logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

IP Address
ಐಪಿ ಅಡ್ರೆಸ್
(ರೂಪಿಸಬೇಕಿದೆ)
ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸ
ಅಂತರಜಾಲದ ವ್ಯಾಪ್ತಿ ವಿಸ್ತರಿಸುತ್ತ ಹೋದಂತೆ ಹೆಚ್ಚುಹೆಚ್ಚು ಸಾಧನಗಳು ಅದರ ಸಂಪರ್ಕಕ್ಕೆ ಬರುತ್ತಿವೆ. ಹೀಗೆ ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸವನ್ನು ಐಪಿ ಅಡ್ರೆಸ್ ಎಂದು ಕರೆಯುತ್ತಾರೆ. ಈ ಹೆಸರಿನಲ್ಲಿರುವ 'ಐಪಿ', ಇಂಟರ್‌ನೆಟ್ ಪ್ರೋಟೊಕಾಲ್ ಎನ್ನುವುದರ ಹ್ರಸ್ವರೂಪ. ಅಂತರಜಾಲದಲ್ಲಿ ವಿವಿಧ ಬಗೆಯ ಸಾಧನಗಳ ನಡುವೆ ವಿನಿಮಯವಾಗುವ ಮಾಹಿತಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ಎಂದು ಗುರುತಿಸಲು ಈ ವಿಳಾಸ ಬಳಕೆಯಾಗುತ್ತದೆ. ಬರೆದ ಪತ್ರವನ್ನು ಅಂಚೆಗೆ ಹಾಕುವ ಮೊದಲು ಲಕೋಟೆಯ ಮೇಲೆ ಅದು ತಲುಪಬೇಕಾದ ವಿಳಾಸ ಹಾಗೂ ಅದನ್ನು ಕಳುಹಿಸುತ್ತಿರುವವರ ವಿಳಾಸ ಬರೆಯುತ್ತೇವಲ್ಲ, ಇದೂ ಹಾಗೆಯೇ. ನೀವು ಗೂಗಲ್ ಸರ್ಚ್ ಮಾಡಲು ಹೊರಟಿದ್ದೀರಿ ಎಂದುಕೊಳ್ಳೋಣ. ನೀವು ಹೋಗಬೇಕಾದ್ದು ಗೂಗಲ್‌ಗೆ ಎಂದು ಕಂಪ್ಯೂಟರಿಗೆ ಗೊತ್ತಾಗುವುದು ಅದರ ವಿಳಾಸ, ಅಂದರೆ ಯುಆರ್‌ಎಲ್‌ನಿಂದ. ಪ್ರತಿ ಯುಆರ್‌ಎಲ್ ಹಿಂದೆಯೂ ಒಂದು ಐಪಿ ವಿಳಾಸ ಇರುತ್ತದೆ. ಹುಡುಕಾಟದ ಫಲಿತಾಂಶವನ್ನು ಕಳುಹಿಸಬೇಕಾದ್ದು ನಿಮಗೆ ಎಂದು ಗೂಗಲ್‌ಗೆ ಗೊತ್ತಾಗುವುದೂ ಅಷ್ಟೆ, ನಿಮ್ಮ ಕಂಪ್ಯೂಟರಿನ ಐಪಿ ವಿಳಾಸದಿಂದ!

IFrame
ಐಫ್ರೇಮ್
(ರೂಪಿಸಬೇಕಿದೆ)
ಇನ್‌ಲೈನ್ ಫ್ರೇಮ್; ಬಾಹ್ಯ ಜಾಲತಾಣದ ಪುಟವನ್ನು ನಮ್ಮ ಜಾಲತಾಣದಲ್ಲಿ ಸೇರಿಸಿಕೊಳ್ಳುವುದನ್ನು ಸಾಧ್ಯವಾಗಿಸುವ ಸೌಲಭ್ಯ
ಯೂಟ್ಯೂಬ್ ವೀಡಿಯೋಗಳನ್ನು, ಫೇಸ್‌ಬುಕ್-ಟ್ವಿಟರ್ ಪೋಸ್ಟುಗಳನ್ನು ಬೇರೆಬೇರೆ ಜಾಲತಾಣ-ಪುಟಗಳಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇಂತಹ ಬಹಳಷ್ಟು ಉದಾಹರಣೆಗಳಲ್ಲಿ ಮಾಹಿತಿಯ ಮೂಲ ಆಕರವನ್ನು (ಉದಾ: ಯೂಟ್ಯೂಬ್ ತಾಣದಲ್ಲಿರುವ ವೀಡಿಯೋ) ನಮ್ಮ ಪುಟದೊಳಗಿನಿಂದ ತೆರೆಯುವ ಮೂಲಕ ಅದು ನಮ್ಮ ಪುಟದ್ದೇ ಭಾಗ ಇರಬೇಕು ಎನ್ನುವಂತಹ ಭಾವನೆಯನ್ನು ಮೂಡಿಸಲಾಗುತ್ತದೆ. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯ ಹೆಸರೇ ಇನ್‌ಲೈನ್ ಫ್ರೇಮ್, ಅರ್ಥಾತ್ 'ಐಫ್ರೇಮ್'. ಜಾಲತಾಣಗಳನ್ನು ರಚಿಸಲು ಎಚ್‌ಟಿಎಂಎಲ್ ಭಾಷೆ ಬಳಕೆಯಾಗುತ್ತದಲ್ಲ, ಅದರಲ್ಲಿ ಲಭ್ಯವಿರುವ ಸೌಲಭ್ಯ ಇದು. ಇದನ್ನು ಬಳಸುವ ಮೂಲಕ ಬಾಹ್ಯ ಜಾಲತಾಣದ ಪುಟವನ್ನು ನಮ್ಮ ಜಾಲತಾಣದಲ್ಲಿ ಸೇರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಫೇಸ್‌ಬುಕ್, ಟ್ವಿಟರ್‌ನಂತಹ ತಾಣಗಳಲ್ಲಿನ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಜಾಹೀರಾತುಗಳನ್ನು ಪ್ರದರ್ಶಿಸಲೂ ಐಫ್ರೇಮ್ ಸೌಲಭ್ಯ ವ್ಯಾಪಕವಾಗಿ ಬಳಕೆಯಾಗುತ್ತದೆ. ಐಫ್ರೇಮ್ ಮೂಲಕ ಸೇರಿಸಿಕೊಳ್ಳುವ ಮಾಹಿತಿಗೆ ನಮ್ಮ ಪುಟದಲ್ಲಿ ಎಷ್ಟು ಸ್ಥಳಾವಕಾಶ ನೀಡಬೇಕು (ಉದ್ದ ಮತ್ತು ಅಗಲ, ಪಿಕ್ಸೆಲ್‌ಗಳಲ್ಲಿ) ಎನ್ನುವುದನ್ನೂ ನಿಗದಿಪಡಿಸುವುದು ಸಾಧ್ಯ. ಈ ಸೌಲಭ್ಯದಲ್ಲಿ ಮಾಹಿತಿಯ ಪ್ರತಿಯನ್ನು ಬಳಸುವ ಬದಲು ಮೂಲ ಆಕರವನ್ನೇ ಪ್ರದರ್ಶಿಸುವುದರಿಂದ ಮೂಲದಲ್ಲಿನ ಬದಲಾವಣೆಗಳು ತಕ್ಷಣವೇ ನಮ್ಮ ತಾಣದಲ್ಲೂ ಕಾಣಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಾಹಿತಿಯ ಆಕರ ಹಾಗೂ ಅದನ್ನು ಪ್ರದರ್ಶಿಸುತ್ತಿರುವ ತಾಣದ ನಡುವೆ ಮಾಹಿತಿ ವಿನಿಮಯ ನಡೆಯುವುದರಿಂದ ಮೂಲ ತಾಣದ ನಿರ್ವಾಹಕರಿಗೆ ನಮ್ಮ ಮಾಹಿತಿ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ ಮಾಹಿತಿ ಕಲೆಹಾಕುವ ಅವಕಾಶವೂ ದೊರಕುತ್ತದೆ.

IVR
ಐವಿಆರ್
(ರೂಪಿಸಬೇಕಿದೆ)
ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್; ದೂರವಾಣಿ ಕರೆಯಲ್ಲಿ ಕೇಳಿಸಲಾಗುವ ಆಯ್ಕೆಗಳಿಗೆ ನಿಗದಿತ ಅಂಕಿಗಳನ್ನು ಒತ್ತುವ ಮೂಲಕ ಪ್ರತಿಕ್ರಿಯೆ ನೀಡುವುದು ಮತ್ತು ಅದಕ್ಕೆ ಪ್ರತ್ಯುತ್ತರ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನ
ಬ್ಯಾಂಕು, ವಿಮಾ ಸಂಸ್ಥೆ, ಡಿಟಿಎಚ್ ಸೇವೆಗಳಿಗೆ ಕರೆಮಾಡಿದಾಗ ಯಾಂತ್ರಿಕ ಧ್ವನಿಯೊಂದು ನಮ್ಮ ಕರೆ ಸ್ವೀಕರಿಸುವುದರ ಅನುಭವ ಬಹುತೇಕ ಎಲ್ಲರಿಗೂ ಆಗಿರುತ್ತದೆ. ಧ್ವನಿಯ ರೂಪದಲ್ಲಿ ನಮಗೆ ಕೇಳುವ ಆಯ್ಕೆಗಳಿಗೆ ಬೇರೆಬೇರೆ ಅಂಕಿಗಳನ್ನು ಒತ್ತುವ ಮೂಲಕ ಪ್ರತಿಕ್ರಿಯೆ ನೀಡುವುದು ಮತ್ತು ಅದಕ್ಕೆ ಪ್ರತ್ಯುತ್ತರ ಪಡೆದುಕೊಳ್ಳುವುದು ಸಾಧ್ಯ. ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಅಥವಾ ಐವಿಆರ್ ಎಂದು ಗುರುತಿಸುವುದು ಇಂತಹ ವ್ಯವಸ್ಥೆಗಳನ್ನೇ. ದೂರವಾಣಿ ಮೂಲಕ ನಡೆಯುವ ಗ್ರಾಹಕ ಸೇವೆಯ ಒಂದಷ್ಟು ಭಾಗವನ್ನು ವ್ಯಕ್ತಿಗಳ ಬದಲು ಯಂತ್ರಗಳೇ ನಿರ್ವಹಿಸುವುದನ್ನು ಐವಿಆರ್ ವ್ಯವಸ್ಥೆಗಳು ಸಾಧ್ಯವಾಗಿಸುತ್ತವೆ. ಕರೆಮಾಡಿದ ಗ್ರಾಹಕರಿಗೆ ಯಾವೆಲ್ಲ ಆಯ್ಕೆಗಳನ್ನು ನೀಡಬೇಕು, ಹಾಗೂ ಅದಕ್ಕೆ ಬರುವ ಪ್ರತ್ಯುತ್ತರಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಈ ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಮೊದಲೇ ದಾಖಲಾಗಿರುತ್ತದೆ. ಧ್ವನಿರೂಪದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರವಾಗಿ ನಾವು ಬೇರೆಬೇರೆ ಅಂಕಿಗಳನ್ನು ಒತ್ತುತ್ತೇವಲ್ಲ, ದೂರವಾಣಿ ವ್ಯವಸ್ಥೆಯಲ್ಲಿ ಅದನ್ನು ಪ್ರತಿನಿಧಿಸುವ - ಡ್ಯುಯಲ್ ಟೋನ್ ಮಲ್ಟಿಫ್ರೀಕ್ವೆನ್ಸಿ (ಡಿಟಿಎಂಎಫ್) ಎಂಬ ಹೆಸರಿನಿಂದ ಗುರುತಿಸಲಾಗುವ - ಸಂಕೇತವನ್ನೂ ಈ ವ್ಯವಸ್ಥೆ ಗುರುತಿಸಬಲ್ಲದು. ಪ್ರತಿ ಪ್ರಶ್ನೆಗೂ ನಾವು ಉತ್ತರಿಸಿದಾಗ ಐವಿಆರ್ ವ್ಯವಸ್ಥೆ ಆ ಉತ್ತರ ಪಡೆದುಕೊಳ್ಳುವುದು ಈ ಸಂಕೇತದ ರೂಪದಲ್ಲೇ. ಪೂರ್ವನಿರ್ಧಾರಿತ ತರ್ಕಕ್ಕೆ (ಲಾಜಿಕ್) ಅನುಸಾರವಾಗಿ ಈ ಸಂಕೇತವನ್ನು ಸಂಸ್ಕರಿಸುವ ಮೂಲಕ ನಮ್ಮ ಸಂವಹನ ಮುಂದಿನ ಹಂತಕ್ಕೆ ಹೋಗುತ್ತದೆ; ಖಾತೆಯ ಬ್ಯಾಲೆನ್ಸ್ ತಿಳಿಯುವುದೋ, ಗ್ರಾಹಕ ಸೇವಾ ಅಧಿಕಾರಿಯೊಡನೆ ಕನ್ನಡದಲ್ಲಿ ಮಾತನಾಡುವುದೋ, ಮೊಬೈಲ್ ಬಿಲ್‌ನ ನಕಲು ಪ್ರತಿಯನ್ನು ಇಮೇಲ್ ಮೂಲಕ ಪಡೆದುಕೊಳ್ಳುವುದೋ ಸಾಧ್ಯವಾಗುತ್ತದೆ!

OEM
ಓಇಎಮ್
ಸಲಕರಣೆಯ ಮೂಲ ಉತ್ಪಾದಕ
ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರರ್; ಬೇರೊಂದು ಸಂಸ್ಥೆಯ ಉತ್ಪನ್ನದಲ್ಲಿ ಬಳಸಲು ನಿರ್ದಿಷ್ಟ ಭಾಗಗಳನ್ನು ತಯಾರಿಸಿಕೊಡುವ ಸಂಸ್ಥೆ
ಇಂದಿನ ವಿದ್ಯುನ್ಮಾನ ಉಪಕರಣಗಳೆಲ್ಲ ರೂಪುಗೊಳ್ಳುವುದು ಭಾರೀ ಸಂಖ್ಯೆಯ ಬಿಡಿಭಾಗಗಳ ಜೋಡಣೆಯಿಂದ. ಈ ಬಿಡಿಭಾಗಗಳೆಲ್ಲ ಅದೆಷ್ಟು ಸಂಕೀರ್ಣವಾಗಿರುತ್ತವೆ ಎಂದರೆ ಅವನ್ನೆಲ್ಲ ಒಂದೇ ಸಂಸ್ಥೆ ತಯಾರಿಸುವುದು ಹೆಚ್ಚೂಕಡಿಮೆ ಅಸಾಧ್ಯವೇ ಎನ್ನಬೇಕು. ಹಾಗಾಗಿಯೇ ಇಂತಹ ಯಾವುದೇ ಉತ್ಪನ್ನದ ನಿರ್ಮಾತೃ ಎಂದು ಒಂದೇ ಸಂಸ್ಥೆಯ ಹೆಸರಿದ್ದರೂ ಆ ಉತ್ಪನ್ನದೊಳಗಿರುವ ವಿವಿಧ ಭಾಗಗಳನ್ನು ಬೇರೆಬೇರೆ ಸಂಸ್ಥೆಗಳು ತಯಾರಿಸಿರುವುದು ಸಾಮಾನ್ಯ ಸಂಗತಿ. ಮೊಬೈಲ್ ಫೋನಿನ ಉದಾಹರಣೆಯನ್ನೇ ತೆಗೆದುಕೊಂಡರೆ ಬೇರೆಬೇರೆ ಸಂಸ್ಥೆಗಳು ನಿರ್ಮಿಸಿದ ಪ್ರಾಸೆಸರ್, ಕ್ಯಾಮೆರಾ, ಸ್ಪೀಕರುಗಳನ್ನೆಲ್ಲ ತೆಗೆದುಕೊಂಡು ಒಟ್ಟುಸೇರಿಸಿ ಇನ್ನೊಂದು ಸಂಸ್ಥೆ ಮೊಬೈಲನ್ನು