logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Inkjet
ಇಂಕ್‌ಜೆಟ್
(ರೂಪಿಸಬೇಕಿದೆ)
ಕಾಗದದ ಮೇಲೆ ಬಣ್ಣದ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವ ತಂತ್ರಜ್ಞಾನ; ಈ ತಂತ್ರಜ್ಞಾನ ಬಳಸುವ ಪ್ರಿಂಟರುಗಳನ್ನೂ ಇದೇ ಹೆಸರಿನಿಂದ ಗುರುತಿಸಲಾಗುತ್ತದೆ.
ಇಂದಿನ ಐಟಿ ಯುಗದಲ್ಲಿ ನಾವು ಬಹುತೇಕ ಕಡತ-ದಾಖಲೆಗಳನ್ನು ಡಿಜಿಟಲ್ ರೂಪದಲ್ಲೇ ಬಳಸುತ್ತೇವೆ, ನಿಜ. ಹಾಗೆಂದು ಮುದ್ರಿತ ಪ್ರತಿಗಳ ಬಳಕೆ ಸಂಪೂರ್ಣವಾಗೇನೂ ನಿಂತಿಲ್ಲ. ಕಂಪ್ಯೂಟರಿನಲ್ಲಿ ರೂಪಿಸಿದ ಅಥವಾ ಡೌನ್‌ಲೋಡ್ ಮಾಡಿಕೊಂಡ ಕಡತವನ್ನು ಮುದ್ರಿಸಲು ನಾವು ಈಗಲೂ ಪ್ರಿಂಟರಿನ ಮೊರೆಹೋಗುತ್ತಲೇ ಇರುತ್ತೇವೆ. ಈ ಉದ್ದೇಶಕ್ಕಾಗಿ ಬಳಕೆಯಾಗುವ ಹಲವು ಬಗೆಯ ಪ್ರಿಂಟರುಗಳ ಪೈಕಿ ಇಂಕ್‌ಜೆಟ್ ಪ್ರಿಂಟರ್ ಕೂಡ ಒಂದು. ಪ್ರಿಂಟರಿನೊಳಗೆ ಹಾದುಬರುವ ಕಾಗದದ ಮೇಲೆ ಬಣ್ಣದ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವುದು ಈ ಪ್ರಿಂಟರಿನ ಕಾರ್ಯವಿಧಾನ. 'ಇಂಕ್‌ಜೆಟ್' ಎಂಬ ಹೆಸರಿಗೂ ಇದೇ ಕಾರಣ. ಬಹುತೇಕ ಇಂಕ್‌ಜೆಟ್ ಪ್ರಿಂಟರುಗಳಲ್ಲಿ ಇಂಕ್ ತುಂಬಿದ ಎರಡು ಪುಟ್ಟ ಡಬ್ಬಿ(ಕಾರ್ಟ್‌ರಿಜ್)ಗಳಿರುತ್ತವೆ. ಈ ಪೈಕಿ ಒಂದರಲ್ಲಿ ಕಪ್ಪು ಬಣ್ಣದ ಇಂಕ್ ಇದ್ದರೆ ಇನ್ನೊಂದರಲ್ಲಿ ಪ್ರಾಥಮಿಕ ಬಣ್ಣಗಳನ್ನು ಪ್ರತ್ಯೇಕವಾಗಿ ತುಂಬಿಟ್ಟಿರುತ್ತಾರೆ. ಸಿಂಪಡಣೆಗೆ ಮುನ್ನ ಇವನ್ನು ನಿಗದಿತ ಪ್ರಮಾಣದಲ್ಲಿ ಬೆರೆಸುವ ಮೂಲಕ ಕಾಗದದ ಮೇಲೆ ಬೇಕಾದ ಬಣ್ಣವನ್ನು ಮೂಡಿಸುವುದು ಸಾಧ್ಯವಾಗುತ್ತದೆ. ಲೇಸರ್ ಪ್ರಿಂಟರಿನ ಹೋಲಿಕೆಯಲ್ಲಿ ಇಂಕ್‌ಜೆಟ್ ಪ್ರಿಂಟರುಗಳ ಬೆಲೆ ಬಹಳ ಕಡಿಮೆ (ಮುದ್ರಣ ಗುಣಮಟ್ಟವೂ ಕೊಂಚ ಕಡಿಮೆಯೇ). ಹೀಗಾಗಿ ಮನೆಗಳಲ್ಲಿ ಪ್ರಿಂಟರ್ ಬಳಸುವ ಬಹುತೇಕ ಮಂದಿ ಇಂಕ್‌ಜೆಟ್ ಪ್ರಿಂಟರುಗಳನ್ನೇ ಇಷ್ಟಪಟ್ಟು ಬಳಸುತ್ತಾರೆ.

