logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Virtual Reality
ವರ್ಚುಯಲ್ ರಿಯಾಲಿಟಿ
ಛಾಯಾವಾಸ್ತವ
ನೈಜ ಅಸ್ತಿತ್ವವಿಲ್ಲದ ವಸ್ತು-ಸಂಗತಿಗಳನ್ನು ಕೃತಕವಾಗಿ ರೂಪಿಸಿ ಅವು ನೈಜವೇ ಇರಬಹುದೇನೋ ಎನ್ನುವ ಭಾವನೆ ಬರುವಂತೆ ನಮ್ಮೆದುರು ಪ್ರಸ್ತುತಪಡಿಸುವ ತಂತ್ರಜ್ಞಾನ
ನೈಜ ಅಸ್ತಿತ್ವವಿಲ್ಲದ ವಸ್ತು-ಸಂಗತಿಗಳನ್ನು ಕೃತಕವಾಗಿ ರೂಪಿಸಿ ಅವು ನೈಜವೇ ಇರಬಹುದೇನೋ ಎನ್ನುವ ಭಾವನೆ ಬರುವಂತೆ ನಮ್ಮೆದುರು ಪ್ರಸ್ತುತಪಡಿಸುವ ತಂತ್ರಜ್ಞಾನವೇ 'ವರ್ಚುಯಲ್ ರಿಯಾಲಿಟಿ' (ವಿಆರ್). ಕಂಪ್ಯೂಟರ್ ಗೇಮಿಂಗ್, ಜಾಹೀರಾತು, ಮಾರ್ಕೆಟಿಂಗ್ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಇದನ್ನು ಬಳಸಲಾಗುತ್ತಿದೆ. 'ವರ್ಚುಯಲ್ ರಿಯಾಲಿಟಿ ಹೆಡ್‌ಸೆಟ್' ಎಂಬ ದೊಡ್ಡಗಾತ್ರದ ಕನ್ನಡಕದಂತಹ ಸಾಧನ ಕುರಿತ ಲೇಖನಗಳನ್ನು, ಜಾಹೀರಾತುಗಳನ್ನು ನೀವು ನೋಡಿರಬಹುದು. ನಮ್ಮ ಮೊಬೈಲನ್ನೇ ಬಳಸಿ ವರ್ಚುಯಲ್ ರಿಯಾಲಿಟಿ ಅನುಭವವನ್ನು ಕಟ್ಟಿಕೊಡುವುದು ಈ ಸಾಧನಗಳ ವೈಶಿಷ್ಟ್ಯ. ಈ ಸಾಧನದೊಳಗೆ ಮೊಬೈಲನ್ನು ಅಳವಡಿಸಿ, ಅದು ನಮ್ಮ ಕಣ್ಣಮುಂದೆ ಬರುವಂತೆ ಕಟ್ಟಿಕೊಂಡರೆ ಆಯಿತು - ವಿಶೇಷ ಆಪ್‌ಗಳ ಸಹಾಯದಿಂದ ಹೊಸದೊಂದು ಜಗತ್ತೇ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ; ಬೆಂಗಳೂರಿನ ಮನೆಯೊಳಗೇ ಕುಳಿತು ಬಾರ್ಸಿಲೋನಾದಲ್ಲಿ ಸುತ್ತಾಡಿದಂತೆ, ಸೋಫಾ ಮೇಲೆ ಕುಳಿತೇ ರೇಸಿಂಗ್ ಕಾರ್ ಓಡಿಸಿದಂತೆಲ್ಲ ಅನ್ನಿಸುವ ಹಾಗೆ ಈ ತಂತ್ರಜ್ಞಾನ ಮಾಡಬಲ್ಲದು. ಗೇಮಿಂಗ್‌ನಲ್ಲಿ ಆಸಕ್ತಿಯಿಲ್ಲ, ಹೆಚ್ಚಿನ ದುಡ್ಡು ಖರ್ಚುಮಾಡುವ ಉದ್ದೇಶವೂ ಇಲ್ಲ ಎನ್ನುವವರು ಕೂಡ ವರ್ಚುಯಲ್ ರಿಯಾಲಿಟಿ ಅನುಭವ ಪಡೆಯಲು ಗೂಗಲ್ ಕಾರ್ಡ್‌ಬೋರ್ಡ್ ಎಂಬ ರಟ್ಟಿನ ಪೆಟ್ಟಿಗೆ ಸಹಾಯಮಾಡುತ್ತದೆ. ಗೂಗಲ್ ಮೂಲಕ ದೊರಕುವ ಮಾಹಿತಿ ಬಳಸಿ ನಾವು ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು, ಅಥವಾ ಕೆಲವೇ ನೂರು ರೂಪಾಯಿಗಳನ್ನು ಖರ್ಚುಮಾಡಿ ಆನ್‌ಲೈನ್ ಅಂಗಡಿಗಳಲ್ಲೂ ಕೊಳ್ಳಬಹುದು.

