logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

File System
ಫೈಲ್ ಸಿಸ್ಟಂ
(ರೂಪಿಸಬೇಕಿದೆ)
ಮಾಹಿತಿ ಶೇಖರಣಾ ಸಾಧನಗಳಲ್ಲಿ ಕಡತಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ನೆರವಾಗುವ ವ್ಯವಸ್ಥೆ
ಕಂಪ್ಯೂಟರುಗಳಲ್ಲಿ, ಸ್ಮಾರ್ಟ್‌ಫೋನಿನಲ್ಲಿ ಭಾರೀ ಸಂಖ್ಯೆಯ ಕಡತಗಳನ್ನು ಸಂಗ್ರಹಿಸಿಡುವಲ್ಲಿ ನಾವು ನಿಷ್ಣಾತರು. ಹೀಗೆ ನಾವು ಶೇಖರಿಸಿಡುವ ಟೆರಾಬೈಟ್‌ಗಟ್ಟಲೆ ಮಾಹಿತಿಯ ಜೊತೆಗೆ ಕಾರ್ಯಾಚರಣ ವ್ಯವಸ್ಥೆ ಹಾಗೂ ವಿವಿಧ ತಂತ್ರಾಂಶಗಳೂ ಅಗಾಧ ಪ್ರಮಾಣದಲ್ಲಿ ಕಡತಗಳನ್ನು ಉಳಿಸಿಡುತ್ತವೆ. ಇಷ್ಟೆಲ್ಲ ಕಡತಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ನೆರವಾಗುವ ವ್ಯವಸ್ಥೆಯ ಹೆಸರೇ 'ಫೈಲ್ ಸಿಸ್ಟಂ'. ನಮ್ಮ ಕಡತಗಳನ್ನು ವಿವಿಧ ಫೋಲ್ಡರುಗಳಲ್ಲಿ ಶೇಖರಿಸಿಡಲು ಹಾಗೂ ನಿರ್ದಿಷ್ಟ ವಿಳಾಸಕ್ಕೆ ಹೋಗುವ ಮೂಲಕ ಹಾಗೆ ಉಳಿಸಿಟ್ಟ ಕಡತಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗುವುದು ಈ ವ್ಯವಸ್ಥೆಯ ವೈಶಿಷ್ಟ್ಯ. ಕಡತಗಳನ್ನು, ಫೋಲ್ಡರುಗಳನ್ನು ಹೆಸರಿಸುವಾಗ ಪಾಲಿಸಬೇಕಾದ ನಿಯಮಗಳನ್ನೂ ಈ ವ್ಯವಸ್ಥೆಯೇ ತೀರ್ಮಾನಿಸುತ್ತದೆ. ಕಡತದ ಹೆಸರು ಇಷ್ಟೇ ಅಕ್ಷರಗಳಿರಬೇಕು, ಇಂತಹ ಚಿಹ್ನೆಗಳನ್ನು ಹೆಸರಿನಲ್ಲಿ ಉಪಯೋಗಿಸಬಾರದು ಎನ್ನುವಂತಹ ನಿರ್ಬಂಧಗಳಿರುತ್ತವಲ್ಲ, ಅವನ್ನೆಲ್ಲ ಕಾರ್ಯಗತಗೊಳಿಸುವುದೂ ಫೈಲ್ ಸಿಸ್ಟಂನದೇ ಕೆಲಸ. ಕಡತ - ಫೋಲ್ಡರುಗಳನ್ನು ಮೊದಲಿಗೆ ರೂಪಿಸಿದ - ಬದಲಿಸಿದ ದಿನಾಂಕಗಳು, ಮೆಮೊರಿಯಲ್ಲಿ ಅವು ಬಳಸುತ್ತಿರುವ ಸ್ಥಳಾವಕಾಶ ಮುಂತಾದ ಪೂರಕ ಮಾಹಿತಿಯನ್ನು (ಮೆಟಾಡೇಟಾ) ನಿರ್ವಹಿಸುವ ಕೆಲಸ ಕೂಡ ಈ ವ್ಯವಸ್ಥೆಯದೇ. ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಉಪಯೋಗಿಸುವ ಸಾಧನಗಳು ಬೇರೆಬೇರೆ ರೀತಿಯ ಫೈಲ್ ಸಿಸ್ಟಂಗಳನ್ನು ಬಳಸುವುದು ಸಾಧ್ಯ. FAT32 ಹಾಗೂ NTFS - ಇವು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಫೈಲ್ ಸಿಸ್ಟಂಗೆ ಉದಾಹರಣೆಗಳು.

Photoshop
ಫೋಟೋಶಾಪ್
(ರೂಪಿಸಬೇಕಿದೆ)
ಚಿತ್ರಗಳ ರಚನೆ ಹಾಗೂ ಸಂಪಾದನೆಯಲ್ಲಿ ಬಳಕೆಯಾಗುವ ತಂತ್ರಾಂಶ; ಅಡೋಬಿ ಸಂಸ್ಥೆಯ ಉತ್ಪನ್ನ. ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು 'ಫೋಟೋಶಾಪಿಂಗ್' ಎಂದು ಗುರುತಿಸಲಾಗುತ್ತದೆ.