Internet of Things
ಇಂಟರ್‍‍ನೆಟ್ ಆಫ್ ಥಿಂಗ್ಸ್
ವಸ್ತುಗಳ ಅಂತರಜಾಲ
ನಿತ್ಯದ ಬಳಕೆಯ ವಸ್ತುಗಳನ್ನೂ ಅಂತರಜಾಲದ ವ್ಯಾಪ್ತಿಗೆ ತಂದು ಅವುಗಳೊಡನೆ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಪರಿಕಲ್ಪನೆ
ಇಂಟರ್‌ನೆಟ್ ಎಂದಾಕ್ಷಣ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳಷ್ಟೇ ನಮ್ಮ ಮನಸ್ಸಿಗೆ ಬರುವುದು ಸಾಮಾನ್ಯ. ಅಂತರಜಾಲ ಸಂಪರ್ಕವನ್ನು ಇಂತಹ ಸಾಧನಗಳಿಗಷ್ಟೇ ಸೀಮಿತಗೊಳಿಸದೆ ನಿತ್ಯದ ಬಳಕೆಯ ವಸ್ತುಗಳನ್ನೂ ಅದರ ವ್ಯಾಪ್ತಿಗೆ ತರುವ, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ಪರಿಕಲ್ಪನೆಯೇ ಐಓಟಿ: ಇಂಟರ್‌ನೆಟ್ ಆಫ್ ಥಿಂಗ್ಸ್, ಅಂದರೆ ವಸ್ತುಗಳ ಅಂತರಜಾಲ. ನಾವು ದಿನನಿತ್ಯವೂ ಬಳಸುವ ನೂರಾರು, ಸಾವಿರಾರು ಸಂಖ್ಯೆಯ ವಸ್ತುಗಳು (ಥಿಂಗ್ಸ್) ಬೃಹತ್ ಜಾಲವೊಂದರ ಭಾಗವಾಗಿ ಬೆಳೆದಾಗ ರೂಪುಗೊಳ್ಳುವುದೇ ವಸ್ತುಗಳ ಅಂತರಜಾಲ. ನಮ್ಮ ಪರಿಚಯದ ಅಂತರಜಾಲದಲ್ಲಿ ಹೇಗೆ ಲ್ಯಾಪ್‌ಟಾಪ್-ಡೆಸ್ಕ್‌ಟಾಪುಗಳು, ಸರ್ವರುಗಳು, ಮೊಬೈಲ್-ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂಪರ್ಕಿತವಾಗಿವೆಯೋ ಹಾಗೆ ವಸ್ತುಗಳ ಈ ಅಂತರಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಸಾಧನ ಜಾಲದ ಸಂಪರ್ಕ ಪಡೆದುಕೊಳ್ಳಬಲ್ಲದು. ಗೃಹೋಪಯೋಗಿ ವಸ್ತುಗಳು - ವಾಹನಗಳು ಮಾತ್ರವೇ ಅಲ್ಲ, ನಮ್ಮ ದೇಹದೊಳಗೆ ಸೇರಿ ಆರೋಗ್ಯವನ್ನೂ ನಮ್ಮ ಓಡಾಟವನ್ನೂ ಗಮನಿಸಿಕೊಳ್ಳುವ ಸೆನ್ಸರುಗಳಂತಹ ಅತಿಸೂಕ್ಷ್ಮ ವಸ್ತುಗಳೂ ಈ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲವು; ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದು ವ್ಯಕ್ತಿಯ ಗಮನಕ್ಕೆ ಬರುವ ಮುನ್ನವೇ ಅವನ ವೈದ್ಯರ ಗಮನಕ್ಕೆ ಬರುವಂತೆ ಮಾಡಬಲ್ಲವು. ಮನುಷ್ಯರಷ್ಟೇ ಏಕೆ, ಜಾನುವಾರುಗಳ ಬಗ್ಗೆ ನಿಗಾವಹಿಸುವುದು - ಯಂತ್ರಗಳ ಸ್ಥಿತಿಗತಿ ತಿಳಿದುಕೊಳ್ಳುವುದು ಮುಂತಾದವನ್ನೂ ಇಂತಹ ಜಾಲ ಸಾಧ್ಯವಾಗಿಸುತ್ತದೆ. ಅಂದಹಾಗೆ ಇಂತಹುದೊಂದು ಜಾಗತಿಕ ವ್ಯವಸ್ಥೆಯ ಬಗೆಗೆ ಯೋಚಿಸಿ ಅದನ್ನು 'ಇಂಟರ್‌ನೆಟ್ ಆಫ್ ಥಿಂಗ್ಸ್' ಎಂದು ಕರೆದ ಶ್ರೇಯ ಕೆವಿನ್ ಆಶ್‌ಟನ್ ಎಂಬ ತಂತ್ರಜ್ಞನಿಗೆ ಸಲ್ಲುತ್ತದೆ. ಐಓಟಿ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು ನಮ್ಮ ಆರೋಗ್ಯ ಗಮನಿಸಿಕೊಳ್ಳುವ ಸ್ಮಾರ್ಟ್‌ವಾಚುಗಳು, ಮೊಬೈಲ್ ಬಳಸಿ ನಿಯಂತ್ರಿಸಬಹುದಾದ ಲೈಟ್ ಬಲ್ಬುಗಳಂತಹ ಸಾಧನಗಳು ಈಗಾಗಲೇ ಮಾರುಕಟ್ಟೆಗೂ ಬಂದುಬಿಟ್ಟಿವೆ.

