logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

HTTP
ಎಚ್‌ಟಿಟಿಪಿ
(ರೂಪಿಸಬೇಕಿದೆ)
ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರ
ಬಹುತೇಕ ಎಲ್ಲ ಜಾಲತಾಣಗಳ ವಿಳಾಸವೂ 'ಹೆಚ್‌ಟಿಟಿಪಿ' ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದಲ್ಲ, ಇಲ್ಲಿ 'ಹೆಚ್‌ಟಿಟಿಪಿ' ಎನ್ನುವುದು 'ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ. ಇಂದಿನ ಕಂಪ್ಯೂಟರ್ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ಬಳಕೆದಾರರೊಡನೆ, ಕಂಪ್ಯೂಟರಿನ ವಿವಿಧ ಯಂತ್ರಾಂಶಗಳ ನಡುವೆ, ಅಂತರಜಾಲದಲ್ಲಿರುವ ಬೇರೆ ಕಂಪ್ಯೂಟರುಗಳೊಡನೆ ಮಾಹಿತಿಯ ವಿನಿಮಯ ಸಾಗಿರುತ್ತದೆ. ಹೀಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಲ್ಲ, ಅದಕ್ಕೆ ಹಲವು ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ರೂಪಿಸಲಾಗಿದೆ. ಹೆಚ್‌ಟಿಟಿಪಿ ಕೂಡ ಇಂತಹುದೇ ಒಂದು ಶಿಷ್ಟಾಚಾರ. ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಹುತೇಕ ಸಂವಹನವೆಲ್ಲ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ನಾವು ಬ್ರೌಸರಿನಲ್ಲಿ ತಾಣದ ವಿಳಾಸ ಟೈಪ್ ಮಾಡಿ ಎಂಟರ್ ಒತ್ತಿದಾಗ ವೆಬ್ ಪುಟ ತೆರೆದುಕೊಳ್ಳುತ್ತದಲ್ಲ, ಇದರ ಹಿನ್ನೆಲೆಯಲ್ಲಿ ನಮ್ಮ ಕಂಪ್ಯೂಟರಿನಿಂದ ಜಾಲತಾಣದ ಸರ್ವರ್‌ಗೆ ಹೋದ ಹೆಚ್‌ಟಿಟಿಪಿ ಆದೇಶವೊಂದು ಕೆಲಸಮಾಡಿರುತ್ತದೆ. ಯಾವ ಸಂದರ್ಭದಲ್ಲಿ ಯಾವರೀತಿಯ ಎರರ್ ಸಂದೇಶಗಳನ್ನು ತೋರಿಸಬೇಕು ಎನ್ನುವುದೂ ಹೆಚ್‌ಟಿಟಿಪಿ ಶಿಷ್ಟಾಚಾರದ್ದೇ ನಿಯಮ.

Https
ಎಚ್‌ಟಿಟಿಪಿಎಸ್
(ರೂಪಿಸಬೇಕಿದೆ)
ಎಚ್‌ಟಿಟಿಪಿ ಸೆಕ್ಯೂರ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ಸುರಕ್ಷಿತ ವಿನಿಮಯವನ್ನು ಸಾಧ್ಯವಾಗಿಸುವ ಶಿಷ್ಟಾಚಾರ
ಆನ್‌ಲೈನ್ ಲೋಕದಲ್ಲಿ ಹಣಕಾಸಿನ ವಹಿವಾಟು ನಡೆಸುವ ಸಂದರ್ಭದಲ್ಲಿ ಬಳಸುವ ಜಾಲತಾಣದ ವಿಳಾಸ 'https://' ಎಂದು ಪ್ರಾರಂಭವಾಗುವುದನ್ನು ನೀವು ನೋಡಿರಬಹುದು, ಬ್ರೌಸರಿನ ಅಡ್ರೆಸ್ ಪಟ್ಟಿಯಲ್ಲಿ ಪುಟ್ಟದೊಂದು ಬೀಗದ ಚಿತ್ರ ಕಾಣಿಸಿಕೊಳ್ಳುವುದನ್ನೂ ಗಮನಿಸಿರಬಹುದು. ಸಾಮಾನ್ಯವಾಗಿ ಕಾಣಸಿಗುವ httpಯ ಹೋಲಿಕೆಯಲ್ಲಿ 'https://'ನಲ್ಲಿರುವ ಹೆಚ್ಚುವರಿ 's' ಸೆಕ್ಯೂರ್ ಅರ್ಥಾತ್ ಸುರಕ್ಷಿತ ಎನ್ನುವುದರ ಸೂಚಕ. ಇಂತಹ ಸುರಕ್ಷಿತ ತಾಣಗಳು ಸಾಮಾನ್ಯ ತಾಣಗಳಿಗಿಂತ ಪ್ರತ್ಯೇಕವಾದ ಶಿಷ್ಟತೆಯನ್ನು (ಪ್ರೋಟೋಕಾಲ್) ಬಳಸುತ್ತವೆ. ನೀವು ತೆರೆದಿರುವ ತಾಣದ ವಿವರಗಳನ್ನು ಪರಿಶೀಲಿಸಿ ಅದು ವಿಶ್ವಾಸಾರ್ಹವೋ ಅಲ್ಲವೋ ಎಂದು ನಿಮಗೆ ತಿಳಿಸುವುದು ಈ ಶಿಷ್ಟತೆಯ ಕೆಲಸ. ಅಷ್ಟೇ ಅಲ್ಲ, ಈ ವ್ಯವಸ್ಥೆ ಬಳಕೆದಾರ ಹಾಗೂ ಜಾಲತಾಣದ ನಡುವಿನ ಮಾಹಿತಿ ಸಂವಹನವನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದಾಗಿ ಜಾಲತಾಣದಲ್ಲಿ ನೀವು ದಾಖಲಿಸುವ ಪಾಸ್‌ವರ್ಡ್ (ಗುಪ್ತಪದ), ಕ್ರೆಡಿಟ್ ಕಾರ್ಡ್ ವಿವರ ಮುಂತಾದ ಖಾಸಗಿ ಮಾಹಿತಿ ಅಂತರಜಾಲದ ಮೂಲಕ ಸಾಗುವಾಗ ಬೇರೆ ಯಾರೂ ಅದನ್ನು ಕದಿಯುವುದು ಸಾಧ್ಯವಿಲ್ಲದಂತಾಗುತ್ತದೆ. ಹಣಕಾಸು ವಹಿವಾಟು ನಡೆಸುವಾಗ ಮಾತ್ರವೇ ಅಲ್ಲ, ಇಮೇಲ್ ಹಾಗೂ ಸಮಾಜಜಾಲಗಳ ಮೂಲಕವೂ ಸಾಕಷ್ಟು ಪ್ರಮಾಣದ ಖಾಸಗಿ ಮಾಹಿತಿ ವಿನಿಮಯವಾಗುವುದರಿಂದ ಆ ತಾಣಗಳಿಗೂ ಹೆಚ್ಚುವರಿ ಸುರಕ್ಷತೆ ಬೇಕಾಗುತ್ತದೆ. ಹೀಗಾಗಿಯೇ ಇಂತಹ ಸೇವೆ ಒದಗಿಸುವ ಹಲವಾರು ತಾಣಗಳು ಈ ರೀತಿಯ ಹೆಚ್ಚುವರಿ ಸುರಕ್ಷತೆ ಬಳಸುತ್ತವೆ.

