logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

GILT
ಜಿಐಎಲ್‌ಟಿ
(ರೂಪಿಸಬೇಕಿದೆ)
'ಗ್ಲೋಬಲೈಸೇಶನ್, ಇಂಟರ್‌ನ್ಯಾಶನಲೈಸೇಶನ್, ಲೋಕಲೈಸೇಶನ್, ಟ್ರಾನ್ಸ್‌ಲೇಶನ್' ಎನ್ನುವುದರ ಹ್ರಸ್ವರೂಪ; ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುವ ಕುರಿತು ನಮ್ಮ ಗಮನಸೆಳೆಯುವ ಪರಿಕಲ್ಪನೆ
ಇಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸದವರು ಯಾರೂ ಇರಲಿಕ್ಕಿಲ್ಲ. ಹೀಗಾಗಿಯೇ ಇಂದಿನ ತಂತ್ರಾಂಶಗಳು ಪ್ರಪಂಚದಾದ್ಯಂತ ಬಳಕೆಯಾಗುತ್ತವೆ. ಆದರೆ ಒಂದೇ ತಂತ್ರಾಂಶವನ್ನು ಯಾವುದೇ ಬದಲಾವಣೆಯಿಲ್ಲದೆ ಎಲ್ಲರೂ ಬಳಸುವುದು ಕಷ್ಟ. ಬೇರೆಬೇರೆ ಪ್ರದೇಶಗಳ ಸ್ಥಳೀಯ ಅಗತ್ಯಗಳಿಗೆ ಹೊಂದಿಕೊಳ್ಳಲು ಕನಿಷ್ಟಪಕ್ಷ ಸಣ್ಣಪುಟ್ಟ ಬದಲಾವಣೆಗಳನ್ನಾದರೂ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಂತಹ ಬದಲಾವಣೆಗಳತ್ತ ನಮ್ಮ ಗಮನಸೆಳೆಯುವ ಪರಿಕಲ್ಪನೆಯೇ ಜಿಐಎಲ್‌ಟಿ, ಅಂದರೆ 'ಗ್ಲೋಬಲೈಸೇಶನ್, ಇಂಟರ್‌ನ್ಯಾಶನಲೈಸೇಶನ್, ಲೋಕಲೈಸೇಶನ್ ಮತ್ತು ಟ್ರಾನ್ಸ್‌ಲೇಶನ್'. ರೂಪಿಸಲು ಹೊರಟಿರುವ ಉತ್ಪನ್ನ ವಿಶ್ವ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದುವಂತಿರಬೇಕು ಎನ್ನುವುದು ಗ್ಲೋಬಲೈಸೇಶನ್‌ನ ಉದ್ದೇಶ. ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಭಾಷೆಗಳನ್ನು - ಮಾನಕಗಳನ್ನು ಬಳಸುವುದು ಅಗತ್ಯವಾಗುತ್ತದಲ್ಲ, ಇದೆಲ್ಲ ಇಂಟರ್‌ನ್ಯಾಶನಲೈಸೇಶನ್ ಅಡಿಯಲ್ಲಿ ಬರುತ್ತವೆ. ತಂತ್ರಾಂಶವಷ್ಟೇ ಸಿದ್ಧವಾದರೆ ಸಾಲದು; ಅದರಲ್ಲಿ ಬಳಕೆಯಾಗುವ ಬಣ್ಣ-ಚಿತ್ರ-ಉದಾಹರಣೆಗಳನ್ನು ಸ್ಥಳೀಯ ಸಂಸ್ಕೃತಿ - ಸಂಪ್ರದಾಯಗಳಿಗೆ ಹೊಂದುವಂತೆ ಬದಲಿಸುವುದೂ ಅಗತ್ಯ. ಇದು ಲೋಕಲೈಸೇಶನ್. ಇನ್ನು ಪಠ್ಯರೂಪದಲ್ಲಿರುವ ಮಾಹಿತಿಯನ್ನೆಲ್ಲ (ತಂತ್ರಾಂಶದ ಆಯ್ಕೆಗಳು, ಸಹಾಯ ಇತ್ಯಾದಿ) ಸ್ಥಳೀಯ ಭಾಷೆಗೆ ಅನುವಾದಿಸುವುದು ಟ್ರಾನ್ಸ್‌ಲೇಶನ್‌ನ ಕೆಲಸ. ವಿಶ್ವದಾದ್ಯಂತ ಬಳಕೆಯಲ್ಲಿರುವ ಅನೇಕ ತಂತ್ರಾಂಶಗಳನ್ನು ನಮ್ಮ ಬಳಕೆಗೆ ಒಗ್ಗಿಸಿಕೊಳ್ಳುವ ಇಂತಹ ಪ್ರಯತ್ನಗಳು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಜಾರಿಯಲ್ಲಿವೆ.