Internet
ಇಂಟರ್‍‍ನೆಟ್
ಅಂತರಜಾಲ
ಅನೇಕ ಕಂಪ್ಯೂಟರ್ ಜಾಲಗಳ ಅಂತರ್‌ಸಂಪರ್ಕದಿಂದ ರೂಪುಗೊಂಡ ಮಹಾಜಾಲ
ಒಂದಕ್ಕಿಂತ ಹೆಚ್ಚು ಕಂಪ್ಯೂಟರುಗಳನ್ನು ಪರಸ್ಪರ ಸಂಪರ್ಕಿಸಿದ ಜಾಲಗಳನ್ನು (ನೆಟ್‌ವರ್ಕ್) ಕಚೇರಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ, ಬಸ್ಸು-ರೈಲು-ವಿಮಾನ ಸಂಸ್ಥೆಗಳಲ್ಲಿ ಬಳಸುವುದನ್ನು ನಾವು ನೋಡಿದ್ದೇವೆ. ಒಂದು ಕಂಪ್ಯೂಟರಿನಿಂದ ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ಸಾಧಿಸಿಕೊಳ್ಳಲು ಇಂತಹ ಜಾಲಗಳು ಸಹಾಯಮಾಡುತ್ತವೆ. ಇಂತಹ ಹಲವು ಜಾಲಗಳು ಒಟ್ಟುಸೇರಿದರೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಲ್ಲ ಎಂಬ ಉದ್ದೇಶದಿಂದ ರೂಪುಗೊಂಡದ್ದೇ ಇಂಟರ್‌ನೆಟ್, ಅಂದರೆ ಅಂತರಜಾಲ. ಈ ಹೆಸರಿನ ಭಾವಾರ್ಥ 'ಇಂಟರ್ ಕನೆಕ್ಷನ್ ಆಫ್ ನೆಟ್‌ವರ್ಕ್ಸ್' ಎಂದು. ಅನೇಕ ಜಾಲಗಳ ಅಂತರ್‌ಸಂಪರ್ಕದಿಂದ ರೂಪುಗೊಂಡ ಮಹಾಜಾಲ ಇದು. ಸಂವಹನದ ಪರಿಕಲ್ಪನೆಯನ್ನೇ ಆಮೂಲಾಗ್ರವಾಗಿ ಬದಲಿಸಿದ ಹೆಗ್ಗಳಿಕೆ ಈ ಅಂತರಜಾಲದ್ದು. ವಿಶ್ವದ ವಿವಿಧೆಡೆಗಳಲ್ಲಿರುವ ಕಂಪ್ಯೂಟರುಗಳು, ಮೊಬೈಲ್ ಫೋನುಗಳು, ಸಂಬಂಧಿತ ಸಾಧನಗಳು, ಲ್ಯಾನ್ - ವ್ಯಾನ್ ಮುಂತಾದ ಜಾಲಗಳೆಲ್ಲ ಸೇರಿ ಅಂತರಜಾಲ ರೂಪುಗೊಂಡಿದೆ. ವಿವಿಧ ಯಂತ್ರಾಂಶಗಳು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗಳೆಲ್ಲ ಇದರ ಭಾಗಗಳು. ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನಕ್ಕೂ ಅಂತರಜಾಲದಲ್ಲಿರುವ ಇತರ ಎಲ್ಲ ಸಾಧನಗಳ ಜೊತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಅವಕಾಶ ಇರುತ್ತದೆ. ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್ ವೈಡ್ ವೆಬ್) ಮೂಲಸೌಕರ್ಯ ಒದಗಿಸುವುದು ಇದೇ ಅಂತರಜಾಲದ ಜವಾಬ್ದಾರಿ. ಅಂತರಜಾಲದಲ್ಲಿರುವ ಸಾಧನಗಳ ನಡುವಿನ ಸಂಪರ್ಕ ಹೇಗಿರಬೇಕು ಎಂದು ನಿರ್ದೇಶಿಸುವುದು 'ಟಿಸಿಪಿ/ಐಪಿ' ಎಂಬ ಶಿಷ್ಟಾಚಾರ. ಇದು 'ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೋಟೋಕಾಲ್/ಇಂಟರ್‌ನೆಟ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ.

Interface
ಇಂಟರ್‌ಫೇಸ್
ಅಂತರ ಸಂಪರ್ಕ ಸಾಧನ
ವಿದ್ಯುನ್ಮಾನ ಸಾಧನಗಳು ಹಾಗೂ ಬಳಕೆದಾರರ ನಡುವೆ - ಅಥವಾ - ಒಂದಕ್ಕಿಂತ ಹೆಚ್ಚು ವಿದ್ಯುನ್ಮಾನ ಸಾಧನಗಳ ನಡುವೆ ಪರಸ್ಪರ ಸಂವಹನವನ್ನು ಸಾಧ್ಯವಾಗಿಸುವ ವ್ಯವಸ್ಥೆ
ಕಂಪ್ಯೂಟರ್, ಮೊಬೈಲ್ ಫೋನ್ ಮುಂತಾದ ಸಾಧನಗಳನ್ನು ಬಳಸುವಾಗ ಪ್ರತಿ ಕ್ಷಣದಲ್ಲೂ ಒಂದಲ್ಲ ಒಂದು ರೀತಿಯ ಸಂವಹನ ನಡೆಯುತ್ತಿರುತ್ತದೆ. ಈ ಸಂವಹನ ಬಳಕೆದಾರರ ಜೊತೆಯಲ್ಲಿರಬಹುದು, ತಂತ್ರಾಂಶಗಳ ನಡುವೆ ಇರಬಹುದು ಇಲ್ಲವೇ ಎರಡು ಯಂತ್ರಾಂಶಗಳ ನಡುವೆಯೂ ನಡೆಯಬಹುದು. ಇಂತಹ ಪ್ರತಿ ಸಂವಹನಕ್ಕೂ ಸೂಕ್ತ ವ್ಯವಸ್ಥೆಯೊಂದರ ಅಗತ್ಯ ಇರುತ್ತದೆ: ಬಳಕೆದಾರರು ತಮ್ಮ ಅಗತ್ಯಗಳನ್ನು ಸೂಚಿಸಲು (ಮೌಸ್-ಟಚ್‌ಸ್ಕ್ರೀನ್ ಇತ್ಯಾದಿಗಳ ಮೂಲಕ) ತಂತ್ರಾಂಶದ ಪರದೆ ನೆರವಾಗುತ್ತದಲ್ಲ, ಅಂಥದ್ದು. ಇದೇ ರೀತಿ ಪರಸ್ಪರ ಸಂಪರ್ಕಿಸುವ ಸಾಧ್ಯತೆ (ಉದಾ: ಕೇಬಲ್ ಮೂಲಕ) ಇದ್ದರೆ ಮಾತ್ರವೇ ಯಂತ್ರಾಂಶಗಳ ನಡುವಿನ ಸಂವಹನ ಸಾಧ್ಯವಾಗುತ್ತದೆ. 'ಇಂಟರ್‌ಫೇಸ್', ಅಂದರೆ ಅಂತರ ಸಂಪರ್ಕ ಸಾಧನ ಎಂದು ಗುರುತಿಸುವುದು ಈ ಬಗೆಯ ವ್ಯವಸ್ಥೆಗಳನ್ನೇ. ಈ ಪೈಕಿ ಬಳಕೆದಾರರೊಡನೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗೆ 'ಯುಐ' (ಯೂಸರ್ ಇಂಟರ್‌ಫೇಸ್) ಎಂದು ಹೆಸರು. ಇದೇ ರೀತಿ ಯಂತ್ರಾಂಶಗಳ ನಡುವೆ ಸಂಪರ್ಕ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಹಾರ್ಡ್‌ವೇರ್ ಇಂಟರ್‌ಫೇಸ್ ಎಂದು ಕರೆಯುತ್ತಾರೆ: ಕಂಪ್ಯೂಟರಿನಲ್ಲಿ - ಮೊಬೈಲಿನಲ್ಲಿ ಇರುವ ಯುಎಸ್‌ಬಿ ಪೋರ್ಟ್ ಇದಕ್ಕೊಂದು ಉದಾಹರಣೆ. ಅಂದಹಾಗೆ ಇಂಟರ್‌ಫೇಸ್‌ಗಳ ಬಳಕೆ ಕಂಪ್ಯೂಟರು-ಮೊಬೈಲ್ ಫೋನುಗಳಿಗಷ್ಟೇ ಸೀಮಿತವೇನಲ್ಲ. ಡಿವಿಡಿ ಪ್ಲೇಯರ್ - ಸೆಟ್ ಟಾಪ್ ಬಾಕ್ಸ್ ಇತ್ಯಾದಿಗಳೊಡನೆ ಟೀವಿಯ ಸಂಪರ್ಕ ಸಾಧ್ಯವಾಗಿಸುವುದು, ಡಿಜಿಟಲ್ ಕ್ಯಾಮೆರಾದಿಂದ ಫೋಟೋಗಳನ್ನು ವರ್ಗಾಯಿಸಲು ನೆರವಾಗುವುದು - ಇವೆಲ್ಲವೂ ಇಂಟರ್‌ಫೇಸ್‌ಗಳದೇ ಕೆಲಸ.

Intranet
ಇಂಟ್ರಾನೆಟ್
(ರೂಪಿಸಬೇಕಿದೆ)
ನಿರ್ದಿಷ್ಟ ಉದ್ದೇಶ ಅಥವಾ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ ಖಾಸಗಿ ಜಾಲ (ನೆಟ್‌ವರ್ಕ್)
ಇಂಟರ್‌ನೆಟ್, ಅಂದರೆ ಅಂತರಜಾಲದ ಪರಿಚಯ ನಮ್ಮೆಲ್ಲರಿಗೂ ಇದೆ. ಪ್ರಪಂಚದ ವಿವಿಧೆಡೆಗಳಲ್ಲಿರುವ ವಿದ್ಯುನ್ಮಾನ ಸಾಧನಗಳು ಹಾಗೂ ಅವುಗಳ ಜಾಲಗಳೆಲ್ಲ ಒಟ್ಟುಸೇರಿ ರೂಪುಗೊಂಡಿರುವ ಬೃಹತ್ ಜಾಲ (ನೆಟ್‌ವರ್ಕ್) ಇದು. ಯಾರು ಬೇಕಾದರೂ ಅಂತರಜಾಲದ ಭಾಗವಾಗುವುದು, ಅದರ ಸೌಲಭ್ಯಗಳನ್ನು ಬಳಸುವುದು ಸಾಧ್ಯ. ಅಂತರಜಾಲದ ಈ ಮುಕ್ತ ಸ್ವರೂಪ ಒಳ್ಳೆಯದೇ ಆದರೂ ಇದು ಎಲ್ಲ ಉಪಯೋಗಗಳಿಗೂ ಸರಿಹೊಂದುವುದಿಲ್ಲ. ಹಲವು ಸಂದರ್ಭಗಳಲ್ಲಿ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು ಮಾತ್ರ ಬಳಸಬಹುದಾದ ವ್ಯವಸ್ಥೆ) ನಮ್ಮ ಜಾಲಕ್ಕೆ ನಿರ್ದಿಷ್ಟ ಬಳಕೆದಾರರಿಗಷ್ಟೇ ಪ್ರವೇಶ ನೀಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವುದೇ ಇಂಟ್ರಾನೆಟ್. ಹೆಸರೇ ಹೇಳುವಂತೆ ಇಂಟ್ರಾನೆಟ್ ಎನ್ನುವುದು ಒಂದು ಮಿತಿಯೊಳಗೆ ಮಾತ್ರವೇ ಕಾರ್ಯನಿರ್ವಹಿಸುವ ಖಾಸಗಿ ಜಾಲ. ಒಂದು ಕಟ್ಟಡದೊಳಗಿನ ಬಳಕೆದಾರರು, ಒಂದು ಸಂಸ್ಥೆಯ ಉದ್ಯೋಗಿಗಳು - ಹೀಗೆ ಇಂಟ್ರಾನೆಟ್‌ಗಳನ್ನು ನಿರ್ದಿಷ್ಟ ಬಳಕೆದಾರರು ಮಾತ್ರವೇ ಸಂಪರ್ಕಿಸುವುದು ಸಾಧ್ಯ. ಅಂದಹಾಗೆ ಇಂಟ್ರಾನೆಟ್‌ಗಳಿಗೆ ಭೌಗೋಳಿಕ ಮಿತಿ ಇರಲೇಬೇಕೆಂದೇನೂ ಇಲ್ಲ. ಒಂದು ಸಂಸ್ಥೆಯ ಉದ್ಯೋಗಿಗಳು - ಅವರು ಯಾವ ಊರಿನಲ್ಲಿ, ಯಾವ ದೇಶದಲ್ಲೇ ಇದ್ದರೂ - ಬಳಸಲು ಸಾಧ್ಯವಾಗುವಂತಹ ಇಂಟ್ರಾನೆಟ್‌ಗಳನ್ನು ರೂಪಿಸುವುದು ಸಾಧ್ಯವಿದೆ. ಇಂತಹ ಸಂಪರ್ಕಗಳನ್ನು ಸಾಧ್ಯವಾಗಿಸಲು ಅಂತರಜಾಲದ ನೆರವು ಪಡೆದುಕೊಳ್ಳುವುದೂ ಅಪರೂಪವೇನಲ್ಲ. ಈ ಉದ್ದೇಶಕ್ಕಾಗಿ ವಿಪಿಎನ್‌ನಂತಹ ತಂತ್ರಜ್ಞಾನಗಳೂ ಬಳಕೆಯಾಗುತ್ತವೆ.