ಅತ್ಯಂತ ಜನಪ್ರಿಯ ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಅಗ್ರಗಣ್ಯ ಹೆಸರು ಫೋಟೋಶಾಪ್‌ನದು. ಈ ತಂತ್ರಾಂಶದ ಜನಪ್ರಿಯತೆ ಎಷ್ಟರಮಟ್ಟದ್ದು ಎಂದರೆ ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು 'ಫೋಟೋಶಾಪಿಂಗ್' ಎಂದೇ ಗುರುತಿಸಲಾಗುತ್ತದೆ. ಫೋಟೋಶಾಪ್ ತಂತ್ರಾಂಶವನ್ನು ಥಾಮಸ್ ಮತ್ತು ಜಾನ್ ನಾಲ್ ಎಂಬ ಸಹೋದರರು ೧೯೮೮ರಲ್ಲಿ ರೂಪಿಸಿದರು. ಮೊದಲಿಗೆ ಈ ತಂತ್ರಾಂಶ ಮ್ಯಾಕ್ (ಆಪಲ್) ಕಂಪ್ಯೂಟರುಗಳಲ್ಲಷ್ಟೇ ಕೆಲಸಮಾಡುತ್ತಿತ್ತು. ಕೆಲ ಸಮಯದ ನಂತರ ಅಡೋಬಿ ಸಂಸ್ಥೆ ಈ ತಂತ್ರಾಂಶವನ್ನು ಕೊಂಡಾಗ ಫೋಟೋಶಾಪ್ ಹೆಸರಿನ ಹಿಂದಕ್ಕೆ ಅಡೋಬಿ ಸಂಸ್ಥೆಯ ಹೆಸರೂ ಸೇರಿಕೊಂಡು ಸಾಫ್ಟ್‌ವೇರ್ ಪ್ರಪಂಚದ ಅತ್ಯಂತ ಜನಪ್ರಿಯ ನಾಮಧೇಯವೊಂದು ಸೃಷ್ಟಿಯಾಯಿತು. ಅಲ್ಲಿಂದ ಮುಂದೆ ನಡೆದದ್ದೆಲ್ಲ ಇತಿಹಾಸವೇ. ಚಿತ್ರವಿನ್ಯಾಸಕರಿಗೆ ಈ ತಂತ್ರಾಂಶದ ಅಪಾರ ಸಾಧ್ಯತೆಗಳು ಅರಿವಾಗುತ್ತಿದ್ದಂತೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಫೋಟೋಶಾಪ್ ಬಳಕೆದಾರರಾದರು. ವಿಂಡೋಸ್ ಜನಪ್ರಿಯತೆ ಹೆಚ್ಚಿದಂತೆ ಫೋಟೋಶಾಪ್‌ನ ವಿಂಡೋಸ್ ಆವೃತ್ತಿಯೂ ಬಂತು. ಚಿತ್ರಗಳ ವಿಷಯಕ್ಕೆ ಬಂದರೆ ಈಗಂತೂ ಫೋಟೋಶಾಪ್‌ನಲ್ಲಿ ಏನೇನು ಸಾಧ್ಯ ಎನ್ನುವುದಕ್ಕಿಂತ ಏನೇನು ಸಾಧ್ಯವಿಲ್ಲ ಎಂದು ಹುಡುಕುವುದೇ ಸುಲಭವೇನೋ. ಯಾವುದೋ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಸಾಧಾರಣ ಚಿತ್ರವೂ ಫೋಟೋಶಾಪ್ ಪರಿಣತರ ಕೈಚಳಕದಿಂದ ಅದ್ಭುತ ಕಲಾಕೃತಿಯಾಗಿ ಬದಲಾಗಬಲ್ಲದು. ಬಣ್ಣ-ಕುಂಚಗಳನ್ನೆಲ್ಲ ಬಿಟ್ಟು ಫೋಟೋಶಾಪ್ (ಮತ್ತು ಅದರಂತಹ ಇನ್ನಿತರ ಕೆಲ ತಂತ್ರಾಂಶಗಳ) ಸಹಾಯದಿಂದ ಕಲೆಯ ಸೃಷ್ಟಿ ಮಾಡುವ ಡಿಜಿಟಲ್ ಆರ್ಟ್ ಎಂಬ ಕ್ಷೇತ್ರವೇ ರೂಪುಗೊಂಡಿದೆ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್ ಕಂಪ್ಯೂಟರುಗಳ ಪರಿಮಿತಿಯನ್ನು ದಾಟಿ ಹೊರಬಂದಿರುವ ಫೋಟೋಶಾಪ್ ಈಗ ಸ್ಮಾರ್ಟ್‌ಫೋನುಗಳಲ್ಲೂ ಬಳಕೆಗೆ ಸಿಗುತ್ತಿದೆ. ತಿಂಗಳಿಗೆ ಇಷ್ಟೆಂದು ಶುಲ್ಕ ನೀಡಿ ಕ್ಲೌಡ್ ತಂತ್ರಜ್ಞಾನದ ಮೂಲಕ ಈ ತಂತ್ರಾಂಶವನ್ನು ಬಳಸುವುದು ಕೂಡ ಸಾಧ್ಯವಾಗಿದೆ.

Phablet
ಫ್ಯಾಬ್ಲೆಟ್
(ರೂಪಿಸಬೇಕಿದೆ)
ಸಾಮಾನ್ಯ ಮೊಬೈಲ್ ಹಾಗೂ ಟ್ಯಾಬ್ಲೆಟ್ ನಡುವಿನ ಗಾತ್ರದ ಮೊಬೈಲ್ ಫೋನ್; 'ಫೋನ್' ಹಾಗೂ 'ಟ್ಯಾಬ್ಲೆಟ್' ಜೋಡಿಸಿ ಈ ಹೆಸರನ್ನು ರೂಪಿಸಲಾಗಿದೆ.
