logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

SQL
ಎಸ್‌ಕ್ಯೂಎಲ್
(ರೂಪಿಸಬೇಕಿದೆ)
ಸ್ಟ್ರಕ್ಚರ್ಡ್ ಕ್ವೆರಿ ಲ್ಯಾಂಗ್ವೆಜ್; ದತ್ತಸಂಚಯಗಳನ್ನು ನಿರ್ವಹಿಸುವಾಗ ನಮ್ಮ ಆದೇಶಗಳನ್ನು ದತ್ತಸಂಚಯಕ್ಕೆ ಹೇಳಲು ಬಳಕೆಯಾಗುವ ಭಾಷೆ
ಭಾರೀ ಪ್ರಮಾಣದ ದತ್ತಾಂಶವನ್ನು ಉಳಿಸಿಡಲು ದತ್ತಸಂಚಯ, ಅಂದರೆ ಡೇಟಾಬೇಸ್‌ಗಳು ನೆರವಾಗುತ್ತವೆ ಸರಿ. ಆದರೆ ದತ್ತಾಂಶದ ನಿರ್ವಹಣೆ ಒಂದೇಸಲಕ್ಕೆ ಮುಗಿಯುವ ಕೆಲಸವಲ್ಲ: ಹೊಸ ದತ್ತಾಂಶವನ್ನು ಸೇರಿಸುವುದು, ಹಳೆಯದನ್ನು ಬದಲಿಸುವುದು, ಬೇಡದ್ದನ್ನು ಅಳಿಸಿಹಾಕುವುದು - ಹೀಗೆ ಇಲ್ಲಿ ನೂರೆಂಟು ಕೆಲಸಗಳು ನಡೆಯುತ್ತಲೇ ಇರುತ್ತವೆ. ಇದೆಲ್ಲ ಕೆಲಸಗಳಲ್ಲಿ ನಮಗೇನು ಬೇಕೆಂದು ದತ್ತಸಂಚಯಕ್ಕೆ ಹೇಳಲು ಬಳಕೆಯಾಗುವ ಭಾಷೆಯೇ ಸ್ಟ್ರಕ್ಚರ್ಡ್ ಕ್ವೆರಿ ಲ್ಯಾಂಗ್ವೆಜ್. ತಾಂತ್ರಿಕ ಪರಿಭಾಷೆಯಲ್ಲಿ ಎಸ್‌ಕ್ಯೂಎಲ್ ಅಥವಾ ಸೀಕ್ವೆಲ್ ಎಂದು ಗುರುತಿಸುವುದು ಇದನ್ನೇ. ನಮಗೆ ಬೇಕಾದ ದತ್ತಾಂಶವನ್ನು (ಉದಾ: ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಗ್ರಾಹಕರು) ದತ್ತಸಂಚಯದಿಂದ ಪಡೆದುಕೊಳ್ಳಬೇಕೆಂದರೆ ಅಗತ್ಯ ನಿರ್ದೇಶನಗಳನ್ನು ಇದೇ ಭಾಷೆಯಲ್ಲಿ ಬರೆಯಬೇಕಾದ್ದು ಅಗತ್ಯ. ದತ್ತಾಂಶವನ್ನು ಬದಲಾಯಿಸಲು, ಅಳಿಸಿಹಾಕಲು, ಇರುವ ದತ್ತಾಂಶಕ್ಕೆ ಹೊಸ ವಿವರಗಳನ್ನು ಹೆಚ್ಚುವರಿಯಾಗಿ ಸೇರಿಸಲು ಅಗತ್ಯ ನಿರ್ದೇಶನಗಳೂ ಈ ಭಾಷೆಯಲ್ಲಿವೆ. ನಮ್ಮನಿಮ್ಮಂತಹ ಬಳಕೆದಾರರಷ್ಟೇ ಅಲ್ಲ, ಜಾಲತಾಣಗಳು ಹಾಗೂ ಇತರ ತಂತ್ರಾಂಶಗಳೂ ಎಸ್‌ಕ್ಯೂಎಲ್ ಅನ್ನು ಬಳಸುತ್ತವೆ. ಜಾಲತಾಣದಲ್ಲಿ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರೀಕ್ಷಾ ಫಲಿತಾಂಶ ನೋಡುತ್ತೇವಲ್ಲ, ಅಂತಹ ಚಟುವಟಿಕೆಗಳ ಹಿಂದೆ ಇರುವುದು ಎಸ್‌ಕ್ಯೂಎಲ್ ಕೈವಾಡವೇ! ಎಸ್‌ಕ್ಯೂಎಲ್ ಅನ್ನು ೧೯೭೫ರಲ್ಲಿ ಮೊದಲ ಬಾರಿಗೆ ರೂಪಿಸಿದ್ದು ಐಬಿಎಂ ಸಂಸ್ಥೆಯ ಸಾಧನೆ. ಅಲ್ಲಿಂದ ಮುಂದಕ್ಕೆ ವಿವಿಧ ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಂಗಳ (ಡಿಬಿಎಂಎಸ್) ಅಗತ್ಯಕ್ಕೆ ತಕ್ಕಂತೆ ಈ ಭಾಷೆ ಬದಲಾಗುತ್ತ ಬಂದಿದೆ. ಒರೇಕಲ್, ಎಸ್‌ಕ್ಯೂಎಲ್ ಸರ್ವರ್ ಮುಂತಾದ ಬೇರೆಬೇರೆ ಡಿಬಿಎಂಎಸ್‌ಗಳಲ್ಲಿ ಬಳಕೆಯಾಗುವ ಎಸ್‌ಕ್ಯೂಎಲ್‌ನಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಅದರ ಮೂಲ ಸ್ವರೂಪ ಮಾತ್ರ ಒಂದೇ.