Inbox
ಇನ್‍ಬಾಕ್ಸ್
(ರೂಪಿಸಬೇಕಿದೆ)
ಇಮೇಲ್ ಖಾತೆಯಲ್ಲಿ ನಮಗೆ ಬಂದ ಸಂದೇಶಗಳು ಇರುವ ಫೋಲ್ಡರಿಗೆ ಇನ್‌ಬಾಕ್ಸ್ ಎಂದು ಹೆಸರು.
ಕಾಗದದ ಕಡತಗಳನ್ನು ನಿಭಾಯಿಸುವ ಕಚೇರಿಗಳಲ್ಲಿ ಒಳಬರುವ ಕಡತಗಳನ್ನು, ಹೊರಹೋಗುವ ಕಡತಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಭ್ಯಾಸವಿದೆ. ಹೊಸದಾಗಿ ಪರಿಶೀಲನೆಗೆ ಬಂದ ಕಡತಗಳನ್ನು 'ಇನ್ ಟ್ರೇ'ಯಲ್ಲೂ ಪರಿಶೀಲನೆಯ ನಂತರ ಮುಂದಿನ ಕ್ರಮಕ್ಕೆ ಕಳುಹಿಸಬೇಕಾದವನ್ನು 'ಔಟ್ ಟ್ರೇ'ಯಲ್ಲೂ ಇಡುವುದು ಇದನ್ನು ಸಾಧಿಸುವ ಕ್ರಮಗಳಲ್ಲೊಂದು. ಕಾಗದದ ಕಡತಗಳಿಗಿಂತ ಸಂಪೂರ್ಣ ಭಿನ್ನವಾದ ಇಮೇಲ್ ವ್ಯವಸ್ಥೆಯಲ್ಲೂ ಇಂತಹುದೇ ಒಂದು ಪರಿಕಲ್ಪನೆಯಿದೆ. ನಮಗೆ ಬಂದ ಇಮೇಲ್ ಸಂದೇಶಗಳನ್ನು, ನಾವು ಕಳುಹಿಸುತ್ತಿರುವ ಸಂದೇಶಗಳನ್ನು ಪ್ರತ್ಯೇಕವಾಗಿಡುವುದು ಈ ಪರಿಕಲ್ಪನೆಯ ಉದ್ದೇಶ. ಇದಕ್ಕಾಗಿ ನಮ್ಮ ಇಮೇಲ್ ಖಾತೆಯಲ್ಲಿ ಪ್ರತ್ಯೇಕ ಫೋಲ್ಡರುಗಳನ್ನು ಬಳಸಲಾಗುತ್ತದೆ, ಕಚೇರಿಯಲ್ಲಿ ಬೇರೆಬೇರೆ ಕಾಗದಗಳನ್ನು ಬೇರೆಬೇರೆ ಫೈಲುಗಳಲ್ಲಿ ಇಡುವಂತೆಯೇ! ಈ ಪೈಕಿ ನಮಗೆ ಬಂದ ಸಂದೇಶಗಳು 'ಇನ್‌ಬಾಕ್ಸ್'ನಲ್ಲಿರುತ್ತವೆ. ಇಮೇಲ್ ಖಾತೆಗೆ ಲಾಗಿನ್ ಆದಾಗ ಮೊದಲಿಗೆ ಇದೇ ಫೋಲ್ಡರ್ ಕಾಣಿಸಿಕೊಳ್ಳುವುದು ಸಾಮಾನ್ಯ. ನಾವು ಇಮೇಲ್‌ಗಳನ್ನು ಕಳಿಸುತ್ತೇವಲ್ಲ, ಅವು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ 'ಔಟ್‌ಬಾಕ್ಸ್' ಎಂದು ಹೆಸರು. ಬಹಳಷ್ಟು ಸಂದರ್ಭಗಳಲ್ಲಿ ಇಮೇಲ್‌ಗಳು ಥಟ್ಟನೆ ರವಾನೆಯಾಗುವುದರಿಂದ ಇದು ನಮ್ಮ ಗಮನಕ್ಕೆ ಬರುವುದೇ ಅಪರೂಪ - ಅಂತರಜಾಲ ಸಂಪರ್ಕ ಇಲ್ಲದಾಗ, ವೇಗ ಕಡಿಮೆಯಿದ್ದಾಗ ಅಥವಾ ದೊಡ್ಡ ಅಟ್ಯಾಚ್‌ಮೆಂಟ್ ಜೊತೆಗೆ ಇಮೇಲ್ ಕಳಿಸಿದರಷ್ಟೇ ಅದು ಈ ಫೋಲ್ಡರಿನ ಮೂಲಕ ಹಾದುಹೋಗುವುದನ್ನು ನೋಡಬಹುದು. ರವಾನೆಯಾದ ಸಂದೇಶಗಳ ಒಂದು ಪ್ರತಿ 'ಸೆಂಟ್ ಮೆಸೇಜಸ್' ಎಂಬ ಫೋಲ್ಡರಿನಲ್ಲಿ ಉಳಿದುಕೊಂಡಿರುತ್ತದೆ.

IRNSS
ಐಆರ್‌ಎನ್‌ಎಸ್‌ಎಸ್
(ರೂಪಿಸಬೇಕಿದೆ)
ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ; ಜಿಪಿಎಸ್‌ಗೆ ಪರ್ಯಾಯವಾಗಿ ರೂಪುಗೊಂಡಿರುವ ಭಾರತೀಯ ವ್ಯವಸ್ಥೆ
ಎಲ್ಲಿಗಾದರೂ ಹೊರಟಾಗ ಆಟೋ ಅಥವಾ ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವುದು ನಗರವಾಸಿಗಳಿಗೆ ಈಗಾಗಲೇ ಚೆನ್ನಾಗಿ ಅಭ್ಯಾಸವಾಗಿರುವ ಸಂಗತಿ. ಹೀಗೆ ಟ್ಯಾಕ್ಸಿ ಬುಕ್ ಮಾಡಿದಾಗ ನಾವೆಲ್ಲಿದ್ದೇವೆ ಎಂದು ಟ್ಯಾಕ್ಸಿ ಚಾಲಕರಿಗೂ, ಅವರೆಲ್ಲಿದ್ದಾರೆ ಎಂದು ನಮಗೂ ಆಪ್‌ನಲ್ಲಿರುವ ಮ್ಯಾಪ್ ಮೂಲಕ ತಿಳಿಯುತ್ತದೆ; ಇದಕ್ಕಾಗಿ ಬಳಕೆಯಾಗುವ ವ್ಯವಸ್ಥೆಯೇ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್). ಈ ವ್ಯವಸ್ಥೆಯ ಹಿಂದೆ ಉಪಗ್ರಹಗಳ ಒಂದು ಜಾಲವೇ ಇದೆ. ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಜಿಪಿಎಸ್ ಸೌಲಭ್ಯ ಒದಗಿಸಲು ಕೆಲಸಮಾಡುತ್ತಿರುವ ಉಪಗ್ರಹಗಳೆಲ್ಲ ಅಮೆರಿಕಾ ಸರಕಾರದ ನಿಯಂತ್ರಣದಲ್ಲಿವೆ. ಹೀಗಾಗಿ ಜಿಪಿಎಸ್ ಬಳಕೆದಾರರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಮೇಲೆಯೇ ಅವಲಂಬಿಸಬೇಕಾದ್ದು ಅನಿವಾರ್ಯ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದರೆ ಇಂತಹ ಅವಲಂಬನೆ ಒಳ್ಳೆಯದಲ್ಲವಲ್ಲ, ಹಾಗಾಗಿ ನಮ್ಮ ದೇಶ ಜಿಪಿಎಸ್‌ಗೊಂದು ಪರ್ಯಾಯವನ್ನು ರೂಪಿಸಿದೆ. ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (ಐಆರ್‌ಎನ್‌ಎಸ್‌ಎಸ್) ಎಂಬ ಹೆಸರಿನ ಈ ವ್ಯವಸ್ಥೆಯಲ್ಲಿ ನಮ್ಮದೇ ಆದ ಏಳು ಉಪಗ್ರಹಗಳ ಜಾಲ ಬಳಕೆಯಾಗುತ್ತದೆ. ಇದಕ್ಕೆ ನಾವಿಕ್ (ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್‌ಟೆಲೇಶನ್) ಎಂಬ ಹೆಸರೂ ಇದೆ. ಈ ವ್ಯವಸ್ಥೆ ಸಾಮಾನ್ಯ ಬಳಕೆದಾರರಿಗೆ ಸ್ಟಾಂಡರ್ಡ್ ಪೊಸಿಶನಿಂಗ್ ಸರ್ವಿಸ್ (ಎಸ್‌ಪಿಎಸ್) ಹಾಗೂ ಸೇನಾಪಡೆಗಳಂತಹ ವಿಶೇಷ ಬಳಕೆದಾರರಿಗೆ ರಿಸ್ಟ್ರಿಕ್ಟೆಡ್ ಸರ್ವಿಸ್ (ಆರ್‌ಎಸ್) ಎಂಬ ಎರಡು ಮಾರ್ಗದರ್ಶಕ ಸೇವೆಗಳನ್ನು ಒದಗಿಸಲಿದೆ.

