logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

FAQ
ಎಫ್‌ಎಕ್ಯೂ
ಪದೇಪದೇ ಕೇಳಲಾಗುವ ಪ್ರಶ್ನೆಗಳು
ಫ್ರೀಕ್ವೆಂಟ್‌ಲಿ ಆಸ್ಕ್‌ಡ್ ಕ್ವೆಶ್ಚನ್ಸ್ (ಪದೇಪದೇ ಕೇಳಲಾಗುವ ಪ್ರಶ್ನೆಗಳು); ನಿರ್ದಿಷ್ಟ ಉತ್ಪನ್ನದ ಕುರಿತು ಬಳಕೆದಾರರು ಕೇಳಬಹುದಾದ ಸಾಮಾನ್ಯ ಪ್ರಶ್ನೆಗಳು ಹಾಗೂ ಅವುಗಳ ಉತ್ತರದ ಪಟ್ಟಿ
ಜಾಲತಾಣ, ಕಂಪ್ಯೂಟರ್ ತಂತ್ರಾಂಶ, ಮೊಬೈಲ್ ಆಪ್ ಅಥವಾ ಹೊಸ ಯಂತ್ರಾಂಶ - ಯಾವುದೇ ಆದರೂ ಅದನ್ನು ಉಪಯೋಗಿಸುವ ಕುರಿತು ಬಳಕೆದಾರರಲ್ಲಿ ಹಲವು ಪ್ರಶ್ನೆಗಳಿರುವುದು ಸಹಜ. ಇಂತಹ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರಗಳನ್ನು ನೀಡುವುದು ಉತ್ಪಾದಕರ ಜವಾಬ್ದಾರಿಯೂ ಹೌದು. ಆದರೆ ಒಂದೇ ಬಗೆಯ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಉತ್ತರಿಸುತ್ತ ಕುಳಿತರೆ ಬಳಕೆದಾರ - ಉತ್ಪಾದಕ ಇಬ್ಬರ ಸಮಯವೂ ಹಾಳು. ಈ ಸನ್ನಿವೇಶವನ್ನು ತಪ್ಪಿಸಲು ಬಳಕೆಯಾಗುವ ಉಪಾಯವೇ ಎಫ್‌ಎಕ್ಯೂ, ಅಂದರೆ 'ಫ್ರೀಕ್ವೆಂಟ್‌ಲಿ ಆಸ್ಕ್‌ಡ್ ಕ್ವೆಶ್ಚನ್ಸ್' (ಪದೇಪದೇ ಕೇಳಲಾಗುವ ಪ್ರಶ್ನೆಗಳು). ನಿರ್ದಿಷ್ಟ ಉತ್ಪನ್ನದ ಕುರಿತು ಬಳಕೆದಾರರು ಕೇಳಬಹುದಾದ ಪ್ರಶ್ನೆಗಳನ್ನು ಗುರುತಿಸಿ ಅವೆಲ್ಲಕ್ಕೂ ಉತ್ತರಗಳನ್ನು ಪಟ್ಟಿಮಾಡಿಡುವುದು ಎಫ್‌ಎಕ್ಯೂ ಬಳಕೆಯ ಹಿಂದಿನ ಉದ್ದೇಶ. ಪ್ರತಿ ಪ್ರಶ್ನೆಗೂ ಸಂಸ್ಥೆಯ ಗ್ರಾಹಕಸೇವಾ ವಿಭಾಗವನ್ನು ಸಂಪರ್ಕಿಸುವ ಬದಲಿಗೆ ಬಹುತೇಕ ಉತ್ತರಗಳನ್ನು ಗ್ರಾಹಕರೇ ಹುಡುಕಿಕೊಳ್ಳುವುದು ಇಂತಹ ಪಟ್ಟಿಯ ಸಹಾಯದಿಂದ ಸಾಧ್ಯವಾಗುತ್ತದೆ. ಪ್ರಶ್ನೆ-ಉತ್ತರಗಳ ಈ ಪಟ್ಟಿಯನ್ನು ತಂತ್ರಾಂಶದೊಡನೆ ಕಡತದಂತೆ, ಜಾಲತಾಣದಲ್ಲೊಂದು ಪುಟದಂತೆ ಅಥವಾ ಯಂತ್ರಾಂಶದ ಜೊತೆಗೆ ಮುದ್ರಿತ ಪುಸ್ತಿಕೆಯಂತೆ ಕೊಡುವುದು ಸಾಧ್ಯ. ಹೊಸ ಪ್ರಶ್ನೆಗಳನ್ನು ಸೇರಿಸಿಕೊಂಡು ಎಫ್‌ಎಕ್ಯೂ ಪಟ್ಟಿಯನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುವ ಅಭ್ಯಾಸ ಅನೇಕ ಸಂಸ್ಥೆಗಳಿಗೆ ಇರುವುದರಿಂದ ಇದನ್ನು ಜಾಲತಾಣದಲ್ಲಿ ಉಳಿಸಿಡುವ ಅಭ್ಯಾಸವೇ ಹೆಚ್ಚು ವ್ಯಾಪಕ. ಆ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಹುಡುಕಿಕೊಳ್ಳುವುದೂ ಸಾಧ್ಯವಾಗುವುದರಿಂದ ಗ್ರಾಹಕರಿಗೂ ಈ ಅಭ್ಯಾಸವೇ ಅಚ್ಚುಮೆಚ್ಚು ಎನ್ನಬಹುದು.

