logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Bug
ಬಗ್
(ರೂಪಿಸಬೇಕಿದೆ)
ತಂತ್ರಾಂಶದ ಕಾರ್ಯಾಚರಣೆಯಲ್ಲಿ ಆಗುವ ಅನಿರೀಕ್ಷಿತ ತಪ್ಪು
ಕಂಪ್ಯೂಟರಿಗಾಗಲೀ ಸ್ಮಾರ್ಟ್‌ಫೋನ್‌ಗಾಗಲಿ ಸ್ವಂತ ಬುದ್ಧಿ ಇರುವುದಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅದಕ್ಕೆ ನಿರ್ದೇಶನ ನೀಡಲಾಗಿರುತ್ತದೆಯೋ ಅದರ ವರ್ತನೆ ಅದೇ ರೀತಿಯಾಗಿರುತ್ತದೆ. ಹೀಗೆ ನಿರ್ದೇಶನ ನೀಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ. ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ತಂತ್ರಾಂಶದಲ್ಲಿ ಹೇಳಿದೆ ಎಂದುಕೊಳ್ಳಿ. ನೀವು ಆ ತಂತ್ರಾಂಶ ಬಳಸುವ ಕಂಪ್ಯೂಟರನ್ನು ಒಂದು + ಒಂದು ಎಷ್ಟು ಎಂದು ಕೇಳಿದರೆ ಉತ್ತರ ಹನ್ನೊಂದು ಎಂದೇ ಬರುತ್ತದೆ. ಕಂಪ್ಯೂಟರ್ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ತಂತ್ರಾಂಶವನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ. ಮಾಹಿತಿ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆ ಹೆಚ್ಚುತ್ತಿದ್ದಂತೆ ಬಗ್‌ಗಳಿಂದಾಗುವ ತೊಂದರೆಯೂ ಹೆಚ್ಚುತ್ತಿದೆ. ಬಗ್ ದೆಸೆಯಿಂದ ತಂತ್ರಾಂಶಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡಬಲ್ಲದು. ಇದರಿಂದಾಗಿಯೇ ತಾವು ಒದಗಿಸುವ ತಂತ್ರಾಂಶಗಳಲ್ಲಿ ತಪ್ಪುಗಳಿಲ್ಲದಂತೆ ನೋಡಿಕೊಳ್ಳಲು ತಂತ್ರಾಂಶ ನಿರ್ಮಾತೃಗಳು ತಮ್ಮ ಕೈಲಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿರುತ್ತಾರೆ, ಆದರೆ ಅವರ ಕಣ್ತಪ್ಪಿಸಿ ಅದು ಹೇಗೋ ಉಳಿದುಕೊಳ್ಳುವ ತಪ್ಪುಗಳು ತಿಗಣೆಗಳಾಗಿ ಬಂದು ಬಳಕೆದಾರರನ್ನು ಕಾಡುತ್ತಲೇ ಇರುತ್ತವೆ!

Buffer
ಬಫರ್
(ರೂಪಿಸಬೇಕಿದೆ)
ಒಂದೆಡೆಯಿಂದ ಇನ್ನೊಂದೆಡೆಗೆ ಮಾಹಿತಿಯ ವರ್ಗಾವಣೆಯಾಗುವಾಗ ಅದನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳಲು ಬಳಕೆಯಾಗುವ ಮೆಮೊರಿಯ ಭಾಗ; ಹೀಗೆ ಉಳಿಸಿಟ್ಟುಕೊಳ್ಳುವ ಪ್ರಕ್ರಿಯೆಗೆ ಬಫರಿಂಗ್ ಎಂದು ಹೆಸರು.
