logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Hacker
ಹ್ಯಾಕರ್
(ರೂಪಿಸಬೇಕಿದೆ)
ಬೇರೊಬ್ಬರ ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ವ್ಯಕ್ತಿ
ಬೇರೊಬ್ಬರ ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ಪ್ರಕ್ರಿಯೆಯನ್ನು ಹ್ಯಾಕಿಂಗ್ ಎಂದು ಗುರುತಿಸಲಾಗುತ್ತದೆ. ಇದರಲ್ಲಿ ತೊಡಗಿದವರನ್ನು ಹ್ಯಾಕರ್‌ಗಳೆಂದು ಕರೆಯುವುದು ಸಾಮಾನ್ಯ ಅಭ್ಯಾಸ. ಹ್ಯಾಕರ್‌ಗಳ ಉದ್ದೇಶ ಅನೇಕ ಬಗೆಯದಾಗಿರುವುದು ಸಾಧ್ಯ. ಹ್ಯಾಕರುಗಳ ಪೈಕಿ ಅನೇಕರು ಇತರರ ಮಾಹಿತಿಯನ್ನು ಕದ್ದು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಾಹ್ಯ ಜಗತ್ತು ವಿಲನ್‌ಗಳಂತೆ ನೋಡುವುದು ಇಂತಹವರನ್ನೇ. ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಇವರ ಕೆಲಸ ಶಿಕ್ಷಾರ್ಹ ಅಪರಾಧವೆನಿಸಿಕೊಳ್ಳುತ್ತದೆ. ಆದರೆ ಎಲ್ಲ ಹ್ಯಾಕರ್‌ಗಳೂ ಖಳನಾಯಕರೇ ಆಗಬೇಕೆಂದಿಲ್ಲ. ಕಂಪ್ಯೂಟರ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರೀಕ್ಷಿಸಿ ಅವುಗಳ ಸುರಕ್ಷತೆಯಲ್ಲಿರಬಹುದಾದ ದೋಷಗಳನ್ನು ಗುರುತಿಸುವ ಹ್ಯಾಕರ್‌ಗಳೂ ಇದ್ದಾರೆ. ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬಯಸುವ ಸಂಸ್ಥೆಗಳಿಗೆ ಈ ಬಗೆಯ ಹ್ಯಾಕರುಗಳಿಂದ ಮಹತ್ವದ ನೆರವು ದೊರಕುತ್ತದೆ. ದುರುದ್ದೇಶಪೂರಿತ ವ್ಯಕ್ತಿಗಳು ನಮ್ಮ ವ್ಯವಸ್ಥೆಯನ್ನು ಹಾಳುಗೆಡವಲು ಏನೇನೆಲ್ಲ ಮಾಡಬಹುದು ಎಂದು ಊಹಿಸಿ, ಅವರ ಕುತಂತ್ರಗಳು ಸಫಲವಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇಂತಹ ಹ್ಯಾಕರುಗಳ ನೆರವಿನಿಂದ ಸಾಧ್ಯವಾಗುತ್ತದೆ. ಅಂದಹಾಗೆ ಹ್ಯಾಕಿಂಗ್‌ನ ಸ್ವರೂಪ ಮೂಲತಃ ಹೀಗಿರಲಿಲ್ಲವಂತೆ. ೧೯೬೦ರ ದಶಕದಲ್ಲಿ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಹ್ಯಾಕಿಂಗ್ ಕಲ್ಪನೆ ಜನ್ಮತಳೆದ ಸಂದರ್ಭದಲ್ಲಿ ಚಿತ್ರವಿಚಿತ್ರ ತಂತ್ರಾಂಶಗಳನ್ನು ಬರೆಯುವವರು, ಕುಚೋದ್ಯಕ್ಕಾಗಿ ಪ್ರಾಕ್ಟಿಕಲ್ ಜೋಕ್ ಮಾಡುವವರು, ಏನೇನೋ ಸಾಹಸಮಾಡುವವರನ್ನೆಲ್ಲ ಹ್ಯಾಕರ್‌ಗಳೆಂದು ಕರೆಯಲಾಗುತ್ತಿತ್ತು. ಕಂಪ್ಯೂಟರುಗಳ ಸುರಕ್ಷತಾ ವ್ಯವಸ್ಥೆಯನ್ನು ಭೇದಿಸಿ ಅದರಲ್ಲಿನ ಹುಳುಕುಗಳನ್ನು ತೋರಿಸಿಕೊಡುವುದೂ ಅಂದಿನ ಹ್ಯಾಕರ್‌ಗಳ ಹವ್ಯಾಸಗಳಲ್ಲೊಂದಾಗಿತ್ತು ಎಂದು ಇತಿಹಾಸ ಹೇಳುತ್ತದೆ.