FTTH
ಎಫ್‌ಟಿಟಿಎಚ್
(ರೂಪಿಸಬೇಕಿದೆ)
ಫೈಬರ್ ಟು ದ ಹೋಮ್; ಮನೆ ಅಥವಾ ಕಚೇರಿಯವರೆಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನೇ ಕಲ್ಪಿಸಿಕೊಡುವ ಮೂಲಕ ಅತಿವೇಗದ ಅಂತರಜಾಲ ಸೇವೆ ಒದಗಿಸುವ ತಂತ್ರಜ್ಞಾನ
ಅತ್ಯಂತ ವೇಗವಾದ ಹಾಗೂ ನಿಖರವಾದ ಮಾಹಿತಿ ಸಂವಹನಕ್ಕೆ ಆಪ್ಟಿಕಲ್ ಫೈಬರ್‌ಗಳು ಬಳಕೆಯಾಗುತ್ತವೆ. ವಿಶ್ವದೆಲ್ಲೆಡೆ ಅಂತರಜಾಲ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಇವುಗಳ ಬಳಕೆ ತೀರಾ ಸಾಮಾನ್ಯ; ಆದರೆ ಸಂಪರ್ಕವನ್ನು ಬಳಕೆದಾರರಿಗೆ ಮುಟ್ಟಿಸುವ ಕೊನೆಯ ಹಂತದಲ್ಲಿ (ಇದನ್ನು 'ಲಾಸ್ಟ್ ಮೈಲ್' ಎಂದು ಗುರುತಿಸುತ್ತಾರೆ) ಇನ್ನೂ ಟೆಲಿಫೋನ್ ತಂತಿಗಳಂತಹ ಹಳೆಯ ವಿಧಾನಗಳೇ ಹೆಚ್ಚು ಬಳಕೆಯಾಗುತ್ತವೆ. ಇದನ್ನು ತಪ್ಪಿಸಿ ಬಳಕೆದಾರರ ಮನೆ ಅಥವಾ ಕಚೇರಿಯವರೆಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನೇ ಕಲ್ಪಿಸಿಕೊಡುವುದು ಎಫ್‌ಟಿಟಿಎಚ್ ಪರಿಕಲ್ಪನೆಯ ಉದ್ದೇಶ. ಈ ಹೆಸರಿನ ಪೂರ್ಣರೂಪ 'ಫೈಬರ್ ಟು ದ ಹೋಮ್' ಎಂದು. ಈ ತಂತ್ರಜ್ಞಾನದಲ್ಲಿ ಸಂಪೂರ್ಣವಾಗಿ ಆಪ್ಟಿಕಲ್ ಫೈಬರ್‌ಗಳೇ ಬಳಕೆಯಾಗುವುದರಿಂದ ಸಾಮಾನ್ಯ ಅಂತರಜಾಲ ಸಂಪರ್ಕಗಳಿಗಿಂತ ಅನೇಕ ಪಟ್ಟು ಹೆಚ್ಚಿನ ವೇಗದ ಸಂಪರ್ಕಗಳನ್ನು ಬಳಕೆದಾರರಿಗೆ ನೀಡುವುದು ಸಾಧ್ಯವಾಗುತ್ತದೆ.

FTP
ಎಫ್‌ಟಿಪಿ
(ರೂಪಿಸಬೇಕಿದೆ)
ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್; ಯಾವುದೇ ಜಾಲದ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ಶಿಷ್ಟಾಚಾರ
ಕಂಪ್ಯೂಟರಿನಲ್ಲಿ ಒಂದು ಫೋಲ್ಡರಿನಿಂದ ಇನ್ನೊಂದು ಫೋಲ್ಡರಿಗೆ ಕಡತಗಳನ್ನು ವರ್ಗಾಯಿಸುವುದು ಅಥವಾ ನಕಲಿಸುವುದು ನಮಗೆ ಬಹಳ ಸುಲಭ. ಬೇರೊಂದು ಕಂಪ್ಯೂಟರಿಗೆ ಕಡತಗಳನ್ನು ವರ್ಗಾಯಿಸಲು ಪೆನ್‌ಡ್ರೈವ್ ಬಳಸುವುದೂ ಸರಾಗವೇ. ಆದರೆ ನಾವು ಕಡತಗಳನ್ನು ವರ್ಗಾಯಿಸಬೇಕಿರುವುದು ಪ್ರಪಂಚದ ಇನ್ನೊಂದು ಮೂಲೆಯಲ್ಲಿರುವ ಕಂಪ್ಯೂಟರಿಗಾದರೆ? ಇಂತಹ ಸನ್ನಿವೇಶಗಳಲ್ಲಿ ಬಳಕೆಯಾಗುವ ಶಿಷ್ಟಾಚಾರವೇ 'ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್', ಅಂದರೆ ಎಫ್‌ಟಿಪಿ. ಡಿಜಿಟಲ್ ಜಗತ್ತಿನಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರಗಳ (ಪ್ರೋಟೋಕಾಲ್) ಪೈಕಿ ಇದೂ ಒಂದು. ಯಾವುದೇ ಜಾಲದ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ (ಮೊಬೈಲ್ ಜಗತ್ತಿನಲ್ಲೂ ಎಫ್‌ಟಿಪಿ ಬಳಕೆ ಉಂಟು). ಈ ಕಂಪ್ಯೂಟರುಗಳು ಪರಸ್ಪರ ಎಷ್ಟೇ ದೂರದಲ್ಲಿದ್ದರೂ ಪರವಾಗಿಲ್ಲ, ನಮ್ಮ ಕಂಪ್ಯೂಟರಿನ ಎರಡು ಫೋಲ್ಡರುಗಳ ನಡುವೆ ಕಡತಗಳನ್ನು