HDMI
ಎಚ್‌ಡಿಎಂಐ
(ರೂಪಿಸಬೇಕಿದೆ)
ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್; ಉನ್ನತ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅಷ್ಟೇ ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಲು ಅನುವುಮಾಡಿಕೊಡುವ ತಂತ್ರಜ್ಞಾನ
ಉತ್ತಮ ಗುಣಮಟ್ಟದ ವೀಡಿಯೋ ಚಿತ್ರೀಕರಿಸುವುದು ಈಗ ಬಹಳ ಸುಲಭ. ಹೀಗೆ ಚಿತ್ರೀಕರಿಸಿದ ವೀಡಿಯೋಗಳನ್ನು ಅಷ್ಟೇ ಒಳ್ಳೆಯ ಗುಣಮಟ್ಟದಲ್ಲಿ ನೋಡಲು ನೆರವಾಗುವ ತಂತ್ರಜ್ಞಾನದ ಹೆಸರು ಎಚ್‌ಡಿಎಂಐ. ಈ ಹೆಸರು 'ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್' ಎನ್ನುವುದರ ಹ್ರಸ್ವರೂಪ. ಅತ್ಯುತ್ತಮ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅತ್ಯಂತ ಕ್ಷಿಪ್ರವಾಗಿ ವರ್ಗಾಯಿಸುವ ಸಾಮರ್ಥ್ಯ ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯ. ಎಚ್‌ಡಿ ಟೀವಿಗಳಲ್ಲಿ, ಡಿವಿಡಿ ಪ್ಲೇಯರುಗಳಲ್ಲಿ, ಸೆಟ್ ಟಾಪ್ ಬಾಕ್ಸುಗಳಲ್ಲಿ, ಕಂಪ್ಯೂಟರುಗಳಲ್ಲಿ, ಹಲವಾರು ಡಿಜಿಟಲ್ ಕ್ಯಾಮೆರಾ, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಈಗ ಎಚ್‌ಡಿಎಂಐ ಪೋರ್ಟ್ ಇರುತ್ತದೆ. ನೋಡಲು ಸರಿಸುಮಾರು ಯುಎಸ್‌ಬಿ ಪೋರ್ಟ್‌ನಂತೆಯೇ ಕಾಣುವ ಎಚ್‌ಡಿಎಂಐ ಪೋರ್ಟ್ ಮೂಲಕ ನಾವು ವಿವಿಧ ಸಾಧನಗಳನ್ನು ಪರಸ್ಪರ ಸಂಪರ್ಕಿಸಿ ಎಚ್‌ಡಿ ಗುಣಮಟ್ಟದ ವೀಡಿಯೋ ವೀಕ್ಷಿಸುವುದು ಸಾಧ್ಯ. ಕ್ರೋಮ್‌ಕಾಸ್ಟ್‌ನಂತಹ ಮೀಡಿಯಾ ಸ್ಟ್ರೀಮಿಂಗ್ ಸಾಧನಗಳನ್ನೂ ಎಚ್‌ಡಿಎಂಐ ಪೋರ್ಟ್ ಮೂಲಕ ಸಂಪರ್ಕಿಸಲಾಗುತ್ತದೆ. ಹಲವು ಪ್ರೊಜೆಕ್ಟರುಗಳೂ ಎಚ್‌ಡಿಎಂಐ ಸಂಪರ್ಕವನ್ನೇ ಬಳಸುತ್ತವೆ. ಅಂದಹಾಗೆ ಎಚ್‌ಡಿಎಂಐ ಸೌಲಭ್ಯವಿರುವ ಉಪಕರಣಗಳನ್ನು ಸಂಪರ್ಕಿಸಲು ಎಚ್‌ಡಿಎಂಐ ಕೇಬಲ್ಲುಗಳನ್ನೇ ಬಳಸಬೇಕಾದ್ದು ಕಡ್ಡಾಯ.

