logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Net Neutrality
ನೆಟ್ ನ್ಯೂಟ್ರಾಲಿಟಿ
(ರೂಪಿಸಬೇಕಿದೆ)
ಅಂತರಜಾಲ - ವಿಶ್ವವ್ಯಾಪಿ ಜಾಲಗಳನ್ನು ಮುಕ್ತವಾಗಿ ಉಳಿಸಿಕೊಳ್ಳಬೇಕು, ಅಲ್ಲಿ ಯಾವುದೇ ರೀತಿಯ ಪಕ್ಷಪಾತಕ್ಕೆ ಅವಕಾಶವಿರದ ತಾಟಸ್ಥ್ಯ ಇರಬೇಕು ಎನ್ನುವುದನ್ನು ಪ್ರತಿಪಾದಿಸುವ ಪರಿಕಲ್ಪನೆ
ವಿಶ್ವದೆಲ್ಲೆಡೆ ಕೋಟ್ಯಂತರ ಕಂಪ್ಯೂಟರುಗಳು, ಮೊಬೈಲ್ ದೂರವಾಣಿ ಮತ್ತಿತರ ಸಾಧನಗಳು ಇದೀಗ ಅಂತರಜಾಲದ ಸಂಪರ್ಕದಲ್ಲಿವೆ. ಇಷ್ಟು ಅಗಾಧ ಪ್ರಮಾಣದ ವ್ಯವಸ್ಥೆಯಾದ ಅಂತರಜಾಲಕ್ಕೆ ಯಾರೂ ಮಾಲೀಕರಿಲ್ಲ. ಅಂದರೆ, ಅಂತರಜಾಲದ ಆಗುಹೋಗುಗಳನ್ನು ಯಾರೂ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುವಂತಿಲ್ಲ. ತಂತ್ರಾಂಶ ಅಭಿವರ್ಧನೆಯಲ್ಲಿ ದಶಕಗಳ ಅನುಭವವಿರುವ ಸಂಸ್ಥೆಯೇ ಆಗಲಿ, ನಿನ್ನೆಯಷ್ಟೇ ತಂತ್ರಜ್ಞಾನದ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಯೇ ಆಗಿರಲಿ - ಇಲ್ಲಿ ಎಲ್ಲರಿಗೂ ಸಮಾನ ಅವಕಾಶ. ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು, ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸಲು ಇಲ್ಲಿ ಎಲ್ಲರೂ ಸ್ವತಂತ್ರರು. ಈ ಪೈಕಿ ಹೆಚ್ಚು ಸೌಲಭ್ಯವಿರುವ ಸಂಸ್ಥೆಗಳು - ಹಣಕಾಸಿನ ಶಕ್ತಿಯಿರುವ ದೊಡ್ಡ ಸಂಸ್ಥೆಗಳೇ ಆಗಲಿ, ಮೂಲಸೌಕರ್ಯದ ಮಾಲೀಕರಾದ ದೂರಸಂಪರ್ಕ ಸಂಸ್ಥೆಗಳೇ ಆಗಲಿ - ತಮ್ಮ ಸ್ಥಾನದ ಪ್ರಭಾವ ಬಳಸಿ ತಮಗೆ ಅಥವಾ ತಮ್ಮ ಗ್ರಾಹಕರಿಗೆ ಲಾಭಮಾಡಿಕೊಡಲು ಹೊರಟರೆ ಅದು ತಪ್ಪು. ನಿರ್ದಿಷ್ಟ ಮೊಬೈಲ್ ಸಂಪರ್ಕ ಬಳಸಿದರೆ ಇಂತಿಷ್ಟು ಜಾಲತಾಣಗಳನ್ನು ಉಚಿತವಾಗಿ ಬಳಸಬಹುದು ಎನ್ನುವಂತಹ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಯುವುದಕ್ಕೆ ಇದೇ ಕಾರಣ. ಅಂತರಜಾಲ - ವಿಶ್ವವ್ಯಾಪಿ ಜಾಲಗಳನ್ನು ರೂಪಿಸಿ ಬೆಳೆಸಿದ ಮಹನೀಯರ ಉದ್ದೇಶದಂತೆ ಅವು ಮುಕ್ತವಾಗಿಯೇ ಉಳಿಯಬೇಕು, ಯಾವುದೇ ಪಕ್ಷಪಾತ ತೋರದೆ ತಟಸ್ಥವಾಗುಳಿದು ಎಲ್ಲರಿಗೂ ಸಮಾನ ಅವಕಾಶ ಒದಗಿಸಬೇಕು, ಹೊಸಹೊಸ ಆವಿಷ್ಕಾರಗಳನ್ನು ಯಾರೇ ಮಾಡಿದರೂ ಪ್ರೋತ್ಸಾಹಿಸಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಯ ಮೂಲಮಂತ್ರ (ನ್ಯೂಟ್ರಾಲಿಟಿ ಎಂದರೆ ತಾಟಸ್ಥ್ಯ ಎಂದರ್ಥ). ಈ ಪರಿಕಲ್ಪನೆಗೆ ಯಾರೂ ಧಕ್ಕೆತಾರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಾಗತಿಕ ಸ್ವಯಂಸೇವಾ ಸಂಸ್ಥೆಗಳೂ ಆಯಾ ದೇಶದ ಸರಕಾರಗಳೂ ವಹಿಸಿಕೊಂಡಿವೆ. ಜಾಲಲೋಕದ ಸಾಮಾನ್ಯ ಬಳಕೆದಾರರೂ ಕಾಲಕಾಲಕ್ಕೆ ಅವರನ್ನೆಲ್ಲ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

Network
ನೆಟ್‌ವರ್ಕ್
ಜಾಲ
ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ, ಪೂರಕ ಸಾಧನಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆ
ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಕಂಪ್ಯೂಟರ್ ನೆಟ್‌ವರ್ಕ್ (ಜಾಲ) ಎಂದು ಕರೆಯುತ್ತಾರೆ. ಯಾವುದೇ ಜಾಲದಲ್ಲಿರುವ ಕಂಪ್ಯೂಟರುಗಳು ಒಂದೇ ಕೋಣೆಯಲ್ಲಿರಬಹುದು, ಪ್ರಪಂಚದ ವಿವಿಧ ಮೂಲೆಗಳಲ್ಲೂ ಇರಬಹುದು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಹೆಸರುಗಳು ಬದಲಾಗುತ್ತವೆ: ನಿರ್ದಿಷ್ಟ ಮಿತಿಯಲ್ಲಿ - ಒಂದು ಕಟ್ಟಡ ಅಥವಾ ಆವರಣದ ಒಳಗೆ - ಅಸ್ತಿತ್ವದಲ್ಲಿರುವ ಜಾಲಗಳಿಗೆ ಲೋಕಲ್ ಏರಿಯಾ ನೆಟ್‌ವರ್ಕ್ (ಲ್ಯಾನ್) ಎಂದು ಹೆಸರು; ಇನ್ನೂ ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಜಾಲ ವೈಡ್ ಏರಿಯಾ ನೆಟ್‌ವರ್ಕ್ (ವ್ಯಾನ್). ಇಂತಹ ಅಸಂಖ್ಯ ಜಾಲಗಳು ಹಾಗೂ ವೈಯಕ್ತಿಕ ಕಂಪ್ಯೂಟರುಗಳ ಜೋಡಣೆಯಿಂದ 'ಇಂಟರ್‌ನೆಟ್' (ಅಂತರಜಾಲ) ರೂಪುಗೊಳ್ಳುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ ಈ ಜಾಲದ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ. ನಿರ್ದಿಷ್ಟ ಗುಂಪುಗಳ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು, ನಿರ್ದಿಷ್ಟ ಸೇವೆಯ ಗ್ರಾಹಕರು, ಯಾವುದೋ ಸಂಘಟನೆಯ ಸದಸ್ಯರು ಇತ್ಯಾದಿ) ಬಳಕೆಗಾಗಿ ಮಾತ್ರವೇ ಮೀಸಲಿರುವ ಜಾಲಗಳೂ ಇವೆ. ಅವನ್ನು 'ಇಂಟ್ರಾನೆಟ್'ಗಳೆಂದು ಕರೆಯುತ್ತಾರೆ.