ವರ್ಗಾಯಿಸಿದಷ್ಟೇ ಸುಲಭವಾಗಿ ಆ ಎರಡು ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಎಫ್‌ಟಿಪಿ ತಂತ್ರಾಂಶಗಳ ನೆರವಿನಿಂದ ಸಾಧ್ಯವಾಗುತ್ತದೆ. ಕಡತಗಳ ವರ್ಗಾವಣೆ ಹೆಚ್ಚು ಸುರಕ್ಷಿತವಾಗಿ ಆಗಬೇಕಾದಾಗ 'ಸೆಕ್ಯೂರ್ ಎಫ್‌ಟಿಪಿ' ಶಿಷ್ಟಾಚಾರವನ್ನೂ ಬಳಸಲಾಗುತ್ತದೆ. ಸಾಮಾನ್ಯ ಬಳಕೆದಾರರು ಅಂತರಜಾಲ ಸಂಪರ್ಕ ಉಪಯೋಗಿಸುವಾಗ ಅವರ ಬಹಳಷ್ಟು ಕೆಲಸಗಳು ಎಚ್‌ಟಿಟಿಪಿ (ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್) ಶಿಷ್ಟಾಚಾರಕ್ಕೆ ಅನುಗುಣವಾಗಿ ನಡೆಯುತ್ತವೆ. ಹಾಗಾಗಿ ಅವರು ಎಫ್‌ಟಿಪಿ ಬಳಸುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

Function Key
ಫಂಕ್ಷನ್ ಕೀ
(ರೂಪಿಸಬೇಕಿದೆ)
ಕಂಪ್ಯೂಟರ್ ಕೀಬೋರ್ಡಿನಲ್ಲಿ ನಿರ್ದಿಷ್ಟ ಪೂರ್ವನಿರ್ಧಾರಿತ ಕೆಲಸಗಳಿಗಾಗಿ (ಫಂಕ್ಷನ್) ಬಳಕೆಯಾಗುವ ಕೀಲಿಗಳು
ಕಂಪ್ಯೂಟರ್ ಕೀಲಿಮಣೆಯಲ್ಲಿ ಹಲವು ಬಗೆಯ ಕೀಲಿಗಳಿರುವುದನ್ನು ನಾವು ನೋಡಬಹುದು. ಈ ಪೈಕಿ ಕೆಲವು ಅಕ್ಷರ - ಅಂಕಿ - ಲೇಖನಚಿಹ್ನೆಗಳನ್ನು ಮೂಡಿಸಲು ಬಳಕೆಯಾದರೆ ಇನ್ನು ಕೆಲವು ವಿಶಿಷ್ಟ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಕೀಲಿಮಣೆಯ ಮೊದಲ ಸಾಲಿನಲ್ಲಿ ಕಾಣಸಿಗುವ, ಇಂಗ್ಲಿಷಿನ 'ಎಫ್' ಅಕ್ಷರದಿಂದ ಶುರುವಾಗುವ ಹನ್ನೆರಡು ಕೀಲಿಗಳು (F1-F12) ಈ ಪೈಕಿ ಎರಡನೆಯ ಗುಂಪಿಗೆ ಸೇರುತ್ತವೆ. ಈ ಕೀಲಿಗಳನ್ನು 'ಫಂಕ್ಷನ್ ಕೀ'ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕಾಣಸಿಗುವ 'ಎಫ್' ಅಕ್ಷರ 'ಫಂಕ್ಷನ್' ಎಂಬ ಹೆಸರನ್ನು ಸೂಚಿಸುತ್ತದೆ. ನಿರ್ದಿಷ್ಟ ಪೂರ್ವನಿರ್ಧಾರಿತ ಕೆಲಸಗಳಿಗಾಗಿ (ಫಂಕ್ಷನ್) ಬಳಕೆಯಾಗುವುದು ಈ ಕೀಲಿಗಳ ವೈಶಿಷ್ಟ್ಯ. ಇವುಗಳನ್ನು ಪ್ರತ್ಯೇಕವಾಗಿ ಬಳಸುವ ಮೂಲಕ (ಉದಾ: ಸಹಾಯ ಪಡೆಯಲು 'F1') ಅಥವಾ ಇತರ ಕೀಲಿಗಳೊಡನೆ ಬಳಸುವ ಮೂಲಕ (ಉದಾ: ಕಿಟಕಿ ಮುಚ್ಚಲು 'Alt+F4') ಬೇರೆಬೇರೆ ಕೆಲಸಗಳನ್ನು ಸಾಧಿಸಿಕೊಳ್ಳಬಹುದು. ಬಹುತೇಕ ಕೀಬೋರ್ಡ್ ಶಾರ್ಟ್‌ಕಟ್‌ಗಳು ಫಂಕ್ಷನ್ ಕೀಲಿಗಳನ್ನು ಬಳಸುತ್ತವೆ. ಈ ಕೀಲಿಗಳ ಕಾರ್ಯಾಚರಣೆ ನಾವು ಬಳಸುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ಬದಲಾಗಬಹುದು. ನಿರ್ದಿಷ್ಟ ಫಂಕ್ಷನ್ ಕೀಲಿಯನ್ನು ಹಲವು ತಂತ್ರಾಂಶಗಳು ಒಂದೇ ಉದ್ದೇಶಕ್ಕೆ ಬಳಸುವ ಉದಾಹರಣೆಗಳೂ ಇವೆ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡುವ ಅನೇಕ ತಂತ್ರಾಂಶಗಳು ಸಹಾಯ ಪಡೆಯಲು F1, ರಿಫ್ರೆಶ್ ಮಾಡಲು F5, ಕಿಟಕಿ ಮುಚ್ಚಲು Alt+F4 ಮುಂತಾದ ಕೀಲಿಗಳನ್ನು ಬಳಸುವುದನ್ನು ಇಲ್ಲಿ ಉದಾಹರಿಸಬಹುದು.