ತಯಾರಿಸುತ್ತದೆ. ಕಂಪ್ಯೂಟರು-ಕ್ಯಾಮೆರಾ-ಟೀವಿಗಳಲ್ಲೂ ಅಷ್ಟೇ, ಅವುಗಳ ನಿರ್ದಿಷ್ಟ ಭಾಗಗಳನ್ನು ತಯಾರಿಸುವುದನ್ನಷ್ಟೇ ತಮ್ಮ ಕೆಲಸವಾಗಿಟ್ಟುಕೊಂಡ ಅನೇಕ ಸಂಸ್ಥೆಗಳಿವೆ. ಹೀಗೆ ಬೇರೊಂದು ಸಂಸ್ಥೆಯ ಉತ್ಪನ್ನದಲ್ಲಿ ಬಳಸಲು ನಿರ್ದಿಷ್ಟ ಭಾಗಗಳನ್ನು ತಯಾರಿಸಿಕೊಡುವ ಸಂಸ್ಥೆಗಳನ್ನು ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರರ್ (ಸಲಕರಣೆಯ ಮೂಲ ಉತ್ಪಾದಕ) ಅಥವಾ 'ಓಇಎಮ್' ಎಂದು ಕರೆಯುತ್ತಾರೆ. ಉದಾಹರಣೆಗೆ ಎಬಿಸಿ ಎನ್ನುವ ಸಂಸ್ಥೆಯ ಮೊಬೈಲಿನಲ್ಲಿ ಎಕ್ಸ್ ಎನ್ನುವ ಸಂಸ್ಥೆಯ ಕ್ಯಾಮೆರಾ ಬಳಕೆಯಾಗಿದ್ದರೆ ಎಕ್ಸ್ ಸಂಸ್ಥೆಯನ್ನು ಓಇಎಮ್ ಎಂದು ಗುರುತಿಸಲಾಗುತ್ತದೆ. ಅಂದಹಾಗೆ ಓಇಎಮ್ ಪರಿಕಲ್ಪನೆ ಬಳಕೆಯಲ್ಲಿರುವುದು ವಿದ್ಯುನ್ಮಾನ ಕ್ಷೇತ್ರದಲ್ಲಷ್ಟೇ ಅಲ್ಲ, ಯಂತ್ರೋಪಕರಣ - ವಾಹನ ಮುಂತಾದ ಇನ್ನೂ ಹಲವಾರು ಸಾಧನಗಳ ನಿರ್ಮಾಣದಲ್ಲೂ ಓಇಎಮ್‌ಗಳ ನೆರವು ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ.

OFC
ಓಎಫ್‌ಸಿ
(ರೂಪಿಸಬೇಕಿದೆ)
ಆಪ್ಟಿಕಲ್ ಫೈಬರ್ ಕೇಬಲ್; ಅತಿವೇಗದ ಮಾಹಿತಿ ಸಂವಹನದಲ್ಲಿ ಬಳಕೆಯಾಗುವ ಈ ಕೇಬಲ್ಲುಗಳೊಳಗೆ ಆಪ್ಟಿಕಲ್ ಫೈಬರ್‌ಗಳೆಂಬ ಗಾಜಿನ ಎಳೆಗಳು ಇರುತ್ತವೆ.
ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗೆ ಆಪ್ಟಿಕಲ್ ಫೈಬರ್ ಕೇಬಲ್ಲುಗಳಿರುತ್ತವೆ, ಮತ್ತು ಇಂತಹ ಪ್ರತಿಯೊಂದು ಕೇಬಲ್ಲಿನೊಳಗೂ ಒಂದಷ್ಟು ಆಪ್ಟಿಕಲ್ ಫೈಬರ್‌ಗಳಿರುತ್ತವೆ. ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ರೂಪುಗೊಳ್ಳುವ ಎಳೆಗಳು ಅವು. ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಬೆಳಕಿನ ಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ರವಾನಿಸುವುದು ಸಾಧ್ಯ. ಹೀಗೆ ರವಾನಿಸಲಾದ ಮಾಹಿತಿ ಸುಲಭವಾಗಿ ಅನೇಕ ಕಿಲೋಮೀಟರುಗಳಷ್ಟು ದೂರ ಕ್ರಮಿಸಬಲ್ಲದು. ಆಪ್ಟಿಕಲ್ ಫೈಬರ್ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಈ ಎಳೆಯೊಳಗೇ ಸಂಪೂರ್ಣವಾಗಿ ಪ್ರತಿಫಲಿತವಾಗುತ್ತವೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ತೀರಾ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಹೆಚ್ಚಾಗಿರುತ್ತದೆ. ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ.