SDLC
ಎಸ್‌ಡಿಎಲ್‌ಸಿ
(ರೂಪಿಸಬೇಕಿದೆ)
ಸಿಸ್ಟಮ್ಸ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್; ತಂತ್ರಾಂಶ ಅಭಿವರ್ಧನೆಯ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ವಿವರಿಸುವ ನಿಯಮಗಳ ಚೌಕಟ್ಟು
ಹೊಸದಾಗಿ ತಂತ್ರಾಂಶವೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಅನೇಕ ಹಂತಗಳಿರುತ್ತವೆ. ಇಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ವಿವರಿಸುವ ನಿಯಮಗಳ ಚೌಕಟ್ಟನ್ನು ಸಿಸ್ಟಮ್ಸ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್ (ತಂತ್ರಾಂಶ ವ್ಯವಸ್ಥೆಗಳ ಅಭಿವರ್ಧನೆಯ ಜೀವನಚಕ್ರ) ಎಂದು ಕರೆಯುತ್ತಾರೆ. ಎಸ್‌ಡಿಎಲ್‌ಸಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಸಾಮಾನ್ಯ ಬಳಕೆಯಲ್ಲಿ 'ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್' ಎಂದು ಗುರುತಿಸುವುದೂ ಇದನ್ನೇ. ಎಸ್‌ಡಿಎಲ್‌ಸಿಯನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಅನುಷ್ಠಾನಗೊಳಿಸಲು ಸಂಸ್ಥೆಗಳು ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸುತ್ತವೆ. ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವಾದರೂ ಆ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ. ವಾಟರ್‌ಫಾಲ್ ಮಾಡೆಲ್, ಇನ್‌ಕ್ರಿಮೆಂಟಲ್ ಮಾಡೆಲ್, ಅಜೈಲ್ - ಇವು ಕಾರ್ಯವಿಧಾನ ಮಾದರಿಗೆ ಕೆಲ ಉದಾಹರಣೆಗಳು. ಈ ಪೈಕಿ ವಾಟರ್‌ಫಾಲ್ ಮಾದರಿಯಲ್ಲಿ ತಂತ್ರಾಂಶ ಅಭಿವರ್ಧನೆಯ ಅಷ್ಟೂ ಕೆಲಸವನ್ನು ಒಟ್ಟಿಗೆ ಒಂದೇ ಕಂತಿನಲ್ಲಿ ಮುಗಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಇನ್‌ಕ್ರಿಮೆಂಟಲ್ ಹಾಗೂ ಅಜೈಲ್ ಮಾದರಿಗಳಲ್ಲಿ ಇಡೀ ಪ್ರಕ್ರಿಯೆಯನ್ನು ಹಲವು ಭಾಗಗಳಾಗಿ ವಿಭಜಿಸಿಕೊಂಡು ಅವನ್ನು ಒಂದಾದನಂತರ ಒಂದರಂತೆ ಪೂರ್ಣಗೊಳಿಸಲಾಗುತ್ತದೆ.

IRNSS
ಐಆರ್‌ಎನ್‌ಎಸ್‌ಎಸ್
(ರೂಪಿಸಬೇಕಿದೆ)
ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ; ಜಿಪಿಎಸ್‌ಗೆ ಪರ್ಯಾಯವಾಗಿ ರೂಪುಗೊಂಡಿರುವ ಭಾರತೀಯ ವ್ಯವಸ್ಥೆ
ಎಲ್ಲಿಗಾದರೂ ಹೊರಟಾಗ ಆಟೋ ಅಥವಾ ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವುದು ನಗರವಾಸಿಗಳಿಗೆ ಈಗಾಗಲೇ ಚೆನ್ನಾಗಿ ಅಭ್ಯಾಸವಾಗಿರುವ ಸಂಗತಿ. ಹೀಗೆ ಟ್ಯಾಕ್ಸಿ ಬುಕ್ ಮಾಡಿದಾಗ ನಾವೆಲ್ಲಿದ್ದೇವೆ ಎಂದು ಟ್ಯಾಕ್ಸಿ ಚಾಲಕರಿಗೂ, ಅವರೆಲ್ಲಿದ್ದಾರೆ ಎಂದು ನಮಗೂ ಆಪ್‌ನಲ್ಲಿರುವ ಮ್ಯಾಪ್ ಮೂಲಕ ತಿಳಿಯುತ್ತದೆ; ಇದಕ್ಕಾಗಿ ಬಳಕೆಯಾಗುವ ವ್ಯವಸ್ಥೆಯೇ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್). ಈ ವ್ಯವಸ್ಥೆಯ ಹಿಂದೆ ಉಪಗ್ರಹಗಳ ಒಂದು ಜಾಲವೇ ಇದೆ. ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಜಿಪಿಎಸ್ ಸೌಲಭ್ಯ ಒದಗಿಸಲು ಕೆಲಸಮಾಡುತ್ತಿರುವ ಉಪಗ್ರಹಗಳೆಲ್ಲ ಅಮೆರಿಕಾ ಸರಕಾರದ ನಿಯಂತ್ರಣದಲ್ಲಿವೆ. ಹೀಗಾಗಿ ಜಿಪಿಎಸ್ ಬಳಕೆದಾರರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಮೇಲೆಯೇ ಅವಲಂಬಿಸಬೇಕಾದ್ದು ಅನಿವಾರ್ಯ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದರೆ ಇಂತಹ ಅವಲಂಬನೆ ಒಳ್ಳೆಯದಲ್ಲವಲ್ಲ, ಹಾಗಾಗಿ ನಮ್ಮ ದೇಶ ಜಿಪಿಎಸ್‌ಗೊಂದು ಪರ್ಯಾಯವನ್ನು ರೂಪಿಸಿದೆ. ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (ಐಆರ್‌ಎನ್‌ಎಸ್‌ಎಸ್) ಎಂಬ ಹೆಸರಿನ ಈ ವ್ಯವಸ್ಥೆಯಲ್ಲಿ ನಮ್ಮದೇ ಆದ ಏಳು ಉಪಗ್ರಹಗಳ ಜಾಲ ಬಳಕೆಯಾಗುತ್ತದೆ. ಇದಕ್ಕೆ ನಾವಿಕ್ (ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್‌ಟೆಲೇಶನ್) ಎಂಬ ಹೆಸರೂ ಇದೆ. ಈ ವ್ಯವಸ್ಥೆ ಸಾಮಾನ್ಯ ಬಳಕೆದಾರರಿಗೆ ಸ್ಟಾಂಡರ್ಡ್ ಪೊಸಿಶನಿಂಗ್ ಸರ್ವಿಸ್ (ಎಸ್‌ಪಿಎಸ್) ಹಾಗೂ ಸೇನಾಪಡೆಗಳಂತಹ ವಿಶೇಷ ಬಳಕೆದಾರರಿಗೆ ರಿಸ್ಟ್ರಿಕ್ಟೆಡ್ ಸರ್ವಿಸ್ (ಆರ್‌ಎಸ್) ಎಂಬ ಎರಡು ಮಾರ್ಗದರ್ಶಕ ಸೇವೆಗಳನ್ನು ಒದಗಿಸಲಿದೆ.

IM
ಐಎಂ
(ರೂಪಿಸಬೇಕಿದೆ)
ಇನ್ಸ್‌ಟಂಟ್ ಮೆಸೇಜ್; ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆದಾರರು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಸಂದೇಶ
ಅಂತರಜಾಲದ ದೆಸೆಯಿಂದ ಸಂವಹನದ ಅನೇಕ ಸರಳ ಮಾರ್ಗಗಳು ನಮಗೆ ದೊರೆತಿವೆ. ಇಂತಹ ಮಾರ್ಗಗಳ ಪೈಕಿ ಇನ್ಸ್‌ಟಂಟ್ ಮೆಸೇಜ್ ಕೂಡ ಒಂದು. ಐಎಂ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆದಾರರು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಸಂದೇಶಗಳನ್ನೇ ಐಎಂ ಎಂದು ಗುರುತಿಸಲಾಗುತ್ತದೆ. ಇಂತಹ ಸೇವೆಯೊಂದನ್ನು ಬಳಸುತ್ತಿದ್ದಾಗ (ಲಾಗಿನ್ ಆಗಿದ್ದಾಗ) ಸಂದೇಶಗಳನ್ನು ಥಟ್ಟನೆ ಕಳುಹಿಸುವುದು ಹಾಗೂ ಬಂದ ಸಂದೇಶಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡುವುದು ಸಾಧ್ಯ. ಇವನ್ನು ಇನ್ಸ್‌ಟಂಟ್ (ತತ್‌ಕ್ಷಣದ) ಸಂದೇಶಗಳೆಂದು ಕರೆಯುವುದಕ್ಕೆ ಇದೇ ಕಾರಣ. ಐಎಂ ತಂತ್ರಾಂಶದಲ್ಲಿ ಸಂದೇಶಗಳು - ಪ್ರತಿಕ್ರಿಯೆಗಳು ಒಂದರ ಕೆಳಗೊಂದರಂತೆ ಕಾಣಿಸಿಕೊಳ್ಳುವುದರಿಂದ ಅವುಗಳ ಬಳಕೆಯೂ ಬಹಳ ಸುಲಭ. ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವಾರು ತಾಣಗಳು ಐಎಂ ಸೇವೆಗಳನ್ನು ಒದಗಿಸುತ್ತವೆ. ಇಂತಹ ಯಾವುದೇ ಸೇವೆಯನ್ನು ಏಕಕಾಲದಲ್ಲಿ ಬಳಸುತ್ತಿರುವ ಯಾವುದೇ ಗ್ರಾಹಕರು ಐಎಂಗಳನ್ನು ಕಳಿಸುವುದು-ಪಡೆದುಕೊಳ್ಳುವುದು ಸಾಧ್ಯ. ಅನೇಕ ಐಎಂ ಸೇವೆಗಳಲ್ಲಿ ಪಠ್ಯದ ಜೊತೆಗೆ ಚಿತ್ರ, ಧ್ವನಿ ಹಾಗೂ ವೀಡಿಯೋ ರೂಪದ ಸಂದೇಶಗಳನ್ನೂ ವಿನಿಮಯಮಾಡಿಕೊಳ್ಳಬಹುದು. ಐಎಂ ಮಾತುಕತೆಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಭಾಗವಹಿಸುವುದೂ ಸಾಧ್ಯ. ಇನ್ಸ್‌ಟಂಟ್ ಮೆಸೇಜ್‌ಗಳನ್ನು ಪ್ರೈವೇಟ್ ಮೆಸೇಜ್ (ಪಿಎಂ) ಹಾಗೂ ಡೈರೆಕ್ಟ್ ಮೆಸೇಜ್ (ಡಿಎಂ) ಎಂದೂ ಕರೆಯುತ್ತಾರೆ.