Hard Disk
ಹಾರ್ಡ್‌ಡಿಸ್ಕ್
(ರೂಪಿಸಬೇಕಿದೆ)
ಮಾಹಿತಿ ಶೇಖರಣಾ ಮಾಧ್ಯಮಗಳಲ್ಲೊಂದು; ಇಲ್ಲಿ ಮಾಹಿತಿ ಶೇಖರಣೆಗಾಗಿ ಲೋಹದ ತಟ್ಟೆಗಳು ಬಳಕೆಯಾಗುವುದರಿಂದ ಇದನ್ನು ಹಾರ್ಡ್ ಡಿಸ್ಕ್ ಎಂದು ಕರೆಯುತ್ತಾರೆ.
ಕಂಪ್ಯೂಟರಿನ ಭಾಗಗಳ ಬಗ್ಗೆ ಕೇಳಿದಾಗ ನಮಗೆ ಥಟ್ಟನೆ ನೆನಪಾಗುವ ಹೆಸರುಗಳ ಪೈಕಿ ಹಾರ್ಡ್ ಡಿಸ್ಕ್ ಕೂಡ ಒಂದು. ಮತ್ತೊಮ್ಮೆ ಬಳಸಲು ಬೇಕಾದ ಮಾಹಿತಿಯನ್ನು ಉಳಿಸಿಡಲು ನಾವು ಈ ಸಾಧನವನ್ನು ಬಳಸುತ್ತೇವೆ. ಇದು ಕಂಪ್ಯೂಟರಿನ ಸೆಕೆಂಡರಿ ಮೆಮೊರಿಗೆ ಒಂದು ಉದಾಹರಣೆ. ಹಾರ್ಡ್ ಡಿಸ್ಕ್ ಎನ್ನುವ ಹೆಸರಿಗೆ ಕಾರಣ ಅದರಲ್ಲಿ ಬಳಕೆಯಾಗುವ ಲೋಹದ ತಟ್ಟೆಗಳು. ಅಯಸ್ಕಾಂತೀಯ ಲೇಪನವಿರುವ ಈ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಅಲ್ಲಿ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆಯೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ). ಇದನ್ನು ನಾವು ಸರಳವಾಗಿ ಹಾರ್ಡ್ ಡಿಸ್ಕ್ ಎಂದು ಕರೆಯುತ್ತೇವೆ ಅಷ್ಟೆ: ಕಂಪ್ಯೂಟರಿನ ಒಳಗೆ ಅಡಕವಾಗಿರುವುದು ಇಂಟರ್ನಲ್ ಹಾರ್ಡ್ ಡಿಸ್ಕ್, ಪ್ರತ್ಯೇಕವಾಗಿ ಹೊರಗಿನಿಂದ ಜೋಡಿಸಬಹುದಾದದ್ದು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್. ಪೆನ್‌ಡ್ರೈವ್ ಇತ್ಯಾದಿಗಳಿಗೆ ಹೋಲಿಸಿದರೆ ಹಾರ್ಡ್ ಡಿಸ್ಕ್‌ನಲ್ಲಿ ಶೇಖರಿಸಿಡಬಹುದಾದ ಮಾಹಿತಿಯ ಪ್ರಮಾಣ ಹೆಚ್ಚು, ಅದಕ್ಕೆ ತಗಲುವ ವೆಚ್ಚ ಕಡಿಮೆ. ಆದರೆ ಇಲ್ಲಿ ಚಲಿಸುವ ಭಾಗಗಳಿರುವುದರಿಂದ ಮಾಹಿತಿಯನ್ನು ಓದಿ-ಬರೆಯುವ ವೇಗ ಕಡಿಮೆ, ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಉಂಟು. ಹಾಗಾಗಿ ಈಚೆಗೆ ಎಚ್‌ಡಿಡಿಗೆ ಪರ್ಯಾಯವಾಗಿ ಬಳಸಬಹುದಾದ ತಂತ್ರಜ್ಞಾನಗಳೂ ರೂಪುಗೊಳ್ಳುತ್ತಿವೆ.

Hardware
ಹಾರ್ಡ್‌ವೇರ್
(ರೂಪಿಸಬೇಕಿದೆ)
ಯಂತ್ರಾಂಶ; ಕಂಪ್ಯೂಟರ್ ಅಥವಾ ಇನ್ನಾವುದೇ ವಿದ್ಯುನ್ಮಾನ ಸಾಧನಕ್ಕೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳು
ಕಂಪ್ಯೂಟರ್ ಅಥವಾ ಇನ್ನಾವುದೇ ವಿದ್ಯುನ್ಮಾನ ಸಾಧನಕ್ಕೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್‌ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಭಾಗಗಳೆಲ್ಲ ಯಂತ್ರಾಂಶಗಳೇ. ಇಂತಹ ಯಾವುದೇ ಸಾಧನಕ್ಕೆ ಮಾಹಿತಿ ನೀಡಲು ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್, ಸ್ಕ್ಯಾನರ್, ಮೈಕ್ರೋಫೋನ್, ಕ್ಯಾಮೆರಾ ಮುಂತಾದ ಸಾಧನಗಳನ್ನು ಇನ್‌ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಈ ಸಾಧನಗಳನ್ನು