logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Partition
ಪಾರ್ಟಿಶನ್
(ರೂಪಿಸಬೇಕಿದೆ)
ಪ್ರತ್ಯೇಕವಾಗಿ ಬಳಸಲು ಸಾಧ್ಯವಾಗುವಂತೆ ಹಾರ್ಡ್‌ಡಿಸ್ಕ್‌ನಲ್ಲಿ ರೂಪಿಸಿಕೊಂಡಿರುವ ವಿಭಜನೆ ಅಥವಾ ವಿಭಾಗ
ನಮ್ಮ ಕಂಪ್ಯೂಟರಿನಲ್ಲಿ ಐದುನೂರು ಗಿಗಾಬೈಟಿನದೋ ಒಂದು ಟೆರಾಬೈಟಿನದೋ ಒಂದು ಹಾರ್ಡ್ ಡಿಸ್ಕ್ ಇರುತ್ತದೆ. ಆದರೆ ಕಂಪ್ಯೂಟರನ್ನು ಚಾಲೂ ಮಾಡಿ ನೋಡಿದಾಗ ಮಾತ್ರ ಸಿ, ಡಿ, ಇ, ಎಫ್ ಎಂದೆಲ್ಲ ಹೆಸರಿರುವ ಮೂರು-ನಾಲ್ಕು ಹಾರ್ಡ್ ಡಿಸ್ಕುಗಳ ಪಟ್ಟಿ ಕಾಣಸಿಗುತ್ತದೆ. ಹಾರ್ಡ್ ಡಿಸ್ಕ್ ಭೌತಿಕವಾಗಿ ಒಂದೇ ಆಗಿದ್ದರೂ ಅನ್ನು ಹಲವು ಭಾಗಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಬಳಸಲು ಅನುವುಮಾಡಿಕೊಡುವ ಪ್ರಕ್ರಿಯೆಯನ್ನು ಪಾರ್ಟಿಶನ್ ಮಾಡುವುದು ಅಥವಾ 'ಪಾರ್ಟಿಶನಿಂಗ್' ಎಂದು ಕರೆಯುತ್ತಾರೆ. ನಾವು ಕಂಪ್ಯೂಟರಿನಲ್ಲಿ ನೋಡುವ ಸಿ, ಡಿ, ಇ, ಎಫ್ ಡ್ರೈವ್‌ಗಳಿಗೆ 'ಪಾರ್ಟಿಶನ್'ಗಳೆಂದು ಹೆಸರು (ಪಾರ್ಟಿಶನ್ = ವಿಭಜನೆ). ಹಾರ್ಡ್ ಡಿಸ್ಕ್ ಶೇಖರಣಾ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಾರ್ಟಿಶನ್‌ಗಳು ನೆರವಾಗುತ್ತವೆ. ಲಭ್ಯವಿರುವ ಒಟ್ಟು ಸ್ಥಳಾವಕಾಶವನ್ನು ಈ ಪಾರ್ಟಿಶನ್‌ಗಳ ನಡುವೆ ನಮ್ಮ ಅಗತ್ಯಕ್ಕೆ ತಕ್ಕಂತೆ ಹಂಚಿಕೊಳ್ಳುವುದು ಸಾಧ್ಯ: ಐದುನೂರು ಗಿಗಾಬೈಟಿನ ಹಾರ್ಡ್ ಡಿಸ್ಕ್‌ನಲ್ಲಿ ನೂರು ಗಿಗಾಬೈಟ್‌ನ ಐದು ಪಾರ್ಟಿಶನ್ ರೂಪಿಸಿಕೊಳ್ಳಬಹುದು, ಇಲ್ಲವೇ ಇನ್ನೂರರ ಎರಡು - ನೂರರ ಒಂದು ಪಾರ್ಟಿಶನ್ ಕೂಡ ಮಾಡಿಕೊಳ್ಳಬಹುದು. ಹಾರ್ಡ್ ಡಿಸ್ಕ್‌ನಲ್ಲಿ ಪಾರ್ಟಿಶನ್‌ಗಳನ್ನು ರೂಪಿಸಿಕೊಳ್ಳಲು ನೆರವಾಗುವ ಅನೇಕ ತಂತ್ರಾಂಶಗಳು ದೊರಕುತ್ತವೆ (ವಿವರಗಳಿಗೆ ಗೂಗಲ್ ಮಾಡಿ). ಇವನ್ನು ಬಳಸಿ ಹೊಸ ಹಾರ್ಡ್ ಡಿಸ್ಕ್‌ನಲ್ಲಿರುವ ಸ್ಥಳಾವಕಾಶವನ್ನು ನಮಗೆ ಬೇಕಾದಂತೆ ವಿಂಗಡಿಸಿಕೊಳ್ಳಬಹುದು. ಈಗಾಗಲೇ ಬಳಕೆಯಲ್ಲಿರುವ ಹಾರ್ಡ್ ಡಿಸ್ಕ್‌ನ ಪಾರ್ಟಿಶನ್‌ಗಳನ್ನು ಬದಲಿಸುವ ಪ್ರಯತ್ನ ಮಾಡುವುದಾದರೆ ಸಾಕಷ್ಟು ತಾಂತ್ರಿಕ ಪರಿಣತಿ ಹಾಗೂ ಮಾಹಿತಿ ಸುರಕ್ಷತೆಯ ಕುರಿತ ಕಾಳಜಿ ಎರಡೂ ಬೇಕಾಗುತ್ತವೆ. ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಲು - ನಮ್ಮ ಕಡತಗಳನ್ನು ಉಳಿಸಿಡಲು ಬೇರೆಬೇರೆ ಪಾರ್ಟಿಶನ್ ಬಳಸಿದರೆ ಒಂದು ಪಾರ್ಟಿಶನ್ ಅನ್ನು ಫಾರ್ಮ್ಯಾಟ್ ಮಾಡಬೇಕಾಗಿ ಬಂದರೂ ಇನ್ನೊಂದರಲ್ಲಿರುವ ಮಾಹಿತಿಯನ್ನು ಹಾಗೆಯೇ ಉಳಿಸಿಕೊಳ್ಳಬಹುದು. ಪ್ರತ್ಯೇಕ ಪಾರ್ಟಿಶನ್‌ಗಳಲ್ಲಿ ಇನ್‌ಸ್ಟಾಲ್ ಮಾಡುವ ಮೂಲಕ ಒಂದೇ ಕಂಪ್ಯೂಟರಿನಲ್ಲಿ ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳನ್ನು ಬಳಸುವುದು ಕೂಡ ಸಾಧ್ಯವಾಗುತ್ತದೆ.