Haptics
ಹ್ಯಾಪ್ಟಿಕ್ಸ್
(ರೂಪಿಸಬೇಕಿದೆ)
ಕಂಪ್ಯೂಟರ್ - ಸ್ಮಾರ್ಟ್‌ಫೋನ್‌ಗಳ ಜೊತೆಗಿನ ನಮ್ಮ ಒಡನಾಟಕ್ಕೆ ಸ್ಪರ್ಶದ ಅನುಭವವನ್ನೂ ಸೇರಿಸುವ ತಂತ್ರಜ್ಞಾನ
ಕಂಪ್ಯೂಟರ್ - ಸ್ಮಾರ್ಟ್‌ಫೋನ್‌ಗಳನ್ನೆಲ್ಲ ಬಳಸುವಾಗ ನಮ್ಮ ಅನುಭವವೆಲ್ಲ ನೋಡುವುದಕ್ಕೆ ಹಾಗೂ ಕೇಳುವುದಕ್ಕಷ್ಟೇ ಸೀಮಿತವಾಗಿರುವುದು ಸಾಮಾನ್ಯ. ನೋಡುವ - ಕೇಳುವ ಅನುಭವದ ಜೊತೆಗೆ ಈ ಒಡನಾಟಕ್ಕೆ ಸ್ಪರ್ಶದ ಅನುಭವವನ್ನೂ ಸೇರಿಸುವುದು 'ಹ್ಯಾಪ್ಟಿಕ್ಸ್'ನ ಹೆಚ್ಚುಗಾರಿಕೆ. ಛಾಯಾವಾಸ್ತವದ (ವರ್ಚುಯಲ್ ರಿಯಾಲಿಟಿ) ಜಗತ್ತಿಗೆ ಇದು ಸ್ಪರ್ಶದ ಹೊಸ ಆಯಾಮವನ್ನು ಸೇರಿಸುತ್ತದೆ. ಕಂಪ್ಯೂಟರಿನಲ್ಲಿ ಟೈಪಿಸುವಾಗ ಅದರ ಕೀಲಿಗಳು ನಮ್ಮ ಸ್ಪರ್ಶಕ್ಕೆ ಸ್ಪಂದಿಸುವುದು ನಮ್ಮ ಅನುಭವಕ್ಕೆ ಬರುತ್ತದೆ. ಅದೇ ಮೊಬೈಲ್ ಟಚ್‌ಸ್ಕ್ರೀನ್ ಮೇಲಿನ ಕೀಲಿಮಣೆಯಾದರೆ ಅದರಲ್ಲಿನ ಕೀಲಿಗಳು ನೋಡಲು ಎಷ್ಟೇ ಸಹಜವಾಗಿ ಕಂಡರೂ ಅವುಗಳನ್ನು ಸ್ಪರ್ಶಿಸುವ ಅನುಭವ ಮಾತ್ರ ಸಿಗುವುದಿಲ್ಲ. ಪರದೆಯ ಮೇಲಿನ ಕೀಲಿಯನ್ನು ಸ್ಪರ್ಶಿಸಿದಾಗ ಮೊಬೈಲು ಸಣ್ಣದಾಗಿ ಕಂಪಿಸುವಂತೆ ಮಾಡಿ ಸ್ಪರ್ಶದ ಅನುಭವವನ್ನೂ ನೀಡುವುದು ಹ್ಯಾಪ್ಟಿಕ್ಸ್‌ನಿಂದಾಗಿ ಸಾಧ್ಯವಾಗುತ್ತದೆ. ಮೊಬೈಲಿನಲ್ಲಷ್ಟೇ ಅಲ್ಲ, ಕಂಪ್ಯೂಟರ್ ಆಟಗಳಲ್ಲಿ ಬಳಕೆಯಾಗುವ ಜಾಯ್‌ಸ್ಟಿಕ್‌ನಂತಹ ಸಾಧನಗಳಲ್ಲೂ ಸ್ಪರ್ಶದ ಅನುಭವ ನೀಡಬಹುದು; ಅಂದರೆ, ಕಾರ್ ರೇಸ್ ಆಟದಲ್ಲಿ ನಿಮ್ಮ ಕಾರು ಹಳ್ಳಕೊಳ್ಳಗಳಿಗೆ ಇಳಿದಾಗ - ರೋಡ್ ಹಂಪ್ ಮೇಲೆ ಹಾದುಹೋದಾಗ ಜಾಯ್‌ಸ್ಟಿಕ್ ಅಲುಗಾಡುವಂತೆ ಮಾಡುವುದು ಹ್ಯಾಪ್ಟಿಕ್ಸ್ ಸಹಾಯದಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಟಚ್‌ಸ್ಕ್ರೀನ್ ಪರದೆಯ ಮೇಲೆ ಕಾಣುವ ಚಿತ್ರವನ್ನು ಮುಟ್ಟಿದರೆ ಅದರಲ್ಲಿರುವ ವಸ್ತುಗಳನ್ನು ಮುಟ್ಟಿದ ಅನುಭವವೇ ಆಗುವಂತೆಯೂ ಇದು ಮಾಡಬಲ್ಲದು. ಈ ಪರಿಕಲ್ಪನೆಯನ್ನು 'ವರ್ಚುಯಲ್ ಟಚ್' ಎಂದು ಕರೆಯುತ್ತಾರೆ.

