logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Unboxed
ಅನ್‌ಬಾಕ್ಸ್‌ಡ್
(ರೂಪಿಸಬೇಕಿದೆ)
ಮೂಲ ಪ್ಯಾಕಿಂಗ್‌ನಲ್ಲಿಲ್ಲ ಎನ್ನುವ ಕಾರಣಕ್ಕಾಗಿ ಕಡಿಮೆ ಬೆಲೆಗೆ ಮಾರಾಟವಾಗುವ ವಿದ್ಯುನ್ಮಾನ ಉಪಕರಣಗಳು
ಹೊಸ ಮಾದರಿ ಮೊಬೈಲ್ ಫೋನುಗಳನ್ನು ಪರಿಚಯಿಸುವ ವೀಡಿಯೋಗಳನ್ನು ನೀವು ಯೂಟ್ಯೂಬ್‌ನಲ್ಲಿ ನೋಡಿರಬಹುದು. ಇಂತಹ ಬಹುತೇಕ ವೀಡಿಯೋಗಳು ಪ್ರಾರಂಭವಾಗುವುದು ಮೊಬೈಲ್ ಇಟ್ಟಿರುವ ಪೆಟ್ಟಿಗೆಯನ್ನು (ಬಾಕ್ಸ್) ತೆರೆದು ಅದರೊಳಗೆ ಏನೆಲ್ಲ ಇದೆ ಎಂದು ಹೇಳುವ ಮೂಲಕ. ಹಾಗಾಗಿಯೇ ಈ ಪರಿಚಯಗಳನ್ನು 'ಅನ್‌ಬಾಕ್ಸಿಂಗ್' ಎಂದೂ ಕರೆಯುತ್ತಾರೆ. ಈ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಆನ್‌ಲೈನ್ ಅಂಗಡಿಗಳಿಂದ ಮೊಬೈಲ್ ತರಿಸುವ ನಾವು ಮನೆಯಲ್ಲೇ ಅನ್‌ಬಾಕ್ಸ್ ಮಾಡುತ್ತೇವೆ: ಪ್ಲಾಸ್ಟಿಕ್ ಹೊರಕವಚವನ್ನು ಹರಿದು, ಪೆಟ್ಟಿಗೆಯ ಮೇಲಿನ ಸೀಲ್ ಒಡೆದು ಮೊಬೈಲನ್ನು ಹೊರತೆಗೆಯುತ್ತೇವೆ. ಇದರ ನಂತರದಲ್ಲೂ ಮೊಬೈಲನ್ನು ಅಂಗಡಿಗೆ ಮರಳಿಸುವಂತಹ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ. ಅಂಗಡಿಯವರು ಒಪ್ಪಿದರೆ ಅದನ್ನು ಮರಳಿಸಿ ನಾವು ಆರಾಮಾಗಿರುತ್ತೇವೆ. ಆದರೆ ಹಾಗೆ ಮರಳಿಸಿದ ಫೋನನ್ನು ಅಂಗಡಿಯವರು ಮತ್ತೆ ಇನ್ನೊಬ್ಬರಿಗೆ ಮಾರುವುದು ಕಷ್ಟ - ತಾವು ಕೊಳ್ಳುವ ಫೋನಿನ ಪೆಟ್ಟಿಗೆ ಸೀಲ್ ಆಗಿರಬೇಕು ಎಂದು ಗ್ರಾಹಕರು ನಿರೀಕ್ಷಿಸುತ್ತಾರಲ್ಲ! ಇಂತಹ ಫೋನುಗಳನ್ನು 'ಅನ್‌ಬಾಕ್ಸ್‌ಡ್' ಫೋನುಗಳೆಂಬ ಹಣೆಪಟ್ಟಿಯೊಡನೆ ಹಲವು ಆನ್‌ಲೈನ್ ಅಂಗಡಿಗಳಲ್ಲಿ ಮಾರಲಾಗುತ್ತದೆ. ಫೋನು ಹೊಸದೇ, ಪೆಟ್ಟಿಗೆಯಲ್ಲಿರಬೇಕಾದ ಇತರ ವಸ್ತುಗಳೂ ಫೋನಿನ ಜೊತೆಗಿರುತ್ತವೆ; ಆದರೆ ಪೆಟ್ಟಿಗೆ ಸೀಲ್ ಆಗಿಲ್ಲದ ಕಾರಣದಿಂದ ಅದರ ಬೆಲೆ ಮಾತ್ರ ಮೂಲ ಬೆಲೆಗಿಂತ ಕೊಂಚ ಕಡಿಮೆಯಿರುತ್ತದೆ. ವಾರಂಟಿಯೂ ಇರುತ್ತದಾದರೂ ಹೊಸ ಫೋನುಗಳ ಹೋಲಿಕೆಯಲ್ಲಿ ವಾರಂಟಿ ಅವಧಿ ಕೊಂಚ ಕಡಿಮೆ ಇರಬಹುದು.

Unmount
ಅನ್‌ಮೌಂಟ್
(ರೂಪಿಸಬೇಕಿದೆ)
ಮಾಹಿತಿ ಸಂಗ್ರಹಣೆ ಹಾಗೂ ವರ್ಗಾವಣೆಗಾಗಿ ಬಳಸಿದ ಪೆನ್ ಡ್ರೈವ್‌ನಂತಹ ಸಾಧನವನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನಿಂದ ಬೇರ್ಪಡಿಸುವ ಸರಿಯಾದ ಕ್ರಮ
ಡಿಜಿಟಲ್ ರೂಪದ ಮಾಹಿತಿಯನ್ನು ಶೇಖರಿಸಲು, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಮೆಮೊರಿ ಕಾರ್ಡ್, ಪೆನ್ ಡ್ರೈವ್ ಮುಂತಾದ ಫ್ಲಾಶ್ ಮೆಮೊರಿ ಆಧಾರಿತ ಸಾಧನಗಳನ್ನು ಬಳಸುವ ಅಭ್ಯಾಸ ಬಹಳ ಸಾಮಾನ್ಯ. ಈ ಸಾಧನಗಳನ್ನು ಕಂಪ್ಯೂಟರಿಗೋ ಸ್ಮಾರ್ಟ್‌ಫೋನಿಗೋ ಸಂಪರ್ಕಿಸುವ ಪ್ರಕ್ರಿಯೆಯನ್ನು 'ಮೌಂಟ್ ಮಾಡುವುದು' ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯ ಮೂಲಕ ನಿರ್ದಿಷ್ಟ ಸಾಧನದಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು, ಅದರಿಂದ/ಅದಕ್ಕೆ ಮಾಹಿತಿ ವರ್ಗಾವಣೆ ಮಾಡುವುದು ಕಂಪ್ಯೂಟರಿಗೆ (ಅಥವಾ ಸ್ಮಾರ್ಟ್‌ಫೋನಿಗೆ) ಸಾಧ್ಯವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮೆಮೊರಿ ಕಾರ್ಡ್ - ಪೆನ್‌ಡ್ರೈವ್‌ಗಳನ್ನು ಜೋಡಿಸಿದ ಕೂಡಲೇ ಈ ಕೆಲಸ ಸ್ವಯಂಚಾಲಿತವಾಗಿ ನಡೆಯುತ್ತದೆ. ಆದರೆ ಈ ಸಾಧನಗಳ ಸಂಪರ್ಕ ತಪ್ಪಿಸುವುದು ಪ್ರತ್ಯೇಕವಾಗಿ ಮಾಡಬೇಕಾದ ಕೆಲಸ. ಮಾಹಿತಿ ವರ್ಗಾವಣೆಯಾಗುತ್ತಿರುವಾಗ ಕಂಪ್ಯೂಟರ್ ಜೊತೆಗಿನ ಸಂಪರ್ಕ ಇದ್ದಕ್ಕಿದ್ದಂತೆ ತಪ್ಪಿಹೋದರೆ ಮಾಹಿತಿ ನಷ್ಟವಾಗುವ ('ಕರಪ್ಟ್' ಆಗುವ) ಇಲ್ಲವೇ ಮೆಮೊರಿ ಕಾರ್ಡ್ - ಪೆನ್‌ಡ್ರೈವ್‌ಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಯನ್ನು ತಪ್ಪಿಸಲು ಅವನ್ನು 'ಅನ್‌ಮೌಂಟ್' ಮಾಡಬೇಕಾದ್ದು (ಹಾಗೂ ಅನ್‌ಮೌಂಟ್ ಮಾಡಿದ್ದಾಯಿತು ಎಂಬ ಸಂದೇಶ ದೊರೆತ ನಂತರವೇ ಅವನ್ನು ಹೊರತೆಗೆಯಬೇಕಾದ್ದು) ಅತ್ಯಗತ್ಯ. ನಮ್ಮ ಕೆಲಸ ಮುಗಿಯಿತು, ಈಗ ಮಾಹಿತಿ ವರ್ಗಾವಣೆಯನ್ನು ನಿಲ್ಲಿಸಬಹುದು ಎಂದು ಕಂಪ್ಯೂಟರಿಗೆ ಅಥವಾ ಸ್ಮಾರ್ಟ್‌ಫೋನಿಗೆ ತಿಳಿಸುವ ಕ್ರಮ ಇದು. ವಿಂಡೋಸ್ ಬಳಸುವ ಕಂಪ್ಯೂಟರುಗಳಲ್ಲಿ ಪರದೆಯ ಕೆಳಭಾಗದ ಬಲತುದಿಯಲ್ಲಿ (ಗಡಿಯಾರದ ಪಕ್ಕ) ಕಾಣುವ ಪೆನ್‌ಡ್ರೈವ್ ಚಿಹ್ನೆಯ ಮೇಲೆ - ಅಥವಾ ಮೈ ಕಂಪ್ಯೂಟರ್‌ನಲ್ಲಿ ನಮ್ಮ ಪೆನ್‌ಡ್ರೈವ್ ಹೆಸರಿನ ಮೇಲೆ - ರೈಟ್ ಕ್ಲಿಕ್ ಮಾಡಿ ಅನ್‌ಮೌಂಟ್ ಮಾಡುವುದು ಸಾಧ್ಯ (ಇದನ್ನು ಎಜೆಕ್ಟ್ ಎಂದೂ ಕರೆಯುತ್ತಾರೆ). ಎಸ್‌ಡಿ ಕಾರ್ಡ್ ಬಳಸಬಹುದಾದ ಅಥವಾ ಓಟಿಜಿ ಸೌಲಭ್ಯವಿರುವ ಆಂಡ್ರಾಯ್ಡ್ ಫೋನುಗಳಲ್ಲಿ 'ಸೆಟಿಂಗ್ಸ್ - ಸ್ಟೋರೇಜ್ ಆಂಡ್ ಯುಎಸ್‌ಬಿ' ಆಯ್ಕೆ ಬಳಸಿ ಅನ್‌ಮೌಂಟ್ ಮಾಡುವುದು ಸಾಧ್ಯ.