Firmware
ಫರ್ಮ್‌ವೇರ್
(ರೂಪಿಸಬೇಕಿದೆ)
ನಿರ್ದಿಷ್ಟ ಯಂತ್ರಾಂಶದ ಜೊತೆಗಷ್ಟೇ ಕೆಲಸಮಾಡುವ, ಸೀಮಿತ ಉದ್ದೇಶದ ತಂತ್ರಾಂಶ
ಮಾಹಿತಿ ತಂತ್ರಜ್ಞಾನ ಎಂದಾಕ್ಷಣ ಹಾರ್ಡ್‌ವೇರ್ (ಯಂತ್ರಾಂಶ) ಹಾಗೂ ಸಾಫ್ಟ್‌ವೇರ್‌ಗಳ (ತಂತ್ರಾಂಶ) ಪ್ರಸ್ತಾಪ ಬರುವುದು ಸಾಮಾನ್ಯ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನ ಉದಾಹರಣೆಯನ್ನೇ ತೆಗೆದುಕೊಂಡರೆ ತಂತ್ರಾಂಶದ ಸಹಾಯದಿಂದ ನಾವು ಅದರ ಭೌತಿಕ ಭಾಗಗಳನ್ನು - ಅಂದರೆ ಯಂತ್ರಾಂಶವನ್ನು - ಬಳಸುವುದು ಸಾಧ್ಯವಾಗುತ್ತದೆ. ಕಂಪ್ಯೂಟರು - ಸ್ಮಾರ್ಟ್‌ಫೋನುಗಳಷ್ಟೇ ಏಕೆ, ಡಿಜಿಟಲ್ ಕ್ಯಾಮೆರಾ, ಟೀವಿಯ ಸೆಟ್ ಟಾಪ್ ಬಾಕ್ಸ್, ಅಂತರಜಾಲ ಸಂಪರ್ಕ ಕಲ್ಪಿಸುವ ಮೋಡೆಮ್ - ಹೀಗೆ ಇನ್ನೂ ಅದೆಷ್ಟೋ ಸಾಧನಗಳು ಕೆಲಸಮಾಡಲು ತಂತ್ರಾಂಶ ಬೇಕು. ಕಂಪ್ಯೂಟರಿನಲ್ಲೋ ಸ್ಮಾರ್ಟ್‌ಫೋನಿನಲ್ಲೋ ಮಾಡಿದಂತೆ ಈ ತಂತ್ರಾಂಶವನ್ನು ನಮಗಿಷ್ಟಬಂದಂತೆ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ. ಹೀಗೆ ನಿರ್ದಿಷ್ಟ ಯಂತ್ರಾಂಶದ ಜೊತೆಗಷ್ಟೇ ಕೆಲಸಮಾಡುವ, ಸೀಮಿತ ಉದ್ದೇಶದ ತಂತ್ರಾಂಶವನ್ನು ಫರ್ಮ್‌ವೇರ್ ಎಂದು ಕರೆಯುತ್ತಾರೆ. ಮೇಲೆ ಹೇಳಿದ ಸಾಧನಗಳಲ್ಲಷ್ಟೇ ಅಲ್ಲ, ಕಂಪ್ಯೂಟರು - ಸ್ಮಾರ್ಟ್‌ಫೋನುಗಳಲ್ಲೂ ಫರ್ಮ್‌ವೇರ್ ಬಳಕೆ ಇದೆ. ಕಂಪ್ಯೂಟರ್ ಚಾಲೂ ಮಾಡಿದ ಕೂಡಲೆ ಅದು ಏನು ಕೆಲಸಮಾಡಬೇಕೆಂದು ಹೇಳುವ ತಂತ್ರಾಂಶ, ಮೊಬೈಲ್ ಫೋನಿನ ಕಾರ್ಯಾಚರಣ ವ್ಯವಸ್ಥೆಗಳೆಲ್ಲ ಫರ್ಮ್‌ವೇರ್‌ನ ವಿವಿಧ ರೂಪಗಳೇ. ಯಂತ್ರಾಂಶ ನಿರ್ಮಾತೃಗಳು ತಮ್ಮ ಉತ್ಪನ್ನಗಳೊಡನೆ ಬಳಸಬೇಕಾದ ಫರ್ಮ್‌ವೇರ್ ಅನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುತ್ತಿರುತ್ತಾರೆ. ಸ್ಮಾರ್ಟ್‌ಫೋನ್ - ಸೆಟ್‌ಟಾಪ್ ಬಾಕ್ಸ್ ಮುಂತಾದ ಉದಾಹರಣೆಗಳಲ್ಲಿ ಈ ಉನ್ನತೀಕರಣ ಸ್ವಯಂಚಾಲಿತವಾಗಿಯೇ ಆಗುತ್ತದೆ; ಇನ್ನು ಕೆಲ ಸಾಧನಗಳ (ಉದಾ: ಡಿಜಿಟಲ್ ಕ್ಯಾಮೆರಾ) ಫರ್ಮ್‌ವೇರ್‌ನಲ್ಲಿ ಸಮಸ್ಯೆ ಕಂಡುಬಂದರೆ ಅದನ್ನು ಉನ್ನತೀಕರಿಸಲು ಸೇವಾಕೇಂದ್ರಕ್ಕೇ ಹೋಗಬೇಕಾಗುವುದೂ ಉಂಟು.