Hashtag
ಹ್ಯಾಶ್‌ಟ್ಯಾಗ್
(ರೂಪಿಸಬೇಕಿದೆ)
ಹ್ಯಾಶ್ (#) ಸಂಕೇತದಿಂದ ಪ್ರಾರಂಭವಾಗುವ ಯಾವುದೇ ಪದ ಅಥವಾ ಪದಗುಚ್ಛ; ಸಮಾಜಜಾಲಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಒಟ್ಟಿಗೆ ಗುರುತಿಸಲು ಇವು ಬಳಕೆಯಾಗುತ್ತವೆ.
ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಮಾಜಜಾಲಗಳಲ್ಲಿ ನಾವು ದಿನವೂ ನೋಡುವ ಅನೇಕ ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸಲಾಗಿರುತ್ತದೆ. ಇಂತಹ ಪದಗಳನ್ನು 'ಹ್ಯಾಶ್‌ಟ್ಯಾಗ್'ಗಳೆಂದು ಕರೆಯುತ್ತಾರೆ. ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada - ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು. ಇಂತಹ ಯಾವುದೇ ಹ್ಯಾಶ್‌ಟ್ಯಾಗ್ ಬಳಸಿರುವ ಎಲ್ಲ ಸಂದೇಶಗಳನ್ನೂ ಸಮಾಜ ಜಾಲಗಳು ಪ್ರತ್ಯೇಕವಾಗಿ ವರ್ಗೀಕರಿಸುತ್ತವೆ. ಹಾಗಾಗಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿರುವ ಸಂದೇಶಗಳನ್ನು ಒಟ್ಟಾಗಿ ನೋಡುವುದು, ಹಾಗೂ ಅದನ್ನು ಎಷ್ಟು ಮಂದಿ ಬಳಸಿದ್ದಾರೆ ಎನ್ನುವುದರ ಆಧಾರದ ಮೇಲೆ ಆ ವಿಷಯದ ಜನಪ್ರಿಯತೆಯನ್ನು ಅರಿಯುವುದು ಕೂಡ ಸಾಧ್ಯವಾಗುತ್ತದೆ. ನಿರ್ದಿಷ್ಟ ವಿಷಯದ ಕುರಿತು ಹಂಚಿಕೊಳ್ಳಲಾಗಿರುವ ಮಾಹಿತಿ ಅಥವಾ ಸಂದೇಶಗಳನ್ನು ಹುಡುಕುವುದಕ್ಕೂ ಹ್ಯಾಶ್‌ಟ್ಯಾಗ್‌ಗಳು ಸಹಕಾರಿ. ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗಳಿಗಾಗಲೀ ಖಾಲಿಜಾಗಗಳಿಗಾಗಲೀ (ಸ್ಪೇಸ್) ಹ್ಯಾಶ್‌ಟ್ಯಾಗ್‌ನಲ್ಲಿ ಜಾಗವಿಲ್ಲ.