Network Coverage
ನೆಟ್‌ವರ್ಕ್ ಕವರೇಜ್
(ರೂಪಿಸಬೇಕಿದೆ)
ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ
ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ, ಅಂದರೆ ನೆಟ್‌ವರ್ಕ್ ಕವರೇಜ್, ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ. ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ (ನೆಟ್‌ವರ್ಕ್ ಕೆಪ್ಯಾಸಿಟಿ). ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ. ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು - ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು - ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

Network Capacity
ನೆಟ್‌ವರ್ಕ್ ಕೆಪ್ಯಾಸಿಟಿ
(ರೂಪಿಸಬೇಕಿದೆ)
ಮೊಬೈಲ್ ಜಾಲದ ಧಾರಣ ಶಕ್ತಿ
ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ, ಅಂದರೆ ನೆಟ್‌ವರ್ಕ್ ಕವರೇಜ್, ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ. ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ (ನೆಟ್‌ವರ್ಕ್ ಕೆಪ್ಯಾಸಿಟಿ). ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ. ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು - ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು - ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

Performance Engineering
ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್
(ರೂಪಿಸಬೇಕಿದೆ)
ಯಾವುದೇ ತಂತ್ರಾಂಶ ತನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವಂತೆ ರೂಪಿಸಲು ನೆರವಾಗುವ ಪ್ರಕ್ರಿಯೆ
ತಂತ್ರಾಂಶ ಯಾವ ಕೆಲಸಕ್ಕೆಂದು ತಯಾರಾಗಿದೆಯೋ ಆ ಕೆಲಸವನ್ನು ಮಾಡುವಷ್ಟೇ ಮುಖ್ಯವಾದದ್ದು ಆ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವುದು. ಉದಾಹರಣೆಗೆ ಮೊಬೈಲಿನಲ್ಲಿ ಮೆಸೇಜ್ ಕಳುಹಿಸಲು ಸಾಧ್ಯವಾಗುವುದು ಎಷ್ಟು ಮುಖ್ಯವೋ ಅದಕ್ಕೆ ತಗುಲುವ ಸಮಯ ಅತ್ಯಂತ ಕಡಿಮೆ ಇರಬೇಕಾದ್ದೂ ಅಷ್ಟೇ ಮುಖ್ಯ. ಒಂದು ಮೆಸೇಜ್ ಕಳಿಸಲು ಮೂವತ್ತು ಸೆಕೆಂಡಿನ ಬದಲು ಮೂವತ್ತು ನಿಮಿಷ ಬೇಕು ಎಂದರೆ ಕಾಯಲು ಯಾರಿಗೆ ತಾನೇ ತಾಳ್ಮೆ ಇರುತ್ತದೆ? ತಂತ್ರಾಂಶ ತನ್ನ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯ, ಅಂದರೆ 'ಪರ್‌ಫಾರ್ಮೆನ್ಸ್'ಗೆ ಪ್ರಾಮುಖ್ಯ ಸಿಗುವುದೇ ಈ ಕಾರಣದಿಂದಾಗಿ. ತನ್ನ ಕೆಲಸವನ್ನು ಸರಿಯಾಗಿ, ಸಮರ್ಥವಾಗಿ ನಿರ್ವಹಿಸುವಂತಹ ತಂತ್ರಾಂಶವನ್ನು ರೂಪಿಸಲು ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್ ನಮಗೆ ನೆರವಾಗುತ್ತದೆ. ತಂತ್ರಾಂಶ ಬಳಕೆದಾರರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನೂ ಹೊಂದಿರಬೇಕು, ಮಾಡುವ ಕೆಲಸವನ್ನು ಆದಷ್ಟೂ ಬೇಗನೆ - ತಪ್ಪುಗಳಿಗೆ ಆಸ್ಪದವಿಲ್ಲದಂತೆ ಮಾಡಿ ಮುಗಿಸಬೇಕು ಎನ್ನುವುದು ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್ ಪರಿಕಲ್ಪನೆಯ ಆಶಯ. ತಂತ್ರಾಂಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲಸ ತಂತ್ರಾಂಶ ಅಭಿವೃದ್ಧಿಯ ಪ್ರತಿ ಹಂತದಲ್ಲೂ ಆಗಬೇಕಾಗುತ್ತದೆ. ತಂತ್ರಾಂಶ ಯಾವ ಹೆಜ್ಜೆಯಲ್ಲಿ ಏನು ಕೆಲಸ ಮಾಡಬೇಕು ಎಂದು ತೀರ್ಮಾನವಾಗುವ ಸಂದರ್ಭದಲ್ಲೇ ಆ ಕೆಲಸಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಎನ್ನುವುದನ್ನೂ ಅಂದಾಜಿಸಿಕೊಳ್ಳುವುದು, ಅದಕ್ಕೆ ತಕ್ಕಂತೆಯೇ ತಂತ್ರಾಂಶವನ್ನು ವಿನ್ಯಾಸಗೊಳಿಸುವುದು ಒಳ್ಳೆಯದು.