Font
ಫಾಂಟ್
ಅಕ್ಷರಶೈಲಿ
ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ಪಠ್ಯವನ್ನು ಮೂಡಿಸಲು ನೆರವಾಗುವ ಅಕ್ಷರಶೈಲಿ
ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲಿ ಪಠ್ಯರೂಪದ ಮಾಹಿತಿಯ ಪಾಲು ಬಹಳ ದೊಡ್ಡದು. ನೀವು ಓದುತ್ತಿರುವ ಪುಸ್ತಕ, ಕಂಪ್ಯೂಟರಿನಲ್ಲಿ ತೆರೆದಿರುವ ವೆಬ್‌ಸೈಟು, ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿರುವ ಹೊಸ ವಾಟ್ಸ್‌ಆಪ್ ಸಂದೇಶ - ಒಂದಲ್ಲ ಒಂದು ಬಗೆಯಲ್ಲಿ ಪಠ್ಯರೂಪದ ಮಾಹಿತಿ ನಮ್ಮೆದುರು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ಮಾಹಿತಿಯೆಲ್ಲ ನಮಗೆ ತಲುಪಬೇಕಾದರೆ ಅದನ್ನು ಯಾರೋ ಒಬ್ಬರು ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ಟೈಪ್ ಮಾಡಬೇಕು ತಾನೆ, ಹಾಗೆ ಮಾಡಲು ಅಕ್ಷರಶೈಲಿಗಳು ಬೇಕು. ಕಂಪ್ಯೂಟರಿನ ಭಾಷೆಯಲ್ಲಿ ಇವಕ್ಕೆ ಫಾಂಟ್‌ಗಳೆಂದು ಹೆಸರು. ವಿವಿಧ ಭಾಷೆಗಳಿಗೆ ವಿವಿಧ ಫಾಂಟುಗಳು ಲಭ್ಯ; ಒಂದೊಂದು ಫಾಂಟಿನ ಅಕ್ಷರಗಳೂ ಒಂದೊಂದು ವಿನ್ಯಾಸದಲ್ಲಿರುವುದು ಸಾಮಾನ್ಯ. ಫಾಂಟ್ ಅನ್ನು ಒಂದಷ್ಟು ಆಕಾರಗಳ ಗುಂಪು ಎಂದು ಕರೆಯಬಹುದು. ಅಕ್ಷರವನ್ನೋ ಅಂಕೆಯನ್ನೋ ಲೇಖನ ಚಿಹ್ನೆಯನ್ನೋ ಪ್ರತಿನಿಧಿಸುವ ಇಂತಹ ಆಕಾರಗಳನ್ನು 'ಗ್ಲಿಫ್', ಅಂದರೆ ಅಕ್ಷರಭಾಗಗಳೆಂದು ಕರೆಯುತ್ತಾರೆ. ಇಂಗ್ಲಿಷಿನ ಉದಾಹರಣೆಯನ್ನೇ ತೆಗೆದುಕೊಂಡರೆ ದೊಡ್ಡಕ್ಷರದ 'ಎ' ಒಂದು ಗ್ಲಿಫ್, ಸಣ್ಣಕ್ಷರದ 'ಎ' ಇನ್ನೊಂದು ಗ್ಲಿಫ್. ಕನ್ನಡದಂತಹ ಭಾಷೆಗಳಲ್ಲಿ ಕೆಲವು ಅಕ್ಷರಗಳಿಗೆ ಪ್ರತ್ಯೇಕ ಗ್ಲಿಫ್ ಇದ್ದರೆ ಇನ್ನು ಕೆಲ ಅಕ್ಷರಗಳು ಹಲವು ಗ್ಲಿಫ್‌ಗಳ ಜೋಡಣೆಯಿಂದ ರೂಪುಗೊಳ್ಳುತ್ತವೆ. ಈ ಜೋಡಣೆ ಬೇರೆಬೇರೆ ಫಾಂಟುಗಳಲ್ಲಿ ಬೇರೆಬೇರೆ ರೀತಿಯಲ್ಲಿರಬಹುದು.