3D Printing
೩ಡಿ ಪ್ರಿಂಟಿಂಗ್
(ರೂಪಿಸಬೇಕಿದೆ)
ಮೂರು ಆಯಾಮದ ವಸ್ತುಗಳ ಮುದ್ರಣವನ್ನು ಸಾಧ್ಯವಾಗಿಸುವ ತಂತ್ರಜ್ಞಾನ
ಕಂಪ್ಯೂಟರಿಗೊಂದು ಪ್ರಿಂಟರ್ ಜೋಡಿಸಿ ಬೇಕಾದ ಕಡತವನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ನಮಗೆಲ್ಲ ಗೊತ್ತು. ಇಲ್ಲಿ ನಮ್ಮ ಕೈಗೆ ಬರುವ ಮುದ್ರಿತ ಪ್ರತಿ (ಪ್ರಿಂಟ್-ಔಟ್) ಎರಡು ಆಯಾಮದ್ದು. ಇದೇ ರೀತಿಯಲ್ಲಿ ಮೂರು ಆಯಾಮದ ಪ್ರಿಂಟ್-ಔಟ್‌ಗಳನ್ನೂ ಪಡೆಯಲು ಸಾಧ್ಯವಾಗಿಸುವ ತಂತ್ರಜ್ಞಾನವೇ ೩ಡಿ ಪ್ರಿಂಟಿಂಗ್. ಇಲ್ಲಿ ಪಠ್ಯವನ್ನೋ ಚಿತ್ರವನ್ನೋ ಮುದ್ರಿಸಿಕೊಳ್ಳುವ ಬದಲಿಗೆ ನಮಗೇನು ಬೇಕೋ ಅದನ್ನೇ ತಯಾರಿಸಿಕೊಂಡುಬಿಡುವುದು ಸಾಧ್ಯ. ರಿಮೋಟ್ ಕಂಟ್ರೋಲಿನ ಮುರಿದುಹೋಗಿರುವ ಭಾಗವಾದರೂ ಸರಿ, ಬಿರುಕುಬಿಟ್ಟಿರುವ ಮೊಬೈಲ್ ಕವಚವಾದರೂ ಸರಿ; ಅದರ ವಿನ್ಯಾಸದ ವಿವರಗಳನ್ನು ಸೂಕ್ತ ತಂತ್ರಾಂಶದ ಮೂಲಕ ೩ಡಿ ಮುದ್ರಣಯಂತ್ರಕ್ಕೆ ಒಪ್ಪಿಸಿದರೆ ಸಾಕು, ಅದು ಹೊಸ ಭಾಗವನ್ನು ಸೃಷ್ಟಿಸಿಕೊಟ್ಟುಬಿಡುತ್ತದೆ. ಕಾಗದದ ಮೇಲೆ ಮುದ್ರಿಸುವ ಮುದ್ರಣಯಂತ್ರ ಬಣ್ಣದ ಇಂಕು ಬಳಸಿದಂತೆ ಬಹುತೇಕ ೩ಡಿ ಪ್ರಿಂಟರುಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತದೆ; ಬಣ್ಣದ ಹನಿಗಳು ಕಾಗದದ ಮೇಲೆ ಅಕ್ಷರ-ಚಿತ್ರಗಳನ್ನು ರೂಪಿಸಿದ ಹಾಗೆ ಪ್ಲಾಸ್ಟಿಕ್ಕಿನ ಹನಿಗಳು ೩ಡಿ ಪ್ರಿಂಟರಿನ ಮೂಲಕ ಹೊರಬಂದು ಜೋಡಣೆಯಾಗಿ ನಮಗೆ ಬೇಕಾದ ವಸ್ತುವನ್ನು ಮೂರು ಆಯಾಮಗಳಲ್ಲಿ ರೂಪಿಸಿಕೊಡುತ್ತವೆ. ಕಾಗದದ ಮೇಲೆ ಮುದ್ರಿಸುವ ಯಂತ್ರದಲ್ಲಿ ಬಣ್ಣವನ್ನು ಹೊರಸೂಸುವ ಭಾಗ ಕಾಗದದ ಮೇಲೆ ಒಂದೇ ನೇರದಲ್ಲಿ ಚಲಿಸುವಂತಿದ್ದರೆ ಸಾಕು. ಆದರೆ ೩ಡಿ ಪ್ರಿಂಟಿಂಗಿನಲ್ಲಿ ಹಾಗಲ್ಲ - ಪ್ಲಾಸ್ಟಿಕ್ಕನ್ನು ಹೊರಸೂಸುವ ಭಾಗ ಎಡಕ್ಕೂ ಬಲಕ್ಕೂ ಚಲಿಸುವ ಜೊತೆಗೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ (ನಮಗೆ ಬೇಕಾದ ವಸ್ತು ಒಂದು ಫಲಕದ ಮೇಲೆ ರೂಪುಗೊಳ್ಳುತ್ತದಲ್ಲ, ಆ ಫಲಕವೂ ತಿರುಗುತ್ತದೆ). ಹಾಗಾಗಿಯೇ ಪ್ಲಾಸ್ಟಿಕ್ ಪದರಗಳು ಮೂರು ಆಯಾಮಗಳ ಆಕೃತಿಯಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆ.

404 Not Found
೪೦೪ ನಾಟ್ ಫೌಂಡ್
(ರೂಪಿಸಬೇಕಿದೆ)
ವಿಶ್ವವ್ಯಾಪಿ ಜಾಲದಲ್ಲಿ ನಾವು ತೆರೆಯಲು ಬಯಸಿದ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ ಕಾಣಿಸಿಕೊಳ್ಳುವ ದೋಷ (ಎರರ್)
ಕಂಪ್ಯೂಟರನ್ನು, ಮೊಬೈಲ್ ಫೋನನ್ನು ಬಳಸುವಾಗ ನಾವು ಆಗಿಂದಾಗ್ಗೆ ಹಲವು ದೋಷಗಳನ್ನು (ಎರರ್) ಎದುರಿಸಬೇಕಾಗಿ ಬರುವುದುಂಟು. ತಂತ್ರಾಂಶ - ಯಂತ್ರಾಂಶಗಳಲ್ಲಿನ ಯಾವುದೇ ವೈಫಲ್ಯ ಅಥವಾ ಅವನ್ನು ಬಳಸುವಲ್ಲಿ ನಮ್ಮದೇ ತಪ್ಪು ಇಂತಹ ದೋಷಗಳಿಗೆ ಕಾರಣವಾಗಬಹುದು. ಕೆಲ ಬಾರಿ ದೋಷಗಳ ಪರಿಣಾಮವಷ್ಟೇ (ಕಂಪ್ಯೂಟರ್ ಕೆಲಸಮಾಡದಿರುವುದು, ಆಪ್ ತೆರೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಹೀಗೆ) ನಮ್ಮ ಗಮನಕ್ಕೆ ಬರುತ್ತದೆ, ನಿಜ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅವು ಸಂದೇಶದ ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ಕಾಣಸಿಗುವ '೪೦೪', ಇಂತಹ ದೋಷಗಳಲ್ಲೊಂದು. ನಾವು ತೆರೆಯಲು ಬಯಸಿದ ಯಾವುದೇ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ ಈ ದೋಷ ಉಂಟಾಗುತ್ತದೆ. ತಾಣದ ವಿಳಾಸ ಬದಲಾದಾಗ, ನಾವು ಅದನ್ನು ತಪ್ಪಾಗಿ ಟೈಪ್ ಮಾಡಿದಾಗ, ನಿರ್ದಿಷ್ಟ ಪುಟ/ಕಡತವನ್ನು ಆ ತಾಣದಿಂದ ತೆಗೆದುಹಾಕಿದಾಗ - ಹೀಗೆ ಈ ದೋಷಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಇಂತಹ ಪ್ರತಿಯೊಂದು ಸನ್ನಿವೇಶದಲ್ಲೂ ಸಂಬಂಧಪಟ್ಟ ಜಾಲತಾಣ '೪೦೪ ನಾಟ್ ಫೌಂಡ್' ಎನ್ನುವ ಸಂದೇಶವನ್ನು ತೋರಿಸುವುದರಿಂದ ಇದರ ಹೆಸರು ಮಾತ್ರ ಬಳಕೆದಾರರ ನೆನಪಿನಲ್ಲಿ ಭದ್ರವಾಗಿ ಉಳಿದುಕೊಂಡುಬಿಟ್ಟಿದೆ! ಅಂದಹಾಗೆ ನಿರ್ದಿಷ್ಟ ದೋಷಗಳು ಸಂಭವಿಸಿದಾಗ ಅವನ್ನು ಪ್ರತ್ಯೇಕ ಸಂಖ್ಯೆಗಳ (ಸ್ಟೇಟಸ್ ಕೋಡ್) ಮೂಲಕ ಗುರುತಿಸುವುದು ಕಂಪ್ಯೂಟರ್ ಜಗತ್ತಿನ ಸಾಮಾನ್ಯ ಅಭ್ಯಾಸ. ಬಹುತೇಕ ಸನ್ನಿವೇಶಗಳಲ್ಲಿ ಈ ಸಂಖ್ಯೆಯ ಪರಿಚಯ ತಂತ್ರಜ್ಞರಿಗಷ್ಟೇ ಇರುತ್ತದೆ; ಅದನ್ನು ಮೀರಿ ಸಾಮಾನ್ಯ ಬಳಕೆದಾರರಿಗೂ ಪರಿಚಿತವಾಗಿರುವುದು ಈ ೪೦೪ರ ಹೆಚ್ಚುಗಾರಿಕೆ. ಇದರ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಏನು ಮಾಡಬೇಕೆಂದು ತೋಚದೆ ಪೆದ್ದುಪೆದ್ದಾಗಿ ಆಡುವವರನ್ನು ('ಕ್ಲೂಲೆಸ್') ೪೦೪ ಎಂದು ಗುರುತಿಸುವ ಅಭ್ಯಾಸವೂ ಇದೆ!