GPU
ಜಿಪಿಯು
(ರೂಪಿಸಬೇಕಿದೆ)
ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್; ಚಿತ್ರಗಳನ್ನು (ಗ್ರಾಫಿಕ್ಸ್) ಸರಾಗವಾಗಿ ಸಂಸ್ಕರಿಸಲು ಹಾಗೂ ಪ್ರದರ್ಶಿಸಲು ಅನುವುಮಾಡಿಕೊಡುವ ಯಂತ್ರಾಂಶ.
ಕಂಪ್ಯೂಟರಿನ, ಸ್ಮಾರ್ಟ್‌ಫೋನಿನ ಹೃದಯದಂತೆ ಕೆಲಸಮಾಡುವುದು ಅದರ ಕೇಂದ್ರೀಯ ನಿಯಂತ್ರಣ ಘಟಕ (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ - ಸಿಪಿಯು). ಈ ಸಾಧನಗಳಲ್ಲಿ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಸಿಪಿಯುನ ಜವಾಬ್ದಾರಿ. ಈಚೆಗೆ ಮಾರುಕಟ್ಟೆಗೆ ಬರುತ್ತಿರುವ ಅನೇಕ ಕಂಪ್ಯೂಟರುಗಳಲ್ಲಿ, ಮೊಬೈಲ್ ಫೋನುಗಳಲ್ಲಿ 'ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್' ಎಂಬ ಇನ್ನೊಂದು ಭಾಗವೂ ಇರುತ್ತದೆ. ಜಿಪಿಯು ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಇತ್ತೀಚಿನ ತಂತ್ರಾಂಶಗಳಲ್ಲಿ ಉನ್ನತ ಗುಣಮಟ್ಟದ ಚಿತ್ರಗಳು (ಗ್ರಾಫಿಕ್ಸ್) ಬಳಕೆಯಾಗುತ್ತವಲ್ಲ - ಚಿತ್ರ, ವೀಡಿಯೋ, ಗೇಮ್ಸ್ ಇತ್ಯಾದಿಗಳಲ್ಲಿ - ಅವುಗಳನ್ನು ಸರಾಗವಾಗಿ ಸಂಸ್ಕರಿಸಲು ಹಾಗೂ ಪ್ರದರ್ಶಿಸಲು ಉನ್ನತಮಟ್ಟದ ಸಂಸ್ಕರಣಾ ಸಾಮರ್ಥ್ಯ (ಪ್ರಾಸೆಸಿಂಗ್ ಪವರ್) ಬೇಕಾಗುತ್ತದೆ. ಕಂಪ್ಯೂಟರಿನ - ಮೊಬೈಲಿನ ಸಮಸ್ತ ಕೆಲಸಗಳನ್ನೂ ಅದರ ಸಿಪಿಯು ನಿಭಾಯಿಸಬೇಕಿರುವುದರಿಂದ ಗ್ರಾಫಿಕ್ಸ್‌ಗೆಂದೇ ಇಷ್ಟೆಲ್ಲ ಸಾಮರ್ಥ್ಯವನ್ನು ಮೀಸಲಿಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಗ್ರಾಫಿಕ್ಸ್ ನಿಭಾಯಿಸುವ ಕೆಲಸವನ್ನು ಜಿಪಿಯುಗೆ ನೀಡಲಾಗಿರುತ್ತದೆ. ಸಿಪಿಯುನಲ್ಲಿರುವುದು ಕೆಲವೇ ತಿರುಳುಗಳು (ಕೋರ್). ಇವು ತಮಗೆ ನೀಡಿದ ದತ್ತಾಂಶವನ್ನು ಕ್ರಮಾನುಗತವಾಗಿ (ಸೀಕ್ವೆನ್ಶಿಯಲ್ ಸೀರಿಯಲ್ ಪ್ರಾಸೆಸಿಂಗ್) ಸಂಸ್ಕರಿಸುತ್ತವೆ. ಆದರೆ ಜಿಪಿಯುನಲ್ಲಿರುವ ದೊಡ್ಡ ಸಂಖ್ಯೆಯ ತಿರುಳುಗಳು ಏಕಕಾಲದಲ್ಲೇ ಹಲವಾರು ಕೆಲಸಗಳನ್ನು ಸಮಾನಾಂತರವಾಗಿ ನಿರ್ವಹಿಸಬಲ್ಲವು. ಹೀಗಾಗಿಯೇ ಜಿಪಿಯು ಬಳಸಿ ಕ್ಲಿಷ್ಟ ಕೆಲಸಗಳನ್ನು ಸರಾಗವಾಗಿ ನಿರ್ವಹಿಸುವುದು ಸಾಧ್ಯವಾಗುತ್ತದೆ. ತಂತ್ರಾಂಶಗಳು ಹೆಚ್ಚು ಸಂಕೀರ್ಣವಾಗುತ್ತಿದ್ದಂತೆ ಅವುಗಳಿಗೆ ಬೇಕಾದ ಸಂಸ್ಕರಣಾ ಸಾಮರ್ಥ್ಯವೂ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ಸಿಪಿಯು-ಜಿಪಿಯು ಜೋಡಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿವೆ. ನಿರ್ವಹಿಸುತ್ತಿರುವ ಕೆಲಸದಲ್ಲಿ ಹೆಚ್ಚು ಸಂಸ್ಕರಣೆ ಬಯಸುವಂತಹ ಹೆಜ್ಜೆಗಳನ್ನು ಸಿಪಿಯು ಬದಲಿಗೆ ಜಿಪಿಯುಗೆ ವಹಿಸಿಕೊಡುವುದು, ಮಿಕ್ಕ ಹೆಜ್ಜೆಗಳನ್ನು ಸಿಪಿಯು ಬಳಸಿಯೇ ನಿರ್ವಹಿಸುವುದು ಈ ಪ್ರಯತ್ನಗಳ ಹೂರಣ.

GIF
ಜಿಫ್
(ರೂಪಿಸಬೇಕಿದೆ)
ಗ್ರಾಫಿಕ್ಸ್ ಇಂಟರ್‌ಚೇಂಜ್ ಫಾರ್ಮ್ಯಾಟ್; ಎರಡು ಆಯಾಮದ ಸಾಮಾನ್ಯ ಚಿತ್ರಗಳ ಜೊತೆಗೆ ಸಣ್ಣ ಅನಿಮೇಶನ್ ಪ್ರಸಂಗಗಳನ್ನೂ ಉಳಿಸಿಡಲು ನೆರವಾಗುವ ವಿಧಾನ (ಫೈಲ್ ಫಾರ್ಮ್ಯಾಟ್)
ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನಲ್ಲಿ ಚಿತ್ರರೂಪದ ಕಡತಗಳನ್ನು ನೋಡುವಾಗ ಅವುಗಳ ಹೆಸರಿಗೆ ಬೇರೆಬೇರೆ ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್‌ಗಳಿರುವುದನ್ನು ನಾವು ನೋಡಬಹುದು - ಜೆಪಿಜಿ, ಪಿಎನ್‌ಜಿ, ಬಿಎಂಪಿ... ಹೀಗೆ. ಇದೇ ರೀತಿ ಕೆಲ ಚಿತ್ರಗಳಿಗೆ 'ಜಿಫ್' ಎಂಬ ಫೈಲ್ ಎಕ್ಸ್‌ಟೆನ್ಷನ್ ಕೂಡ ಇರುವುದುಂಟು. ಜಿಫ್ ಎಂಬ ಹೆಸರು 'ಗ್ರಾಫಿಕ್ಸ್ ಇಂಟರ್‌ಚೇಂಜ್ ಫಾರ್ಮ್ಯಾಟ್' ಎನ್ನುವುದರ ಹ್ರಸ್ವರೂಪ. ಡಿಜಿಟಲ್ ರೂಪದ ಚಿತ್ರಗಳನ್ನು ಉಳಿಸಿಡಲು ಬಳಕೆಯಾಗುವ ವಿಧಾನಗಳಲ್ಲಿ (ಫೈಲ್ ಫಾರ್ಮ್ಯಾಟ್) ಇದೂ ಒಂದು. ಅಮೆರಿಕಾದ ಸ್ಟೀವ್ ವಿಲ್‌ಹೈಟ್ ಎಂಬ ತಂತ್ರಜ್ಞನ ನೇತೃತ್ವದಲ್ಲಿ ೧೯೮೭ರಲ್ಲಿ ರೂಪುಗೊಂಡ ಈ ವಿಧಾನದಲ್ಲಿ ಎರಡು ಆಯಾಮದ ಸಾಮಾನ್ಯ ಚಿತ್ರಗಳಷ್ಟೇ ಅಲ್ಲದೆ ಸಣ್ಣ ಅನಿಮೇಶನ್ ಪ್ರಸಂಗಗಳನ್ನೂ ಉಳಿಸಿಡುವುದು ಸಾಧ್ಯ (ಅಂತಹ ಕಡತಗಳನ್ನು 'ಅನಿಮೇಟೆಡ್ ಜಿಫ್' ಎಂದು ಕರೆಯುತ್ತಾರೆ). ಅಂತರಜಾಲ ಸಂಪರ್ಕಗಳು ಬಹಳ ನಿಧಾನವಾಗಿದ್ದ ಕಾಲದಲ್ಲಿ ಬೇಗನೆ ಲೋಡ್ ಆಗುವ ಬಣ್ಣದ ಚಿತ್ರಗಳನ್ನು ಪರಿಚಯಿಸಿದ್ದು, ಜಾಲತಾಣಗಳಲ್ಲಿ ಅನಿಮೇಶನ್ ಸೇರಿಸುವುದನ್ನೂ ಸಾಧ್ಯವಾಗಿಸಿದ್ದು ಜಿಫ್‌ನ ಹೆಗ್ಗಳಿಕೆ. 'ಪಿಎನ್‌ಜಿ'ಯಂತಹ (ಪೋರ್ಟಬಲ್ ನೆಟ್‌ವರ್ಕ್ ಗ್ರಾಫಿಕ್ಸ್) ಹೊಸ ಫೈಲ್ ಫಾರ್ಮ್ಯಾಟ್‌ಗಳ ಪರಿಚಯವಾದ ನಂತರ ಚಿತ್ರಗಳನ್ನು ಉಳಿಸಿಡಲು ಜಿಫ್ ಬಳಕೆ ಬಹುಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಈಚೆಗೆ ಅನಿಮೇಟೆಡ್ ಚಿತ್ರಗಳನ್ನು ಹಂಚಿಕೊಳ್ಳುವ - ವೀಕ್ಷಿಸುವ ಹೊಸ ಟ್ರೆಂಡ್ ಸೃಷ್ಟಿಯಾದ ನಂತರ ಜಿಫ್ ಚಿತ್ರಗಳು ಫೇಸ್‌ಬುಕ್ - ವಾಟ್ಸ್‌ಆಪ್‌ಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ. ೨೦-೩೦ ಚಿತ್ರಗಳ ಸರಣಿಯನ್ನು ಕ್ಲಿಕ್ಕಿಸಿ ಅದನ್ನು ಅನಿಮೇಟೆಡ್ ಜಿಫ್ ರೂಪದಲ್ಲಿ ಉಳಿಸಿಡುವ ಸೌಲಭ್ಯ ಹಲವು ಮೊಬೈಲ್ ಕ್ಯಾಮೆರಾಗಳಲ್ಲೂ ಬಂದಿದೆ.