OTA
ಓಟಿಎ
(ರೂಪಿಸಬೇಕಿದೆ)
ಓವರ್ ದಿ ಏರ್; ಮೊಬೈಲಿನಂತಹ ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ತಂತ್ರಾಂಶಗಳನ್ನು ಕಂಪ್ಯೂಟರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ಗೊಡವೆಯಿಲ್ಲದೆ ನೇರವಾಗಿ ಅಪ್‌ಡೇಟ್ ಮಾಡಿಕೊಳ್ಳುವ ಸುಲಭ ವಿಧಾನ
ಒಂದು ಕಾಲವಿತ್ತು, ಯಾವುದೋ ತಂತ್ರಾಂಶವನ್ನು ಅಪ್‌ಡೇಟ್ ಮಾಡಬೇಕೆಂದರೆ ಗೆಳೆಯರಿಂದ ಸೀಡಿ ಕಡತರಬೇಕಿತ್ತು - ಇಲ್ಲವೇ - ಹೊಸ ಆವೃತ್ತಿಗೆ ಕಾದು ಅದನ್ನು ಡೌನ್‌ಲೋಡ್ ಮಾಡಿ ಬಳಸಬೇಕಿತ್ತು. ಈ ವಿಧಾನ ಕಂಪ್ಯೂಟರುಗಳಲ್ಲಿ ಕೊಂಚಮಟ್ಟಿಗೆ ಸರಿಯೆನಿಸಬಹುದಾದರೂ ಮೊಬೈಲಿನ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಅಷ್ಟೇನೂ ಸೂಕ್ತವೆನಿಸುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಮಾರ್ಗವೇ ಓಟಿಎ, ಅಂದರೆ 'ಓವರ್ ದಿ ಏರ್'. ಮೊಬೈಲಿನ ತಂತ್ರಾಂಶಗಳನ್ನು ಕಂಪ್ಯೂಟರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ಗೊಡವೆಯಿಲ್ಲದೆ ಅಪ್‌ಡೇಟ್ ಮಾಡಿಕೊಳ್ಳುವ ಸುಲಭ ವಿಧಾನ ಇದು. ಸ್ಮಾರ್ಟ್‌ಫೋನಿನ ಕಾರ್ಯಾಚರಣ ವ್ಯವಸ್ಥೆಗೆ ಆಗಿಂದಾಗ್ಗೆ ಅಪ್‌ಡೇಟ್‌ಗಳು ಬರುತ್ತಿರುತ್ತವಲ್ಲ, ಅವು ಇದೇ ವಿಧಾನವನ್ನು ಬಳಸುತ್ತವೆ. ಸೆಟ್‌ಟಾಪ್ ಬಾಕ್ಸಿನ ತಂತ್ರಾಂಶ ಅಪ್‌ಡೇಟ್ ಆಗುವುದೂ ಇದೇ ವಿಧಾನದಲ್ಲಿ. ಸ್ಮಾರ್ಟ್‌ಫೋನ್ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಲು ಅಂತರಜಾಲ ಸಂಪರ್ಕ ಬಳಕೆಯಾದರೆ ಸೆಟ್‌ಟಾಪ್ ಬಾಕ್ಸ್ ತಂತ್ರಾಂಶವನ್ನು ಉಪಗ್ರಹ ಸಂಕೇತಗಳ ಮೂಲಕವೇ ಅಪ್‌ಡೇಟ್ ಮಾಡಲಾಗುತ್ತದೆ. ತಂತ್ರಾಂಶದ ಹೊಸ ಆವೃತ್ತಿಯನ್ನು ಬಳಕೆದಾರರಿಗೆ ತಲುಪಿಸಲು ಓಟಿಎ ಅಪ್‌ಡೇಟ್‌ಗಳನ್ನು ಬಳಸಲಾಗುತ್ತದೆ. ತಂತ್ರಾಂಶದಲ್ಲಿ ಪತ್ತೆಯಾಗುವ ಕೊರತೆಗಳನ್ನು, ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸಲಿಕ್ಕೂ ಈ ಮಾರ್ಗ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಓಟಿಎ ಮಾರ್ಗದಲ್ಲಿ ಫೋನಿನ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಲು ಅಂತರಜಾಲ ಸಂಪರ್ಕ ಬೇಕಲ್ಲ, ಅದಕ್ಕೆ ಮೊಬೈಲ್ ಇಂಟರ್‌ನೆಟ್ ಬಳಸಬಹುದೋ ವೈ-ಫೈ ಸಂಪರ್ಕವನ್ನೇ ಕಾಯಬೇಕೋ ಎನ್ನುವುದನ್ನು ನಾವೇ ಸೂಚಿಸಬಹುದು.

OTT
ಓಟಿಟಿ
(ರೂಪಿಸಬೇಕಿದೆ)
ಓವರ್ ದ ಟಾಪ್; ಇತರ ದೂರಸಂಪರ್ಕ ಸಂಸ್ಥೆಗಳು ಜಾಲವನ್ನು ಬಳಸಿಕೊಂಡು ತಮ್ಮ ಸೇವೆ ಒದಗಿಸುವ ಉತ್ಪನ್ನಗಳನ್ನು ಈ ಹೆಸರಿನಿಂದ ಗುರುತಿಸಲಾಗುತ್ತದೆ.