Form Factor
ಫಾರ್ಮ್ ಫ್ಯಾಕ್ಟರ್
(ರೂಪಿಸಬೇಕಿದೆ)
ಮೊಬೈಲ್ ಫೋನಿನ ಆಕಾರ-ಸ್ವರೂಪವನ್ನು ಸೂಚಿಸುವ ಹೆಸರು
ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ - ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು. ಮೊಬೈಲ್ ಫೋನುಗಳು ಪ್ರಚಲಿತಕ್ಕೆ ಬಂದ ದಿನದಿಂದ ಇಂದಿನವರೆಗೂ ಅವುಗಳ ಆಕಾರ-ಸ್ವರೂಪಗಳು ಕೆಲವೇ ಬಗೆಯದಾಗಿರುವುದನ್ನು ನಾವು ನೋಡಬಹುದು: ಕವಚವನ್ನು ತೆರೆದು (ಫ್ಲಿಪ್) ಬಳಸಬಹುದಾದ ಫೋನುಗಳು, ಮೇಲ್ಭಾಗವನ್ನು ಜಾರಿಸಿದರೆ (ಸ್ಲೈಡ್) ಕೀಲಿಮಣೆ ಕಾಣುವ ಫೋನುಗಳು, ತಿರುಗಿಸಬಹುದಾದ (ಸ್ವಿವೆಲ್) ಪರದೆಯ ಫೋನುಗಳು, ದಪ್ಪನೆಯ ಪಟ್ಟಿಯಂತಿರುವ (ಬಾರ್) ಸರಳ ವಿನ್ಯಾಸದ ಫೋನುಗಳು - ಹೀಗೆ. ಮಾರುಕಟ್ಟೆಯಲ್ಲಿರುವ ಬಹುತೇಕ ಮಾದರಿಯ ಮೊಬೈಲುಗಳು ಈ ಪೈಕಿ ಯಾವುದೋ ಒಂದು ಆಕಾರ-ಸ್ವರೂಪದ್ದಾಗಿರುವುದು ಸಾಮಾನ್ಯ. ಇದನ್ನು ಆ ಫೋನಿನ 'ಫಾರ್ಮ್ ಫ್ಯಾಕ್ಟರ್' ಎಂದು ಕರೆಯುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 'ಬಾರ್' ಸ್ವರೂಪದ ಫೋನುಗಳದೇ ಸಾಮ್ರಾಜ್ಯ; ಇಂದಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನುಗಳೂ ಇದೇ ಫಾರ್ಮ್ ಫಾಕ್ಟರ್ ಹೊಂದಿರುತ್ತವೆ ಎಂದರೂ ಸರಿಯೇ. ಬೇರೆಬೇರೆ ಫಾರ್ಮ್ ಫ್ಯಾಕ್ಟರಿನ ಕೆಲವು ಫೋನುಗಳೂ ಮಾರುಕಟ್ಟೆಯಲ್ಲಿವೆ. ಮೇಲೆ ಹೇಳಿದ ಯಾವುದೇ ಫಾರ್ಮ್ ಫ್ಯಾಕ್ಟರ್ ವ್ಯಾಖ್ಯಾನಕ್ಕೂ ಹೊಂದದ ಕೆಲ ಮಾದರಿಗಳೂ (ಉದಾ: ವಾಚ್ ರೂಪದ ಫೋನು, ಎರಡು ಪರದೆಯಿರುವ ಫೋನು ಇತ್ಯಾದಿ) ಒಮ್ಮೊಮ್ಮೆ ಮಾರುಕಟ್ಟೆಗೆ ಬರುವುದುಂಟು.

Format
ಫಾರ್ಮ್ಯಾಟ್
(ರೂಪಿಸಬೇಕಿದೆ)
ಮಾಹಿತಿ ಶೇಖರಣಾ ಸಾಧನಗಳಲ್ಲಿ ಹೊಸದಾಗಿ ಫೈಲ್ ಸಿಸ್ಟಂ ರೂಪಿಸುವ ಪ್ರಕ್ರಿಯೆ. ಪದಸಂಸ್ಕರಣಾ ತಂತ್ರಾಂಶಗಳಲ್ಲಿ ಪುಟವನ್ನು-ಪಠ್ಯವನ್ನು ವಿನ್ಯಾಸಗೊಳಿಸುವ ಕ್ರಿಯೆಗೂ ಇದೇ ಹೆಸರು. ಕಡತಗಳ ವಿಧಗಳನ್ನೂ ಫಾರ್ಮ್ಯಾಟ್‌ಗಳೆಂದೇ ಕರೆಯುತ್ತಾರೆ.
