logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

RFID
ಆರ್‌ಎಫ್‌ಐಡಿ
(ರೂಪಿಸಬೇಕಿದೆ)
ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್; ಪರಸ್ಪರ ಸಮೀಪದಲ್ಲಿರುವ ಸಂಪರ್ಕ ಸಾಧನಗಳ ನಡುವೆ ರೇಡಿಯೋ ಸಂಕೇತಗಳ ಮೂಲಕ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುವ ವ್ಯವಸ್ಥೆ
ದೊಡ್ಡದೊಡ್ಡ ಅಂಗಡಿಗಳಲ್ಲಿ ಶಾಪಿಂಗ್ ಮುಗಿಸಿ ಹೊರಟಾಗ ಬಿಲ್ಲುಕಟ್ಟೆಯಲ್ಲಿರುವ ವ್ಯಕ್ತಿ ನಾವು ಕೊಂಡ ವಸ್ತುಗಳಿಂದ ಪುಟ್ಟದೊಂದು ಸಾಧನವನ್ನು ಕಿತ್ತುತೆಗೆಯುವುದನ್ನು ನೀವು ನೋಡಿರಬಹುದು. ತೆಗೆಯಲು ಮರೆತು ಹಾಗೆಯೇ ಕೊಟ್ಟಾಗ ನೀವೇನಾದರೂ ಅದನ್ನು ಹೊರಗೆ ಕೊಂಡೊಯ್ಯಲು ಪ್ರಯತ್ನಿಸಿದರೆ ಬಾಗಿಲ ಬಳಿಯ ಸೆನ್ಸರ್ ಅರಚಿಕೊಳ್ಳುವುದರ ಅನುಭವವೂ ಆಗಿರಬಹುದು. ಕಳವಿನ ಚಟವಿರುವ ಅನೇಕರು ಇದರಿಂದಾಗಿಯೇ ಸಿಕ್ಕಿ ಬೀಳುತ್ತಾರೆ. ಇಲ್ಲಿ ಬಳಕೆಯಾಗುವ ತಂತ್ರಜ್ಞಾನವೇ 'ಆರ್‌ಎಫ್‌ಐಡಿ', ಅರ್ಥಾತ್ 'ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್'. ಸಣ್ಣಗಾತ್ರದ ಟ್ಯಾಗ್‌ಗಳು ಹಾಗೂ ಅದರಲ್ಲಿರುವ ಮಾಹಿತಿಯನ್ನು ಓದಬಲ್ಲ ಸೆನ್ಸರುಗಳು ಈ ವ್ಯವಸ್ಥೆಯ ಜೀವಾಳ. ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ತಮ್ಮಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸಬಲ್ಲವು. ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದು ಸೆನ್ಸರುಗಳ ಕೆಲಸ. ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ ಅಂಗಡಿಗಳಲ್ಲಿ ಕಳವು ತಡೆಗೆ, ದಾಸ್ತಾನಿನ ಮಾಹಿತಿ ಸಂಗ್ರಹಣೆಗೆ, ಟಿಕೇಟುಗಳ ತಪಾಸಣೆಗೆಲ್ಲ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಬೀಟ್ ಪೋಲೀಸರು ಯಾವೆಲ್ಲ ರಸ್ತೆಗಳಿಗೆ ಭೇಟಿಕೊಟ್ಟಿದ್ದಾರೆ, ಕಸ ಸಂಗ್ರಹಣಾ ವಾಹನಗಳು ಎಲ್ಲೆಲ್ಲಿ ಸಂಚರಿಸಿವೆ ಎನ್ನುವುದನ್ನು ತಿಳಿಯಲಿಕ್ಕೂ ಆರ್‌ಎಫ್‌ಐಡಿ ಬಳಸಿದ ಉದಾಹರಣೆಗಳಿವೆ. ಬಾರ್ ಕೋಡ್‌ನಂತೆ ಇಲ್ಲಿ ನಿರ್ದಿಷ್ಟ ಸಂಕೇತವನ್ನೇ ಸ್ಕ್ಯಾನ್ ಮಾಡುವ ಅಗತ್ಯ ಇಲ್ಲ; ಹಾಗಾಗಿ ಅಂಗಡಿಯಲ್ಲಿ ಕೊಂಡ ವಸ್ತುಗಳನ್ನು ಬುಟ್ಟಿಯಲ್ಲಿದ್ದಂತೆಯೇ ಗುರುತಿಸುವುದು, ಜೇಬಿನಲ್ಲೋ ಪರ್ಸಿನಲ್ಲೋ ಇರುವ ಟಿಕೇಟನ್ನು ಅಲ್ಲಿದ್ದಂತೆಯೇ ಪರಿಶೀಲಿಸುವುದು ಸಾಧ್ಯವಾಗುತ್ತದೆ.

