logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Format
ಫಾರ್ಮ್ಯಾಟ್
(ರೂಪಿಸಬೇಕಿದೆ)
ಮಾಹಿತಿ ಶೇಖರಣಾ ಸಾಧನಗಳಲ್ಲಿ ಹೊಸದಾಗಿ ಫೈಲ್ ಸಿಸ್ಟಂ ರೂಪಿಸುವ ಪ್ರಕ್ರಿಯೆ. ಪದಸಂಸ್ಕರಣಾ ತಂತ್ರಾಂಶಗಳಲ್ಲಿ ಪುಟವನ್ನು-ಪಠ್ಯವನ್ನು ವಿನ್ಯಾಸಗೊಳಿಸುವ ಕ್ರಿಯೆಗೂ ಇದೇ ಹೆಸರು. ಕಡತಗಳ ವಿಧಗಳನ್ನೂ ಫಾರ್ಮ್ಯಾಟ್‌ಗಳೆಂದೇ ಕರೆಯುತ್ತಾರೆ.
ತಂತ್ರಜ್ಞಾನದ ಜಗತ್ತಿನಲ್ಲಿ ಬೇರೆಬೇರೆ ಅರ್ಥವಿರುವ ಪದಗಳ ಬಳಕೆ ಅಪರೂಪವೇನಲ್ಲ. ಇಂತಹ ಪದಗಳ ಪೈಕಿ 'ಫಾರ್ಮ್ಯಾಟ್' ಕೂಡ ಒಂದು. ಹಾರ್ಡ್ ಡಿಸ್ಕ್, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಮುಂತಾದ ಸಾಧನಗಳೊಡನೆ ನಮ್ಮ ಕಂಪ್ಯೂಟರ್, ಮೊಬೈಲ್ ಅಥವಾ ಕ್ಯಾಮೆರಾಗಳು ವ್ಯವಹರಿಸಬೇಕೆಂದರೆ ಅವುಗಳಲ್ಲಿ ಸೂಕ್ತ ಫೈಲ್ ಸಿಸ್ಟಂ ಇರಬೇಕಾದ್ದು ಅತ್ಯಗತ್ಯ. ಇಂತಹ ಸಾಧನಗಳನ್ನು ಪರೀಕ್ಷಿಸಿ ಅವುಗಳಲ್ಲಿ ಹೊಸದಾಗಿ ಫೈಲ್ ಸಿಸ್ಟಂ ರೂಪಿಸುವ ಪ್ರಕ್ರಿಯೆಯನ್ನು ಫಾರ್ಮ್ಯಾಟಿಂಗ್ ('ಫಾರ್ಮ್ಯಾಟ್ ಮಾಡುವುದು') ಎಂದು ಕರೆಯುತ್ತಾರೆ. ಬಹುಪಾಲು ಹೊಸ ಸಾಧನಗಳು ಮುಂಚಿತವಾಗಿಯೇ ಫಾರ್ಮ್ಯಾಟ್ ಆಗಿರುತ್ತವೆ. ಹಳೆಯ ಸಾಧನಗಳನ್ನೂ ನಾವು ಅಗತ್ಯಬಿದ್ದಾಗ ಫಾರ್ಮ್ಯಾಟ್ ಮಾಡುವುದು ಸಾಧ್ಯ - ಆದರೆ ನೆನಪಿರಲಿ, ಹೀಗೆ ಮಾಡಿದಾಗ ಅದರಲ್ಲಿರುವ ಎಲ್ಲ ಮಾಹಿತಿಯೂ ಅಳಿಸಿಹೋಗುತ್ತದೆ! ಮೈಕ್ರೋಸಾಫ್ಟ್ ವರ್ಡ್‌ನಂತಹ ಪದಸಂಸ್ಕರಣಾ ತಂತ್ರಾಂಶಗಳಲ್ಲಿ (ವರ್ಡ್ ಪ್ರಾಸೆಸರ್) ಪುಟಗಳನ್ನು - ಅದರಲ್ಲಿನ ಪಠ್ಯವನ್ನು ನಮ್ಮ ಇಚ್ಛೆಯಂತೆ ವಿನ್ಯಾಸಗೊಳಿಸುತ್ತೇವಲ್ಲ - ಆ ಪ್ರಕ್ರಿಯೆಯ ಹೆಸರೂ ಫಾರ್ಮ್ಯಾಟಿಂಗ್ ಎಂದೇ. ಪುಟದ ಗಾತ್ರ, ಅಂಚುಗಳಲ್ಲಿ ಬಿಡಬೇಕಾದ ಖಾಲಿ ಜಾಗ (ಮಾರ್ಜಿನ್), ಸಾಲುಗಳ ನಡುವೆ ಇರಬೇಕಾದ ಅಂತರ, ಅಕ್ಷರಗಳ ಶೈಲಿ ಇತ್ಯಾದಿಗಳನ್ನೆಲ್ಲ ಹೊಂದಿಸುವುದು ಈ ಪ್ರಕ್ರಿಯೆಯ ಅಂಗವಾಗಿಯೇ. ಬೇರೆಬೇರೆ ಬಗೆಯ ಕಡತಗಳನ್ನು ಬೇರೆಬೇರೆ ರೀತಿಯಲ್ಲಿ ಉಳಿಸಬಹುದಾದ ವಿಧಗಳನ್ನು 'ಫೈಲ್ ಫಾರ್ಮ್ಯಾಟ್' ಎಂದು ಕರೆಯುತ್ತಾರೆ. ನಿರ್ದಿಷ್ಟ ಕಡತದಲ್ಲಿರುವ ಮಾಹಿತಿ ಹೇಗೆ ಸಂಯೋಜಿಸಲಾಗಿದೆ ಎನ್ನುವುದನ್ನು ಆ ಕಡತದ ಫಾರ್ಮ್ಯಾಟ್ ಸೂಚಿಸುತ್ತದೆ. ಬೇರೆಬೇರೆ ರೀತಿಯ ಕಡತಗಳನ್ನು ಗುರುತಿಸಲು ಬಳಕೆಯಾಗುವ ಜೆಪಿಜಿ, ಪಿಡಿಎಫ್, ಎಂಪಿ೩ ಇವುಗಳೆಲ್ಲ ಫೈಲ್ ಫಾರ್ಮ್ಯಾಟ್‌ನ ಉದಾಹರಣೆಗಳು.