Upload
ಅಪ್‌ಲೋಡ್
(ರೂಪಿಸಬೇಕಿದೆ)
ವಿಶ್ವವ್ಯಾಪಿ ಜಾಲಕ್ಕೆ ಮಾಹಿತಿಯನ್ನು ಸೇರಿಸುವ ಪ್ರಕ್ರಿಯೆ
ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಾವು ಪ್ರತಿ ಕ್ಷಣವೂ ಒಂದಲ್ಲ ಒಂದು ರೀತಿಯಲ್ಲಿ ಮಾಹಿತಿಯನ್ನು ಬಳಸುತ್ತೇವೆ. ಬಹಳಷ್ಟು ಸಾರಿ ಇತರೆಡೆಗಳಿಂದ ಮಾಹಿತಿ ಪಡೆದುಕೊಂಡರೆ ಇನ್ನು ಕೆಲವೊಮ್ಮೆ ನಾವೇ ಮಾಹಿತಿಯನ್ನು ಇನ್ನೊಂದೆಡೆಗೆ ರವಾನಿಸುತ್ತೇವೆ. ಈ ಪೈಕಿ ಇತರೆಡೆಗಳಿಂದ ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ 'ಡೌನ್‌ಲೋಡ್' ಎಂದು ಕರೆಸಿಕೊಂಡರೆ ನಮ್ಮಲ್ಲಿರುವ ಮಾಹಿತಿಯನ್ನು ಜಾಲಕ್ಕೆ ಸೇರಿಸುವ ಕೆಲಸವನ್ನು 'ಅಪ್‌ಲೋಡ್' ಎಂದು ಗುರುತಿಸಲಾಗುತ್ತದೆ. ಡೌನ್‌ಲೋಡ್ ಪ್ರಕ್ರಿಯೆಯಲ್ಲಿ ಬೇರೊಂದು ಕಡೆಯಲ್ಲಿರುವ ಮಾಹಿತಿಯ ಒಂದು ಪ್ರತಿ ನಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ಟಿಗೆ ಬರುತ್ತದೆ. ಇದೇರೀತಿ ನಮ್ಮ ಮಾಹಿತಿಯ ಒಂದು ಪ್ರತಿಯನ್ನು ಬೇರೊಂದು ಕಂಪ್ಯೂಟರಿಗೆ ವರ್ಗಾಯಿಸುವುದು ಅಪ್‌ಲೋಡ್ ಪ್ರಕ್ರಿಯೆಯ ಕೆಲಸ. ಡೌನ್‌ಲೋಡ್‌ನಲ್ಲಿ ಹಲವು ವಿಧಗಳಿವೆ. ಯಾವುದೋ ಜಾಲತಾಣದಿಂದ ನಿರ್ದಿಷ್ಟ ಕಡತವನ್ನು (ತಂತ್ರಾಂಶ, ಅರ್ಜಿ ನಮೂನೆ, ಹಾಡು-ವೀಡಿಯೋ ಇತ್ಯಾದಿ) ನಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುವ ಕೆಲಸವನ್ನಷ್ಟೇ ನಾವು ಡೌನ್‌ಲೋಡ್ ಎಂದು ಕರೆಯುತ್ತೇವೆ ನಿಜ. ಆದರೆ ಜಾಲತಾಣಗಳನ್ನು ವೀಕ್ಷಿಸುವಾಗ ಚಿತ್ರಗಳು - ಪಠ್ಯಗಳೆಲ್ಲ ನಮ್ಮ ಕಂಪ್ಯೂಟರಿಗೆ ಬರುತ್ತವಲ್ಲ, ಅದೂ ಡೌನ್‌ಲೋಡ್ ಎಂದೇ ಪರಿಗಣಿಸಲ್ಪಡುತ್ತದೆ. ನಮ್ಮ ಕಡತವನ್ನು ಇತರರೊಡನೆ ಹಂಚಿಕೊಳ್ಳಲು ಗೂಗಲ್ ಡ್ರೈವ್‌ನಂತಹ ಜಾಲತಾಣಕ್ಕೆ ಸೇರಿಸುವುದು, ನಮ್ಮ ಜಾಲತಾಣದಲ್ಲಿರಬೇಕಾದ ಮಾಹಿತಿಯನ್ನು ತಾಣದ ಸರ್ವರ್‌ಗೆ ಏರಿಸುವುದು, ಇಮೇಲ್ ಸಂದೇಶದೊಡನೆ ಅಟ್ಯಾಚ್‌ಮೆಂಟ್ ಕಳುಹಿಸುವುದು - ಇವೆಲ್ಲ ಅಪ್‌ಲೋಡ್‌ಗೆ ಉದಾಹರಣೆಗಳು.

USSD
ಯುಎಸ್‌ಎಸ್‌ಡಿ
(ರೂಪಿಸಬೇಕಿದೆ)
ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ; ಜಿಎಸ್‌ಎಂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಗಳಲ್ಲೊಂದು. ಇದನ್ನು ಬಳಸಲು ಅಂತರಜಾಲ ಸಂಪರ್ಕದ ಅಗತ್ಯವಿಲ್ಲ.
ನಿರ್ದಿಷ್ಟ ಅಂಕಿ ಹಾಗೂ ಚಿಹ್ನೆಗಳ ಜೋಡಣೆಯನ್ನು ಒತ್ತುವ ಮೂಲಕ (ಉದಾ: *೧೨೩#) ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿದುಕೊಳ್ಳುವುದು ನಮಗೆ ಗೊತ್ತೇ ಇದೆ. ಇಲ್ಲಿ ಬಳಕೆಯಾಗುವ ವ್ಯವಸ್ಥೆಯ ಹೆಸರು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ, ಅಂದರೆ 'ಯುಎಸ್‌ಎಸ್‌ಡಿ'. ಜಿಎಸ್‌ಎಂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್) ಇದೊಂದು ಉದಾಹರಣೆ. ಬ್ಯಾಲೆನ್ಸ್ ತಿಳಿದುಕೊಳ್ಳಲು ಮಾಡುವಂತೆ ನಿರ್ದಿಷ್ಟ ಕ್ರಮದಲ್ಲಿ ಚಿಹ್ನೆ ಹಾಗೂ ಅಂಕಿಗಳನ್ನು ಒತ್ತುವ ಮೂಲಕ ನಾವು ವಿವಿಧ ಯುಎಸ್‌ಎಸ್‌ಡಿ ಸೇವೆಗಳನ್ನು ಬಳಸಬಹುದು. ಅಂತಹುದೊಂದು ಸೇವೆ ತೆರೆದುಕೊಂಡ ನಂತರವೂ ಅಷ್ಟೆ, ನಿರ್ದಿಷ್ಟ ಅಂಕಿಗಳನ್ನು ಒತ್ತುವ ಮೂಲಕ ಪರದೆಯ ಮೇಲೆ ಕಾಣುವ ಆಯ್ಕೆಗಳನ್ನು (ಉದಾ: ಬಿಲ್ ಆಗದಿರುವ ಮೊತ್ತ, ಹಿಂದಿನ ಬಿಲ್ ವಿವರ, ಸೇವೆಗಳ ನಿಲುಗಡೆ/ಸೇರ್ಪಡೆ ಇತ್ಯಾದಿ) ಬಳಸಬಹುದು. ನಾವಾಗಿ ನಿರ್ಗಮಿಸುವವರೆಗೂ ಯುಎಸ್‌ಎಸ್‌ಡಿ ಸಂಪರ್ಕ ತೆರೆದೇ ಇರುವುದರಿಂದ ಪ್ರತಿಕ್ರಿಯೆ ತಕ್ಷಣವೇ ದೊರಕುತ್ತದೆ, ಎಸ್ಸೆಮ್ಮೆಸ್ಸಿನ ಹಾಗೆ ಕಾಯುವ ಅಗತ್ಯ ಇರುವುದಿಲ್ಲ. ಇಷ್ಟೆಲ್ಲ ಆಯ್ಕೆಗಳ ಅಗತ್ಯವಿಲ್ಲದ ಸನ್ನಿವೇಶಗಳಲ್ಲೂ (ಉದಾ: ಫೋನಿನ ಐಎಂಇಐ ಸಂಖ್ಯೆ ತಿಳಿದುಕೊಳ್ಳಲು) ಯುಎಸ್‌ಎಸ್‌ಡಿ ಬಳಕೆ ಸಾಧ್ಯ. ಎಲ್ಲೆಲ್ಲೂ ಸ್ಮಾರ್ಟ್‌ಫೋನುಗಳೇ ರಾರಾಜಿಸುತ್ತಿರುವ ಇಂದಿನ ಕಾಲದಲ್ಲಿ ಹಳೆಯ ತಂತ್ರಜ್ಞಾನದಂತೆ ತೋರಿದರೂ ವಿವಿಧ ಸೇವೆಗಳನ್ನು ಕಟ್ಟಕಡೆಯ ಮೊಬೈಲ್ ಗ್ರಾಹಕನವರೆಗೂ ಸುಲಭವಾಗಿ ತಲುಪಿಸಲು ನೆರವಾಗುತ್ತಿರುವುದು ಯುಎಸ್‌ಎಸ್‌ಡಿಯ ಹೆಗ್ಗಳಿಕೆ. ಸರಕಾರಿ ಸೌಲಭ್ಯಗಳು, ಬ್ಯಾಂಕಿಂಗ್ ಸೇವೆ ಇತ್ಯಾದಿಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲೂ ಇದು ವ್ಯಾಪಕವಾಗಿ ಬಳಕೆಯಾಗುತ್ತಿದೆ.