RSS
ಆರ್‌ಎಸ್‌ಎಸ್
(ರೂಪಿಸಬೇಕಿದೆ)
ರಿಚ್ ಸೈಟ್ ಸಮ್ಮರಿ; ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು - ಅವುಗಳನ್ನು ಪ್ರತ್ಯೇಕವಾಗಿ ಸಂದರ್ಶಿಸುವ ಅಗತ್ಯವಿಲ್ಲದೆ - ನೇರವಾಗಿ ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನ
ವಿಶ್ವವ್ಯಾಪಿ ಜಾಲದಲ್ಲಿ ಪ್ರತಿ ವಿಷಯಕ್ಕೂ ಸಂಬಂಧಪಟ್ಟ ಲಕ್ಷಗಟ್ಟಲೆ ಜಾಲತಾಣಗಳಿವೆ. ಆ ಪೈಕಿ ಹಲವು ತಾಣಗಳಲ್ಲಿ ನಮಗೆ ಇಷ್ಟವಾಗುವ - ಉಪಯುಕ್ತವೆನಿಸುವ ಮಾಹಿತಿ ದೊರಕುವುದು ಸಾಮಾನ್ಯ. ಆದರೆ ಅಷ್ಟೂ ಜಾಲತಾಣಗಳ ವಿಳಾಸ ನೆನಪಿಟ್ಟುಕೊಳ್ಳುವುದು, ಅಲ್ಲಿ ಪ್ರಕಟವಾಗುವ ಹೊಸ ಬರಹಗಳನ್ನು ಗಮನಿಸುವುದು ಕಷ್ಟದ ಕೆಲಸ. ವಿವಿಧ ತಾಣಗಳಲ್ಲಿ ಪ್ರಕಟವಾಗುವ ಹೊಸ ಬರಹಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಿ ಈ ಸಮಸ್ಯೆಯನ್ನು ಕೊಂಚಮಟ್ಟಿಗೆ ಪರಿಹರಿಸುವ ತಂತ್ರಜ್ಞಾನವೇ ಆರ್‌ಎಸ್‌ಎಸ್, ಅರ್ಥಾತ್ 'ರಿಚ್ ಸೈಟ್ ಸಮ್ಮರಿ'. ರಿಯಲಿ ಸಿಂಪಲ್ ಸಿಂಡಿಕೇಶನ್ ಎಂದೂ ಕರೆಸಿಕೊಳ್ಳುವ ಈ ವ್ಯವಸ್ಥೆಯನ್ನು ಬಳಸಿ ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ಪಡೆದ ಮಾಹಿತಿಯನ್ನು ಒಟ್ಟುಸೇರಿಸಿ ಒಂದೇಕಡೆ ಪ್ರದರ್ಶಿಸುವ ಹಲವಾರು ಜಾಲತಾಣಗಳಿವೆ. ಅಷ್ಟೇ ಅಲ್ಲ, ನಮ್ಮ ಆಯ್ಕೆಯ ತಾಣಗಳಿಂದ ಆರ್‌ಎಸ್‌ಎಸ್ ಫೀಡ್ ಪಡೆದು ಆ ಲೇಖನಗಳನ್ನೆಲ್ಲ ಒಂದೇಕಡೆ ನೋಡಲು ನೆರವಾಗುವ ತಂತ್ರಾಂಶಗಳು - ಮೊಬೈಲ್ ಆಪ್‌ಗಳೂ ಇವೆ. ಕೆಲವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂತಹ ತಂತ್ರಾಂಶಗಳ ಬಳಕೆ ಈಗ ಕಡಿಮೆಯಾಗಿದೆಯಾದರೂ ಒಟ್ಟಾರೆಯಾಗಿ ಆರ್‌ಎಸ್‌ಎಸ್ ವ್ಯವಸ್ಥೆ ಜಾಲಲೋಕದಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಯಾಗುತ್ತಿದೆ.

RGB
ಆರ್‌ಜಿಬಿ
(ರೂಪಿಸಬೇಕಿದೆ)
ಡಿಜಿಟಲ್ ಜಗತ್ತಿನ ಎಲ್ಲ ಬಣ್ಣಗಳಿಗೂ ಮೂಲವಾದ ಕೆಂಪು, ಹಸಿರು ಹಾಗೂ ನೀಲಿ (ರೆಡ್-ಗ್ರೀನ್-ಬ್ಲೂ) ಬಣ್ಣಗಳನ್ನು ಸೂಚಿಸುವ ಹೆಸರು
ಪ್ರಾಥಮಿಕ ಬಣ್ಣಗಳನ್ನು (ಪ್ರೈಮರಿ ಕಲರ್ಸ್) ಸೇರಿಸಿ ಹೊಸ ಬಣ್ಣಗಳನ್ನು ರೂಪಿಸಿಕೊಳ್ಳುವುದು ಹೊಸ ಸಂಗತಿಯೇನಲ್ಲ. ಯಾವ ಬಣ್ಣಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಕ್ಕಳು ಶಾಲೆಯ ದಿನಗಳಲ್ಲೇ ಆಸಕ್ತಿಯಿಂದ ಕಲಿಯುತ್ತಾರೆ. ಉದಾ: ಹಳದಿ ಮತ್ತು ನೀಲಿ ಸೇರಿಸಿದರೆ ಹಸಿರು ಬಣ್ಣ ಬರುತ್ತದೆ. ಭೌತಿಕ ಜಗತ್ತಿನಲ್ಲಿರುವಂತೆ ಡಿಜಿಟಲ್ ಜಗತ್ತಿನಲ್ಲೂ ಅಸಂಖ್ಯ ಬಣ್ಣಗಳು ನಮ್ಮ ಮುಂದೆ ಕಾಣಸಿಗುತ್ತವಲ್ಲ, ಅಲ್ಲಿಯೂ ಇಂತಹುದೇ ತಂತ್ರ ಬಳಕೆಯಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲಿ ನಮಗೆ ಕಾಣಿಸುವ ಎಲ್ಲ ಬಣ್ಣಗಳೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಬೆಳಕಿನ ಸಂಯೋಜನೆಯಿಂದ ರೂಪುಗೊಂಡಿರುತ್ತವೆ. ಮೂರೂ ಬಣ್ಣಗಳ ಇಂಗ್ಲಿಷ್ ಹೆಸರಿನ (ರೆಡ್-ಗ್ರೀನ್-ಬ್ಲೂ) ಮೊದಲ ಅಕ್ಷರಗಳನ್ನು ಸೇರಿಸಿ ಈ ವ್ಯವಸ್ಥೆಯನ್ನು ಆರ್‌ಜಿಬಿ ಎಂದು ಕರೆಯಲಾಗುತ್ತದೆ. ನಮ್ಮ ಆಯ್ಕೆಯ ಬಣ್ಣ ಕಾಣಬೇಕಾದರೆ ಈ ಮೂರು ಬಣ್ಣಗಳು ಯಾವ ಪ್ರಮಾಣದಲ್ಲಿ ಬೆರೆಯಬೇಕು ಎನ್ನುವುದನ್ನು ಪ್ರತ್ಯೇಕ ಸಂಖ್ಯೆಗಳು ಸೂಚಿಸುತ್ತವೆ. ಮೂರೂ ಬಣ್ಣಗಳನ್ನು ಸೊನ್ನೆಯ ಮಟ್ಟದಲ್ಲಿಟ್ಟರೆ ಕಪ್ಪು, ಗರಿಷ್ಠ ಮಟ್ಟಕ್ಕೆ ಕೊಂಡೊಯ್ದರೆ ಬಿಳಿ, ಕೆಂಪು-ಹಸಿರು ಮಾತ್ರವೇ ಬಳಕೆಯಾದರೆ ಕಂದುಬಣ್ಣ - ಹೀಗೆ ಮೂರು ಬಣ್ಣಗಳ ಪ್ರಮಾಣವನ್ನು ಬದಲಿಸುತ್ತ ಹೋದಂತೆ ಹೊಸ ಬಣ್ಣಗಳು ಸೃಷ್ಟಿಯಾಗುತ್ತವೆ. ಅಂದಹಾಗೆ ಆರ್‌ಜಿಬಿ ಸಂಯೋಜನೆಯಲ್ಲಿ ರೂಪುಗೊಂಡ ಬಣ್ಣಗಳು ಪರದೆಯ ಮೇಲೆ ಪ್ರದರ್ಶನಕ್ಕೆ ಹೊಂದುವಷ್ಟು ಚೆನ್ನಾಗಿ ಮುದ್ರಣಕ್ಕೆ ಹೊಂದಿಕೊಳ್ಳುವುದಿಲ್ಲ. ಏಕೆಂದರೆ ಮುದ್ರಣದಲ್ಲಿ ಕೈಗೆ ಮೆತ್ತುವ ಉತ್ಪಾದಿತ ಬಣ್ಣಗಳು ಬಳಕೆಯಾಗುತ್ತವೆ. ಹಾಗಾಗಿ ಮುದ್ರಣವನ್ನೇ ಉದ್ದೇಶವಾಗಿಟ್ಟುಕೊಂಡು ಕಂಪ್ಯೂಟರ್ ಚಿತ್ರಗಳನ್ನು ರೂಪಿಸುವಾಗ ಆರ್‌ಜಿಬಿ ಬದಲಿಗೆ 'ಸಿಎಂವೈಕೆ'ಯನ್ನೂ ಬಳಸಲಾಗುತ್ತದೆ. ಆರ್‌ಜಿಬಿಯಲ್ಲಿ ಕೆಂಪು, ಹಸಿರು, ನೀಲಿ ಇದ್ದಂತೆ ಸಿಎಂವೈಕೆಯಲ್ಲಿ ಸಿಯಾನ್ (ಹಸಿರು ಛಾಯೆಯ ನೀಲಿ), ಮಜೆಂಟಾ (ಕಡುಗೆಂಪು), ಹಳದಿ ಹಾಗೂ ಕಪ್ಪು ಬಣ್ಣಗಳನ್ನು ಬಳಸಲಾಗುತ್ತದೆ.

ROM
ರಾಮ್
(ರೂಪಿಸಬೇಕಿದೆ)
ರೀಡ್ ಓನ್ಲಿ ಮೆಮೊರಿ; ಇಲ್ಲಿ ಶೇಖರವಾಗಿರುವ ಮಾಹಿತಿಯನ್ನು ಓದಬಹುದೇ ವಿನಾ ಬದಲಾಯಿಸಲು ಸಾಧ್ಯವಿಲ್ಲ. ಕಂಪ್ಯೂಟರಿನ - ಸ್ಮಾರ್ಟ್‌ಫೋನಿನ ಕೆಲಸ ಪ್ರಾರಂಭವಾಗಲು ಬೇಕಾದ ಕೆಲ ತಂತ್ರಾಂಶಗಳನ್ನು ಇದರಲ್ಲಿ ಉಳಿಸಿಟ್ಟಿರುತ್ತಾರೆ.
ಕಂಪ್ಯೂಟರಿನ ಮೆಮೊರಿ ಬಗ್ಗೆ ಮಾತನಾಡುವಾಗಲೆಲ್ಲ ರ್‍ಯಾಮ್ ಮತ್ತು ರಾಮ್ ಎಂಬ ಎರಡು ಹೆಸರುಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ಪೈಕಿ ರಾಮ್ ಎನ್ನುವುದು ರೀಡ್ ಓನ್ಲಿ ಮೆಮೊರಿ ಎಂಬ ಹೆಸರಿನ ಹ್ರಸ್ವರೂಪ. ಇಲ್ಲಿ ಶೇಖರವಾಗಿರುವ ಮಾಹಿತಿ ವಿದ್ಯುತ್ ಸಂಪರ್ಕವಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತದೆ. ಹೆಸರೇ ಹೇಳುವಂತೆ ಇಲ್ಲಿರುವ ಮಾಹಿತಿಯನ್ನು ಓದುವುದು ಮಾತ್ರ ಸಾಧ್ಯ, ಬದಲಾಯಿಸುವುದು ಅಷ್ಟು ಸುಲಭವಲ್ಲ (ವಿಶೇಷ ಯಂತ್ರಾಂಶಗಳ ಸಹಾಯದಿಂದ ಅಳಿಸಿ ಮತ್ತೆ ಬರೆಯಬಹುದಾದ ರಾಮ್‌ಗಳೂ ಇವೆ). ಕಂಪ್ಯೂಟರಿನ ಉದಾಹರಣೆ ತೆಗೆದುಕೊಳ್ಳುವುದಾದರೆ ಅದರ ಕೆಲಸ ಪ್ರಾರಂಭವಾಗಲು ಬೇಕಾದ ನಿರ್ದೇಶನಗಳು ರಾಮ್‌ನಲ್ಲಿ ದಾಖಲಾಗಿರುತ್ತವೆ. ಕಂಪ್ಯೂಟರಿನಂತೆ ಸ್ಮಾರ್ಟ್‌ಫೋನಿನಲ್ಲೂ ರಾಮ್ ಇರುತ್ತದೆ. ಮೊಬೈಲಿನ ಆಪರೇಟಿಂಗ್ ಸಿಸ್ಟಂ ಇತ್ಯಾದಿಗಳೆಲ್ಲ ಶೇಖರವಾಗುವುದು ಇಲ್ಲೇ. ಕಂಪ್ಯೂಟರಿನಲ್ಲಿರುವಂತೆ ಪ್ರತ್ಯೇಕವಾಗಿರುವ ಬದಲು ಮೊಬೈಲಿನ ಆಂತರಿಕ ಶೇಖರಣಾ ಸಾಮರ್ಥ್ಯದ (ಇಂಟರ್ನಲ್ ಮೆಮೊರಿ) ಒಂದು ಭಾಗವೇ ರಾಮ್‌ನಂತೆ ಬಳಕೆಯಾಗುತ್ತದೆ ಎನ್ನುವುದು ವ್ಯತ್ಯಾಸ. ಮೊಬೈಲಿನಲ್ಲಿ ೩೨ ಜಿಬಿ ಶೇಖರಣಾ ಸಾಮರ್ಥ್ಯವಿದೆ ಎಂದು ತಯಾರಕರು ಹೇಳಿಕೊಂಡರೂ ಅಷ್ಟು ಮೆಮೊರಿ ನಮ್ಮ ಬಳಕೆಗೆ ಸಿಗುವುದಿಲ್ಲವಲ್ಲ, ಅದಕ್ಕೆ ಇದೇ ಕಾರಣ.