Permalink
ಪರ್ಮಾಲಿಂಕ್
(ರೂಪಿಸಬೇಕಿದೆ)
ಪರ್ಮನೆಂಟ್ ಲಿಂಕ್; ಜಾಲತಾಣದಲ್ಲಿ ಪ್ರಕಟವಾದ ಪ್ರತಿ ಬರಹಕ್ಕೂ ನೀಡಲಾಗಿರುವ ಪ್ರತ್ಯೇಕ ಕೊಂಡಿ
ಜಾಲತಾಣಗಳಲ್ಲಿನ ಮಾಹಿತಿ ಬಹಳ ಕ್ಷಿಪ್ರವಾಗಿ ಬದಲಾಗುತ್ತಿರುತ್ತದೆ. ಹೊಸ ಸುದ್ದಿಗಳು, ಬರಹಗಳು, ಲೇಖನ, ಚಿತ್ರಗಳು ಬಂದಂತೆಲ್ಲ ಹಳೆಯವನ್ನು ಹುಡುಕುವುದು ಕಷ್ಟವಾಗುತ್ತದೆ. ಇವತ್ತು ಮುಖಪುಟದಲ್ಲಿದ್ದ ಬರಹ ನಾಳೆ ಬರುವಷ್ಟರಲ್ಲಿ ಅಲ್ಲಿಂದ ಮಾಯವಾಗಿರುವುದು ಇಲ್ಲಿ ಸರ್ವೇಸಾಮಾನ್ಯ. ಎಲ್ಲ ಬರಹಗಳಿಗೂ ಒಂದೊಂದು ಪ್ರತ್ಯೇಕ ಕೊಂಡಿ (ಲಿಂಕ್) ನೀಡುವುದು ಈ ಸಮಸ್ಯೆಯನ್ನು ಪರಿಹರಿಸುವ ವಿಧಾನಗಳಲ್ಲೊಂದು. ಇಂತಹ ಕೊಂಡಿಯ ಹೆಸರೇ 'ಪರ್ಮಾಲಿಂಕ್.' ನಮಗೆ ಬೇಕಾದ ಲೇಖನ ತಾಣದ ಮುಖಪುಟದಿಂದ - ಹೊಸ ಲೇಖನಗಳ ಪಟ್ಟಿಯಿಂದ ಮಾಯವಾದರೂ ಸ್ಥಿರವಾದ (ಪರ್ಮನೆಂಟ್) ಈ ಕೊಂಡಿಯ (ಲಿಂಕ್) ಮೂಲಕ ಅದನ್ನು ನಾವು ಯಾವಾಗ ಬೇಕಾದರೂ ತೆರೆಯಬಹುದು. ಪರ್ಮನೆಂಟ್ ಲಿಂಕ್ ಎನ್ನುವುದರ ಸಂಕ್ಷಿಪ್ತರೂಪವೇ ಪರ್ಮಾಲಿಂಕ್. "ಈ ದಿನ ಈ ತಾಣದ ಮುಖಪುಟದಲ್ಲಿ ಕಾಣುತ್ತಿದ್ದ ಬರಹ" ಎನ್ನುವ ಬದಲಿಗೆ ಆ ಬರಹದ ಕೊಂಡಿಯನ್ನೇ ನೇರವಾಗಿ ಉಳಿಸಿಟ್ಟುಕೊಳ್ಳುವುದು ಪರ್ಮಾಲಿಂಕ್‌ಗಳಿಂದಾಗಿ ಸಾಧ್ಯವಾಗುತ್ತದೆ. ಬುಕ್‌ಮಾರ್ಕಿಂಗ್ ವ್ಯವಸ್ಥೆಗಳಲ್ಲಿ ಪರ್ಮಾಲಿಂಕ್‌ಗಳನ್ನು ಉಳಿಸಿಟ್ಟುಕೊಂಡರೆ ನಮಗೆ ಬೇಕಾದ ಲೇಖನವನ್ನು - ಅದು ಎಷ್ಟೇ ಹಳೆಯದಾದರೂ - ಬೇಕಾದಾಗ ತೆರೆದು ಓದಬಹುದು. ಅಂದಹಾಗೆ ಬ್ಲಾಗುಗಳ ಲೋಕದಲ್ಲಿ ಪರ್ಮಾಲಿಂಕ್‌ಗಳ ಬಳಕೆ ವ್ಯಾಪಕವಾಗಿದೆ. ಹೊಸ ಬ್ಲಾಗ್ ಪೋಸ್ಟುಗಳನ್ನು ಬರೆಯುವಾಗ ಪರ್ಮಾಲಿಂಕ್ ಹೇಗಿರಬೇಕು ಎಂದು ಸೂಚಿಸುವ ಸೌಲಭ್ಯವೂ ಹಲವು ಸಿಎಂಎಸ್‌ಗಳಲ್ಲಿರುತ್ತದೆ.
