logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Key Logger
ಕೀ ಲಾಗರ್
(ರೂಪಿಸಬೇಕಿದೆ)
ಬಳಕೆದಾರರು ಟೈಪ್ ಮಾಡಿದ್ದನ್ನೆಲ್ಲ ಒಂದೆಡೆ ಉಳಿಸಿಟ್ಟುಕೊಳ್ಳುವ ತಂತ್ರಾಂಶ; ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಬಹುತೇಕ ಸಂದರ್ಭಗಳಲ್ಲಿ ಕೆಟ್ಟ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ತಂತ್ರಾಂಶಗಳ ಪೈಕಿ ಉಪಯುಕ್ತವಾದವು ಎಷ್ಟಿರುತ್ತವೋ ದುರುದ್ದೇಶಪೂರಿತವಾದವೂ ಅಷ್ಟೇ ಪ್ರಮಾಣದಲ್ಲಿರುತ್ತವೆ. ಮಾಲ್‌ವೇರ್, ಅಂದರೆ ಕುತಂತ್ರಾಂಶವೆಂದು ಕರೆಯುವುದು ಇಂತಹ ತಂತ್ರಾಂಶಗಳನ್ನೇ. ಈ ಪೈಕಿ ಬಳಕೆದಾರರ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಿ ದುರುಪಯೋಗಪಡಿಸಿಕೊಳ್ಳುವ ತಂತ್ರಾಂಶಗಳನ್ನು ಒಟ್ಟಾಗಿ 'ಸ್ಪೈವೇರ್' ಎಂದು ಗುರುತಿಸುತ್ತಾರೆ. 'ಕೀ ಲಾಗರ್' ಎನ್ನುವುದು ಈ ಗುಂಪಿನ ಕುತಂತ್ರಾಂಶಗಳಲ್ಲೊಂದು. ಬಳಕೆದಾರರು ಟೈಪ್ ಮಾಡಿದ್ದನ್ನೆಲ್ಲ ಒಂದೆಡೆ ಉಳಿಸಿಟ್ಟುಕೊಂಡು ಅದರಲ್ಲಿರಬಹುದಾದ ಖಾಸಗಿ ಮಾಹಿತಿಯನ್ನು (ಉದಾ: ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ವಿವರ) ದುರುಪಯೋಗಪಡಿಸಿಕೊಳ್ಳುವುದು ಈ ತಂತ್ರಾಂಶದ ಕಾರ್ಯವಿಧಾನ. ಯಾವ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಆಗಿರುತ್ತದೋ ಅಲ್ಲಿ ಟೈಪ್ ಮಾಡಲಾದ ಪ್ರತಿ ಅಕ್ಷರವನ್ನೂ ಈ ಕುತಂತ್ರಾಂಶ ದಾಖಲಿಸಿಕೊಳ್ಳುತ್ತದೆ. ಹೀಗೆ ಪ್ರತಿಬಾರಿ ಕೀಲಿ (ಕೀ) ಒತ್ತಿದ್ದನ್ನೂ ದಾಖಲಿಸಿಕೊಳ್ಳುವುದರಿಂದಲೇ (ಲಾಗ್ = ದಾಖಲಿಸು) ಇದಕ್ಕೆ ಕೀ ಲಾಗರ್ ಎಂದು ಹೆಸರು. ಈ ಕೆಲಸವನ್ನು ಬಳಕೆದಾರರ ಅರಿವಿಗೆ ಬಾರದಂತೆ ಮಾಡುವ ಈ ಕುತಂತ್ರಾಂಶ ಹಾಗೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲ ತನ್ನ ಸೃಷ್ಟಿಕರ್ತನಿಗೆ ಗೌಪ್ಯವಾಗಿಯೇ ಕಳುಹಿಸಿಬಿಡುತ್ತದೆ. ಇತರ ಕುತಂತ್ರಾಂಶಗಳಂತೆ ಕೀ ಲಾಗರ್‌ಗಳಿಂದ ಪಾರಾಗಲೂ ಆಂಟಿವೈರಸ್ ತಂತ್ರಾಂಶಗಳ ಮೊರೆಹೋಗುವುದು ಅನಿವಾರ್ಯ. ಅಪರಿಚಿತ ತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಅಟ್ಯಾಚ್‌ಮೆಂಟ್ ತೆರೆಯದಿರುವುದು ಕೂಡ ಒಳ್ಳೆಯದು.