Fast Charging
ಫಾಸ್ಟ್ ಚಾರ್ಜಿಂಗ್
(ರೂಪಿಸಬೇಕಿದೆ)
ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವ ತಂತಜ್ಞಾನ
ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳೇನೋ ಸ್ಮಾರ್ಟ್ ಆಗುತ್ತಿವೆ, ಸರಿ. ಆದರೆ ಅವುಗಳ ಬ್ಯಾಟರಿಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ; ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿಯಿಂದ - ಪ್ರತಿಬಾರಿ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಫಜೀತಿಯಿಂದ ಇನ್ನೂ ಬಿಡುಗಡೆ ಸಿಕ್ಕಿಲ್ಲ. ಫೋನ್ ಚಾರ್ಜ್ ಆಗಲು ಹೀಗೆ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ. ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ 'ಫಾಸ್ಟ್ ಚಾರ್ಜಿಂಗ್' ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು. ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವುದು ಈ ತಂತ್ರಜ್ಞಾನದ ಉದ್ದೇಶ. ಸಾಮಾನ್ಯ ಚಾರ್ಜರುಗಳಿಗೆ ಹೋಲಿಸಿದಾಗ ಈ ತಂತ್ರಜ್ಞಾನ ಬಳಸುವ ಚಾರ್ಜರುಗಳು ಬ್ಯಾಟರಿ ಚಾರ್ಜ್ ಮಾಡಲು ಸರಿಸುಮಾರು ಅರ್ಧದಷ್ಟು ಸಮಯವನ್ನಷ್ಟೆ ತೆಗೆದುಕೊಳ್ಳುತ್ತವೆ. ಕೆಲ ಮೊಬೈಲ್ ತಯಾರಕರು ತಮ್ಮ ಸಂಸ್ಥೆಯ ಮೊಬೈಲುಗಳ ಜೊತೆಗೇ ಫಾಸ್ಟ್ ಚಾರ್ಜರುಗಳನ್ನು ನೀಡುತ್ತಾರೆ. ಇನ್ನು ಕೆಲ ಮೊಬೈಲುಗಳ ಜೊತೆಗೆ ಫಾಸ್ಟ್ ಚಾರ್ಜರ್ ಬಾರದಿದ್ದರೂ ಮಾರುಕಟ್ಟೆಯಲ್ಲಿ ದೊರಕುವ ಬೇರೆ ಫಾಸ್ಟ್ ಚಾರ್ಜರ್ ಬಳಸಿ ಅವನ್ನೂ ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು.

Phishing
ಫಿಶಿಂಗ್
(ರೂಪಿಸಬೇಕಿದೆ)
ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಹಗರಣ
ಬ್ಯಾಂಕಿನ ಹೆಸರಿನಲ್ಲಿ ಇಮೇಲ್ ಕಳುಹಿಸಿ ಬ್ಯಾಂಕ್ ಖಾತೆ - ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳುವುದು, ಅರ್ಜಿಯನ್ನೇ ಹಾಕದಿದ್ದಾಗಲೂ ಕೆಲಸಕೊಡುವುದಾಗಿ ಸಂದೇಶ ಕಳಿಸುವುದು, ಲಕ್ಷಾಂತರ ರೂಪಾಯಿ ಬಹುಮಾನದ ಆಸೆ ತೋರಿಸಿ ಅದನ್ನು ತಲುಪಿಸಲು ಹಣ ಕೇಳುವುದು - ವಿಶ್ವವ್ಯಾಪಿ ಜಾಲದ ಬಹುತೇಕ ಬಳಕೆದಾರರಿಗೆ ಇಂತಹ ಘಟನೆಗಳ ಅನುಭವ ಆಗಿರುತ್ತದೆ. ಇಂತಹ ಸಂದೇಶಗಳು ಇಮೇಲ್ ಮಾತ್ರವಲ್ಲದೆ ಎಸ್ಸೆಮ್ಮೆಸ್ ಮೂಲಕವೂ ನಮ್ಮತ್ತ ಬರುವುದು ಸಾಮಾನ್ಯವೇ ಆಗಿಹೋಗಿದೆ. ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಈ ಹಗರಣಕ್ಕೆ ಫಿಶಿಂಗ್ ಎಂದು ಹೆಸರು. ಫಿಶಿಂಗ್‌ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜೊತೆಗೆ ಸಮುದಾಯ ತಾಣಗಳು ಹಾಗೂ ಇಮೇಲ್ ಖಾತೆಯ ಪಾಸ್‌ವರ್ಡ್‌ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ. ಫಿಶಿಂಗ್ ಪ್ರಯತ್ನದಲ್ಲಿ ಎಸ್ಸೆಮ್ಮೆಸ್, ಇಮೇಲ್ ಸಂದೇಶ, ನಕಲಿ ಜಾಲತಾಣಗಳನ್ನು ಬಳಸುವ ಬದಲು ದೂರವಾಣಿ ಕರೆಗಳ ಮೊರೆಹೋಗುವ ಕುತಂತ್ರಿಗಳೂ ಇದ್ದಾರೆ. ಇದು ಧ್ವನಿ ಅಥವಾ 'ವಾಯ್ಸ್' ಆಧರಿತ ಫಿಶಿಂಗ್ ಆದ್ದರಿಂದ ಈ ವಂಚನೆಯನ್ನು ವಿಶಿಂಗ್ ಎಂದು ಗುರುತಿಸಲಾಗುತ್ತದೆ. ಎಸ್ಸೆಮ್ಮೆಸ್ ಸಂದೇಶಗಳ ಮೂಲಕ ನಡೆಯುವ ಫಿಶಿಂಗ್‌ಗೆ 'ಸ್ಮಿಶಿಂಗ್' ಎಂದು ಹೆಸರು.

