logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

DRM
ಡಿಆರ್‌ಎಂ
(ರೂಪಿಸಬೇಕಿದೆ)
ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್; ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿ ಪೈರಸಿ ತಡೆಗೆ ಪ್ರಯತ್ನಿಸುವ ಪರಿಕಲ್ಪನೆ.
ಭೌತಿಕ ಜಗತ್ತಿನಲ್ಲಿ ಸ್ಥಿರ-ಚರ ಆಸ್ತಿಗಳ ಮೇಲೆ ಅದರ ಮಾಲೀಕರಿಗೆ ಹೇಗೆ ಹಕ್ಕು ಇರುತ್ತದೋ ಡಿಜಿಟಲ್ ಜಗತ್ತಿನಲ್ಲಿ ವಿವಿಧ ರೂಪಗಳಲ್ಲಿರುವ ಮಾಹಿತಿಯ ಹಕ್ಕುಸ್ವಾಮ್ಯ ಅದನ್ನು ರೂಪಿಸಿದವರ ಬಳಿಯಲ್ಲಿರುತ್ತದೆ. ಸೂಕ್ತ ಶುಲ್ಕ ನೀಡಿಯೋ ಮಾಲೀಕರನ್ನು ಸೂಕ್ತವಾಗಿ ಗುರುತಿಸುವ ಮೂಲಕವೋ ಬಳಕೆದಾರರು ಆ ಹಕ್ಕನ್ನು ಗೌರವಿಸದಿದ್ದಾಗ ಪೈರಸಿ ಸಮಸ್ಯೆ ತಲೆಯೆತ್ತುತ್ತದೆ. ಪೈರಸಿ ಕೇವಲ ನೀತಿ ತತ್ವಗಳ (ಎಥಿಕ್ಸ್) ಸಮಸ್ಯೆಯಷ್ಟೇ ಅಲ್ಲ, ಬೌದ್ಧಿಕ ಹಕ್ಕುಗಳ ಮಾಲೀಕರಿಗೆ ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕದೆ ಹೋದಾಗ ಅದು ಆರ್ಥಿಕ ಸಮಸ್ಯೆಗೂ ಕಾರಣವಾಗುತ್ತದೆ. ಈ ಸಮಸ್ಯೆಯ ತಡೆಗೆ ಕೈಗೊಳ್ಳಲಾಗುವ ಕ್ರಮಗಳಲ್ಲೊಂದು - 'ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್' (ಡಿಆರ್‌ಎಂ). ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿ ಪೈರಸಿ ತಡೆಗೆ ಪ್ರಯತ್ನಿಸುವುದು ಡಿಆರ್‌ಎಂನ ಮೂಲಮಂತ್ರ. ಆನ್‌ಲೈನ್‌ನಲ್ಲಿ ಮಾತ್ರವೇ ಓದಲು ದೊರಕುವ ಪುಸ್ತಕದ ಡೌನ್‌ಲೋಡ್ ನಿರ್ಬಂಧಿಸುವುದು, ಹಾಡುಗಳನ್ನು ನಿರ್ದಿಷ್ಟ ಆಪ್ ಮೂಲಕವೇ ಕೇಳಲು ಸಾಧ್ಯವಾಗುವಂತೆ ಮಾಡುವುದು, ಇನ್‌ಸ್ಟಾಲ್ ಮಾಡಿಕೊಂಡ ತಂತ್ರಾಂಶದ ನೋಂದಾವಣೆಯನ್ನು ಕಡ್ಡಾಯಗೊಳಿಸುವುದು - ಹೀಗೆ ಹಲವು ಮಾರ್ಗಗಳ ಮೂಲಕ ಡಿಆರ್‌ಎಂ ತಂತ್ರಗಳನ್ನು ಕಾರ್ಯಗತಗೊಳಿಸಬಹುದು. ಡಿಆರ್‌ಎಂ ತಂತ್ರಗಳು ಕೆಲವೊಮ್ಮೆ ಅಧಿಕೃತ ಬಳಕೆದಾರರಿಗೂ ತೊಂದರೆಕೊಡುವುದುಂಟು. ಡಿಆರ್‌ಎಂ ಕಾರ್ಯಗತಗೊಳಿಸಲು ಬಳಕೆಯಾಗುವ ಕೆಲವು ಕ್ರಮಗಳನ್ನು ದುರುದ್ದೇಶಪೂರಿತ ತಂತ್ರಾಂಶಗಳ ಮೂಲಕ ವಿಫಲಗೊಳಿಸಲಾದ ಉದಾಹರಣೆಗಳೂ ಇವೆ. ಡಿಆರ್‌ಎಂ ಕ್ರಮಗಳು ಅಂತರಜಾಲದ ಮುಕ್ತ ಸ್ವರೂಪಕ್ಕೆ ವಿರುದ್ಧ ಎಂಬ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಯನ್ನೇ ವಿರೋಧಿಸುವವರೂ ಇದ್ದಾರೆ.