Outbox
ಔಟ್‌ಬಾಕ್ಸ್
(ರೂಪಿಸಬೇಕಿದೆ)
ನಾವು ಕಳಿಸುವ ಇಮೇಲ್ ಸಂದೇಶಗಳು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ ಔಟ್‌ಬಾಕ್ಸ್ ಎಂದು ಹೆಸರು.
ಕಾಗದದ ಕಡತಗಳನ್ನು ನಿಭಾಯಿಸುವ ಕಚೇರಿಗಳಲ್ಲಿ ಒಳಬರುವ ಕಡತಗಳನ್ನು, ಹೊರಹೋಗುವ ಕಡತಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಭ್ಯಾಸವಿದೆ. ಹೊಸದಾಗಿ ಪರಿಶೀಲನೆಗೆ ಬಂದ ಕಡತಗಳನ್ನು 'ಇನ್ ಟ್ರೇ'ಯಲ್ಲೂ ಪರಿಶೀಲನೆಯ ನಂತರ ಮುಂದಿನ ಕ್ರಮಕ್ಕೆ ಕಳುಹಿಸಬೇಕಾದವನ್ನು 'ಔಟ್ ಟ್ರೇ'ಯಲ್ಲೂ ಇಡುವುದು ಇದನ್ನು ಸಾಧಿಸುವ ಕ್ರಮಗಳಲ್ಲೊಂದು. ಕಾಗದದ ಕಡತಗಳಿಗಿಂತ ಸಂಪೂರ್ಣ ಭಿನ್ನವಾದ ಇಮೇಲ್ ವ್ಯವಸ್ಥೆಯಲ್ಲೂ ಇಂತಹುದೇ ಒಂದು ಪರಿಕಲ್ಪನೆಯಿದೆ. ನಮಗೆ ಬಂದ ಇಮೇಲ್ ಸಂದೇಶಗಳನ್ನು, ನಾವು ಕಳುಹಿಸುತ್ತಿರುವ ಸಂದೇಶಗಳನ್ನು ಪ್ರತ್ಯೇಕವಾಗಿಡುವುದು ಈ ಪರಿಕಲ್ಪನೆಯ ಉದ್ದೇಶ. ಇದಕ್ಕಾಗಿ ನಮ್ಮ ಇಮೇಲ್ ಖಾತೆಯಲ್ಲಿ ಪ್ರತ್ಯೇಕ ಫೋಲ್ಡರುಗಳನ್ನು ಬಳಸಲಾಗುತ್ತದೆ, ಕಚೇರಿಯಲ್ಲಿ ಬೇರೆಬೇರೆ ಕಾಗದಗಳನ್ನು ಬೇರೆಬೇರೆ ಫೈಲುಗಳಲ್ಲಿ ಇಡುವಂತೆಯೇ! ಈ ಪೈಕಿ ನಮಗೆ ಬಂದ ಸಂದೇಶಗಳು 'ಇನ್‌ಬಾಕ್ಸ್'ನಲ್ಲಿರುತ್ತವೆ. ಇಮೇಲ್ ಖಾತೆಗೆ ಲಾಗಿನ್ ಆದಾಗ ಮೊದಲಿಗೆ ಇದೇ ಫೋಲ್ಡರ್ ಕಾಣಿಸಿಕೊಳ್ಳುವುದು ಸಾಮಾನ್ಯ. ನಾವು ಇಮೇಲ್‌ಗಳನ್ನು ಕಳಿಸುತ್ತೇವಲ್ಲ, ಅವು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ 'ಔಟ್‌ಬಾಕ್ಸ್' ಎಂದು ಹೆಸರು. ಬಹಳಷ್ಟು ಸಂದರ್ಭಗಳಲ್ಲಿ ಇಮೇಲ್‌ಗಳು ಥಟ್ಟನೆ ರವಾನೆಯಾಗುವುದರಿಂದ ಇದು ನಮ್ಮ ಗಮನಕ್ಕೆ ಬರುವುದೇ ಅಪರೂಪ - ಅಂತರಜಾಲ ಸಂಪರ್ಕ ಇಲ್ಲದಾಗ, ವೇಗ ಕಡಿಮೆಯಿದ್ದಾಗ ಅಥವಾ ದೊಡ್ಡ ಅಟ್ಯಾಚ್‌ಮೆಂಟ್ ಜೊತೆಗೆ ಇಮೇಲ್ ಕಳಿಸಿದರಷ್ಟೇ ಅದು ಈ ಫೋಲ್ಡರಿನ ಮೂಲಕ ಹಾದುಹೋಗುವುದನ್ನು ನೋಡಬಹುದು. ರವಾನೆಯಾದ ಸಂದೇಶಗಳ ಒಂದು ಪ್ರತಿ 'ಸೆಂಟ್ ಮೆಸೇಜಸ್' ಎಂಬ ಫೋಲ್ಡರಿನಲ್ಲಿ ಉಳಿದುಕೊಂಡಿರುತ್ತದೆ.