Feature Phone
ಫೀಚರ್ ಫೋನ್
(ರೂಪಿಸಬೇಕಿದೆ)
ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ಸೀಮಿತ ಸೌಲಭ್ಯಗಳಿರುವ, ಕಡಿಮೆ ಬೆಲೆಗೆ ದೊರಕುವ ಮೊಬೈಲ್ ಫೋನು
ಯಾರ ಕೈಯಲ್ಲಿ ನೋಡಿದರೂ ಒಂದೊಂದು ಸ್ಮಾರ್ಟ್‌ಫೋನ್, ಅದರೊಳಗೆ ಕಂಪ್ಯೂಟರನ್ನೂ ಮೀರಿಸುವ ಸಂಸ್ಕರಣಾ ಸಾಮರ್ಥ್ಯ ಇರುವುದು ಈಗ ತೀರಾ ಸಹಜ ಎಂದು ನಾವು ಭಾವಿಸುತ್ತೇವೆ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರಲ್ಲಿ ಶೇ. ೬೫ರಷ್ಟು ಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ! ಇಷ್ಟೆಲ್ಲ ದೊಡ್ಡ ಸಂಖ್ಯೆಯ ಬಳಕೆದಾರರು ಇಂದಿಗೂ ಮೊಬೈಲ್ ಬಳಸುವುದು ಮುಖ್ಯವಾಗಿ ದೂರವಾಣಿ ಕರೆಗಳಿಗಷ್ಟೇ. ಹಾಗಾಗಿ ಅವರು ಮೂಲಭೂತ ಸೌಲಭ್ಯಗಳಷ್ಟೇ ಇರುವ ಮೊಬೈಲುಗಳನ್ನು ಇಷ್ಟಪಡುತ್ತಾರೆ. ಕರೆಮಾಡುವುದು, ಎಸ್ಸೆಮ್ಮೆಸ್ ಕಳುಹಿಸುವುದೇ ಮೊದಲಾದ ಸೀಮಿತ ಸೌಲಭ್ಯಗಳಿರುವ, ಕಡಿಮೆ ಬೆಲೆಗೆ ದೊರಕುವ ಇಂತಹ ಫೋನುಗಳನ್ನೇ 'ಫೀಚರ್ ಫೋನ್' ಎಂದು ಗುರುತಿಸಲಾಗುತ್ತದೆ. ಸ್ಮಾರ್ಟ್‌ಫೋನುಗಳಲ್ಲಿ ನಮಗಿಷ್ಟವಾದ ಆಪ್‌ಗಳನ್ನೆಲ್ಲ ಬಳಸುವಂತೆ ಈ ಫೋನುಗಳಲ್ಲಿ ಮಾಡಲಾಗುವುದಿಲ್ಲ - ಇಲ್ಲಿ ಯಾವೆಲ್ಲ ತಂತ್ರಾಂಶಗಳನ್ನು ಬಳಸಬಹುದೆಂದು ಫೋನಿನ ನಿರ್ಮಾತೃಗಳೇ ತೀರ್ಮಾನಿಸುತ್ತಾರೆ. ಸೀಮಿತ ಸೌಲಭ್ಯಗಳಿರುವುದರ ಅನುಕೂಲವೆಂದರೆ ಫೀಚರ್ ಫೋನುಗಳ ಬ್ಯಾಟರಿ ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ಹೆಚ್ಚುಕಾಲ ಬಾಳಿಕೆ ಬರುತ್ತದೆ. ಸದ್ಯದ ಬಹಳಷ್ಟು ಫೀಚರ್ ಫೋನುಗಳು ೨ಜಿ ಸಂಪರ್ಕವನ್ನಷ್ಟೇ ಬಳಸುತ್ತವೆ. ೩ಜಿ-೪ಜಿ ಸಂಪರ್ಕಗಳನ್ನು ಬಳಸುವ, ಹೆಚ್ಚುವರಿ ಸೌಲಭ್ಯಗಳನ್ನು ಹೊಂದಿರುವ ಫೀಚರ್ ಫೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೆಚ್ಚಿನ ಬಳಕೆದಾರರನ್ನು ಸ್ಮಾರ್ಟ್‌ಫೋನುಗಳತ್ತ ಸೆಳೆಯುವ ಪ್ರಯತ್ನವೂ ನಡೆದಿದೆ.

