logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Port
ಪೋರ್ಟ್
(ರೂಪಿಸಬೇಕಿದೆ)
ವಿದ್ಯುನ್ಮಾನ ಉಪಕರಣವೊಂದರ ಅಂತರ ಸಂಪರ್ಕ ಸಾಧನ; ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡಲೆಂದು ಸಿದ್ಧಪಡಿಸಿದ ತಂತ್ರಾಂಶವನ್ನು ಇನ್ನೊಂದೆಡೆಯೂ ಕೆಲಸಮಾಡುವಂತೆ ಮಾಡುವ ಪ್ರಕ್ರಿಯೆ; ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎಂದು ಸೂಚಿಸುವ ಸಂಖ್ಯೆ
ಪೋರ್ಟ್ ಎಂದಾಕ್ಷಣ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಿಸುವ ಪ್ರಕ್ರಿಯೆಯೇ ನಮ್ಮ ನೆನಪಿಗೆ ಬರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪೋರ್ಟ್ ಎನ್ನುವುದಕ್ಕೆ ಇನ್ನೂ ಕೆಲವು ಅರ್ಥಗಳಿವೆ. ಪೆನ್ ಡ್ರೈವ್, ಮೌಸ್, ಕೀಬೋರ್ಡ್, ಮಾನಿಟರ್ ಮುಂತಾದ ಯಂತ್ರಾಂಶಗಳನ್ನು ಕಂಪ್ಯೂಟರಿನೊಡನೆ ಬಳಸುತ್ತೇವಲ್ಲ, ಅವನ್ನೆಲ್ಲ ಸಂಪರ್ಕಿಸುವ ಅಂತರ ಸಂಪರ್ಕ ಸಾಧನಗಳನ್ನು (ಇಂಟರ್‌ಫೇಸ್) 'ಪೋರ್ಟ್'ಗಳೆಂದು ಗುರುತಿಸುತ್ತಾರೆ. ಮೊಬೈಲ್ ಫೋನಿಗೆ ಚಾರ್ಜಿಂಗ್ ಕೇಬಲ್ ಜೋಡಿಸುವುದು, ಟೀವಿಗೆ ಎಚ್‌ಡಿಎಂಐ ಸಂಪರ್ಕ ಕಲ್ಪಿಸುವುದೂ ಪೋರ್ಟ್‌ಗಳ ಮೂಲಕವೇ. ತಂತ್ರಾಂಶದ ಲೋಕದಲ್ಲೂ ಪೋರ್ಟ್ ಪರಿಕಲ್ಪನೆ ಇದೆ. ಯಾವುದೋ ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ (ಉದಾ: ವಿಂಡೋಸ್) ಕೆಲಸಮಾಡಲೆಂದು ಸಿದ್ಧಪಡಿಸಿದ ಕಂಪ್ಯೂಟರ್ ತಂತ್ರಾಂಶ ಅಥವಾ ಮೊಬೈಲ್ ಆಪ್ ಅನ್ನು ಇನ್ನೊಂದು ವ್ಯವಸ್ಥೆಯಲ್ಲೂ (ಉದಾ: ಮ್ಯಾಕ್) ಕೆಲಸಮಾಡುವಂತೆ ಪರಿವರ್ತಿಸುವ ಕೆಲಸವನ್ನು 'ಪೋರ್ಟ್ ಮಾಡುವುದು' ಎಂದು ಕರೆಯುತ್ತಾರೆ. ಇನ್ನು ಅಂತರಜಾಲದ ವಿಷಯಕ್ಕೆ ಬಂದರೆ ಅಲ್ಲೂ ಪೋರ್ಟ್‌ಗಳ ಪ್ರಸ್ತಾಪ ಕೇಳಸಿಗುತ್ತದೆ. ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎನ್ನುವುದನ್ನು 'ಇಂಟರ್‌ನೆಟ್ ಪೋರ್ಟ್' ಸೂಚಿಸುತ್ತದೆ. ಜಾಲತಾಣಗಳನ್ನು ಪ್ರದರ್ಶಿಸಲು, ಇಮೇಲ್ ಸಂದೇಶಗಳನ್ನು ನಿಭಾಯಿಸಲು, ಎಫ್‌ಟಿಪಿ ಮನವಿಗಳಿಗೆ ಸ್ಪಂದಿಸಲು ಸರ್ವರ್‌ಗಳು ಬೇರೆಬೇರೆ ಪೋರ್ಟ್‌ಗಳನ್ನು ಬಳಸುತ್ತವೆ. ಇಂತಹ ಪೋರ್ಟ್‌ಗಳನ್ನು ನಿರ್ದಿಷ್ಟ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಕೆಲವೊಮ್ಮೆ ಈ ಸಂಖ್ಯೆಗಳನ್ನು ಜಾಲತಾಣದ ವಿಳಾಸದಲ್ಲೇ ಬಳಸುವುದೂ ಇದೆ (ಉದಾ: http://www.ejnana.com:80/).