VoLTE
ವಿಒಎಲ್‌ಟಿಇ
(ರೂಪಿಸಬೇಕಿದೆ)
ವಾಯ್ಸ್ ಓವರ್ ಎಲ್‌ಟಿಇ; ಮೊಬೈಲ್ ಜಾಲಗಳಲ್ಲಿ ಧ್ವನಿರೂಪದ ಕರೆಗಳು (ವಾಯ್ಸ್) ಹಾಗೂ ಅಂತರಜಾಲ ಸಂಪರ್ಕ (ಡೇಟಾ) ಎರಡನ್ನೂ ಒಟ್ಟಿಗೆ ನಿರ್ವಹಿಸುವ ವ್ಯವಸ್ಥೆ
ಮೊಬೈಲ್ ಜಾಲಗಳ ಬಗ್ಗೆ ಮಾತನಾಡುವಾಗ ೩ಜಿ - ೪ಜಿಗಳ ಪ್ರಸ್ತಾಪ ಬರುವುದು ಸಾಮಾನ್ಯ. ಈ ಪೈಕಿ ೪ಜಿ ತಂತ್ರಜ್ಞಾನವನ್ನು 'ಎಲ್‌ಟಿಇ' ಎಂದು ಗುರುತಿಸಲಾಗುತ್ತದೆ. ಇದು 'ಲಾಂಗ್ ಟರ್ಮ್ ಎವಲ್ಯೂಶನ್' ಎಂಬ ಹೆಸರಿನ ಹ್ರಸ್ವರೂಪ. ಮೊಬೈಲ್ ಜಗತ್ತಿನಲ್ಲಿ ತೀರಾ ಇತ್ತೀಚಿನವರೆಗೂ ಧ್ವನಿರೂಪದ ಕರೆಗಳು (ವಾಯ್ಸ್) ಹಾಗೂ ಅಂತರಜಾಲ ಸಂಪರ್ಕ (ಡೇಟಾ) ಬಳಸುವ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸಲಾಗುತ್ತಿತ್ತು. ನಮ್ಮ ದೇಶದ ಮಟ್ಟಿಗೆ ಈಗಲೂ ಬಹುಪಾಲು ಸಂಪರ್ಕಗಳು ಹೀಗೆಯೇ ಕೆಲಸಮಾಡುತ್ತವೆ. ಇದರ ಬದಲು ವಾಯ್ಸ್ - ಡೇಟಾ ಎರಡನ್ನೂ ಒಟ್ಟಿಗೆ ನಿರ್ವಹಿಸಿದರೆ? ಪ್ರತ್ಯೇಕ ಮೂಲಸೌಕರ್ಯವನ್ನು ನಿಭಾಯಿಸಬೇಕಾದ ಖರ್ಚೂ ಉಳಿಯುತ್ತದೆ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೂ ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ರೂಪುಗೊಂಡಿರುವ ತಂತ್ರಜ್ಞಾನವೇ 'ವಿಒಎಲ್‌ಟಿಇ', ಅಂದರೆ 'ವಾಯ್ಸ್ ಓವರ್ ಎಲ್‌ಟಿಇ'. ಡೇಟಾ ಸಂಪರ್ಕವನ್ನು ನಾವು ನೂರೆಂಟು ಕೆಲಸಗಳಿಗೆ ಬಳಸಿಕೊಳ್ಳುತ್ತೇವಲ್ಲ, ವಾಯ್ಸ್ ಓವರ್ ಎಲ್‌ಟಿಇ ತಂತ್ರಜ್ಞಾನ ಬಳಸುವ ಮೊಬೈಲ್ ಜಾಲಗಳಲ್ಲಿ ಧ್ವನಿರೂಪದ ಕರೆಗಳೂ ಡೇಟಾ ಬಳಸಿ ಮಾಡುವ ಇನ್ನೊಂದು ಕೆಲಸದಂತೆಯೇ ಪರಿಗಣಿಸಲ್ಪಡುತ್ತವೆ. ಹಾಗಾಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ ಅಂತರಜಾಲ ಬಳಕೆಗೆ ಬೇರೆ, ಮೊಬೈಲ್ ಕರೆಗಳಿಗೆ ಬೇರೆ ಎಂದು ಬೆಲೆ ನಿಗದಿಪಡಿಸುವ ಅನಿವಾರ್ಯತೆಯೂ ಇರುವುದಿಲ್ಲ.