PoS Terminal
ಪಿಓಎಸ್ ಟರ್ಮಿನಲ್
(ರೂಪಿಸಬೇಕಿದೆ)
ಪಾಯಿಂಟ್ ಆಫ್ ಸೇಲ್ ಟರ್ಮಿನಲ್, ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳ ಮೂಲಕ ಹಣ ಪಾವತಿಸಲು ಬೇಕಾದ ಯಂತ್ರ
ಅಂಗಡಿಯಲ್ಲಿನ ವ್ಯವಹಾರ ಪೂರ್ಣವಾಗುವುದು ನಾವು ಕೊಂಡ ವಸ್ತು ಅಥವಾ ಸೇವೆಗೆ ಹಣ ಪಾವತಿಸಿದಾಗಲಷ್ಟೇ. ಹೀಗೆ ವ್ಯವಹಾರ ಪೂರ್ಣಗೊಳಿಸುವ ಸ್ಥಳವನ್ನು (ಉದಾ: ಸೂಪರ್‌ಮಾರ್ಕೆಟ್‌ನ ಬಿಲ್ಲುಕಟ್ಟೆ) 'ಪಾಯಿಂಟ್ ಆಫ್ ಸೇಲ್' ಎಂದು ಕರೆಯುತ್ತಾರೆ. ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳ ಮೂಲಕ ಹಣ ಪಾವತಿಸಲು ಬೇಕಾದ ಯಂತ್ರವೂ ಇದೇ ಸ್ಥಳದಲ್ಲಿರುತ್ತದೆ. ಆ ಯಂತ್ರವನ್ನು 'ಪಿಓಎಸ್ ಟರ್ಮಿನಲ್' ಎಂದು ಗುರುತಿಸಲು ಇದೇ ಕಾರಣ. ಕಾರ್ಡಿನ ಅಯಸ್ಕಾಂತೀಯ ಪಟ್ಟಿ ಅಥವಾ ಚಿಪ್‌ನಲ್ಲಿರುವ ಗ್ರಾಹಕನ ಖಾತೆಯ ಮಾಹಿತಿ ಅರಿತು, ಪಿನ್‌ನಂತಹ ಸುರಕ್ಷತಾ ವಿವರಗಳನ್ನೂ ಪಡೆದು, ಪಾವತಿಯಾಗಬೇಕಾದ ಮೊತ್ತವನ್ನು ಖಾತೆಯಿಂದ ವರ್ಗಾಯಿಸಲು ನೆರವಾಗುವುದು ಈ ಯಂತ್ರದ ವೈಶಿಷ್ಟ್ಯ. ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡ್‌ಗಳಷ್ಟೇ ಅಲ್ಲ, ಮುಂಗಡವಾಗಿ ಹಣ ಪಾವತಿಸಿ ಪಡೆದುಕೊಳ್ಳುವ 'ಪ್ರೀಪೇಯ್ಡ್ ಕಾರ್ಡ್'ಗಳನ್ನೂ ಈ ಯಂತ್ರಗಳು ನಿಭಾಯಿಸಬಲ್ಲವು. ಮೊದಲಿಗೆ ಇಂತಹ ಯಂತ್ರಗಳನ್ನು ಪಡೆಯಲು ಬ್ಯಾಂಕುಗಳನ್ನೇ ಸಂಪರ್ಕಿಸಬೇಕಾದ ಅನಿವಾರ್ಯ ಇತ್ತು. ಆದರೆ ಈಗ ಹಲವು ಖಾಸಗಿ ಸಂಸ್ಥೆಗಳೂ ಪಿಓಎಸ್ ಟರ್ಮಿನಲ್‌ಗಳನ್ನು ನೀಡುತ್ತಿವೆ. ಈ ಯಂತ್ರಗಳನ್ನು ಬಳಸುವ ಅಂಗಡಿಯವರು ಅದಕ್ಕಾಗಿ ನಿರ್ದಿಷ್ಟ ಶುಲ್ಕವನ್ನು ನೀಡಬೇಕಾಗುತ್ತದೆ. ಕಾರ್ಡ್ ವಿತರಿಸಿರುವ ಸಂಸ್ಥೆ, ಪಿಓಎಸ್ ಟರ್ಮಿನಲ್ ನಿರ್ವಹಿಸುವ ಸಂಸ್ಥೆ ಹಾಗೂ ಹಣ ವರ್ಗಾವಣೆ ಸಾಧ್ಯವಾಗಿಸುವ ಸಂಸ್ಥೆಗಳು (ರುಪೇ, ವೀಸಾ, ಮಾಸ್ಟರ್‌ಕಾರ್ಡ್ ಇತ್ಯಾದಿ) ಈ ಶುಲ್ಕವನ್ನು ಹಂಚಿಕೊಳ್ಳುತ್ತವೆ. ಕಾರ್ಡ್ ವಹಿವಾಟಿನ ಮೊತ್ತ ಅಂಗಡಿಯವರ ಖಾತೆಗೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಅದರಿಂದ ಈ ಶುಲ್ಕವನ್ನು ಮುರಿದುಕೊಳ್ಳುವುದು ಸಾಮಾನ್ಯ ಅಭ್ಯಾಸ.