Raspberry Pi
ರಾಸ್‍ಬೆರಿ ಪೈ
(ರೂಪಿಸಬೇಕಿದೆ)
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಪರಿಚಯಿಸುವ ಉದ್ದೇಶದ, ಕಡಿಮೆ ಬೆಲೆಯ ಪುಟ್ಟ ಕಂಪ್ಯೂಟರ್. ಕೀಬೋರ್ಡ್, ಮಾನಿಟರ್‌ಗಳನ್ನೆಲ್ಲ ಸಂಪರ್ಕಿಸಿ ಇದನ್ನು ಕಂಪ್ಯೂಟರಿನಂತೆಯೇ ಬಳಸುವುದು, ಪ್ರೋಗ್ರಾಮುಗಳನ್ನು ಬರೆಯುವುದು, ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದೆಲ್ಲ ಸಾಧ್ಯ.
ಕಂಪ್ಯೂಟರಿನಿಂದಾಗಿ ಓದಿನತ್ತ ವಿದ್ಯಾರ್ಥಿಗಳ ಗಮನ ಕಡಿಮೆಯಾಯಿತು ಎನ್ನುವವರು ಅನೇಕರಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ವೃಥಾ ಕಾಲಹರಣ ಮಾಡಿ ಈ ಆರೋಪವನ್ನು ಪುಷ್ಟೀಕರಿಸುವ ವಿದ್ಯಾರ್ಥಿಗಳೂ ಇದ್ದಾರೆ. ಇವರೆಲ್ಲರ ನಡುವೆ ಕಂಪ್ಯೂಟರನ್ನು ಶೈಕ್ಷಣಿಕ ಸಾಧನದಂತೆ ಬಳಸುವ ಹಲವು ಪ್ರಯತ್ನಗಳೂ ನಡೆದಿವೆ. ಇಂತಹ ಪ್ರಯತ್ನಗಳಲ್ಲೊಂದು ರಾಸ್‌ಬೆರಿ ಪೈ. ಹಣ್ಣಿನಿಂದ ಮಾಡುವ ಸಿಹಿತಿಂಡಿಯಂತೆ ಕೇಳುವ ಈ ಹೆಸರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಪರಿಚಯಿಸುವ ಪುಟ್ಟದೊಂದು ಸಾಧನದ್ದು (ಅಂದಹಾಗೆ ಈ ಹೆಸರಿನಲ್ಲಿರುವ 'ಪೈ' ತಿಂಡಿಯ ಹೆಸರಾದ pie ಅಲ್ಲ, ಗ್ರೀಕ್ ವರ್ಣಮಾಲೆಯ ಅಕ್ಷರ pi). ಸರಳ ವಿನ್ಯಾಸದ ಈ ಸಾಧನವನ್ನು ರೂಪಿಸಿದ್ದು ಯುನೈಟೆಡ್ ಕಿಂಗ್‌ಡಂನ ರಾಸ್‌ಬೆರಿ ಪೈ ಫೌಂಡೇಶನ್ ಎಂಬ ಸಂಸ್ಥೆ. ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳಿಗೆ ಬೇಕಾದ ಪ್ರಾಸೆಸರ್, ರ್‍ಯಾಮ್, ಯುಎಸ್‌ಬಿ ಪೋರ್ಟ್ ಮುಂತಾದ ಅನೇಕ ಸವಲತ್ತುಗಳು ಅಂಗೈಯಗಲದ ಈ ಪುಟ್ಟ ಸಾಧನದಲ್ಲಿರುತ್ತವೆ. ಕೀಬೋರ್ಡ್, ಮಾನಿಟರ್ ಇತ್ಯಾದಿಗಳನ್ನು ಸಂಪರ್ಕಿಸಿ ಇದನ್ನೊಂದು ಕಂಪ್ಯೂಟರಿನಂತೆಯೇ ಬಳಸುವುದು, ಅದಕ್ಕಾಗಿ ಪ್ರೋಗ್ರಾಮುಗಳನ್ನು ಬರೆಯುವುದು, ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದೆಲ್ಲ ಸಾಧ್ಯ. ಹೆಚ್ಚು ಸಂಕೀರ್ಣವಾದ ಪ್ರಯೋಗಗಳಿಗೆ ಈ ಸಾಧನವನ್ನು ಬಳಸಿಕೊಳ್ಳಬೇಕು ಎನ್ನುವವರು ಕ್ಯಾಮೆರಾ, ಕಾರ್ಡ್ ರೀಡರ್, ಟಚ್‌ಸ್ಕ್ರೀನ್ ಮುಂತಾದ ಹೆಚ್ಚುವರಿ ಯಂತ್ರಾಂಶ ಭಾಗಗಳನ್ನೂ ಕೊಂಡು ಬಳಸಬಹುದು. ಇಷ್ಟೆಲ್ಲ ಸೌಲಭ್ಯಗಳನ್ನು ಪೂರ್ಣಪ್ರಮಾಣದ ಕಂಪ್ಯೂಟರುಗಳಿಗಿಂತ ಕಡಿಮೆ ಬೆಲೆಯಲ್ಲಿ ಒದಗಿಸುವುದು ಈ ಸಾಧನದ ಹೆಚ್ಚುಗಾರಿಕೆ. ಮೂಲತಃ ಶೈಕ್ಷಣಿಕ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಸೃಷ್ಟಿಯಾದ ಈ ಸಾಧನ ಇದೀಗ ವಿಶ್ವದೆಲ್ಲೆಡೆಯ ತಂತ್ರಜ್ಞಾನ ಆಸಕ್ತರನ್ನೂ ತನ್ನತ್ತ ಸೆಳೆದುಕೊಂಡಿರುವುದು ಇದೇ ಕಾರಣದಿಂದ.