ತಂತ್ರಜ್ಞಾನದ ಜಗತ್ತಿನಲ್ಲಿ ಬೇರೆಬೇರೆ ಅರ್ಥವಿರುವ ಪದಗಳ ಬಳಕೆ ಅಪರೂಪವೇನಲ್ಲ. ಇಂತಹ ಪದಗಳ ಪೈಕಿ 'ಫಾರ್ಮ್ಯಾಟ್' ಕೂಡ ಒಂದು. ಹಾರ್ಡ್ ಡಿಸ್ಕ್, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಮುಂತಾದ ಸಾಧನಗಳೊಡನೆ ನಮ್ಮ ಕಂಪ್ಯೂಟರ್, ಮೊಬೈಲ್ ಅಥವಾ ಕ್ಯಾಮೆರಾಗಳು ವ್ಯವಹರಿಸಬೇಕೆಂದರೆ ಅವುಗಳಲ್ಲಿ ಸೂಕ್ತ ಫೈಲ್ ಸಿಸ್ಟಂ ಇರಬೇಕಾದ್ದು ಅತ್ಯಗತ್ಯ. ಇಂತಹ ಸಾಧನಗಳನ್ನು ಪರೀಕ್ಷಿಸಿ ಅವುಗಳಲ್ಲಿ ಹೊಸದಾಗಿ ಫೈಲ್ ಸಿಸ್ಟಂ ರೂಪಿಸುವ ಪ್ರಕ್ರಿಯೆಯನ್ನು ಫಾರ್ಮ್ಯಾಟಿಂಗ್ ('ಫಾರ್ಮ್ಯಾಟ್ ಮಾಡುವುದು') ಎಂದು ಕರೆಯುತ್ತಾರೆ. ಬಹುಪಾಲು ಹೊಸ ಸಾಧನಗಳು ಮುಂಚಿತವಾಗಿಯೇ ಫಾರ್ಮ್ಯಾಟ್ ಆಗಿರುತ್ತವೆ. ಹಳೆಯ ಸಾಧನಗಳನ್ನೂ ನಾವು ಅಗತ್ಯಬಿದ್ದಾಗ ಫಾರ್ಮ್ಯಾಟ್ ಮಾಡುವುದು ಸಾಧ್ಯ - ಆದರೆ ನೆನಪಿರಲಿ, ಹೀಗೆ ಮಾಡಿದಾಗ ಅದರಲ್ಲಿರುವ ಎಲ್ಲ ಮಾಹಿತಿಯೂ ಅಳಿಸಿಹೋಗುತ್ತದೆ! ಮೈಕ್ರೋಸಾಫ್ಟ್ ವರ್ಡ್‌ನಂತಹ ಪದಸಂಸ್ಕರಣಾ ತಂತ್ರಾಂಶಗಳಲ್ಲಿ (ವರ್ಡ್ ಪ್ರಾಸೆಸರ್) ಪುಟಗಳನ್ನು - ಅದರಲ್ಲಿನ ಪಠ್ಯವನ್ನು ನಮ್ಮ ಇಚ್ಛೆಯಂತೆ ವಿನ್ಯಾಸಗೊಳಿಸುತ್ತೇವಲ್ಲ - ಆ ಪ್ರಕ್ರಿಯೆಯ ಹೆಸರೂ ಫಾರ್ಮ್ಯಾಟಿಂಗ್ ಎಂದೇ. ಪುಟದ ಗಾತ್ರ, ಅಂಚುಗಳಲ್ಲಿ ಬಿಡಬೇಕಾದ ಖಾಲಿ ಜಾಗ (ಮಾರ್ಜಿನ್), ಸಾಲುಗಳ ನಡುವೆ ಇರಬೇಕಾದ ಅಂತರ, ಅಕ್ಷರಗಳ ಶೈಲಿ ಇತ್ಯಾದಿಗಳನ್ನೆಲ್ಲ ಹೊಂದಿಸುವುದು ಈ ಪ್ರಕ್ರಿಯೆಯ ಅಂಗವಾಗಿಯೇ. ಬೇರೆಬೇರೆ ಬಗೆಯ ಕಡತಗಳನ್ನು ಬೇರೆಬೇರೆ ರೀತಿಯಲ್ಲಿ ಉಳಿಸಬಹುದಾದ ವಿಧಗಳನ್ನು 'ಫೈಲ್ ಫಾರ್ಮ್ಯಾಟ್' ಎಂದು ಕರೆಯುತ್ತಾರೆ. ನಿರ್ದಿಷ್ಟ ಕಡತದಲ್ಲಿರುವ ಮಾಹಿತಿ ಹೇಗೆ ಸಂಯೋಜಿಸಲಾಗಿದೆ ಎನ್ನುವುದನ್ನು ಆ ಕಡತದ ಫಾರ್ಮ್ಯಾಟ್ ಸೂಚಿಸುತ್ತದೆ. ಬೇರೆಬೇರೆ ರೀತಿಯ ಕಡತಗಳನ್ನು ಗುರುತಿಸಲು ಬಳಕೆಯಾಗುವ ಜೆಪಿಜಿ, ಪಿಡಿಎಫ್, ಎಂಪಿ೩ ಇವುಗಳೆಲ್ಲ ಫೈಲ್ ಫಾರ್ಮ್ಯಾಟ್‌ನ ಉದಾಹರಣೆಗಳು.

Fast Charging
ಫಾಸ್ಟ್ ಚಾರ್ಜಿಂಗ್
(ರೂಪಿಸಬೇಕಿದೆ)
ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವ ತಂತಜ್ಞಾನ
ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳೇನೋ ಸ್ಮಾರ್ಟ್ ಆಗುತ್ತಿವೆ, ಸರಿ. ಆದರೆ ಅವುಗಳ ಬ್ಯಾಟರಿಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ; ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿಯಿಂದ - ಪ್ರತಿಬಾರಿ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಫಜೀತಿಯಿಂದ ಇನ್ನೂ ಬಿಡುಗಡೆ ಸಿಕ್ಕಿಲ್ಲ. ಫೋನ್ ಚಾರ್ಜ್ ಆಗಲು ಹೀಗೆ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ. ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಫಾಸ್ಟ್ ಚಾರ್ಜಿಂಗ್' ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು. ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವುದು ಈ ತಂತ್ರಜ್ಞಾನದ ಉದ್ದೇಶ. ಸಾಮಾನ್ಯ ಚಾರ್ಜರುಗಳಿಗೆ ಹೋಲಿಸಿದಾಗ ಈ ತಂತ್ರಜ್ಞಾನ ಬಳಸುವ ಚಾರ್ಜರುಗಳು ಬ್ಯಾಟರಿ ಚಾರ್ಜ್ ಮಾಡಲು ಸರಿಸುಮಾರು ಅರ್ಧದಷ್ಟು ಸಮಯವನ್ನಷ್ಟೆ ತೆಗೆದುಕೊಳ್ಳುತ್ತವೆ. ಕೆಲ ಮೊಬೈಲ್ ತಯಾರಕರು ತಮ್ಮ ಸಂಸ್ಥೆಯ ಮೊಬೈಲುಗಳ ಜೊತೆಗೇ ಫಾಸ್ಟ್ ಚಾರ್ಜರುಗಳನ್ನು ನೀಡುತ್ತಾರೆ. ಇನ್ನು ಕೆಲ ಮೊಬೈಲುಗಳ ಜೊತೆಗೆ ಫಾಸ್ಟ್ ಚಾರ್ಜರ್ ಬಾರದಿದ್ದರೂ ಮಾರುಕಟ್ಟೆಯಲ್ಲಿ ದೊರಕುವ ಬೇರೆ ಫಾಸ್ಟ್ ಚಾರ್ಜರ್ ಬಳಸಿ ಅವನ್ನೂ ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು.