ಯೂಟ್ಯೂಬ್ ವೀಡಿಯೋ ನೋಡುವಾಗ, ನಿಮ್ಮ ಅಂತರಜಾಲ ಸಂಪರ್ಕದ ವೇಗ ಕಡಿಮೆಯಿದ್ದರೆ, ಅದು ತೆರೆದುಕೊಳ್ಳಲು ಕೊಂಚ ಸಮಯ ಬೇಕಾಗುವುದನ್ನು ನಾವೆಲ್ಲ ಗಮನಿಸಿರುತ್ತೇವೆ. ಈ ಸಮಯದಲ್ಲಿ ಅದು ಮಾಡುವ ಕೆಲಸವೇ ಬಫರಿಂಗ್. ಕಂಪ್ಯೂಟರ್ ಪ್ರಪಂಚದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಮಾಹಿತಿಯ ವರ್ಗಾವಣೆಯಾಗುವಾಗ ಆ ಮಾಹಿತಿಯನ್ನು ತಾತ್ಕಾಲಿಕವಾಗಿ ಒಂದೆಡೆ ಶೇಖರಿಸಿಡುವ ಅಭ್ಯಾಸವಿದೆ. ಹೀಗೆ ಮಾಹಿತಿಯನ್ನು ಉಳಿಸಿಡಲು ಬಳಕೆಯಾಗುವ ಮೆಮೊರಿಯ ಭಾಗವನ್ನು ಬಫರ್ ಎಂದು ಕರೆಯುತ್ತಾರೆ. ಬಫರಿಂಗ್ ಎನ್ನುವುದು ಮಾಹಿತಿಯನ್ನು ಅದರ ಆಕರದಿಂದ ಪಡೆದು ಬಫರ್‌ನಲ್ಲಿ ಉಳಿಸಿಟ್ಟುಕೊಳ್ಳುವ ಪ್ರಕ್ರಿಯೆ. ಅನಿರ್ದಿಷ್ಟ ವೇಗದಲ್ಲಿ ಒಳಬರುವ ಮಾಹಿತಿಯನ್ನು ಒಂದೆಡೆ ಉಳಿಸಿಟ್ಟುಕೊಂಡು ನಿರ್ದಿಷ್ಟ ವೇಗದಲ್ಲಿ ಬಳಸಲು ಈ ಪ್ರಕ್ರಿಯೆ ನೆರವಾಗುತ್ತದೆ (ಐದು ನಿಮಿಷದ ವೀಡಿಯೋ ಎಷ್ಟೇ ಬೇಗ ಅಥವಾ ನಿಧಾನವಾಗಿ ಡೌನ್‌ಲೋಡ್ ಆದರೂ ಅದನ್ನು ವೀಕ್ಷಿಸಲು ಐದು ನಿಮಿಷ ಬೇಕೇಬೇಕಲ್ಲ!). ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ ಯೂಟ್ಯೂಬ್ ವೀಡಿಯೋ ನೋಡಲು ಹೊರಟಾಗ ಆ ಮಾಹಿತಿಯಷ್ಟೂ ನಿಮ್ಮ ಕಂಪ್ಯೂಟರನ್ನೋ ಸ್ಮಾರ್ಟ್‌ಫೋನನ್ನೋ ತಲುಪಲು ಒಂದಷ್ಟು ಸಮಯ ಬೇಕಾಗುತ್ತದೆ (ವೇಗದ ಸಂಪರ್ಕಗಳಲ್ಲಿ ಈ ಸಮಯ ನಮ್ಮ ಗಮನಕ್ಕೇ ಬಾರದಷ್ಟು ಕಡಿಮೆಯಿರುತ್ತದೆ). ಪೂರ್ವನಿರ್ಧಾರಿತ ಪ್ರಮಾಣದ ಮಾಹಿತಿ ಬಫರ್‌ಗೆ ತಲುಪುವ ಮುನ್ನವೇ ವೀಡಿಯೋ ಪ್ರದರ್ಶಿಸಲು ಪ್ರಾರಂಭಿಸಿದರೆ ಪ್ರದರ್ಶನದಲ್ಲಿ ಅಡಚಣೆಯುಂಟಾಗುತ್ತದಲ್ಲ, ಅದನ್ನು ಸಾಧ್ಯವಾದಷ್ಟೂ ತಪ್ಪಿಸಲು ಬಫರಿಂಗ್‌ನ ಮೊರೆಹೋಗಲಾಗುತ್ತದೆ. ಒಂದಷ್ಟು ವೀಡಿಯೋ ಲೋಡ್ ಆದ ನಂತರವಷ್ಟೇ ಅದರ ಪ್ರದರ್ಶನ ಶುರುವಾಗುವುದು ಇದೇ ಕಾರಣದಿಂದ. ಸಂಪರ್ಕ ತೀರಾ ನಿಧಾನವಾಗಿದ್ದರೆ ವೀಡಿಯೋ ಪ್ರದರ್ಶನದ ಮಧ್ಯದಲ್ಲೂ ಮತ್ತೆ ಬಫರಿಂಗ್ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಯೂಟ್ಯೂಬ್ ಮಾತ್ರವೇ ಅಲ್ಲ, ಅಂತರಜಾಲ ಸಂಪರ್ಕದ ಮೂಲಕ ವೀಡಿಯೋ, ಧ್ವನಿ ಮುಂತಾದ ದೊಡ್ಡ ಪ್ರಮಾಣದ ಮಾಹಿತಿಯನ್ನು ವರ್ಗಾಯಿಸುವ ಬಹುತೇಕ ವ್ಯವಸ್ಥೆಗಳಲ್ಲಿ ಬಫರಿಂಗ್ ಬಳಕೆಯಾಗುತ್ತದೆ.