IM
ಐಎಂ
(ರೂಪಿಸಬೇಕಿದೆ)
ಇನ್ಸ್‌ಟಂಟ್ ಮೆಸೇಜ್; ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆದಾರರು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಸಂದೇಶ
ಅಂತರಜಾಲದ ದೆಸೆಯಿಂದ ಸಂವಹನದ ಅನೇಕ ಸರಳ ಮಾರ್ಗಗಳು ನಮಗೆ ದೊರೆತಿವೆ. ಇಂತಹ ಮಾರ್ಗಗಳ ಪೈಕಿ ಇನ್ಸ್‌ಟಂಟ್ ಮೆಸೇಜ್ ಕೂಡ ಒಂದು. ಐಎಂ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆದಾರರು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಸಂದೇಶಗಳನ್ನೇ ಐಎಂ ಎಂದು ಗುರುತಿಸಲಾಗುತ್ತದೆ. ಇಂತಹ ಸೇವೆಯೊಂದನ್ನು ಬಳಸುತ್ತಿದ್ದಾಗ (ಲಾಗಿನ್ ಆಗಿದ್ದಾಗ) ಸಂದೇಶಗಳನ್ನು ಥಟ್ಟನೆ ಕಳುಹಿಸುವುದು ಹಾಗೂ ಬಂದ ಸಂದೇಶಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡುವುದು ಸಾಧ್ಯ. ಇವನ್ನು ಇನ್ಸ್‌ಟಂಟ್ (ತತ್‌ಕ್ಷಣದ) ಸಂದೇಶಗಳೆಂದು ಕರೆಯುವುದಕ್ಕೆ ಇದೇ ಕಾರಣ. ಐಎಂ ತಂತ್ರಾಂಶದಲ್ಲಿ ಸಂದೇಶಗಳು - ಪ್ರತಿಕ್ರಿಯೆಗಳು ಒಂದರ ಕೆಳಗೊಂದರಂತೆ ಕಾಣಿಸಿಕೊಳ್ಳುವುದರಿಂದ ಅವುಗಳ ಬಳಕೆಯೂ ಬಹಳ ಸುಲಭ. ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವಾರು ತಾಣಗಳು ಐಎಂ ಸೇವೆಗಳನ್ನು ಒದಗಿಸುತ್ತವೆ. ಇಂತಹ ಯಾವುದೇ ಸೇವೆಯನ್ನು ಏಕಕಾಲದಲ್ಲಿ ಬಳಸುತ್ತಿರುವ ಯಾವುದೇ ಗ್ರಾಹಕರು ಐಎಂಗಳನ್ನು ಕಳಿಸುವುದು-ಪಡೆದುಕೊಳ್ಳುವುದು ಸಾಧ್ಯ. ಅನೇಕ ಐಎಂ ಸೇವೆಗಳಲ್ಲಿ ಪಠ್ಯದ ಜೊತೆಗೆ ಚಿತ್ರ, ಧ್ವನಿ ಹಾಗೂ ವೀಡಿಯೋ ರೂಪದ ಸಂದೇಶಗಳನ್ನೂ ವಿನಿಮಯಮಾಡಿಕೊಳ್ಳಬಹುದು. ಐಎಂ ಮಾತುಕತೆಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಭಾಗವಹಿಸುವುದೂ ಸಾಧ್ಯ. ಇನ್ಸ್‌ಟಂಟ್ ಮೆಸೇಜ್‌ಗಳನ್ನು ಪ್ರೈವೇಟ್ ಮೆಸೇಜ್ (ಪಿಎಂ) ಹಾಗೂ ಡೈರೆಕ್ಟ್ ಮೆಸೇಜ್ (ಡಿಎಂ) ಎಂದೂ ಕರೆಯುತ್ತಾರೆ.

IMPS
ಐಎಂಪಿಎಸ್
(ರೂಪಿಸಬೇಕಿದೆ)
ಇಮ್ಮೀಡಿಯೆಟ್ ಪೇಮೆಂಟ್ ಸರ್ವಿಸ್, ಎರಡು ಬ್ಯಾಂಕ್ ಖಾತೆಗಳ ನಡುವೆ ಯಾವುದೇ ಸಮಯದಲ್ಲಾದರೂ ಥಟ್ಟನೆ ಹಣ ವರ್ಗಾವಣೆ ಸಾಧ್ಯವಾಗಿಸುವ ವ್ಯವಸ್ಥೆ.
ಯಾರಿಗಾದರೂ ಹಣ ಪಾವತಿಸಬೇಕಾದಾಗ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ನೀಡುವ ಅಭ್ಯಾಸ ಬಹಳ ಹಳೆಯದು. ಈ ವಿಧಾನದಲ್ಲಿ ಹಣ ಅವರ ಕೈಸೇರಲು ಬೇಕಾದ ಸಮಯವೂ ಹೆಚ್ಚು. ಇದರ ಬದಲು ಹಣವನ್ನೇ ಕೊಂಡೊಯ್ಯುತ್ತೇವೆಂದರೆ ಸುರಕ್ಷತೆಯ ತಲೆನೋವು ನಮ್ಮನ್ನು ಕಾಡುತ್ತದೆ. ಈ ಸಮಸ್ಯೆಗೆ ಮೊದಲ ಪರಿಹಾರ 'ಎನ್‌ಇಎಫ್‌ಟಿ' (ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್) ವ್ಯವಸ್ಥೆ. ಈ ವ್ಯವಸ್ಥೆ ಮೂಲಕ ದೇಶದ ಯಾವುದೇ ಬ್ಯಾಂಕ್ ಗ್ರಾಹಕ ಯಾವುದೇ ಬ್ಯಾಂಕಿನ ಮತ್ತೊಬ್ಬ ಗ್ರಾಹಕನ ಖಾತೆಗೆ ಹಣ ವರ್ಗಾಯಿಸುವುದು ಸಾಧ್ಯ. ಆರ್‌ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್) ಎನ್ನುವುದೂ ಇಂಥದ್ದೇ ಇನ್ನೊಂದು ವ್ಯವಸ್ಥೆ. ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಹಣ ವರ್ಗಾಯಿಸಲು ಇದು ಬಳಕೆಯಾಗುತ್ತದೆ. ಆದರೆ ಎನ್‌ಇಎಫ್‌ಟಿ-ಆರ್‌ಟಿಜಿಎಸ್‌ಗಳ ಮೂಲಕ ಹಣ ವರ್ಗಾವಣೆಯಾಗುವುದು ಬ್ಯಾಂಕ್ ಕೆಲಸದ ದಿನಗಳಲ್ಲಿ, ಅದೂ ನಿರ್ದಿಷ್ಟ ಸಮಯದಲ್ಲಿ ಮಾತ್ರ. ಇಂತಹ ಯಾವುದೇ ನಿರ್ಬಂಧವಿಲ್ಲದೆ ಯಾವಾಗ ಬೇಕಾದರೂ ಥಟ್ಟನೆ ಹಣ ವರ್ಗಾಯಿಸಲು ಇರುವ ವ್ಯವಸ್ಥೆಯೇ ಐಎಂಪಿಎಸ್ (ಇಮ್ಮೀಡಿಯೆಟ್ ಪೇಮೆಂಟ್ ಸರ್ವಿಸ್). ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಂಸ್ಥೆ ರೂಪಿಸಿರುವ ಈ ವ್ಯವಸ್ಥೆ ಬಳಸಿ ನೆಟ್‌ಬ್ಯಾಂಕಿಂಗ್ ಮೂಲಕವಷ್ಟೇ ಅಲ್ಲ, ಮೊಬೈಲ್ ಮೂಲಕವೂ ಹಣವನ್ನು ವರ್ಗಾಯಿಸುವುದು ಸಾಧ್ಯ. ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಎನ್ನುವುದು ಇದೇ ಐಎಂಪಿಎಸ್‌ನ ಇನ್ನಷ್ಟು ಸುಧಾರಿತ-ಸರಳ ರೂಪ.