IMPS
ಐಎಂಪಿಎಸ್
(ರೂಪಿಸಬೇಕಿದೆ)
ಇಮ್ಮೀಡಿಯೆಟ್ ಪೇಮೆಂಟ್ ಸರ್ವಿಸ್, ಎರಡು ಬ್ಯಾಂಕ್ ಖಾತೆಗಳ ನಡುವೆ ಯಾವುದೇ ಸಮಯದಲ್ಲಾದರೂ ಥಟ್ಟನೆ ಹಣ ವರ್ಗಾವಣೆ ಸಾಧ್ಯವಾಗಿಸುವ ವ್ಯವಸ್ಥೆ.
ಯಾರಿಗಾದರೂ ಹಣ ಪಾವತಿಸಬೇಕಾದಾಗ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ನೀಡುವ ಅಭ್ಯಾಸ ಬಹಳ ಹಳೆಯದು. ಈ ವಿಧಾನದಲ್ಲಿ ಹಣ ಅವರ ಕೈಸೇರಲು ಬೇಕಾದ ಸಮಯವೂ ಹೆಚ್ಚು. ಇದರ ಬದಲು ಹಣವನ್ನೇ ಕೊಂಡೊಯ್ಯುತ್ತೇವೆಂದರೆ ಸುರಕ್ಷತೆಯ ತಲೆನೋವು ನಮ್ಮನ್ನು ಕಾಡುತ್ತದೆ. ಈ ಸಮಸ್ಯೆಗೆ ಮೊದಲ ಪರಿಹಾರ 'ಎನ್‌ಇಎಫ್‌ಟಿ' (ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್) ವ್ಯವಸ್ಥೆ. ಈ ವ್ಯವಸ್ಥೆ ಮೂಲಕ ದೇಶದ ಯಾವುದೇ ಬ್ಯಾಂಕ್ ಗ್ರಾಹಕ ಯಾವುದೇ ಬ್ಯಾಂಕಿನ ಮತ್ತೊಬ್ಬ ಗ್ರಾಹಕನ ಖಾತೆಗೆ ಹಣ ವರ್ಗಾಯಿಸುವುದು ಸಾಧ್ಯ. ಆರ್‌ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್) ಎನ್ನುವುದೂ ಇಂಥದ್ದೇ ಇನ್ನೊಂದು ವ್ಯವಸ್ಥೆ. ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಹಣ ವರ್ಗಾಯಿಸಲು ಇದು ಬಳಕೆಯಾಗುತ್ತದೆ. ಆದರೆ ಎನ್‌ಇಎಫ್‌ಟಿ-ಆರ್‌ಟಿಜಿಎಸ್‌ಗಳ ಮೂಲಕ ಹಣ ವರ್ಗಾವಣೆಯಾಗುವುದು ಬ್ಯಾಂಕ್ ಕೆಲಸದ ದಿನಗಳಲ್ಲಿ, ಅದೂ ನಿರ್ದಿಷ್ಟ ಸಮಯದಲ್ಲಿ ಮಾತ್ರ. ಇಂತಹ ಯಾವುದೇ ನಿರ್ಬಂಧವಿಲ್ಲದೆ ಯಾವಾಗ ಬೇಕಾದರೂ ಥಟ್ಟನೆ ಹಣ ವರ್ಗಾಯಿಸಲು ಇರುವ ವ್ಯವಸ್ಥೆಯೇ ಐಎಂಪಿಎಸ್ (ಇಮ್ಮೀಡಿಯೆಟ್ ಪೇಮೆಂಟ್ ಸರ್ವಿಸ್). ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಂಸ್ಥೆ ರೂಪಿಸಿರುವ ಈ ವ್ಯವಸ್ಥೆ ಬಳಸಿ ನೆಟ್‌ಬ್ಯಾಂಕಿಂಗ್ ಮೂಲಕವಷ್ಟೇ ಅಲ್ಲ, ಮೊಬೈಲ್ ಮೂಲಕವೂ ಹಣವನ್ನು ವರ್ಗಾಯಿಸುವುದು ಸಾಧ್ಯ. ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಎನ್ನುವುದು ಇದೇ ಐಎಂಪಿಎಸ್‌ನ ಇನ್ನಷ್ಟು ಸುಧಾರಿತ-ಸರಳ ರೂಪ.