ಬಳಸಿ ನಾವು ಕಂಪ್ಯೂಟರಿಗೆ - ಮೊಬೈಲ್ ಫೋನ್‌ಗೆ ಆದೇಶ ನೀಡುವುದು, ದತ್ತಾಂಶವನ್ನು (ಡೇಟಾ) ಪೂರೈಸುವುದು ಸಾಧ್ಯ. ಇದೇ ರೀತಿ ಇಂತಹ ಸಾಧನಗಳು ಸಂಸ್ಕರಿಸಿದ ಮಾಹಿತಿಯನ್ನು ಮರಳಿ ಪಡೆದುಕೊಳ್ಳಲು (ಔಟ್‌ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ಮುಂತಾದ ಸಾಧನಗಳಿಗೆ ಔಟ್‌ಪುಟ್ ಡಿವೈಸಸ್ ಎಂದು ಹೆಸರು. ಇನ್‌ಪುಟ್ ಹಾಗೂ ಔಟ್‌ಪುಟ್ ಎರಡನ್ನೂ ನಿಭಾಯಿಸಬಲ್ಲ ಯಂತ್ರಾಂಶಗಳೂ ಇವೆ. ಸ್ಮಾರ್ಟ್‌ಫೋನಿನ ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್) ಇಂತಹ ಸಾಧನಗಳಿಗೊಂದು ಉದಾಹರಣೆ. ಈಗ ನಮ್ಮ ಮೊಬೈಲಿಗೆ ವಾಟ್ಸ್‌ಆಪ್ ಮೂಲಕ ಯಾರೋ ಒಂದು ವೀಡಿಯೋ ಕಳುಹಿಸಿದ್ದಾರೆ ಎಂದುಕೊಳ್ಳೋಣ. ನಾವು ಮೊಬೈಲ್ ಪರದೆಯ ಮೇಲಿರುವ 'ಪ್ಲೇ' ಗುರುತನ್ನು ಒಮ್ಮೆ ಮುಟ್ಟುವ ಮೂಲಕ ಇನ್‌ಪುಟ್ ನೀಡುತ್ತೇವೆ. ಅದನ್ನು ಗುರುತಿಸುವ ಮೊಬೈಲಿನ ತಂತ್ರಾಂಶ ವೀಡಿಯೋ ಪ್ರದರ್ಶಿಸುತ್ತದೆ - ಪರದೆಯ ಮೇಲೆ ಚಿತ್ರ ಹಾಗೂ ಸ್ಪೀಕರ್ ಮೂಲಕ ಧ್ವನಿಯ ಔಟ್‌ಪುಟ್ ನಮ್ಮನ್ನು ತಲುಪುತ್ತದೆ.

Heat Sink
ಹೀಟ್ ಸಿಂಕ್
(ರೂಪಿಸಬೇಕಿದೆ)
ವಿದ್ಯುನ್ಮಾನ ಉಪಕರಣಗಳ ಕಾರ್ಯಾಚರಣೆ ಸಂದರ್ಭದಲ್ಲಿ ಉತ್ಪತ್ತಿಯಾಗುವ ಶಾಖವನ್ನು ಚದರಿಸುವ ಸಾಧನ
ಕಂಪ್ಯೂಟರಿನ ಕೇಂದ್ರೀಯ ಸಂಸ್ಕರಣ ಘಟಕ, ಅಂದರೆ ಸಿಪಿಯುನಂತೆ ಕೆಲಸಮಾಡುವುದು ಅದರ ಪ್ರಾಸೆಸರ್. ಈ ಸಾಧನಕ್ಕೆ ಪ್ರತಿ ಸೆಕೆಂಡಿಗೆ ಲಕ್ಷಗಟ್ಟಲೆ ಲೆಕ್ಕಾಚಾರಗಳನ್ನು ನಿಭಾಯಿಸುವ ಸಾಮರ್ಥ್ಯ ಇರುತ್ತದೆ. ಅಷ್ಟೆಲ್ಲ ಲೆಕ್ಕಾಚಾರಗಳನ್ನು ಒಂದೇಸಮನೆ ಮಾಡುವಾಗ ನಡೆಯುವ ವಿದ್ಯುನ್ಮಾನ ವಿದ್ಯಮಾನಗಳಿಂದಾಗಿ ಪ್ರಾಸೆಸರ್ ಬಲುಬೇಗನೆ ಬಿಸಿಯಾಗಿಬಿಡುತ್ತದೆ. ಈ ಉಷ್ಣತೆ ಸುಮಾರು ೫೦-೬೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವುದೂ ಸಾಧ್ಯ. ಹೀಗೆ ಉತ್ಪತ್ತಿಯಾಗುವ ಶಾಖವನ್ನು ಸರಿಯಾಗಿ ನಿಭಾಯಿಸದೆ ಹೋದರೆ ಅದು ಹಾಳಾಗುವ ಪರಿಸ್ಥಿತಿಯೂ ಬರಬಹುದು. ಹೀಗಾಗಿಯೇ ಶಾಖವನ್ನು ಚದರಿಸುವ (ಡಿಸಿಪೇಟ್) ಲೋಹದ ಸಾಧನವೊಂದನ್ನು ಪ್ರಾಸೆಸರ್‌ಗೆ ಅಳವಡಿಸಲಾಗಿರುತ್ತದೆ. ತನ್ನ ಪದರಗಳ ಮೂಲಕ ಶಾಖವನ್ನು ಚದರಿಸಿ ಪ್ರಾಸೆಸರ್ ಮಿತಿಮೀರಿ ಬಿಸಿಯಾಗದಂತೆ ತಡೆಯುವ ಈ ಸಾಧನವನ್ನು 'ಹೀಟ್ ಸಿಂಕ್' (ಶಾಖ ಉಡುಗಿಸುವ ಸಾಧನ ಎಂಬ ಅರ್ಥದಲ್ಲಿ) ಎಂದು ಕರೆಯುತ್ತಾರೆ. ಬಹಳಷ್ಟು ಸಾರಿ ಈ ಸಾಧನದ ವಿಸ್ತೀರ್ಣ ಪ್ರಾಸೆಸರ್‌ನ ವಿಸ್ತೀರ್ಣದಷ್ಟೇ ಇರುತ್ತದೆ (ಹಾಗಾಗಿ ಅವನ್ನು ಪ್ರಾಸೆಸರ್ ಮೇಲೆ ಅಂಟಿಸುವುದು ಸಾಧ್ಯವಾಗುತ್ತದೆ); ಕಡಿಮೆ ವಿಸ್ತೀರ್ಣದಲ್ಲೇ ಸಮಾಂತರವಾಗಿರುವ ಲೋಹದ ತೆಳುವಾದ ಫಲಕಗಳನ್ನು ಬಳಸುವ ಮೂಲಕ ಶಾಖವನ್ನು ಕ್ಷಿಪ್ರವಾಗಿ ಚದರಿಸುವುದು ಇದರ ವೈಶಿಷ್ಟ್ಯ. ಬಹುತೇಕ ಹೀಟ್ ಸಿಂಕ್‌ಗಳ ಜೊತೆಗೆ ಒಂದು ಫ್ಯಾನ್ ಕೂಡ ಇರುತ್ತದೆ. ಹೀಟ್ ಸಿಂಕ್ ಮೂಲಕ ಹಾದುಬರುವ ಶಾಖವನ್ನು ಇನ್ನಷ್ಟು ದೂರಕ್ಕೆ ಚದರಿಸಿ ಹೀಟ್ ಸಿಂಕ್‌ನ ಉಷ್ಣತೆಯನ್ನೂ ನಿರ್ದಿಷ್ಟ ಮಟ್ಟದಲ್ಲೇ ಕಾಪಾಡುವುದು ಫ್ಯಾನ್ ಬಳಸುವುದರ ಹಿಂದಿನ ಉದ್ದೇಶ. ಕಂಪ್ಯೂಟರ್‌ನ ಪ್ರಾಸೆಸರ್ ಮಾತ್ರವಲ್ಲದೆ ಜಿಪಿಯು ಹಾಗೂ ವೀಡಿಯೋ ಕಾರ್ಡ್‌ನಂತಹ ಸಾಧನಗಳಲ್ಲೂ ಹೀಟ್ ಸಿಂಕ್ ಬಳಕೆ ಸಾಮಾನ್ಯ.

Hyperlink
ಹೈಪರ್‌ಲಿಂಕ್
(ರೂಪಿಸಬೇಕಿದೆ)
ಪಠ್ಯದ ಒಂದು ತುಣುಕು ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಜಾಲಲೋಕದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆ
ಅಂತರಜಾಲದ ತುಂಬ ಪರಸ್ಪರ ಸಂಪರ್ಕದಲ್ಲಿರುವ ಅಸಂಖ್ಯ ಸಾಧನಗಳಿವೆ. ಇನ್ನು ವಿಶ್ವವ್ಯಾಪಿ ಜಾಲದಲ್ಲಂತೂ (ವರ್ಲ್ಡ್‌ವೈಡ್ ವೆಬ್) ಕ್ಲಿಕ್ ಮಾಡುತ್ತ ಹೋಗಲು ಅಪರಿಮಿತ ಆಯ್ಕೆಗಳು. ಎಲ್ಲೋ ಯಾವುದೋ ಒಂದು ಪುಟದಿಂದ ಪ್ರಾರಂಭಿಸುವ ನಾವು ಕೆಲವೇ ನಿಮಿಷಗಳಲ್ಲಿ ಎಲ್ಲಿಂದ ಎಲ್ಲಿಗೋ ಹೋಗಿ ತಲುಪಿರುತ್ತೇವೆ. ಎಷ್ಟಾದರೂ ಇದರ ಹೆಸರಿನಲ್ಲೇ ವೆಬ್ (ಬಲೆ) ಇದೆಯಲ್ಲ! ಪಠ್ಯದ ಒಂದು ತುಣುಕು ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಜಾಲಲೋಕದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಥಟ್ಟನೆ ಹಾರುವುದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯೇ 'ಹೈಪರ್‌ಲಿಂಕ್'. ವಿಶ್ವವ್ಯಾಪಿ ಜಾಲದ ಯಾವುದೋ ಮೂಲೆಯಲ್ಲಿ ಯಾವುದೋ ಸರ್ವರ್‌ನಲ್ಲಿ ಅಡಗಿರುವ ವೆಬ್ ಪುಟ ಅಥವಾ ಕಡತವನ್ನು ಮೌಸಿನ ಒಂದೇ ಕ್ಲಿಕ್ ಮೂಲಕ ತೆರೆಯುವುದು ಹೈಪರ್‌ಲಿಂಕ್‌ನಿಂದಾಗಿ ಸಾಧ್ಯವಾಗುತ್ತದೆ. ದಿನಬಳಕೆಯ ಭಾಷೆಯಲ್ಲಿ 'ಲಿಂಕ್' ಎಂದಷ್ಟೇ ಕೂಡ ಗುರುತಿಸಿಕೊಳ್ಳುವ ಹೈಪರ್‌ಲಿಂಕ್, ವೆಬ್‌ಪುಟದ ಒಂದು ಭಾಗದಿಂದ ಬೇರೊಂದು ಭಾಗ, ಪುಟ ಅಥವಾ ತಾಣದಲ್ಲಿರುವ ಮಾಹಿತಿಗೆ ಸಂಪರ್ಕ ನೀಡುವ ಕೊಂಡಿ. ಈ ಕೊಂಡಿಗಳು ಪಠ್ಯ ಅಥವಾ ಚಿತ್ರದ ರೂಪದಲ್ಲಿ ಇರಬಹುದು. ಪಠ್ಯರೂಪದ ಕೊಂಡಿಗಳನ್ನು ಸಾಮಾನ್ಯವಾಗಿ ಅವುಗಳ ಕೆಳಗಿರುವ ಅಡ್ಡಗೆರೆಯಿಂದ (ಅಂಡರ್‌ಲೈನ್) ಅಥವಾ ವಿಭಿನ್ನ ಬಣ್ಣದಿಂದ ಗುರುತಿಸಬಹುದು. ಹೈಪರ್‌ಲಿಂಕ್‌ಗಳಿರುವ ಪಠ್ಯವನ್ನು ಹೈಪರ್‌ಟೆಕ್ಸ್ಟ್ ಎಂದು ಗುರುತಿಸಲಾಗುತ್ತದೆ. ಪಠ್ಯ ಮಾತ್ರವೇ ಅಲ್ಲದೆ ಚಿತ್ರ, ಧ್ವನಿ, ವಿಡಿಯೋ ಮುಂತಾದ ಬಹುಮಾಧ್ಯಮ ರೂಪದಲ್ಲೂ ಕೊಂಡಿಗಳಿದ್ದರೆ ಆ ಮಾಹಿತಿಯನ್ನು ಹೈಪರ್‌ಮೀಡಿಯಾ ಎಂದು ಗುರುತಿಸುವ ಅಭ್ಯಾಸವೂ ಇದೆ.