ಮೊಬೈಲ್ ದೂರವಾಣಿಗಳು ಮೊದಲಿಗೆ ಕಾಣಿಸಿಕೊಂಡಾಗ ಅವುಗಳಲ್ಲಿರುತ್ತಿದ್ದದ್ದು ಪುಟ್ಟದೊಂದು ಪರದೆಯಷ್ಟೇ. ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದು ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಅವುಗಳಲ್ಲಿ ಮಾಡಬಹುದು ಎಂದಾಗ ಪರದೆ ಇನ್ನಷ್ಟು ದೊಡ್ಡದಿರಬೇಕು ಎನ್ನಿಸಲು ಶುರುವಾಯಿತು; ಒಂದೆರಡು ಇಂಚಿನ ಪರದೆಯ ಜಾಗದಲ್ಲಿ ಮೂರು-ನಾಲ್ಕು ಇಂಚಿನ ಪರದೆಗಳು ಕಾಣಿಸಿಕೊಂಡವು. ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳ ಉಪಯೋಗವೂ ಹೆಚ್ಚಿತಲ್ಲ, ಅಷ್ಟೆಲ್ಲ ಕೆಲಸಗಳಿಗೆ ಇನ್ನೂ ದೊಡ್ಡ ಪರದೆ ಬೇಕು ಎನ್ನಿಸಲು ಶುರುವಾದದ್ದು ಆಗ. ಏಳೆಂಟು ಇಂಚಿನ ಪರದೆಯಿರುವ ಟ್ಯಾಬ್ಲೆಟ್‌ಗಳು ಜನಪ್ರಿಯವಾದದ್ದೂ ಇದೇ ಕಾರಣಕ್ಕಾಗಿ. ಆದರೆ ಎರಡೆರಡು ಸಾಧನಗಳನ್ನು ನಿಭಾಯಿಸುವುದು ನಿಧಾನಕ್ಕೆ ಕಿರಿಕಿರಿಯೆನಿಸಲು ಶುರುವಾಯಿತು. ಮೊಬೈಲ್ ಫೋನಿನ ಪರದೆ ಇನ್ನಷ್ಟು ದೊಡ್ಡದಾಗಿರಬೇಕು ಎನ್ನುವ ಬೇಡಿಕೆಗೆ ಕಾರಣವಾದದ್ದು ಇದೇ ಅಂಶ. ಇದರ ಪರಿಣಾಮವಾಗಿ ಕಾಣಿಸಿಕೊಂಡವುಗಳೇ ಈಗ ನಾವು ನೋಡುವ ದೊಡ್ಡ ಪರದೆಯ ಫೋನುಗಳು. ಸಾಮಾನ್ಯ ಮೊಬೈಲ್ (೫.೫ ಇಂಚಿಗಿಂತ ಸಣ್ಣದು) ಹಾಗೂ ಟ್ಯಾಬ್ಲೆಟ್ (೭ ಇಂಚಿಗಿಂತ ದೊಡ್ಡದು) ನಡುವಿನ ಗಾತ್ರದ ಈ ಮೊಬೈಲುಗಳನ್ನು (೫.೫-೭ ಇಂಚಿನ ಪರದೆ) 'ಫ್ಯಾಬ್ಲೆಟ್' ಎಂದು ಗುರುತಿಸಲಾಗುತ್ತದೆ. ಇದು ಫೋನ್ ಹಾಗೂ ಟ್ಯಾಬ್ಲೆಟ್ ಎನ್ನುವ ಹೆಸರುಗಳನ್ನು ಸೇರಿಸಿ ರೂಪಿಸಲಾದ ಹೊಸ ನಾಮಧೇಯ.

Front end
ಫ್ರಂಟ್ ಎಂಡ್
(ರೂಪಿಸಬೇಕಿದೆ)
ಜಾಲತಾಣ ಅಥವಾ ತಂತ್ರಾಂಶದಲ್ಲಿ ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬರುವ ಸಂಗತಿಗಳನ್ನು ಸೂಚಿಸುವ ಹೆಸರು
ಕಂಪ್ಯೂಟರ್ ಪ್ರಪಂಚದಲ್ಲಿ ನೂರೆಂಟು ಸಂಗತಿಗಳಿರುತ್ತವಲ್ಲ, ಅವೆಲ್ಲದರ ವಿವರಗಳನ್ನು ಕೇಳುತ್ತ ಹೋದರೆ ಇದೆಷ್ಟು ಕ್ಲಿಷ್ಟ ಎಂಬ ಭಾವನೆ ಬಾರದೆ ಇರದು. ಒಂದು ಜಾಲತಾಣದ ವಿಷಯವನ್ನೇ ತೆಗೆದುಕೊಂಡರೆ ಅದರ ಹಿನ್ನೆಲೆಯಲ್ಲಿ ಅದೆಷ್ಟೋ ಸಂಗತಿಗಳು (ಸರ್ವರ್, ಡೇಟಾಬೇಸ್ ಇತ್ಯಾದಿ) ಅಡಗಿರುತ್ತವೆ. ಅವೆಲ್ಲದರ ಪೈಕಿ ನಮ್ಮ ಗಮನಕ್ಕೆ ಬರುವುದು ಜಾಲತಾಣದ ವಿನ್ಯಾಸ, ಚಿತ್ರಗಳು, ಅದರಲ್ಲಿರುವ ಮಾಹಿತಿ - ಹೀಗೆ ಪರದೆಯ ಮೇಲೆ ಕಾಣುವುದೆಷ್ಟೋ ಅಷ್ಟೇ! ಜಾಲತಾಣ ಅಥವಾ ತಂತ್ರಾಂಶದಲ್ಲಿ ಹೀಗೆ ನಮ್ಮ ಗಮನಕ್ಕೆ ಬರುವ ಸಂಗತಿಗಳನ್ನು 'ಫ್ರಂಟ್ ಎಂಡ್' ಎಂದು ಗುರುತಿಸಲಾಗುತ್ತದೆ. ಜಾಲತಾಣದಲ್ಲಿ ಕಾಣುವ ಮಾಹಿತಿ, ಅಲ್ಲಿ ನಾವು ಬಳಸುವ ಆಯ್ಕೆಗಳು, ಇಮೇಲ್ ಸಂದೇಶ ಕಳುಹಿಸಲು ಬಳಸುವ ಪರದೆ - ಇದೆಲ್ಲ ಫ್ರಂಟ್ ಎಂಡ್ ಪರಿಧಿಯೊಳಗೆ ಬರುತ್ತದೆ. ಇನ್ನಿತರ ತಂತ್ರಾಂಶಗಳಲ್ಲೂ ಅಷ್ಟೇ, ನಮ್ಮ ಕಣ್ಣಿಗೆ ಏನೆಲ್ಲ ಕಾಣುತ್ತದೋ ಅದೆಲ್ಲವನ್ನೂ 'ಫ್ರಂಟ್ ಎಂಡ್' ಎಂದೇ ಕರೆಯಬಹುದು. ಇದಕ್ಕೆ 'ಯೂಸರ್ ಇಂಟರ್‌ಫೇಸ್' ಎಂಬ ಹೆಸರೂ ಇದೆ.