Requirement
ರಿಕ್ವೈರ್‌ಮೆಂಟ್
(ರೂಪಿಸಬೇಕಿದೆ)
ತಂತ್ರಾಂಶ ರಚನೆ ಅಥವಾ ಬದಲಾವಣೆಯ ಉದ್ದೇಶವನ್ನು ಕುರಿತ ವಿವರಗಳು
ಹಲವು ಉದ್ದೇಶಗಳಿಗಾಗಿ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು, ಸಿದ್ಧ ತಂತ್ರಾಂಶದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುವುದು ತೀರಾ ಸಾಮಾನ್ಯ ಸಂಗತಿ. ಹೀಗೆ ತಂತ್ರಾಂಶ ತಯಾರಿ ಅಥವಾ ಬದಲಾವಣೆಗೆ ಹೊರಡುವ ಮುನ್ನ ತಿಳಿದಿರಬೇಕಾದ ಮೊತ್ತಮೊದಲ ಸಂಗತಿ ಎಂದರೆ ಈ ಪ್ರಕ್ರಿಯೆಯಿಂದ ನಾವೇನು ನಿರೀಕ್ಷಿಸುತ್ತಿದ್ದೇವೆ ಎನ್ನುವುದರ ವಿವರ. ಸಾಫ್ಟ್‌ವೇರ್ ಕ್ಷೇತ್ರದ ಪರಿಭಾಷೆಯಲ್ಲಿ ಇದನ್ನು ರಿಕ್ವೈರ್‌ಮೆಂಟ್ ಎಂದು ಕರೆಯುತ್ತಾರೆ. ತಂತ್ರಾಂಶ ರಚನೆ ಅಥವಾ ಬದಲಾವಣೆಯಿಂದ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ, ನಮ್ಮ ತಂತ್ರಾಂಶ ನಿರ್ದಿಷ್ಟವಾಗಿ ಪರಿಹರಿಸಬೇಕಾದ ಸಮಸ್ಯೆಗಳು ಯಾವುವು, ನಿರ್ದಿಷ್ಟ ಸನ್ನಿವೇಶಗಳಲ್ಲಿ ಅದರ ವರ್ತನೆ ಹೇಗಿರಬೇಕು ಎನ್ನುವುದನ್ನೆಲ್ಲ ಈ ಹಂತದಲ್ಲಿ ಗುರುತಿಸಿ ದಾಖಲಿಸಿಕೊಳ್ಳಲಾಗುತ್ತದೆ. ತಂತ್ರಾಂಶ ಬೇಕಿರುವುದು ಬಳಕೆದಾರರಿಗೇ ಆದರೂ ಆ ತಂತ್ರಾಂಶದ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿರುವುದು, ಅದನ್ನೆಲ್ಲ ತಂತ್ರಜ್ಞಾನದ ಭಾಷೆಯಲ್ಲಿ ಹೇಳಲು ಸಾಧ್ಯವಾಗುವುದು ಅಪರೂಪ. ಅಲ್ಲದೆ ತಂತ್ರಾಂಶ ರಚನೆಯ ಕೆಲಸ ಶುರುವಾದ ಮೇಲೆ ಅದು ಮುಗಿಯುವಷ್ಟರಲ್ಲಿ ಬಳಕೆದಾರರ ಅಗತ್ಯಗಳು ಬದಲಾಗುವುದೂ ಉಂಟು. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಈ ಹಂತದಲ್ಲಿ ದಾಖಲಿಸಿಕೊಂಡ ಅಷ್ಟೂ ವಿಷಯಗಳನ್ನು ಒಂದು ಕಡತದಲ್ಲಿ ಅಡಕಗೊಳಿಸಿ ಬಳಕೆದಾರರೊಡನೆ ಹಂಚಿಕೊಳ್ಳಲಾಗುತ್ತದೆ ಮತ್ತು ಅದರಲ್ಲಿರುವ ಅಂಶಗಳಿಗೆ ಅವರ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ತಂತ್ರಾಂಶ ರಚನೆ ಪ್ರಕ್ರಿಯೆ ನಡೆಯುತ್ತಿದ್ದಾಗ ಅದರ ಸ್ವರೂಪ ಬದಲಿಸಬೇಕಾದರೆ ಪಾಲಿಸಬೇಕಾದ ನಿಯಮಗಳನ್ನೂ (ಉದಾ: ಯಾವ ರೀತಿಯ ಬದಲಾವಣೆಗಳನ್ನು ಕೇಳುವಂತಿಲ್ಲ, ಯಾವ ಬದಲಾವಣೆಗಳನ್ನು ಹೆಚ್ಚಿನ ಸಮಸ್ಯೆಯಿಲ್ಲದೆ ಮಾಡಬಹುದು ಇತ್ಯಾದಿ) ಬಹಳಷ್ಟು ಬಾರಿ ಈ ಹಂತದಲ್ಲೇ ರೂಪಿಸಿಕೊಳ್ಳಲಾಗುತ್ತದೆ.