ISP
ಐಎಸ್‌ಪಿ
(ರೂಪಿಸಬೇಕಿದೆ)
ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್; ಅಂತರಜಾಲ ಸೇವೆಗಳನ್ನು ಒದಗಿಸುವ ಸಂಸ್ಥೆ
ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕಗಳೆಲ್ಲ ಇದ್ದಹಾಗೆ ಅಂತರಜಾಲ ಸಂಪರ್ಕವೂ ಇದೀಗ ಅನಿವಾರ್ಯವಾಗಿಬಿಟ್ಟಿದೆ. ಅಂತರಜಾಲ ಸಂಪರ್ಕ ಒದಗಿಸುವ ಸಂಸ್ಥೆಗಳು ಈಗ ಪ್ರತಿ ಊರಿನ ಪ್ರತಿ ಬಡಾವಣೆಯಲ್ಲೂ ಕಾಣಸಿಗುತ್ತವೆ. ಇಂತಹ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುತ್ತಾರೆ. ಅಂತರಜಾಲ ಸಂಪರ್ಕಕ್ಕೆಂದು ನಾವು ಈ ಸಂಸ್ಥೆಗಳಿಗೆ ಹಣ ನೀಡುತ್ತೇವಲ್ಲ, ಆ ಸಂಸ್ಥೆಗಳ ಬಳಿ ನಿರ್ದಿಷ್ಟ ಪ್ರದೇಶದಲ್ಲಿ (ಒಂದು ಬಡಾವಣೆ, ನಗರ, ರಾಜ್ಯ ಅಥವಾ ದೇಶ) ಅಂತರಜಾಲ ಸಂಪರ್ಕ ಒದಗಿಸುವಷ್ಟು ಸೌಕರ್ಯ ಮಾತ್ರ ಇರುತ್ತದೆ. ಆದರೆ ಅಂತರಜಾಲ ಇಡೀ ಪ್ರಪಂಚವನ್ನು ಆವರಿಸಿಕೊಂಡಿರುತ್ತದೆ. ಹಾಗಾಗಿ ಐಎಸ್‌ಪಿಗಳು ನಮ್ಮ ವ್ಯಾಪ್ತಿ ಇಷ್ಟೇ ಎಂದು ಹೇಳುವಂತಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲೆಂದೇ ಸಣ್ಣ ಐಎಸ್‌ಪಿಗಳು ತಮಗಿಂತ ದೊಡ್ಡ ಐಎಸ್‌ಪಿಗಳೊಡನೆ ಸಂಪರ್ಕ ಹೊಂದಿರುತ್ತವೆ. ಆ ದೊಡ್ಡ ಐಎಸ್‌ಪಿಗಳಿಗೆ ಇನ್ನೂ ದೊಡ್ಡ ಐಎಸ್‌ಪಿಗಳ ಸಂಪರ್ಕ ಇರುತ್ತದೆ. ಐಎಸ್‌ಪಿಗಳು ಪರಸ್ಪರ ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವಲ್ಲ, ಸಂಪರ್ಕದ ಆ ಬಿಂದುವನ್ನು ನೆಟ್‌ವರ್ಕ್ ಆಕ್ಸೆಸ್ ಪಾಯಿಂಟ್ (ಎನ್‌ಎಪಿ) ಎಂದು ಕರೆಯುತ್ತಾರೆ. ದೇಶ-ದೇಶಗಳ, ಖಂಡ-ಖಂಡಗಳ ನಡುವಿನ ಸಂಪರ್ಕ ವ್ಯವಸ್ಥೆ 'ಇಂಟರ್‌ನೆಟ್ ಬ್ಯಾಕ್‌ಬೋನ್' ಎಂದು ಕರೆಸಿಕೊಳ್ಳುತ್ತದೆ. ಸಮುದ್ರದಾಳದ 'ಸಬ್‌ಮರೀನ್ ಕಮ್ಯುನಿಕೇಶನ್ಸ್ ಕೇಬಲ್'ಗಳು ಈ ವ್ಯವಸ್ಥೆಯ ಪ್ರಮುಖ ಅಂಗ.


logo