Keyboard
ಕೀಬೋರ್ಡ್
ಕೀಲಿಮಣೆ
ಬಳಕೆದಾರರು ಟೈಪ್ ಮಾಡಿದ್ದನ್ನು ಕಂಪ್ಯೂಟರಿಗೆ ತಲುಪಿಸುವ ಯಂತ್ರಾಂಶ
ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕೀಲಿಗಳನ್ನು ಒತ್ತುವ ಮೂಲಕ ಬಳಕೆದಾರರು ಹೇಳಹೊರಟಿರುವುದನ್ನು ಕಂಪ್ಯೂಟರಿಗೆ ತಲುಪಿಸುವುದು ಈ ಸಾಧನದ ಜವಾಬ್ದಾರಿ. ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಮಾಡುವ ಕೆಲಸ ಸಾಕಷ್ಟು ಸಂಕೀರ್ಣವಾದದ್ದು. ಕೀಬೋರ್ಡ್‌ನ ತುಂಬಾ ಬೇರೆಬೇರೆ ಕೀಲಿಗಳಿರುವುದನ್ನು ನೋಡಿದ್ದೇವಲ್ಲ, ಆ ಕೀಲಿಗಳ ಅಡಿಯಲ್ಲಿ ಸಣ್ಣಸಣ್ಣ ಸ್ವಿಚ್ಚುಗಳಿರುತ್ತವೆ. ಕೀಲಿ ಒತ್ತುವ ಮೂಲಕ ನಾವು ಈ ಸ್ವಿಚ್ಚನ್ನೂ ಒತ್ತುತ್ತೇವಲ್ಲ, ಆಗ ಆ ಕೀಲಿಯ ಸರ್ಕ್ಯೂಟು ಪೂರ್ಣವಾಗಿ ಅದರ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ ಪ್ರವಹಿಸುತ್ತದೆ. ಕಾಲಿಂಗ್ ಬೆಲ್ಲಿನ ಸ್ವಿಚ್ ಒತ್ತಿದಾಗ ವಿದ್ಯುತ್ ಪ್ರವಹಿಸಿ ಕರೆಗಂಟೆ ಕೇಳುವಂತೆಯೇ ಇದೂ. ಕರೆಗಂಟೆ ಕೇಳುವ ಬದಲು ಇಲ್ಲಿ ಯಾವ ಕೀಲಿಯನ್ನು ಒತ್ತುವ ಮೂಲಕ ಸರ್ಕ್ಯೂಟ್ ಪೂರ್ಣವಾಯಿತೆಂಬುದರ ಬಗೆಗೆ ಕಂಪ್ಯೂಟರಿಗೆ ಸಂಕೇತ ಹೋಗುತ್ತದೆ ಅಷ್ಟೆ. ಒಂದಕ್ಕಿಂತ ಹೆಚ್ಚಿನ ಕೀಲಿಗಳನ್ನು ಒಟ್ಟಿಗೆ ಒತ್ತಿದ್ದರೆ (ಉದಾ: ಕಂಟ್ರೋಲ್ ಸಿ, ಆಲ್ಟ್ ಟ್ಯಾಬ್ ಇತ್ಯಾದಿ) ಅದನ್ನೂ ಕಂಪ್ಯೂಟರಿಗೆ ತಿಳಿಸಲಾಗುತ್ತದೆ. ಈ ಸಂಕೇತವನ್ನು ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಕಂಪ್ಯೂಟರಿನ ಕೆಲಸ. ಪರದೆಯ ಮೇಲೆ ಪಠ್ಯ ಮೂಡಿಸಬೇಕೋ, ಒತ್ತಿದ ಕೀಲಿಯನ್ನು ಆದೇಶವನ್ನಾಗಿ ಸ್ವೀಕರಿಸಿ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಬೇಕೋ ಎನ್ನುವುದೆಲ್ಲ ನೀವು ಬಳಸುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ತೀರ್ಮಾನವಾಗುತ್ತದೆ.