BIOS
ಬಯಾಸ್
(ರೂಪಿಸಬೇಕಿದೆ)
ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ; ಕಂಪ್ಯೂಟರನ್ನು ಬೂಟ್ ಮಾಡಲು ಅಗತ್ಯವಾದ ತಂತ್ರಾಂಶ
ಕಂಪ್ಯೂಟರಿನ ಗುಂಡಿ ಒತ್ತಿದ ತಕ್ಷಣ ಅದು ಕಾರ್ಯಾಚರಣ ವ್ಯವಸ್ಥೆಯನ್ನು ಪ್ರಾರಂಭಿಸುತ್ತದೆ. 'ಬೂಟ್ ಮಾಡುವುದು' ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿ ಬಯಾಸ್ (BIOS) ಎಂಬ ತಂತ್ರಾಂಶದ್ದು. ಇದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ' ಎಂಬ ಹೆಸರಿನ ಹ್ರಸ್ವರೂಪ. ಕಂಪ್ಯೂಟರಿನ ಕೆಲಸ ಶುರುವಾದ ಕೂಡಲೇ ಯಂತ್ರಾಂಶ ಸಂಪರ್ಕಗಳನ್ನು ಪರಿಶೀಲಿಸುವುದು, ಅದಕ್ಕೆ ಸಂಪರ್ಕಿಸಲಾಗಿರುವ ವಿವಿಧ ಸಾಧನಗಳನ್ನು ಪತ್ತೆಮಾಡುವುದು ಈ ತಂತ್ರಾಂಶದ ಕೆಲಸ. ಇಷ್ಟೆಲ್ಲ ಕೆಲಸಕ್ಕೆ ಬೇಕಾದ ನಿರ್ದೇಶನಗಳು, ಪ್ರೋಗ್ರಾಮುಗಳು ಕಂಪ್ಯೂಟರಿನ ರೀಡ್ ಓನ್ಲಿ ಮೆಮೊರಿಯಲ್ಲಿ (ರಾಮ್) ಶೇಖರವಾಗಿರುತ್ತವೆ. ಕಂಪ್ಯೂಟರಿನ ಸಾಮಾನ್ಯ ಬಳಕೆದಾರರು ಬಯಾಸ್ ಸಂಪರ್ಕಕ್ಕೆ ಬರುವುದು ಅಪರೂಪ ಎಂದೇ ಹೇಳಬೇಕು. ಹೊಸ ಯಂತ್ರಾಂಶಗಳನ್ನು (ಉದಾ: ಹೊಸ ಹಾರ್ಡ್ ಡಿಸ್ಕ್) ಜೋಡಿಸಿದಾಗ, ಯಂತ್ರಾಂಶ ಹೊಂದಾಣಿಕೆಗಳನ್ನು ಬದಲಿಸಬೇಕಾದಾಗ ಅಥವಾ ಕಂಪ್ಯೂಟರಿನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡಾಗ ಬಯಾಸ್ ತಂತ್ರಾಂಶವನ್ನು ತೆರೆಯುವುದು, ಅಗತ್ಯ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ. ಕಂಪ್ಯೂಟರಿನ ಗುಂಡಿ ಒತ್ತಿದ ನಂತರ, ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗುವ ಮುನ್ನ ನಿರ್ದಿಷ್ಟ ಕೀಲಿಯೊಂದನ್ನು ಒತ್ತುವ ಮೂಲಕ ಬಯಾಸ್ ಪ್ರವೇಶಿಸುವುದು ಸಾಧ್ಯ. ಈ ಕೀಲಿ ಬೇರೆಬೇರೆ ಕಂಪ್ಯೂಟರುಗಳಲ್ಲಿ ಬೇರೆಬೇರೆಯದಾಗಿರುವುದು ಸಾಧ್ಯ - ಕಂಪ್ಯೂಟರ್ ಗುಂಡಿ ಒತ್ತಿದ ತಕ್ಷಣದಲ್ಲೇ ಕಾಣಿಸಿಕೊಳ್ಳುವ ಮಾಹಿತಿಯಲ್ಲಿ ಈ ವಿವರವೂ ಸೇರಿರುತ್ತದೆ.

Biometrics
ಬಯೋಮೆಟ್ರಿಕ್ಸ್
(ರೂಪಿಸಬೇಕಿದೆ)
ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ, ಮುಖಚರ್ಯೆ ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳಲ್ಲಿ ಬಳಸುವ ಪರಿಕಲ್ಪನೆ
ನಮ್ಮ ಇಮೇಲ್ ಖಾತೆಯನ್ನು ಪ್ರವೇಶಿಸಬೇಕಾದರೆ ಪಾಸ್‌ವರ್ಡ್ ಗೊತ್ತಿರಲೇಬೇಕು. ಅದೇರೀತಿ ಆಕ್ಸೆಸ್ ಕಾರ್ಡ್ ಎನ್ನುವ ಗುರುತಿನ ಬಿಲ್ಲೆ ಇದ್ದರೆ ಮಾತ್ರ ಕಚೇರಿಯೊಳಗೆ ಪ್ರವೇಶಿಸಲು ಸಾಧ್ಯ. ಇನ್ನು ಎಟಿಎಂನಿಂದ ದುಡ್ಡು ತೆಗೆಯಬೇಕಾದರೆ ಕಾರ್ಡ್ ಜೊತೆಗೆ ಪಿನ್ ಸಂಖ್ಯೆಯೂ ಗೊತ್ತಿರಬೇಕು. ಇವೆಲ್ಲ 'ಅಥೆಂಟಿಕೇಶನ್' ಅಥವಾ 'ದೃಢೀಕರಣ'ವನ್ನು ಸಾಧ್ಯವಾಗಿಸುವ ವಿವಿಧ ಮಾರ್ಗಗಳು. ಆದರೆ ಇಲ್ಲಿ ಬಳಕೆಯಾಗುವ ಪಾಸ್‌ವರ್ಡನ್ನು, ಗುರುತಿನ ಬಿಲ್ಲೆಗಳನ್ನು ಯಾರಾದರೂ ಕದ್ದು ದುರುಪಯೋಗಪಡಿಸಿಕೊಳ್ಳುವುದೂ ಸಾಧ್ಯವಿದೆ. ಕದಿಯಲು ಅಥವಾ ನಕಲಿಸಲು ಸಾಧ್ಯವಿಲ್ಲದ ಅಂಶಗಳನ್ನು ಸುರಕ್ಷತೆಗಾಗಿ ಬಳಸಿ ಇಂತಹ ಪರಿಸ್ಥಿತಿಯನ್ನು ತಪ್ಪಿಸಬಹುದೇ? ಖಂಡಿತಾ ತಪ್ಪಿಸಬಹುದು. ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ, ಮುಖಚರ್ಯೆ ಮುಂತಾದ ವಿಷಯಗಳನ್ನು ಸುರಕ್ಷತಾ ಕ್ರಮಗಳಲ್ಲಿ ಬಳಸುವುದು ಇಂತಹ ಕ್ರಮಗಳಲ್ಲೊಂದು. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ ಬಯೋಮೆಟ್ರಿಕ್ಸ್. ಕಚೇರಿಗಳಲ್ಲಿ ಹಾಜರಾತಿ ದಾಖಲಿಸಲು ಬೆರಳ ಗುರುತು ಪಡೆಯುವ ಯಂತ್ರಗಳಿರುತ್ತವಲ್ಲ, ಅವು ಇದೇ ಪರಿಕಲ್ಪನೆಯನ್ನು ಬಳಸುತ್ತವೆ. ಮೊಬೈಲ್ ಫೋನ್ ಸಂಪರ್ಕ ಪಡೆಯುವಾಗ ಬೆರಳ ಗುರುತನ್ನು ನಮ್ಮ ಆಧಾರ್ ಮಾಹಿತಿಯೊಡನೆ ಹೋಲಿಸುವ ವ್ಯವಸ್ಥೆಯಲ್ಲೂ ಬಯೋಮೆಟ್ರಿಕ್ಸ್ ಬಳಕೆಯಾಗುತ್ತದೆ. ಮೊಬೈಲ್ ಫೋನು - ಲ್ಯಾಪ್‌ಟಾಪ್‌ಗಳಲ್ಲೆಲ್ಲ ಕಾಣಸಿಗುವ ಫಿಂಗರ್‌ಪ್ರಿಂಟ್ ಸೆನ್ಸರ್ ಹಿಂದಿರುವುದೂ ಇದೇ ಪರಿಕಲ್ಪನೆ. ವೀಸಾ ನೀಡುವಾಗ ಅಭ್ಯರ್ಥಿಯ ಬೆರಳ ಗುರುತುಗಳನ್ನು ಸಂಗ್ರಹಿಸುವ ಕೆಲ ದೇಶಗಳು ನಾವು ಅಲ್ಲಿಗೆ ಹೋದಾಗ ಗುರುತು ದೃಢೀಕರಿಸಲು ನಮ್ಮ ಬೆರಳೊತ್ತನ್ನು ಆ ಮಾಹಿತಿಯೊಡನೆ ಹೋಲಿಸಿ ನೋಡುವುದೂ ಉಂಟು.

Bus
ಬಸ್
(ರೂಪಿಸಬೇಕಿದೆ)
ಕಂಪ್ಯೂಟರಿನ ಭಾಗಗಳ ನಡುವೆ ದತ್ತಾಂಶದ (ಡೇಟಾ) ವಿನಿಮಯವನ್ನು ಸಾಧ್ಯವಾಗಿಸುವ ಮಾಧ್ಯಮ
ಕಂಪ್ಯೂಟರಿನ ಆಂತರಿಕ ರಚನೆ ಬಹಳ ಸಂಕೀರ್ಣವಾಗಿರುತ್ತದೆ. ಅಲ್ಲದೆ ಅದರ ಕಾರ್ಯಾಚರಣೆಯ ವೇಗದ ಕುರಿತು ನಮ್ಮ ನಿರೀಕ್ಷೆಯೂ ಉನ್ನತಮಟ್ಟದಲ್ಲೇ ಇರುತ್ತದೆ: ಕೀಬೋರ್ಡಿನಲ್ಲಿ ಟೈಪ್ ಮಾಡಿದ ಅಕ್ಷರ ಅದೇ ಕ್ಷಣದಲ್ಲಿ ಪರದೆಯ ಮೇಲೆ ಕಾಣಿಸಿಕೊಳ್ಳಬೇಕು, ಮುದ್ರಿತ ಪ್ರತಿ ಬೇಕೆಂದಕೂಡಲೇ ಪ್ರಿಂಟರಿನ ಮೂಲಕ ಹಾದು ಕಾಗದದ ಮೇಲೂ ಮೂಡಬೇಕು! ಆದುದರಿಂದಲೇ ಕಂಪ್ಯೂಟರಿನಲ್ಲಿರುವ ಹತ್ತಾರು ಸಣ್ಣ - ದೊಡ್ಡ ಭಾಗಗಳ ನಡುವೆ ದತ್ತಾಂಶದ (ಡೇಟಾ) ವಿನಿಮಯಕ್ಕೆ ಎಲ್ಲಿಲ್ಲದ ಮಹತ್ವ. ಈ ವಿನಿಮಯವನ್ನು ಸಾಧ್ಯವಾಗಿಸುವ ಮಾಧ್ಯಮವೇ 'ಬಸ್'. ರಸ್ತೆಯ ಮೇಲೆ ಓಡಾಡುವ ಬಸ್ ಅಲ್ಲ, ಇದು ದತ್ತಾಂಶದ ಓಡಾಟಕ್ಕೆ ಅನುವುಮಾಡಿಕೊಡುವ ತಂತಿಗಳ ಕಟ್ಟು. ದತ್ತಾಂಶದ ಜೊತೆಜೊತೆಗೆ ತಂತ್ರಾಂಶಗಳ ನಡುವಿನ ಸಂವಹನಕ್ಕೆ ಬೇಕಾದ ಇತರ ಸಂಕೇತಗಳೂ ಬಸ್ ಮೂಲಕವೇ ಸಂಚರಿಸುತ್ತವೆ. ಇಂತಹ ಪ್ರತಿ ಬಸ್‌ಗೂ ನಿರ್ದಿಷ್ಟ ಸಾಮರ್ಥ್ಯ ಇರುತ್ತದೆ. ಆ ಸಾಮರ್ಥ್ಯವನ್ನು ಬಿಟ್‌ಗಳಲ್ಲಿ (ಉದಾ: ೩೨ ಬಿಟ್, ೬೪ ಬಿಟ್) ಅಳೆಯಲಾಗುತ್ತದೆ. ಪ್ರತಿ ಬಸ್‌ನ ಮೂಲಕ ಏಕಕಾಲದಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವು ಸಾಧ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಹೀಗೆ ಪ್ರತಿ ಸೆಕೆಂಡಿಗೆ ಎಷ್ಟು ಬಾರಿ ದತ್ತಾಂಶವನ್ನು ವರ್ಗಾಯಿಸಬಹುದು ಎನ್ನುವುದನ್ನು ಅದರ ಸ್ಪಂದನದ ದರ (ಫ್ರೀಕ್ವೆನ್ಸಿ) ಪ್ರತಿನಿಧಿಸುತ್ತದೆ. ಇದನ್ನು ಹರ್ಟ್ಸ್‌ಗಳಲ್ಲಿ ಅಳೆಯುತ್ತಾರೆ.