Proximity Sensor
ಪ್ರಾಕ್ಸಿಮಿಟಿ ಸೆನ್ಸರ್
(ರೂಪಿಸಬೇಕಿದೆ)
ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು ಗ್ರಹಿಸುವ ಸಾಧನ
ಈಗಿನ ಮೊಬೈಲುಗಳಲ್ಲಿ ಹಲವಾರು ಬಗೆಯ ಸೆನ್ಸರುಗಳ ಬಳಕೆ ಸರ್ವೇಸಾಮಾನ್ಯ. ಇಂತಹ ಸೆನ್ಸರುಗಳ ಪೈಕಿ ಪ್ರಾಕ್ಸಿಮಿಟಿ ಸೆನ್ಸರ್ ಕೂಡ ಒಂದು. ಪ್ರಾಕ್ಸಿಮಿಟಿ ಎಂದರೆ ಸಾಮೀಪ್ಯ ಎಂದರ್ಥ. ನಮ್ಮ ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು - ಭೌತಿಕ ಸಂಪರ್ಕದ ಅಗತ್ಯವಿಲ್ಲದೆಯೇ - ಗ್ರಹಿಸುವ ಸಾಧನ ಪ್ರಾಕ್ಸಿಮಿಟಿ ಸೆನ್ಸರ್. ಬಹುತೇಕ ಮೊಬೈಲುಗಳ ಮೇಲ್ತುದಿಯಲ್ಲಿ, ಇಯರ್‌ಪೀಸ್ ಹಾಗೂ ಸೆಲ್ಫಿ ಕ್ಯಾಮೆರಾದ ಆಸುಪಾಸಿನಲ್ಲಿ ನಾವು ಇದನ್ನು ನೋಡಬಹುದು. ನಮಗೆ ಬೇಕಾದ ನಂಬರ್ ಡಯಲ್ ಮಾಡಿ ಮೊಬೈಲನ್ನು ಕಿವಿಯ ಬಳಿ ಕೊಂಡೊಯ್ದ ತಕ್ಷಣವೇ ಅದರ ಪರದೆ ಆರಿಹೋಗುತ್ತದಲ್ಲ, ಆ ವಿದ್ಯಮಾನಕ್ಕೆ ಕಾರಣವಾಗುವುದು ಇದೇ ಪ್ರಾಕ್ಸಿಮಿಟಿ ಸೆನ್ಸರ್. ಕರೆಯ ನಡುವೆ ನಮ್ಮ ಕಿವಿಯೋ ಕೆನ್ನೆಯೋ ಟಚ್‌ಸ್ಕ್ರೀನ್‌ಗೆ ತಗುಲಿ ಅನಪೇಕ್ಷಿತ ಪರಿಣಾಮಗಳಾಗುವುದನ್ನು ಇದು ತಡೆಯುತ್ತದೆ; ನಾವು ಮಾತನಾಡುತ್ತಿದ್ದಷ್ಟು ಹೊತ್ತು ಪರದೆಯನ್ನು ಬೆಳಗಲು ಬ್ಯಾಟರಿ ವ್ಯರ್ಥವಾಗುವುದನ್ನೂ ತಪ್ಪಿಸುತ್ತದೆ. ಅಷ್ಟೇ ಅಲ್ಲ, ಫೋನನ್ನು ಕಿವಿಯಿಂದ ದೂರಕ್ಕೆ ಕೊಂಡೊಯ್ದ ಕೂಡಲೆ ಅದರ ಪರದೆ ಮತ್ತೆ ಚಾಲೂ ಆಗುವಂತೆ ಮಾಡುವುದೂ ಇದೇ ಸಾಧನದ ಕೆಲಸ. ಅಂದಹಾಗೆ ಪ್ರಾಕ್ಸಿಮಿಟಿ ಸೆನ್ಸರ್ ಬಳಕೆ ಮೊಬೈಲ್ ಫೋನುಗಳಿಗಷ್ಟೇ ಸೀಮಿತವೇನಲ್ಲ. ಈ ಸಾಧನಕ್ಕೆ ಹಲವಾರು ಔದ್ಯಮಿಕ ಉಪಯೋಗಗಳೂ ಇವೆ. ಅಂಗಾಂಗಗಳ ಚಲನೆಯ ಮೂಲಕ ವಿದ್ಯುನ್ಮಾನ ಸಾಧನಗಳನ್ನು ನಿಯಂತ್ರಿಸುವ ಜೆಸ್ಚರ್ ಕಂಟ್ರೋಲ್ ತಂತ್ರಜ್ಞಾನದಲ್ಲೂ ಕ್ಯಾಮೆರಾ ಬದಲಿಗೆ ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಬಳಸುವ ಪ್ರಯತ್ನ ನಡೆದಿದೆ.

Processor
ಪ್ರಾಸೆಸರ್
(ರೂಪಿಸಬೇಕಿದೆ)
ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ವಿದ್ಯುನ್ಮಾನ ಸಾಧನಗಳ ಕೇಂದ್ರೀಯ ಸಂಸ್ಕರಣ ಘಟಕ (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ ಅಥವಾ ಸಿಪಿಯು); ಈ ಸಾಧನಗಳ ಕಾರ್ಯಾಚರಣೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಯಂತ್ರಾಂಶ
ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್‌ನ ಜವಾಬ್ದಾರಿ. ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ ೩ ಗಿಗಾಹರ್ಟ್ಸ್‌ನದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್ಸ್ ಎನ್ನುವುದು ಇದರ ಏಕಮಾನ. ಪ್ರಾಸೆಸರ್ ಕಾರ್ಯಕ್ಷಮತೆ ಅದರ ಕ್ಲಾಕ್ ಸ್ಪೀಡ್ ಜೊತೆಗೆ ಇನ್ನೂ ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ. ಅದರಲ್ಲಿರುವ ತಿರುಳುಗಳ (ಕೋರ್) ಸಂಖ್ಯೆ ಇಂತಹ ಸಂಗತಿಗಳಲ್ಲೊಂದು. ಒಂದು ಪ್ರಾಸೆಸರ್‌ನಲ್ಲಿ ಎರಡು ತಿರುಳುಗಳಿವೆ (ಡ್ಯುಯಲ್ ಕೋರ್) ಎನ್ನುವುದಾದರೆ ಸೈದ್ಧಾಂತಿಕವಾಗಿ ಅದು ತನ್ನ ಕೆಲಸಗಳನ್ನು ಎರಡು ಪಟ್ಟು ವೇಗವಾಗಿ ಮಾಡಬಲ್ಲದು. ಅಷ್ಟೇ ಅಲ್ಲ, ವಿವಿಧ ಕೆಲಸಗಳನ್ನು ಈ ತಿರುಳುಗಳು ತಮ್ಮ ನಡುವೆ ಹಂಚಿಕೊಳ್ಳುವುದರಿಂದ ಒಂದೇ ಸಮಯಕ್ಕೆ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುವುದು (ಮಲ್ಟಿ ಟಾಸ್ಕಿಂಗ್) ಕೂಡ ಸಾಧ್ಯವಾಗುತ್ತದೆ. ಒಂದು-ಎರಡು ತಿರುಳುಗಳ ಪ್ರಾಸೆಸರ್‌ಗಳಿಗಿಂತ ನಾಲ್ಕು ತಿರುಳುಗಳ 'ಕ್ವಾಡ್-ಕೋರ್', ಎಂಟು ತಿರುಳುಗಳ 'ಆಕ್ಟಾ-ಕೋರ್' ಪ್ರಾಸೆಸರ್ ಕಾರ್ಯಕ್ಷಮತೆ ಹೆಚ್ಚು ಎನ್ನುವುದಕ್ಕೆ ಇದೇ ಕಾರಣ.