Hybrid Computer
ಹೈಬ್ರಿಡ್ ಕಂಪ್ಯೂಟರ್
(ರೂಪಿಸಬೇಕಿದೆ)
ಪರದೆ-ಕೀಲಿಮಣೆಗಳನ್ನು ಅಗತ್ಯಬಿದ್ದಾಗ ಬೇರ್ಪಡಿಸಿ ಬಳಸಬಹುದಾದ ಕಂಪ್ಯೂಟರ್
ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ ಅನುಕೂಲಕರ ಗಾತ್ರದ ಪರದೆಯಿರುತ್ತದೆ, ಕೀಲಿಮಣೆಯೂ ಇರುತ್ತದೆ. ಆದರೆ ಕೊಂಚಹೊತ್ತು ಸುಮ್ಮನೆ ಕುಳಿತು ಸಿನಿಮಾ ನೋಡಬೇಕೆನಿಸಿದಾಗ ಅದರ ಗಾತ್ರ ಕಿರಿಕಿರಿಮಾಡುತ್ತದೆ, ತೂಕವೂ ಜಾಸ್ತಿಯೆನಿಸುತ್ತದೆ. ಈ ಕೆಲಸಕ್ಕೆ ಟ್ಯಾಬ್ಲೆಟ್ ಬಳಕೆ ಸುಲಭ ಎನಿಸಿದರೂ ಮತ್ತೆ ಯಾವುದೋ ಇಮೇಲ್ ಕಳಿಸುವಾಗ ಕೀಲಿಮಣೆ ಬೇಕು ಎಂಬ ಭಾವನೆ ಮೂಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವಾಗಿ ರೂಪುಗೊಂಡಿರುವುದೇ ಹೈಬ್ರಿಡ್ ಕಂಪ್ಯೂಟರ್. ಲ್ಯಾಪ್‌ಟಾಪಿನಂತೆ ಇದರಲ್ಲೂ ಪರದೆ-ಕೀಲಿಮಣೆ ಇರುತ್ತದಾದರೂ ಅವನ್ನು ಬೇಕೆಂದಾಗ ಬೇರ್ಪಡಿಸಬಹುದು ಎನ್ನುವುದು ವಿಶೇಷ. ಸಿನಿಮಾ ನೋಡುವಾಗ ಪರದೆಯನ್ನಷ್ಟೆ (ಟ್ಯಾಬ್ಲೆಟ್ಟಿನಂತೆ) ಬಳಸಿ ಇಮೇಲ್ ಟೈಪ್ ಮಾಡುವಾಗ ಕೀಲಿಮಣೆಯನ್ನು ಜೋಡಿಸಿಕೊಳ್ಳಬಹುದು. ಇಮೇಲ್ ಮುಗಿಸಿದ ಮೇಲೆ ಕೀಲಿಮಣೆ ಕಿತ್ತಿಟ್ಟರಾಯಿತು, ಆವರೆಗೂ ಲ್ಯಾಪ್‌ಟಾಪ್ ಆಗಿದ್ದದ್ದು ಟ್ಯಾಬ್ಲೆಟ್ ಆಗಿ ಬದಲಾಗಿಬಿಡುತ್ತದೆ! ಕೆಲವು ಹೈಬ್ರಿಡ್ ಕಂಪ್ಯೂಟರ್ ಮಾದರಿಗಳಲ್ಲಿ ಪ್ರತ್ಯೇಕ ಕೀಲಿಮಣೆ ಇದ್ದರೆ ಇನ್ನು ಕೆಲವು ಮಾದರಿಗಳಲ್ಲಿ ಪರದೆಯನ್ನು ಮುಚ್ಚುವ ಕವಚದಲ್ಲೇ (ಟ್ಯಾಬ್ಲೆಟ್ ಕವರ್) ಕೀಲಿಮಣೆಯೂ ಅಡಕವಾಗಿರುತ್ತದೆ. ಪ್ರತ್ಯೇಕ ಕೀಲಿಮಣೆ ಇರುವ ಮಾದರಿಗಳಲ್ಲಿ ಟ್ಯಾಬ್ಲೆಟ್‌ನಂತೆ ಬಳಸುವ ಭಾಗವನ್ನು ಕೀಲಿಮಣೆಯ ಮೇಲೆ (ಲ್ಯಾಪ್‌ಟಾಪ್ ಪರದೆಯಂತೆ) ಜೋಡಿಸಿಕೊಳ್ಳುವುದು ಸಾಧ್ಯ. ಕವಚದಲ್ಲಿ ಅಡಕವಾಗಿರುವ ತೆಳುವಾದ ಕೀಲಿಮಣೆಗೆ ಈ ಸಾಮರ್ಥ್ಯವಿರುವುದಿಲ್ಲವಲ್ಲ, ಅಂತಹ ಮಾದರಿಗಳಲ್ಲಿ ಟ್ಯಾಬ್ಲೆಟ್‌ಗೊಂದು ಪ್ರತ್ಯೇಕ ಸ್ಟಾಂಡ್ ಇರುತ್ತದೆ. ಹೈಬ್ರಿಡ್ ಕಂಪ್ಯೂಟರುಗಳನ್ನು 'ಟೂ-ಇನ್-ಒನ್' ಅಥವಾ 'ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್'ಗಳೆಂದೂ ಗುರುತಿಸಲಾಗುತ್ತದೆ.

Hybrid SIM slot
ಹೈಬ್ರಿಡ್ ಸಿಮ್ ಸ್ಲಾಟ್
(ರೂಪಿಸಬೇಕಿದೆ)
ಮೊಬೈಲ್ ಫೋನಿನಲ್ಲಿ ಹೆಚ್ಚುವರಿ ಸಿಮ್ ಅಥವಾ ಮೆಮೊರಿ ಕಾರ್ಡ್‌ಗಳ ಪೈಕಿ ಯಾವುದಾದರೂ ಒಂದನ್ನು ಮಾತ್ರ ಬಳಸಲು ಅನುವುಮಾಡಿಕೊಡುವ ವಿನ್ಯಾಸ
ಬೇರೆಬೇರೆ ಉದ್ದೇಶಗಳಿಗೆ ಬೇರೆಬೇರೆ ಸಿಮ್ ಬಳಸುವವರ ಸಂಖ್ಯೆ ಹೆಚ್ಚಿರುವುದರಿಂದ ಈಗ ಎರಡು ಸಿಮ್ ಇರುವ (ಡ್ಯುಯಲ್ ಸಿಮ್) ಮೊಬೈಲುಗಳಿಗೆ ಬೇಡಿಕೆ ಜಾಸ್ತಿ. ಮೊಬೈಲಿನಲ್ಲಿ ಶೇಖರಿಸುವ ಮಾಹಿತಿ ಜಾಸ್ತಿಯಾದಂತೆ ಹೆಚ್ಚುವರಿ ಶೇಖರಣಾ ಸಾಮರ್ಥ್ಯಕ್ಕಾಗಿ ಮೆಮೊರಿ ಕಾರ್ಡ್ ಸೌಲಭ್ಯವೂ ಬೇಕೆನಿಸುವುದು ಸಹಜ. ಇವೆರಡೂ ಬೇಡಿಕೆಗಳನ್ನು ಈಡೇರಿಸುವ ಬದಲು ಹೆಚ್ಚುವರಿ ಸಿಮ್ ಅಥವಾ ಮೆಮೊರಿ ಕಾರ್ಡ್‌ಗಳ ಪೈಕಿ ಯಾವುದಾದರೂ ಒಂದನ್ನು ಬಳಸಲು ಅನುವಾಗುವಂತೆ ಮೊಬೈಲ್ ತಯಾರಕರು 'ಹೈಬ್ರಿಡ್ ಸಿಮ್ ಸ್ಲಾಟ್' ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಈ ವಿನ್ಯಾಸವನ್ನು ಅಳವಡಿಸಿಕೊಂಡ ಮೊಬೈಲುಗಳಲ್ಲಿ ಮೆಮೊರಿ ಕಾರ್ಡ್ ಬಳಸಬೇಕೆಂದರೆ ಒಂದೇ ಸಿಮ್ ಮಾತ್ರ ಉಪಯೋಗಿಸುವುದು ಸಾಧ್ಯವಾಗುತ್ತದೆ. ಮೆಮೊರಿ ಕಾರ್ಡ್ ಸೌಲಭ್ಯ ಬೇಡವೆಂದರೆ ಮಾತ್ರ ಎರಡು ಸಿಮ್‌ಗಳ ಬಳಕೆ ಸಾಧ್ಯ. ಮೊಬೈಲ್ ಗಾತ್ರ ಕಡಿಮೆಯಿರಬೇಕು, ಆದರೆ ಸಾಮರ್ಥ್ಯ ಮಾತ್ರ ಹೆಚ್ಚಿರಬೇಕು ಎನ್ನುವ ಅಭಿಪ್ರಾಯ ಈಚೆಗೆ ವ್ಯಾಪಕವಾಗಿದೆಯಲ್ಲ, ಇದಕ್ಕೆ ಸ್ಪಂದನೆಯಾಗಿ ಮೊಬೈಲ್ ತಯಾರಕರು ಸೀಮಿತ ಗಾತ್ರದ ಸಾಧನದೊಳಗೇ ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ಹೈಬ್ರಿಡ್ ಸಿಮ್ ಸ್ಲಾಟ್ ರೂಪುಗೊಂಡಿರುವುದು ಸ್ಥಳಾವಕಾಶ ಉಳಿಸುವ ಇದೇ ಪ್ರಯತ್ನದ ಫಲವಾಗಿ. ನಿಮಗೆ ಹೆಚ್ಚುವರಿ ಸಿಮ್ ಹಾಗೂ ಮೆಮೊರಿ ಕಾರ್ಡ್ ಎರಡೂ ಸೌಲಭ್ಯಗಳು ಬೇಕೆನಿಸಿದ್ದರೆ ಹೈಬ್ರಿಡ್ ಸಿಮ್ ಸ್ಲಾಟ್ ಇಲ್ಲದಿರುವ ಫೋನನ್ನೇ ಕೊಳ್ಳುವುದು ಉತ್ತಮ. ಮೆಮೊರಿ ಕಾರ್ಡ್ ಹಾಗೂ ಹೆಚ್ಚುವರಿ ಸಿಮ್ ಎರಡನ್ನೂ ಬಳಸಲು ಸಾಧ್ಯವಿರುವ ಹಲವು ಮಾದರಿಯ ಮೊಬೈಲುಗಳು ಇದೀಗ ಮಾರುಕಟ್ಟೆಯಲ್ಲಿವೆ. ನಿಮ್ಮ ಆಯ್ಕೆಯ ಫೋನಿನಲ್ಲಿ ಸಾಕಷ್ಟು ಆಂತರಿಕ ಶೇಖರಣಾ ಸಾಮರ್ಥ್ಯವೇ (ಇಂಟರ್ನಲ್ ಸ್ಟೋರೇಜ್) ಇದ್ದರೆ, ಅಥವಾ ನಿಮಗೆ ಎರಡನೆಯ ಸಿಮ್ ಅಗತ್ಯ ಇಲ್ಲದಿದ್ದರೆ ಈ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