Fragmentation
ಫ್ರಾಗ್ಮೆಂಟೇಶನ್
(ರೂಪಿಸಬೇಕಿದೆ)
ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಒಂದೇ ಕಡತದ ತುಣುಕುಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಬೇರೆಬೇರೆ ಕಡೆ ಉಳಿಸಿಡುವ ಪ್ರಕ್ರಿಯೆ
ಕಂಪ್ಯೂಟರಿನಲ್ಲಿ ಮಾಹಿತಿಯನ್ನು ಉಳಿಸಿಡುತ್ತೇವಲ್ಲ, ಅದೆಲ್ಲ ಶೇಖರವಾಗುವುದು ಹಾರ್ಡ್ ಡಿಸ್ಕ್‌ನ ಭಾಗವಾದ ಲೋಹದ ತಟ್ಟೆಗಳ ಮೇಲ್ಮೈಯಲ್ಲಿ. ಕಡತಗಳನ್ನು ಹೀಗೆ ಶೇಖರಿಸುವಾಗ ಅವುಗಳ ಅಷ್ಟೂ ಮಾಹಿತಿಯನ್ನು ಒಟ್ಟಿಗೆ ಒಂದೇ ಘಟಕದಂತೆ ಉಳಿಸಿಡುವುದು ಅಪೇಕ್ಷಣೀಯ. ಆದರೆ ಕಂಪ್ಯೂಟರ್ ಬಳಸುವಾಗ ಕಡತಗಳನ್ನು ಉಳಿಸುವ - ಅಳಿಸುವ ಪ್ರಕ್ರಿಯೆ ಪದೇಪದೇ ನಡೆಯುವುದರಿಂದ ಕಡತಗಳ ಮಾಹಿತಿಯಷ್ಟನ್ನೂ ಒಂದೇಕಡೆ ಉಳಿಸಲು ಜಾಗ ದೊರಕದೆ ಹೋಗಬಹುದು. ಇಂತಹ ಸಂದರ್ಭಗಳಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಕಡತವನ್ನು ವಿಭಜಿಸಿ, ಆ ತುಣುಕುಗಳನ್ನು ಹಾರ್ಡ್ ಡಿಸ್ಕ್ ಮೇಲ್ಮೈಯಲ್ಲಿ ಬೇರೆಬೇರೆ ಕಡೆ ಉಳಿಸಿಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಫ್ರಾಗ್ಮೆಂಟೇಶನ್ ಎಂದು ಗುರುತಿಸಲಾಗುತ್ತದೆ. ಹೀಗೆ ಕಡತವನ್ನು ಉಳಿಸಿಡುವಾಗ ತುಣುಕುಗಳಾಗಿ ವಿಭಜಿಸುವ - ಮತ್ತೆ ತೆರೆಯುವಾಗ ಅವನ್ನೆಲ್ಲ ಒಟ್ಟಿಗೆ ಸೇರಿಸುವ ಕ್ರಿಯೆ ಹಿನ್ನೆಲೆಯಲ್ಲೇ ನಡೆಯುವುದರಿಂದ ಇದು ಬಳಕೆದಾರರಿಗೆ ಗೊತ್ತಾಗುವುದಿಲ್ಲ; ಆದರೆ ಇದಕ್ಕೆಲ್ಲ ಹೆಚ್ಚುವರಿಯಾಗಿ ಕೆಲಸಮಾಡಬೇಕಾದ್ದರಿಂದ ಕಂಪ್ಯೂಟರಿನ ಕಾರ್ಯಾಚರಣೆ ಕಾಲಕ್ರಮೇಣ ನಿಧಾನವಾಗುತ್ತದೆ. ಇದನ್ನು ತಪ್ಪಿಸಲು ಕಾಲಕಾಲಕ್ಕೆ ಕಡತದ ಎಲ್ಲ ತುಣುಕುಗಳನ್ನೂ ಜೋಡಿಸಿ ಒಂದೇಕಡೆ ಉಳಿಸಿಡುವುದು ಅಗತ್ಯವಾಗುತ್ತದೆ. ಇದನ್ನು ಡೀಫ್ರಾಗ್ಮೆಂಟೇಶನ್ ಎಂದು ಕರೆಯುತ್ತಾರೆ. ಬಹುತೇಕ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲೂ ಈ ಕೆಲಸ ಮಾಡುವ ತಂತ್ರಾಂಶಗಳಿರುತ್ತವೆ. ಕೆಲ ಸಂದರ್ಭಗಳಲ್ಲಿ ಈ ತಂತ್ರಾಂಶಗಳು ಸ್ವಯಂಚಾಲಿತವಾಗಿಯೂ ಕೆಲಸಮಾಡುತ್ತವೆ; ಅವನ್ನು ನಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸುವುದೂ ಸಾಧ್ಯ.

Frame Rate
ಫ್ರೇಮ್ ರೇಟ್
(ರೂಪಿಸಬೇಕಿದೆ)
ನಿರ್ದಿಷ್ಟ ವೀಡಿಯೋದಲ್ಲಿ ಒಂದು ಸೆಕೆಂಡಿಗೆ ಎಷ್ಟು ಫ್ರೇಮ್(ಚಿತ್ರ)ಗಳನ್ನು ಸೆರೆಹಿಡಿಯಲಾಗಿದೆ ಅಥವಾ ಪ್ರದರ್ಶಿಸಲಾಗುತ್ತಿದೆ ಎನ್ನುವುದರ ಮಾಪನ
ಮಾನವನ ಮೆದುಳು ಚಿತ್ರಗಳನ್ನು ಗ್ರಹಿಸುವ ರೀತಿ ವಿಶಿಷ್ಟವಾದದ್ದು. ನಿರ್ದಿಷ್ಟ ಸಮಯದ ಅಂತರದಲ್ಲಿ ಪ್ರದರ್ಶಿಸಿದಾಗ ಚಿತ್ರಗಳನ್ನು ಪ್ರತ್ಯೇಕವಾಗಿಯೇ ಗುರುತಿಸುವ ಮೆದುಳು ಸಮಯದ ಅಂತರ ಕಡಿಮೆಯಾದಂತೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ಸೋಲುತ್ತದೆ. ಛಾಯಾಚಿತ್ರಗಳ ಸರಣಿ ಚಲನಚಿತ್ರವಾಗಿ ಬದಲಾಗುವುದು ಹೀಗೆಯೇ: ಬಿಡಿಚಿತ್ರಗಳ ಸರಣಿಯನ್ನು ಪಟಪಟನೆ ಪ್ರದರ್ಶಿಸಿದಾಗ ಅವುಗಳ ನಡುವಿನ ವ್ಯತ್ಯಾಸ ಮಸುಕಾಗಿ ಅಲ್ಲಿನ ವಿಷಯಗಳು ಚಲಿಸುವಂತೆ ಕಾಣಲು ಶುರುವಾಗುತ್ತದೆ. ನಾವು ಕ್ಯಾಮೆರಾದಲ್ಲಿ ಸೆರೆಹಿಡಿಯುವ, ಜಾಲಲೋಕದಲ್ಲಿ ನೋಡುವ ವೀಡಿಯೋ ಕಡತಗಳಲ್ಲಿ ಚಿತ್ರಗಳನ್ನು ಎಷ್ಟು ವೇಗವಾಗಿ ಪ್ರದರ್ಶಿಸಲಾಗುತ್ತದೆ ಎನ್ನುವುದನ್ನು ಆ ವೀಡಿಯೋದ 'ಫ್ರೇಮ್ ರೇಟ್' ತಿಳಿಸುತ್ತದೆ. ಫ್ರೇಮ್ಸ್ ಪರ್ ಸೆಕೆಂಡ್ (ಎಫ್‌ಪಿಎಸ್) ಎನ್ನುವುದು ಫ್ರೇಮ್ ರೇಟನ್ನು ಅಳೆಯುವ ಏಕಮಾನ. ನಿರ್ದಿಷ್ಟ ವೀಡಿಯೋದಲ್ಲಿ ಒಂದು ಸೆಕೆಂಡಿಗೆ ಎಷ್ಟು ಫ್ರೇಮ್(ಚಿತ್ರ)ಗಳನ್ನು ಸೆರೆಹಿಡಿಯಲಾಗಿದೆ ಅಥವಾ ಪ್ರದರ್ಶಿಸಲಾಗುತ್ತಿದೆ ಎಂದು ಸೂಚಿಸುವುದು ಇದರ ಕೆಲಸ. ಈ ಸಂಖ್ಯೆ ಹೆಚ್ಚಿದ್ದಷ್ಟೂ ವೀಡಿಯೋ ನೋಡುವ ಅನುಭವ ಹೆಚ್ಚು ಆಪ್ತವೆನಿಸುತ್ತದೆ. ಉದಾಹರಣೆಗೆ, ಸೆಕೆಂಡಿಗೆ ಎಂಟು - ಹತ್ತು ಚಿತ್ರಗಳನ್ನಷ್ಟೇ ಪ್ರದರ್ಶಿಸುವ ವೀಡಿಯೋ ಆದರೆ (೮-೧೦ ಎಫ್‌ಪಿಎಸ್) ಅದರ ಗುಣಮಟ್ಟ ಅಷ್ಟೇನೂ ಚೆನ್ನಾಗಿದೆ ಎನ್ನಿಸುವುದಿಲ್ಲ. ಅಷ್ಟೇ ಏಕೆ, ಚಿತ್ರಗಳು ಬೇರೆಬೇರೆಯಾಗಿ ಕಾಣುವುದರಿಂದ ನಾವು ವೀಡಿಯೋ ನೋಡುತ್ತಿದ್ದೇವೆ ಎಂಬ ಭಾವನೆಯೂ ಬರಲಿಕ್ಕಿಲ್ಲವೇನೋ. ಹಾಗಾಗಿ ವೀಡಿಯೋಗಳ ಫ್ರೇಮ್ ರೇಟ್ ಸಾಮಾನ್ಯವಾಗಿ ೨೪ ಎಫ್‌ಪಿಎಸ್ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ೫೦-೬೦ ಎಫ್‌ಪಿಎಸ್‌ಗಿಂತ ಹೆಚ್ಚಿನ ಗುಣಮಟ್ಟದ ವೀಡಿಯೋಗಳು ಇದೀಗ ಸಾಮಾನ್ಯವಾಗುತ್ತಿವೆ.

Flaming
ಫ್ಲೇಮಿಂಗ್
(ರೂಪಿಸಬೇಕಿದೆ)
ದ್ವೇಷಪೂರಿತವಾದ, ಇತರರನ್ನು ಕೆರಳಿಸುವಂತಹ ಸಂದೇಶಗಳನ್ನು ಕಳಿಸುವ ಮೂಲಕ ಸಮಾಜಜಾಲಗಳಲ್ಲಿ ಅಶಾಂತಿ ಉಂಟುಮಾಡುವ ಪ್ರಕ್ರಿಯೆ
ಅಂತರಜಾಲದಿಂದಾಗಿ ನಮಗೆ ಹಲವು ಹೊಸ ಸಂವಹನ ವಿಧಾನಗಳು ದೊರೆತಿವೆ. ಈ ಸಂವಹನ ವಿಧಾನಗಳ ನೆರವಿನಿಂದ ಇಬ್ಬರ ನಡುವಿನ ನೇರ ಸಂವಹನವಷ್ಟೇ ಅಲ್ಲದೆ ಏಕಕಾಲದಲ್ಲಿ ಗುಂಪುಗಳೊಡನೆಯೂ ವಿಚಾರವಿನಿಮಯ ನಡೆಸುವುದು ಸಾಧ್ಯವಾಗಿದೆ. ಇದನ್ನು ಸಾಧ್ಯವಾಗಿಸಿರುವ ಸವಲತ್ತುಗಳ ಪಟ್ಟಿಯಲ್ಲಿ ಫೇಸ್‌ಬುಕ್‌ನಂತಹ ಸಮಾಜಜಾಲಗಳಿಗೆ, ಗ್ರೂಪ್ ಚಾಟ್ ಸೌಲಭ್ಯ ನೀಡುವ ವಾಟ್ಸ್‌ಆಪ್‌ನಂತಹ ತಂತ್ರಾಂಶಗಳಿಗೆ ಪ್ರಮುಖ ಸ್ಥಾನ. ಒಬ್ಬರಿಗಿಂತ ಹೆಚ್ಚು ಜನರೊಡನೆ ಸಂವಹನ ನಡೆಸುವಾಗ ಅದು ಯಾವಾಗಲೂ ಸೌಹಾರ್ದಯುತವಾಗಿರಬೇಕು ಎಂದೇನೂ ಇಲ್ಲವಲ್ಲ! ಹಾಗಾಗಿಯೇ ಇಲ್ಲಿ ಜಗಳಗಳು, ದೂಷಣೆ, ಅವಹೇಳನಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಅಷ್ಟೇ ಏಕೆ, ಜಗಳಕ್ಕೆ ಸದಾಸಿದ್ಧರೂ ಇಲ್ಲಿ ಸಿಗುತ್ತಾರೆ. ಸಂವಾದಗಳಲ್ಲಿ ದ್ವೇಷಪೂರಿತವಾದ, ಇತರರನ್ನು ಕೆರಳಿಸುವಂತಹ ಸಂದೇಶಗಳನ್ನು ಕಳಿಸುವುದು ಇಂಥವರ ಕಾರ್ಯವಿಧಾನ. ಇಂತಹ ಸಂದೇಶಗಳನ್ನು 'ಫ್ಲೇಮ್' (ಬೆಂಕಿಯ ಉರಿ, ಜ್ವಾಲೆ) ಎಂದೂ, ಗುಂಪಿನ ಸದಸ್ಯರ ನಡುವೆ ಜಗಳ ಪ್ರಾರಂಭಿಸುವ ಈ ಪ್ರಕ್ರಿಯೆಯನ್ನು 'ಫ್ಲೇಮಿಂಗ್' (ಉರಿಯೆಬ್ಬಿಸು) ಎಂದೂ ಗುರುತಿಸಲಾಗುತ್ತದೆ. ಈ ಪೈಕಿ ಸಾಮಾನ್ಯ ಸಂವಾದಗಳಲ್ಲಿ ಜಗಳ ಹುಟ್ಟಿಸುವುದು ಒಂದು ವಿಧಾನವಾದರೆ ಜಗಳ ಸೃಷ್ಟಿಸಲೆಂದೇ ಸಂವಾದಗಳನ್ನು ಪ್ರಾರಂಭಿಸುವುದು ಇನ್ನೊಂದು ವಿಧ. ಕೋಪೋದ್ರೇಕದ ಪ್ರತಿಕ್ರಿಯೆಗಳನ್ನು ಪಡೆಯಲೆಂದೇ ಸಂದೇಶಗಳನ್ನು ಹಂಚಿಕೊಳ್ಳುವ ಈ ಕ್ರಿಯೆಗೆ 'ಫ್ಲೇಮ್‌ಬೇಯ್ಟ್' (ಬೇಯ್ಟ್ = ಪ್ರಲೋಭನೆ) ಎಂಬ ಹೆಸರೂ ಇದೆ.

Flight Mode
ಫ್ಲೈಟ್ ಮೋಡ್
(ರೂಪಿಸಬೇಕಿದೆ)
ಮೊಬೈಲ್ ಫೋನಿನ ಬಾಹ್ಯ ಸಂಪರ್ಕಗಳನ್ನು ಸ್ಥಗಿತಗೊಳಿಸುವ ಸೌಕರ್ಯ; ವಿಮಾನ ಪ್ರಯಾಣದ ಸಂದರ್ಭದಲ್ಲಿ ಇದನ್ನು ಬಳಸುವುದು ಕಡ್ಡಾಯ.
ಮೊಬೈಲಿನಿಂದ ಹೊರಡುವ ಅಥವಾ ಅದನ್ನು ತಲುಪುವ ರೇಡಿಯೋ ತರಂಗಾಂತರದ (ರೇಡಿಯೋ-ಫ್ರೀಕ್ವೆನ್ಸಿ) ಸಂಕೇತಗಳನ್ನು ನಿರ್ಬಂಧಿಸುವುದು ಫ್ಲೈಟ್ ಮೋಡ್‌ನ ಉದ್ದೇಶ. ಇದನ್ನು ಬಳಸಿದಾಗ ನಮ್ಮ ಮೊಬೈಲಿನ ನೆಟ್‌ವರ್ಕ್ ಸಂಪರ್ಕ ಕಡಿದುಹೋಗುತ್ತದೆ, ಅಂತರಜಾಲ ಸಂಪರ್ಕ - ಬ್ಲೂಟೂತ್ ಇತ್ಯಾದಿಗಳು ನಿಷ್ಕ್ರಿಯವಾಗುತ್ತವೆ. ಫೋಟೋ ಕ್ಲಿಕ್ಕಿಸುವುದು, ಹಾಡು ಕೇಳುವುದು ಮುಂತಾದ - ಬಾಹ್ಯ ಸಂಪರ್ಕದ ಅಗತ್ಯವಿಲ್ಲದೆ ಮಾಡಬಹುದಾದ - ಕೆಲಸಗಳನ್ನು ಮಾತ್ರ ಯಾವುದೇ ನಿರ್ಬಂಧವಿಲ್ಲದೆ ಮಾಡಿಕೊಳ್ಳಬಹುದು. ಟೇಕ್-ಆಫ್‌ನಿಂದ ಪ್ರಾರಂಭಿಸಿ ಲ್ಯಾಂಡಿಂಗ್‌ವರೆಗೆ ವಿಮಾನ ಪ್ರಯಾಣದಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಮೊಬೈಲ್ ಸಂಕೇತಗಳು ವಿಮಾನದ ನಿಯಂತ್ರಣ ಹಾಗೂ ಸಂವಹನ ವ್ಯವಸ್ಥೆಗಳೊಡನೆ ಹಸ್ತಕ್ಷೇಪ ಮಾಡದಿರಲಿ ಎನ್ನುವುದು ಈ ನಿಷೇಧದ ಉದ್ದೇಶ. ಇದಕ್ಕೆ ಕಾರಣವಾದ ಸಂಕೇತಗಳನ್ನಷ್ಟೆ ನಿರ್ಬಂಧಿಸಿ ಮೊಬೈಲಿನ ಬೇರೆ ಸೌಲಭ್ಯಗಳನ್ನು ಬಳಸಲು ಅನುವುಮಾಡಿಕೊಡುವುದರಿಂದಲೇ ಫ್ಲೈಟ್ ಮೋಡ್ ಹೆಸರಿನಲ್ಲಿ ವಿಮಾನಕ್ಕೂ ಜಾಗ ಸಿಕ್ಕಿದೆ. ಅಂದಹಾಗೆ ಬೇರೆಬೇರೆ ಮೊಬೈಲುಗಳಲ್ಲಿ ಇದನ್ನು ಏರ್‌ಪ್ಲೇನ್ ಮೋಡ್ ಅಥವಾ ಏರೋಪ್ಲೇನ್ ಮೋಡ್ ಎಂದೂ ಗುರುತಿಸಲಾಗುತ್ತದೆ. ಫ್ಲೈಟ್ ಮೋಡ್‌ನಲ್ಲಿದ್ದಾಗ ಮೊಬೈಲಿನ ಬ್ಯಾಟರಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮೊಬೈಲ್ ಕರೆ-ಸಂದೇಶಗಳ ಕಾಟ ಜಾಸ್ತಿ ಎನ್ನಿಸಿದಾಗ, ಮೊಬೈಲನ್ನು ಅಲಾರಂ ಗಡಿಯಾರದಂತೆಯೋ ಎಂಪಿ೩ ಪ್ಲೇಯರಿನಂತೆಯೋ ಮಾತ್ರವೇ ಬಳಸಬೇಕು ಎನ್ನಿಸಿದಾಗ ಇದನ್ನು ಖಂಡಿತಾ ಬಳಸಿ ನೋಡಬಹುದು!