Predictive Text Input
ಪ್ರೆಡಿಕ್ಟಿವ್ ಟೆಕ್ಸ್ಟ್ ಇನ್‌ಪುಟ್
(ರೂಪಿಸಬೇಕಿದೆ)
ಟೈಪಿಸಿದ ಮೊದಲ ಕೆಲ ಅಕ್ಷರಗಳ ಆಧಾರದ ಮೇಲೆ ಪದವನ್ನು ಊಹಿಸುವ, ಆ ಮೂಲಕ ಮಿಕ್ಕ ಅಕ್ಷರಗಳನ್ನು ಟೈಪಿಸುವ ಕೆಲಸವನ್ನು ತಪ್ಪಿಸಲು ನೆರವಾಗುವ ವ್ಯವಸ್ಥೆ
ಹಿಂದಿನ ಕಾಲದ ಎಸ್ಸೆಮ್ಮೆಸ್ ಇರಲಿ, ಇಂದಿನ ವಾಟ್ಸ್‌ಆಪ್ ಇರಲಿ, ಮೆಸೇಜ್ ಕಳಿಸಲು ಮೊಬೈಲ್ ಫೋನ್ ಬಳಸುವುದು ತೀರಾ ಸಾಮಾನ್ಯವೆನ್ನಿಸುವ ಸಂಗತಿ. ಸಾಮಾನ್ಯ ಮೊಬೈಲಿನ ಕೀಪ್ಯಾಡಿನಲ್ಲೇ ಕಂಪ್ಯೂಟರ್ ಕೀಲಿಮಣೆಗಿಂತ ವೇಗವಾಗಿ ಟೈಪ್ ಮಾಡಬಲ್ಲವರು ಇದ್ದಾರೆ. ಇನ್ನು ಸ್ಮಾರ್ಟ್‌ಫೋನಿನಲ್ಲಂತೂ ಕಂಪ್ಯೂಟರ್ ಕೀಲಿಮಣೆಯ ವಿನ್ಯಾಸವನ್ನೇ ಹೋಲುವ ವ್ಯವಸ್ಥೆಗಳು ಬಂದಿವೆ. ಆದರೂ ಮೊಬೈಲಿನ ಪುಟ್ಟ ಕೀಪ್ಯಾಡನ್ನು ಕುಟ್ಟುವುದು, ಸ್ಮಾರ್ಟ್‌ಫೋನ್ ಪರದೆಯ ಮೇಲೆ ಕಾಣುವ ಅಕ್ಷರಗಳನ್ನು ಮುಟ್ಟುವುದು ಹಲವರಿಗೆ ಇನ್ನೂ ಕಿರಿಕಿರಿಯ ಸಂಗತಿ. ಈ ಕಿರಿಕಿರಿಯನ್ನು ಕೊಂಚಮಟ್ಟಿಗೆ ನಿವಾರಿಸುವುದು 'ಪ್ರೆಡಿಕ್ಟಿವ್ ಟೆಕ್ಸ್ಟ್' ವ್ಯವಸ್ಥೆ. ನಾವು ಟೈಪಿಸಿದ ಮೊದಲ ಕೆಲ ಅಕ್ಷರಗಳ ಆಧಾರದ ಮೇಲೆ ಪದವನ್ನು ಊಹಿಸುವುದು, ಆ ಮೂಲಕ ಮಿಕ್ಕ ಅಕ್ಷರಗಳನ್ನು ಟೈಪಿಸುವ ಕೆಲಸ ತಪ್ಪಿಸುವುದು ಈ ವ್ಯವಸ್ಥೆಯ ವೈಶಿಷ್ಟ್ಯ. ಸಾಮಾನ್ಯ ಮೊಬೈಲಿನ ಕೀಪ್ಯಾಡಿನಲ್ಲಿ ಎಲ್ಲ ಅಕ್ಷರಗಳೂ ಒಂಬತ್ತೇ ಕೀಲಿಗಳಲ್ಲಿ (೧-೯) ಅಡಕವಾಗಿರುತ್ತವಲ್ಲ, ನಾವು ಯಾವೆಲ್ಲ ಕೀಲಿ ಒತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ಪದ ಯಾವುದಿರಬಹುದು ಎಂದು ಊಹಿಸಿಕೊಡುವ ಕೆಲಸವನ್ನು T9 (ಟೆಕ್ಸ್ಟ್ ಆನ್ ೯ ಕೀಸ್) ಎಂಬ ಜನಪ್ರಿಯ ವ್ಯವಸ್ಥೆ ಮಾಡುತ್ತದೆ. ಟಚ್‌ಸ್ಕ್ರೀನ್ ಮೇಲೆ ಮೂಡುವ ಕೀಲಿಮಣೆಗಳಲ್ಲೂ ಇಂತಹುದೇ ಕೆಲಸಮಾಡುವ ಅನೇಕ ವ್ಯವಸ್ಥೆಗಳನ್ನು ನಾವು ಬಹುತೇಕ ಎಲ್ಲ ಫೋನುಗಳಲ್ಲೂ ನೋಡಬಹುದು. ಇಂಗ್ಲಿಷ್ ಮಾತ್ರವೇ ಏಕೆ, ಈ ವ್ಯವಸ್ಥೆಗಳು ಕನ್ನಡ ಸೇರಿದಂತೆ ಹಲವು ಸ್ಥಳೀಯ ಭಾಷೆಗಳಲ್ಲೂ ಇವೆ.