ಮೊಬೈಲ್ ಫೋನ್ ಮೂಲಕ ನಾವು ಎರಡು ಬಗೆಯ ಸಂಸ್ಥೆಗಳ ಸೇವೆಗಳನ್ನು ಪಡೆದುಕೊಳ್ಳುತ್ತೇವೆ: ಮೊದಲ ಬಗೆಯವು ತಮ್ಮ ಸೇವೆ ಒದಗಿಸಲು ತಮ್ಮದೇ ಆದ ಮೊಬೈಲ್ ಜಾಲವನ್ನು ಸ್ಥಾಪಿಸಿ ನಿರ್ವಹಿಸುತ್ತವೆ; ಎರಡನೆಯವು ಇಂತಹ ಸಂಸ್ಥೆಗಳ ಜಾಲವನ್ನು ಬಳಸಿಕೊಂಡು ತಮ್ಮ ಸೇವೆ ಒದಗಿಸುತ್ತವೆ. ವಾಟ್ಸ್‌ಆಪ್ ಸಂದೇಶಗಳು, ಸ್ಕೈಪ್ ಕರೆಗಳೆಲ್ಲ ಕೆಲಸಮಾಡುವುದು ಹೀಗೆಯೇ. ಇದನ್ನೆಲ್ಲ ಬಳಸುವಾಗ ಮೊಬೈಲ್ ಗ್ರಾಹಕರು ಬಳಸಿದ ಡೇಟಾ ಪ್ರಮಾಣಕ್ಕೆ ಸರಿಯಾಗಿ ಶುಲ್ಕ ಪಾವತಿಸುತ್ತಾರೆಯೇ ಹೊರತು ಕರೆಮಾಡಿದ್ದಕ್ಕೆ ಇಷ್ಟು, ಸಂದೇಶ ಕಳಿಸಿದ್ದಕ್ಕೆ ಇಷ್ಟು ಎಂದು (ಮೊಬೈಲ್ ಸೇವೆಗಳಲ್ಲಿ ಮಾಡುವಂತೆ) ಪ್ರತ್ಯೇಕ ಶುಲ್ಕವನ್ನೇನೂ ಪಾವತಿಸುವುದಿಲ್ಲ. ದೂರಸಂಪರ್ಕ ಜಗತ್ತಿನ ಪರಿಭಾಷೆಯಲ್ಲಿ ಇಂತಹ ಸೇವೆಗಳನ್ನು 'ಓವರ್ ದ ಟಾಪ್' (ಓಟಿಟಿ) ಸೇವೆಗಳೆಂದು ಗುರುತಿಸಲಾಗುತ್ತದೆ. ವಾಟ್ಸ್‌ಆಪ್-ಸ್ಕೈಪ್‌ನಂತಹ ವ್ಯವಸ್ಥೆಗಳು ಇತರ ಸಂಸ್ಥೆಗಳು ಒದಗಿಸುವ ಅಂತರಜಾಲ ಸಂಪರ್ಕವನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಸೇವೆಗಳನ್ನು ಒದಗಿಸುತ್ತವಲ್ಲ, ಹಾಗಾಗಿಯೇ ಈ ಹೆಸರು ಹುಟ್ಟಿಕೊಂಡಿದೆ (ಓಟಿಟಿ ಸೇವೆಗಳಿಗೆ ಮೊಬೈಲ್ ಅಂತರಜಾಲವೇ ಬೇಕು ಎಂದೇನೂ ಇಲ್ಲವಲ್ಲ; ಅವು ವೈ-ಫೈ ಸಂಪರ್ಕಗಳಲ್ಲೂ ಸರಾಗವಾಗಿ ಕೆಲಸಮಾಡುತ್ತವೆ). ಇವು ತಮ್ಮ ಕಾರ್ಯಾಚರಣೆಗೆ ಮೊಬೈಲ್ ಜಾಲಗಳನ್ನೇ ಬಳಸಿಕೊಂಡರೂ ಇಂತಹ ಸೇವೆಗಳಿಂದ ಮೊಬೈಲ್ ಸಂಸ್ಥೆಗಳಿಗೆ ವಿಶೇಷ ಆದಾಯವೇನೂ ಬರುವುದಿಲ್ಲ. ಹೀಗಾಗಿ ಓಟಿಟಿ ಸೇವೆಗಳ ಮೇಲೆ ನಿಯಂತ್ರಂಣ ಹೇರಬೇಕೆಂಬ ಒತ್ತಾಯ ಕೆಲವು ಸಂದರ್ಭಗಳಲ್ಲಿ ಕೇಳಿಬಂದಿತ್ತು. ಅಂತಹ ಯಾವುದೇ ನಿರ್ಬಂಧ ಅಂತರಜಾಲದ ಮುಕ್ತ ಸ್ವರೂಪಕ್ಕೆ ಧಕ್ಕೆ ತಂದಂತೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆ ಎಲ್ಲ ಒತ್ತಾಯಗಳೂ ಈಗ ಹಿನ್ನೆಲೆಗೆ ಸರಿದಿವೆ; ಓಟಿಟಿ ಸೇವೆಗಳು ಅಬಾಧಿತವಾಗಿ ಮುಂದುವರೆದಿವೆ.

