logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Compile
ಕಂಪೈಲ್
(ರೂಪಿಸಬೇಕಿದೆ)
ಮೇಲುಸ್ತರದ (ಹೈ ಲೆವೆಲ್) ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದ ಕ್ರಮವಿಧಿಯನ್ನು ಕಂಪ್ಯೂಟರಿಗೆ ಅರ್ಥವಾಗುವ ಯಂತ್ರಭಾಷೆಗೆ ಪರಿವರ್ತಿಸುವ ಪ್ರಕ್ರಿಯೆ
ಕಂಪ್ಯೂಟರಿಗೆ ಅರ್ಥವಾಗುವುದು ದ್ವಿಮಾನ ಪದ್ಧತಿಯ ಅಂಕಿಗಳಷ್ಟೇ ಎನ್ನುವುದನ್ನು ನಾವು ಕೇಳಿದ್ದೇವೆ. ಆದರೆ ಅದರಲ್ಲಿ ಬಳಸಲು ಬರೆಯಲಾಗುವ ಬಹುತೇಕ ಪ್ರೋಗ್ರಾಮುಗಳು ನಮಗೆ ಅರ್ಥವಾಗುವ (ಸರಿಸುಮಾರು ಇಂಗ್ಲಿಷನ್ನು ಹೋಲುವ) ಪ್ರೋಗ್ರಾಮಿಂಗ್ ಭಾಷೆಯಲ್ಲಿರುವುದು ಸಾಮಾನ್ಯ. ಇಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದ ಪ್ರೋಗ್ರಾಮು ಕಂಪ್ಯೂಟರಿಗೆ ನೇರವಾಗಿ ಅರ್ಥವಾಗುವುದೇ ಇಲ್ಲ. ಇಂತಹ ಕ್ರಮವಿಧಿಯ ಭಾಷೆ ಯಂತ್ರಭಾಷೆಗಿಂತ ಹೆಚ್ಚಾಗಿ ಬಾಹ್ಯಪ್ರಪಂಚದ ಭಾಷೆಗಳನ್ನೇ ಹೋಲುವುದರಿಂದ ಅದನ್ನು ಮೊದಲಿಗೆ ಕಂಪ್ಯೂಟರಿಗೆ ಅರ್ಥವಾಗುವ ಯಂತ್ರಭಾಷೆಗೆ ಪರಿವರ್ತಿಸಿಕೊಳ್ಳುವುದು ಅಗತ್ಯವಾಗುತ್ತದೆ. ಮೇಲುಸ್ತರದ (ಹೈ ಲೆವೆಲ್) ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬರೆದ ಕ್ರಮವಿಧಿಯನ್ನು ಅರ್ಥಮಾಡಿಕೊಂಡು ಅದನ್ನು ಕಂಪ್ಯೂಟರಿಗೆ ಅರ್ಥವಾಗುವ ಯಂತ್ರಭಾಷೆಗೆ ಪರಿವರ್ತಿಸುವ ಈ ಪ್ರಕ್ರಿಯೆಯನ್ನು 'ಕಂಪೈಲ್ ಮಾಡುವುದು' ಎಂದು ಗುರುತಿಸಲಾಗುತ್ತದೆ. ಈ ಕೆಲಸ ಮಾಡುವ ವಿಶೇಷ ತಂತ್ರಾಂಶವೇ 'ಕಂಪೈಲರ್' (ಕೆಲ ಪ್ರೋಗ್ರಾಮಿಂಗ್ ಭಾಷೆಗಳು ಈ ಪ್ರಕ್ರಿಯೆಯಲ್ಲಿ 'ಇಂಟರ್‌ಪ್ರೆಟರ್' ಎನ್ನುವ ತಂತ್ರಾಂಶವನ್ನು ಬಳಸುವುದೂ ಉಂಟು). ಕಂಪೈಲರಿನಿಂದ ದೊರಕುವ ಫಲಿತಾಂಶವನ್ನು ಕಂಪ್ಯೂಟರಿನ ಪ್ರಾಸೆಸರ್ ನೇರವಾಗಿ ಅರ್ಥಮಾಡಿಕೊಳ್ಳಬಲ್ಲದು - ಹಾಗಾಗಿ ನಮ್ಮ ಪ್ರೋಗ್ರಾಮು ನಿಜಕ್ಕೂ ಕೆಲಸಮಾಡುವುದು ಕಂಪೈಲರ್ ಮೂಲಕ ಹಾದು ಬಂದಾಗಲಷ್ಟೇ! ಅಂದಹಾಗೆ ನಾವು ಹೇಳಬೇಕಾದ್ದನ್ನು ಕಂಪ್ಯೂಟರಿಗೆ ಅರ್ಥಮಾಡಿಸಲು ಇಂತಹ ತಂತ್ರಾಂಶಗಳ ನೆರವು ದೊರಕುವುದರಿಂದ ಪ್ರೋಗ್ರಾಮಿಂಗ್ ಭಾಷೆಗಳು ಇಂಗ್ಲಿಷ್ ಲಿಪಿಯನ್ನೇ ಬಳಸಬೇಕೆಂಬ ನಿರ್ಬಂಧವೇನೂ ಇಲ್ಲ. ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡರೆ ಇಂಗ್ಲಿಷಿನಲ್ಲಿ ಪ್ರೋಗ್ರಾಮಿಂಗ್ ಮಾಡಿದಷ್ಟೇ ಸುಲಭವಾಗಿ ಕನ್ನಡದಲ್ಲೂ ಕ್ರಮವಿಧಿಗಳನ್ನು ರಚಿಸಬಹುದು.

