟಿಟಿ ಸೇವೆಗಳಿಗೆ ಮೊಬೈಲ್ ಅಂತರಜಾಲವೇ ಬೇಕು ಎಂದೇನೂ ಇಲ್ಲವಲ್ಲ; ಅವು ವೈ-ಫೈ ಸಂಪರ್ಕಗಳಲ್ಲೂ ಸರಾಗವಾಗಿ ಕೆಲಸಮಾಡುತ್ತವೆ). ಇವು ತಮ್ಮ ಕಾರ್ಯಾಚರಣೆಗೆ ಮೊಬೈಲ್ ಜಾಲಗಳನ್ನೇ ಬಳಸಿಕೊಂಡರೂ ಇಂತಹ ಸೇವೆಗಳಿಂದ ಮೊಬೈಲ್ ಸಂಸ್ಥೆಗಳಿಗೆ ವಿಶೇಷ ಆದಾಯವೇನೂ ಬರುವುದಿಲ್ಲ. ಹೀಗಾಗಿ ಓಟಿಟಿ ಸೇವೆಗಳ ಮೇಲೆ ನಿಯಂತ್ರಂಣ ಹೇರಬೇಕೆಂಬ ಒತ್ತಾಯ ಕೆಲವು ಸಂದರ್ಭಗಳಲ್ಲಿ ಕೇಳಿಬಂದಿತ್ತು. ಅಂತಹ ಯಾವುದೇ ನಿರ್ಬಂಧ ಅಂತರಜಾಲದ ಮುಕ್ತ ಸ್ವರೂಪಕ್ಕೆ ಧಕ್ಕೆ ತಂದಂತೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆ ಎಲ್ಲ ಒತ್ತಾಯಗಳೂ ಈಗ ಹಿನ್ನೆಲೆಗೆ ಸರಿದಿವೆ; ಓಟಿಟಿ ಸೇವೆಗಳು ಅಬಾಧಿತವಾಗಿ ಮುಂದುವರೆದಿವೆ.

OTP
ಓಟಿಪಿ
(ರೂಪಿಸಬೇಕಿದೆ)
ಒನ್ ಟೈಮ್ ಪಾಸ್‌ವರ್ಡ್; ವಿಶ್ವವ್ಯಾಪಿ ಜಾಲದ ಮೂಲಕ ನಡೆಯುವ ವ್ಯವಹಾರಗಳಲ್ಲಿ ಬಳಕೆದಾರರ ಗುರುತನ್ನು ಖಾತರಿಪಡಿಸಿಕೊಳ್ಳಲು ಬಳಕೆಯಾಗುವ ಹೆಚ್ಚುವರಿ ಪಾಸ್‌ವರ್ಡ್. ಇದನ್ನು ಒಮ್ಮೆ ಮಾತ್ರ ಬಳಸುವುದು ಸಾಧ್ಯ.
ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ. ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ! ಇಂತಹ ಸನ್ನಿವೇಶಗಳನ್ನು ಕೊಂಚಮಟ್ಟಿಗಾದರೂ ತಪ್ಪಿಸುವ ಉದ್ದೇಶದಿಂದ ಬಳಕೆಯಾಗುವ ತಂತ್ರಗಳಲ್ಲೊಂದು ಓಟಿಪಿ. ಓಟಿಪಿ ಎನ್ನುವುದು 'ಒನ್ ಟೈಮ್ ಪಾಸ್‌ವರ್ಡ್' ಎಂಬ ಹೆಸರಿನ ಹ್ರಸ್ವರೂಪ. ಈ ವಿಧಾನ ಬಳಸುವಾಗ ಖಾತೆಯ ವಿವರ-ಪಾಸ್‌ವರ್ಡುಗಳ ಜೊತೆಗೆ ಬಳಕೆದಾರರ ಮೊಬೈಲಿಗೆ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಿದ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಕೆಲವೆಡೆ ಮೊಬೈಲಿಗೆ ಬರುವ ಈ ಸಂದೇಶವನ್ನು ಸಾಮಾನ್ಯ ಪಾಸ್‌ವರ್ಡ್ ಬದಲಿಗೆ ಉಪಯೋಗಿಸುವ ಸೌಲಭ್ಯವೂ ಇರುತ್ತದೆ. ಈ ಪಾಸ್‌ವರ್ಡನ್ನು ಒಮ್ಮೆ ಮಾತ್ರವೇ - ಅದೂ ನಿಗದಿತ ಅವಧಿಯೊಳಗೆ ಮಾತ್ರ - ಉಪಯೋಗಿಸುವುದು ಸಾಧ್ಯ. ಎಸ್ಸೆಮ್ಮೆಸ್‌ನಂತಹ ಸರಳ ಮಾಧ್ಯಮವನ್ನು ಬಳಸಿ ಆನ್‌ಲೈನ್ ವ್ಯವಹಾರಗಳಿಗೆ ಹೆಚ್ಚಿನ ಸುರಕ್ಷತೆ ತಂದುಕೊಡುತ್ತಿರುವುದು ಓಟಿಪಿಯ ಹೆಚ್ಚುಗಾರಿಕೆ. ಕಾರ್ಡು, ಪಾಸ್‌ವರ್ಡುಗಳ ಜೊತೆಗೆ ಮೊಬೈಲ್ ಫೋನ್ ಕೂಡ ಕಳ್ಳರ ಪಾಲಾದ ಸಂದರ್ಭಗಳನ್ನು ಹೊರತುಪಡಿಸಿದಂತೆ ಇದರ ವಿಶ್ವಾಸಾರ್ಹತೆ ಸಾಕಷ್ಟು ಉತ್ತಮವಾಗಿಯೇ ಇರುತ್ತದೆ. ಓಟಿಪಿಯ ಉದ್ದೇಶ ನಮ್ಮ ಸುರಕ್ಷತೆಯೇ ಆದ್ದರಿಂದ ನಾವು ಅದನ್ನು ಇತರರಿಗೆ ತಿಳಿಸುವುದು ಖಂಡಿತಾ ಒಳ್ಳೆಯದಲ್ಲ.

Open Source
ಓಪನ್‌ ಸೋರ್ಸ್
ಮುಕ್ತ ತಂತ್ರಾಂಶ
ಬಳಸಲು, ಹಂಚಲು ಹಾಗೂ ಬದಲಾಯಿಸಲು ಮುಕ್ತ ಅವಕಾಶವಿರುವ ತಂತ್ರಾಂಶ
ಕಂಪ್ಯೂಟರಿನಲ್ಲಿ - ಸ್ಮಾರ್ಟ್‌ಫೋನಿನಲ್ಲಿ ವಿವಿಧ ಉದ್ದೇಶಗಳಿಗಾಗಿ ನಾವು ಬಳಸುವ ತಂತ್ರಾಂಶಗಳಲ್ಲಿ ಹಲವು ವಿಧ. ಇವುಗಳಲ್ಲಿ ಕೆಲವನ್ನು ದುಡ್ಡುಕೊಟ್ಟು ಬಳಸಬೇಕು, ಕೆಲವನ್ನು ಬಳಸುವಾಗ ಜಾಹೀರಾತುಗಳನ್ನು ನೋಡಲು ಸಿದ್ಧರಿರಬೇಕು, ಮತ್ತೆ ಇನ್ನು ಕೆಲವು ನಮಗೆ ಪೂರ್ತಿ ಉಚಿತವಾಗಿಯೇ ದೊರಕುತ್ತವೆ. ಆದರೆ ಇದೆಲ್ಲ ಏನಿದ್ದರೂ ತಂತ್ರಾಂಶದ ಬಳಕೆಗೆ ಮಾತ್ರವೇ ಸೀಮಿತ. ತಂತ್ರಾಂಶದ ಕ್ರಮವಿಧಿಗಳೆಲ್ಲ ಅದರ ತಯಾರಕರ ಬಳಿಯೇ ಭದ್ರವಾಗಿರುವುದರಿಂದ ಅದರಲ್ಲಿ ಬಳಕೆದಾರರು ಯಾವುದೇ ರೀತಿಯ ಬದಲಾವಣೆ ಮಾಡುವಂತಿಲ್ಲ. ಈ ನಿರ್ಬಂಧವನ್ನು ಹೋಗಲಾಡಿಸುವುದು ಓಪನ್‌ಸೋರ್ಸ್, ಅಂದರೆ ಮುಕ್ತ ತಂತ್ರಾಂಶಗಳ ವೈಶಿಷ್ಟ್ಯ. ಇಲ್ಲಿ ತಂತ್ರಾಂಶದ ಕ್ರಮವಿಧಿಗಳು ಕೂಡ ಬಳಕೆದಾರರಿಗೆ ಮುಕ್ತವಾಗಿ ದೊರಕುತ್ತವೆ. ಅದನ್ನು ಬಳಸುವುದು, ಹಂಚುವುದು ಮತ್ತು ಬದಲಾಯಿಸುವುದು - ಎಲ್ಲವುದಕ್ಕೂ ಸ್ವಾತಂತ್ರ್ಯವಿರುತ್ತದೆ. ಬೇರೆ ಯಾರೋ ರೂಪಿಸಿದ ಓಪನ್‌ಸೋರ್ಸ್ ತಂತ್ರಾಂಶದ ಕಾರ್ಯವೈಖರಿಯನ್ನು ಬದಲಿಸುವ, ಅದನ್ನು ಇನ್ನಷ್ಟು ಉತ್ತಮಪಡಿಸುವ ಅವಕಾಶವೂ ನಮಗೆ ದೊರಕುತ್ತದೆ. ಓಪನ್‌ಸೋರ್ಸ್ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ವಿಶ್ವದೆಲ್ಲೆಡೆಯ ತಂತ್ರಜ್ಞರು ಭಾಗವಹಿಸುವುದರಿಂದ - ಮತ್ತು ಆ ಪೈಕಿ ಒಬ್ಬರ ಕೆಲಸವನ್ನು ಉತ್ತಮಪಡಿಸಲು ಇನ್ನೊಬ್ಬರು ನೆರವಾಗುವುದರಿಂದ - ಅವುಗಳ ಗುಣಮಟ್ಟ ಬಹಳಷ್ಟು ಉತ್ತಮವಾಗಿರುತ್ತದೆ. ತಂತ್ರಾಂಶ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಫೈರ್‌ಫಾಕ್ಸ್, ವಿಎಲ್‌ಸಿ ಪ್ಲೇಯರ್, ಓಪನ್‌ಅಫೀಸ್, ಗಿಂಪ್ ಮುಂತಾದವೆಲ್ಲ ಓಪನ್‌ಸೋರ್ಸ್ ತಂತ್ರಾಂಶಗಳೇ.

OCR
ಓಸಿಆರ್
(ರೂಪಿಸಬೇಕಿದೆ)
ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್; ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಿ ಚಿತ್ರರೂಪದಿಂದ ಪಠ್ಯರೂಪಕ್ಕೆ ಬದಲಿಸಿಕೊಡುವ ತಂತ್ರಾಂಶ
ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಓಸಿಆರ್. ಇದು 'ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್' ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು. ಸ್ಕ್ಯಾನ್ ಮಾಡಿಯೋ ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಓಸಿಆರ್ ತಂತ್ರಾಂಶದ ಕೆಲಸ. ಹಳೆಯ ಪುಸ್ತಕಗಳಲ್ಲಿರುವ ಪಠ್ಯವನ್ನು ಗುರುತಿಸಿ ಕಂಪ್ಯೂಟರೀಕರಿಸಲು, ಮುದ್ರಿತ ಅಥವಾ ಲಿಖಿತ ದಾಖಲೆಗಳನ್ನು ಸ್ವಯಂಚಾಲಿತವಾಗಿ ವರ್ಗೀಕರಿಸಲು - ಸಂಸ್ಕರಿಸಲು ಇದು ನೆರವಾಗುತ್ತದೆ. ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಹಲವು ಓಸಿಆರ್ ತಂತ್ರಾಂಶಗಳು ಕನ್ನಡದಲ್ಲೂ ಇವೆ.


logo