Pixel
ಪಿಕ್ಸೆಲ್
(ರೂಪಿಸಬೇಕಿದೆ)
ಪಿಕ್ಚರ್ ಎಲಿಮೆಂಟ್, ಡಿಜಿಟಲ್ ಚಿತ್ರದ ಅತ್ಯಂತ ಸಣ್ಣ ಘಟಕ
ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಮನೆಯ ನೆಲದಲ್ಲಿ ಟೈಲ್ಸ್ ಇರುತ್ತವಲ್ಲ, ಹಾಗೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ. ಇಂತಹ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು 'ಪಿಕ್ಚರ್ ಎಲಿಮೆಂಟ್' ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು. ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್. ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ. ಕ್ಯಾಮೆರಾಗಳ ಬಗ್ಗೆ ಹೇಳುವಾಗಲೆಲ್ಲ ಪ್ರಸ್ತಾಪವಾಗುತ್ತದಲ್ಲ, ಅದು ಇದೇ ಮೆಗಾಪಿಕ್ಸೆಲ್. ಕ್ಯಾಮೆರಾ ಕೊಳ್ಳುವಾಗ ಹೆಚ್ಚಿನ ಮೆಗಾಪಿಕ್ಸೆಲ್ ಬಗೆಗಷ್ಟೇ ಗಮನಹರಿಸಿದರೆ ಸಾಲದು. ಏಕೆಂದರೆ ಕ್ಯಾಮೆರಾಗಳಲ್ಲಿ ನಮ್ಮ ಬಳಕೆಯ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಇದ್ದರೆ ಸಾಕಾಗುತ್ತದೆ. ಮೆಗಾಪಿಕ್ಸೆಲ್ ಜೊತೆಗೆ ಕ್ಯಾಮೆರಾದ ಸೆನ್ಸರ್, ಲೆನ್ಸಿನ ಗುಣಮಟ್ಟ ಮುಂತಾದ ಅಂಶಗಳೂ ಚಿತ್ರ ಹೇಗೆ ಮೂಡಿಬರುತ್ತದೆ ಎನ್ನುವುದನ್ನು ನಿರ್ಧರಿಸುತ್ತವೆ.

PDF
ಪಿಡಿಎಫ್
(ರೂಪಿಸಬೇಕಿದೆ)
ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್, ವಿಶೇಷ ತಂತ್ರಾಂಶ - ಫಾಂಟ್ ಇತ್ಯಾದಿಗಳ ಅವಲಂಬನೆಯಿಲ್ಲದೆ ಸುಲಭವಾಗಿ ಹಂಚಿಕೊಳ್ಳಬಹುದಾದ ಕಡತ
ನಾವು ರೂಪಿಸಿದ ಕಡತಗಳನ್ನು ಬೇರೊಬ್ಬರೊಡನೆ ಹಂಚಿಕೊಳ್ಳುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇಮೇಲ್ ಮಾಡಿದಾಗ ಕೆಲವೊಮ್ಮೆ ಆ ಕಡತ ಓಪನ್ ಆಗುವುದಿಲ್ಲ, ಅಕ್ಷರಗಳು ಕಾಣುವುದಿಲ್ಲ ಅಥವಾ ಮೂಲ ವಿನ್ಯಾಸ ನಾಪತ್ತೆಯಾಗಿರುತ್ತದೆ! ಈ ಸಮಸ್ಯೆಯ ಅತ್ಯಂತ ಜನಪ್ರಿಯ ಪರಿಹಾರಗಳಲ್ಲೊಂದು ಆ ಕಡತವನ್ನು ಪಿಡಿಎಫ್ ರೂಪಕ್ಕೆ ಬದಲಿಸುವುದು. ಪಿಡಿಎಫ್ ಎನ್ನುವುದು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ ಎಂಬ ಹೆಸರಿನ ಹ್ರಸ್ವರೂಪ. ಪೋರ್ಟಬಲ್ ಟೀವಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭಕ್ಕೆ ಒಯ್ದು ಬಳಸಬಹುದಿತ್ತಲ್ಲ, ಪಿಡಿಎಫ್ ಕಡತಗಳನ್ನೂ ಹಾಗೆ ಎಲ್ಲಿ ಬೇಕಾದರೂ ಬಳಸಬಹುದು. ಪಿಡಿಎಫ್ ತಂತ್ರಜ್ಞಾನ ಅಭಿವೃದ್ಧಿಯಾದದ್ದು ೧೯೯೦ರ ದಶಕದ ಪ್ರಾರಂಭದಲ್ಲಿ. ಸದ್ಯ ಇದರ ಜನಪ್ರಿಯತೆ ಎಷ್ಟೆಂದರೆ ಸಾಮಾನ್ಯ ಕಡತಗಳ ಜೊತೆಗೆ ಹಲವು ಅಧಿಕೃತ ಕಾಗದಪತ್ರಗಳೂ ಪಿಡಿಎಫ್ ರೂಪಕ್ಕೆ ಬಂದುಬಿಟ್ಟಿವೆ. ಪಿಡಿಎಫ್ ಕಡತಗಳನ್ನು ವೀಕ್ಷಿಸಲು ಅಗತ್ಯ ಸೌಲಭ್ಯ ಬಹುತೇಕ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳಲ್ಲಿ ಪೂರ್ವನಿಯೋಜಿತವಾಗಿಯೇ ಇರುತ್ತದೆ. ಹಾಗೊಮ್ಮೆ ಇಲ್ಲದಿದ್ದರೂ ಆ ಸೌಲಭ್ಯ ಒದಗಿಸುವ ಹಲವು ತಂತ್ರಾಂಶಗಳು - ಮೊಬೈಲ್ ಆಪ್‌ಗಳು ಉಚಿತವಾಗಿಯೇ ಲಭ್ಯವಿವೆ (ಹೆಚ್ಚಿನ ವಿವರಗಳಿಗೆ ಗೂಗಲ್ ಮಾಡಿ, ಅಥವಾ ನಿಮ್ಮ ಫೋನಿನ ಆಪ್ ಸ್ಟೋರಿಗೆ ಭೇಟಿಕೊಡಿ). ಸೂಕ್ತ ತಂತ್ರಾಂಶ ಬಳಸಿ ನಮ್ಮ ಕಂಪ್ಯೂಟರ್ ಇಲ್ಲವೇ ಮೊಬೈಲಿನಲ್ಲಿ ಪಿಡಿಎಫ್ ಕಡತಗಳನ್ನು ರೂಪಿಸಿಕೊಳ್ಳುವುದೂ ಸಾಧ್ಯ - ಇದಕ್ಕೂ ಕೆಲವು ಉಚಿತ ತಂತ್ರಾಂಶಗಳಿವೆ.