Comment
ಕಮೆಂಟ್
(ರೂಪಿಸಬೇಕಿದೆ)
ಕಂಪ್ಯೂಟರ್ ಪ್ರೋಗ್ರಾಮಿನಲ್ಲಿ ಬಳಸಿದ ತರ್ಕವನ್ನು ಅದೇ ಪ್ರೋಗ್ರಾಮಿನೊಳಗೆ ಸಂಕ್ಷಿಪ್ತವಾಗಿ ವಿವರಿಸುವ ಪಠ್ಯ
ನಿರ್ದಿಷ್ಟ ಫೇಸ್‌ಬುಕ್ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಯಾಗಿ ಬರೆಯುವ ಸಂದೇಶ ಹಾಗೂ ಹಂಚಿಕೊಳ್ಳುವ ಮಾಹಿತಿಯನ್ನು 'ಕಮೆಂಟ್' ಎಂದು ಕರೆಯುವುದು ನಮಗೆಲ್ಲ ಗೊತ್ತೇ ಇದೆ. ಇದರ ಜೊತೆಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಜಗತ್ತಿನಲ್ಲಿ ಇನ್ನೊಂದು ಬಗೆಯ ಕಮೆಂಟ್ ಕೂಡ ಇದೆ. ಕಂಪ್ಯೂಟರ್ ಪ್ರೋಗ್ರಾಮಿನಲ್ಲಿ ನಾವು ಬಳಸಿದ ತರ್ಕವನ್ನು ಅದೇ ಪ್ರೋಗ್ರಾಮಿನೊಳಗೆ ಸಂಕ್ಷಿಪ್ತವಾಗಿ ವಿವರಿಸುವ ಪಠ್ಯವನ್ನು ಕೂಡ 'ಕಮೆಂಟ್' ಎಂದೇ ಕರೆಯುತ್ತಾರೆ. ಪ್ರೋಗ್ರಾಮಿನ ಕಾರ್ಯಾಚರಣೆಗೆ ಅನಗತ್ಯವಾದ, ಆದರೆ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಮಹತ್ವದ ಮಾಹಿತಿ ಇದು. ಪ್ರೋಗ್ರಾಮಿನ ಉದ್ದೇಶ ಏನು, ಅದರ ನಿರ್ದಿಷ್ಟ ಭಾಗಗಳು ಏನು ಕೆಲಸ ಮಾಡುತ್ತಿವೆ, ಪ್ರೋಗ್ರಾಮಿನ ಈ ಹೆಜ್ಜೆಯನ್ನು ಹೀಗೆಯೇ ಬರೆದಿರುವುದು ಏಕೆ - ಮುಂತಾದ ಅನೇಕ ಪ್ರಶ್ನೆಗಳಿಗೆ ಕಮೆಂಟುಗಳ ರೂಪದ ಉತ್ತರ ಬರೆದಿಟ್ಟರೆ ಮುಂದೆ ಆ ಪ್ರೋಗ್ರಾಮನ್ನು ನಿರ್ವಹಿಸುವುದು, ಬದಲಿಸುವುದು ಸುಲಭವಾಗುತ್ತದೆ. ಕಮೆಂಟುಗಳನ್ನು ಸೇರಿಸುವ ವಿಧಾನ ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಬೇರೆಬೇರೆ ರೀತಿಯಾಗಿರುತ್ತದೆ. ಸಾಮಾನ್ಯವಾಗಿ ಕಮೆಂಟುಗಳನ್ನು ನಿರ್ದಿಷ್ಟ ಲೇಖನಚಿಹ್ನೆಗಳ ನಂತರ (', //), ಅಥವಾ ನಡುವೆ (/*, */ ಇತ್ಯಾದಿ) ಬರೆಯುವುದು ಸಂಪ್ರದಾಯ. ಪ್ರೋಗ್ರಾಮಿನಲ್ಲಿರುವ ಆದೇಶಗಳನ್ನೆಲ್ಲ ಪಾಲಿಸುವ ಕಂಪ್ಯೂಟರ್ ಈ ಚಿಹ್ನೆಗಳನ್ನು ಗುರುತಿಸಿ ಅವುಗಳ ಜೊತೆಯಲ್ಲಿ ಬರೆದಿರುವುದನ್ನೆಲ್ಲ ಸಾರಾಸಗಟಾಗಿ ಉಪೇಕ್ಷಿಸುವುದರಿಂದ ಕಮೆಂಟುಗಳು ಪ್ರೋಗ್ರಾಮ್ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Command Prompt
ಕಮ್ಯಾಂಡ್ ಪ್ರಾಂಪ್ಟ್
(ರೂಪಿಸಬೇಕಿದೆ)
ಕಂಪ್ಯೂಟರಿಗೆ ನೀಡಬೇಕಾದ ಪಠ್ಯರೂಪದ ಆದೇಶವನ್ನು ಟೈಪ್ ಮಾಡಲು ಅನುವುಮಾಡಿಕೊಡುವ ಸೌಲಭ್ಯ
ಕಂಪ್ಯೂಟರ್ ಉಪಯೋಗಿಸುವಾಗ ಐಕನ್‌ಗಳ ಮೇಲೆ ಕ್ಲಿಕ್ಕಿಸುವುದು, ಆ ಮೂಲಕ ನಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವುದು ತೀರಾ ಸಾಮಾನ್ಯವಾಗಿರುವ ಸಂಗತಿ. ಇದನ್ನು ಸಾಧ್ಯವಾಗಿಸುವ ವ್ಯವಸ್ಥೆಗಳನ್ನು 'ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್' (ಜಿಯುಐ) ಎಂದು ಕರೆಯುತ್ತಾರೆ. ಇಂತಹ ವ್ಯವಸ್ಥೆಗಳು ರೂಪುಗೊಳ್ಳುವ ಮೊದಲು ಕಂಪ್ಯೂಟರಿಗೆ ನೀಡುವ ಆದೇಶಗಳೆಲ್ಲ ಪಠ್ಯರೂಪದಲ್ಲಿರಬೇಕಾದ್ದು ಅಗತ್ಯವಾಗಿತ್ತು. ಹೊಸ ಕಡತ ರೂಪಿಸುವುದು, ಅದರ ಹೆಸರು ಬದಲಿಸುವುದು, ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವುದು ಎಲ್ಲವೂ ನಿರ್ದಿಷ್ಟ ಆದೇಶಗಳನ್ನು ಟೈಪಿಸಿದರೆ ಮಾತ್ರ ಸಾಧ್ಯವಾಗುವಂತಿತ್ತು. ಇಂತಹ ವ್ಯವಸ್ಥೆಗೆ ಸಿಯುಐ, ಅಂದರೆ 'ಕ್ಯಾರೆಕ್ಟರ್ ಯೂಸರ್ ಇಂಟರ್‌ಫೇಸ್' ಎಂಬ ಹೆಸರು. ಇಲ್ಲಿ ಆದೇಶಗಳನ್ನು ಟೈಪ್ ಮಾಡಲು, ಆ ಮೂಲಕ ಕಂಪ್ಯೂಟರಿನೊಡನೆ ಸಂವಹನ ನಡೆಸಲು ಇರುತ್ತಿದ್ದ ಸೌಲಭ್ಯವೇ ಕಮ್ಯಾಂಡ್ ಪ್ರಾಂಪ್ಟ್. ನಮ್ಮ ಮುಂದಿನ ಆದೇಶವನ್ನು (ಕಮ್ಯಾಂಡ್) ನಿರ್ದಿಷ್ಟ ಸಾಲಿನಲ್ಲಿ ಟೈಪ್ ಮಾಡಲು ಬಳಕೆದಾರರನ್ನು ಪ್ರೇರಿಸುವುದು (ಪ್ರಾಂಪ್ಟ್) ಈ ಸೌಲಭ್ಯದ ವೈಶಿಷ್ಟ್ಯ. ಕಮ್ಯಾಂಡ್ ಪ್ರಾಂಪ್ಟ್‌ನ ಬಳಕೆ ಈಚಿನ ವರ್ಷಗಳಲ್ಲಿ ತೀರಾ ಕಡಿಮೆಯಾಗಿಬಿಟ್ಟಿದೆ. ಆದರೂ ಆಧುನಿಕ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಅದಕ್ಕೆ ಇನ್ನೂ ಜಾಗವಿದೆ. ವಿಂಡೋಸ್ ಬಳಕೆದಾರರು 'ವಿಂಡೋಸ್+ಆರ್' ಕೀಲಿಗಳನ್ನು ಒತ್ತಿ 'cmd' ಎಂದು ಟೈಪಿಸುವ ಮೂಲಕ ಕಮ್ಯಾಂಡ್ ಪ್ರಾಂಪ್ಟ್‌ಗೆ ತಲುಪಬಹುದು. ನಿರ್ದಿಷ್ಟ ಫೋಲ್ಡರಿನಲ್ಲಿರುವ ಕಡತಗಳ ಪಟ್ಟಿಯನ್ನು ಪ್ರದರ್ಶಿಸುವ 'dir', ಇಂದಿನ ದಿನಾಂಕ ತೋರಿಸುವ 'date' - ಇಲ್ಲಿ ಬಳಸಬಹುದಾದ ಪಠ್ಯರೂಪದ ಆದೇಶಗಳಿಗೆ ಇವೆಲ್ಲ ಉದಾಹರಣೆಗಳು.

Communications Satellite
ಕಮ್ಯೂನಿಕೇಶನ್ಸ್ ಸ್ಯಾಟೆಲೈಟ್
(ರೂಪಿಸಬೇಕಿದೆ)
ಸಂವಹನಕ್ಕಾಗಿ ಬಳಕೆಯಾಗುವ ಮಾನವನಿರ್ಮಿತ ಉಪಗ್ರಹ
ಮಾನವನಿರ್ಮಿತ ಉಪಗ್ರಹಗಳ (ಆರ್ಟಿಫೀಶಿಯಲ್ ಸ್ಯಾಟೆಲೈಟ್) ಬಗ್ಗೆ ನಾವೆಲ್ಲ ಕೇಳಿಯೇ ಇರುತ್ತೇವೆ. ವೈಜ್ಞಾನಿಕ ಅಧ್ಯಯನ, ಹವಾಮಾನ ಮುನ್ಸೂಚನೆ ಮುಂತಾದ ಅನೇಕ ಉದ್ದೇಶಗಳಿಗಾಗಿ ಅವು ಬಳಕೆಯಾಗುತ್ತವೆ ಎನ್ನುವುದೂ ನಮಗೆ ಗೊತ್ತು. ಈ ಪೈಕಿ ಸಂವಹನಕ್ಕಾಗಿ ಬಳಕೆಯಾಗುವ ಉಪಗ್ರಹಗಳನ್ನು ಕಮ್ಯೂನಿಕೇಶನ್ಸ್ ಸ್ಯಾಟೆಲೈಟ್‌ಗಳೆಂದು ಕರೆಯುತ್ತಾರೆ. ಟೀವಿ ಪ್ರಸಾರದಲ್ಲಿ ನೆರವಾಗುವುದು ಈ ಉಪಗ್ರಹಗಳ ಪ್ರಮುಖ ಜವಾಬ್ದಾರಿ. ಮನೆಗಳಲ್ಲಿ ಡಿಟಿಎಚ್ ಮೂಲಕ ಟೀವಿ ಪ್ರಸಾರ ವೀಕ್ಷಿಸುತ್ತೇವಲ್ಲ, ಪ್ರಸಾರ ಕೇಂದ್ರದಿಂದ ನಮ್ಮ ಮನೆ ಮೇಲಿನ ಡಿಶ್ ಆಂಟೆನಾವರೆಗೆ ಟೀವಿ ಸಂಕೇತಗಳನ್ನು ತಲುಪಿಸುವುದು ಸಂವಹನ ಉಪಗ್ರಹಗಳದೇ ಕೆಲಸ. ಕೆಲವು ದಶಕಗಳ ಹಿಂದೆ ಖಂಡಾಂತರ ದೂರವಾಣಿ ಕರೆಗಳನ್ನು ಸಾಧ್ಯವಾಗಿಸಲೂ ಈ ಉಪಗ್ರಹಗಳನ್ನು ಬಳಸಲಾಗುತ್ತಿತ್ತು. ಈಗ, ದೂರಸಂಪರ್ಕದ ಬೇರೆ ಮಾರ್ಗಗಳು ರೂಪುಗೊಂಡ ನಂತರ, ಸಾಮಾನ್ಯ ದೂರವಾಣಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಮಾತ್ರವೇ ಸ್ಯಾಟೆಲೈಟ್ ಟೆಲಿಫೋನ್ ಬಳಕೆಯಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಲೂ ಸಂವಹನ ಉಪಗ್ರಹಗಳು ನೆರವಾಗಬಲ್ಲವು. ಇದಲ್ಲದೆ ಹ್ಯಾಮ್ ರೇಡಿಯೋ ಹಾಗೂ ಮಿಲಿಟರಿ ಸಂವಹನದಂಥ ಕ್ಷೇತ್ರಗಳಲ್ಲೂ ಸಂವಹನ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂವಹನ ಉಪಗ್ರಹಗಳ ಪ್ರಯೋಜನವನ್ನು ಮೊತ್ತಮೊದಲ ಬಾರಿಗೆ ಜನಸಾಮಾನ್ಯರಿಗೂ ತಲುಪಿಸಿದ ಹಿರಿಮೆ ಅಮೆರಿಕಾದ 'ಇಂಟೆಲ್‌ಸ್ಯಾಟ್-೧' ಉಪಗ್ರಹದ್ದು.

Cursor
ಕರ್ಸರ್
(ರೂಪಿಸಬೇಕಿದೆ)
ಮೌಸ್ ಅನ್ನು ಆಚೀಚೆ ಓಡಾಡಿಸುವಾಗ ನಾವು ಪರದೆಯ ಯಾವ ಭಾಗವನ್ನು ತಲುಪಿದ್ದೇವೆ ಎನ್ನುವುದನ್ನು ಸೂಚಿಸುವ ಚಿಹ್ನೆ
ಕಂಪ್ಯೂಟರಿನೊಡನೆ ಮೌಸ್ ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಕಡತಗಳನ್ನು ತೆರೆಯಲು, ಜಾಲತಾಣಕ್ಕೆ ಭೇಟಿಕೊಡಲು ಕ್ಲಿಕ್ ಮಾಡುವುದೂ ನಮಗೆ ಗೊತ್ತು. ಈ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಪರದೆಯ ಮೂಲೆಗಳನ್ನು ತಲುಪಲು ನಾವು ಮೌಸನ್ನು ಆಚೀಚೆ ಓಡಾಡಿಸುತ್ತೇವೆ; ಈ ಓಡಾಟದ ಫಲವಾಗಿ ಪರದೆಯ ಯಾವ ಭಾಗವನ್ನು ತಲುಪಿದ್ದೇವೆ ಎನ್ನುವುದನ್ನು ಅಲ್ಲಿ ಕಾಣಿಸಿಕೊಳ್ಳುವ ಒಂದು ಸಣ್ಣ ಚಿಹ್ನೆ ಸೂಚಿಸುತ್ತದೆ. ಈ ಚಿಹ್ನೆಯ ಹೆಸರೇ 'ಕರ್ಸರ್'. ಬಹುತೇಕ ಸಂದರ್ಭಗಳಲ್ಲಿ ಇದು ಒಂದು ಬಾಣದ ಗುರುತಿನಂತೆ ಕಾಣಿಸಿಕೊಳ್ಳುತ್ತದೆ (ಇದನ್ನು ಮೌಸ್ ಪಾಯಿಂಟರ್ ಎಂದು ಗುರುತಿಸುವ ಅಭ್ಯಾಸವೂ ಇದೆ). ಕಡತಗಳನ್ನು ತೆರೆಯುವುದಕ್ಕೆ, ತಂತ್ರಾಂಶದೊಳಗಿನ ಆಯ್ಕೆಗಳನ್ನು ಬಳಸುವುದಕ್ಕೆಲ್ಲ ಇದು ಸಹಕಾರಿ. ಪರದೆಯ ಮೇಲೆ ಪಠ್ಯವನ್ನು ಟೈಪಿಸಬಹುದಾದ ಭಾಗಗಳಲ್ಲಿ ಕರ್ಸರ್‌ನ ರೂಪ ಲಂಬ ರೇಖೆಯ ಆಕಾರಕ್ಕೆ ಬದಲಾಗುತ್ತದೆ. ಟೈಪ್ ಮಾಡಲು ಪ್ರಾರಂಭಿಸಿದಂತೆ ಇದೂ ಮಾಯವಾಗಿ ನಾವು ಟೈಪ್ ಮಾಡುವ ಮುಂದಿನ ಅಕ್ಷರ ಎಲ್ಲಿ ಮೂಡಲಿದೆ ಎನ್ನುವುದನ್ನು ಅಲ್ಲಿ ಮಿಂಚುವ ಲಂಬ ಗೆರೆಯೊಂದು ಸೂಚಿಸುತ್ತದೆ. ಇದೇ ರೀತಿಯ ವರ್ತನೆಯನ್ನು ನಾವು ಮೊಬೈಲ್ ಫೋನುಗಳಲ್ಲೂ ನೋಡಬಹುದು. ಜಾಲತಾಣಗಳ ಕೊಂಡಿಯ (ಲಿಂಕ್) ಮೇಲೆ ಮೌಸ್ ಕೊಂಡೊಯ್ದಾಗಲೂ ಕರ್ಸರ್‌ನ ರೂಪ ಬದಲಾಗುವುದುಂಟು. ಅಂತಹ ಸಂದರ್ಭದಲ್ಲಿ ಬಹಳಷ್ಟು ತಂತ್ರಾಂಶಗಳು ಪುಟ್ಟ ಕೈ ಆಕಾರದ ಕರ್ಸರ್ ಅನ್ನು ಪ್ರದರ್ಶಿಸುತ್ತವೆ.