OTP
ಓಟಿಪಿ
(ರೂಪಿಸಬೇಕಿದೆ)
ಒನ್ ಟೈಮ್ ಪಾಸ್‌ವರ್ಡ್; ವಿಶ್ವವ್ಯಾಪಿ ಜಾಲದ ಮೂಲಕ ನಡೆಯುವ ವ್ಯವಹಾರಗಳಲ್ಲಿ ಬಳಕೆದಾರರ ಗುರುತನ್ನು ಖಾತರಿಪಡಿಸಿಕೊಳ್ಳಲು ಬಳಕೆಯಾಗುವ ಹೆಚ್ಚುವರಿ ಪಾಸ್‌ವರ್ಡ್. ಇದನ್ನು ಒಮ್ಮೆ ಮಾತ್ರ ಬಳಸುವುದು ಸಾಧ್ಯ.
ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ. ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ! ಇಂತಹ ಸನ್ನಿವೇಶಗಳನ್ನು ಕೊಂಚಮಟ್ಟಿಗಾದರೂ ತಪ್ಪಿಸುವ ಉದ್ದೇಶದಿಂದ ಬಳಕೆಯಾಗುವ ತಂತ್ರಗಳಲ್ಲೊಂದು ಓಟಿಪಿ. ಓಟಿಪಿ ಎನ್ನುವುದು 'ಒನ್ ಟೈಮ್ ಪಾಸ್‌ವರ್ಡ್' ಎಂಬ ಹೆಸರಿನ ಹ್ರಸ್ವರೂಪ. ಈ ವಿಧಾನ ಬಳಸುವಾಗ ಖಾತೆಯ ವಿವರ-ಪಾಸ್‌ವರ್ಡುಗಳ ಜೊತೆಗೆ ಬಳಕೆದಾರರ ಮೊಬೈಲಿಗೆ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಿದ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಕೆಲವೆಡೆ ಮೊಬೈಲಿಗೆ ಬರುವ ಈ ಸಂದೇಶವನ್ನು ಸಾಮಾನ್ಯ ಪಾಸ್‌ವರ್ಡ್ ಬದಲಿಗೆ ಉಪಯೋಗಿಸುವ ಸೌಲಭ್ಯವೂ ಇರುತ್ತದೆ. ಈ ಪಾಸ್‌ವರ್ಡನ್ನು ಒಮ್ಮೆ ಮಾತ್ರವೇ - ಅದೂ ನಿಗದಿತ ಅವಧಿಯೊಳಗೆ ಮಾತ್ರ - ಉಪಯೋಗಿಸುವುದು ಸಾಧ್ಯ. ಎಸ್ಸೆಮ್ಮೆಸ್‌ನಂತಹ ಸರಳ ಮಾಧ್ಯಮವನ್ನು ಬಳಸಿ ಆನ್‌ಲೈನ್ ವ್ಯವಹಾರಗಳಿಗೆ ಹೆಚ್ಚಿನ ಸುರಕ್ಷತೆ ತಂದುಕೊಡುತ್ತಿರುವುದು ಓಟಿಪಿಯ ಹೆಚ್ಚುಗಾರಿಕೆ. ಕಾರ್ಡು, ಪಾಸ್‌ವರ್ಡುಗಳ ಜೊತೆಗೆ ಮೊಬೈಲ್ ಫೋನ್ ಕೂಡ ಕಳ್ಳರ ಪಾಲಾದ ಸಂದರ್ಭಗಳನ್ನು ಹೊರತುಪಡಿಸಿದಂತೆ ಇದರ ವಿಶ್ವಾಸಾರ್ಹತೆ ಸಾಕಷ್ಟು ಉತ್ತಮವಾಗಿಯೇ ಇರುತ್ತದೆ. ಓಟಿಪಿಯ ಉದ್ದೇಶ ನಮ್ಮ ಸುರಕ್ಷತೆಯೇ ಆದ್ದರಿಂದ ನಾವು ಅದನ್ನು ಇತರರಿಗೆ ತಿಳಿಸುವುದು ಖಂಡಿತಾ ಒಳ್ಳೆಯದಲ್ಲ.