Keyboard Shortcut
ಕೀಬೋರ್ಡ್ ಶಾರ್ಟ್‌ಕಟ್
(ರೂಪಿಸಬೇಕಿದೆ)
ಒಂದು ಅಥವಾ ಹೆಚ್ಚಿನ ಸಂಖ್ಯೆಯ ಕೀಲಿಗಳನ್ನು ಒತ್ತುವ ಮೂಲಕ ಕಂಪ್ಯೂಟರಿಗೆ ಆದೇಶ ನೀಡುವ ಸಮೀಪ ಮಾರ್ಗ; ಮೌಸ್ ಬಳಸಲು ವ್ಯರ್ಥವಾಗುವ ಸಮಯವನ್ನು ಉಳಿಸಲು ಇದೊಂದು ಸುಲಭ ಉಪಾಯ
ಕಂಪ್ಯೂಟರ್ ಪ್ರಪಂಚ ನಮ್ಮ ಅನೇಕ ಕೆಲಸಗಳನ್ನು ಬಹಳ ಸುಲಭವಾಗಿಸಿದೆ. ವಿವಿಧ ಆದೇಶಗಳನ್ನು (ಕಮ್ಯಾಂಡ್) ನೆನಪಿಟ್ಟುಕೊಂಡು ಟೈಪಿಸುವ ಬದಲು ಅದೇ ಕೆಲಸವನ್ನು ಕೆಲ ಕ್ಲಿಕ್‌ಗಳ ಮೂಲಕ ಸಾಧಿಸಿಕೊಳ್ಳುವುದು ಇದಕ್ಕೊಂದು ಉದಾಹರಣೆ. ಕಾರ್ಯಾಚರಣ ವ್ಯವಸ್ಥೆಯಲ್ಲಿ ಹಾಗೂ ಪ್ರತಿ ತಂತ್ರಾಂಶದಲ್ಲೂ ಇರುವ ಹತ್ತಾರು ಐಕನ್‌ಗಳು ಇಲ್ಲಿ ನಮಗೆ ನೆರವಾಗುತ್ತವೆ. ಆದರೆ ಕೆಲಸದ ಒತ್ತಡ ಹೆಚ್ಚಿರುವಾಗ ಇಷ್ಟೆಲ್ಲ ಸಾರಿ ಕ್ಲಿಕ್ ಮಾಡುತ್ತ ಕುಳಿತರೆ ಹೆಚ್ಚು ಸಮಯ ವ್ಯರ್ಥವಾಗುತ್ತದಲ್ಲ? ಈ ಪರಿಸ್ಥಿತಿಯನ್ನು ತಪ್ಪಿಸಲೆಂದೇ 'ಕೀಬೋರ್ಡ್ ಶಾರ್ಟ್‌ಕಟ್'ಗಳ ಪರಿಕಲ್ಪನೆ ರೂಪುಗೊಂಡಿದೆ. ಐಕನ್‌ಗಳು ಮಾಡುವ ಕೆಲಸವನ್ನು ಕೀಲಿಮಣೆಯ ಕೀಲಿಗಳ ಮೂಲಕವೇ ಸಾಧಿಸಿಕೊಳ್ಳುವುದು ಈ ಪರಿಕಲ್ಪನೆಯ ಉದ್ದೇಶ. ಅದೇ ಕೆಲಸ ಕಡಿಮೆ ಶ್ರಮ ಹಾಗೂ ಕಡಿಮೆ ಸಮಯದಲ್ಲಿ ಸಾಧ್ಯವಾಗುವುದರಿಂದಲೇ ಈ ಪರಿಕಲ್ಪನೆಗೆ ಶಾರ್ಟ್‌ಕಟ್ (ಸಮೀಪ ಮಾರ್ಗ) ಎಂಬ ಹೆಸರು ಬಂದಿದೆ. ಬಹುತೇಕ ಕೀಬೋರ್ಡ್ ಶಾರ್ಟ್‌ಕಟ್‌ಗಳಲ್ಲಿ ಎರಡು ಅಥವಾ ಹೆಚ್ಚಿನ ಕೀಲಿಗಳನ್ನು ಬಳಸಬೇಕಾಗುತ್ತದೆ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡುವ ಬಹುತೇಕ ತಂತ್ರಾಂಶಗಳಲ್ಲಿ ಕಡತವನ್ನು ತೆರೆಯಲು 'ಕಂಟ್ರೋಲ್ + ಓ', ಉಳಿಸಲು 'ಕಂಟ್ರೋಲ್ + ಎಸ್', ಮುದ್ರಿಸಲು 'ಕಂಟ್ರೋಲ್ + ಪಿ' ಮುಂತಾದ ಆಯ್ಕೆಗಳಿರುತ್ತವೆ. ಅವೆಲ್ಲ ಕೀಬೋರ್ಡ್ ಶಾರ್ಟ್‌ಕಟ್‌ಗೆ ಉದಾಹರಣೆಗಳು.