ISP
ಐಎಸ್‌ಪಿ
(ರೂಪಿಸಬೇಕಿದೆ)
ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್; ಅಂತರಜಾಲ ಸೇವೆಗಳನ್ನು ಒದಗಿಸುವ ಸಂಸ್ಥೆ
ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕಗಳೆಲ್ಲ ಇದ್ದಹಾಗೆ ಅಂತರಜಾಲ ಸಂಪರ್ಕವೂ ಇದೀಗ ಅನಿವಾರ್ಯವಾಗಿಬಿಟ್ಟಿದೆ. ಅಂತರಜಾಲ ಸಂಪರ್ಕ ಒದಗಿಸುವ ಸಂಸ್ಥೆಗಳು ಈಗ ಪ್ರತಿ ಊರಿನ ಪ್ರತಿ ಬಡಾವಣೆಯಲ್ಲೂ ಕಾಣಸಿಗುತ್ತವೆ. ಇಂತಹ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುತ್ತಾರೆ. ಅಂತರಜಾಲ ಸಂಪರ್ಕಕ್ಕೆಂದು ನಾವು ಈ ಸಂಸ್ಥೆಗಳಿಗೆ ಹಣ ನೀಡುತ್ತೇವಲ್ಲ, ಆ ಸಂಸ್ಥೆಗಳ ಬಳಿ ನಿರ್ದಿಷ್ಟ ಪ್ರದೇಶದಲ್ಲಿ (ಒಂದು ಬಡಾವಣೆ, ನಗರ, ರಾಜ್ಯ ಅಥವಾ ದೇಶ) ಅಂತರಜಾಲ ಸಂಪರ್ಕ ಒದಗಿಸುವಷ್ಟು ಸೌಕರ್ಯ ಮಾತ್ರ ಇರುತ್ತದೆ. ಆದರೆ ಅಂತರಜಾಲ ಇಡೀ ಪ್ರಪಂಚವನ್ನು ಆವರಿಸಿಕೊಂಡಿರುತ್ತದೆ. ಹಾಗಾಗಿ ಐಎಸ್‌ಪಿಗಳು ನಮ್ಮ ವ್ಯಾಪ್ತಿ ಇಷ್ಟೇ ಎಂದು ಹೇಳುವಂತಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲೆಂದೇ ಸಣ್ಣ ಐಎಸ್‌ಪಿಗಳು ತಮಗಿಂತ ದೊಡ್ಡ ಐಎಸ್‌ಪಿಗಳೊಡನೆ ಸಂಪರ್ಕ ಹೊಂದಿರುತ್ತವೆ. ಆ ದೊಡ್ಡ ಐಎಸ್‌ಪಿಗಳಿಗೆ ಇನ್ನೂ ದೊಡ್ಡ ಐಎಸ್‌ಪಿಗಳ ಸಂಪರ್ಕ ಇರುತ್ತದೆ. ಐಎಸ್‌ಪಿಗಳು ಪರಸ್ಪರ ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವಲ್ಲ, ಸಂಪರ್ಕದ ಆ ಬಿಂದುವನ್ನು ನೆಟ್‌ವರ್ಕ್ ಆಕ್ಸೆಸ್ ಪಾಯಿಂಟ್ (ಎನ್‌ಎಪಿ) ಎಂದು ಕರೆಯುತ್ತಾರೆ. ದೇಶ-ದೇಶಗಳ, ಖಂಡ-ಖಂಡಗಳ ನಡುವಿನ ಸಂಪರ್ಕ ವ್ಯವಸ್ಥೆ 'ಇಂಟರ್‌ನೆಟ್ ಬ್ಯಾಕ್‌ಬೋನ್' ಎಂದು ಕರೆಸಿಕೊಳ್ಳುತ್ತದೆ. ಸಮುದ್ರದಾಳದ 'ಸಬ್‌ಮರೀನ್ ಕಮ್ಯುನಿಕೇಶನ್ಸ್ ಕೇಬಲ್'ಗಳು ಈ ವ್ಯವಸ್ಥೆಯ ಪ್ರಮುಖ ಅಂಗ.