VoIP
ವಿಓಐಪಿ
(ರೂಪಿಸಬೇಕಿದೆ)
ವಾಯ್ಸ್ ಓವರ್ ಇಂಟರ್‌ನೆಟ್ ಪ್ರೋಟೊಕಾಲ್; ದತ್ತಾಂಶ ವರ್ಗಾವಣೆಯ ಶಿಷ್ಟಾಚಾರವಾದ ಇಂಟರ್‌ನೆಟ್ ಪ್ರೋಟೊಕಾಲ್ (ಐಪಿ) ಬಳಸಿ ಧ್ವನಿರೂಪದ ಕರೆಗಳನ್ನೂ ಸಾಧ್ಯವಾಗಿಸುವ ತಂತ್ರಜ್ಞಾನ
ವಾಟ್ಸ್‌ಆಪ್ ಬಂದಮೇಲೆ ಎಸ್ಸೆಮ್ಮೆಸ್ ಬಳಕೆ ತೀರಾ ಕಡಿಮೆಯಾದದ್ದು ನಮಗೆಲ್ಲ ಗೊತ್ತೇ ಇದೆ. ಪ್ರತಿ ಸಂದೇಶಕ್ಕೆ ಇಷ್ಟು ಪೈಸೆ ಎಂದು ಲೆಕ್ಕ ಹಾಕುವ ಬದಲು ವಾಟ್ಸ್‌ಆಪ್ ಬಳಕೆಯನ್ನು ನಮ್ಮ ಡೇಟಾ ವೆಚ್ಚದೊಳಗೆ ಸೇರಿಸುವುದೂ ಗೊತ್ತಿರುವ ವಿಷಯವೇ. ಹಾಗಾದರೆ ವಾಟ್ಸ್‌ಆಪ್-ಹೈಕ್-ವೈಬರ್ ಇತ್ಯಾದಿಗಳಲ್ಲಿ ಪಠ್ಯ ಸಂದೇಶಗಳನ್ನು ಪ್ರತ್ಯೇಕವಾಗಿ ನೋಡುವ (ಎಸ್ಸೆಮ್ಮೆಸ್‌ನಲ್ಲಿದ್ದಂತೆ) ಬದಲು ಬರಿಯ ದತ್ತಾಂಶವಾಗಷ್ಟೇ (ಅಂತರಜಾಲ ಸಂಪರ್ಕದಲ್ಲಿದ್ದಂತೆ) ಪರಿಗಣಿಸಲಾಗುತ್ತದೆ ಎಂದಾಯಿತು. ಇದೇ ರೀತಿ ಧ್ವನಿರೂಪದ ಕರೆಗಳನ್ನೂ ಅಂತರಜಾಲ ಸಂಪರ್ಕದ ಮೂಲಕವೇ ಮಾಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ ವಿಒಐಪಿ. 'ವಾಯ್ಸ್ ಓವರ್ ಇಂಟರ್‌ನೆಟ್ ಪ್ರೋಟೊಕಾಲ್' ಎನ್ನುವುದು ಈ ಹೆಸರಿನ ಪೂರ್ಣರೂಪ. ಅಂತರಜಾಲದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ದತ್ತಾಂಶದ ವರ್ಗಾವಣೆಯಾಗುವಾಗ ಪಾಲಿಸಬೇಕಾದ ನಿಯಮಗಳನ್ನು ಐಪಿ, ಅಂದರೆ ಇಂಟರ್‌ನೆಟ್ ಪ್ರೋಟೊಕಾಲ್ ಎನ್ನುವ ಶಿಷ್ಟಾಚಾರ ನಿರ್ದೇಶಿಸುತ್ತದೆ. ಇದೇ ಶಿಷ್ಟಾಚಾರದಡಿ ಧ್ವನಿರೂಪದ ಕರೆಗಳನ್ನೂ ಸಾಧ್ಯವಾಗಿಸುವುದು ವಿಒಐಪಿ ತಂತ್ರಜ್ಞಾನದ ಹೆಗ್ಗಳಿಕೆ. ಅಂತರಜಾಲ ಸಂಪರ್ಕ ಬಳಸಿಕೊಂಡು ಧ್ವನಿರೂಪದ ಕರೆಗಳನ್ನು ಮಾಡಲು ಅನುವುಮಾಡಿಕೊಡುವ ಸ್ಕೈಪ್, ವಾಟ್ಸ್‌ಆಪ್, ವೈಬರ್ ಮುಂತಾದ ತಂತ್ರಾಂಶಗಳೆಲ್ಲ ಇದೇ ತಂತ್ರಜ್ಞಾನವನ್ನು ಬಳಸುತ್ತವೆ. ಇಲ್ಲಿ ಧ್ವನಿಯನ್ನೂ ದತ್ತಾಂಶದಂತೆಯೇ ಪರಿಗಣಿಸಲಾಗುವುದರಿಂದ ಬಳಕೆದಾರರು ಕರೆಗಳಿಗೆ ಪ್ರತ್ಯೇಕವಾಗಿ ಹಣ ಪಾವತಿಸುವ ಅಗತ್ಯ ಇರುವುದಿಲ್ಲ (ಅಂತರಜಾಲದ ವೆಚ್ಚದಲ್ಲೇ ಕರೆಗಳ ಲೆಕ್ಕವೂ ಸೇರಿಕೊಳ್ಳುತ್ತದೆ). ಅನೇಕ ಸಂದರ್ಭಗಳಲ್ಲಿ ವಿಒಐಪಿ ಕರೆಗಳ ಧ್ವನಿ ಗುಣಮಟ್ಟ ಸಾಮಾನ್ಯ ದೂರವಾಣಿ ಕರೆಗಳ ಹೋಲಿಕೆಯಲ್ಲಿ ಕಡಿಮೆಯಿರುವುದು ಸಾಧ್ಯ.