Copy - Paste
ಕಾಪಿ-ಪೇಸ್ಟ್
(ರೂಪಿಸಬೇಕಿದೆ)
ಒಂದುಕಡೆ ಇರುವ ಮಾಹಿತಿಯನ್ನು ನಕಲುಮಾಡಿಕೊಂಡು ಮತ್ತೊಂದೆಡೆ ಅಂಟಿಸಿ ಬಳಸುವ ಕ್ರಿಯೆ
ಕಂಪ್ಯೂಟರ್ ಲೋಕದಲ್ಲಿ ಒಂದು ಕಡೆ ಇರುವ ಮಾಹಿತಿಯನ್ನು ನಕಲುಮಾಡಿಕೊಂಡು ಮತ್ತೊಂದೆಡೆ ಅಂಟಿಸಿ ಬಳಸುವ ಕ್ರಿಯೆಗೆ 'ಕಾಪಿ-ಪೇಸ್ಟ್' ಎಂದು ಹೆಸರು. 'ಕಂಟ್ರೋಲ್' ಮತ್ತು 'ಸಿ' ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಕಾಪಿ, ಹಾಗೆಯೇ 'ಕಂಟ್ರೋಲ್' ಮತ್ತು 'ವಿ' ಕೀಲಿಗಳನ್ನು ಒಟ್ಟಿಗೆ ಒತ್ತಿದರೆ ಪೇಸ್ಟ್ - ಇವು ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ. ಕಾಪಿ-ಪೇಸ್ಟ್‌ನ ಈ ಪರಿಕಲ್ಪನೆ ಪದಸಂಸ್ಕಾರಕ (ವರ್ಡ್‌ಪ್ರಾಸೆಸರ್) ತಂತ್ರಾಂಶಗಳ ಪರಿಚಯದ ಜೊತೆಗೇ ಕಂಪ್ಯೂಟರ್ ಲೋಕವನ್ನು ಪ್ರವೇಶಿಸಿತು. ಆದರೆ ಕಾಪಿ ಮಾಡಲು ಕಂಟ್ರೋಲ್ ಸಿ, ಹಾಗೂ ಪೇಸ್ಟ್ ಮಾಡಲು ಕಂಟ್ರೋಲ್ ವಿ ಆಯ್ಕೆಗಳ (ಶಾರ್ಟ್‌ಕಟ್) ಬಳಕೆ ಪ್ರಾರಂಭವಾದದ್ದು ೧೯೭೦ರ ದಶಕದಲ್ಲಿ, ಜೆರಾಕ್ಸ್ ಸಂಸ್ಥೆಯ ಪಾಲೋ ಆಲ್ಟೋ ರೀಸರ್ಚ್ ಸೆಂಟರ್‌ನಲ್ಲಿ. ಕಟ್ ಮಾಡಲು ಕಂಟ್ರೋಲ್ ಎಕ್ಸ್, ಹಿಂದಿನ ಕ್ರಿಯೆಯನ್ನು ರದ್ದುಪಡಿಸಲು ಕಂಟ್ರೋಲ್ ಜೆಡ್, ಮುದ್ರಿಸಲು ಕಂಟ್ರೋಲ್ ಪಿ ಮುಂತಾದ ಆಯ್ಕೆಗಳ ಬಳಕೆ ಪ್ರಾರಂಭವಾದದ್ದೂ ಇದೇ ಸಮಯದಲ್ಲಿ. ಮುಂದಿನ ದಿನಗಳಲ್ಲಿ ಕಂಟ್ರೋಲ್ ಸಿ ಹಾಗೂ ಕಂಟ್ರೋಲ್ ವಿ ಎಷ್ಟು ಪ್ರಮಾಣದ ಜನಪ್ರಿಯತೆ ಗಳಿಸಿಕೊಂಡವೆಂದರೆ ಅವು ಈಗ ಕಾಪಿ-ಪೇಸ್ಟ್‌ಗೆ ಪರ್ಯಾಯ ಹೆಸರಾಗಿ ಬೆಳೆದಿವೆ. ಒಬ್ಬರ ಬರವಣಿಗೆಯನ್ನು ನಕಲಿಸಿ ತಮ್ಮ ಕೆಲಸದಲ್ಲಿ ಬಳಸಿಕೊಳ್ಳುವ ಲೇಖಕರನ್ನೂ ತಂತ್ರಾಂಶ ತಯಾರಿಯಲ್ಲಿ ಪ್ರೋಗ್ರಾಮುಗಳನ್ನು ಕದಿಯುವ ತಂತ್ರಜ್ಞರನ್ನೂ ಲೇವಡಿಮಾಡಲು ಈ ಹೆಸರು ಬಳಕೆಯಾಗುತ್ತದೆ.