Image Compression
ಇಮೇಜ್ ಕಂಪ್ರೆಶನ್
(ರೂಪಿಸಬೇಕಿದೆ)
ಚಿತ್ರರೂಪದ ಕಡತಗಳ ಗಾತ್ರವನ್ನು ಕುಗ್ಗಿಸಲು ಬಳಕೆಯಾಗುವ ತಂತ್ರ
ಡಿಜಿಟಲ್ ರೂಪದಲ್ಲಿರುವ ಯಾವುದೇ ಚಿತ್ರ ದೊಡ್ಡ ಸಂಖ್ಯೆಯ ಪಿಕ್ಸೆಲ್‌ಗಳು ಸೇರಿ ರೂಪುಗೊಂಡಿರುತ್ತದೆ. ಚಿತ್ರದ ಗುಣಮಟ್ಟ ಹೆಚ್ಚಿರಬೇಕು ಎಂದರೆ ಅದರಲ್ಲಿರುವ ಪಿಕ್ಸೆಲ್‌ಗಳ ಸಂಖ್ಯೆಯೂ ಜಾಸ್ತಿಯಾಗಬೇಕು. ಹಾಗಾದಾಗ ಮೆಮೊರಿಯಲ್ಲಿ ಚಿತ್ರವನ್ನು ಉಳಿಸಿಡಲು ಬೇಕಾದ ಸ್ಥಳಾವಕಾಶವೂ ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಲೆಂದೇ ಚಿತ್ರಗಳನ್ನು ಉಳಿಸಿಡುವಾಗ ಅದರಲ್ಲಿರುವ ಮಾಹಿತಿಯನ್ನು ಸಾಧ್ಯವಾದಷ್ಟೂ ಕುಗ್ಗಿಸಲಾಗುತ್ತದೆ: ಬಹುಭಾಗದಲ್ಲಿ ಒಂದೇ ಬಣ್ಣವಿರುವ ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅದಷ್ಟೂ ಭಾಗದಲ್ಲಿರುವ ಬಣ್ಣ ಯಾವುದು ಎಂಬ ಮಾಹಿತಿಯನ್ನು ಪ್ರತಿಯೊಂದು ಪಿಕ್ಸೆಲ್‌ಗೂ ಪ್ರತ್ಯೇಕವಾಗಿ ಉಳಿಸಿಡುವ ಅಗತ್ಯವಿಲ್ಲವಲ್ಲ! ಈ ಪ್ರಕ್ರಿಯೆಯ ಹೆಸರೇ ಇಮೇಜ್ ಕಂಪ್ರೆಶನ್. ಹೀಗೆ ಕುಗ್ಗಿಸುವಾಗ ಚಿತ್ರದಲ್ಲಿರುವ ಮಾಹಿತಿಯ ಕೆಲವುಭಾಗ ಕಳೆದುಹೋದರೆ, ಅಂದರೆ ಲಾಸ್ ಆದರೆ, ಅದು 'ಲಾಸಿ' ಕಂಪ್ರೆಶನ್; ಎಲ್ಲ ಮಾಹಿತಿಯನ್ನೂ ಉಳಿಸಿಕೊಂಡೇ ಚಿತ್ರವನ್ನು ಕುಗ್ಗಿಸುವುದಾದರೆ ಅದರಲ್ಲಿ ಏನೂ ಲಾಸ್ ಇಲ್ಲವಲ್ಲ, ಹಾಗಾಗಿ ಅದು 'ಲಾಸ್‌ಲೆಸ್' ಕಂಪ್ರೆಶನ್. ಡಿಜಿಟಲ್ ಚಿತ್ರಗಳ ವಿಷಯಕ್ಕೆ ಬಂದಾಗ 'ಜೆಪಿಜಿ' (ಅಥವಾ 'ಜೆಪೆಗ್'), 'ಪಿಎನ್‌ಜಿ' ಇತ್ಯಾದಿಗಳೆಲ್ಲ ನಮಗೆ ಪರಿಚಿತವಾದ ಹೆಸರುಗಳು. ಚಿತ್ರಗಳ ಗಾತ್ರವನ್ನು ಕುಗ್ಗಿಸಲು 'ಜಾಯಿಂಟ್ ಫೋಟೋಗ್ರಾಫಿಕ್ ಎಕ್ಸ್‌ಪರ್ಟ್ಸ್ ಗ್ರೂಪ್' ಎಂಬ ಸಂಸ್ಥೆ ರೂಪಿಸಿದ ವಿಧಾನವೇ ಜೆಪಿಜಿ ಅಥವಾ 'ಜೆಪೆಗ್'. ಇದು ಲಾಸಿ ಕಂಪ್ರೆಶನ್ ತಂತ್ರಕ್ಕೊಂದು ಉದಾಹರಣೆ. 'ಪೋರ್ಟಬಲ್ ನೆಟ್‌ವರ್ಕ್ ಗ್ರಾಫಿಕ್ಸ್' ಎಂಬ ಹೆಸರಿನ ಹ್ರಸ್ವರೂಪವಾದ ಪಿಎನ್‌ಜಿ ವಿಧಾನದಲ್ಲಿ ಚಿತ್ರಗಳ ಗಾತ್ರವನ್ನು ಲಾಸ್‌ಲೆಸ್ ಕಂಪ್ರೆಶನ್ ಮೂಲಕ ಕುಗ್ಗಿಸಲಾಗುತ್ತದೆ.