VPN
ವಿಪಿಎನ್
(ರೂಪಿಸಬೇಕಿದೆ)
ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್; ಅಂತರಜಾಲದಂತಹ ಸಾರ್ವಜನಿಕ ಜಾಲವನ್ನೇ ಬಳಸಿ ರೂಪಿಸಿಕೊಂಡ ಖಾಸಗಿ ಜಾಲ
ಅಂತರಜಾಲದ ಲೋಕ ದೊಡ್ಡದೊಂದು ಜಾತ್ರೆಯಂತೆ. ಜಾತ್ರೆ ನೋಡಲು ಬಂದ ಸಾಮಾನ್ಯ ಜನರ ಜೊತೆಗೆ ಜೇಬುಗಳ್ಳರೂ ಬರುವಂತೆ ಕಳ್ಳರು-ಸುಳ್ಳರು ಇಲ್ಲೂ ಇರುತ್ತಾರೆ. ಜಾತ್ರೆಯಲ್ಲಿ ನಮ್ಮ ಜೇಬನ್ನು-ಬ್ಯಾಗನ್ನು ಕಾಪಾಡಿಕೊಳ್ಳುವಂತೆ ಇಲ್ಲಿ ನಮ್ಮ ಮಾಹಿತಿಯನ್ನು ಜೋಪಾನಮಾಡುವುದು ಅನಿವಾರ್ಯ. ನಮ್ಮ ನಿಮ್ಮ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಯಾವುದೋ ಸಂಸ್ಥೆ ಒಂದೇ ಕಟ್ಟಡದಲ್ಲಿ ಕೆಲಸಮಾಡುತ್ತಿದ್ದರೆ ಅದರದೇ ಒಂದು ಜಾಲವನ್ನು (ನೆಟ್‌ವರ್ಕ್) ರೂಪಿಸಿಕೊಳ್ಳಬಹುದು, ಸರಿ. ಆದರೆ ಆ ಸಂಸ್ಥೆಯ ಶಾಖೆಗಳು ದೇಶದ ಬೇರೆಬೇರೆ ರಾಜ್ಯಗಳಲ್ಲಿ - ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೆ? ಅಂತಹ ಸಂದರ್ಭಗಳಲ್ಲಿ ಅದು ಅನಿವಾರ್ಯವಾಗಿ ಅಂತರಜಾಲದ ಮೊರೆಹೋಗಬೇಕಾಗುತ್ತದೆ. ಅಂತರಜಾಲದಂತಹ ಸಾರ್ವಜನಿಕ ಜಾಲವನ್ನೇ ಬಳಸಿ ತಮ್ಮ ಖಾಸಗಿ ಜಾಲವನ್ನು ರೂಪಿಸಿಕೊಳ್ಳಲು ಬೇಕಾದ ತಂತ್ರಜ್ಞಾನಗಳು ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರುತ್ತವೆ. ಹೀಗೆ ರೂಪಿಸಿಕೊಂಡ ಜಾಲಗಳನ್ನು 'ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್' (ವಿಪಿಎನ್) ಎಂದು ಗುರುತಿಸಲಾಗುತ್ತದೆ. ಬಳಸುತ್ತಿರುವುದು ಅಂತರಜಾಲವನ್ನೇ ಆದರೂ ತಮ್ಮದೇ ಸ್ವಂತ ಜಾಲದಲ್ಲಿರುವಂತೆ ಮಾಹಿತಿಯ ಸುರಕ್ಷಿತ ವಿನಿಮಯವನ್ನು ಸಾಧ್ಯವಾಗಿಸುವುದು ವಿಪಿಎನ್ ಹೆಗ್ಗಳಿಕೆ. ಹಲವು ಸಂಸ್ಥೆಗಳ ಸಿಬ್ಬಂದಿ ಎಲ್ಲೇ ಇದ್ದರೂ ತಮ್ಮ ಕಚೇರಿಯ ಕಂಪ್ಯೂಟರುಗಳನ್ನು ಸಂಪರ್ಕಿಸಿ ಕೆಲಸಮಾಡುತ್ತಾರಲ್ಲ, ಅವರ ನೆರವಿಗೆ ಬರುವುದೂ ಇದೇ ವಿಪಿಎನ್. ತಮ್ಮ ಖಾಸಗಿ ಮಾಹಿತಿಯ ಓಡಾಟವನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಹಲವು ವೈಯಕ್ತಿಕ ಬಳಕೆದಾರರೂ ವಿಪಿಎನ್ ಸೌಲಭ್ಯ ಬಳಸುವುದುಂಟು. ನಿಷೇಧಿತ ಅಥವಾ ನಿರ್ಬಂಧಿತ ಜಾಲತಾಣಗಳನ್ನು ತೆರೆಯುವುದು, ಸ್ಪಾಮ್ ಸಂದೇಶಗಳನ್ನು ಕಳುಹಿಸುವುದು, ಪೈರಸಿಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮುಂತಾದ ದುರುದ್ದೇಶಪೂರಿತ ಚಟುವಟಿಕೆಗಳಲ್ಲೂ ವಿಪಿಎನ್‌ಗಳು ಬಳಕೆಯಾಗುತ್ತಿರುವುದು ವಿಪರ್ಯಾಸ. ಇಂತಹ ಹಲವು ಚಟುವಟಿಕೆಗಳು ಶಿಕ್ಷಾರ್ಹ ಅಪರಾಧಗಳೂ ಹೌದು.