Cookie
ಕುಕಿ
(ರೂಪಿಸಬೇಕಿದೆ)
ಜಾಲತಾಣಗಳು ತಮ್ಮ ಬಳಕೆದಾರರ ಕಂಪ್ಯೂಟರಿನಲ್ಲಿ ಉಳಿಸುವ ಕಡತ
'ಈ ಜಾಲತಾಣ ಕುಕಿಗಳನ್ನು ಬಳಸುತ್ತದೆ' ಎನ್ನುವ ಸಂದೇಶವನ್ನು ನೀವು ಹಲವು ಜಾಲತಾಣಗಳಲ್ಲಿ ನೋಡಿರಬಹುದು. ಜಾಲತಾಣಗಳು ತಮ್ಮ ಬಳಕೆದಾರರ ಕಂಪ್ಯೂಟರಿನಲ್ಲಿ ಉಳಿಸುವ ಪುಟ್ಟದೊಂದು ಕಡತಕ್ಕೆ ಕುಕಿ ಎಂದು ಹೆಸರು. ಜಾಲತಾಣ ಬಳಸುವ ಗ್ರಾಹಕರ ಅಯ್ಕೆಗಳನ್ನು ಉಳಿಸಿಟ್ಟುಕೊಳ್ಳಲು ಇವು ಬಳಕೆಯಾಗುತ್ತವೆ. ನಾಲ್ಕಾರು ಭಾಷೆಗಳಲ್ಲಿ ಲಭ್ಯವಿರುವ ಯಾವುದೋ ಜಾಲತಾಣದಲ್ಲಿ ನೀವು ಕನ್ನಡ ಭಾಷೆ ಆಯ್ದುಕೊಂಡಿದ್ದಿರಿ ಎನ್ನುವುದಾದರೆ ಅದು ನಿಮ್ಮದೇ ಕಂಪ್ಯೂಟರಿನಲ್ಲಿ ಒಂದು ಕಡೆ ಕುಕಿಯ ರೂಪದಲ್ಲಿ ಉಳಿದುಕೊಂಡಿರುತ್ತದೆ. ಅದೇ ಜಾಲತಾಣಕ್ಕೆ ನೀವು ಇನ್ನೊಮ್ಮೆ ಭೇಟಿಕೊಟ್ಟಾಗ ಆ ಕುಕಿಯ ಆಧಾರದ ಮೇಲೆ ಜಾಲತಾಣ ನೇರವಾಗಿ ಕನ್ನಡದಲ್ಲಿಯೇ ತೆರೆದುಕೊಳ್ಳುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕಾಣಿಸಿಕೊಳ್ಳುವ ಅನೇಕ ಜಾಹೀರಾತುಗಳಿಗೂ ಈ ಕುಕಿಗಳೇ ಆಧಾರ. ನೀವು ನವದೆಹಲಿ ಪ್ರವಾಸದ ಬಗೆಗಿನ ತಾಣಗಳನ್ನು ವೀಕ್ಷಿಸಿದ ಕೆಲವೇ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳ, ಹೋಟಲ್ಲುಗಳ ಜಾಹೀರಾತುಗಳೇ ಕಾಣಿಸಲು ಶುರುವಾಗುತ್ತವೆ ಎಂದರೆ ಅಲ್ಲೆಲ್ಲ ಬಹುತೇಕ ಕುಕಿಗಳದೇ ಕೈವಾಡವಿರುತ್ತದೆ. ಆನ್‌ಲೈನ್ ಶಾಪಿಂಗ್ ತಾಣಗಳೂ ತಮ್ಮ ಬಳಕೆದಾರರ ಆಸಕ್ತಿಯನ್ನು ತಿಳಿದುಕೊಳ್ಳಲು ಕುಕಿಗಳನ್ನು ವ್ಯಾಪಕವಾಗಿ ಬಳಸುತ್ತವೆ. ಆದರೆ ವೈರಸ್ಸುಗಳಿಂದ ತೊಂದರೆ ಉಂಟಾಗುವಂತೆ ಕುಕಿಗಳಿಂದ ನಿಮ್ಮ ಕಂಪ್ಯೂಟರಿನ ಸುರಕ್ಷತೆಗೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ ನಾವು ಜಾಲಲೋಕದಲ್ಲಿ ಏನೆಲ್ಲ ಮಾಡುತ್ತಿದ್ದೇವೆ ಎಂದು ಈ ಪುಟ್ಟ ಕಡತಗಳು ನಿಗಾವಹಿಸುವುದನ್ನು ಕೆಲವರು ತಮ್ಮ ಖಾಸಗಿತನಕ್ಕೆ ಧಕ್ಕೆಯೆಂದು ಭಾವಿಸಬಹುದು. ಅಂತಹ ಸಂದರ್ಭಗಳಲ್ಲಿ ನಮ್ಮ ಕಂಪ್ಯೂಟರಿನಲ್ಲಿ ಕುಕಿಗಳ ಬಳಕೆ ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧರಿಸುವುದು ಸಾಧ್ಯ. ನಿಮ್ಮ ಬ್ರೌಸರ್ ತಂತ್ರಾಂಶದಲ್ಲಿ ಇದಕ್ಕಾಗಿ ಲಭ್ಯವಿರುವ ಆಯ್ಕೆಗಳನ್ನು ತಿಳಿದುಕೊಳ್ಳಲು ಗೂಗಲ್ ಮಾಡಿ.