Bot
ಬಾಟ್
(ರೂಪಿಸಬೇಕಿದೆ)
ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ, ಸ್ವಯಂಚಾಲಿತವಾಗಿ ಮಾಡುವ ತಂತ್ರಾಂಶ
ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲ ಯಂತ್ರಗಳನ್ನು ರೋಬಾಟ್‌ಗಳೆಂದು ಕರೆಯುವುದು ನಮಗೆ ಗೊತ್ತಲ್ಲ, ಅಂತರಜಾಲದ ಲೋಕದಲ್ಲೂ ರೋಬಾಟ್‌ಗಳಿವೆ. ಕಣ್ಣಿಗೆ ಕಾಣುವ ರೋಬಾಟ್‌ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ರೋಬಾಟ್‌ಗಳು ಬರಿಯ ತಂತ್ರಾಂಶಗಳಷ್ಟೇ! ಇವುಗಳನ್ನು 'ಬಾಟ್'ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು 'ರೋಬಾಟ್' ಎಂಬ ಹೆಸರಿನ ಹ್ರಸ್ವರೂಪ. ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ, ಸ್ವಯಂಚಾಲಿತವಾಗಿ ಮಾಡಿ ಮುಗಿಸುವುದು ಬಾಟ್‌ಗಳ ವೈಶಿಷ್ಟ್ಯ. ಬೇರೆಬೇರೆ ತಾಣಗಳಿಂದ ಮಾಹಿತಿ ಸಂಗ್ರಹಿಸುವುದು, ಚಾಟ್ ಮೂಲಕ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಟ್ಯಾಕ್ಸಿ ಬುಕಿಂಗ್ ಮಾಡುವುದು, ಉಡುಗೊರೆಗಳನ್ನು ಆರ್ಡರ್ ಮಾಡುವುದು, ಸ್ವಯಂಚಾಲಿತವಾಗಿ ಹಲವು ಬಗೆಯ ಮಾಹಿತಿಯನ್ನು ಸಂಸ್ಕರಿಸುವುದು - ಹೀಗೆ ಹಲವು ಉದ್ದೇಶಗಳಿಗಾಗಿ ಬಾಟ್‌ಗಳು ಬಳಕೆಯಾಗುತ್ತವೆ. ಒಳ್ಳೆಯ ಕೆಲಸಗಳಲ್ಲಿ ಪ್ರಯೋಜನಕ್ಕೆ ಬಂದಂತೆ ಬಾಟ್‌ಗಳು ಕೆಟ್ಟ ಉದ್ದೇಶಗಳಿಗೂ ಬಳಕೆಯಾಗುತ್ತವೆ. ಸ್ಪಾಮ್ ಸಂದೇಶಗಳನ್ನು ಕಳುಹಿಸಲು ಅಂತರಜಾಲ ತಾಣಗಳಿಂದ ಇಮೇಲ್ ವಿಳಾಸಗಳನ್ನು ಸಂಗ್ರಹಿಸುವುದು, ಬಳಕೆದಾರರ ಕಂಪ್ಯೂಟರಿಗೆ ಅನಾವಶ್ಯಕ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವುದು, ಬ್ಲಾಗ್ ಪುಟಗಳಿಗೆ ದುರುದ್ದೇಶಪೂರಿತ ಲಿಂಕುಗಳಿರುವ ಕಮೆಂಟ್ ಸೇರಿಸುವುದು, ಇತರ ಕುತಂತ್ರಾಂಶಗಳನ್ನು ಹರಡುವುದು - ಮುಂತಾದ ಕೆಲಸಗಳಿಗೆ ಕುತಂತ್ರಿ ಬಾಟ್‌ಗಳು ಬಳಕೆಯಾಗುತ್ತವೆ. ಸಮಾಜಜಾಲಗಳಲ್ಲಿ, ಚಾಟಿಂಗ್ ಸೇವೆಗಳಲ್ಲೂ ಬಾಟ್‌ಗಳ ಹಾವಳಿ ಇದೆ.

Botnet
ಬಾಟ್‌ನೆಟ್
(ರೂಪಿಸಬೇಕಿದೆ)
ದುಷ್ಕರ್ಮಿಗಳ ನಿಯಂತ್ರಣಕ್ಕೆ ಸಿಕ್ಕಿರುವ ಕಂಪ್ಯೂಟರುಗಳ ಜಾಲ; ಈ ಜಾಲದಲ್ಲಿರುವ ಕಂಪ್ಯೂಟರುಗಳನ್ನು ಮಾಲೀಕರ ಅರಿವಿಗೆ ಬಾರದಂತೆಯೇ ಅಪರಾಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ.