Open Source
ಓಪನ್‌ ಸೋರ್ಸ್
ಮುಕ್ತ ತಂತ್ರಾಂಶ
ಬಳಸಲು, ಹಂಚಲು ಹಾಗೂ ಬದಲಾಯಿಸಲು ಮುಕ್ತ ಅವಕಾಶವಿರುವ ತಂತ್ರಾಂಶ
ಕಂಪ್ಯೂಟರಿನಲ್ಲಿ - ಸ್ಮಾರ್ಟ್‌ಫೋನಿನಲ್ಲಿ ವಿವಿಧ ಉದ್ದೇಶಗಳಿಗಾಗಿ ನಾವು ಬಳಸುವ ತಂತ್ರಾಂಶಗಳಲ್ಲಿ ಹಲವು ವಿಧ. ಇವುಗಳಲ್ಲಿ ಕೆಲವನ್ನು ದುಡ್ಡುಕೊಟ್ಟು ಬಳಸಬೇಕು, ಕೆಲವನ್ನು ಬಳಸುವಾಗ ಜಾಹೀರಾತುಗಳನ್ನು ನೋಡಲು ಸಿದ್ಧರಿರಬೇಕು, ಮತ್ತೆ ಇನ್ನು ಕೆಲವು ನಮಗೆ ಪೂರ್ತಿ ಉಚಿತವಾಗಿಯೇ ದೊರಕುತ್ತವೆ. ಆದರೆ ಇದೆಲ್ಲ ಏನಿದ್ದರೂ ತಂತ್ರಾಂಶದ ಬಳಕೆಗೆ ಮಾತ್ರವೇ ಸೀಮಿತ. ತಂತ್ರಾಂಶದ ಕ್ರಮವಿಧಿಗಳೆಲ್ಲ ಅದರ ತಯಾರಕರ ಬಳಿಯೇ ಭದ್ರವಾಗಿರುವುದರಿಂದ ಅದರಲ್ಲಿ ಬಳಕೆದಾರರು ಯಾವುದೇ ರೀತಿಯ ಬದಲಾವಣೆ ಮಾಡುವಂತಿಲ್ಲ. ಈ ನಿರ್ಬಂಧವನ್ನು ಹೋಗಲಾಡಿಸುವುದು ಓಪನ್‌ಸೋರ್ಸ್, ಅಂದರೆ ಮುಕ್ತ ತಂತ್ರಾಂಶಗಳ ವೈಶಿಷ್ಟ್ಯ. ಇಲ್ಲಿ ತಂತ್ರಾಂಶದ ಕ್ರಮವಿಧಿಗಳು ಕೂಡ ಬಳಕೆದಾರರಿಗೆ ಮುಕ್ತವಾಗಿ ದೊರಕುತ್ತವೆ. ಅದನ್ನು ಬಳಸುವುದು, ಹಂಚುವುದು ಮತ್ತು ಬದಲಾಯಿಸುವುದು - ಎಲ್ಲವುದಕ್ಕೂ ಸ್ವಾತಂತ್ರ್ಯವಿರುತ್ತದೆ. ಬೇರೆ ಯಾರೋ ರೂಪಿಸಿದ ಓಪನ್‌ಸೋರ್ಸ್ ತಂತ್ರಾಂಶದ ಕಾರ್ಯವೈಖರಿಯನ್ನು ಬದಲಿಸುವ, ಅದನ್ನು ಇನ್ನಷ್ಟು ಉತ್ತಮಪಡಿಸುವ ಅವಕಾಶವೂ ನಮಗೆ ದೊರಕುತ್ತದೆ. ಓಪನ್‌ಸೋರ್ಸ್ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ವಿಶ್ವದೆಲ್ಲೆಡೆಯ ತಂತ್ರಜ್ಞರು ಭಾಗವಹಿಸುವುದರಿಂದ - ಮತ್ತು ಆ ಪೈಕಿ ಒಬ್ಬರ ಕೆಲಸವನ್ನು ಉತ್ತಮಪಡಿಸಲು ಇನ್ನೊಬ್ಬರು ನೆರವಾಗುವುದರಿಂದ - ಅವುಗಳ ಗುಣಮಟ್ಟ ಬಹಳಷ್ಟು ಉತ್ತಮವಾಗಿರುತ್ತದೆ. ತಂತ್ರಾಂಶ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಫೈರ್‌ಫಾಕ್ಸ್, ವಿಎಲ್‌ಸಿ ಪ್ಲೇಯರ್, ಓಪನ್‌ಅಫೀಸ್, ಗಿಂಪ್ ಮುಂತಾದವೆಲ್ಲ ಓಪನ್‌ಸೋರ್ಸ್ ತಂತ್ರಾಂಶಗಳೇ.

OCR
ಓಸಿಆರ್
(ರೂಪಿಸಬೇಕಿದೆ)
ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್; ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಿ ಚಿತ್ರರೂಪದಿಂದ ಪಠ್ಯರೂಪಕ್ಕೆ ಬದಲಿಸಿಕೊಡುವ ತಂತ್ರಾಂಶ
ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಓಸಿಆರ್. ಇದು 'ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್' ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು. ಸ್ಕ್ಯಾನ್ ಮಾಡಿಯೋ ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಓಸಿಆರ್ ತಂತ್ರಾಂಶದ ಕೆಲಸ. ಹಳೆಯ ಪುಸ್ತಕಗಳಲ್ಲಿರುವ ಪಠ್ಯವನ್ನು ಗುರುತಿಸಿ ಕಂಪ್ಯೂಟರೀಕರಿಸಲು, ಮುದ್ರಿತ ಅಥವಾ ಲಿಖಿತ ದಾಖಲೆಗಳನ್ನು ಸ್ವಯಂಚಾಲಿತವಾಗಿ ವರ್ಗೀಕರಿಸಲು - ಸಂಸ್ಕರಿಸಲು ಇದು ನೆರವಾಗುತ್ತದೆ. ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಹಲವು ಓಸಿಆರ್ ತಂತ್ರಾಂಶಗಳು ಕನ್ನಡದಲ್ಲೂ ಇವೆ.


logo