Favicon
ಫೇವೈಕನ್
(ರೂಪಿಸಬೇಕಿದೆ)
ಜಾಲತಾಣವನ್ನು ತೆರೆದಿದ್ದಾಗ ಬ್ರೌಸರ್ ಕಿಟಕಿಯ ಮೇಲ್ಭಾಗದಲ್ಲಿ ಕಾಣಸಿಗುವ ಲಾಂಛನ
ಅಂತರಜಾಲ ಸಂಪರ್ಕ ಬಳಸುವಾಗ ನಾವು ಒಂದಾದ ಮೇಲೆ ಒಂದರಂತೆ ಜಾಲತಾಣಗಳನ್ನು ತೆರೆಯುತ್ತಾ ಹೋಗುತ್ತೇವೆ. ಹಾಗೆ ತೆರೆದ ಜಾಲತಾಣಗಳು ಬೇರೆಬೇರೆ ಬ್ರೌಸರ್ ಕಿಟಕಿಗಳಲ್ಲೋ, ಒಂದೇ ಕಿಟಕಿಯ ವಿಭಿನ್ನ ಟ್ಯಾಬ್‌ಗಳಲ್ಲೋ ಕಾಣಿಸಿಕೊಳ್ಳುತ್ತವೆ ಎನ್ನುವುದೂ ನಮಗೆ ಗೊತ್ತು. ಇಂತಹ ಪ್ರತಿಯೊಂದು ಕಿಟಕಿಯ ಮೇಲ್ಭಾಗದಲ್ಲೂ (ಬ್ರೌಸರಿನ ಟೈಟಲ್ ಬಾರ್‌ನಲ್ಲಿ) ನಾವು ತೆರೆದಿರುವ ತಾಣದ ಬಗ್ಗೆ ಕೆಲವು ಪದಗಳು ಮೂಡಿಬರುತ್ತವೆ. ಈ ಹೆಸರಿನ ಪಕ್ಕದಲ್ಲೇ ಪುಟ್ಟದೊಂದು ಚಿತ್ರವೂ ಇರುತ್ತದೆ. ಈ ಚಿತ್ರವನ್ನು 'ಫೇವ್‌ಐಕನ್' ಎಂದು ಗುರುತಿಸಲಾಗುತ್ತದೆ. ಇದು 'ಫೇವರಿಟ್ ಐಕನ್' ಎನ್ನುವ ಹೆಸರಿನ ಹ್ರಸ್ವರೂಪ. ಗೂಗಲ್, ಫೇಸ್‌ಬುಕ್, ಜಿಮೇಲ್‌ಗಳಲ್ಲೆಲ್ಲ ಮಾಡಿದಂತೆ ಜಾಲತಾಣದ ಲಾಂಛನವನ್ನೇ ಅದರ ಫೇವ್‌ಐಕನ್ ಆಗಿಯೂ ಬಳಸುವುದು ಸಂಪ್ರದಾಯ. ಕೆಲ ತಾಣಗಳಲ್ಲಿ ಬೇರೆಯ ಚಿತ್ರಗಳೂ ಫೇವ್‌ಐಕನ್ ಆಗಿರುವುದುಂಟು. ಬ್ಲಾಗ್ ಸೇವೆ ಒದಗಿಸುವ ತಾಣದ ಲಾಂಛನವೇ ನಮ್ಮ ಬ್ಲಾಗುಗಳಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ; ಆದರೆ ಅದನ್ನು ನಮ್ಮ ಇಷ್ಟದ ಚಿತ್ರಕ್ಕೆ ಬದಲಿಸಿಕೊಳ್ಳುವುದೂ ಸುಲಭ. ಅಂದಹಾಗೆ ಬ್ರೌಸರುಗಳಲ್ಲಿ ಫೇವ್‌ಐಕನ್ ಪ್ರದರ್ಶಿಸುವ ಸೌಲಭ್ಯ ಪ್ರಾರಂಭವಾದದ್ದು ೧೯೯೯ರಲ್ಲಿ. ಈ ಸೌಲಭ್ಯವನ್ನು ಮೊದಲಿಗೆ ಪರಿಚಯಿಸಿದ ಬ್ರೌಸರ್ ಎಂಬ ಹೆಗ್ಗಳಿಕೆ ಆ ವರ್ಷ ಬಿಡುಗಡೆಯಾದ 'ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೫'ಗೆ ಸಲ್ಲುತ್ತದೆ. ಬ್ರೌಸರ್ ಬಳಕೆದಾರರು ತಮಗೆ ಅಚ್ಚುಮೆಚ್ಚಿನದೆಂದು (ಫೇವರಿಟ್) ಉಳಿಸಿಟ್ಟುಕೊಂಡ ಜಾಲತಾಣಗಳ ವಿಳಾಸದೊಡನೆ ಪ್ರದರ್ಶಿಸಲು ಈ ಚಿತ್ರದ ಪರಿಕಲ್ಪನೆಯನ್ನು ಹುಟ್ಟುಹಾಕಲಾಯಿತಂತೆ.

Face recognition
ಫೇಸ್ ರೆಕಗ್ನಿಶನ್
(ರೂಪಿಸಬೇಕಿದೆ)
ಮುಖಚರ್ಯೆಯನ್ನು ಗುರುತಿಸುವ ತಂತ್ರಜ್ಞಾನ
ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳೊತ್ತಿನ ಸಹಾಯದಿಂದ ವ್ಯಕ್ತಿಗಳನ್ನು ಗುರುತಿಸುವುದನ್ನು 'ಬಯೋಮೆಟ್ರಿಕ್ಸ್' ಪರಿಕಲ್ಪನೆ ಸಾಧ್ಯವಾಗಿಸುತ್ತದಲ್ಲ, ಮನುಷ್ಯನ ಮುಖಚರ್ಯೆಯನ್ನು ಕೂಡ ಇದೇ ಉದ್ದೇಶಕ್ಕೆ ಬಳಸುವುದು ಸಾಧ್ಯ. ಬೆರಳೊತ್ತನ್ನು ಗುರುತಿಸಲು ಫಿಂಗರ್‌ಪ್ರಿಂಟ್ ರೆಕಗ್ನಿಶನ್ ತಂತ್ರಜ್ಞಾನ ಬಳಕೆಯಾದಂತೆ ಮುಖಚರ್ಯೆಯನ್ನು ಗುರುತಿಸಲು 'ಫೇಸ್ ರೆಕಗ್ನಿಶನ್', ಅಂದರೆ ಮುಖಚರ್ಯೆಯನ್ನು ಗುರುತಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಮೂಗಿನ ಉದ್ದ-ಅಗಲ, ಕಣ್ಣಿನ ಸ್ಥಾನ, ಕೆನ್ನೆಯೆಲುಬಿನ ಆಕಾರ - ಹೀಗೆ ಮುಖದ ಅನೇಕ ಲಕ್ಷಣಗಳನ್ನು ದಾಖಲಿಸಿಕೊಂಡು ಗುರುತು ದೃಢೀಕರಣಕ್ಕಾಗಿ ಬಳಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ (ಹೀಗೆ ದಾಖಲಿಸಿಕೊಳ್ಳುವ ಮಾಹಿತಿಯನ್ನು 'ಫೇಸ್‌ಪ್ರಿಂಟ್' ಎಂದೂ ಗುರುತಿಸಲಾಗುತ್ತದೆ). ಒಮ್ಮೆ ಈ ಮಾಹಿತಿಯನ್ನೆಲ್ಲ ದಾಖಲಿಸಿಕೊಂಡಮೇಲೆ ಕ್ಯಾಮೆರಾ ಎದುರಿನ ವ್ಯಕ್ತಿಯ ಮುಖವನ್ನು ಇದರೊಡನೆ ಹೋಲಿಸಿನೋಡಿ ಅವರನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಸುರಕ್ಷತಾ ಕ್ರಮಗಳ ಅಂಗವಾಗಿ, ಹಣಕಾಸು ವ್ಯವಹಾರಗಳನ್ನು ದೃಢೀಕರಿಸಲು, ಗುಂಪಿನಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು - ಹೀಗೆ ಈ ತಂತ್ರಜ್ಞಾನ ಹಲವಾರು ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ. ಸಮಾಜಜಾಲದಲ್ಲಿ ಸೇರಿಸುವ ಚಿತ್ರಗಳಲ್ಲಿ ಯಾರಿದ್ದಾರೆ ಎಂದು ಊಹಿಸಿ ಹೇಳುತ್ತದಲ್ಲ, ಅದೂ ಈ ತಂತ್ರಜ್ಞಾನದ್ದೇ ಇನ್ನೊಂದು ರೂಪ. ಮೊಬೈಲ್ ಫೋನ್ ಸುರಕ್ಷತೆಗೆ ಪಾಸ್‌ವರ್ಡ್, ಫಿಂಗರ್‌ಪ್ರಿಂಟ್ ಇತ್ಯಾದಿಗಳನ್ನು ಬಳಸಿದಂತೆ ಮುಖಚರ್ಯೆಯನ್ನು ಗುರುತಿಸುವ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ಬೆಳಕು ಕಡಿಮೆಯಿದ್ದಾಗ, ವ್ಯಕ್ತಿಯ ಮುಖ ಅಷ್ಟೇನೂ ಸ್ಪಷ್ಟವಾಗಿ ಕಾಣದಿದ್ದಾಗ ಕೂಡ ಗುರುತಿಸುವಿಕೆ ಸರಿಯಾಗಿರುವಂತೆ ಮಾಡಲು ಫೇಸ್ ರೆಕಗ್ನಿಶನ್ ತಂತ್ರಜ್ಞಾನವನ್ನು ಸುಧಾರಿಸಲಾಗುತ್ತಿದೆ.

Firewall
ಫೈರ್‌ವಾಲ್
(ರೂಪಿಸಬೇಕಿದೆ)
ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಲು - ಅದರ ಸಂಯೋಜನೆಯನ್ನು ಬದಲಿಸಲು ನಡೆಯುವ ಅನಧಿಕೃತ ಪ್ರಯತ್ನಗಳನ್ನು ಗುರುತಿಸಿ ತಡೆಯುವ ವ್ಯವಸ್ಥೆ
ಕಂಪ್ಯೂಟರ್ ಜಾಲಗಳಲ್ಲಿ (ನೆಟ್‌ವರ್ಕ್) ಮಾಹಿತಿ ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವುದು ತೀರಾ ಸಾಮಾನ್ಯ. ಜಾಲಗಳ ಜಾಲವಾದ ಅಂತರಜಾಲದಲ್ಲಂತೂ ಮಾಹಿತಿಯ ಮಹಾಪೂರವೇ ಇರುತ್ತದೆ. ಹೀಗಿರುವಾಗ ನಮ್ಮ ಕಂಪ್ಯೂಟರಿನಿಂದ ಏನೆಲ್ಲ ಮಾಹಿತಿ ಹೊರಹೋಗುತ್ತಿದೆ, ಜಾಲದ ಸಂಪರ್ಕದಲ್ಲಿದ್ದಾಗ ಯಾರೆಲ್ಲ ನಮ್ಮ ಕಂಪ್ಯೂಟರನ್ನು ಪ್ರವೇಶಿಸಬಹುದು ಎನ್ನುವುದನ್ನೆಲ್ಲ ಗಮನಿಸಿಕೊಳ್ಳುವುದು ಅನಿವಾರ್ಯ. ಈ ಕೆಲಸಕ್ಕಾಗಿ ಬಳಕೆಯಾಗುವ ವ್ಯವಸ್ಥೆಯೇ 'ಫೈರ್‌ವಾಲ್'. ಹೆಸರೇ ಹೇಳುವಂತೆ ಅಂತರಜಾಲದ ಲೋಕದಲ್ಲಿ ನಮ್ಮ ಕಂಪ್ಯೂಟರಿಗೆ ಇದೊಂದು ಸುರಕ್ಷತಾ ಬೇಲಿಯಿದ್ದಂತೆ. ದುಷ್ಕರ್ಮಿಗಳು ನಮ್ಮ ಕಂಪ್ಯೂಟರನ್ನು ಪ್ರವೇಶಿಸಲು, ಅದರ ಸಂಯೋಜನೆಯನ್ನು ಬದಲಿಸಲು ಪ್ರಯತ್ನಿಸಿದರೆ ಅಂತಹ ಪ್ರಯತ್ನಗಳನ್ನು ಗುರುತಿಸಿ ವಿಫಲಗೊಳಿಸುವುದು ಫೈರ್‌ವಾಲ್‌ನ ಕೆಲಸ. ಫೈರ್‌ವಾಲ್‌ಗಳು ತಂತ್ರಾಂಶ ಹಾಗೂ ಯಂತ್ರಾಂಶ ಎರಡೂ ರೂಪಗಳಲ್ಲಿ ಇರಬಹುದು. ಇಂದಿನ ದಿನಗಳಲ್ಲಿ ಅಂತರಜಾಲ ಸಂಪರ್ಕ ವ್ಯಾಪಕವಾಗಿರುವುದರಿಂದ ಎಲ್ಲ ಕಂಪ್ಯೂಟರ್ ಬಳಕೆದಾರರೂ ಫೈರ್‌ವಾಲ್ ಬಳಸುವುದು ಒಳ್ಳೆಯ ಅಭ್ಯಾಸ. ಕೆಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (ಉದಾ: ವಿಂಡೋಸ್‌ನ ಕೆಲ ಆವೃತ್ತಿಗಳು) ಫೈರ್‌ವಾಲ್ ವ್ಯವಸ್ಥೆ ಪೂರ್ವನಿಯೋಜಿತವಾಗಿಯೇ ಇರುತ್ತದೆ. ಫೈರ್‌ವಾಲ್ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಿಕೊಂಡೂ ಬಳಸಬಹುದು; ಉತ್ತಮ ಗುಣಮಟ್ಟದ ತಂತ್ರಾಂಶವನ್ನು ನಂಬಲರ್ಹ ತಾಣಗಳಿಂದಲಷ್ಟೇ ಪಡೆದುಕೊಳ್ಳುವ ಎಚ್ಚರವೊಂದಿದ್ದರೆ ಸಾಕು! ಅಂದಹಾಗೆ ಸ್ಮಾರ್ಟ್‌ಫೋನ್‌ಗಳಲ್ಲೂ ಫೈರ್‌ವಾಲ್ ಸೌಲಭ್ಯ ನೀಡುವ ಕೆಲ ಆಪ್‌ಗಳಿವೆ. ಅಂತಹ ಆಪ್‌ಗಳನ್ನು ಬಳಸಲು ಕೊಂಚ ತಾಂತ್ರಿಕ ಪರಿಣತಿ ಅಪೇಕ್ಷಣೀಯ.

File Association
ಫೈಲ್ ಅಸೋಸಿಯೇಶನ್
(ರೂಪಿಸಬೇಕಿದೆ)
ಯಾವ ಬಗೆಯ ಕಡತವನ್ನು ಯಾವ ತಂತ್ರಾಂಶ ಬಳಸಿ ತೆರೆಯಬೇಕೆಂದು ಸೂಚಿಸುವ ಹೊಂದಾಣಿಕೆ
ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರುಗಳನ್ನು ಬಳಸುವಾಗ ಭಾರೀ ಪ್ರಮಾಣದ ಮಾಹಿತಿ ನಮ್ಮ ಸಂಪರ್ಕಕ್ಕೆ ಬರುವುದು ಸಾಮಾನ್ಯ. ಈ ಮಾಹಿತಿ ಬೇರೆಬೇರೆ ರೀತಿಯ ಕಡತಗಳ ರೂಪದಲ್ಲಿರಬಹುದು. ಇಂತಹ ಕಡತದಲ್ಲಿರುವ ಮಾಹಿತಿಯ ಸ್ವರೂಪ ಹಾಗೂ ಅದನ್ನು ಹೇಗೆ ಉಳಿಸಿಡಲಾಗಿದೆ ಎನ್ನುವುದನ್ನು ಅದರ 'ಫೈಲ್ ಟೈಪ್' ಅಥವಾ 'ಫೈಲ್ ಫಾರ್ಮ್ಯಾಟ್' ಸೂಚಿಸುತ್ತದೆ. ಕೆಲವು ಬಗೆಯ ಕಡತಗಳನ್ನು (ಉದಾ: 'ಪಿಎಸ್‌ಡಿ' ರೂಪದ ಫೋಟೋಶಾಪ್ ಚಿತ್ರ) ನಿರ್ದಿಷ್ಟ ತಂತ್ರಾಂಶದಲ್ಲಿ ಮಾತ್ರವೇ ತೆರೆಯಲು ಸಾಧ್ಯ. ಆದರೆ ಛಾಯಾಚಿತ್ರ, ಧ್ವನಿ, ಪಠ್ಯ ಮುಂತಾದ ಇನ್ನು ಕೆಲ ರೂಪದಲ್ಲಿರುವ ಕಡತಗಳನ್ನು ತೆರೆಯಲು ನಮ್ಮ ಆಯ್ಕೆಯ ಯಾವುದೇ ತಂತ್ರಾಂಶವನ್ನು ಬಳಸುವುದು ಸಾಧ್ಯ. ನಮ್ಮ ಕಂಪ್ಯೂಟರ್ ಇಲ್ಲವೇ ಫೋನಿನಲ್ಲಿ ಯಾವ ಬಗೆಯ ಕಡತವನ್ನು ಯಾವ ತಂತ್ರಾಂಶ ಬಳಸಿ ತೆರೆಯಬೇಕೆಂದು ಸೂಚಿಸುವ ಹೊಂದಾಣಿಕೆಯೇ 'ಫೈಲ್ ಅಸೋಸಿಯೇಶನ್'. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಬಳಕೆದಾರರು ನಿರ್ದಿಷ್ಟ ಬಗೆಯ ಕಡತದ ಮೇಲೆ ರೈಟ್ ಕ್ಲಿಕ್ ಮಾಡಿದಾಗ ಕಾಣುವ 'ಓಪನ್ ವಿಥ್' ಆಯ್ಕೆಯಡಿಯಲ್ಲಿ ಅದನ್ನು ಯಾವ ತಂತ್ರಾಂಶ ಬಳಸಿ ತೆರೆಯಬೇಕೆಂದು ಸೂಚಿಸುವುದು ಸಾಧ್ಯ. ಇಂತಹುದೇ ಸೌಲಭ್ಯ ಸ್ಮಾರ್ಟ್‌ಫೋನುಗಳಲ್ಲೂ ಇರುತ್ತದೆ (ಆಂಡ್ರಾಯ್ಡ್‌ನಲ್ಲಿ 'ಸೆಟಿಂಗ್ಸ್ > ಆಪ್ಸ್'): ನಿರ್ದಿಷ್ಟ ಜಾಲತಾಣದ ಕೊಂಡಿಯನ್ನು ಬ್ರೌಸರಿನಲ್ಲಿ ತೆರೆಯಬೇಕೋ ಆ ತಾಣದ ಆಪ್‌ನಲ್ಲಿ ತೆರೆಯಬೇಕೋ ಎನ್ನುವುದರಿಂದ ಪ್ರಾರಂಭಿಸಿ ಇಮೇಲ್ ವಿಳಾಸವೊಂದರ ಮೇಲೆ ಕ್ಲಿಕ್ ಮಾಡಿದಾಗ ಯಾವ ಆಪ್ ತೆರೆದುಕೊಳ್ಳಬೇಕು ಎನ್ನುವವರೆಗೆ ಹಲವು ಬಗೆಯ ಆಯ್ಕೆಗಳನ್ನು ಅಲ್ಲಿ ನಾವು ನೋಡಬಹುದು.