Primary Memory
ಪ್ರೈಮರಿ ಮೆಮೊರಿ
(ರೂಪಿಸಬೇಕಿದೆ)
ವಿದ್ಯುನ್ಮಾನ ಸಾಧನಗಳಲ್ಲಿ ತಕ್ಷಣಕ್ಕೆ ಬೇಕಾದ ದತ್ತಾಂಶ-ಮಾಹಿತಿಯನ್ನೆಲ್ಲ ಉಳಿಸಿಟ್ಟುಕೊಳ್ಳುವ ಮಾಧ್ಯಮ
ಕಂಪ್ಯೂಟರಿನ ಕೆಲಸಗಳನ್ನೆಲ್ಲ ಅದರ ಪ್ರಾಸೆಸರ್ ನಿರ್ವಹಿಸುತ್ತದೆ ನಿಜ. ಆದರೆ ಆ ಕೆಲಸಗಳಿಗೆ ಬೇಕಾದ ದತ್ತಾಂಶ ಮತ್ತು ಮಾಹಿತಿ ಎಲ್ಲವನ್ನೂ ಶೇಖರಿಸಿಟ್ಟುಕೊಳ್ಳಲು ಬೇಕಾದ ಜ್ಞಾಪಕ ಶಕ್ತಿ ಅದರಲ್ಲಿರುವುದಿಲ್ಲ. ಈಗ ನೀವೊಂದು ಪತ್ರವನ್ನು ಟೈಪ್ ಮಾಡುತ್ತಿದ್ದೀರಿ ಎಂದುಕೊಳ್ಳೋಣ. ಹೊಸದೊಂದು ಕಡತ ತೆರೆದು ಟೈಪ್ ಮಾಡಲು ಶುರುಮಾಡಿದ ತಕ್ಷಣ ಅದೇನೂ ನಿಮ್ಮ ಕಂಪ್ಯೂಟರಿನ ಹಾರ್ಡ್‌ಡಿಸ್ಕ್‌ನಲ್ಲಿ ಹೋಗಿ ಕುಳಿತುಕೊಳ್ಳುವುದಿಲ್ಲ. ಉಳಿಸಬೇಕೋ ಬೇಡವೋ ಎಂದು ತೀರ್ಮಾನಿಸಿ, ಕಡತಕ್ಕೊಂದು ಹೆಸರು ಕೊಟ್ಟು, ಇದನ್ನು ಉಳಿಸಿಡು ಎಂದು ಹೇಳುವವರೆಗೂ ನೀವು ಟೈಪ್ ಮಾಡಿದ್ದೆಲ್ಲ ರ್‍ಯಾಮ್ ಅಥವಾ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯಲ್ಲಿ ಉಳಿದುಕೊಂಡಿರುತ್ತದೆ. ಕಂಪ್ಯೂಟರಿನ ಪ್ರೈಮರಿ ಮೆಮೊರಿಗೆ ರ್‍ಯಾಮ್ ಒಂದು ಉದಾಹರಣೆ. ತಾನು ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಪ್ರಾಸೆಸರ್ ಇದರಲ್ಲಿ ಉಳಿಸಿಡುತ್ತದೆ. ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ಟೈಪ್ ಮಾಡುತ್ತಿದ್ದ ಇನ್ನೂ ಸೇವ್ ಮಾಡದ ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ! ಹಾಗೆಂದಮಾತ್ರಕ್ಕೆ ಪ್ರೈಮರಿ ಮೆಮೊರಿಯ ಹಣೆಬರಹವೇ ಇಷ್ಟು ಅಂತೇನೂ ಇಲ್ಲ. ಪ್ರೈಮರಿ ಮೆಮೊರಿಗೆ ಇನ್ನೊಂದು ಉದಾಹರಣೆಯಾದ ರೀಡ್ ಓನ್ಲಿ ಮೆಮೊರಿ ಅಥವಾ ರಾಮ್‌ನ ಕತೆಯೇ ಬೇರೆ. ಇದರ ನೆನಪಿನಲ್ಲಿರುವ ಸಂಗತಿಗಳೆಲ್ಲ ಕರೆಂಟಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತವೆ. ಆದರೆ ರಾಮ್‌ನಲ್ಲಿರುವುದನ್ನು ಓದುವುದು ಮಾತ್ರ ಸಾಧ್ಯ; ಬದಲಾಯಿಸುವಂತಿಲ್ಲ. ಕಂಪ್ಯೂಟರ್‌ನ ಕೆಲಸ ಪ್ರಾರಂಭವಾಗಲು ಬೇಕಾದ ಕೆಲ ನಿರ್ದೇಶನಗಳು ಇಲ್ಲಿ ಶೇಖರವಾಗಿರುತ್ತವೆ.

Plugin
ಪ್ಲಗಿನ್
(ರೂಪಿಸಬೇಕಿದೆ)
ನಿರ್ದಿಷ್ಟ ತಂತ್ರಾಂಶದ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಸೇರಿಸುವ ಸೌಲಭ್ಯ
ತಂತ್ರಾಂಶಗಳು ಎಷ್ಟೆಲ್ಲ ಕೆಲಸ ಮಾಡಿದರೂ ನಮಗೆ ಅದರಲ್ಲಿ ಒಂದಲ್ಲ ಒಂದು ಕೊರತೆ ಕಾಣಸಿಗುವುದು ಸಾಮಾನ್ಯ. ಬ್ರೌಸರ್ ವಿಷಯವನ್ನೇ ತೆಗೆದುಕೊಳ್ಳಿ - ಬೇರೆಬೇರೆ ಜಾಲತಾಣಗಳ ಸೇವೆಯನ್ನು, ನಮ್ಮ ಕಂಪ್ಯೂಟರಿನಲ್ಲಿರುವ ಇತರ ತಂತ್ರಾಂಶಗಳನ್ನು ಬ್ರೌಸರ್ ಕಿಟಕಿಯಿಂದಲೇ ಬಳಸುವಂತಿದ್ದರೆ ಎಷ್ಟು ಚೆಂದ ಅಲ್ಲವೇ? ನಿರ್ದಿಷ್ಟ ತಂತ್ರಾಂಶದ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಸೇರಿಸುವ ಸೌಲಭ್ಯಗಳು ಈ ಆಲೋಚನೆಯನ್ನು ಕಾರ್ಯಗತಗೊಳಿಸಬಲ್ಲವು. ಇಂತಹ ಸೌಲಭ್ಯಗಳನ್ನು 'ಪ್ಲಗಿನ್'ಗಳೆಂದು ಕರೆಯಲಾಗುತ್ತದೆ. ಪ್ರತ್ಯೇಕ ತಂತ್ರಾಂಶವನ್ನು ಬಳಸುವ ಅಗತ್ಯವಿಲ್ಲದೆ ಬ್ರೌಸರ್ ಪರದೆಯೊಳಗೇ ಪಿಡಿಎಫ್ ಕಡತಗಳನ್ನು ತೆರೆಯುವುದು ಸಾಧ್ಯವಾಗುತ್ತದಲ್ಲ, ಅದಕ್ಕೆ ಇಂತಹ ಪ್ಲಗಿನ್‌ಗಳೇ ಕಾರಣ. ಇನ್ನೊಂದು ತಂತ್ರಾಂಶವನ್ನೋ ಜಾಲತಾಣವನ್ನೋ ಬಳಸುವುದಕ್ಕಷ್ಟೇ ಸೀಮಿತವಾಗುವುದರ ಬದಲು ಬ್ರೌಸರ್‌ಗೆ ಹೊಸ ಅನುಕೂಲತೆಗಳನ್ನು (ಉದಾ: ಹೊಸ ಮೆನು ಆಯ್ಕೆಗಳು - ಬಟನ್‌ಗಳು ಇತ್ಯಾದಿ) ಸೇರಿಸುವ ಸೌಲಭ್ಯಗಳೂ ಇವೆ. ಇಂತಹ ಸೌಲಭ್ಯಗಳನ್ನು 'ಬ್ರೌಸರ್ ಎಕ್ಸ್‌ಟೆನ್ಷನ್', ಅಂದರೆ ವಿಸ್ತರಣೆಗಳೆಂದು ಗುರುತಿಸಲಾಗುತ್ತದೆ. ದುರುದ್ದೇಶಪೂರಿತ ಅಥವಾ ಅಸಮರ್ಪಕ ವಿನ್ಯಾಸವಿರುವ ಪ್ಲಗಿನ್‌ಗಳ ಬಳಕೆ ಸುರಕ್ಷತೆಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ನಮ್ಮ ಬ್ರೌಸರಿನಲ್ಲಿ ಅಳವಡಿಸಲಾಗಿರುವ ಪ್ಲಗಿನ್‌ಗಳನ್ನು, ಎಕ್ಸ್‌ಟೆನ್ಷನ್‌ಗಳನ್ನು ಆಗಿಂದಾಗ್ಗೆ ಪರಿಶೀಲಿಸಿ ಅನಗತ್ಯವಾದವುಗಳನ್ನು ತೆಗೆದುಹಾಕುವುದು ಒಳ್ಳೆಯ ಅಭ್ಯಾಸ. ಬ್ರೌಸರಿನ ಸೆಟಿಂಗ್ಸ್ ಮೆನು ಮೂಲಕ ಈ ಕೆಲಸ ಮಾಡುವುದು ಸಾಧ್ಯ.