ನಿರ್ದಿಷ್ಟ ಕೆಲಸಗಳನ್ನು ಸ್ವಯಂಚಾಲಿತವಾಗಿ, ಅತ್ಯಂತ ಕ್ಷಿಪ್ರವಾಗಿ ಮಾಡಿಮುಗಿಸುವ ಬಾಟ್‌ಗಳು ಒಳ್ಳೆಯ ಉದ್ದೇಶಗಳ ಜೊತೆಗೆ ಕೆಟ್ಟ ಉದ್ದೇಶಗಳಿಗಾಗಿಯೂ ವ್ಯಾಪಕವಾಗಿ ಬಳಕೆಯಾಗುತ್ತವೆ. ಯಾರದೋ ಕಂಪ್ಯೂಟರಿನೊಳಗೆ ಸೇರಿಕೊಂಡು ಆ ಕಂಪ್ಯೂಟರಿನ ನಿಯಂತ್ರಣವನ್ನು ಸೈಬರ್ ಅಪರಾಧಿಗಳಿಗೆ ದೊರಕಿಸಿಕೊಡುವುದು ಇಂತಹ ದುರುದ್ದೇಶಗಳಲ್ಲೊಂದು. ಈ ರೀತಿಯಲ್ಲಿ ದುಷ್ಕರ್ಮಿಗಳ ನಿಯಂತ್ರಣಕ್ಕೆ ಸಿಲುಕಿಕೊಳ್ಳುವ ಕಂಪ್ಯೂಟರುಗಳು ಅವರ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸಲು ಪ್ರಾರಂಭಿಸುತ್ತವೆ. ಇಂತಹ ಕಂಪ್ಯೂಟರುಗಳನ್ನು 'ಜಾಂಬಿ'ಗಳೆಂದು ಗುರುತಿಸಲಾಗುತ್ತದೆ. ವಿಪರ್ಯಾಸವೆಂದರೆ ತನ್ನ ಕಂಪ್ಯೂಟರು ಹೀಗೆ ದುಷ್ಕರ್ಮಿಗಳ ಹಿಡಿತಕ್ಕೆ ಸಿಲುಕಿರುವ ಸಂಗತಿ ಬಹಳಷ್ಟು ಸಾರಿ ಕಂಪ್ಯೂಟರಿನ ಮಾಲೀಕರಿಗೆ ತಿಳಿದಿರುವುದೇ ಇಲ್ಲ. ಹೀಗೆ ತಮ್ಮ ಹಿಡಿತಕ್ಕೆ ಸಿಕ್ಕಿರುವ ಕಂಪ್ಯೂಟರುಗಳದೇ ಒಂದು ಜಾಲ ರೂಪಿಸಿಕೊಳ್ಳುವ ದುಷ್ಕರ್ಮಿಗಳು ಆ ಜಾಲವನ್ನು ಇನ್ನೂ ದೊಡ್ಡ ಪ್ರಮಾಣದ ಅಪರಾಧಗಳಿಗೆ (ಸ್ಪಾಮ್ - ಫಿಶಿಂಗ್ ಸಂದೇಶಗಳನ್ನು ಕಳುಹಿಸುವುದು, ಡಿನಯಲ್ ಆಫ್ ಸರ್ವಿಸ್ ದಾಳಿ ನಡೆಸುವುದು ಇತ್ಯಾದಿ) ಬಳಸಿಕೊಳ್ಳುತ್ತಾರೆ. ಇಂತಹ ಜಾಲಗಳನ್ನು 'ಬಾಟ್‌ನೆಟ್'ಗಳೆಂದು ಕರೆಯುತ್ತಾರೆ. ಹಣಕಾಸಿನ ಲಾಭಕ್ಕಾಗಿ ತಾವು ರೂಪಿಸಿದ ಬಾಟ್‌ನೆಟ್‌ಗಳನ್ನು ಇತರರೊಡನೆ ಹಂಚಿಕೊಳ್ಳುವ ದುಷ್ಕರ್ಮಿಗಳೂ ಇದ್ದಾರಂತೆ! ಇಂತಹ ಸೈಬರ್ ಅಪರಾಧಗಳಲ್ಲಿ ನಮ್ಮ ಮನೆಯ ಕಂಪ್ಯೂಟರ್ ಕೈವಾಡವೂ ಇಲ್ಲದಂತೆ ನೋಡಿಕೊಳ್ಳಬೇಕಾದರೆ ನಮ್ಮ ಆಂಟಿವೈರಸ್ ತಂತ್ರಾಂಶ ಸದಾಕಾಲ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅಪರಿಚಿತರಿಂದ ಬರುವ ಅಥವಾ ಅನುಮಾನಾಸ್ಪದವಾಗಿ ಕಾಣುವ ಯಾವ ಕಡತವನ್ನೂ ಡೌನ್‌ಲೋಡ್ ಮಾಡದಿರುವುದು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ.