USB
ಯುಎಸ್‌ಬಿ
(ರೂಪಿಸಬೇಕಿದೆ)
ಯೂನಿವರ್ಸಲ್ ಸೀರಿಯಲ್ ಬಸ್; ವಿವಿಧ ವಿದ್ಯುನ್ಮಾನ ಸಾಧನಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿಸುವ ಮಾನಕ. ಇದರ ನೆರವಿನಿಂದ ಮಾಹಿತಿ ಸಂವಹನವಷ್ಟೇ ಅಲ್ಲ, ವಿದ್ಯುತ್ ಪೂರೈಕೆ ಕೂಡ ಸಾಧ್ಯ.
ಕಂಪ್ಯೂಟರ್ ಜಗತ್ತಿನಲ್ಲಿ ಬಳಕೆಯಾಗುವ ಮಾನಕಗಳ (ಸ್ಟಾಂಡರ್ಡ್) ಪೈಕಿ ಯೂನಿವರ್ಸಲ್ ಸೀರಿಯಲ್ ಬಸ್, ಅಂದರೆ 'ಯುಎಸ್‌ಬಿ'ಗೆ ಮಹತ್ವದ ಸ್ಥಾನವಿದೆ. ಕಾರ್ಡ್ ರೀಡರಿನಿಂದ ಕಾರ್ ಸ್ಟೀರಿಯೋವರೆಗೆ, ಮನೆಯ ಟೀವಿಯಿಂದ ಮೊಬೈಲ್ ಫೋನಿನವರೆಗೆ, ಆಟಿಕೆಗಳಿಂದ ಡಿಜಿಟಲ್ ಕ್ಯಾಮೆರಾವರೆಗೆ ಎಲ್ಲೆಲ್ಲೂ ನಾವು ಇದರ ಬಳಕೆಯನ್ನು ಕಾಣಬಹುದು. ಹಲವು ಬಗೆಯ ಸಾಧನಗಳ ಕೇಬಲ್ ಅನ್ನು ಕಂಪ್ಯೂಟರಿಗೆ (ಅಥವಾ ಚಾರ್ಜರ್‌ಗೆ) ಸೇರಿಸುವ ಸಂಪರ್ಕ - 'ಪೋರ್ಟ್' - ಒಂದೇ ಬಗೆಯದಾಗಿರುವುದು ಯುಎಸ್‌ಬಿಯಿಂದ ಸಾಧ್ಯವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ (ಉದಾ: ಇಂದಿನ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಮೈಕ್ರೋ ಯುಎಸ್‌ಬಿ) ಕೇಬಲ್‌ನ ಇನ್ನೊಂದು ತುದಿಯ ವಿನ್ಯಾಸ ಕೂಡ ಸಾರ್ವತ್ರಿಕವಾಗಿರುತ್ತದೆ. ಬೇರೆಬೇರೆ ಸಾಧನಗಳಿಗೆ ಬೇರೆಬೇರೆ ರೀತಿಯ ಕೇಬಲ್ ಬಳಸಬೇಕಾದ ಅಗತ್ಯ ಇದರಿಂದ ಬಹುಮಟ್ಟಿಗೆ ಕಡಿಮೆಯಾಗಿಬಿಟ್ಟಿದೆ. ಒಂದೇ ಕೇಬಲ್ಲಿನ ಮೂಲಕ ವಿದ್ಯುತ್ ಹಾಗೂ ದತ್ತಾಂಶಗಳೆರಡನ್ನೂ ಕೊಂಡೊಯ್ಯಲು ಸಾಧ್ಯವಾಗಿಸುವುದು ಯುಎಸ್‌ಬಿಯ ವೈಶಿಷ್ಟ್ಯ. ಹಾಗಾಗಿಯೇ ಬಹಳಷ್ಟು ಸಾಧನಗಳನ್ನು ಬಳಸುವಾಗ ಅವು ಕೆಲಸಮಾಡಲು ಬರಿಯ ಯುಎಸ್‌ಬಿ ಸಂಪರ್ಕವೊಂದೇ ಸಾಕು. ದತ್ತಾಂಶ ಕೊಂಡೊಯ್ಯುವ ಕೇಬಲ್ ಮೂಲಕ ವಿದ್ಯುತ್ತೂ ಹರಿಯುವುದರಿಂದಲೇ - ಇಂದಿನ ಮೊಬೈಲುಗಳ ಡೇಟಾ ಕೇಬಲ್ ಹಾಗೂ ಚಾರ್ಜಿಂಗ್ ಕೇಬಲ್ ಎರಡೂ ಒಂದೇ ಆಗಿರುವುದು.