Function Key
ಫಂಕ್ಷನ್ ಕೀ
(ರೂಪಿಸಬೇಕಿದೆ)
ಕಂಪ್ಯೂಟರ್ ಕೀಬೋರ್ಡಿನಲ್ಲಿ ನಿರ್ದಿಷ್ಟ ಪೂರ್ವನಿರ್ಧಾರಿತ ಕೆಲಸಗಳಿಗಾಗಿ (ಫಂಕ್ಷನ್) ಬಳಕೆಯಾಗುವ ಕೀಲಿಗಳು
ಕಂಪ್ಯೂಟರ್ ಕೀಲಿಮಣೆಯಲ್ಲಿ ಹಲವು ಬಗೆಯ ಕೀಲಿಗಳಿರುವುದನ್ನು ನಾವು ನೋಡಬಹುದು. ಈ ಪೈಕಿ ಕೆಲವು ಅಕ್ಷರ - ಅಂಕಿ - ಲೇಖನಚಿಹ್ನೆಗಳನ್ನು ಮೂಡಿಸಲು ಬಳಕೆಯಾದರೆ ಇನ್ನು ಕೆಲವು ವಿಶಿಷ್ಟ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಕೀಲಿಮಣೆಯ ಮೊದಲ ಸಾಲಿನಲ್ಲಿ ಕಾಣಸಿಗುವ, ಇಂಗ್ಲಿಷಿನ 'ಎಫ್' ಅಕ್ಷರದಿಂದ ಶುರುವಾಗುವ ಹನ್ನೆರಡು ಕೀಲಿಗಳು (F1-F12) ಈ ಪೈಕಿ ಎರಡನೆಯ ಗುಂಪಿಗೆ ಸೇರುತ್ತವೆ. ಈ ಕೀಲಿಗಳನ್ನು 'ಫಂಕ್ಷನ್ ಕೀ'ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕಾಣಸಿಗುವ 'ಎಫ್' ಅಕ್ಷರ 'ಫಂಕ್ಷನ್' ಎಂಬ ಹೆಸರನ್ನು ಸೂಚಿಸುತ್ತದೆ. ನಿರ್ದಿಷ್ಟ ಪೂರ್ವನಿರ್ಧಾರಿತ ಕೆಲಸಗಳಿಗಾಗಿ (ಫಂಕ್ಷನ್) ಬಳಕೆಯಾಗುವುದು ಈ ಕೀಲಿಗಳ ವೈಶಿಷ್ಟ್ಯ. ಇವುಗಳನ್ನು ಪ್ರತ್ಯೇಕವಾಗಿ ಬಳಸುವ ಮೂಲಕ (ಉದಾ: ಸಹಾಯ ಪಡೆಯಲು 'F1') ಅಥವಾ ಇತರ ಕೀಲಿಗಳೊಡನೆ ಬಳಸುವ ಮೂಲಕ (ಉದಾ: ಕಿಟಕಿ ಮುಚ್ಚಲು 'Alt+F4') ಬೇರೆಬೇರೆ ಕೆಲಸಗಳನ್ನು ಸಾಧಿಸಿಕೊಳ್ಳಬಹುದು. ಬಹುತೇಕ ಕೀಬೋರ್ಡ್ ಶಾರ್ಟ್‌ಕಟ್‌ಗಳು ಫಂಕ್ಷನ್ ಕೀಲಿಗಳನ್ನು ಬಳಸುತ್ತವೆ. ಈ ಕೀಲಿಗಳ ಕಾರ್ಯಾಚರಣೆ ನಾವು ಬಳಸುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ಬದಲಾಗಬಹುದು. ನಿರ್ದಿಷ್ಟ ಫಂಕ್ಷನ್ ಕೀಲಿಯನ್ನು ಹಲವು ತಂತ್ರಾಂಶಗಳು ಒಂದೇ ಉದ್ದೇಶಕ್ಕೆ ಬಳಸುವ ಉದಾಹರಣೆಗಳೂ ಇವೆ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡುವ ಅನೇಕ ತಂತ್ರಾಂಶಗಳು ಸಹಾಯ ಪಡೆಯಲು F1, ರಿಫ್ರೆಶ್ ಮಾಡಲು F5, ಕಿಟಕಿ ಮುಚ್ಚಲು Alt+F4 ಮುಂತಾದ ಕೀಲಿಗಳನ್ನು ಬಳಸುವುದನ್ನು ಇಲ್ಲಿ ಉದಾಹರಿಸಬಹುದು.

Firmware
ಫರ್ಮ್‌ವೇರ್
(ರೂಪಿಸಬೇಕಿದೆ)
ನಿರ್ದಿಷ್ಟ ಯಂತ್ರಾಂಶದ ಜೊತೆಗಷ್ಟೇ ಕೆಲಸಮಾಡುವ, ಸೀಮಿತ ಉದ್ದೇಶದ ತಂತ್ರಾಂಶ
ಮಾಹಿತಿ ತಂತ್ರಜ್ಞಾನ ಎಂದಾಕ್ಷಣ ಹಾರ್ಡ್‌ವೇರ್ (ಯಂತ್ರಾಂಶ) ಹಾಗೂ ಸಾಫ್ಟ್‌ವೇರ್‌ಗಳ (ತಂತ್ರಾಂಶ) ಪ್ರಸ್ತಾಪ ಬರುವುದು ಸಾಮಾನ್ಯ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನ ಉದಾಹರಣೆಯನ್ನೇ ತೆಗೆದುಕೊಂಡರೆ ತಂತ್ರಾಂಶದ ಸಹಾಯದಿಂದ ನಾವು ಅದರ ಭೌತಿಕ ಭಾಗಗಳನ್ನು - ಅಂದರೆ ಯಂತ್ರಾಂಶವನ್ನು - ಬಳಸುವುದು