Knowledge Management
ನಾಲೆಜ್ ಮ್ಯಾನೇಜ್‌ಮೆಂಟ್
(ರೂಪಿಸಬೇಕಿದೆ)
ಯಾವುದೇ ಕೆಲಸಕ್ಕೆ ಮಹತ್ವದ್ದೆನಿಸುವ ತಿಳಿವಳಿಕೆಯನ್ನೆಲ್ಲ ಸೂಕ್ತವಾಗಿ ನಿರ್ವಹಿಸಲು ನೆರವಾಗುವ ಪ್ರಕ್ರಿಯೆ
ಸಣ್ಣ ಅಂಗಡಿಯಿಂದ ಬಹುರಾಷ್ಟ್ರೀಯ ಉದ್ದಿಮೆಯವರೆಗೆ ಪ್ರತಿಯೊಂದು ಸಂಸ್ಥೆಯಲ್ಲೂ ಜ್ಞಾನದ, ತಿಳಿವಳಿಕೆಯ ದೊಡ್ಡ ಸಂಗ್ರಹವೇ ಇರುತ್ತದೆ. ಪುಟ್ಟ ಬೇಕರಿಯಲ್ಲಿ ತಯಾರಿಸುವ ತಿನಿಸಿನ ಪಾಕವಿಧಾನ (ರೆಸೀಪಿ) ಇರಬಹುದು, ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ನಿಯಮಗಳಿರಬಹುದು, ಕಾರ್ಖಾನೆಯ ಬೃಹತ್ ಯಂತ್ರವನ್ನು ನಿರ್ವಹಿಸುವ ಸರಿಯಾದ ವಿಧಾನವೇ ಇರಬಹುದು - ಸಂಸ್ಥೆಯ ವ್ಯವಹಾರ ಸರಾಗವಾಗಿ ನಡೆಯಲು ಇಂತಹ ಜ್ಞಾನ ಅತ್ಯವಶ್ಯಕ. ಸಣ್ಣ ಸಂಸ್ಥೆಗಳಲ್ಲಿ ಇದನ್ನು ನಿಭಾಯಿಸುವುದು ಅಷ್ಟೇನೂ ಕಷ್ಟವಲ್ಲ, ನಿಜ. ಆದರೆ ಸಂಸ್ಥೆಯ ವಹಿವಾಟು, ಉದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತ ಹೋದಂತೆ ಅಗತ್ಯವಾದ ತಿಳಿವಳಿಕೆ ಅಗತ್ಯಬಿದ್ದ ತಕ್ಷಣದಲ್ಲೇ ಸಿಗುವಂತೆ ನೋಡಿಕೊಳ್ಳಲು ಬೇಕಾದ ವ್ಯವಸ್ಥೆ ಇರಬೇಕಾಗುತ್ತದೆ. ಯಾವುದೋ ಯಂತ್ರದ ಕಾರ್ಯಾಚರಣೆಯಲ್ಲಿ ಅಡಚಣೆಯಾದ ಕ್ಷಣದಲ್ಲಿ ಅದನ್ನು ಸರಿಪಡಿಸಲು ಏನು ಮಾಡಬೇಕು ಎಂದು ಹುಡುಕಾಡುವಂತಾಗಬಾರದಲ್ಲ! ಇಂತಹ ಪರಿಸ್ಥಿತಿ ತಪ್ಪಿಸಿ, ಸಂಸ್ಥೆಗೆ ಮಹತ್ವದ್ದೆನಿಸುವ ತಿಳಿವಳಿಕೆಯನ್ನೆಲ್ಲ ಸೂಕ್ತವಾಗಿ ನಿರ್ವಹಿಸಲು ನೆರವಾಗುವ ಪ್ರಕ್ರಿಯೆಯನ್ನು 'ತಿಳಿವಳಿಕೆಯ ನಿರ್ವಹಣೆ' (ನಾಲೆಜ್ ಮ್ಯಾನೇಜ್‌ಮೆಂಟ್) ಎಂದು ಕರೆಯುತ್ತಾರೆ. ಈ ಪ್ರಕ್ರಿಯೆ ತಿಳಿವಳಿಕೆಯ ದಾಖಲಾತಿಯಿಂದ ಪ್ರಾರಂಭಿಸಿ ಅದರ ವ್ಯವಸ್ಥಿತ ಶೇಖರಣೆ, ನಿರ್ವಹಣೆ ಹಾಗೂ ಬಳಕೆಯ ಕುರಿತ ರೂಪುರೇಷೆಗಳನ್ನು ಒದಗಿಸುತ್ತದೆ. ಉದ್ಯೋಗಿಗಳಲ್ಲಿರಬಹುದಾದ ಹೊಸ ಜ್ಞಾನವನ್ನು ದಾಖಲಿಸುವುದು ಹಾಗೂ ಅನುಭವದ ಆಧಾರದ ಮೇಲೆ ಈಗಾಗಲೇ ದಾಖಲಾಗಿರುವುದನ್ನು ಬದಲಿಸುವುದು ಕೂಡ ಇದೇ ಪ್ರಕ್ರಿಯೆಯಡಿ ಬರುತ್ತದೆ.


logo