File extension
ಫೈಲ್ ಎಕ್ಸ್‌ಟೆನ್ಶನ್
(ರೂಪಿಸಬೇಕಿದೆ)
ಕಡತವೊಂದರ ಹೆಸರಿನ ಉತ್ತರಾರ್ಧ; ಅದು ಯಾವ ಬಗೆಯ ಕಡತ ಎನ್ನುವುದನ್ನು ಸೂಚಿಸುವ ವಿಶೇಷಣ
ಕಂಪ್ಯೂಟರಿನಲ್ಲಿ ಯಾವುದೇ ಕಡತವನ್ನು ಉಳಿಸಿಡುವಾಗ ಅದಕ್ಕೊಂದು ಹೆಸರಿಡುವುದು ನಮಗೆಲ್ಲ ಗೊತ್ತೇ ಇದೆ. ಕಡತಗಳನ್ನು ಹೀಗೆ ಉಳಿಸಿಡಲು ನಾವು ಯಾವ ತಂತ್ರಾಂಶವನ್ನು ಬಳಸುತ್ತೇವೋ ಅದಕ್ಕೆ ಅನುಗುಣವಾಗಿ ಕಡತದ ಹೆಸರಿಗೊಂದು ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ಸೇರ್ಪಡೆಯಾಗುವುದನ್ನು ನೀವು ಗಮನಿಸಿರಬಹುದು. ನೋಟ್‌ಪ್ಯಾಡ್ ಕಡತಗಳಿಗೆ '.ಟಿಎಕ್ಸ್‌ಟಿ', ಮೈಕ್ರೋಸಾಫ್ಟ್ ವರ್ಡ್ ಕಡತಕ್ಕೆ '.ಡಿಒಸಿ', ಸಿನಿಮಾ ಹಾಡಿನ ಫೈಲಿಗೆ '.ಎಂಪಿ೩' - ಹೀಗೆ ಸಾಗುತ್ತದೆ ಫೈಲ್ ಎಕ್ಸ್‌ಟೆನ್ಷನ್‌ಗಳ ಈ ಪಟ್ಟಿ. ಚಿತ್ರಗಳೂ ಅಷ್ಟೆ. ನಮ್ಮ ಕಂಪ್ಯೂಟರಿನಲ್ಲಿರುವ ಚಿತ್ರಗಳನ್ನೆಲ್ಲ ಒಟ್ಟುಸೇರಿಸಿ ನೋಡಿದರೆ ಆ ಕಡತಗಳ ಹೆಸರಿಗೆ ಬೇರೆಬೇರೆ ಬಗೆಯ ಎಕ್ಸ್‌ಟೆನ್ಷನ್‌ಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅವುಗಳಲ್ಲಿ ಕೆಲವು ಜೆಪಿಜಿ ಕಡತಗಳಾಗಿದ್ದರೆ ಇನ್ನು ಕೆಲವು ಬಿಎಂಪಿ, ಇನ್ನಷ್ಟು ಪಿಎನ್‌ಜಿ, ಒಂದೆರಡು ಪಿಎಸ್‌ಡಿ, ಮಿಕ್ಕವು ಪಿಎನ್‌ಜಿ. ಇವು, ಹಾಗೂ ಇಂತಹ ಇನ್ನೂ ಹಲವು ಎಕ್ಸ್‌ಟೆನ್ಷನ್‌ಗಳು ಕಂಪ್ಯೂಟರಿನಲ್ಲಿ ಆ ಚಿತ್ರಗಳನ್ನು ಹೇಗೆ ಉಳಿಸಿಡಲಾಗಿದೆ ಎನ್ನುವುದನ್ನು ಸೂಚಿಸುತ್ತವೆ. ಇವನ್ನು ಫೈಲ್ ಫಾರ್ಮ್ಯಾಟ್ಸ್ ಅಥವಾ ಫೈಲ್ ಟೈಪ್ಸ್ ಎಂದೂ ಕರೆಯುತ್ತಾರೆ. ಚಿತ್ರದ ಗಾತ್ರವನ್ನು ಕುಗ್ಗಿಸಲು ಬಳಸಲಾದ ವಿಧಾನ, ಚಿತ್ರವನ್ನು ರೂಪಿಸಲು ಬಳಕೆಯಾದ ತಂತ್ರಾಂಶ - ಇಂತಹ ಹಲವು ವಿವರಗಳನ್ನು ಫೈಲ್ ಫಾರ್ಮ್ಯಾಟುಗಳು ಹೇಳಬಲ್ಲವು. ಈ ಪೈಕಿ ಕೆಲವು ಬಗೆಯ ಕಡತಗಳನ್ನು ಸುಲಭವಾಗಿ ಎಲ್ಲ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳಲ್ಲೂ ವೀಕ್ಷಿಸಬಹುದಾದರೆ ಇನ್ನು ಕೆಲವನ್ನು (ಉದಾ: ಪಿಎಸ್‌ಡಿ - ಫೋಟೋಶಾಪ್ ಕಡತ) ತೆರೆಯಲು ನಿರ್ದಿಷ್ಟ ತಂತ್ರಾಂಶಗಳೇ ಬೇಕು.