Vishing
ವಿಶಿಂಗ್
(ರೂಪಿಸಬೇಕಿದೆ)
ಧ್ವನಿ (ವಾಯ್ಸ್) ರೂಪದ ಫಿಶಿಂಗ್; ದೂರವಾಣಿ ಕರೆ ಮೂಲಕ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಹಗರಣ
ಮೆಸೇಜು - ನಕಲಿ ಜಾಲತಾಣಗಳನ್ನು ಬಳಸಿ ಗ್ರಾಹಕರನ್ನು ವಂಚಿಸುವ 'ಫಿಶಿಂಗ್' ಹಗರಣದಂತೆ ದೂರವಾಣಿ ಕರೆಯ ಮೂಲಕವೇ ಬಳಕೆದಾರರ ಮಾಹಿತಿ ಕದಿಯಲು ನಡೆಸುವ ಪ್ರಯತ್ನವೂ ಒಂದಿದೆ; ಅದನ್ನು 'ವಿಶಿಂಗ್' (ವಾಯ್ಸ್, ಅಂದರೆ ಧ್ವನಿ ರೂಪದ ಫಿಶಿಂಗ್) ಎಂದು ಕರೆಯುತ್ತಾರೆ. ವಿವಿಧ ಮೂಲಗಳಿಂದ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಬ್ಯಾಂಕು, ಕ್ರೆಡಿಟ್ ಕಾರ್ಡ್ ಸಂಸ್ಥೆ, ವಿಮಾ ಕಂಪನಿಗಳ ಹೆಸರಿನಲ್ಲಿ ಅವರಿಗೆಲ್ಲ ಕರೆಮಾಡುವುದು ಈ ಹಗರಣದ ಮೊದಲ ಹೆಜ್ಜೆ. ಖಾತೆ ಬ್ಲಾಕ್ ಆಗಿದೆಯೆಂದೋ, ಉಚಿತ ಕೊಡುಗೆ - ಬಹುಮಾನ ನೀಡುತ್ತೇವೆಂದೋ ಹೇಳಿ ಖಾತೆಯ ವಿವರ ಕೇಳುವ ವಂಚಕರು ತಮಗೆ ಬೇಕಾದ ಮಾಹಿತಿ ಸಿಕ್ಕ ಕೂಡಲೇ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಸುಳ್ಳು ಹೇಳಿ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುವುದು, ನಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯುವುದು, ತಮ್ಮ ಶಾಪಿಂಗಿಗೆ ನಮ್ಮ ಕ್ರೆಡಿಟ್ ಕಾರ್ಡ್ ಬಳಸುವುದೆಲ್ಲ ಈ ವಂಚನೆಯ ಪರಿಣಾಮಗಳೇ. ಹೀಗಾಗಿ ಅಪರಿಚಿತ ವಿಳಾಸಗಳಿಂದ ಬರುವ ಇಮೇಲ್ ಸಂದೇಶಗಳ ಬಗೆಗೆ ಇರುವಷ್ಟೇ ಎಚ್ಚರ ಅಪರಿಚಿತ ಸಂಖ್ಯೆಗಳಿಂದ ಬರುವ ದೂರವಾಣಿ ಕರೆಗಳ ಬಗೆಗೂ ಇರಬೇಕು. ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಮಾಹಿತಿ, ಪಾಸ್‌ವರ್ಡ್, ಓಟಿಪಿ ಮುಂತಾದ ವಿವರಗಳನ್ನು ಯಾವ ಕಾರಣಕ್ಕೂ ಯಾರೊಡನೆಯೂ ಹಂಚಿಕೊಳ್ಳದಿರುವುದು ಒಳ್ಳೆಯದು.

Video on Demand
ವೀಡಿಯೋ ಆನ್ ಡಿಮ್ಯಾಂಡ್
(ರೂಪಿಸಬೇಕಿದೆ)
ಲಭ್ಯವಿರುವ ಚಲನಚಿತ್ರ ಹಾಗೂ ಇತರ ಕಾರ್ಯಕ್ರಮಗಳ ಪೈಕಿ ನಮಗಿಷ್ಟವಾದುದನ್ನು ನಮಗಿಷ್ಟಬಂದಾಗ ನೋಡಲು ಅನುವುಮಾಡಿಕೊಡುವ ವ್ಯವಸ್ಥೆ
ಚಲನಚಿತ್ರವಾಗಲಿ ಟೀವಿ ಕಾರ್ಯಕ್ರಮವಾಗಲಿ ಅದು ಪ್ರಸಾರವಾಗುವ ಸಮಯದಲ್ಲಷ್ಟೇ ನೋಡಬೇಕಾದ್ದು ಅನಿವಾರ್ಯ. ಟೀವಿಯಲ್ಲಂತೂ ನೋಡಲು ಇಷ್ಟವಾಗುವಂತಹ ಕಾರ್ಯಕ್ರಮ ಸಿಗುವವರೆಗೂ ಚಾನಲ್ಲುಗಳನ್ನು ಬದಲಿಸುತ್ತಾ ಹೋಗುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಈ ಪರಿಸ್ಥಿತಿ ಬದಲಿಸಿ, ನಮ್ಮ ಆಯ್ಕೆಯ ಕಾರ್ಯಕ್ರಮವನ್ನು ನಮಗೆ ಬೇಕಾದಾಗ ನೋಡಲು ಅನುವುಮಾಡಿಕೊಟ್ಟಿರುವುದು ವೀಡಿಯೋ ಆನ್ ಡಿಮ್ಯಾಂಡ್ ಎಂಬ ಪರಿಕಲ್ಪನೆ. ಲಭ್ಯವಿರುವ ಚಲನಚಿತ್ರ ಹಾಗೂ ಇತರ ಕಾರ್ಯಕ್ರಮಗಳ ಪೈಕಿ ನಮಗಿಷ್ಟವಾದುದನ್ನು ಆರಿಸಿಕೊಂಡು ಟಿವಿ, ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಮೂಲಕ ನೋಡುವುದನ್ನು ಈ ಪರಿಕಲ್ಪನೆ ಸಾಧ್ಯವಾಗಿಸುತ್ತದೆ. ಇಂತಹ ಸೌಲಭ್ಯ ಬಳಸಲು ಬಹಳಷ್ಟು ಸಾರಿ ನಿರ್ದಿಷ್ಟ ಶುಲ್ಕ ನೀಡಬೇಕಾಗುತ್ತದೆ. ತಿಂಗಳು - ವರ್ಷದ ಲೆಕ್ಕದಲ್ಲಿ ಚಂದಾಹಣ ಪಾವತಿಸಿ ಸದಸ್ಯತ್ವ ಪಡೆದುಕೊಳ್ಳುವುದೂ ಸಾಧ್ಯ. ಕೆಲ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಗಳೂ ಇವೆ. ಡಿಟಿಎಚ್ ವ್ಯವಸ್ಥೆಗಳಲ್ಲಿ, ವಿಮಾನದೊಳಗಿನ ಮನರಂಜನಾ ವ್ಯವಸ್ಥೆಗಳಲ್ಲೂ ವೀಡಿಯೋ ಆನ್ ಡಿಮ್ಯಾಂಡ್ ಪರಿಕಲ್ಪನೆ ಬಳಕೆಯಾಗುತ್ತದೆ.

Vaporware
ವೇಪರ್‌ವೇರ್
(ರೂಪಿಸಬೇಕಿದೆ)
ವಿಪರೀತ ಸುದ್ದಿಮಾಡಿ ಆಮೇಲೆ ಸದ್ದಿಲ್ಲದೆ ಮರೆಯಾಗುವ ತಂತ್ರಜ್ಞಾನದ ಉತ್ಪನ್ನಗಳನ್ನು ಗುರುತಿಸಲು ಬಳಕೆಯಾಗುವ ಹೆಸರು
ತಂತ್ರಜ್ಞಾನದ ಲೋಕದಲ್ಲಿ ಸದಾಕಾಲವೂ ಹೊಸ ಸಂಗತಿಗಳದೇ ಭರಾಟೆ. ಪ್ರತಿದಿನವೂ ಒಂದಲ್ಲ ಒಂದು ಹೊಸ ಯಂತ್ರಾಂಶ ಅಥವಾ ತಂತ್ರಾಂಶದ ಸುದ್ದಿ ಇಲ್ಲಿ ಕೇಳಸಿಗುತ್ತಲೇ ಇರುತ್ತದೆ. ಆದರೆ ಹಾಗೆ ಸುದ್ದಿಮಾಡುವ ಎಲ್ಲ ಉತ್ಪನ್ನಗಳೂ ಹೇಳಿದ ಸಮಯಕ್ಕೆ ಮಾರುಕಟ್ಟೆಗೆ ಬರುವುದಿಲ್ಲ. ಈ ಪೈಕಿ ಕೆಲ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು ತೀರಾ ನಿಧಾನವಾದರೆ ಇನ್ನು ಕೆಲವು ಪತ್ರಿಕಾಗೋಷ್ಠಿಯಿಂದಾಚೆಗೆ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ. ವಿಪರೀತ ಸುದ್ದಿಮಾಡಿ ಆಮೇಲೆ ಸದ್ದಿಲ್ಲದೆ ಆವಿಯಾಗಿಬಿಡುತ್ತವಲ್ಲ, ಇಂತಹ ಉತ್ಪನ್ನಗಳನ್ನು ತಾಂತ್ರಿಕ ಪರಿಭಾಷೆಯಲ್ಲಿ 'ವೇಪರ್‌ವೇರ್' ಎಂದು ಕರೆಯುತ್ತಾರೆ (ವೇಪರ್ = ಆವಿ). ಕೆಲವರ್ಷಗಳ ಹಿಂದೆ ವಿಪರೀತ ಸುದ್ದಿಮಾಡಿದ್ದ, ಹಾಗೂ ವಿಪರೀತ ತಡವಾಗಿ ಮಾರುಕಟ್ಟೆಗೆ ಬಂದ ಆಕಾಶ್ ಟ್ಯಾಬ್ಲೆಟ್ ಅನ್ನು ವೇಪರ್‌ವೇರ್ ಉದಾಹರಣೆಯೆಂದು ಕರೆಯಬಹುದು. ಎರಡುನೂರ ಐವತ್ತೊಂದು ರೂಪಾಯಿಗಳಿಗೆ ಮೊಬೈಲ್ ಕೊಡುವುದಾಗಿ ಹೇಳಿ ಪುಕ್ಕಟೆ ಪ್ರಚಾರ ಗಳಿಸಿಕೊಂಡ 'ಫ್ರೀಡಮ್ ೨೫೧' ಕೂಡ ಇದೇ ಗುಂಪಿಗೆ ಸೇರುವ ಇನ್ನೊಂದು ಉತ್ಪನ್ನ. ಅಂದಹಾಗೆ ಒಂದು ಸಮಯದಲ್ಲಿ ವೇಪರ್‌ವೇರ್ ಎಂದು ಕರೆಸಿಕೊಂಡ ಉತ್ಪನ್ನ ಇಲ್ಲವೇ ತಂತ್ರಜ್ಞಾನ ಆನಂತರದಲ್ಲಿ ಯಶಸ್ವಿಯಾಗಬಾರದು ಎಂದೇನೂ ಇಲ್ಲ. ಏಕೆಂದರೆ ೩ಜಿ ಹಾಗೂ ಬ್ಲೂಟೂತ್ ತಂತ್ರಜ್ಞಾನಗಳನ್ನೂ ಒಂದು ಕಾಲದಲ್ಲಿ ವೇಪರ್‌ವೇರ್ ಎಂದು ಗುರುತಿಸಲಾಗಿತ್ತು!