Icon
ಐಕನ್
(ರೂಪಿಸಬೇಕಿದೆ)
ಯಾವುದೇ ಕಡತ, ತಂತ್ರಾಂಶ ಅಥವಾ ಅದರೊಳಗಿನ ನಿರ್ದಿಷ್ಟ ಚಟುವಟಿಕೆಗಳನ್ನು ಪ್ರತಿನಿಧಿಸುವ ಚಿತ್ರಾತ್ಮಕ ಸಂಕೇತ
ಕಂಪ್ಯೂಟರುಗಳು ವಿಕಾಸವಾಗುತ್ತಿದ್ದಾಗ ಅವುಗಳ ಕೆಲಸವೆಲ್ಲ ಪಠ್ಯದ ಮೂಲಕವೇ ನಡೆಯುತ್ತಿತ್ತು. ಅಂದರೆ, ಅವುಗಳಿಂದ ಏನು ಕೆಲಸಮಾಡಿಸಿಕೊಳ್ಳಬೇಕಾದರೂ ನಿರ್ದಿಷ್ಟ ಆದೇಶಗಳನ್ನು ಟೈಪ್ ಮಾಡುವುದು ಅನಿವಾರ್ಯವಾಗಿತ್ತು. 'ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್' ಪರಿಕಲ್ಪನೆಯ ಪರಿಚಯವಾದದ್ದು ಹಲವು ದಶಕಗಳ ನಂತರ. ಪ್ರತಿಯೊಂದಕ್ಕೂ ಆದೇಶಗಳನ್ನು ಟೈಪಿಸುವ ಬದಲು ಚಿತ್ರಗಳ - ಸಂಕೇತಗಳ ಮೇಲೆ ಕ್ಲಿಕ್ ಮಾಡಿ ಕೆಲಸ ಪೂರೈಸಿಕೊಳ್ಳುವ ಸಾಧ್ಯತೆಯನ್ನು ತೋರಿಸಿಕೊಟ್ಟದ್ದು ಈ ಪರಿಕಲ್ಪನೆಯ ಹೆಚ್ಚುಗಾರಿಕೆ. ಈ ಪರಿಕಲ್ಪನೆಯ ಪ್ರಮುಖ ಅಂಗವೇ ಚಿತ್ರಾತ್ಮಕ ಸಂಕೇತ, ಅಂದರೆ 'ಐಕನ್'. ಯಾವುದೇ ತಂತ್ರಾಂಶ ಅಥವಾ ಕಡತವನ್ನು ಪುಟಾಣಿ ಚಿತ್ರದ ಮೂಲಕ ಪ್ರತಿನಿಧಿಸುವುದು ಹಾಗೂ ಚಿತ್ರದ ಮೇಲೆ ಕ್ಲಿಕ್ಕಿಸುವ ಮೂಲಕ ಅದನ್ನು ತೆರೆಯಲು ಅನುವುಮಾಡಿಕೊಡುವುದು ಐಕನ್‌ಗಳ ಉದ್ದೇಶ. ಕಂಪ್ಯೂಟರಿನಲ್ಲಷ್ಟೇ ಅಲ್ಲ, ಐಕನ್‌ಗಳು ಮೊಬೈಲ್ - ಟ್ಯಾಬ್ಲೆಟ್ - ಎಟಿಎಂ ಸೇರಿದಂತೆ ಬಳಕೆದಾರರೊಡನೆ ವ್ಯವಹರಿಸುವ ಬಹುತೇಕ ಎಲ್ಲ ಯಾಂತ್ರಿಕ ವ್ಯವಸ್ಥೆಗಳಲ್ಲೂ ಕಾಣಸಿಗುತ್ತವೆ. ತಂತ್ರಾಂಶಗಳನ್ನು ಪ್ರತಿನಿಧಿಸಲಷ್ಟೇ ಅಲ್ಲ, ತಂತ್ರಾಂಶಗಳ ಒಳಗೆ ನಿರ್ದಿಷ್ಟ ಚಟುವಟಿಕೆಗಳನ್ನು ಸೂಚಿಸಲಿಕ್ಕೂ ಐಕನ್‌ಗಳ ಬಳಕೆ ಸಾಮಾನ್ಯ. ವಿವಿಧ ಉದ್ದೇಶಗಳಿಗಾಗಿ ವಿವಿಧ ರೀತಿಯ ಐಕನ್‌ಗಳು ಬಳಕೆಯಾಗುತ್ತವೆ. ನಿರ್ದಿಷ್ಟ ತಂತ್ರಾಂಶಗಳಿಗೆ ಸೀಮಿತವಾಗಿರುವ ವಿನ್ಯಾಸಗಳ ಜೊತೆಗೆ ಹಲವಾರು ತಂತ್ರಾಂಶಗಳಲ್ಲಿ ಮಾನಕದಂತೆ ಬಳಕೆಯಾಗುವ ಐಕನ್‌ಗಳೂ ಇವೆ - ಕಟ್ ಮಾಡುವ ಕತ್ತರಿ, ಸೇವ್ ಮಾಡುವ ಫ್ಲಾಪಿ ಡಿಸ್ಕ್, ಹೊಸ ಕಡತವನ್ನು ಪ್ರತಿನಿಧಿಸುವ ಬಿಳಿಯ ಹಾಳೆಗಳಂತಹವು ಇದಕ್ಕೆ ಉದಾಹರಣೆಗಳು.