Geotagging
ಜಿಯೋಟ್ಯಾಗಿಂಗ್
(ರೂಪಿಸಬೇಕಿದೆ)
ಛಾಯಾಚಿತ್ರ - ವೀಡಿಯೋಗಳ ಜೊತೆಯಲ್ಲಿ ಅದನ್ನು ಎಲ್ಲಿ ಕ್ಲಿಕ್ಕಿಸಿದ್ದು ಎನ್ನುವ ಮಾಹಿತಿಯನ್ನೂ (ಜಿಪಿಎಸ್ ನಿರ್ದೇಶಾಂಕಗಳ ರೂಪದಲ್ಲಿ) ಸೇರಿಸಿಡುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
ಪ್ರವಾಸ ಹೋದಾಗ ತೆಗೆದ ಛಾಯಾಚಿತ್ರಗಳನ್ನು ಮುದ್ರಿಸಿ ಆಲ್ಬಮ್ಮಿಗೆ ಹಾಕಿಡುತ್ತಿದ್ದ ಅಭ್ಯಾಸ ಒಂದು ಕಾಲದಲ್ಲಿತ್ತು. ಪ್ರತಿ ಚಿತ್ರವನ್ನೂ ಎಲ್ಲಿ ಕ್ಲಿಕ್ಕಿಸಿದ್ದು ಎನ್ನುವುದನ್ನು ಬರೆದಿಡುವವರೂ ಇದ್ದರು. ಕೆಲಸಮಯದ ನಂತರ ಆ ಚಿತ್ರವನ್ನು ನೋಡಿದಾಗ ಅದನ್ನು ಕ್ಲಿಕ್ಕಿಸಿದ ಸನ್ನಿವೇಶ ನೆನಪಿಸಿಕೊಳ್ಳಲು ಈ ಅಭ್ಯಾಸ ನೆರವಾಗುತ್ತಿತ್ತು. ಕ್ಯಾಮೆರಾಗಳು - ಚಿತ್ರಗಳೆಲ್ಲ ಡಿಜಿಟಲ್ ಆದಮೇಲೆ ಚಿತ್ರಗಳನ್ನು ಮುದ್ರಿಸಿಡುವ ಅಭ್ಯಾಸ ಗಣನೀಯವಾಗಿ ಕಡಿಮೆಯಾಯಿತು. ಆಲ್ಬಮ್ ಬದಲು ಚಿತ್ರಗಳನ್ನು ಈಗ ಮೊಬೈಲಿನಲ್ಲಿ - ಕಂಪ್ಯೂಟರಿನಲ್ಲಿ ಶೇಖರಿಸಿಡುತ್ತೇವೆ, ಸರಿ. ಆದರೆ ಚಿತ್ರಗಳನ್ನು ಕ್ಲಿಕ್ಕಿಸಿದ್ದೆಲ್ಲಿ ಎಂದು ಗುರುತಿಟ್ಟುಕೊಳ್ಳುವುದು ಹೇಗೆ? ಇದಕ್ಕೆ ನೆರವಾಗುವ ಪ್ರಕ್ರಿಯೆಯ ಹೆಸರೇ 'ಜಿಯೋಟ್ಯಾಗಿಂಗ್'. ಛಾಯಾಚಿತ್ರ - ವೀಡಿಯೋಗಳ ಜೊತೆಯಲ್ಲಿ ಅದನ್ನು ಎಲ್ಲಿ ಕ್ಲಿಕ್ಕಿಸಿದ್ದು ಎನ್ನುವ ಮಾಹಿತಿಯನ್ನೂ (ಜಿಪಿಎಸ್ ನಿರ್ದೇಶಾಂಕಗಳ ರೂಪದಲ್ಲಿ) ಸೇರಿಸಿಡುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ಈ ಮಾಹಿತಿ ಬಳಸಿಕೊಂಡು ಚಿತ್ರವನ್ನು ಇಂಥದ್ದೇ ಸ್ಥಳದಲ್ಲಿ ಕ್ಲಿಕ್ಕಿಸಲಾಯಿತು ಎಂದು ನಿಖರವಾಗಿ ಗುರುತಿಸಬಹುದು. ಬಹುತೇಕ ಮೊಬೈಲುಗಳಲ್ಲಿ ಜಿಪಿಎಸ್ ಸೌಲಭ್ಯ ಇರುವುದರಿಂದ ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಜಿಯೋಟ್ಯಾಗ್ ಮಾಡುವುದು ಬಹಳ ಸುಲಭ (ಕ್ಯಾಮೆರಾದ ಸೆಟಿಂಗ್ಸ್‌ನಲ್ಲಿ ಈ ಆಯ್ಕೆ ಇರುತ್ತದೆ). ಈಚೆಗೆ ಹಲವು ಕ್ಯಾಮೆರಾಗಳಲ್ಲೂ ಜಿಪಿಎಸ್ ವ್ಯವಸ್ಥೆ ಇದೆ. ಜಿಪಿಎಸ್ ಇಲ್ಲದ ಕ್ಯಾಮೆರಾಗಳಲ್ಲೂ ಜಿಯೋಟ್ಯಾಗಿಂಗ್ ಮಾಡಲು 'ಜಿಯೋಟ್ಯಾಗರ್' ಎಂಬ ಪುಟಾಣಿ ಸಾಧನವನ್ನು ಬಳಸಬಹುದು. ನಮ್ಮ ಸುತ್ತಮುತ್ತಲೂ ಇರುವ ಸ್ಥಳಗಳ ಕುರಿತ ಸಚಿತ್ರ ಮಾಹಿತಿ ನೀಡಲು, ಚಿತ್ರದಲ್ಲಿರುವ ಸ್ಥಳದ ಸುತ್ತಮುತ್ತ ಇರುವ ಅಂಗಡಿ-ಹೋಟಲುಗಳ ಪಟ್ಟಿ ಒದಗಿಸಲು - ಹೀಗೆ ಛಾಯಾಚಿತ್ರದ ಜೊತೆಗಿರುವ ಸ್ಥಳದ ಮಾಹಿತಿಯನ್ನು ಹಲವು ವಿಧಗಳಲ್ಲಿ ಬಳಸಿಕೊಳ್ಳುವುದು ಸಾಧ್ಯ. ಖಾಸಗಿ ಚಿತ್ರಗಳಲ್ಲಿ ಹೀಗೆ ಸ್ಥಳದ ಮಾಹಿತಿ ಇದ್ದರೆ ಅದು ನಮ್ಮ ಗೋಪ್ಯತೆಗೆ ಧಕ್ಕೆತರುವ ಸಾಧ್ಯತೆಯೂ ಇರುವುದರಿಂದ ಜಿಯೋಟ್ಯಾಗಿಂಗ್ ಸೌಲಭ್ಯವನ್ನು ಎಚ್ಚರದಿಂದ ಬಳಸಬೇಕಾದ್ದು ಅನಿವಾರ್ಯ.

Geofencing
ಜಿಯೋಫೆನ್ಸಿಂಗ್
(ರೂಪಿಸಬೇಕಿದೆ)
ಮೊಬೈಲ್ ಆಪ್‌ಗಳು (ಅಥವಾ ಜಿಪಿಎಸ್ ಬಳಸುವ ಇನ್ನಾವುದೇ ಸಾಧನ) ನಿರ್ದಿಷ್ಟ ಪ್ರದೇಶದಲ್ಲಿದ್ದಾಗ ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
ಹೋಟಲಿನಿಂದ ಊಟ-ತಿಂಡಿ ತರಿಸಲು, ಎಲ್ಲಿಗೋ ಹೋಗಬೇಕಾದಾಗ ಆಟೋ-ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವ ಅಭ್ಯಾಸ ನಗರಗಳಲ್ಲಿ ವ್ಯಾಪಕವಾಗಿದೆ. ಇಂತಹ ಆಪ್‌ಗಳನ್ನು ಬಳಸುವಾಗ ನಾವೊಂದು ಕುತೂಹಲದ ಸಂಗತಿಯನ್ನು ಗಮನಿಸಬಹುದು - ಒಂದೇ ಆಪ್‌ನಲ್ಲಿ ನಮ್ಮ ಮನೆ ವಿಳಾಸ ಹಾಕಿದಾಗ ದೊರಕುವ ಹೋಟಲುಗಳ ಪಟ್ಟಿಗೂ ಪಕ್ಕದ ಬೀದಿಗೆ ಊಟ ತಂದುಕೊಡಬಲ್ಲ ಹೋಟಲುಗಳ ಪಟ್ಟಿಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ; ಅಷ್ಟೇ ಅಲ್ಲ, ಊರಿನಿಂದ ಬರುವಾಗ ನಗರದ ಹೊರವಲಯದಲ್ಲಿ 'ನೋ ಸರ್ವಿಸ್' ಎಂದು