Viral Marketing
ವೈರಲ್ ಮಾರ್ಕೆಟಿಂಗ್
(ರೂಪಿಸಬೇಕಿದೆ)
ಅಂತರಜಾಲದ ಬಳಕೆದಾರರ ನಡುವೆ ತಮ್ಮ ಮಾಹಿತಿಯನ್ನು ಹರಡುವ ಮೂಲಕ - ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ - ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ
ವೈರಸ್ಸುಗಳಿವೆಯಲ್ಲ, ಜೀವಜಗತ್ತಿನವು, ಒಂದೆಡೆಯಿಂದ ಇನ್ನೊಂದೆಡೆಗೆ ಕ್ಷಿಪ್ರವಾಗಿ ಸಾಗುವಲ್ಲಿ ಅವನ್ನು ಬಿಟ್ಟರಿಲ್ಲ. ಸೊಳ್ಳೆಗಳ ಮೂಲಕವೋ ನೀರು-ಗಾಳಿಯ ಮೂಲಕವೋ ಅವು ಹರಡುತ್ತಲೇ ಹೋಗುತ್ತವೆ, ಅದೆಷ್ಟೋ ಜನರಿಗೆ ರೋಗಗಳನ್ನು ಅಂಟಿಸುತ್ತವೆ. ಡಿಜಿಟಲ್ ಜಗತ್ತಿನ ವೈರಸ್ಸುಗಳೂ ಜೀವಜಗತ್ತಿನ ವೈರಸ್ಸುಗಳಂತೆಯೇ. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತ ಸಿಕ್ಕ ಕಂಪ್ಯೂಟರು - ಸ್ಮಾರ್ಟ್‌ಫೋನುಗಳಿಗೆಲ್ಲ ತೊಂದರೆಕೊಡುವುದೇ ಅವುಗಳ ಕೆಲಸ. ಈ ವೈರಸ್ಸುಗಳು ಹರಡುವ ರೀತಿಯಿದೆಯಲ್ಲ, ಅದನ್ನೇ ಅನುಕರಿಸುವ ಇನ್ನೊಂದು ವಿದ್ಯಮಾನವೂ ಈಚೆಗೆ ಹೆಸರುಮಾಡುತ್ತಿದೆ. ಅಂತರಜಾಲದ ಮಾಧ್ಯಮ ಬಳಸಿ - ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ - ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ಸಂಗತಿಗಳು ಬಳಸುವ ತಂತ್ರದ ಹೆಸರೂ 'ವೈರಲ್' ಎಂದೇ. ಜನರ ಮನಸ್ಸನ್ನು ತಟ್ಟುವ ಭಾವನಾತ್ಮಕ ವಿಷಯಗಳಿಂದ ಪ್ರಾರಂಭಿಸಿ ವಿವಿಧ ಉತ್ಪನ್ನಗಳ ಜಾಹೀರಾತಿನವರೆಗೆ ಅನೇಕ ಸಂಗತಿಗಳು ಅಂತರಜಾಲದಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತ ವೈರಲ್ ಆಗಬಲ್ಲವು. ಜೋಕುಗಳು, ಸುಳ್ಳು ಸುದ್ದಿಗಳು, ಅವಹೇಳನಕಾರಿ ಸಂದೇಶಗಳು, ಕಡೆಗೆ ಸಮಾಜವಿರೋಧಿ ವಿಷಯಗಳೂ ವೈರಲ್ ಆಗುವುದುಂಟು. ಫೇಸ್‌ಬುಕ್-ಟ್ವಿಟ್ಟರಿನಂತಹ ಸಮಾಜಜಾಲಗಳ ಅಗಾಧ ವ್ಯಾಪ್ತಿಯಿಂದಾಗಿ ಬಹುತೇಕ ಯಾವುದೇ ಖರ್ಚಿಲ್ಲದೆ ಭಾರೀ ಪ್ರಚಾರ ಪಡೆದುಕೊಳ್ಳುವುದು ಈ ಸಂಗತಿಗಳಿಗೆ ಸಾಧ್ಯವಾಗುತ್ತದೆ. ಲೈಕು-ಶೇರುಗಳ ಮೂಲಕ, ಸಂದೇಶಗಳಲ್ಲಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಮೂಲಕ ಈ ವೈರಲ್ ವಿದ್ಯಮಾನ ನಡೆಯುತ್ತದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಈ ವಿದ್ಯಮಾನದ ಬಳಕೆ ಅದೆಷ್ಟು ಹೆಚ್ಚಿದೆಯೆಂದರೆ ಅಲ್ಲೀಗ 'ವೈರಲ್ ಮಾರ್ಕೆಟಿಂಗ್' ಎಂಬ ಹೊಸದೊಂದು ಪರಿಕಲ್ಪನೆಯೇ ರೂಪುಗೊಂಡಿದೆ.