PPI
ಪಿಪಿಐ
(ರೂಪಿಸಬೇಕಿದೆ)
ಪಿಕ್ಸೆಲ್ಸ್ ಪರ್ ಇಂಚ್, ಚಿತ್ರದ ಪ್ರತಿ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿರುತ್ತವೆ ಎಂಬ ಲೆಕ್ಕ.
ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಪಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಪಿಕ್ಸೆಲ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ. ೧೦೦x೧೦೦ ಪಿಕ್ಸೆಲ್‌ನ ಚಿತ್ರಕ್ಕೆ ೧೦ ಪಿಪಿಐ ನಿಗದಿಪಡಿಸಿದರೆ ಅದು ಹತ್ತಿಂಚು ಉದ್ದ-ಅಗಲದಲ್ಲಿ ಮುದ್ರಣವಾಗುತ್ತದೆ. ಅದೇ ೧೦೦ ಪಿಪಿಐ ಇಟ್ಟರೆ ಚಿತ್ರದ ಗಾತ್ರ ಒಂದೇ ಇಂಚು ಉದ್ದ-ಅಗಲಕ್ಕೆ ಇಳಿಯುತ್ತದೆ. ಇದನ್ನು ಪಿಕ್ಸೆಲ್ ಸಾಂದ್ರತೆ (ಪಿಕ್ಸೆಲ್ ಡೆನ್ಸಿಟಿ) ಎಂದೂ ಗುರುತಿಸಲಾಗುತ್ತದೆ. ಇದನ್ನು ಡಿಪಿಐ (ಡಾಟ್ಸ್ ಪರ್ ಇಂಚ್) ಎಂದೂ ಕರೆಯುತ್ತಾರೆ. ಸ್ಕ್ಯಾನರ್ ಬಳಸಿ ಡಿಜಿಟಲೀಕರಿಸುವ ಚಿತ್ರಗಳು ಹಾಗೂ ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆಯ ಗುಣಮಟ್ಟವನ್ನು ಸೂಚಿಸಲಿಕ್ಕೂ 'ಪಿಪಿಐ' ಬಳಕೆಯಾಗುತ್ತದೆ. ಹೆಚ್ಚು ಪಿಪಿಐ ಇರುವ ಪರದೆಯಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡುತ್ತವೆ. ಹಾಗೆಯೇ ಹೆಚ್ಚು ಪಿಪಿಐ ಅಥವಾ ಡಿಪಿಐನಲ್ಲಿ ಸ್ಕ್ಯಾನ್ ಮಾಡಿದ ಚಿತ್ರಗಳ ಗುಣಮಟ್ಟ ಕೂಡ ಹೆಚ್ಚು ಉತ್ತಮವಾಗಿರುತ್ತದೆ.

PCB
ಪಿಸಿಬಿ
(ರೂಪಿಸಬೇಕಿದೆ)
ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್; ವಿದ್ಯುನ್ಮಾನ ಸಾಧನಗಳಲ್ಲಿ ವಿವಿಧ ಬಿಡಿಭಾಗಗಳನ್ನು ಜೋಡಿಸಲು, ಪರಸ್ಪರ ಸಂಪರ್ಕಿಸಲು ಬಳಕೆಯಾಗುವ ಫಲಕ
ಯಾವುದೇ ವಿದ್ಯುನ್ಮಾನ ಸಾಧನವನ್ನು ತೆರೆದು ನೋಡಿದರೆ ಟ್ರಾನ್ಸಿಸ್ಟರ್, ರೆಸಿಸ್ಟರ್, ಐಸಿ ಮುಂತಾದ ಅನೇಕ ಸಣ್ಣಸಣ್ಣ ಭಾಗಗಳನ್ನು ಒಂದು ಫಲಕದ ಮೇಲೆ ಜೋಡಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ಭಾಗಗಳೆಲ್ಲ ಆ ಫಲಕದ ಮೂಲಕವೇ ಒಂದಕ್ಕೊಂದು ಸಂಪರ್ಕಿತವಾಗಿರುತ್ತವೆ ಮತ್ತು ಬಾಹ್ಯ ವಿದ್ಯುತ್ ಸಂಪರ್ಕದ ತಂತಿಯೂ ಒಂದಲ್ಲ ಒಂದು ರೀತಿಯಲ್ಲಿ ಈ ಫಲಕದತ್ತಲೇ ಬಂದಿರುತ್ತದೆ. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಅಂದರೆ ಪಿಸಿಬಿ ಎಂದು ಕರೆಯುವುದು ಇಂತಹ ಫಲಕಗಳನ್ನೇ. ಇದರ ಮೇಲೆ ಜೋಡಿಸುವ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸಲು ಪ್ರತ್ಯೇಕ ತಂತಿಗಳ ಬದಲಿಗೆ ಈ ಫಲಕದ ಮೇಲೆಯೇ ಇರುವ ಹಾದಿಗಳನ್ನು ಬಳಸಲಾಗುತ್ತದೆ. ಈ ಸಂಪರ್ಕಗಳು (ಸರ್ಕ್ಯೂಟ್, ಅಂದರೆ ವಿದ್ಯುತ್‌ಪಥ) ಈ ಫಲಕದ ಮೇಲೆಯೇ ಮುದ್ರಿತವಾದಂತೆ ಕಾಣುತ್ತವಲ್ಲ, ಹಾಗಾಗಿಯೇ ಈ ಫಲಕಕ್ಕೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಎಂದು ಹೆಸರು ಬಂದಿದೆ. ದೊಡ್ಡ ಸಂಖ್ಯೆಯ ಬಿಡಿಭಾಗಗಳನ್ನು ಸಣ್ಣ ಜಾಗದಲ್ಲಿ ಅಚ್ಚುಕಟ್ಟಾಗಿ ಜೋಡಿಸಲು ಸಾಧ್ಯವಾಗಿಸುವುದು ಈ ಫಲಕದ ಹೆಗ್ಗಳಿಕೆ. ಕಂಪ್ಯೂಟರು - ಮೊಬೈಲಿನಲ್ಲೆಲ್ಲ ಮದರ್‌ಬೋರ್ಡ್ ಇರುತ್ತದಲ್ಲ, ಪ್ರತಿನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಪಿಸಿಬಿಗೆ ಅದೊಂದು ಉತ್ತಮ ಉದಾಹರಣೆ. ಪ್ರಾಸೆಸರ್, ರ್‍ಯಾಮ್ ಸೇರಿದಂತೆ ಕಂಪ್ಯೂಟರಿನ - ಮೊಬೈಲಿನ ಹಲವು ಪ್ರಮುಖ ಭಾಗಗಳನ್ನು ಈ ಫಲಕದ ಮೇಲೆಯೇ ಜೋಡಿಸಿರುತ್ತಾರೆ. ಟೀವಿ, ಮೊಬೈಲ್ ಕ್ಯಾಮೆರಾ, ಟ್ಯಾಬ್ಲೆಟ್ ಮುಂತಾದ ಇತರ ಸಾಧನಗಳಲ್ಲೂ ಪಿಸಿಬಿಗಳು ಇರುತ್ತವೆ.

Pull - Push
ಪುಲ್-ಪುಶ್
(ರೂಪಿಸಬೇಕಿದೆ)
ಮಾಹಿತಿ ಒದಗಿಸುವ ಎರಡು ಮಾರ್ಗಗಳು; ನಾವೇ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳುವುದು 'ಪುಲ್' ಎಂದು ಕರೆಸಿಕೊಂಡರೆ ಹೊಸ ಮಾಹಿತಿಯನ್ನು ನಾವು ಕೇಳದೆಯೇ ನಮ್ಮ ಗಮನಕ್ಕೆ ತರುವುದಕ್ಕೆ 'ಪುಶ್' ಎಂದು ಹೆಸರು.
ಜಾಲತಾಣ ತೆರೆದು ಇಮೇಲ್‌ಗಳನ್ನು ನೋಡುವಾಗ, ತಂತ್ರಾಂಶವನ್ನು ಡೌನ್‌ಲೋಡ್ ಮಾಡುವಾಗಲೆಲ್ಲ ಮಾಹಿತಿ ಬೇಕೆಂದು ಬೇಡಿಕೆ ಸಲ್ಲಿಸುವವರು ನಾವು. ಇಮೇಲ್ ತಾಣಕ್ಕೆ ಲಾಗಿನ್ ಆಗುವುದು, ಡೌನ್‌ಲೋಡ್ ಕೊಂಡಿಯ ಮೇಲೆ ಕ್ಲಿಕ್ ಮಾಡುವುದು - ಇವೆಲ್ಲ ನಾವು ಬೇಡಿಕೆ ಸಲ್ಲಿಸುವ ಮಾರ್ಗಗಳು. ಈ ಉದಾಹರಣೆಗಳಲ್ಲಿ ಮಾಹಿತಿ ನಮ್ಮತ್ತ ಬರಲಿ ಎಂದು ನಾವು ಕೇಳುವುದರಿಂದ ಇವನ್ನು 'ಪುಲ್' ಎಂದು ಗುರುತಿಸಲಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಕೇಳದೆಯೇ ಮಾಹಿತಿಯನ್ನು ನಮ್ಮ ಗಮನಕ್ಕೆ ತರಲಾಗುತ್ತದೆ. ಸುದ್ದಿಗಳನ್ನು ಹಂಚುವ ಮೊಬೈಲ್ ಆಪ್ ಇತ್ತೀಚಿನ ಸುದ್ದಿಯನ್ನೂ, ಪ್ರಯಾಣ ಸೇವೆಗಳ ಆಪ್ ಹೊಸ ಆಫರುಗಳನ್ನೂ ನಮ್ಮ ಮೊಬೈಲಿನ ಪರದೆಗೆ ತಲುಪಿಸುತ್ತದಲ್ಲ - ಇವನ್ನು ನಾವಾಗಿ ಕೇಳದೆಯೇ ಪಡೆಯುವುದು, ಇಮೇಲ್ ಅಥವಾ ಮೆಸೇಜಿಂಗ್ ತಂತ್ರಾಂಶವನ್ನು ತೆರೆಯದೆಯೇ ಓದುವುದು ಸಾಧ್ಯ. ಮಾಹಿತಿಯನ್ನು ಹೀಗೆ ಕಳುಹಿಸುವ ತಂತ್ರಜ್ಞಾನಕ್ಕೆ 'ಪುಶ್' ಎಂದು ಹೆಸರು (ಉದಾಹರಣೆಯಲ್ಲಿ ಹೇಳಿದಂತಹ ಸಂದೇಶಗಳನ್ನು 'ಪುಶ್ ನೋಟಿಫಿಕೇಶನ್ಸ್' ಎಂದು ಕರೆಯುತ್ತಾರೆ). ಇಮೇಲ್ ಸೇವೆಗಳಲ್ಲೂ ಪುಶ್ ತಂತ್ರದ ಬಳಕೆ ಉಂಟು. ಹೊಸ ಸಂದೇಶ ಬಂದ ವಿಷಯ ಇಮೇಲ್ ಆಪ್ ತೆರೆಯದೆಯೇ ಗೊತ್ತಾಗುವುದು ಇದರ ಮೂಲಕವೇ. ಎಸ್ಸೆಮ್ಮೆಸ್‌ನಲ್ಲೂ ಪುಶ್ ಬಳಕೆ ಸಾಧ್ಯವಿದೆ. ಅಂದಹಾಗೆ ಈ ತಂತ್ರಗಳು ನಾವು ಸಂದೇಶಗಳನ್ನು ಹೇಗೆ ಪಡೆದುಕೊಳ್ಳುತ್ತೇವೆ ಎನ್ನುವುದನ್ನು ಮಾತ್ರ ನಿರ್ದೇಶಿಸುತ್ತವೆ. ಅನಪೇಕ್ಷಿತ (ಸ್ಪಾಮ್) ಸಂದೇಶಗಳನ್ನು ತಲುಪಿಸಲು ಇವೆರಡೂ ತಂತ್ರಗಳು ಬಳಕೆಯಾಗುವುದರಿಂದ ಸ್ಪಾಮ್‌ಗೂ ಈ ಪುಲ್-ಪುಶ್ ತಂತ್ರಗಳಿಗೂ ನೇರವಾದ ಸಂಬಂಧವೇನಿಲ್ಲ. ಆದರೆ ಮೊಬೈಲಿನಲ್ಲಿ ಪುಶ್ ಸಂದೇಶಗಳ ಕಾಟ ಜಾಸ್ತಿಯಾದ ಸಂದರ್ಭದಲ್ಲಿ ಅವನ್ನು ನಿರ್ಬಂಧಿಸುವುದು ಸಾಧ್ಯವಿದೆ: ಆಂಡ್ರಾಯ್ಡ್ ಬಳಕೆದಾರರು ಇದಕ್ಕೆ 'ಆಪ್ ನೋಟಿಫಿಕೇಶನ್ಸ್' ಆಯ್ಕೆ ಬಳಸಬಹುದು.

Page Orientation
ಪೇಜ್ ಓರಿಯೆಂಟೇಶನ್
(ರೂಪಿಸಬೇಕಿದೆ)
ವಿನ್ಯಾಸಗೊಳಿಸಿರುವ ಪುಟವನ್ನು ಮುದ್ರಿಸುವಾಗ ಕಾಗದವನ್ನು ಲಂಬವಾಗಿ ಬಳಸಬೇಕೋ ಅಡ್ಡಲಾಗಿ ಬಳಸಬೇಕೋ ಎನ್ನುವುದನ್ನು ಸೂಚಿಸುವ ಅಂಶ
ಪುಸ್ತಕವಿರಲಿ, ಒಂದೆರಡು ಪುಟಗಳ ಕಡತವೇ ಇರಲಿ - ಮುದ್ರಣಕ್ಕೆ ಬಳಸಲಾಗುವ ಕಾಗದ ಸಾಮಾನ್ಯವಾಗಿ ಆಯತಾಕಾರದಲ್ಲೇ ಇರುತ್ತದೆ. ಈ ಕಾಗದದ ಮೇಲೆ ಮಾಹಿತಿ ಹೇಗೆ ಮುದ್ರಣವಾಗಬೇಕು ಎಂದು ತೀರ್ಮಾನಿಸುವುದು ಕಡತ ರೂಪಿಸುವ ವಿನ್ಯಾಸಕಾರನ ಕೆಲಸ. ಬಹಳಷ್ಟು ಕಡತಗಳಲ್ಲಿ ಕಾಗದವನ್ನು ಲಂಬವಾಗಿ (ಕಡಿಮೆ ಅಗಲ, ಹೆಚ್ಚು ಉದ್ದ) ಬಳಸುವುದು ಸಾಮಾನ್ಯ ಅಭ್ಯಾಸ. ಮುದ್ರಣವಾಗುವ ಮಾಹಿತಿ ಸಾಧ್ಯವಾದಷ್ಟೂ ಅಗಲವಿರಬೇಕು ಎನ್ನುವುದಾದರೆ ಅದನ್ನು ಕಾಗದದ ಮೇಲೆ ಅಡ್ಡಡ್ಡಲಾಗಿ (ಹೆಚ್ಚು ಅಗಲ, ಕಡಿಮೆ ಉದ್ದ) ಮುದ್ರಿಸಬಹುದು. ಕಡತದ ಪುಟಗಳನ್ನು ವಿನ್ಯಾಸಗೊಳಿಸುವಾಗ ಈ ಪೈಕಿ ಯಾವ ಆಯ್ಕೆ ಬಳಸಲಾಗಿದೆ ಎನ್ನುವುದನ್ನು ಆಯಾ ಪುಟದ 'ಪೇಜ್ ಓರಿಯೆಂಟೇಶನ್' ಸೂಚಿಸುತ್ತದೆ. ಕಡತವನ್ನು ರೂಪಿಸುವಾಗಲೇ ಈ ಆಯ್ಕೆಯನ್ನು ಮಾಡಿಕೊಳ್ಳುವುದು ಸಾಧ್ಯ. ನಿರ್ದಿಷ್ಟ ಪುಟದ ಮುದ್ರಣಕ್ಕೆ ಕಾಗದವನ್ನು ಲಂಬವಾಗಿ ಬಳಸುವುದು ಸಾಧ್ಯವಿದ್ದರೆ ಅದರ ಪೇಜ್ ಓರಿಯೆಂಟೇಶನ್ 'ಪೋರ್ಟ್ರೇಟ್' ಆಗಿರುತ್ತದೆ. ಭಾವಚಿತ್ರಗಳು ಸಾಮಾನ್ಯವಾಗಿ ಇದೇ ರೀತಿಯಲ್ಲಿ ಮುದ್ರಣವಾಗುತ್ತವಲ್ಲ, ಹಾಗಾಗಿಯೇ ಇಲ್ಲೂ ಅದೇ ಹೆಸರನ್ನು ಬಳಸಲಾಗಿದೆ (ಪೋರ್ಟ್ರೇಟ್=ಭಾವಚಿತ್ರ). ಇದೇ ರೀತಿ ಅಡ್ಡಡ್ಡಲಾಗಿ ಮುದ್ರಣವಾಗಬೇಕಾದ ಪುಟಗಳ ಪೇಜ್ ಓರಿಯೆಂಟೇಶನ್ ಅನ್ನು 'ಲ್ಯಾಂಡ್‌ಸ್ಕೇಪ್' ಎಂದು ಗುರುತಿಸಲಾಗುತ್ತದೆ. ಪ್ರಕೃತಿ ದೃಶ್ಯಗಳನ್ನು (ಲ್ಯಾಂಡ್‌ಸ್ಕೇಪ್) ಹೀಗೆಯೇ ಮುದ್ರಿಸುತ್ತಾರಲ್ಲ, ಈ ಹೆಸರಿಗೆ ಕಾರಣವಾಗಿರುವುದು ಅದೇ ಅಂಶ. ಅಂದಹಾಗೆ ಮುದ್ರಣವಾಗಬೇಕಿರುವ ಕಾಗದ ಬಹುತೇಕ ಪ್ರಿಂಟರುಗಳೊಳಗೆ ಹೋಗುವುದು - ಹೊರಬರುವುದು ಲಂಬವಾಗಿಯೇ. ಲ್ಯಾಂಡ್‌ಸ್ಕೇಪ್ ರೂಪದಲ್ಲಿ ಮುದ್ರಣವಾಗಬೇಕಿರುವ ಮಾಹಿತಿಯನ್ನು ಸೂಕ್ತವಾಗಿ ತಿರುಗಿಸಿಕೊಂಡು ಮುದ್ರಿಸಲಾಗುತ್ತದೆ ಅಷ್ಟೇ.

Page View
ಪೇಜ್ ವ್ಯೂ
(ರೂಪಿಸಬೇಕಿದೆ)
ಜಾಲತಾಣಕ್ಕೆ ಭೇಟಿಕೊಟ್ಟ ಬಳಕೆದಾರರು ಯಾವುದೇ ವೆಬ್ ಪುಟವನ್ನು ತೆರೆಯುವ - ವೀಕ್ಷಿಸುವ ಪ್ರಕ್ರಿಯೆ
ಒಂದು ಜಾಲತಾಣದಲ್ಲಿ ಹಲವು ಪುಟಗಳಿರುತ್ತವಲ್ಲ, ಬಳಕೆದಾರರು ಆ ಪುಟಗಳನ್ನು ಎಷ್ಟುಬಾರಿ ತೆರೆಯುತ್ತಾರೆ ಎಂಬುದನ್ನು ಗಮನಿಸಿಕೊಳ್ಳುವ ಮೂಲಕ ಜಾಲತಾಣದ ಜನಪ್ರಿಯತೆಯನ್ನು ಅಂದಾಜಿಸುವುದು ಸಾಧ್ಯ. ಈ ಸಂಖ್ಯೆಯನ್ನು ದಾಖಲಿಸಿಕೊಳ್ಳುವುದು ಜಾಲಲೋಕದ ಸಾಮಾನ್ಯ ಅಭ್ಯಾಸವೂ ಹೌದು. ಬಳಕೆದಾರ ಯಾವುದೇ ವೆಬ್ ಪುಟವನ್ನು ತೆರೆಯುವ - ವೀಕ್ಷಿಸುವ ಈ ಪ್ರಕ್ರಿಯೆಯನ್ನು 'ಪೇಜ್ ವ್ಯೂ' ಎಂದು ಗುರುತಿಸುತ್ತಾರೆ. ಉದಾಹರಣೆಗೆ, ಮಾರ್ಚ್ ೨೦೧೭ರಲ್ಲಿ ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾದ ಪೇಜ್ ವ್ಯೂಗಳ ಒಟ್ಟು ಮೊತ್ತ ೪೬,೩೧೮. ಈ ಅವಧಿಯಲ್ಲಿ ಓದುಗರು ಜಾಲತಾಣದ ಪುಟಗಳನ್ನು ಒಟ್ಟು ಎಷ್ಟು ಬಾರಿ ತೆರೆದಿದ್ದಾರೆ ಎನ್ನುವುದನ್ನು ಈ ಸಂಖ್ಯೆ ಸೂಚಿಸುತ್ತದೆ. ಪೇಜ್‌ವ್ಯೂಗಳ ಸಂಖ್ಯೆ ಹೆಚ್ಚಿದ್ದಷ್ಟೂ ಜಾಲತಾಣದತ್ತ ಬರುವ 'ಟ್ರಾಫಿಕ್' ಹೆಚ್ಚಿದೆ ಎಂದರ್ಥ. ಅಂದಹಾಗೆ ಒಂದೇ ವ್ಯಕ್ತಿ ಜಾಲತಾಣದ ವಿವಿಧ ಪುಟಗಳನ್ನು ವೀಕ್ಷಿಸಿದ್ದರೆ ಅವರು ಒಂದಕ್ಕಿಂತ ಹೆಚ್ಚು ಪೇಜ್‌ವ್ಯೂಗಳನ್ನು ದಾಖಲಿಸುತ್ತಾರೆ. ಹೀಗಾಗಿ ಜಾಲತಾಣಕ್ಕೆ ಭೇಟಿಕೊಟ್ಟವರ ಸಂಖ್ಯೆ ಅಲ್ಲಿ ದಾಖಲಾದ ಪೇಜ್‌ವ್ಯೂಗಳ ಸಂಖ್ಯೆಗಿಂತ ಕಡಿಮೆಯಿರುವುದು ಖಂಡಿತಾ ಸಾಧ್ಯ. ಈ ಗೊಂದಲವನ್ನು ನಿವಾರಿಸಲೆಂದೇ ಕೆಲ ಜಾಲತಾಣಗಳು ಪೇಜ್‌ವ್ಯೂ ಹಾಗೂ ಸಂದರ್ಶಕರ ಸಂಖ್ಯೆಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳುತ್ತವೆ. ಪುಟವನ್ನು ತೆರೆದ ಹಾಗೂ ಮುಚ್ಚಿದ ಸಮಯವನ್ನು ಗುರುತಿಸಿಕೊಳ್ಳುವ ಮೂಲಕ ಓದುಗರು ಅಲ್ಲಿ ಎಷ್ಟು ಹೊತ್ತು ಉಳಿದಿದ್ದರು ಎನ್ನುವುದನ್ನು ದಾಖಲಿಸಿಕೊಳ್ಳುವ ಅಭ್ಯಾಸವೂ ಇದೆ.