USB OTG
ಯುಎಸ್‌ಬಿ ಓಟಿಜಿ
(ರೂಪಿಸಬೇಕಿದೆ)
ಯುಎಸ್‌ಬಿ ಆನ್ ದ ಗೋ; ನಡುವೆ ಕಂಪ್ಯೂಟರನ್ನು ಬಳಸುವ ಅಗತ್ಯವಿಲ್ಲದೆ ಎರಡು ಸಾಧನಗಳ ನಡುವೆ ಯುಎಸ್‌ಬಿ ಸಂಪರ್ಕ ಸಾಧ್ಯವಾಗಿಸುವ ಸೌಲಭ್ಯ.
ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಬಳಕೆ ಜಾಸ್ತಿಯಾದಂತೆ ಅವು ಕಂಪ್ಯೂಟರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿವೆಯಲ್ಲ, ಹಾಗಾಗಿ ಯುಎಸ್‌ಬಿ ಬಳಸುವ ವಿವಿಧ ಸಾಧನಗಳನ್ನು (ಪೆನ್‌ಡ್ರೈವ್, ಮೌಸ್, ಕೀಬೋರ್ಡ್ ಇತ್ಯಾದಿ) ಅವುಗಳಿಗೆ ಸಂಪರ್ಕಿಸುವ ಪರಿಪಾಠವೂ ಬೆಳೆಯುತ್ತಿದೆ. ಕಂಪ್ಯೂಟರಿನ ನೆರವಿಲ್ಲದೆ ಮೊಬೈಲಿಗೋ ಟ್ಯಾಬ್ಲೆಟ್ಟಿಗೋ ಈ ಸಾಧನಗಳನ್ನೆಲ್ಲ ಸಂಪರ್ಕಿಸಲು ಸಾಧ್ಯವಾಗಿಸಿರುವುದು 'ಯುಎಸ್‌ಬಿ ಆನ್ ದ ಗೋ' ಅಥವಾ 'ಓಟಿಜಿ' ಸೌಲಭ್ಯ. ಈ ಸೌಲಭ್ಯವಿರುವ ಯಾವುದೇ ಮೊಬೈಲ್ ಹಾಗೂ ಟ್ಯಾಬ್ಲೆಟ್ಟಿಗೆ ನಾವು ಯುಎಸ್‌ಬಿ ಸಾಧನಗಳನ್ನು ಜೋಡಿಸಬಹುದು. ಇದಕ್ಕೆಂದೇ ಮೈಕ್ರೋ ಯುಎಸ್‌ಬಿ ಪೋರ್ಟ್‌ಗೆ ಜೋಡಿಸಬಹುದಾದ ಪೆನ್‌ಡ್ರೈವ್, ಕಾರ್ಡ್ ರೀಡರುಗಳೆಲ್ಲ ಬಂದಿವೆ. ಮೊಬೈಲಿಗೋ ಪವರ್‌ಬ್ಯಾಂಕಿಗೋ ಸಂಪರ್ಕಿಸಿ ಬಳಸಬಹುದಾದ ಫ್ಯಾನ್ ಕೂಡ ಇದೆ! ಇನ್ನಿತರ ಸಾಮಾನ್ಯ ಯುಎಸ್‌ಬಿ ಸಾಧನಗಳನ್ನೂ ಮೈಕ್ರೋ ಯುಎಸ್‌ಬಿ ಪೋರ್ಟ್‌ಗೆ ಜೋಡಿಸುವುದು ಸಾಧ್ಯ; ಇದಕ್ಕಾಗಿ ಒಂದು ಬದಿ ಮೈಕ್ರೋ ಯುಎಸ್‌ಬಿ ಸಂಪರ್ಕವಿರುವ, ಇನ್ನೊಂದು ಬದಿಯಲ್ಲಿ ಸಾಮಾನ್ಯ ಯುಎಸ್‌ಬಿ ಸಾಧನ ಜೋಡಿಸಬಹುದಾದ ಓಟಿಜಿ ಕೇಬಲ್ ಅಥವಾ ಅಡಾಪ್ಟರುಗಳನ್ನು ಬಳಸಬಹುದು. ನೆನಪಿಡಿ, ಇದನ್ನೆಲ್ಲ ಬಳಸಲು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಓಟಿಜಿ ಸೌಲಭ್ಯ ಇರಬೇಕಾದ್ದು ಕಡ್ಡಾಯ.

USB Type C
ಯುಎಸ್‍ಬಿ ಟೈಪ್ ಸಿ
(ರೂಪಿಸಬೇಕಿದೆ)
ಯುಎಸ್‌ಬಿ ಕೇಬಲ್ ಹಾಗೂ ಪೋರ್ಟ್‌ಗಳ ಒಂದು ವಿಧ. ವಿನ್ಯಾಸದ ಸರಳತೆ, ಹೆಚ್ಚಿನ ವೇಗದ ದತ್ತಾಂಶ ವರ್ಗಾವಣೆ ಹಾಗೂ ಹೆಚ್ಚು ಪ್ರಮಾಣದ ವಿದ್ಯುತ್ ಪೂರೈಕೆ ಈ ಮಾದರಿಯ ವೈಶಿಷ್ಟ್ಯಗಳು. ಯುಎಸ್‌ಬಿ ಟೈಪ್-ಸಿ ಕನೆಕ್ಟರುಗಳಲ್ಲಿ ಕೇಬಲ್ ತಿರುಗುಮುರುಗಾಗುವ ಸಮಸ್ಯೆಯೇ ಇಲ್ಲ.