Refresh
ರಿಫ್ರೆಶ್
(ರೂಪಿಸಬೇಕಿದೆ)
ನಾವು ವೀಕ್ಷಿಸುತ್ತಿರುವ ಪುಟದ ಮಾಹಿತಿಯನ್ನು ಮತ್ತೊಮ್ಮೆ ಪಡೆದುಕೊಳ್ಳುವ ಪ್ರಕ್ರಿಯೆ
ಬಹಳಷ್ಟು ಜಾಲತಾಣಗಳಲ್ಲಿರುವ ಮಾಹಿತಿ ಆಗಿಂದಾಗ್ಗೆ ಬದಲಾಗುತ್ತಿರುವುದು ಸಾಮಾನ್ಯ ಸಂಗತಿ. ಇತ್ತೀಚಿನ ಸುದ್ದಿ, ಶೇರು ಬೆಲೆ, ಕ್ರಿಕೆಟ್ ಸ್ಕೋರುಗಳನ್ನೆಲ್ಲ ತೋರಿಸುವ ತಾಣಗಳಲ್ಲಿ ಇಂತಹ ಬದಲಾವಣೆಗಳು ಬಹಳ ಕ್ಷಿಪ್ರವಾಗಿರುತ್ತವೆ. ನಾವು ಈಗಾಗಲೇ ತೆರೆದಿರುವ ಪುಟದಲ್ಲಿ ಈ ಹೊಸ ಮಾಹಿತಿಯೂ ಕಾಣಿಸಿಕೊಳ್ಳುವಂತೆ ಮಾಡುವ ಪ್ರಕ್ರಿಯೆಯೇ 'ರಿಫ್ರೆಶ್'. ಯಾವುದೇ ಪುಟವನ್ನು ರಿಫ್ರೆಶ್ ಮಾಡುವುದು ಎಂದರೆ ಆ ಪುಟದ ಮಾಹಿತಿಯನ್ನು ಮತ್ತೊಮ್ಮೆ ಪಡೆಯುವುದು ಎಂದರ್ಥ. ಹೀಗೆ ಮಾಡಿದಾಗ ಅಲ್ಲಿರುವ ಹೊಸ ಮಾಹಿತಿ ನಮ್ಮ ಪರದೆಯಲ್ಲೂ ಕಾಣಿಸಿಕೊಳ್ಳುತ್ತದೆ. ಬಹುತೇಕ ಬ್ರೌಸರ್ ತಂತ್ರಾಂಶಗಳಲ್ಲಿ F5 ಕೀಲಿಯನ್ನು ಒತ್ತುವ ಮೂಲಕ ಪುಟವನ್ನು ರಿಫ್ರೆಶ್ ಮಾಡಬಹುದು. ಹೀಗೆ ಮಾಡಿದಾಗ ಕೆಲವೊಮ್ಮೆ ಸ್ಥಳೀಯವಾಗಿ ಉಳಿಸಿಡಲಾಗಿರುವ (ಕ್ಯಾಶ್) ಮಾಹಿತಿಯನ್ನೇ ಮತ್ತೆ ತೋರಿಸುವ ಸಾಧ್ಯತೆಯಿರುತ್ತದೆ; ಇದರ ಬದಲಿಗೆ ಮಾಹಿತಿಯನ್ನು ಸರ್ವರ್‌ನಿಂದಲೇ ಹೊಸದಾಗಿ ಪಡೆಯುವಂತೆ ಮಾಡಲು Ctrl+F5 ಬಳಸಬಹುದು. ನಿರ್ದಿಷ್ಟ ಅವಧಿಗೊಮ್ಮೆ ಹೊಸ ಮಾಹಿತಿಯನ್ನು ತೋರಿಸುವ ಸ್ವಯಂಚಾಲಿತ ರಿಫ್ರೆಶ್ ವ್ಯವಸ್ಥೆಯೂ ಕೆಲವು ಜಾಲತಾಣಗಳಲ್ಲಿರುತ್ತದೆ. ಮೊಬೈಲಿನಲ್ಲಿ ಫಂಕ್ಷನ್ ಕೀಲಿಗಳಿರುವುದಿಲ್ಲವಲ್ಲ, ಅಲ್ಲಿ ಬ್ರೌಸರಿನ ಸೆಟಿಂಗ್ಸ್‌ಗೆ ಹೋಗಿ ಪುಟವನ್ನು ರಿಫ್ರೆಶ್ ಮಾಡುವುದು ಸಾಧ್ಯ. ಪುಟದ ಮೇಲ್ತುದಿಯಿಂದ ಕೆಳಮುಖವಾಗಿ ಸ್ವೈಪ್ ಮಾಡುವುದು (ಪುಲ್‌ಡೌನ್) ಈ ಕೆಲಸ ಸಾಧಿಸಿಕೊಳ್ಳಲು ಇರುವ ಇನ್ನೊಂದು ಆಯ್ಕೆ. ಅಂದಹಾಗೆ ರಿಫ್ರೆಶ್ ಬರಿಯ ಜಾಲತಾಣಗಳಿಗೆ - ಬ್ರೌಸರ್‌ಗಳಿಗೆ ಸೀಮಿತವಾದ ಸಂಗತಿಯೇನಲ್ಲ, ಕಂಪ್ಯೂಟರಿನ ಫೋಲ್ಡರುಗಳಲ್ಲೂ (ಹೊಸದಾಗಿ ಸೇರಿಸಿದ ಕಡತಗಳನ್ನು ನೋಡಲು) ರಿಫ್ರೆಶ್ ಮಾಡುವುದು ಸಾಧ್ಯ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಈ ಉದ್ದೇಶಕ್ಕಾಗಿ F5 ಕೀಲಿಯೇ ಬಳಕೆಯಾಗುತ್ತದೆ.