Piracy
ಪೈರಸಿ
(ರೂಪಿಸಬೇಕಿದೆ)
ಹಕ್ಕುಸ್ವಾಮ್ಯವಿರುವ ಮಾಹಿತಿಯನ್ನು ಅದರ ಮಾಲೀಕರಿಗೆ ಪ್ರತಿಫಲ ನೀಡದೆ ಅಕ್ರಮವಾಗಿ ಬಳಸಿಕೊಳ್ಳುವ ಸಮಸ್ಯೆ
ಪಠ್ಯ, ಚಿತ್ರ, ಸಂಗೀತ, ಚಲನಚಿತ್ರ, ತಂತ್ರಾಂಶ ಮುಂತಾದ ಯಾವುದೇ ಮಾಹಿತಿಯನ್ನು ಅದರ ಹಕ್ಕುಸ್ವಾಮ್ಯ ಹೊಂದಿದವರಿಗೆ ಪ್ರತಿಫಲ ನೀಡದೆ ಅಕ್ರಮವಾಗಿ ಬಳಸಿಕೊಳ್ಳುವ ಸಮಸ್ಯೆಯ ಹೆಸರೇ 'ಪೈರಸಿ'. ಅನಧಿಕೃತ ತಾಣಗಳಿಂದ ಎಂಪಿ೩ ಡೌನ್‌ಲೋಡ್ ಮಾಡಿಕೊಳ್ಳುವುದು, ಕಂಪ್ಯೂಟರಿನಲ್ಲಿ ಅನಧಿಕೃತ ತಂತ್ರಾಂಶಗಳನ್ನು ಬಳಸುವುದು, ರಸ್ತೆಬದಿ ಮಾರಾಟಗಾರರಿಂದ ನಕಲಿ ಸಿ.ಡಿ. ಹಾಗೂ ಪುಸ್ತಕಗಳನ್ನು ಕೊಳ್ಳುವುದು - ಇವೆಲ್ಲವೂ ಪೈರಸಿಗೆ ಉದಾಹರಣೆ. ಹಡಗುಗಳ ಮೇಲೆ ದಾಳಿಮಾಡಿ ಅದನ್ನು ಲೂಟಿಮಾಡುವ ಕಡಲುಗಳ್ಳರನ್ನು ಇಂಗ್ಲಿಷಿನಲ್ಲಿ ಪೈರೇಟ್ ಎಂದು ಕರೆಯುತ್ತಾರಲ್ಲ, 'ಪೈರಸಿ' ಹೆಸರಿಗೂ ಅದೇ ಮೂಲ. ಕಂಪ್ಯೂಟರಿನ ಮುಂದೆ ಕುಳಿತು ಕದಿಯುವವರೂ ಸಮುದ್ರದಲ್ಲಿ ಕಳ್ಳತನಮಾಡುವ ಆ ಪೈರೇಟ್‌ಗಳಂತೆಯೇ. ಅದು ಹೇಗೆ ಎಂದು ಕೇಳಿದಿರಾದರೆ ಅದಕ್ಕೆ ಉತ್ತರಿಸುವುದು ಬಹಳ ಸುಲಭ: ಪೈರಸಿಯಿಂದಾಗಿ ಮೂಲ ಹಕ್ಕುದಾರರಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲವಾದ್ದರಿಂದ ಈ ಪಿಡುಗು ದೊಡ್ಡ ಪ್ರಮಾಣದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಪೈರಸಿ ಪೀಡೆಯ ನೇರ ಪರಿಣಾಮ ಉದ್ಯೋಗಾವಕಾಶಗಳ ಮೇಲೆ, ಹಾಗೂ ಒಟ್ಟಾರೆ ಅರ್ಥವ್ಯವಸ್ಥೆಯ ಮೇಲೂ ಬೀಳುವುದರಿಂದ ಉದ್ದಿಮೆಗಳು ಹಾಗೂ ಸರಕಾರಗಳು ಪೈರಸಿ ಪೀಡೆಯ ಕುರಿತು ಸದಾಕಾಲ ಕಿಡಿಕಾರುತ್ತಲೇ ಇರುತ್ತವೆ. ಪೈರಸಿ ತಡೆಗೆ ಹಲವು ಕಾನೂನುಗಳೂ ಇವೆ; ಪೈರಸಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆ ಕೂಡ ಇದೆ!


logo