Barcode
ಬಾರ್‌ಕೋಡ್
(ರೂಪಿಸಬೇಕಿದೆ)
ಕಪ್ಪು ಗೆರೆಗಳ ಮೂಲಕ ಹಲವು ಬಗೆಯ ಮಾಹಿತಿಯನ್ನು ಪ್ರತಿನಿಧಿಸಬಲ್ಲ ಸಂಕೇತ
ಸೂಪರ್ ಮಾರ್ಕೆಟಿನಲ್ಲಿ ಕೊಂಡ ವಸ್ತುವಿನ ಮೇಲಿರುವ ಕಪ್ಪು ಗೆರೆಗಳ ಸಂಕೇತವನ್ನು ಬಿಲ್ಲುಕಟ್ಟೆಯ ಸಿಬ್ಬಂದಿ ಸ್ಕ್ಯಾನ್ ಮಾಡಿದ ಕೂಡಲೆ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವೆಲ್ಲ ನೋಡಿದ್ದೇವೆ. ಕಪ್ಪು ಗೆರೆಗಳ ಆ ಸಂಕೇತದ ಹೆಸರೇ ಬಾರ್‌ಕೋಡ್. ಈ ಸಂಕೇತಗಳನ್ನು ಸೂಪರ್‌ಮಾರ್ಕೆಟ್‌ಗಳಲ್ಲಷ್ಟೇ ಅಲ್ಲದೆ ಗ್ರಂಥಾಲಯ, ಅಂಚೆ ವ್ಯವಸ್ಥೆ, ಕಾರ್ಖಾನೆ ಮುಂತಾದ ಹಲವೆಡೆ ವ್ಯಾಪಕವಾಗಿ ಬಳಸಲಾಗುತ್ತದೆ. ಯಾವ ವಸ್ತುವಿನ ಮೇಲಿದೆಯೋ ಆ ವಸ್ತುವನ್ನು ಕುರಿತ ಏನಾದರೊಂದು ಮಾಹಿತಿಯನ್ನು (ಉದಾ: ಆಹಾರ ಪದಾರ್ಥದ ಬೆಲೆ, ಪುಸ್ತಕದ ಐಎಸ್‌ಬಿಎನ್ ಸಂಖ್ಯೆ ಇತ್ಯಾದಿ) ಈ ಸಂಕೇತ ಸೂಚಿಸುತ್ತದೆ. ಈ ಮಾಹಿತಿಯನ್ನು ಹುದುಗಿಸಿಡಲು ಕಪ್ಪು ಗೆರೆಗಳ ಗಾತ್ರ ಹಾಗೂ ಅವುಗಳ ನಡುವಿನ ಅಂತರವನ್ನು ಬಳಸಿಕೊಳ್ಳಲಾಗುತ್ತದೆ. ಆ ಮಾಹಿತಿಯನ್ನು ಸ್ಕ್ಯಾನರ್ ಸಹಾಯದಿಂದ ಓದುವಾಗಲೂ ಇವೇ ಅಂಶಗಳು ಬಳಕೆಯಾಗುತ್ತವೆ. ಅಂದಹಾಗೆ ಬಾರ್‌ಕೋಡ್‌ಗಳಲ್ಲಿ ಹಲವು ವಿಧಗಳಿವೆ. ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ), ಯುರೋಪಿಯನ್ ಆರ್ಟಿಕಲ್ ನಂಬರ್‌ಗಳೆಲ್ಲ (ಇಎಎನ್) ಇದಕ್ಕೆ ಕೆಲ ಉದಾಹರಣೆಗಳು. ಈಚೆಗೆ ಜನಪ್ರಿಯವಾಗುತ್ತಿರುವ ಕ್ಯೂಆರ್ ಕೋಡ್ ಅನ್ನು ಎರಡು ಆಯಾಮದ ಬಾರ್ ಕೋಡ್ ಎಂದೂ ಗುರುತಿಸಲಾಗುತ್ತದೆ. ಪಠ್ಯರೂಪದ ಬಹುತೇಕ ಯಾವುದೇ ಮಾಹಿತಿಯನ್ನು ಬಾರ್‌ಕೋಡ್ ಬಳಸಿ ಪ್ರತಿನಿಧಿಸಬಹುದು (ಉಚಿತವಾಗಿ ಬಾರ್‌ಕೋಡ್ ರೂಪಿಸಿಕೊಡುವ ಹಲವು ಆನ್‌ಲೈನ್ ಸೌಲಭ್ಯಗಳೂ ಇವೆ). ಅಲ್ಲದೆ ಬಾರ್‌ಕೋಡ್ ಸ್ಕ್ಯಾನರಿನ ಕೆಲಸಮಾಡುವ ಅನೇಕ ಕಿರುತಂತ್ರಾಂಶಗಳು ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಉಚಿತವಾಗಿಯೇ ದೊರಕುತ್ತವೆ. ಹೀಗಾಗಿ ಅದೆಷ್ಟೋ ಕೆಲಸಗಳಲ್ಲಿ ಬಾರ್‌ಕೋಡ್‌ಗಳನ್ನು ಸುಲಭವಾಗಿ ಬಳಸುವುದು ಸಾಧ್ಯ.