ಸಾಧ್ಯವಾಗುತ್ತದೆ. ಕಂಪ್ಯೂಟರು - ಸ್ಮಾರ್ಟ್‌ಫೋನುಗಳಷ್ಟೇ ಏಕೆ, ಡಿಜಿಟಲ್ ಕ್ಯಾಮೆರಾ, ಟೀವಿಯ ಸೆಟ್ ಟಾಪ್ ಬಾಕ್ಸ್, ಅಂತರಜಾಲ ಸಂಪರ್ಕ ಕಲ್ಪಿಸುವ ಮೋಡೆಮ್ - ಹೀಗೆ ಇನ್ನೂ ಅದೆಷ್ಟೋ ಸಾಧನಗಳು ಕೆಲಸಮಾಡಲು ತಂತ್ರಾಂಶ ಬೇಕು. ಕಂಪ್ಯೂಟರಿನಲ್ಲೋ ಸ್ಮಾರ್ಟ್‌ಫೋನಿನಲ್ಲೋ ಮಾಡಿದಂತೆ ಈ ತಂತ್ರಾಂಶವನ್ನು ನಮಗಿಷ್ಟಬಂದಂತೆ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ. ಹೀಗೆ ನಿರ್ದಿಷ್ಟ ಯಂತ್ರಾಂಶದ ಜೊತೆಗಷ್ಟೇ ಕೆಲಸಮಾಡುವ, ಸೀಮಿತ ಉದ್ದೇಶದ ತಂತ್ರಾಂಶವನ್ನು ಫರ್ಮ್‌ವೇರ್ ಎಂದು ಕರೆಯುತ್ತಾರೆ. ಮೇಲೆ ಹೇಳಿದ ಸಾಧನಗಳಲ್ಲಷ್ಟೇ ಅಲ್ಲ, ಕಂಪ್ಯೂಟರು - ಸ್ಮಾರ್ಟ್‌ಫೋನುಗಳಲ್ಲೂ ಫರ್ಮ್‌ವೇರ್ ಬಳಕೆ ಇದೆ. ಕಂಪ್ಯೂಟರ್ ಚಾಲೂ ಮಾಡಿದ ಕೂಡಲೆ ಅದು ಏನು ಕೆಲಸಮಾಡಬೇಕೆಂದು ಹೇಳುವ ತಂತ್ರಾಂಶ, ಮೊಬೈಲ್ ಫೋನಿನ ಕಾರ್ಯಾಚರಣ ವ್ಯವಸ್ಥೆಗಳೆಲ್ಲ ಫರ್ಮ್‌ವೇರ್‌ನ ವಿವಿಧ ರೂಪಗಳೇ. ಯಂತ್ರಾಂಶ ನಿರ್ಮಾತೃಗಳು ತಮ್ಮ ಉತ್ಪನ್ನಗಳೊಡನೆ ಬಳಸಬೇಕಾದ ಫರ್ಮ್‌ವೇರ್ ಅನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುತ್ತಿರುತ್ತಾರೆ. ಸ್ಮಾರ್ಟ್‌ಫೋನ್ - ಸೆಟ್‌ಟಾಪ್ ಬಾಕ್ಸ್ ಮುಂತಾದ ಉದಾಹರಣೆಗಳಲ್ಲಿ ಈ ಉನ್ನತೀಕರಣ ಸ್ವಯಂಚಾಲಿತವಾಗಿಯೇ ಆಗುತ್ತದೆ; ಇನ್ನು ಕೆಲ ಸಾಧನಗಳ (ಉದಾ: ಡಿಜಿಟಲ್ ಕ್ಯಾಮೆರಾ) ಫರ್ಮ್‌ವೇರ್‌ನಲ್ಲಿ ಸಮಸ್ಯೆ ಕಂಡುಬಂದರೆ ಅದನ್ನು ಉನ್ನತೀಕರಿಸಲು ಸೇವಾಕೇಂದ್ರಕ್ಕೇ ಹೋಗಬೇಕಾಗುವುದೂ ಉಂಟು.

Font
ಫಾಂಟ್
ಅಕ್ಷರಶೈಲಿ
ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ಪಠ್ಯವನ್ನು ಮೂಡಿಸಲು ನೆರವಾಗುವ ಅಕ್ಷರಶೈಲಿ
ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲಿ ಪಠ್ಯರೂಪದ ಮಾಹಿತಿಯ ಪಾಲು ಬಹಳ ದೊಡ್ಡದು. ನೀವು ಓದುತ್ತಿರುವ ಪುಸ್ತಕ, ಕಂಪ್ಯೂಟರಿನಲ್ಲಿ ತೆರೆದಿರುವ ವೆಬ್‌ಸೈಟು, ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿರುವ ಹೊಸ ವಾಟ್ಸ್‌ಆಪ್ ಸಂದೇಶ - ಒಂದಲ್ಲ ಒಂದು ಬಗೆಯಲ್ಲಿ ಪಠ್ಯರೂಪದ ಮಾಹಿತಿ ನಮ್ಮೆದುರು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ಮಾಹಿತಿಯೆಲ್ಲ ನಮಗೆ ತಲುಪಬೇಕಾದರೆ ಅದನ್ನು ಯಾರೋ ಒಬ್ಬರು ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ಟೈಪ್ ಮಾಡಬೇಕು ತಾನೆ, ಹಾಗೆ ಮಾಡಲು ಅಕ್ಷರಶೈಲಿಗಳು ಬೇಕು. ಕಂಪ್ಯೂಟರಿನ ಭಾಷೆಯಲ್ಲಿ ಇವಕ್ಕೆ ಫಾಂಟ್‌ಗಳೆಂದು ಹೆಸರು. ವಿವಿಧ ಭಾಷೆಗಳಿಗೆ ವಿವಿಧ ಫಾಂಟುಗಳು ಲಭ್ಯ; ಒಂದೊಂದು ಫಾಂಟಿನ ಅಕ್ಷರಗಳೂ ಒಂದೊಂದು ವಿನ್ಯಾಸದಲ್ಲಿರುವುದು ಸಾಮಾನ್ಯ. ಫಾಂಟ್ ಅನ್ನು ಒಂದಷ್ಟು ಆಕಾರಗಳ ಗುಂಪು ಎಂದು ಕರೆಯಬಹುದು. ಅಕ್ಷರವನ್ನೋ ಅಂಕೆಯನ್ನೋ ಲೇಖನ ಚಿಹ್ನೆಯನ್ನೋ ಪ್ರತಿನಿಧಿಸುವ ಇಂತಹ ಆಕಾರಗಳನ್ನು 'ಗ್ಲಿಫ್', ಅಂದರೆ ಅಕ್ಷರಭಾಗಗಳೆಂದು ಕರೆಯುತ್ತಾರೆ. ಇಂಗ್ಲಿಷಿನ ಉದಾಹರಣೆಯನ್ನೇ ತೆಗೆದುಕೊಂಡರೆ ದೊಡ್ಡಕ್ಷರದ 'ಎ' ಒಂದು ಗ್ಲಿಫ್, ಸಣ್ಣಕ್ಷರದ 'ಎ' ಇನ್ನೊಂದು ಗ್ಲಿಫ್. ಕನ್ನಡದಂತಹ ಭಾಷೆಗಳಲ್ಲಿ ಕೆಲವು ಅಕ್ಷರಗಳಿಗೆ ಪ್ರತ್ಯೇಕ ಗ್ಲಿಫ್ ಇದ್ದರೆ ಇನ್ನು ಕೆಲ ಅಕ್ಷರಗಳು ಹಲವು ಗ್ಲಿಫ್‌ಗಳ ಜೋಡಣೆಯಿಂದ ರೂಪುಗೊಳ್ಳುತ್ತವೆ. ಈ ಜೋಡಣೆ ಬೇರೆಬೇರೆ ಫಾಂಟುಗಳಲ್ಲಿ ಬೇರೆಬೇರೆ ರೀತಿಯಲ್ಲಿರಬಹುದು.

Form Factor
ಫಾರ್ಮ್ ಫ್ಯಾಕ್ಟರ್
(ರೂಪಿಸಬೇಕಿದೆ)
ಮೊಬೈಲ್ ಫೋನಿನ ಆಕಾರ-ಸ್ವರೂಪವನ್ನು ಸೂಚಿಸುವ ಹೆಸರು
ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ - ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು. ಮೊಬೈಲ್ ಫೋನುಗಳು ಪ್ರಚಲಿತಕ್ಕೆ ಬಂದ ದಿನದಿಂದ ಇಂದಿನವರೆಗೂ ಅವುಗಳ ಆಕಾರ-ಸ್ವರೂಪಗಳು ಕೆಲವೇ ಬಗೆಯದಾಗಿರುವುದನ್ನು ನಾವು ನೋಡಬಹುದು: ಕವಚವನ್ನು ತೆರೆದು (ಫ್ಲಿಪ್) ಬಳಸಬಹುದಾದ ಫೋನುಗಳು, ಮೇಲ್ಭಾಗವನ್ನು ಜಾರಿಸಿದರೆ (ಸ್ಲೈಡ್) ಕೀಲಿಮಣೆ ಕಾಣುವ ಫೋನುಗಳು, ತಿರುಗಿಸಬಹುದಾದ (ಸ್ವಿವೆಲ್) ಪರದೆಯ ಫೋನುಗಳು, ದಪ್ಪನೆಯ ಪಟ್ಟಿಯಂತಿರುವ (ಬಾರ್) ಸರಳ ವಿನ್ಯಾಸದ ಫೋನುಗಳು - ಹೀಗೆ. ಮಾರುಕಟ್ಟೆಯಲ್ಲಿರುವ ಬಹುತೇಕ ಮಾದರಿಯ ಮೊಬೈಲುಗಳು ಈ ಪೈಕಿ ಯಾವುದೋ ಒಂದು ಆಕಾರ-ಸ್ವರೂಪದ್ದಾಗಿರುವುದು ಸಾಮಾನ್ಯ. ಇದನ್ನು ಆ ಫೋನಿನ 'ಫಾರ್ಮ್ ಫ್ಯಾಕ್ಟರ್' ಎಂದು ಕರೆಯುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 'ಬಾರ್' ಸ್ವರೂಪದ ಫೋನುಗಳದೇ ಸಾಮ್ರಾಜ್ಯ; ಇಂದಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನುಗಳೂ ಇದೇ ಫಾರ್ಮ್ ಫಾಕ್ಟರ್ ಹೊಂದಿರುತ್ತವೆ ಎಂದರೂ ಸರಿಯೇ. ಬೇರೆಬೇರೆ ಫಾರ್ಮ್ ಫ್ಯಾಕ್ಟರಿನ ಕೆಲವು ಫೋನುಗಳೂ ಮಾರುಕಟ್ಟೆಯಲ್ಲಿವೆ. ಮೇಲೆ ಹೇಳಿದ ಯಾವುದೇ ಫಾರ್ಮ್ ಫ್ಯಾಕ್ಟರ್ ವ್ಯಾಖ್ಯಾನಕ್ಕೂ ಹೊಂದದ ಕೆಲ ಮಾದರಿಗಳೂ (ಉದಾ: ವಾಚ್ ರೂಪದ ಫೋನು, ಎರಡು ಪರದೆಯಿರುವ ಫೋನು ಇತ್ಯಾದಿ) ಒಮ್ಮೊಮ್ಮೆ ಮಾರುಕಟ್ಟೆಗೆ ಬರುವುದುಂಟು.


logo