File recovery
ಫೈಲ್ ರಿಕವರಿ
(ರೂಪಿಸಬೇಕಿದೆ)
ಸಾಮಾನ್ಯ ವಿಧಾನದಲ್ಲಿ ತೆರೆಯಲು ಸಾಧ್ಯವಾಗದ ಕಡತಗಳನ್ನು ವಿಶೇಷ ತಂತ್ರಾಂಶಗಳ ನೆರವಿನಿಂದ ತೆರೆಯುವ ಪ್ರಯತ್ನ
ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನೆಲ್ಲ ಮತ್ತೆ ಮತ್ತೆ ಬಳಸುತ್ತಿರುವುದು ಸುಲಭ, ನಿಜ. ಆದರೆ ಮಾಹಿತಿ ತುಂಬುವ - ಅಳಿಸುವ - ಮತ್ತೆ ತುಂಬುವ ಈ ಪ್ರಕ್ರಿಯೆ ಒಂದಷ್ಟು ಸಾರಿ ಪುನರಾವರ್ತನೆ ಆಗುತ್ತಿದ್ದಂತೆ ಆ ಸಾಧನದ ವಿಶ್ವಾಸಾರ್ಹತೆ ಕಡಿಮೆಯಾಗುತ್ತ ಬರುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಅದರಲ್ಲಿರುವ ಮಾಹಿತಿಯನ್ನು ಓದುವುದೇ ಸಾಧ್ಯವಾಗುವುದಿಲ್ಲ! ಹೀಗಾಗಲು ಹಲವು ಕಾರಣಗಳಿರಬಹುದು. ಬಹಳಷ್ಟು ಸಾರಿ ಬಳಸಿ ಹಳೆಯದಾಗಿರುವುದರಿಂದ ಅದು ಹಾಳಾಗಿರಬಹುದು, ಅಥವಾ ಬ್ಯಾಡ್ ಸೆಕ್ಟರ್ ಸಮಸ್ಯೆ ಸೃಷ್ಟಿಯಾಗಿರಬಹುದು. ಅಷ್ಟೇ ಏಕೆ, ವೈರಸ್ ಬಂದಿರುವ ಅಥವಾ ಕಂಪ್ಯೂಟರಿನಲ್ಲೇ ಸಮಸ್ಯೆಯಿರುವ ಸಾಧ್ಯತೆಯೂ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಮೊದಲು ಅದನ್ನು ಬೇರೊಂದು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಬಳಸಲು ಪ್ರಯತ್ನಿಸಬಹುದು. ಆಂಟಿವೈರಸ್ ತಂತ್ರಾಂಶ ಬಳಸಿ ವೈರಸ್ ಕಾಟವೇನಾದರೂ ಇದೆಯೇ ಎಂದೂ ಪರೀಕ್ಷಿಸಬಹುದು. ಇಷ್ಟಾದರೂ ಸಮಸ್ಯಾತ್ಮಕ ಮೆಮೊರಿ ಕಾರ್ಡ್ ಅಥವಾ ಪೆನ್‌ಡ್ರೈವನ್ನು ತೆರೆಯುವುದು ಸಾಧ್ಯವಾಗುತ್ತಿಲ್ಲ ಎಂದರೆ ಫೈಲ್ ರಿಕವರಿ ತಂತ್ರಾಂಶಗಳ ಮೊರೆಹೋಗಬೇಕಾದ್ದು ಅನಿವಾರ್ಯವಾಗುತ್ತದೆ. ಸಾಮಾನ್ಯ ಮಾರ್ಗದಲ್ಲಿ ಓದಲು ಸಾಧ್ಯವಾಗದ ಮಾಹಿತಿಯನ್ನು ಹಲವು ಬಗೆಯ ಶೇಖರಣಾ ಮಾಧ್ಯಮಗಳಿಂದ ಮರಳಿ ಪಡೆಯಲು ನೆರವಾಗುವುದು ಈ ತಂತ್ರಾಂಶಗಳ ವೈಶಿಷ್ಟ್ಯ. ಅಳಿಸಿಹೋದ ಮಾಹಿತಿಯನ್ನು ಮರಳಿ ಪಡೆಯುವಲ್ಲೂ ಈ ತಂತ್ರಾಂಶಗಳು ನೆರವಾಗಬಲ್ಲವು. ಹತ್ತಾರು ಬಗೆಯ ಫೈಲ್ ರಿಕವರಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ; ಅವುಗಳಲ್ಲಿ ಕೆಲವು ಉಚಿತವಾಗಿಯೂ ದೊರಕುವುದು ವಿಶೇಷ (ವಿವರಗಳಿಗೆ ಗೂಗಲ್ ಮಾಡಿ ನೋಡಬಹುದು). ಆದರೆ ನೆನಪಿರಲಿ: ಇಂತಹ ತಂತ್ರಾಂಶಗಳನ್ನು ಬಳಸಿದ ಮಾತ್ರಕ್ಕೆ ನಿಮ್ಮ ಮಾಹಿತಿಯೆಲ್ಲ ಸಿಕ್ಕಿಬಿಡುತ್ತದೆ ಎನ್ನುವ ಯಾವುದೇ ಖಾತ್ರಿ ಇರುವುದಿಲ್ಲ!


logo