Coupon Site
ಕೂಪನ್ ಸೈಟ್
(ರೂಪಿಸಬೇಕಿದೆ)
ಆನ್‌ಲೈನ್ ಶಾಪಿಂಗ್, ಪ್ರವಾಸ, ಬಿಲ್ ಪಾವತಿ ಮುಂತಾದ ಸೇವೆಗಳನ್ನು ಒದಗಿಸುವ ತಾಣಗಳಲ್ಲಿ ದೊರಕುವ ವಿಶೇಷ ಕೊಡುಗೆಗಳ ಕುರಿತು ಮಾಹಿತಿ ನೀಡುವ ತಾಣ
ಜಾಲತಾಣಗಳಲ್ಲಿ ಶಾಪಿಂಗ್ ಮಾಡುವಾಗ, ಬಿಲ್ ಪಾವತಿಸುವಾಗ, ಟಿಕೇಟು ಕಾಯ್ದಿರಿಸುವಾಗಲೆಲ್ಲ ಡಿಸ್ಕೌಂಟ್ ಕೂಪನ್ ಅಥವಾ ಕೂಪನ್ ಕೋಡ್ ದಾಖಲಿಸುವ ಅವಕಾಶವಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅಲ್ಲಿ ಸೂಕ್ತ ಕೋಡ್ ದಾಖಲಿಸಿದ್ದೇ ಆದರೆ ಬೆಲೆಯಲ್ಲಿ ರಿಯಾಯಿತಿಯೋ, ಪಾವತಿಸಿದ ಹಣದ ಮೇಲೆ ಕ್ಯಾಶ್‌ಬ್ಯಾಕ್ ಕೊಡುಗೆಯೋ ನಮಗೆ ದೊರಕುತ್ತದೆ. ನಿರ್ದಿಷ್ಟ ತಾಣಗಳಲ್ಲಿ ದಾಖಲಿಸಬಹುದಾದ ಕೂಪನ್ ಕೋಡ್‌ಗಳು ಪತ್ರಿಕೆಗಳ, ಸಮಾಜಜಾಲಗಳ ಇಲ್ಲವೇ ಎಸ್ಸೆಮ್ಮೆಸ್ ಸಂದೇಶಗಳ ಮೂಲಕ ನಮ್ಮನ್ನು ಕಾಲಕಾಲಕ್ಕೆ ತಲುಪುತ್ತಿರುತ್ತವೆ. ಆದರೆ ಎಲ್ಲ ತಾಣಗಳಲ್ಲೂ ನೋಂದಾಯಿಸಿಕೊಂಡಿರುವುದು, ಸಮಾಜಜಾಲದಲ್ಲಿ ಅವೆಲ್ಲವುಗಳನ್ನೂ ಗಮನಿಸುತ್ತಿರುವುದು ಸಾಧ್ಯವಿಲ್ಲವಲ್ಲ! ಈ ಸಮಸ್ಯೆಗೆ ಪರಿಹಾರ ಒದಗಿಸುವ ಜಾಲತಾಣಗಳನ್ನು 'ಕೂಪನ್ ಸೈಟ್'ಗಳೆಂದು ಕರೆಯುತ್ತಾರೆ. ಆನ್‌ಲೈನ್ ಶಾಪಿಂಗ್, ಪ್ರವಾಸ, ಬಿಲ್ ಪಾವತಿ ಮುಂತಾದ ಸೇವೆಗಳನ್ನು ಒದಗಿಸುವ ತಾಣಗಳಲ್ಲಿ ವಿಶೇಷ ಕೊಡುಗೆಗಳನ್ನು ಪಡೆಯಲು ಬಳಸಬಹುದಾದ ಕೂಪನ್‌ಗಳನ್ನು ಕುರಿತ ಮಾಹಿತಿ ನೀಡುವುದಷ್ಟೇ ಈ ಕೂಪನ್ ಸೈಟ್‌ಗಳ ಕೆಲಸ. ವಿಶೇಷ ಕೊಡುಗೆಗಳ ಹುಡುಕಾಟದಲ್ಲಿರುವವರು ನೇರವಾಗಿಯೋ ಗೂಗಲ್ ಮೂಲಕವೋ ಕೂಪನ್ ಸೈಟ್‌ಗಳಿಗೆ ಬರುವ ಸಾಧ್ಯತೆ ಹೆಚ್ಚು. ಕೊಡುಗೆಗಳ ಬಗ್ಗೆ ಮಾಹಿತಿ ಪಡೆಯುವ ಅವರು ಇಲ್ಲಿಂದ ಆಯಾ ತಾಣಗಳಿಗೆ ಹೋಗಿ ಶಾಪಿಂಗ್ ಮಾಡುವ ಸಾಧ್ಯತೆಯೂ ಹೆಚ್ಚು. ಈ ಮೂಲಕ ಬಳಕೆದಾರನಿಗೆ ಹೆಚ್ಚುವರಿ ಕೊಡುಗೆ ದೊರೆತ ಖುಷಿ ಸಿಗುತ್ತದೆ, ಶಾಪಿಂಗ್ ಜಾಲತಾಣಕ್ಕೆ ತನ್ನ ವಹಿವಾಟು ಹೆಚ್ಚಿದ ಸಂತೋಷವೂ ಆಗುತ್ತದೆ. ಇವೆರಡನ್ನೂ ಸಾಧ್ಯವಾಗಿಸಿದ ಕೂಪನ್ ಸೈಟ್ ಈ ಸೇವೆ ಒದಗಿಸಿದ್ದಕ್ಕಾಗಿ ಆ ಜಾಲತಾಣದಿಂದ ಕಮೀಶನ್ ಪಡೆದುಕೊಳ್ಳುತ್ತದೆ, ಇನ್ನಷ್ಟು ಕೊಡುಗೆಗಳ ಬಗ್ಗೆ ಗ್ರಾಹಕರಿಗೆ ತಿಳಿಸಲು ತಯಾರಾಗುತ್ತದೆ!

Captcha
ಕ್ಯಾಪ್ಚಾ
(ರೂಪಿಸಬೇಕಿದೆ)
ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ; 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ
ಹಲವು ಜಾಲತಾಣಗಳಲ್ಲಿ ಮಾಹಿತಿ ತುಂಬುವಾಗ ಅಕ್ಷರ-ಅಂಕಿಗಳ ಕಲಸುಮೇಲೋಗರದಂತೆ ಕಾಣುವ ಚಿತ್ರವೊಂದು ಕಾಣಿಸಿಕೊಳ್ಳುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ಸಂಗತಿ. ಆ ಅಕ್ಷರ-ಅಂಕಿಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪ್ ಮಾಡಿದಾಗಲಷ್ಟೇ ನಮ್ಮ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ. ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುವ ಈ ವಿಧಾನಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಇದು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ ಇದು. ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ. ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ. ಇಂತಹ ಚಿತ್ರವಿಚಿತ್ರ ಕ್ಯಾಪ್ಚಾಗಳ ಬಳಕೆಯನ್ನು ನಿಲ್ಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ನಿರ್ದಿಷ್ಟ ಸ್ಥಳದಲ್ಲಿ ಕ್ಲಿಕ್ ಮಾಡುವ ಮೂಲಕ ನಾನು ರೋಬಾಟ್ ಅಲ್ಲ ಎಂದು ದೃಢೀಕರಿಸುವಂತೆ ಕೇಳುವ ಸರಳ ಕ್ಯಾಪ್ಚಾ ಇಂತಹ ಪ್ರಯತ್ನಗಳಿಗೊಂದು ಉದಾಹರಣೆ.