Feature Phone
ಫೀಚರ್ ಫೋನ್
(ರೂಪಿಸಬೇಕಿದೆ)
ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ಸೀಮಿತ ಸೌಲಭ್ಯಗಳಿರುವ, ಕಡಿಮೆ ಬೆಲೆಗೆ ದೊರಕುವ ಮೊಬೈಲ್ ಫೋನು
ಯಾರ ಕೈಯಲ್ಲಿ ನೋಡಿದರೂ ಒಂದೊಂದು ಸ್ಮಾರ್ಟ್‌ಫೋನ್, ಅದರೊಳಗೆ ಕಂಪ್ಯೂಟರನ್ನೂ ಮೀರಿಸುವ ಸಂಸ್ಕರಣಾ ಸಾಮರ್ಥ್ಯ ಇರುವುದು ಈಗ ತೀರಾ ಸಹಜ ಎಂದು ನಾವು ಭಾವಿಸುತ್ತೇವೆ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರಲ್ಲಿ ಶೇ. ೬೫ರಷ್ಟು ಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ! ಇಷ್ಟೆಲ್ಲ ದೊಡ್ಡ ಸಂಖ್ಯೆಯ ಬಳಕೆದಾರರು ಇಂದಿಗೂ ಮೊಬೈಲ್ ಬಳಸುವುದು ಮುಖ್ಯವಾಗಿ ದೂರವಾಣಿ ಕರೆಗಳಿಗಷ್ಟೇ. ಹಾಗಾಗಿ ಅವರು ಮೂಲಭೂತ ಸೌಲಭ್ಯಗಳಷ್ಟೇ ಇರುವ ಮೊಬೈಲುಗಳನ್ನು ಇಷ್ಟಪಡುತ್ತಾರೆ. ಕರೆಮಾಡುವುದು, ಎಸ್ಸೆಮ್ಮೆಸ್ ಕಳುಹಿಸುವುದೇ ಮೊದಲಾದ ಸೀಮಿತ ಸೌಲಭ್ಯಗಳಿರುವ, ಕಡಿಮೆ ಬೆಲೆಗೆ ದೊರಕುವ ಇಂತಹ ಫೋನುಗಳನ್ನೇ 'ಫೀಚರ್ ಫೋನ್' ಎಂದು ಗುರುತಿಸಲಾಗುತ್ತದೆ. ಸ್ಮಾರ್ಟ್‌ಫೋನುಗಳಲ್ಲಿ ನಮಗಿಷ್ಟವಾದ ಆಪ್‌ಗಳನ್ನೆಲ್ಲ ಬಳಸುವಂತೆ ಈ ಫೋನುಗಳಲ್ಲಿ ಮಾಡಲಾಗುವುದಿಲ್ಲ - ಇಲ್ಲಿ ಯಾವೆಲ್ಲ ತಂತ್ರಾಂಶಗಳನ್ನು ಬಳಸಬಹುದೆಂದು ಫೋನಿನ ನಿರ್ಮಾತೃಗಳೇ ತೀರ್ಮಾನಿಸುತ್ತಾರೆ. ಸೀಮಿತ ಸೌಲಭ್ಯಗಳಿರುವುದರ ಅನುಕೂಲವೆಂದರೆ ಫೀಚರ್ ಫೋನುಗಳ ಬ್ಯಾಟರಿ ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ಹೆಚ್ಚುಕಾಲ ಬಾಳಿಕೆ ಬರುತ್ತದೆ. ಸದ್ಯದ ಬಹಳಷ್ಟು ಫೀಚರ್ ಫೋನುಗಳು ೨ಜಿ ಸಂಪರ್ಕವನ್ನಷ್ಟೇ ಬಳಸುತ್ತವೆ. ೩ಜಿ-೪ಜಿ ಸಂಪರ್ಕಗಳನ್ನು ಬಳಸುವ, ಹೆಚ್ಚುವರಿ ಸೌಲಭ್ಯಗಳನ್ನು ಹೊಂದಿರುವ ಫೀಚರ್ ಫೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೆಚ್ಚಿನ ಬಳಕೆದಾರರನ್ನು ಸ್ಮಾರ್ಟ್‌ಫೋನುಗಳತ್ತ ಸೆಳೆಯುವ ಪ್ರಯತ್ನವೂ ನಡೆದಿದೆ.


logo