Refurbished
ರೀಫರ್ಬಿಶ್‌ಡ್
(ರೂಪಿಸಬೇಕಿದೆ)
ತಯಾರಕರೇ ಸರಿಪಡಿಸಿ ಮತ್ತೆ ಹೊಸದಾಗಿಸಿದ ಸಾಧನ
ರೀಫರ್ಬಿಶ್ಡ್ ಎನ್ನುವ ಪದವನ್ನು 'ಮತ್ತೆ ಹೊಸದಾಗಿಸಿದ' ಎಂದು ಅರ್ಥೈಸಬಹುದು. ವಾರಂಟಿ ಅವಧಿಯಲ್ಲಿ ಕೆಟ್ಟುಹೋದ ಸಾಧನಗಳನ್ನು ಗ್ರಾಹಕರು ಸೇವಾಕೇಂದ್ರಕ್ಕೆ ಮರಳಿಸುತ್ತಾರಲ್ಲ, ಅವುಗಳನ್ನು ತಯಾರಕರೇ ಸರಿಪಡಿಸಿ ಈ ಹೆಸರಿನಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ. ಅಂಗಡಿಗಳಲ್ಲಿ ಪ್ರದರ್ಶನಕ್ಕಿಟ್ಟ ಸಾಧನಗಳು, ಪರೀಕ್ಷೆ - ವಿಮರ್ಶೆಗೆ ಬಳಕೆಯಾಗುವ ಸಾಧನಗಳೂ ಇದೇ ಹಾದಿಯತ್ತ ಹೊರಳುವುದು ಸಾಧ್ಯ. ರೀಫರ್ಬಿಶ್ಡ್ ಸಾಧನಗಳಿಗೆ ಒಂದಷ್ಟು ಅವಧಿಯ ವಾರಂಟಿಯನ್ನೂ ಕೊಡುವ ಅಭ್ಯಾಸವಿದೆ. ಇವುಗಳ ಬೆಲೆ, ಹೊಸ ಸಾಧನಗಳ ಹೋಲಿಕೆಯಲ್ಲಿ, ಸಹಜವಾಗಿಯೇ ಕಡಿಮೆಯಿರುತ್ತದೆ. ಇಂತಹ ಸಾಧನಗಳು ಸೇವಾಕೇಂದ್ರಕ್ಕೆ ಹೋಗುವ ಮುನ್ನ ಒಂದಷ್ಟು ದಿನ ಬಳಕೆಯಾಗಿರುತ್ತವಲ್ಲ, ಹಾಗಾಗಿ ನಾವು ಕೊಳ್ಳುವ ರೀಫರ್ಬಿಶ್ಡ್ ಸಾಧನಗಳಲ್ಲಿ ಸಣ್ಣಪುಟ್ಟ ಗೀಚುಗಳು ಇರುವುದು ಸಾಧ್ಯ. ಆದರೆ ತಯಾರಕರೇ ಸಂಪೂರ್ಣವಾಗಿ ಪರೀಕ್ಷಿಸಿ ಅಗತ್ಯಬಿದ್ದಲ್ಲಿ ಹೊಸ ಭಾಗಗಳನ್ನೂ ಅಳವಡಿಸಿರುವುದರಿಂದ ಇವು ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಕೊಂಚ ಭಿನ್ನ ಎನ್ನಬಹುದು.

Reuse
ರೀಯೂಸ್
ಮರುಬಳಕೆ
ಒಂದು ಅಗತ್ಯಕ್ಕೆ ಪ್ರತಿಯಾಗಿ ರೂಪಿಸಿದ ತಂತ್ರಾಂಶದ ಭಾಗಗಳನ್ನು ಇತರ ಸನ್ನಿವೇಶಗಳಲ್ಲೂ ಬಳಸಿಕೊಳ್ಳುವ ಪರಿಕಲ್ಪನೆ
ರೀಯೂಸ್, ಅಂದರೆ ಮರುಬಳಕೆಯ ಪರಿಕಲ್ಪನೆ ನಮ್ಮೆಲ್ಲರಿಗೂ ಪರಿಚಿತ. ವಸ್ತುಗಳನ್ನು ಒಂದೇ ಬಾರಿ ಬಳಸಿ ಎಸೆಯದೆ ಸಾಧ್ಯವಾದಷ್ಟು ಸಾರಿ ಮತ್ತೆ ಬಳಸುವುದು ಪರಿಸರ ಸಂರಕ್ಷಣೆಗೆ ಪೂರಕ ಎನ್ನುವುದು ಈ ಪರಿಕಲ್ಪನೆಯ ಆಶಯ. ಈ ಪರಿಕಲ್ಪನೆ ಕಂಪ್ಯೂಟರ್ ಪ್ರಪಂಚದಲ್ಲೂ ಇದೆ. ಒಂದು ಅಗತ್ಯಕ್ಕೆ ಪ್ರತಿಯಾಗಿ ರೂಪಿಸಿದ ತಂತ್ರಾಂಶದ ಭಾಗಗಳನ್ನು ಇತರ ಸನ್ನಿವೇಶಗಳಲ್ಲೂ ಬಳಸಿಕೊಳ್ಳುವುದು ಸಾಧ್ಯವಾದರೆ ಆ ಮೂಲಕ ಸಾಕಷ್ಟು ಶ್ರಮ, ಸಮಯ ಹಾಗೂ ಹಣವನ್ನು ಉಳಿಸಬಹುದು ಎನ್ನುವುದು ಇದರ ಹಿಂದಿರುವ ಉದ್ದೇಶ. ಇಂತಹ ಭಾಗಗಳನ್ನು ಮೊದಲಬಾರಿ ವಿನ್ಯಾಸಗೊಳಿಸುವುದು ಕೊಂಚ ಹೆಚ್ಚಿನ ಕೆಲಸ ಎನ್ನಿಸಬಹುದಾದರೂ ಮುಂದೆ ಅದರ ಮರುಬಳಕೆಯಿಂದ ಲಾಭವೇ ಹೆಚ್ಚು. ಹೀಗೆ ಮತ್ತೆ ಬಳಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದಲೇ ತಂತ್ರಾಂಶಗಳನ್ನು ಘಟಕಗಳಾಗಿ ರೂಪಿಸಲಾಗಿರುವುದುಂಟು. ನಿರ್ದಿಷ್ಟ ದತ್ತಾಂಶಗಳನ್ನು (ಇನ್‌ಪುಟ್) ಸ್ವೀಕರಿಸಿ ನಿರ್ದಿಷ್ಟ ಫಲಿತಾಂಶ (ಔಟ್‌ಪುಟ್) ನೀಡುವಂತೆ ಈ ಘಟಕಗಳನ್ನು ವಿನ್ಯಾಸಗೊಳಿಸಿರುವುದರಿಂದ ಅವನ್ನು ಬೇರೆಬೇರೆ ಕಡೆಗಳಲ್ಲೂ ಬಳಸುವುದು ಸಾಧ್ಯವಾಗುತ್ತದೆ. ತಂತ್ರಾಂಶದ ಭಾಗಗಳಷ್ಟೇ ಅಲ್ಲದೆ ಅದರ ವಿನ್ಯಾಸ (ಡಿಸೈನ್) ಹಾಗೂ ಅಭಿವೃದ್ಧಿಗೆ (ಡೆವೆಲಪ್‌ಮೆಂಟ್) ಸಂಬಂಧಪಟ್ಟ ಕಡತಗಳು, ಪರೀಕ್ಷೆಯ (ಟೆಸ್ಟಿಂಗ್) ಯೋಜನೆ ಮುಂತಾದ ಅನೇಕ ಅಂಶಗಳೂ ಮರುಬಳಕೆಯ ಪರಿಧಿಯೊಳಗೆ ಬರುತ್ತವೆ. ಎಕ್ಸೆಲ್‌ನಂತಹ ತಂತ್ರಾಂಶಗಳಲ್ಲಿ ಬಳಸಲು ಫಾರ್ಮುಲಾ ಇತ್ಯಾದಿಗಳನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳುತ್ತೇವಲ್ಲ, ಅದು ಕೂಡ ಒಂದು ರೀತಿಯ ಮರುಬಳಕೆಯೇ!