Carrier Billing
ಕ್ಯಾರಿಯರ್ ಬಿಲ್ಲಿಂಗ್
(ರೂಪಿಸಬೇಕಿದೆ)
ಮೊಬೈಲ್ ಬಳಸಿ ಕೊಂಡ ವಸ್ತು-ಸೇವೆಗಳಿಗೆ ನೀಡಬೇಕಾದ ಹಣವನ್ನು ಮೊಬೈಲ್ ಬಿಲ್ ಜೊತೆಯಲ್ಲೇ ಪಾವತಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
ಕರೆಯ ರೂಪದಲ್ಲೋ ಸಂದೇಶದ ರೂಪದಲ್ಲೋ ಮೊಬೈಲ್ ಮೂಲಕ ನಾವು ರವಾನಿಸುವ ಮಾಹಿತಿ ತಲುಪಬೇಕಾದವರನ್ನು ತಲುಪುತ್ತದೆಯಲ್ಲ, ಅದಕ್ಕೆ ಮಾಧ್ಯಮವಾಗುವುದು ರೇಡಿಯೋ ಅಲೆಗಳು. ರೇಡಿಯೋ ಅಲೆಗಳ ಮೂಲಕ ಈ ಮಾಹಿತಿಯನ್ನು ಕೊಂಡೊಯ್ಯುವುದು ಮೊಬೈಲ್ ಸಂಸ್ಥೆಗಳ ಕೆಲಸ. ಸರಕು ಸಾಮಗ್ರಿಯನ್ನು ಲಗೇಜ್ ಕ್ಯಾರಿಯರ್‌ಗಳು ಹೊತ್ತೊಯ್ಯುವ ರೀತಿಯಲ್ಲಿಯೇ ನಮ್ಮ ಮಾಹಿತಿ ಕೊಂಡೊಯ್ಯುವ ಮೊಬೈಲ್ ಸಂಸ್ಥೆಗಳನ್ನು 'ಟೆಲಿಕಾಮ್ ಕ್ಯಾರಿಯರ್' ಎಂದು ಕರೆಯುತ್ತಾರೆ. ಈಚಿನ ದಿನಗಳಲ್ಲಿ ಅಂತರಜಾಲ ಸಂಪರ್ಕಕ್ಕಾಗಿ ಮೊಬೈಲ್ ಬಳಕೆ ಬಹಳ ವ್ಯಾಪಕವಾಗಿದೆ. ಮೊಬೈಲ್ ಬಳಸಿ ಹಲವು ವಸ್ತುಗಳನ್ನು, ಸೇವೆಗಳನ್ನು ಕೊಳ್ಳುವುದೂ ಈಗ ಸಾಮಾನ್ಯವಾಗಿರುವ ಸಂಗತಿ. ಹೀಗೆ ಕೊಂಡ ವಸ್ತುಗಳಿಗೆ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವ್ಯಾಲೆಟ್ ಮುಂತಾದ ಹಲವು ಸೌಲಭ್ಯಗಳಿರುವುದು ನಮಗೆ ಗೊತ್ತೇ ಇದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಈ ಸೌಲಭ್ಯಗಳನ್ನು ಬಳಸುವುದು ಕಷ್ಟ - ಕೆಲವು ಬಾರಿ ಅಷ್ಟೆಲ್ಲ ವಿವರ ದಾಖಲಿಸುವುದು ಕಿರಿಕಿರಿ ಎನಿಸಿದರೆ ಇನ್ನು ಕೆಲ ಬಾರಿ ನಮ್ಮ ಮಾಹಿತಿ ಇಲ್ಲಿ ಸುರಕ್ಷಿತವೇ? ಎಂಬ ಸಂಶಯ ಬರುತ್ತದೆ. ಇದಕ್ಕೆ ಸರಳ ಪರಿಹಾರ ಒದಗಿಸುವುದು 'ಕ್ಯಾರಿಯರ್ ಬಿಲ್ಲಿಂಗ್' ವ್ಯವಸ್ಥೆ. ಮೊಬೈಲ್ ಬಳಸಿ ಕೊಂಡ ವಸ್ತು-ಸೇವೆಗಳಿಗೆ ನೀಡಬೇಕಾದ ಹಣವನ್ನು ಮೊಬೈಲ್ ಬಿಲ್ ಜೊತೆಯಲ್ಲೇ ಪಾವತಿಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ಬ್ಯಾಂಕ್ ವಿವರದ ಬದಲು ಮೊಬೈಲ್ ಸಂಖ್ಯೆಯನ್ನಷ್ಟೇ ದಾಖಲಿಸಿ ಅದನ್ನು ಓಟಿಪಿ ಮೂಲಕ ದೃಢೀಕರಿಸಿದರೆ ಸಾಕು, ಮುಂದಿನ ಬಿಲ್ಲಿನಲ್ಲಿ ಅಷ್ಟು ಮೊತ್ತ ಸೇರಿಕೊಳ್ಳುತ್ತದೆ; ಪ್ರೀಪೇಯ್ಡ್ ಆಗಿದ್ದರೆ ಖಾತೆಯ ಬ್ಯಾಲೆನ್ಸಿನಲ್ಲಿ ಹಣ ಕಡಿತವಾಗುತ್ತದೆ. ಈ ವ್ಯವಸ್ಥೆ ಹಲವು ತಾಣಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ. ಈಚೆಗೆ ಗೂಗಲ್ ಪ್ಲೇಸ್ಟೋರ್‌ನಂತಹ ದೊಡ್ಡ ವ್ಯವಸ್ಥೆಗಳೂ ಕ್ಯಾರಿಯರ್ ಬಿಲ್ಲಿಂಗ್ ಪ್ರಾರಂಭಿಸಿರುವುದರಿಂದ ಮುಂದೆ ಈ ವ್ಯವಸ್ಥೆ ಇನ್ನೂ ಜನಪ್ರಿಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


logo