ವಿವಿಧ ವಿದ್ಯುನ್ಮಾನ ಸಾಧನಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿಸುವ ಜನಪ್ರಿಯ ಮಾನಕ ಯುಎಸ್‌ಬಿ. ಇದರ ನೆರವಿನಿಂದ ಮಾಹಿತಿ ಸಂವಹನವಷ್ಟೇ ಅಲ್ಲ, ವಿದ್ಯುತ್ ಪೂರೈಕೆ ಕೂಡ ಸುಲಭಸಾಧ್ಯ. ಹೀಗಿದ್ದರೂ ಯುಎಸ್‌ಬಿ ಬಳಕೆ ಕಿರಿಕಿರಿಯಿಂದ ಸಂಪೂರ್ಣ ಮುಕ್ತವೇನಲ್ಲ. ಯುಎಸ್‌ಬಿ ಕೇಬಲ್ಲುಗಳನ್ನು ಕಂಪ್ಯೂಟರಿಗೆ ಜೋಡಿಸುವಾಗ, ಕಾರಿನ ಸ್ಟೀರಿಯೋಗೆ ಪೆನ್‌ಡ್ರೈವ್ ಸಿಕ್ಕಿಸುವಾಗ ಅಥವಾ ಮೊಬೈಲ್ ಫೋನನ್ನು ಚಾರ್ಜಿಂಗ್‌ಗೆ ಹಾಕುವಾಗ ಅದೆಷ್ಟೋ ಬಾರಿ ನಾವು ಕೇಬಲ್ ಅನ್ನು ತಿರುಗುಮುರುಗಾಗಿ ಹಿಡಿದಿರುತ್ತೇವೆ; ಅದೇರೀತಿ ಸಂಪರ್ಕಿಸಲು ಪ್ರಯತ್ನಿಸಿ ಅದು ವಿಫಲವಾದ ನಂತರವಷ್ಟೇ ಕೇಬಲ್ಲನ್ನು ಸರಿಯಾಗಿ ತಿರುಗಿಸುತ್ತೇವೆ. ಈ ಗೊಂದಲವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪರಿಚಯಿಸಲಾಗಿರುವ ಹೊಸ ಆವೃತ್ತಿಯೇ 'ಯುಎಸ್‌ಬಿ ಟೈಪ್-ಸಿ'. ೨೦೧೫ರಿಂದ ಈಚೆಗೆ ಪ್ರಚಲಿತಕ್ಕೆ ಬರುತ್ತಿರುವ, ಕೆಲವು ಹೊಸ ಮೊಬೈಲುಗಳಲ್ಲಿ ಕಾಣಿಸಿಕೊಂಡಿರುವ ಯುಎಸ್‌ಬಿ ಟೈಪ್-ಸಿ ಕನೆಕ್ಟರುಗಳಲ್ಲಿ ಕೇಬಲ್ ತಿರುಗುಮುರುಗಾಗುವ ಸಮಸ್ಯೆಯೇ ಇಲ್ಲ: ಮೇಲ್ನೋಟಕ್ಕೆ ಮೈಕ್ರೋ ಯುಎಸ್‌ಬಿಯಂತೆಯೇ ಕಂಡರೂ ಈ ಕನೆಕ್ಟರುಗಳನ್ನು ಹೇಗೆ ಬೇಕಾದರೂ ಜೋಡಿಸುವುದು ಸಾಧ್ಯ. ಹೀಗಾಗಿ ಈ ಬಗೆಯ ಕನೆಕ್ಟರ್ ಇರುವ ಮೊಬೈಲ್ ಫೋನಿಗೆ ನಾವು ಚಾರ್ಜಿಂಗ್ ಕೇಬಲನ್ನು ಕಣ್ಣುಮುಚ್ಚಿಕೊಂಡೂ ಜೋಡಿಸಿಬಿಡಬಹುದು! ಅಷ್ಟೇ ಅಲ್ಲ, ಮುಂದೊಂದು ದಿನ ಎರಡೂ ಬದಿಯಲ್ಲಿ ಈ ಬಗೆಯ ಸಂಪರ್ಕಗಳೇ ಇರುವ ಕೇಬಲ್ಲುಗಳು ಬಳಕೆಗೆ ಬಂದರೆ ಕಂಪ್ಯೂಟರಿಗೆ ಸಂಪರ್ಕಿಸುವ ಬದಿ ಯಾವುದು, ಮೊಬೈಲಿಗೆ ಸಂಪರ್ಕಿಸುವ ಬದಿ ಯಾವುದು ಎಂದು ಯೋಚಿಸುವ ಅಗತ್ಯವೂ ಇರಲಾರದು. ಅಂದಹಾಗೆ ಟೈಪ್-ಸಿ ಕೇಬಲ್ಲುಗಳ ಹೆಚ್ಚುಗಾರಿಕೆ ವಿನ್ಯಾಸದ ಸರಳತೆಯಷ್ಟೇ ಅಲ್ಲ. ಇವುಗಳ ಮೂಲಕ ದತ್ತಾಂಶ ಹರಿಯುವ ವೇಗ ಹಿಂದೆಂದಿಗಿಂತ ಹೆಚ್ಚು; ಜೊತೆಗೆ ಇವು ಹಿಂದಿನ ಯುಎಸ್‌ಬಿ ವಿನ್ಯಾಸಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನೂ ಪೂರೈಸಬಲ್ಲವು.

USB Hub
ಯುಎಸ್‌ಬಿ ಹಬ್
(ರೂಪಿಸಬೇಕಿದೆ)
ಒಂದಕ್ಕಿಂತ ಹೆಚ್ಚು ಸಂಖ್ಯೆಯ ಯುಎಸ್‌ಬಿ ಪೋರ್ಟುಗಳನ್ನು ಹೊಂದಿರುವ ಸಾಧನ; ಕಂಪ್ಯೂಟರಿನಲ್ಲಿರುವ ಒಂದೇ ಯುಎಸ್‌ಬಿ ಪೋರ್ಟ್ ಬಳಸಿಕೊಂಡು ಹೆಚ್ಚಿನ ಸಂಖ್ಯೆಯ ಸಾಧನಗಳನ್ನು ಸಂಪರ್ಕಿಸುವುದನ್ನು ಇದು ಸಾಧ್ಯವಾಗಿಸುತ್ತದೆ.