Recycle Bin
ರೀಸೈಕಲ್ ಬಿನ್
(ರೂಪಿಸಬೇಕಿದೆ)
ಬಳಕೆದಾರರು ಅಳಿಸಿದ ಕಡತಗಳನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳುವ ಸ್ಥಳ
ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ ಸಂಗ್ರಹವಾಗುವ ಮಾಹಿತಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಇಷ್ಟೆಲ್ಲ ಮಾಹಿತಿಯನ್ನು ತುಂಬಿಟ್ಟುಕೊಳ್ಳಲು ಮೆಮೊರಿ ಸಾಲದೆ ಹೋದಾಗ ಅಥವಾ ಈ ರಾಶಿಯಲ್ಲಿ ಬೇಕಾದುದನ್ನು ಹುಡುಕಿಕೊಳ್ಳಲು ಕಷ್ಟ ಎನಿಸಿದಾಗ ನಾವು ಅನಗತ್ಯ ಕಡತಗಳನ್ನು ಅಳಿಸಿಹಾಕಲು ಪ್ರಯತ್ನಿಸುತ್ತೇವೆ. ಅನಗತ್ಯ ಕಡತಗಳನ್ನು ಅಳಿಸುವುದು (ಡಿಲೀಟ್) ಒಳ್ಳೆಯ ಕ್ರಮವೇ. ಆದರೆ ಕೆಲ ಸಂದರ್ಭಗಳಲ್ಲಿ ನಮ್ಮ ಆತುರದಿಂದಲೋ ಕಣ್ತಪ್ಪಿನಿಂದಲೋ ಅನಗತ್ಯ ಕಡತಗಳ ಜೊತೆಗೆ ಬೇಕಾದ ಕಡತಗಳೂ ಡಿಲೀಟ್ ಆಗಿಬಿಡುತ್ತವೆ. ತಕ್ಷಣದಲ್ಲೇ ಆಗಲಿ ಕೆಲ ದಿನಗಳ ನಂತರವೇ ಆಗಲಿ, ಆ ಕಡತ ಮತ್ತೆ ಬೇಕು ಎನ್ನುವುದು ಅರಿವಾದಾಗ ಪರದಾಟ ತಪ್ಪಿದ್ದಲ್ಲ! ಈ ಪರದಾಟವನ್ನು ತಪ್ಪಿಸಲು ನಮ್ಮ ಸಹಾಯಕ್ಕೆ ಬರುವ ಉಪಾಯವೇ 'ರೀಸೈಕಲ್ ಬಿನ್'. ಕಂಪ್ಯೂಟರಿನಲ್ಲಿ ಯಾವುದೋ ಕಡತವನ್ನು ಆಯ್ದು ಡಿಲೀಟ್ ಗುಂಡಿ ಒತ್ತಿದ ತಕ್ಷಣ ಆ ಕಡತವನ್ನು ಅಳಿಸಿಹಾಕುವ ಬದಲು ತಾತ್ಕಾಲಿಕವಾಗಿ ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಈ ಕಡತ ನಿಜಕ್ಕೂ ಬೇಡವೆಂದು ತೀರ್ಮಾನಿಸಿ ಪೂರ್ಣವಾಗಿ ಅಳಿಸಿಹಾಕುವವರೆಗೂ ಅದು ರೀಸೈಕಲ್ ಬಿನ್‌ನಲ್ಲಿಯೇ ಇರುತ್ತದೆ, ಮತ್ತು ತಪ್ಪಾಗಿ ಅಳಿಸಿದ ಕಡತವಾಗಿದ್ದರೆ ಅದನ್ನು ವಾಪಸ್ ಪಡೆಯುವುದು ಸುಲಭವಾಗುತ್ತದೆ. ರೀಸೈಕಲ್ ಬಿನ್ ಆಯ್ಕೆ ಹಲವು ಸ್ಮಾರ್ಟ್‌ಫೋನುಗಳಲ್ಲೂ ಲಭ್ಯವಿದೆ. ಡಿಲೀಟ್ ಮಾಡಿದ ಕಡತ ರೀಸೈಕಲ್ ಬಿನ್‌ಗೆ ಹೋಗಬೇಕೋ ಅಥವಾ ನೇರವಾಗಿ ಅಳಿಸಿಹೋಗಬೇಕೋ ಎನ್ನುವುದನ್ನೂ ಕೆಲ ಫೋನುಗಳಲ್ಲಿ ನಾವೇ ಸೂಚಿಸಬಹುದು. ಇದು ಕಂಪ್ಯೂಟರಿಗೂ ಅನ್ವಯಿಸುತ್ತದೆ - ವಿಂಡೋಸ್ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಡಿಲೀಟ್ ಕೀಲಿ ಒತ್ತುವ ಬದಲು ಶಿಫ್ಟ್-ಡಿಲೀಟ್ ಒತ್ತುವ ಮೂಲಕ ಬೇಡದ ಕಡತಗಳು ರೀಸೈಕಲ್ ಬಿನ್‌ನಲ್ಲೂ ಉಳಿಯದಂತೆ ಅಳಿಸಿಹಾಕಬಹುದು.


logo