">

Power Supply
ಪವರ್ ಸಪ್ಲೈ
(ರೂಪಿಸಬೇಕಿದೆ)
ವಿದ್ಯುನ್ಮಾನ ಸಾಧನಗಳಿಗೆ ಅಗತ್ಯ ಪ್ರಮಾಣದಲ್ಲಿ ಅಗತ್ಯ ರೂಪದ ವಿದ್ಯುತ್ತನ್ನು ಒದಗಿಸುವ ಯಂತ್ರಾಂಶ ಘಟಕ
ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ ಸಾಧನಗಳು ಕೆಲಸಮಾಡಲು ಅತ್ಯಗತ್ಯವಾಗಿ ಬೇಕಾದ್ದು ವಿದ್ಯುತ್ತಿನ ಪೂರೈಕೆ. ಬೇಕಾದಾಗ ಬೇಕಾದ ರೂಪ ಹಾಗೂ ಪ್ರಮಾಣದ ವಿದ್ಯುತ್ತು ದೊರೆತರಷ್ಟೇ ಈ ಸಾಧನಗಳು ಕೆಲಸಮಾಡುವುದು ಸಾಧ್ಯ. ಅಗತ್ಯ ಪ್ರಮಾಣದಲ್ಲಿ ಅಗತ್ಯ ರೂಪದ ವಿದ್ಯುತ್ತನ್ನು ಒದಗಿಸುವ ಜವಾಬ್ದಾರಿ ಪ್ರತಿ ಸಾಧನದಲ್ಲೂ ಇರುವ 'ಪವರ್ ಸಪ್ಲೈ' ಎಂಬ ಯಂತ್ರಾಂಶ ಘಟಕದ್ದು. ಮನೆಗೆ ಪೂರೈಕೆಯಾಗುವ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು, ಅದರ ವೋಲ್ಟೇಜನ್ನು ಅಗತ್ಯ ಪ್ರಮಾಣದಲ್ಲಿ ನಿಯಂತ್ರಿಸುವುದು, ಅಗತ್ಯವಾದ ಕಡೆಗಳಲ್ಲಿ ವಿದ್ಯುತ್ತಿನ ದ್ವಿಮುಖ ಪ್ರವಾಹವನ್ನು (ಎ.ಸಿ.) ಏಕಮುಖ ಪ್ರವಾಹಕ್ಕೆ (ಡಿ.ಸಿ.) ಪರಿವರ್ತಿಸುವುದು - ಇದೆಲ್ಲ ಪವರ್ ಸಪ್ಲೈಯ ಕೆಲಸಗಳು. ವಿದ್ಯುತ್ ಪೂರೈಕೆಯಲ್ಲಿ ಏರುಪೇರಾದಾಗ ಮುಖ್ಯ ಸಾಧನಕ್ಕೆ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ ಆಗಬಹುದಾದ ಹಾನಿಯನ್ನು ತಡೆಯುವ ಸೌಲಭ್ಯವೂ ಅನೇಕ ಪವರ್ ಸಪ್ಲೈಗಳಲ್ಲಿ ಇರುತ್ತದೆ. ಡೆಸ್ಕ್‌ಟಾಪ್ ಕಂಪ್ಯೂಟರ್ ಸೇರಿದಂತೆ ಅನೇಕ ಉದಾಹರಣೆಗಳಲ್ಲಿ ಈ ಯಂತ್ರಾಂಶ ಘಟಕ ಸಾಧನದ ಒಳಭಾಗದಲ್ಲೇ ಇರುತ್ತದೆ. ಹಲವು ಪ್ರಿಂಟರುಗಳು, ಮಾನಿಟರ್‌ಗಳಲ್ಲಿ ನಾವೇ ನೋಡುವಂತೆ ಬಾಹ್ಯ ಪವರ್ ಸಪ್ಲೈ ಬಳಕೆಯೂ ಸಾಮಾನ್ಯವೇ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳಲ್ಲಿ ಈ ಯಂತ್ರಾಂಶ ಘಟಕ ಚಾರ್ಜರಿನ ಒಂದು ಅಂಗವಾಗಿರುತ್ತದೆ. ಹೀಗೆ ಪವರ್ ಸಪ್ಲೈ ಅನ್ನು ಮುಖ್ಯ ಸಾಧನದಿಂದ ಹೊರಗಿಡುವ ಮೂಲಕ ಸಾಧನದ ಒಟ್ಟಾರೆ ಗಾತ್ರ ಹಾಗೂ ತೂಕವನ್ನು ಕಡಿಮೆಮಾಡುವುದು ಸಾಧ್ಯವಾಗುತ್ತದೆ.