Vlog
ವ್ಲಾಗ್
(ರೂಪಿಸಬೇಕಿದೆ)
ವೀಡಿಯೋ ಬ್ಲಾಗ್ ಎನ್ನುವುದರ ಹ್ರಸ್ವರೂಪ; ವೀಡಿಯೋ ಮಾಹಿತಿಯಿರುವ ಬ್ಲಾಗ್
ವಿಶ್ವವ್ಯಾಪಿ ಜಾಲವನ್ನು ಬಳಸಿಕೊಂಡು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇರುವ ಪ್ರಭಾವಶಾಲಿ ಮಾಧ್ಯಮವೇ ಬ್ಲಾಗ್. ನಮ್ಮ ಬರಹ - ಅನಿಸಿಕೆ - ಅಭಿಪ್ರಾಯಗಳನ್ನು ಸುಲಭವಾಗಿ ಹಂಚಿಕೊಳ್ಳಲು, ಓದುಗರೊಡನೆ ವಿಚಾರವಿನಿಮಯ ನಡೆಸಲು ಇದು ಒಳ್ಳೆಯ ವೇದಿಕೆ ಒದಗಿಸುತ್ತದೆ. ಬರಹಗಳನ್ನು ಹಂಚಿಕೊಳ್ಳಬಹುದು ಎಂದಮಾತ್ರಕ್ಕೆ ಬ್ಲಾಗಿನಲ್ಲಿ ಪಠ್ಯರೂಪದ ಮಾಹಿತಿಯನ್ನಷ್ಟೇ ಪ್ರಕಟಿಸಬೇಕು ಎಂದೇನೂ ಇಲ್ಲ. ಬ್ಲಾಗ್ ಮೂಲಕ ಚಿತ್ರಗಳು, ವೀಡಿಯೋ ಮುಂತಾದ ಬಹುಮಾಧ್ಯಮ (ಮಲ್ಟಿಮೀಡಿಯಾ) ಮಾಹಿತಿಯನ್ನೂ ಸುಲಭವಾಗಿ ಹಂಚಿಕೊಳ್ಳಬಹುದು. ಈ ಪೈಕಿ ವೀಡಿಯೋ ಮಾಹಿತಿಯಿರುವ ಬ್ಲಾಗುಗಳನ್ನು ವೀಡಿಯೋ ಬ್ಲಾಗ್ ಎಂದು ಕರೆಯುತ್ತಾರೆ. 'ವ್ಲಾಗ್' ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಬ್ಲಾಗ್ ಪೋಸ್ಟುಗಳಲ್ಲಿ ಪಠ್ಯ-ಚಿತ್ರಗಳೆರಡೂ ಇರುವಂತೆ ವ್ಲಾಗ್ ಪೋಸ್ಟುಗಳಲ್ಲಿ ವೀಡಿಯೋ, ಪಠ್ಯ, ಚಿತ್ರ - ಎಲ್ಲವೂ ಇರುವುದು ಸಾಧ್ಯ. ಶಿಕ್ಷಣ, ಪ್ರವಾಸ, ಅಡುಗೆ ಮುಂತಾದ ಅನೇಕ ವಿಷಯಗಳನ್ನು ಕುರಿತ ವ್ಲಾಗುಗಳನ್ನು ನಾವು ವಿಶ್ವವ್ಯಾಪಿ ಜಾಲದಲ್ಲಿ ನೋಡಬಹುದು. ಬ್ಲಾಗ್ ಬರೆಯುವವರನ್ನು ಬ್ಲಾಗರುಗಳೆಂದು ಹೆಸರಿರುವಂತೆ ವೀಡಿಯೋ ಬ್ಲಾಗ್ ನಡೆಸುವವರನ್ನು ವ್ಲಾಗರ್‌ಗಳೆಂದು ಕರೆಯುತ್ತಾರೆ. ವೀಡಿಯೋಗಳನ್ನು ಮೊದಲು ಯೂಟ್ಯೂಬ್‌ಗೆ ಸೇರಿಸಿ ಅದನ್ನು ವ್ಲಾಗಿನಲ್ಲಿ ಅಳವಡಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸ. ಜನಪ್ರಿಯ ವ್ಲಾಗರುಗಳು ತಮ್ಮ ವ್ಲಾಗಿನಲ್ಲಿ ನಿಯತವಾಗಿ ಹೊಸ ಪೋಸ್ಟುಗಳನ್ನು ಸೇರಿಸುತ್ತಿರುತ್ತಾರೆ.


logo