ಮೊಬೈಲ್ ಚಾರ್ಜರ್, ಪೆನ್‌ಡ್ರೈವ್, ಕಾರ್ಡ್ ರೀಡರ್, ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್ - ಹೀಗೆ ನಾವು ಪ್ರತಿನಿತ್ಯವೂ ಬಳಸುವ ಹಲವಾರು ಸಾಧನಗಳಿಗೆ ಯುಎಸ್‌ಬಿ ಸಂಪರ್ಕ ಅತ್ಯಗತ್ಯ. ಸಾಂಪ್ರದಾಯಿಕವಾಗಿ ಬೇರೆ ಬಗೆಯ ಸಂಪರ್ಕಗಳನ್ನು ಬಳಸುತ್ತಿದ್ದ ಪ್ರಿಂಟರ್, ಸ್ಪೀಕರ್ ಮುಂತಾದ ಸಾಧನಗಳೂ ಈಚಿನ ವರ್ಷಗಳಲ್ಲಿ ಯುಎಸ್‌ಬಿಯತ್ತ ಮುಖಮಾಡಿರುವುದರಿಂದ ಕಂಪ್ಯೂಟರಿನಲ್ಲಿ ಯುಎಸ್‌ಬಿ ಪೋರ್ಟುಗಳು ಎಷ್ಟಿದ್ದರೂ ಸಾಲುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನೆರವಿಗೆ ಬರುವುದು 'ಯುಎಸ್‌ಬಿ ಹಬ್' ಎಂಬ ವಿಶೇಷ ಸಾಧನ. ವಿದ್ಯುತ್ ಸಂಪರ್ಕ ಬಳಸಲು ಒಂದೇ ಪ್ಲಗ್ ಇರುವಾಗ ಅದಕ್ಕೆ ಎಕ್ಸ್‌ಟೆನ್ಶನ್ ಬಾಕ್ಸ್ ಹಾಕಿಕೊಂಡು ಒಂದಕ್ಕಿಂತ ಹೆಚ್ಚು ಸಾಧನಗಳನ್ನು ಜೋಡಿಸುತ್ತೇವಲ್ಲ, ಈ ಯುಎಸ್‌ಬಿ ಹಬ್ ಕೆಲಸಮಾಡುವುದೂ ಹೆಚ್ಚೂಕಡಿಮೆ ಅದೇರೀತಿ. ಒಂದಕ್ಕಿಂತ ಹೆಚ್ಚು ಸಂಖ್ಯೆಯ ಯುಎಸ್‌ಬಿ ಪೋರ್ಟುಗಳನ್ನು ಹೊಂದಿರುವ ಈ ಸಾಧನವನ್ನು ಕಂಪ್ಯೂಟರಿಗೆ ಜೋಡಿಸಿದರೆ ಆಯಿತು, ಅದರ ಮೂಲಕ ಪೆನ್‌ಡ್ರೈವ್ - ಕಾರ್ಡ್ ರೀಡರ್ ಮುಂತಾದ ಬೇರೆಬೇರೆ ಸಾಧನಗಳನ್ನು ಏಕಕಾಲದಲ್ಲೇ ಸಂಪರ್ಕಿಸುವುದು ಸಾಧ್ಯವಾಗುತ್ತದೆ. ಯುಎಸ್‌ಬಿ ಹಬ್‌ಗಳಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ಗುರುತಿಸಬಹುದು. ಮೊದಲನೆಯ ವಿಧದ ಹಬ್‌ಗಳು ಯುಎಸ್‌ಬಿ ಮೂಲಕ ದೊರಕುವ ವಿದ್ಯುತ್ತನ್ನಷ್ಟೇ ಬಳಸುತ್ತವೆ - ಮೌಸ್, ಕೀಬೋರ್ಡ್, ಕಾರ್ಡ್ ರೀಡರ್ ಮುಂತಾದ ಸಾಧನಗಳನ್ನು ಸಂಪರ್ಕಿಸಲು ಈ ಬಗೆಯವನ್ನು ಧಾರಾಳವಾಗಿ ಬಳಸಬಹುದು. ಇನ್ನೊಂದು ವಿಧದ ಹಬ್‌ಗಳಿಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ನೀಡಬೇಕಿರುತ್ತದೆ: ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್‌ನಂತಹ ಸಾಧನಗಳನ್ನು ಇಂತಹ ಯುಎಸ್‌ಬಿ ಹಬ್ ಜೊತೆಗೇ ಬಳಸುವುದು ಅಪೇಕ್ಷಣೀಯ. ಈ ಬಗೆಯ ಹಬ್‌ಗಳ ಬೆಲೆ, ಸಹಜವಾಗಿಯೇ, ಮೊದಲ ಬಗೆಯ ಯುಎಸ್‌ಬಿ ಹಬ್‌ಗಳಿಗಿಂತ ಜಾಸ್ತಿಯಿರುತ್ತದೆ. ಈಚೆಗೆ ಹೆಚ್ಚುಹೆಚ್ಚು ಸಾಧನಗಳು ಯುಎಸ್‌ಬಿ ೩.೦ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ನಾವು ಕೊಳ್ಳುವ ಯುಎಸ್‌ಬಿ ಹಬ್‌ನಲ್ಲೂ ಆ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.

Unicode
ಯುನಿಕೋಡ್
(ರೂಪಿಸಬೇಕಿದೆ)
ಮಾಹಿತಿ ಶೇಖರಣೆಗಾಗಿ ಬಳಸಲಾಗುವ ಜಾಗತಿಕ ಸಂಕೇತ ವಿಧಾನ. ಮಾಹಿತಿ ಸಂವಹನೆಯಲ್ಲಿ ಅಕ್ಷರಶೈಲಿಯ (ಫಾಂಟ್) ಸಂಕೇತಗಳ ಬದಲಿಗೆ ಮೂಲ ಮಾಹಿತಿಯನ್ನೇ ಕಳುಹಿಸುವುದರಿಂದ ಆ ಮಾಹಿತಿಯನ್ನು ಬಳಸುವವರು ಇಂಥದ್ದೇ ಅಕ್ಷರಶೈಲಿ ಬಳಸಬೇಕೆಂಬ ನಿರ್ಬಂಧ ಇರುವುದಿಲ್ಲ.
ಹಿಂದೆ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ. ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ - ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ ಇದ್ದರೆ ಸಾಕು. ಹಾಗಾಗಿ ಇಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು - ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡುವುದು ಸಾಧ್ಯವಾಗುತ್ತದೆ. 'ಬರಹ', 'ನುಡಿ', 'ಪದ' ಸೇರಿದಂತೆ ಈಚಿನ ಬಹುತೇಕ ತಂತ್ರಾಂಶಗಳನ್ನು ಬಳಸಿ ಯುನಿಕೋಡ್‌ನಲ್ಲಿ ಟೈಪ್ ಮಾಡುವುದು ಸಾಧ್ಯ. ಅಂದಹಾಗೆ ಯುನಿಕೋಡ್ ಅಕ್ಷರಶೈಲಿಯೆಂದರೆ ವಿಂಡೋಸ್‌ನಲ್ಲಿ ದೊರಕುವ 'ತುಂಗಾ' ಒಂದೇ ಅಲ್ಲ. ಬರಹ, ನುಡಿ ಸೇರಿದಂತೆ ಹಲವು ತಂತ್ರಾಂಶಗಳಲ್ಲಿ ಯುನಿಕೋಡ್‌ಗೆಂದೇ ಪ್ರತ್ಯೇಕ ಫಾಂಟುಗಳಿವೆ.