ತೋರಿಸುವ ಟ್ಯಾಕ್ಸಿ ಆಪ್ ನಾವು ಕೊಂಚ ದೂರ ಕ್ರಮಿಸುವಷ್ಟರಲ್ಲೇ ಸುತ್ತಮುತ್ತಲ ಟ್ಯಾಕ್ಸಿಗಳನ್ನು ತೋರಿಸಲು ಪ್ರಾರಂಭಿಸುತ್ತದೆ! ಇದಕ್ಕೆ ಕಾರಣವಾದ ತಂತ್ರಜ್ಞಾನದ ಹೆಸರೇ ಜಿಯೋಫೆನ್ಸಿಂಗ್. ಮೊಬೈಲ್ ಆಪ್‌ಗಳು (ಅಥವಾ ಜಿಪಿಎಸ್ ಬಳಸುವ ಇನ್ನಾವುದೇ ಸಾಧನ) ನಿರ್ದಿಷ್ಟ ಪ್ರದೇಶದಲ್ಲಿದ್ದಾಗ ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುವುದನ್ನು ಇದು ಸಾಧ್ಯವಾಗಿಸುತ್ತದೆ. ಗೂಗಲ್ ಮ್ಯಾಪ್ಸ್‌ನಂತಹ ಸೌಲಭ್ಯಗಳನ್ನು ಬಳಸುವಾಗ ನಮ್ಮ ಊರಿನ ಭೂಪಟ ಕಾಣಿಸುತ್ತದಲ್ಲ, ಆ ಭೂಪಟದಲ್ಲಿ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ ಆ ಬೇಲಿಯೊಳಗೆ ಮಾತ್ರವೇ ತಮ್ಮ ಸೇವೆಗಳನ್ನು ಒದಗಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಇದನ್ನು ಜಿಯೋ'ಫೆನ್ಸಿಂಗ್' (ಫೆನ್ಸ್ = ಬೇಲಿ) ಎಂದು ಕರೆಯುವುದೂ ಅದೇ ಕಾರಣಕ್ಕಾಗಿ. ಮೇಲಿನ ಉದಾಹರಣೆಗಳಲ್ಲಿ ಹೋಟಲಿನವರು ಎಲ್ಲೆಲ್ಲಿಗೆ ತಿಂಡಿ ಸರಬರಾಜು ಮಾಡುತ್ತೇವೆ ಎನ್ನುವುದನ್ನು, ಟ್ಯಾಕ್ಸಿ ಸಂಸ್ಥೆಯವರು ಎಲ್ಲೆಲ್ಲಿ ಕಾರ್ಯಾಚರಿಸುತ್ತೇವೆ ಎನ್ನುವುದನ್ನೆಲ್ಲ ಮ್ಯಾಪಿನಲ್ಲಿ ಈ ರೀತಿಯ ಬೇಲಿಗಳನ್ನು ರೂಪಿಸುವುದರ ಮೂಲಕ ನಿರ್ಧರಿಸಿರುತ್ತಾರೆ. ಅಂಗಡಿಯ ನೂರಿನ್ನೂರು ಮೀಟರ್ ಆಸುಪಾಸಿನಲ್ಲಿರುವವರಿಗೆ ವಿಶೇಷ ರಿಯಾಯಿತಿಯ ಬಗ್ಗೆ ಜಾಹೀರಾತು ಕಳಿಸುವುದು, ಸರಕು ಸಾಗಾಣಿಕೆ ವಾಹನ ನಿರ್ದಿಷ್ಟ ಹಾದಿಯನ್ನು ಬಿಟ್ಟು ಬೇರೆ ಕಡೆ ಹೋದರೆ ಮಾಲೀಕರನ್ನು ಎಚ್ಚರಿಸುವುದು, ಮಕ್ಕಳು-ವಯಸ್ಸಾದವರು ತಮ್ಮ ಪರಿಚಿತ ಪ್ರದೇಶದಿಂದ ಹೊರಹೋದರೆ ಪೋಷಕರಿಗೆ ತಿಳಿಸುವುದು - ಇಂತಹ ಇನ್ನೂ ಅನೇಕ ಉದ್ದೇಶಗಳಿಗೆ ಜಿಯೋಫೆನ್ಸಿಂಗ್ ತಂತ್ರಜ್ಞಾನವನ್ನು ಬಳಸುವುದು ಸಾಧ್ಯ.