Flowchart
ಫ್ಲೋಚಾರ್ಟ್
ಪ್ರವಾಹನಕ್ಷೆ
ಯಾವುದೇ ಕೆಲಸವನ್ನು ಪ್ರಾರಂಭಿಸುವುದರಿಂದ ಮುಗಿಸುವವರೆಗಿನ ಎಲ್ಲ ಹೆಜ್ಜೆಗಳನ್ನೂ ಚಿತ್ರರೂಪದಲ್ಲಿ ಪ್ರತಿನಿಧಿಸುವ ನಕ್ಷೆ
ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗೆ ಏನಾದರೂ ಕೆಲಸ ಮಾಡುವಂತೆ ಹೇಳಬೇಕಾದರೆ ಆ ಕೆಲಸದ ವಿವರಗಳನ್ನೆಲ್ಲ ತಿಳಿಸುವ ಒಂದು ಪ್ರೋಗ್ರಾಮ್ ಬರೆಯಬೇಕು. ಪ್ರೋಗ್ರಾಮ್ ಬರೆಯುವ ಮೊದಲು ನಾವು ಆ ವಿವರಗಳನ್ನೆಲ್ಲ ಕ್ರಮಬದ್ಧವಾಗಿ ಜೋಡಿಸಿಕೊಳ್ಳಬೇಕಲ್ಲ, ಅದಕ್ಕಾಗಿ ಬಳಕೆಯಾಗುವ ಹಲವು ವಿಧಗಳಲ್ಲಿ ಫ್ಲೋಚಾರ್ಟ್ (ಪ್ರವಾಹನಕ್ಷೆ) ಕೂಡ ಒಂದು. ಯಾವುದೇ ಕೆಲಸವನ್ನು ಪ್ರಾರಂಭಿಸುವುದರಿಂದ ಮುಗಿಸುವವರೆಗಿನ ಎಲ್ಲ ಹೆಜ್ಜೆಗಳನ್ನೂ ಇಲ್ಲಿ ಚಿತ್ರರೂಪದಲ್ಲಿ ಪ್ರತಿನಿಧಿಸಲಾಗುತ್ತದೆ. ಅಂದರೆ ಪ್ರತಿಯೊಂದು ಹೆಜ್ಜೆಯನ್ನೂ ಒಂದೊಂದು ಪೆಟ್ಟಿಗೆಯಲ್ಲಿ ಬರೆದು ಯಾವ ಹೆಜ್ಜೆಯ ನಂತರ ಯಾವ ಹೆಜ್ಜೆಗೆ ಯಾವಾಗ, ಹೇಗೆ ಮುನ್ನಡೆಯಬೇಕು ಎನ್ನುವುದನ್ನು ಬಾಣದ ಗುರುತಿನಿಂದ ತೋರಿಸಲಾಗುತ್ತದೆ. ಬೇರೆಬೇರೆ ರೀತಿಯ ಕೆಲಸಗಳನ್ನು ಬೇರೆಬೇರೆ ರೀತಿಯ ಆಕೃತಿಗಳಿಂದ ಗುರುತಿಸುವುದು ಸಾಮಾನ್ಯ ಅಭ್ಯಾಸ. ಕೆಲಸದ ಆರಂಭ-ಅಂತ್ಯದ ಹೆಜ್ಜೆಗಳನ್ನು ವೃತ್ತಗಳೊಳಗೆ ಬರೆದರೆ ನಿರ್ದಿಷ್ಟ ಕೆಲಸಮಾಡುವಂತೆ ಹೇಳುವ (ಉದಾ: ಎರಡು ಸಂಖ್ಯೆಗಳನ್ನು ಕೂಡಿಸು) ಹೆಜ್ಜೆಗಳನ್ನು ಆಯತಾಕೃತಿಗಳೊಳಗೆ ಬರೆಯಲಾಗುತ್ತದೆ. ಇಂತಹ ಪ್ರತಿಯೊಂದು ಹೆಜ್ಜೆಯಿಂದ ಮುಂದಿನ ಹೆಜ್ಜೆಗೆ ಬಾಣದ ಗುರುತಿನಿಂದ ತೋರಿಸಲಾದ ಒಂದು ಮಾರ್ಗವಷ್ಟೆ ಇರುವುದು ಸಾಧ್ಯ. ಪ್ರೋಗ್ರಾಮಿನಲ್ಲಿ ಯಾವುದೇ ಷರತ್ತುಗಳನ್ನು ಪರಿಶೀಲಿಸುವ ಹೆಜ್ಜೆಗಳಿದ್ದರೆ (ಉದಾ: ಸಂಬಳದ ಮೊತ್ತಕ್ಕೆ ಅನುಗುಣವಾಗಿ ತೆರಿಗೆ ಲೆಕ್ಕಹಾಕು) ಅವನ್ನೂ ಪ್ರವಾಹನಕ್ಷೆಯಲ್ಲಿ ಪರಿಣಾಮಕಾರಿಯಾಗಿ ಪ್ರತಿನಿಧಿಸುವುದು ಸಾಧ್ಯ. ರಚನೆ, ವಿನ್ಯಾಸ ಹಾಗೂ ಅರ್ಥಮಾಡಿಕೊಳ್ಳುವುದರಲ್ಲಿನ ಸರಳತೆಯಿಂದಾಗಿ ಪ್ರವಾಹ ನಕ್ಷೆಗಳು ಪ್ರೋಗ್ರಾಮಿಂಗ್ ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಐಟಿ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವವರು ಕೂಡ ಕ್ರಮವಿಧಿ ರಚನೆ ಸೇರಿದಂತೆ ಹಲವು ಪ್ರಕ್ರಿಯೆಗಳ ವಿಶ್ಲೇಷಣೆ, ದಾಖಲಿಸುವಿಕೆ ಹಾಗೂ ನಿರ್ವಹಣೆಯಲ್ಲಿ ಪ್ರವಾಹ ನಕ್ಷೆಗಳನ್ನು ಬಳಸುತ್ತಾರೆ.