Hosting
ಹೋಸ್ಟಿಂಗ್
(ರೂಪಿಸಬೇಕಿದೆ)
ಜಾಲತಾಣದ ಮಾಹಿತಿಯನ್ನು ಅಗತ್ಯ ಕ್ರಮವಿಧಿಗಳ ಜೊತೆಗೆ ವೆಬ್‌ಸರ್ವರ್‌ನಲ್ಲಿ ಶೇಖರಿಸಿಡುವ ಕೆಲಸ
ನಮ್ಮದೇ ಜಾಲತಾಣಗಳನ್ನು ರೂಪಿಸಿಕೊಳ್ಳಲು ಹೊರಟಾಗ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಆಯ್ಕೆಯ ವಿಳಾಸ, ಅಂದರೆ ಯುಆರ್‌ಎಲ್ ಅನ್ನು ಪಡೆದುಕೊಳ್ಳುವುದು. ಯುಆರ್‌ಎಲ್‌ಗಳನ್ನು ಒದಗಿಸುವ ಸಂಸ್ಥೆಗಳಿಗೆ ರಿಜಿಸ್ಟ್ರಾರ್‌ಗಳೆಂದು ಹೆಸರು. ನಮಗೆ ಬೇಕಾದ ವಿಳಾಸವನ್ನು ವರ್ಷಕ್ಕೆ ಇಂತಿಷ್ಟು ಎಂದು ಶುಲ್ಕ ಪಾವತಿಸುವ ಮೂಲಕ ಇಂತಹ ರಿಜಿಸ್ಟ್ರಾರ್‌ಗಳಿಂದ ಪಡೆದುಕೊಳ್ಳಬಹುದು. ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಇರಬಹುದು. ಕೆಲವೊಮ್ಮೆ ಪ್ರಾಯೋಜಕರು ಅವನ್ನು ಉಚಿತವಾಗಿ ನೀಡುವುದೂ ಇದೆ. ವಿಳಾಸ ಪಡೆದುಕೊಂಡ ಮೇಲೆ ಜಾಲತಾಣ ನಿರ್ಮಿಸಬೇಕಲ್ಲ. ನಾವು ಹೇಳಬೇಕೆಂದಿರುವ ಮಾಹಿತಿಯನ್ನು ಚಿತ್ರಗಳು, ಪಠ್ಯ, ಧ್ವನಿ ಮುಂತಾದ ಮಾಧ್ಯಮಗಳ ಮೂಲಕ ಹಲವಾರು ಪುಟಗಳಲ್ಲಿ (ವೆಬ್‌ಪೇಜ್) ನಿರೂಪಿಸಿ ಆ ಮಾಹಿತಿಯನ್ನು ಅಗತ್ಯ ಕ್ರಮವಿಧಿಗಳ ಜೊತೆಗೆ ವೆಬ್‌ಸರ್ವರ್ ಒಂದರಲ್ಲಿ ಶೇಖರಿಸಿಡುವುದು ಈ ಹೆಜ್ಜೆಯ ಕೆಲಸ. ಇದಕ್ಕೆ ಹೋಸ್ಟಿಂಗ್ ಎಂದು ಕರೆಯುತ್ತಾರೆ. ಹೋಸ್ಟಿಂಗ್ ಸೇವೆ ಒದಗಿಸುವ ಸಂಸ್ಥೆಗಳಿಗೂ ವರ್ಷಕ್ಕಿಷ್ಟು ಎನ್ನುವ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ. ನಮ್ಮ ಜಾಲತಾಣದಲ್ಲಿ ಎಷ್ಟು ಪ್ರಮಾಣದ ಮಾಹಿತಿ ಇದೆ, ಅದಕ್ಕೆ ಎಷ್ಟು ಜನ ಭೇಟಿನೀಡುತ್ತಾರೆ ಎನ್ನುವ ಅಂಶಗಳನ್ನೂ ಬಾಡಿಗೆ ನಿಗದಿಪಡಿಸುವಾಗ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಡೊಮೈನ್ ನೇಮ್‌ಗಳನ್ನು ಒದಗಿಸುವ ರಿಜಿಸ್ಟ್ರಾರ್‌ಗಳೇ ವೆಬ್ ಹೋಸ್ಟಿಂಗ್ ಸೇವೆಯನ್ನೂ ಒದಗಿಸುತ್ತವೆ. ನಮ್ಮ ತಾಣಕ್ಕೆ ಬೇಕಾದಷ್ಟು ಜಾಗ, ಅಗತ್ಯವಾದ ತಂತ್ರಾಂಶಗಳು, ಇಮೇಲ್ ವ್ಯವಸ್ಥೆ ಮೊದಲಾದವನ್ನೆಲ್ಲ ಹೊಂದಿಸಿಕೊಡುವುದು ಈ ಸಂಸ್ಥೆಗಳ ಜವಾಬ್ದಾರಿ.


logo