Gesture Control
ಜೆಸ್ಚರ್ ಕಂಟ್ರೋಲ್
(ರೂಪಿಸಬೇಕಿದೆ)
ಅಂಗಾಂಗಗಳ ಚಲನೆಯ ಮೂಲಕ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳನ್ನು ನಿಯಂತ್ರಿಸಲು ನೆರವಾಗುವ ವ್ಯವಸ್ಥೆ
ಕಂಪ್ಯೂಟರುಗಳು ಮೊದಲಿಗೆ ಪರಿಚಯವಾದಾಗ ಅವಕ್ಕೆ ಆದೇಶ ನೀಡಲು ರಂಧ್ರ ಕೊರೆದ ರಟ್ಟಿನ ತುಂಡುಗಳನ್ನು (ಪಂಚ್ಡ್ ಕಾರ್ಡ್) ಬಳಸಲಾಗುತ್ತಿತ್ತು. ಆನಂತರ ಕೀಬೋರ್ಡ್ ಬಳಸಿ ಪಠ್ಯರೂಪದ ಆದೇಶಗಳನ್ನು ನೀಡುವ ವ್ಯವಸ್ಥೆ ಬಂತು, ಮುಂದೆ ಮೌಸ್ ಪರಿಚಯವಾದಮೇಲೆ ಚಿತ್ರಗಳ ಮೇಲೆ ಕ್ಲಿಕ್ಕಿಸುವ ಮೂಲಕವೇ ಅವುಗಳೊಡನೆ ಸಂವಹನ ಸಾಧ್ಯವಾಯಿತು. ಭೌತಿಕ ಜಗತ್ತಿನ ಸಂವಹನದಲ್ಲಿ ಧ್ವನಿಯ ಜೊತೆಗೆ ನಮ್ಮ ದೇಹದ ಭಾವ-ಭಂಗಿಗಳೂ (ಬಾಡಿ ಲ್ಯಾಂಗ್ವೆಜ್) ಪ್ರಮುಖ ಪಾತ್ರವಹಿಸುತ್ತದೆ. ಹೀಗಿರುವಾಗ ಡಿಜಿಟಲ್ ಜಗತ್ತಿನಲ್ಲೂ ನಾವು ಕೀಬೋರ್ಡ್ - ಮೌಸ್ ಸಹವಾಸ ಬಿಟ್ಟು ಕೈಸನ್ನೆ - ಕಣ್ಸನ್ನೆಗಳನ್ನು ಬಳಸಬಾರದೇಕೆ? ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ 'ಜೆಸ್ಚರ್ ಕಂಟ್ರೋಲ್'. ಅಂಗಾಂಗಗಳ ಚಲನೆಯ ಮೂಲಕ ನಾವು ನೀಡುವ ಸನ್ನೆ - ಸಂಕೇತಗಳನ್ನು ಬಳಸಿ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳನ್ನು ಅವುಗಳನ್ನು ಮುಟ್ಟದೆಯೇ ನಿಯಂತ್ರಿಸುವುದನ್ನು ಇದು ಸಾಧ್ಯವಾಗಿಸುತ್ತದೆ. ಕ್ಯಾಮೆರಾ ಮೂಲಕ ನಮ್ಮ ಕೈಗಳ ಚಲನೆಯನ್ನು ಗಮನಿಸಿಕೊಂಡು ಬೇರೆಬೇರೆ ಸನ್ನೆಗಳಿಗೆ ಪ್ರತಿಯಾಗಿ ಬೇರೆಬೇರೆ ಕೆಲಸಗಳನ್ನು ಮಾಡುವ (ಮುಂದಿನ ಚಿತ್ರ ತೋರಿಸು, ವಾಲ್ಯೂಂ ಹೆಚ್ಚಿಸು, ಮ್ಯೂಟ್ ಮಾಡು ಇತ್ಯಾದಿ) ತಂತ್ರಜ್ಞಾನವನ್ನು ಈಗಾಗಲೇ ಹಲವು ಸಾಧನಗಳಲ್ಲಿ ಬಳಸಲಾಗುತ್ತಿದೆ. ಸನ್ನೆಗಳ ಮೂಲಕ ಸ್ಮಾರ್ಟ್‌ಫೋನ್ ಚಟುವಟಿಕೆ ನಿಯಂತ್ರಿಸುವ ಹಲವು ಆಯ್ಕೆಗಳೂ ಇದೀಗ ದೊರಕುತ್ತಿವೆ. ಮೌಸ್ ಬಳಸುವ ವ್ಯವಸ್ಥೆಗಳನ್ನು 'ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್' (ಜಿಯುಐ) ಎಂದು ಕರೆದಂತೆ ಜೆಸ್ಚರ್ ಕಂಟ್ರೋಲ್ ವ್ಯವಸ್ಥೆಗಳನ್ನು 'ನ್ಯಾಚುರಲ್ ಯೂಸರ್ ಇಂಟರ್‌ಫೇಸ್' ಎಂದೂ ಗುರುತಿಸಲಾಗುತ್ತದೆ.


logo