IT
ಐಟಿ
ಮಾಹಿತಿ ತಂತ್ರಜ್ಞಾನ
ಇನ್‌ಫರ್ಮೇಶನ್ ಟೆಕ್ನಾಲಜಿ ಎಂಬ ಹೆಸರಿನ ಹ್ರಸ್ವರೂಪ
ಇನ್‌ಫರ್ಮೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ತಂತ್ರಜ್ಞಾನ ಎನ್ನುವುದು ನಮಗೆಲ್ಲ ಚಿರಪರಿಚಿತ ಹೆಸರು. ದತ್ತಾಂಶದ (ಡೇಟಾ) ಸೃಷ್ಟಿ, ಸಂಸ್ಕರಣೆ, ಶೇಖರಣೆ ಹಾಗೂ ವಿನಿಮಯದಂತಹ ಪ್ರಕ್ರಿಯೆಗಳಲ್ಲಿ ಕಂಪ್ಯೂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಸಾಧನ-ವ್ಯವಸ್ಥೆಗಳ ಬಳಕೆಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ಐಟಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಸಂವಹನ ಮಾಧ್ಯಮಗಳನ್ನು ಪೂರಕವಾಗಿ ಬಳಸುವುದರಿಂದ ಈ ಕ್ಷೇತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯ. ಈ ಉದ್ದೇಶದಿಂದ ರೂಪುಗೊಂಡಿರುವುದೇ ಐಸಿಟಿ ಪರಿಕಲ್ಪನೆ. ಐಸಿಟಿ ಎನ್ನುವುದು ಇನ್‌ಫರ್ಮೇಶನ್ ಆಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಹೆಸರಿನ ಹ್ರಸ್ವರೂಪ. ಐಟಿಯಲ್ಲಿ ಬಳಕೆಯಾಗುವ ಕಂಪ್ಯೂಟರ್ ಮತ್ತಿತರ ಸಾಧನಗಳ ಜೊತೆಗೆ ಐಸಿಟಿ ಪರಿಕಲ್ಪನೆಯಲ್ಲಿ ದೂರವಾಣಿ, ಅಂತರಜಾಲ, ಉಪಗ್ರಹ ತಂತ್ರಜ್ಞಾನ ಮುಂತಾದ ಸಂಗತಿಗಳೂ ಸೇರುತ್ತವೆ. ಇನ್ಸ್‌ಟೆಂಟ್ ಮೆಸೇಜಿಂಗ್, ವೀಡಿಯೋ ಕಾನ್ಫರೆನ್ಸಿಂಗ್, ಸೋಶಿಯಲ್ ನೆಟ್‌ವರ್ಕಿಂಗ್, ಆನ್‌ಲೈನ್ ಗೇಮಿಂಗ್‌ಗಳೆಲ್ಲ ಸಾಧ್ಯವಾಗುವುದು ಇವೆಲ್ಲ ಒಟ್ಟಿಗೆ ಸೇರಿದಾಗಲೇ. ಇಷ್ಟೆಲ್ಲ ಸವಲತ್ತುಗಳನ್ನು ಒಟ್ಟಾಗಿ ಬಳಸುವ ಮೂಲಕ ಕ್ರೀಡೆಯಿಂದ ಮನರಂಜನೆಯವರೆಗೆ, ಶಿಕ್ಷಣದಿಂದ ಸಂಶೋಧನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಸಾಧ್ಯತೆಗಳನ್ನು ರೂಪಿಸಿಕೊಳ್ಳಬಹುದು ಎನ್ನುವುದು ಐಸಿಟಿಯ ಆಶಯ.

IDE
ಐಡಿಇ
(ರೂಪಿಸಬೇಕಿದೆ)
ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಎನ್‌ವಿರಾನ್‌ಮೆಂಟ್; ತಂತ್ರಾಂಶ ಅಭಿವರ್ಧನೆಯಲ್ಲಿ ಬೇಕಾಗುವ ಎಲ್ಲ ತಂತ್ರಾಂಶಗಳ ಸೌಲಭ್ಯಗಳನ್ನೂ ಒಳಗೊಂಡ ವ್ಯವಸ್ಥೆ
ತಂತ್ರಾಂಶ ಅಭಿವರ್ಧನೆಯ ಪ್ರಕ್ರಿಯೆ ಬಹಳ ಸಂಕೀರ್ಣವಾದದ್ದು. ಈ ಕೆಲಸದಲ್ಲಿ ತೊಡಗಿಕೊಂಡಿರುವ ತಂತ್ರಜ್ಞರಿಗೆ ಹಲವಾರು ತಂತ್ರಾಂಶಗಳು ನೆರವಾಗುತ್ತವೆ. ಆದೇಶಗಳನ್ನು ಟೈಪ್ ಮಾಡಲು ಬೇಕಾದ ಎಡಿಟರ್, ತಪ್ಪುಗಳನ್ನು ಗುರುತಿಸುವ ಡೀಬಗರ್, ಕಾರ್ಯಗತಗೊಳಿಸಲು ನೆರವಾಗುವ ಕಂಪೈಲರ್ - ಹೀಗೆ ಇಲ್ಲಿ ಅನೇಕ ತಂತ್ರಾಂಶಗಳು ಬಳಕೆಯಾಗುತ್ತವೆ. ಇವಿಷ್ಟೂ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ಬಳಸುವುದು ಕಿರಿಕಿರಿಯ ಸಂಗತಿ ಎನ್ನಿಸಬಹುದಲ್ಲ, ಅದಕ್ಕೆ ಇಂತಹ ಎಲ್ಲ ಪೂರಕ ತಂತ್ರಾಂಶಗಳನ್ನೂ ಒಟ್ಟಾಗಿ ನೀಡುವ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲಾಗಿದೆ. ಈ ವ್ಯವಸ್ಥೆಯ ಹೆಸರೇ ಐಡಿಇ, ಅರ್ಥಾತ್ 'ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಎನ್‌ವಿರಾನ್‌ಮೆಂಟ್'. ಮೇಲೆ ಹೇಳಿದ ಎಲ್ಲ ತಂತ್ರಾಂಶಗಳ ಸೌಲಭ್ಯಗಳನ್ನೂ ಒಳಗೊಂಡ ವಿಶಿಷ್ಟ ತಂತ್ರಾಂಶ ಇದು. ಕೆಲ ಐಡಿಇಗಳಲ್ಲಿ ತಂತ್ರಾಂಶದ ವಿವಿಧ ಆವೃತ್ತಿಗಳನ್ನು ನಿರ್ವಹಿಸುವ (ವರ್ಶನ್ ಕಂಟ್ರೋಲ್) ಸೌಲಭ್ಯವೂ ಇರುತ್ತದೆ. ತಂತ್ರಾಂಶ ಅಭಿವರ್ಧನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಒಂದೇ ತಂತ್ರಾಂಶ ಬಳಸಿ ನಡೆಸುವುದು ಸಾಧ್ಯವಾಗುವುದರಿಂದ ಐಡಿಇ ಬಳಕೆಯಿಂದ ಈ ಪ್ರಕ್ರಿಯೆಯ ಸಂಕೀರ್ಣತೆ ಕೊಂಚ ಕಡಿಮೆಯಾಗುತ್ತದೆ. ಅಂದಹಾಗೆ ಐಡಿಇ ಎಂಬ ಹೆಸರಿನ ಬಳಕೆ ಯಂತ್ರಾಂಶ ಕ್ಷೇತ್ರದಲ್ಲೂ ಇತ್ತು. ಹಾರ್ಡ್ ಡ್ರೈವ್‌ಗಳ ನಿಯಂತ್ರಕವನ್ನು (ಕಂಟ್ರೋಲರ್) ಡ್ರೈವ್‌ನೊಳಗೇ ಸಂಯೋಜಿಸಲಾಗಿದೆ ಎಂದು ಸೂಚಿಸುತ್ತಿದ್ದ ಈ ಹೆಸರಿನ ಪೂರ್ಣರೂಪ 'ಇಂಟಿಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್' ಎಂದು. ಈ ತಂತ್ರಜ್ಞಾನ ಬಳಸುವ ಹಾರ್ಡ್ ಡ್ರೈವ್‌ಗಳು ಈಗ ಚಾಲ್ತಿಯಲ್ಲಿಲ್ಲ.

IDN
ಐಡಿಎನ್
(ರೂಪಿಸಬೇಕಿದೆ)
ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್, ಜಾಲತಾಣದ ವಿಳಾಸಗಳನ್ನು ಇಂಗ್ಲಿಷ್ ಹೊರತಾದ ಲಿಪಿಗಳಲ್ಲೂ ರೂಪಿಸಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆ.
ಅಂತರಜಾಲ ಬಳಸುವವರಿಗೆಲ್ಲ ಜಾಲತಾಣಗಳು (ವೆಬ್‌ಸೈಟ್) ಗೊತ್ತು. ನಿರ್ದಿಷ್ಟ ಜಾಲತಾಣಗಳನ್ನು ಗುರುತಿಸಲು ಬಳಸುವ ವಿಳಾಸವಿದೆಯಲ್ಲ - ವಿಜಯವಾಣಿ ಡಾಟ್ ನೆಟ್, ಇಜ್ಞಾನ ಡಾಟ್ ಕಾಮ್ ಇತ್ಯಾದಿ - ಅದನ್ನು ಡೊಮೈನ್ ನೇಮ್ ಎಂದು ಕರೆಯುತ್ತಾರೆ (http://www.ejnana.com/2017/01/cellphone.html ಎನ್ನುವಂತಹ ರೂಪದ ಪೂರ್ಣ ವಿಳಾಸಕ್ಕೆ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು; ಡೊಮೈನ್ ನೇಮ್ ಎನ್ನುವುದು ಯುಆರ್‌ಎಲ್‌ನ ಒಂದು ಭಾಗ). ಜಾಲತಾಣದಲ್ಲಿರುವ ಮಾಹಿತಿ ಯಾವ ಭಾಷೆಯದೇ ಆದರೂ ಅದರ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ ಇರುವುದನ್ನು ನಾವು ನೋಡುತ್ತೇವಲ್ಲ, ಈ ಪರಿಸ್ಥಿತಿ ಇದೀಗ ಬದಲಾಗುತ್ತಿದೆ. ಜಾಲತಾಣದಲ್ಲಿರುವ ಮಾಹಿತಿಯಂತೆ ಅದರ ವಿಳಾಸದಲ್ಲೂ ನಮ್ಮ ಆಯ್ಕೆಯ ಭಾಷೆಯನ್ನು ಬಳಸಲು ಅನುವುಮಾಡಿಕೊಡುವುದು 'ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್'ಗಳ (ಐಡಿಎನ್) ವೈಶಿಷ್ಟ್ಯ. ಜಾಲತಾಣದ ಹೆಸರು ಸ್ಥಳೀಯ ಲಿಪಿಯಲ್ಲಿರುವುದಷ್ಟೇ ಅಲ್ಲ; ಡಾಟ್ ಕಾಮ್, ಡಾಟ್ ನೆಟ್‌ಗಳ ಜಾಗದಲ್ಲಿ ಜಾಲತಾಣದ ವಿಶೇಷಣವನ್ನು (ಟಾಪ್‌ಲೆವೆಲ್ ಡೊಮೈನ್ ಅಥವಾ ಟಿಎಲ್‌ಡಿ) ಕೂಡ ಅದೇ ಲಿಪಿಯಲ್ಲಿ 'ಡಾಟ್ ಭಾರತ' ಎಂದು ಬರೆಯಬಹುದು.


logo