Big Data
ಬಿಗ್ ಡೇಟಾ
(ರೂಪಿಸಬೇಕಿದೆ)
ಬಹಳ ಕ್ಷಿಪ್ರವಾಗಿ ಹಾಗೂ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುವ, ನಿರ್ದಿಷ್ಟವಾದ ಯಾವ ಸೂತ್ರಕ್ಕೂ ಹೊಂದದ ವಿಭಿನ್ನ ರೂಪಗಳಲ್ಲಿರುವ ದತ್ತಾಂಶ
ನಿತ್ಯದ ಬದುಕಿನ ಮೇಲೆ ಮಾಹಿತಿ ತಂತ್ರಜ್ಞಾನ ಬೀರಿರುವ ಪ್ರಭಾವ ಎಷ್ಟರಮಟ್ಟಿನದು ಎಂದರೆ ಒಂದಲ್ಲ ಒಂದು ಬಗೆಯ ದತ್ತಾಂಶ (ಡೇಟಾ) ನಮ್ಮನ್ನು ಸದಾಕಾಲವೂ ಆವರಿಸಿಕೊಂಡಿರುತ್ತವೆ. ಇಂತಹ ದತ್ತಾಂಶಗಳಲ್ಲಿ ಹಲವು ವಿಧ. ಈ ಪೈಕಿ ಬ್ಯಾಂಕಿನ ವಹಿವಾಟು ಅಥವಾ ದೂರವಾಣಿ ಕರೆಗಳ ಪಟ್ಟಿಯಂಥವು ಪರವಾಗಿಲ್ಲ, ಏಕೆಂದರೆ ಅವುಗಳಿಗೊಂದು ನಿರ್ದಿಷ್ಟ ರೂಪ ಇರುತ್ತದೆ. ಆದರೆ ವಾಟ್ಸ್‌ಆಪ್ ಮೆಸೇಜು - ಫೇಸ್‌ಬುಕ್ ಸಂದೇಶಗಳು ಹಾಗಲ್ಲ, ಅವು ನಿರ್ದಿಷ್ಟವಾದ ಯಾವ ಸೂತ್ರಕ್ಕೂ ಹೊಂದದ ವಿಭಿನ್ನ ರೂಪಗಳಲ್ಲಿರುವುದು ಸಾಧ್ಯ. ಸರ್ಚ್ ಇಂಜನ್ ಹುಡುಕಾಟಗಳು ಹಾಗೂ ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳ ವಿವರವೂ ಹೀಗೆಯೇ. ಈ ಬಗೆಯ ದತ್ತಾಂಶ ಸಾಮಾನ್ಯ ದತ್ತಾಂಶಗಳ ಹೋಲಿಕೆಯಲ್ಲಿ ಬಹಳ ಕ್ಷಿಪ್ರವಾಗಿ ಹಾಗೂ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತದೆ. ಹೀಗೆ ನಿರಂತರವಾಗಿ ಹರಿದುಬರುವ, ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿರುವ ಈ ದತ್ತಾಂಶವನ್ನು 'ಬಿಗ್ ಡೇಟಾ' ಎಂದು ಕರೆಯುತ್ತಾರೆ. ಇದನ್ನು ಸೂಕ್ತವಾಗಿ ವಿಶ್ಲೇಷಿಸಿದರೆ ಆಯಾ ಕ್ಷೇತ್ರದ ಒಟ್ಟಾರೆ ಗತಿಯನ್ನು ಕುರಿತು ಉಪಯುಕ್ತವಾದ ಒಳನೋಟಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಅಂದಹಾಗೆ ಬಿಗ್‌ಡೇಟಾ ಅನ್ನು ಸಾಂಪ್ರದಾಯಿಕ ವಿಧಾನಗಳಲ್ಲಿ (ಉದಾ: ದತ್ತಸಂಚಯ, ಅಂದರೆ ಡೇಟಾಬೇಸ್‌ನಲ್ಲಿ) ಶೇಖರಿಸಿ ಸಂಸ್ಕರಿಸುವುದೂ ಕಷ್ಟ. ಇದನ್ನು ಸಂಸ್ಕರಿಸಿ ವಿಶ್ಲೇಷಿಸಲೆಂದೇ ಪ್ರತ್ಯೇಕ ಕಂಪ್ಯೂಟರ್ ವ್ಯವಸ್ಥೆಗಳು ಹಾಗೂ ತಂತ್ರಾಂಶಗಳನ್ನು ಬಳಸಲಾಗುತ್ತದೆ.

Bit - Byte
ಬಿಟ್ - ಬೈಟ್
(ರೂಪಿಸಬೇಕಿದೆ)
ಡಿಜಿಟಲ್ ರೂಪದ ಮಾಹಿತಿಯ ಪ್ರಮಾಣವನ್ನು ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನಗಳು
ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ. ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ. ಎಂಟು ಬಿಟ್‌ಗಳು ಸೇರಿದಾಗ ಒಂದು ಬೈಟ್ ಆಗುತ್ತದೆ. ಇಂಗ್ಲಿಷಿನ ಅಕ್ಷರವನ್ನೋ ಅಂಕಿ-ಲೇಖನಚಿಹ್ನೆಯನ್ನೋ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಲು ಒಂದು ಬೈಟ್ ಸ್ಥಳಾವಕಾಶ ಬೇಕು. ಮೆಗಾಬೈಟ್, ಗಿಗಾಬೈಟ್, ಟೆರಾಬೈಟುಗಳೆಲ್ಲ ಇದೇ ಬೈಟ್‌ನ ಗುಣಕಗಳು. ೧೦೨೪ ಬೈಟ್‌ಗಳು ಒಂದು ಕಿಲೋಬೈಟ್‌ಗೆ (ಕೆಬಿ), ೧೦೨೪ ಕೆಬಿ ಒಂದು ಮೆಗಾಬೈಟ್‌ಗೆ (ಎಂಬಿ), ೧೦೨೪ ಎಂಬಿ ಒಂದು ಗಿಗಾಬೈಟ್‌ಗೆ (ಜಿಬಿ) ಹಾಗೂ ೧೦೨೪ ಜಿಬಿ ಒಂದು ಟೆರಾಬೈಟ್‌ಗೆ (ಟಿಬಿ) ಸಮಾನ.


logo