UPI
ಯುಪಿಐ
(ರೂಪಿಸಬೇಕಿದೆ)
ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್; ಸುರಕ್ಷಿತವಾಗಿ, ಸುಲಭವಾಗಿ ಹಣ ವರ್ಗಾಯಿಸಲು ಅನುವುಮಾಡಿಕೊಡುವ ನಗದುರಹಿತ ವ್ಯವಸ್ಥೆ.
ಅಂಚೆ ವ್ಯವಸ್ಥೆಯಲ್ಲಿ ಇಮೇಲ್ ತಂದಂತಹುದೇ ಬದಲಾವಣೆಯನ್ನು ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವ ಕೆಲಸದಲ್ಲಿ ತಂದಿರುವುದು ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ರೂಪಿಸಿರುವ 'ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್' (ಯುಪಿಐ) ಎಂಬ ವ್ಯವಸ್ಥೆ. ಇಮೇಲ್ ಕಳುಹಿಸಿದಷ್ಟೇ ಸುಲಭವಾಗಿ ಹಣ ವರ್ಗಾಯಿಸುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಗುತ್ತದೆ ಎನ್ನುವುದು ವಿಶೇಷ. ಯುಪಿಐ ಬೆಂಬಲಿಸುವ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಅದಕ್ಕೆ ನಮ್ಮ ಖಾತೆಯನ್ನು ಜೋಡಿಸುವುದು ಇಲ್ಲಿ ಮಾಡಬೇಕಿರುವ ಮೊದಲ ಕೆಲಸ (ಇದಕ್ಕಾಗಿ ಕೇಂದ್ರ ಸರಕಾರದ 'ಭೀಮ್', ನಮ್ಮದೇ ಬ್ಯಾಂಕಿನ ಆಪ್ ಅಥವಾ 'ಫೋನ್‌ಪೆ'ಯಂತಹ ಖಾಸಗಿ ಆಪ್‌ಗಳನ್ನು ಬಳಸಬಹುದು). ಆನಂತರ ನಮ್ಮ ಖಾತೆಯನ್ನು ಪ್ರತಿನಿಧಿಸುವ ವರ್ಚುಯಲ್ ಪ್ರೈವೇಟ್ ಅಡ್ರೆಸ್ (ವಿಪಿಎ, you@yourbank ಎಂಬ ರೂಪದ್ದು) ರೂಪಿಸಿಕೊಂಡರೆ ಆಯಿತು, ನಮಗೆ ಹಣಕೊಡಬೇಕಿರುವ ಯಾರು ಬೇಕಾದರೂ ಆ ವಿಳಾಸಕ್ಕೆ ಥಟ್ಟನೆ ಹಣ ವರ್ಗಾಯಿಸುವುದು ಸಾಧ್ಯ. ನಾವೂ ಅಷ್ಟೇ, ಇಮೇಲ್ ಕಳಿಸಿದಷ್ಟೇ ಸುಲಭವಾಗಿ ಬೇರೊಬ್ಬರ ವಿಳಾಸಕ್ಕೆ ತಕ್ಷಣವೇ ಹಣ ಕಳುಹಿಸಬಹುದು (ಐಎಫ್‌ಎಸ್‌ಸಿ-ಅಕೌಂಟ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ-ಎಂಎಂಐಡಿ ಬಳಸಿಯೂ ಹಣ ಪಾವತಿಸುವುದು ಸಾಧ್ಯ). ಯುಪಿಐ ವ್ಯವಸ್ಥೆ ಹಣ ವರ್ಗಾವಣೆಗೆ ಐಎಂಪಿಎಸ್ ವಿಧಾನ ಬಳಸುವುದರಿಂದ ಇಲ್ಲಿ ತಕ್ಷಣವೇ ಹಣ ವರ್ಗಾವಣೆಯಾಗುತ್ತದೆ. ಹಣ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗುವುದರಿಂದ ವ್ಯಾಲೆಟ್‌ಗೆ ಹಣ ಹಾಕಿಡುವ ತಲೆಬಿಸಿಯೂ ಇಲ್ಲ. ವ್ಯವಹಾರವೆಲ್ಲ ಮೊಬೈಲಿನಲ್ಲೇ ನಡೆಯುವುದರಿಂದ ಹಣ ಪಡೆದುಕೊಳ್ಳುವವರು ಸ್ವೈಪಿಂಗ್ ಮಶೀನ್ ಇಟ್ಟುಕೊಳ್ಳಬೇಕಾಗಿಯೂ ಇಲ್ಲ. ವಿಪಿಎ ಬಳಸುವುದರಿಂದ ಪ್ರತಿ ಬಾರಿಯೂ ಐಎಫ್‌ಎಸ್‌ಸಿ ಸಂಖ್ಯೆ, ಅಕೌಂಟ್ ಸಂಖ್ಯೆಗಳನ್ನೆಲ್ಲ ನೀಡಬೇಕಾದ ಅಗತ್ಯ ಕೂಡ ನಿವಾರಣೆಯಾಗುತ್ತದೆ. ಅಂದಹಾಗೆ ಯುಪಿಐ ಬಳಸಲು ಸ್ಮಾರ್ಟ್‌ಫೋನ್ ಹಾಗೂ ಅಂತರಜಾಲ ಸಂಪರ್ಕ ಇರಬೇಕಾದ್ದು, ನಿಮ್ಮ ಬ್ಯಾಂಕು ಯುಪಿಐ ಸೌಲಭ್ಯ ನೀಡಬೇಕಾದ್ದು, ಬ್ಯಾಂಕಿನಲ್ಲಿ ನೋಂದಾಯಿತವಾದ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕಾದ್ದು ಕಡ್ಡಾಯ.


logo