Podcast
ಪಾಡ್‍ಕಾಸ್ಟ್
(ರೂಪಿಸಬೇಕಿದೆ)
ಅಂತರಜಾಲದ ಮೂಲಕ ಹಂಚಿಕೊಳ್ಳುವ ಧ್ವನಿರೂಪದ ಕಡತ
ಬಾನುಲಿಯ (ರೇಡಿಯೋ) ಪ್ರಸರಣ ನಮಗೆಲ್ಲ ಪರಿಚಿತ. ಇದನ್ನು ಇಂಗ್ಲಿಷಿನಲ್ಲಿ ಬ್ರಾಡ್‌ಕಾಸ್ಟ್ ಎಂದು ಕರೆಯುತ್ತಾರೆ. ಮನೆಯಲ್ಲಿ ಕೆಲಸಮಾಡುವಾಗ, ಹೊರಗೆ ಪ್ರಯಾಣಿಸುವಾಗ, ಕಡೆಗೆ ಕರೆಂಟಿಲ್ಲವೆಂದು ಟೀವಿ ಆರಿಸಿ ಕುಳಿತಿದ್ದಾಗಲೂ ಕೇಳಬಹುದಾದದ್ದು ಇದರ ವೈಶಿಷ್ಟ್ಯ. ಆದರೆ ಈ ಸಂವಹನ ಏಕಮುಖವಾದ್ದರಿಂದ ವಿವಿಧ ಬಾನುಲಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೇಳುವುದಷ್ಟೇ ನಮಗಿರುವ ಆಯ್ಕೆ. ಈ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಳ್ಳುವ ಅವಕಾಶ ನಮಗೆ ಸಿಗುವುದು ಬಾನುಲಿಯವರು ನಮ್ಮನ್ನು ಆಹ್ವಾನಿಸಿದಾಗ ಮಾತ್ರ. ಇದರ ಬದಲು ನಮ್ಮ ಮಾಹಿತಿಯನ್ನು ಧ್ವನಿರೂಪದ ಕಡತಗಳಲ್ಲಿ ಉಳಿಸಿಟ್ಟು ಇತರರೊಡನೆ ಹಂಚಿಕೊಂಡರೆ? ಅವರೆಲ್ಲ ಅದನ್ನು ಬೇಕೆಂದಾಗ ಬೇಕಾದ ಕಡೆ - ರೇಡಿಯೋ ಕೇಳುವಂತೆಯೇ - ಕೇಳಬಹುದಲ್ಲ? ಈ ಆಲೋಚನೆಯಿಂದ ಹುಟ್ಟಿದ್ದೇ 'ಪಾಡ್‌ಕಾಸ್ಟ್'ನ ಪರಿಕಲ್ಪನೆ. ಭಾಷಣ, ಸಂದರ್ಶನ, ಹಾಡು, ಚರ್ಚೆ - ಹೀಗೆ ಯಾವುದೇ ಬಗೆಯ ಮಾಹಿತಿಯನ್ನು ರೆಕಾರ್ಡ್ ಮಾಡಿ ಆ ಕಡತವನ್ನು ಜಾಲಲೋಕದಲ್ಲಿ ಹಂಚಿಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ. ಹೀಗೆ ಹಂಚಲಾದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡವರು ತಮ್ಮ ಮೊಬೈಲ್ ಫೋನ್, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ಅದನ್ನು ಎಲ್ಲಿ ಬೇಕಾದರೂ ಕೇಳಬಹುದು. ಅಂದಹಾಗೆ ಪಾಡ್‌ಕಾಸ್ಟ್ ಹೆಸರಿನ ಉತ್ತರಾರ್ಧ 'ಕಾಸ್ಟ್' ಬಂದಿರುವುದು 'ಬ್ರಾಡ್‌ಕಾಸ್ಟ್'ನಿಂದ. ಈ ಪರಿಕಲ್ಪನೆಯ ವಿಕಾಸವಾಗುತ್ತಿದ್ದ ಸಮಯದಲ್ಲಿ ಆಪಲ್ ಸಂಸ್ಥೆಯ 'ಐಪಾಡ್' ಸಾಧನ ಜನಪ್ರಿಯವಾಗಿತ್ತು, ಹಾಗಾಗಿ 'ಐಪಾಡ್‌ನಲ್ಲಿ ಕೇಳಬಹುದಾದ ಬ್ರಾಡ್‌ಕಾಸ್ಟ್' ಎನ್ನುವ ಅರ್ಥದಲ್ಲಿ ಇದನ್ನು 'ಪಾಡ್‌ಕಾಸ್ಟ್' ಎಂದು ಕರೆಯಲಾಯಿತು. ಪಾಡ್‌ಕಾಸ್ಟ್‌ಗಳನ್ನು ಐಪಾಡ್‌ನಲ್ಲಿ ಮಾತ್ರವೇ ಅಲ್ಲ, ನಮ್ಮ-ನಿಮ್ಮ ಮೊಬೈಲುಗಳಲ್ಲೂ ಸರಾಗವಾಗಿ ಕೇಳಬಹುದು.