Flash Memory
ಫ್ಲ್ಯಾಶ್ ಮೆಮೊರಿ
(ರೂಪಿಸಬೇಕಿದೆ)
ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಮುಂತಾದ ಸಾಧನಗಳಲ್ಲಿ ಮಾಹಿತಿಯನ್ನು ಉಳಿಸಿಡಲು ಬಳಕೆಯಾಗುವ ತಂತ್ರಜ್ಞಾನ
ಡಿಜಿಟಲ್ ಮಾಹಿತಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಲು ನೆರವಾಗುವ ಮೆಮೊರಿ ಸಾಧನಗಳಿಗೆ ಉದಾಹರಣೆ ಕೊಡಿ ಎಂದರೆ ಒಂದು ಕಾಲದಲ್ಲಿ ಎಲ್ಲರೂ ಫ್ಲಾಪಿ ಹಾಗೂ ಸಿ.ಡಿ.-ಡಿ.ವಿ.ಡಿ.ಗಳ ಹೆಸರು ಹೇಳುತ್ತಿದ್ದರು. ಆದರೆ ಈಗ ಅವನ್ನೆಲ್ಲ ಕೇಳುವವರೇ ಇಲ್ಲ. ಅವುಗಳ ಸ್ಥಾನದಲ್ಲಿ ಈಗ ಪೆನ್‌ಡ್ರೈವ್‌ಗಳು, ಮೆಮೊರಿ ಕಾರ್ಡುಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಈ ಸಾಧನಗಳಲ್ಲಿ ಮಾಹಿತಿಯನ್ನು ಉಳಿಸಿಡಲು ಬಳಕೆಯಾಗುವ ತಂತ್ರಜ್ಞಾನವೇ ಫ್ಲ್ಯಾಶ್ ಮೆಮೊರಿ. ಕಂಪ್ಯೂಟರಿನ ರಾಮ್ (ರೀಡ್ ಓನ್ಲಿ ಮೆಮೊರಿ) ಬಗ್ಗೆ ಕೇಳಿದ್ದೇವಲ್ಲ, ಫ್ಲ್ಯಾಶ್ ಮೆಮೊರಿಯಲ್ಲಿ ಬಳಕೆಯಾಗುವುದು ಇದೇ ರೀಡ್ ಓನ್ಲಿ ಮೆಮೊರಿಯ ಇನ್ನೊಂದು ರೂಪ. 'ಇಲೆಕ್ಟ್ರಾನಿಕಲಿ ಇರೇಸಬಲ್ ಪ್ರೋಗ್ರಾಮಬಲ್ ರೀಡ್ ಓನ್ಲಿ ಮೆಮೊರಿ' (ಇಇಪಿ-ರಾಮ್) ಎಂಬ ಹೆಸರಿನ ಈ ಚಿಪ್‌ನಲ್ಲಿ ಶೇಖರವಾಗಿರುವ ಮಾಹಿತಿಯನ್ನು ಅಳಿಸಿ ಮತ್ತೆಮತ್ತೆ ಬೇರೆಯ ಮಾಹಿತಿಯನ್ನು ಸೇರಿಸಬಹುದು ಎನ್ನುವುದು ವಿಶೇಷ. ಕಂಪ್ಯೂಟರಿನ ರಾಮ್‌ಗೂ, ಫ್ಲ್ಯಾಶ್ ಮೆಮೊರಿಗೂ ಇರುವ ಬಹುದೊಡ್ಡ ವ್ಯತ್ಯಾಸವೂ ಇದೇ. ಹಿಂದಿನ ಫ್ಲಾಪಿ ಡಿಸ್ಕ್ ಹಾಗೂ ಇಂದಿನ ಹಾರ್ಡ್‌ಡಿಸ್ಕ್‌ನಂತೆ ಇಲ್ಲಿ ಯಾವುದೇ ತಿರುಗುವ ಭಾಗಗಳಿಲ್ಲ, ಹಾಗಾಗಿ ಶಬ್ದವೂ ಇಲ್ಲ; ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಕೊಂಚ ಕಡಿಮೆಯೇ ಎನ್ನಬಹುದು. ಇತರ ಮಾಧ್ಯಮಗಳಿಗೆ ಹೋಲಿಸಿದಾಗ ಮಾಹಿತಿ ವರ್ಗಾವಣೆಯ ವೇಗ ಜಾಸ್ತಿ. ಎಲ್ಲದಕ್ಕಿಂತ ಮಿಗಿಲಾಗಿ ಗಾತ್ರ ತೂಕ ಎರಡೂ ಕಡಿಮೆ. ಈ ಎಲ್ಲ ಕಾರಣಗಳಿಂದಲೇ ಕ್ಲೌಡ್ ಕಂಪ್ಯೂಟಿಂಗ್ ಭರಾಟೆಯ ನಡುವೆಯೂ ಪೆನ್‌ಡ್ರೈವ್‌ಗಳು, ಮೆಮೊರಿ ಕಾರ್ಡುಗಳು ಇನ್ನೂ ತಮ್ಮ ಅಸ್ತಿತ್ವವನ್ನು, ಜನಪ್ರಿಯತೆಯನ್ನು ಉಳಿಸಿಕೊಂಡಿವೆ ಎನ್ನಬಹುದು.


logo