ICT
ಐಸಿಟಿ
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ
ಇನ್‌ಫರ್ಮೇಶನ್ ಆಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ ಎಂಬ ಹೆಸರಿನ ಹ್ರಸ್ವರೂಪ
ಇನ್‌ಫರ್ಮೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ತಂತ್ರಜ್ಞಾನ ಎನ್ನುವುದು ನಮಗೆಲ್ಲ ಚಿರಪರಿಚಿತ ಹೆಸರು. ದತ್ತಾಂಶದ (ಡೇಟಾ) ಸೃಷ್ಟಿ, ಸಂಸ್ಕರಣೆ, ಶೇಖರಣೆ ಹಾಗೂ ವಿನಿಮಯದಂತಹ ಪ್ರಕ್ರಿಯೆಗಳಲ್ಲಿ ಕಂಪ್ಯೂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಸಾಧನ-ವ್ಯವಸ್ಥೆಗಳ ಬಳಕೆಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ಐಟಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಸಂವಹನ ಮಾಧ್ಯಮಗಳನ್ನು ಪೂರಕವಾಗಿ ಬಳಸುವುದರಿಂದ ಈ ಕ್ಷೇತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯ. ಈ ಉದ್ದೇಶದಿಂದ ರೂಪುಗೊಂಡಿರುವುದೇ ಐಸಿಟಿ ಪರಿಕಲ್ಪನೆ. ಐಸಿಟಿ ಎನ್ನುವುದು ಇನ್‌ಫರ್ಮೇಶನ್ ಆಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಹೆಸರಿನ ಹ್ರಸ್ವರೂಪ. ಐಟಿಯಲ್ಲಿ ಬಳಕೆಯಾಗುವ ಕಂಪ್ಯೂಟರ್ ಮತ್ತಿತರ ಸಾಧನಗಳ ಜೊತೆಗೆ ಐಸಿಟಿ ಪರಿಕಲ್ಪನೆಯಲ್ಲಿ ದೂರವಾಣಿ, ಅಂತರಜಾಲ, ಉಪಗ್ರಹ ತಂತ್ರಜ್ಞಾನ ಮುಂತಾದ ಸಂಗತಿಗಳೂ ಸೇರುತ್ತವೆ. ಇನ್ಸ್‌ಟೆಂಟ್ ಮೆಸೇಜಿಂಗ್, ವೀಡಿಯೋ ಕಾನ್ಫರೆನ್ಸಿಂಗ್, ಸೋಶಿಯಲ್ ನೆಟ್‌ವರ್ಕಿಂಗ್, ಆನ್‌ಲೈನ್ ಗೇಮಿಂಗ್‌ಗಳೆಲ್ಲ ಸಾಧ್ಯವಾಗುವುದು ಇವೆಲ್ಲ ಒಟ್ಟಿಗೆ ಸೇರಿದಾಗಲೇ. ಇಷ್ಟೆಲ್ಲ ಸವಲತ್ತುಗಳನ್ನು ಒಟ್ಟಾಗಿ ಬಳಸುವ ಮೂಲಕ ಕ್ರೀಡೆಯಿಂದ ಮನರಂಜನೆಯವರೆಗೆ, ಶಿಕ್ಷಣದಿಂದ ಸಂಶೋಧನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಸಾಧ್ಯತೆಗಳನ್ನು ರೂಪಿಸಿಕೊಳ್ಳಬಹುದು ಎನ್ನುವುದು ಐಸಿಟಿಯ ಆಶಯ.


logo