Popup
ಪಾಪ್ ಅಪ್
(ರೂಪಿಸಬೇಕಿದೆ)
ಕಂಪ್ಯೂಟರಿನಲ್ಲಿ, ಬಹಳಷ್ಟು ಸಾರಿ ಅನಪೇಕ್ಷಿತವಾಗಿ, ತೆರೆದುಕೊಳ್ಳುವ ಹೊಸ ಕಿಟಕಿ (ವಿಂಡೋ)
ವಿಶ್ವವ್ಯಾಪಿ ಜಾಲದಲ್ಲಿ ಜಾಲತಾಣಗಳನ್ನು ವೀಕ್ಷಿಸುತ್ತಿರುವಾಗ ಕೊಂಡಿಗಳ (ಲಿಂಕ್) ಮೇಲೆ ಕ್ಲಿಕ್ಕಿಸುವುದು, ಬೇರೆಬೇರೆ ಜಾಲತಾಣಗಳಿಗೆ ಭೇಟಿಕೊಡುವುದು ಸಾಮಾನ್ಯ ಸಂಗತಿ. ಹೀಗೆ ಮಾಡುವಾಗ ಕೆಲವೊಮ್ಮೆ ಹೊಸ ಕಿಟಕಿಗಳು (ವಿಂಡೋ) ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತವಲ್ಲ, ಇಂತಹ ಕಿಟಕಿಗಳನ್ನು 'ಪಾಪ್-ಅಪ್' ಕಿಟಕಿಗಳೆಂದು ಕರೆಯುತ್ತಾರೆ. ಪಾಪ್-ಅಪ್‌ಗಳನ್ನು ಹೆಚ್ಚಾಗಿ ಬಳಸಲಾಗುವುದು ಜಾಹೀರಾತಿನ ಪ್ರದರ್ಶನಕ್ಕಾಗಿ. ಸಾಮಾನ್ಯ ಜಾಹೀರಾತುಗಳಷ್ಟೇ ಅಲ್ಲ, ಬಳಕೆದಾರರನ್ನು ಮೋಸಗೊಳಿಸಲು ರೂಪಿಸಲಾಗಿರುವ ನಕಲಿ ತಾಣಗಳ - ಕುತಂತ್ರಾಂಶಗಳ ಪ್ರಚಾರದಲ್ಲೂ ಇವು ವ್ಯಾಪಕವಾಗಿ ಬಳಕೆಯಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಇಂತಹ ಪಾಪ್-ಅಪ್ ಜಾಹೀರಾತುಗಳು ಕಾಣಿಸಿಕೊಳ್ಳುವುದಕ್ಕೆ ಯಾವುದೋ ಒಂದು ಕುತಂತ್ರಾಂಶವೇ ಕಾರಣವಾಗಿರುತ್ತದೆ (ಜಾಹೀರಾತುಗಳನ್ನು ಪ್ರದರ್ಶಿಸಿ ಆ ಮೂಲಕ ದುಡ್ಡುಮಾಡುವ ಉದ್ದೇಶದ ಇಂತಹ ಕುತಂತ್ರಾಂಶಗಳನ್ನು 'ಆಡ್‌ವೇರ್'ಗಳೆಂದು ಗುರುತಿಸಲಾಗುತ್ತದೆ). ಪಾಪ್-ಅಪ್ ಕಿಟಕಿಗಳು ಹಾಗೂ ಜಾಹೀರಾತುಗಳು ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುತ್ತವಲ್ಲ, ಹಾಗಾಗಿ ಅವುಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆದಿವೆ. ಇಂತಹ ಕಿಟಕಿಗಳನ್ನು ತೆರೆಯದಂತೆ ತಡೆಹಿಡಿಯುವ 'ಪಾಪ್-ಅಪ್ ಬ್ಲಾಕರ್' ಸೌಲಭ್ಯ ಇಂದಿನ ಹಲವು ಬ್ರೌಸರುಗಳ ಅಂಗವೇ ಆಗಿಬಿಟ್ಟಿದೆ. ಜಾಹೀರಾತುಗಳನ್ನು ತಡೆಯುವ 'ಆಡ್ ಬ್ಲಾಕರ್' ತಂತ್ರಾಂಶಗಳೂ ಪಾಪ್-ಅಪ್ ಕಿರಿಕಿರಿ ನಿವಾರಿಸುವಲ್ಲಿ ನೆರವಾಗುತ್ತವೆ. ಅಂದಹಾಗೆ ಎಲ್ಲ ಪಾಪ್-ಅಪ್ ಕಿಟಕಿಗಳನ್ನೂ ತಡೆದುಬಿಟ್ಟರೆ ಅವು ನಮಗೆ ನಿಜಕ್ಕೂ ಬೇಕಾದ ಸಂದರ್ಭಗಳಲ್ಲಿ (ಉದಾ: ಕೆಲ ನೆಟ್‌ಬ್ಯಾಂಕಿಂಗ್ ತಾಣಗಳಲ್ಲಿ) ತೊಂದರೆಯಾಗಬಹುದು. ಹಾಗಾಗಿ ಈ ತಂತ್ರಾಂಶಗಳು ನಿರ್ದಿಷ್ಟ ತಾಣಗಳಿಗೆ ಪಾಪ್-ಅಪ್ ಕಿಟಕಿಗಳನ್ನು ತೆರೆಯಲು ಅನುಮತಿಸುವ ಸ್ವಾತಂತ್ರ್ಯವನ್ನು ಬಳಕೆದಾರರಾದ ನಮಗೇ ನೀಡುತ್ತವೆ.

Point of Interconnection
ಪಾಯಿಂಟ್ ಆಫ್ ಇಂಟರ್‌ಕನೆಕ್ಶನ್
(ರೂಪಿಸಬೇಕಿದೆ)
ಬೇರೆಬೇರೆ ಮೊಬೈಲ್ ಸಂಸ್ಥೆಗಳ ಗ್ರಾಹಕರ ನಡುವೆ ಪರಸ್ಪರ ಸಂವಹನ ಸಾಧ್ಯವಾಗುವಂತೆ ಆ ಸಂಸ್ಥೆಗಳು ರೂಪಿಸಿಕೊಳ್ಳುವ ಸಂಪರ್ಕ
ಬೇರೆಬೇರೆ ಬಳಕೆದಾರರು ಬೇರೆಬೇರೆ ಸಂಸ್ಥೆಗಳಿಂದ ದೂರವಾಣಿ ಸಂಪರ್ಕ ಪಡೆದು ಬಳಸುವುದು ತೀರಾ ಸಾಮಾನ್ಯ ಸಂಗತಿ. ಈ ಸಂಪರ್ಕ ಬಳಸಿಕೊಂಡು ನಮ್ಮ ಗೆಳೆಯರನ್ನು - ಅವರು ಯಾವುದೇ ಸಂಸ್ಥೆಯ ಚಂದಾದಾರರಾಗಿರಲಿ - ಸುಲಭವಾಗಿ ಸಂಪರ್ಕಿಸಬಹುದೆನ್ನುವುದೂ ನಮಗೆ ಗೊತ್ತು. ಮೊಬೈಲ್ ಆಗಿರಲಿ ಲ್ಯಾಂಡ್‌ಲೈನ್ ಆಗಿರಲಿ, ದೂರವಾಣಿ ಸೇವೆ ಒದಗಿಸುವ ಪ್ರತಿಯೊಂದು ಸಂಸ್ಥೆಯೂ ತನ್ನ ಚಂದಾದಾರರ ಅಗತ್ಯಗಳನ್ನು ಪೂರೈಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತದೆ. ಆ ಚಂದಾದಾರರು ಬೇರೆ ಸಂಸ್ಥೆಯ ಗ್ರಾಹಕರಿಗೂ ಕರೆಮಾಡಬೇಕಲ್ಲ, ಅದಕ್ಕಾಗಿಯೇ ಪ್ರತಿ ಸಂಸ್ಥೆಯೂ ಇತರ ಸಂಸ್ಥೆಗಳ ಇಂತಹವೇ ವ್ಯವಸ್ಥೆಗಳೊಡನೆ ಸಂಪರ್ಕ ಏರ್ಪಡಿಸಿಕೊಂಡಿರುತ್ತದೆ. 'ಪಾಯಿಂಟ್ ಆಫ್ ಇಂಟರ್‌ಕನೆಕ್ಷನ್' ಎಂದು ಕರೆಯುವುದು ಈ ಸಂಪರ್ಕವನ್ನೇ. ಯಾವುದೇ ಸಂಸ್ಥೆಗಳ ನಡುವೆ ಇಂತಹ ಸಂಪರ್ಕಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೆ ಆ ಸಂಸ್ಥೆಗಳ ಚಂದಾದಾರರು ಪರಸ್ಪರ ಕರೆಮಾಡಲು ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ದೂರವಾಣಿ ಸಂಸ್ಥೆಗಳು ಹೊಸ ಸಂಸ್ಥೆಗಳೊಡನೆಯೂ ಸಂಪರ್ಕ ಕಲ್ಪಿಸಿಕೊಳ್ಳಬೇಕಾದ್ದು ಕಡ್ಡಾಯವೆಂದು ಟ್ರಾಯ್‌ನಂತಹ ನಿಯಂತ್ರಕರು ಹೇಳುವುದು ಇದೇ ಕಾರಣಕ್ಕಾಗಿ. ಅಂದಹಾಗೆ ಪಾಯಿಂಟ್ ಆಫ್ ಇಂಟರ್‌ಕನೆಕ್ಷನ್ ಮೂಲಕ ಎರಡನೆಯ ಸಂಸ್ಥೆಯ ವ್ಯವಸ್ಥೆಯನ್ನು ಪ್ರವೇಶಿಸುವ ಪ್ರತಿ ಕರೆಗೂ ಆ ಕರೆಮಾಡಿದ ಚಂದಾದಾರರ ಸಂಸ್ಥೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ಕರೆಮಾಡುವವರು ಸ್ವೀಕರಿಸುವವರು ಇಬ್ಬರೂ ಒಂದೇ ಸಂಸ್ಥೆಯ ಚಂದಾದಾರರಾದರೆ ಅಷ್ಟು ಹಣ ಸಂಸ್ಥೆಗೇ ಉಳಿಯುತ್ತದೆ. ತಮ್ಮದೇ ಸಂಸ್ಥೆಯ ಚಂದಾದಾರರಿಗೆ ಕರೆಮಾಡಿದರೆ ವಿಶೇಷ ಕೊಡುಗೆಗಳೆಲ್ಲ ಇರುತ್ತವಲ್ಲ, ಅದಕ್ಕೆ ಇದೇ ಕಾರಣ!


logo