DNS
ಡಿಎನ್‌ಎಸ್
(ರೂಪಿಸಬೇಕಿದೆ)
ಡೊಮೈನ್ ನೇಮ್ ಸಿಸ್ಟಂ; ಜಾಲತಾಣದ ವಿಳಾಸಗಳನ್ನು (ಡೊಮೈನ್ ನೇಮ್) ಅವುಗಳ ಐಪಿ ವಿಳಾಸದೊಡನೆ ಹೊಂದಿಸಿಕೊಡುವ ವ್ಯವಸ್ಥೆ
ನಾವು ಭೇಟಿಕೊಡುವ ವೆಬ್‌ಸೈಟುಗಳು ಅಂತರಜಾಲದ ಮೂಲೆಯಲ್ಲೆಲ್ಲೋ ಇರುವ ಒಂದು ಸರ್ವರಿನಲ್ಲಿ ಶೇಖರವಾಗಿರುತ್ತವೆ. ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಪ್ರತ್ಯೇಕವಾಗಿ ಗುರುತಿಸಲು ಐಪಿ ವಿಳಾಸ ಬಳಸುತ್ತಾರಲ್ಲ, ಪ್ರತಿ ಜಾಲತಾಣದ ಸರ್ವರ್‌ಗೂ ಇಂತಹುದೇ ಒಂದು ಐಪಿ ವಿಳಾಸ ಇರುತ್ತದೆ. ಐಪಿ ವಿಳಾಸವೆಂದರೆ ಅಂಕಿಗಳ ಒಂದು ಸರಣಿ - ೭೪.೧೨೫.೭೦.೧೨೧ ಎನ್ನುವ ರೀತಿಯದು. ನಮಗೆ ಬೇಕಾದ ಜಾಲತಾಣಗಳನ್ನು ಗೂಗಲ್ ಡಾಟ್ ಕಾಮ್ ಎಂದೋ ಇಜ್ಞಾನ ಡಾಟ್ ಕಾಮ್ ಎಂದೋ ಗುರುತಿಟ್ಟುಕೊಳ್ಳುವ ಬದಲಿಗೆ ಇಷ್ಟೆಲ್ಲ ಅಂಕಿಗಳನ್ನು ಯಾರು ತಾನೇ ನೆನಪಿಟ್ಟುಕೊಳ್ಳುತ್ತಾರೆ? ಇದನ್ನು ನೆನಪಿಟ್ಟುಕೊಳ್ಳುವ ಕೆಲಸ ನಮಗೆ ಬೇಡ ಎಂದು ರೂಪಿಸಲಾಗಿರುವ ವ್ಯವಸ್ಥೆಯೇ ಡಿಎನ್‌ಎಸ್, ಅಂದರೆ ಡೊಮೈನ್ ನೇಮ್ ಸಿಸ್ಟಂ. ಬ್ರೌಸರ್ ತಂತ್ರಾಂಶದಲ್ಲಿ ನಾವು ಟೈಪ್ ಮಾಡುವ ವಿಳಾಸವನ್ನು ಆ ತಾಣದ ಐಪಿ ವಿಳಾಸದೊಡನೆ ಹೊಂದಿಸಿಕೊಡುವ ಕೆಲಸ ಈ ವ್ಯವಸ್ಥೆಯದು. ಊರಿನ ಫೋನ್ ನಂಬರುಗಳೆಲ್ಲದರ ವಿವರ ಟೆಲಿಫೋನ್ ಡೈರೆಕ್ಟರಿಯಲ್ಲಿರುವಂತೆಯೇ ಎಲ್ಲ ಜಾಲತಾಣಗಳ ವಿವರವೂ ಡಿಎನ್‌ಎಸ್‌ಗೆ ಲಭ್ಯವಿರುತ್ತದೆ. ಅದು ಸರಿಯಾದ ಐಪಿ ವಿಳಾಸ ಹುಡುಕಿಕೊಟ್ಟರಷ್ಟೇ ನಮಗೆ ಬೇಕಾದ ಜಾಲತಾಣ ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯಲ್ಲಿ ತೆರೆದುಕೊಳ್ಳುತ್ತದೆ. ಕೆಲವರು ಡಿಎನ್‌ಎಸ್ ಅನ್ನು ಡೊಮೈನ್ ನೇಮ್ ಸರ್ವಿಸ್ ಅಥವಾ ಡೊಮೈನ್ ನೇಮ್ ಸರ್ವರ್ ಎಂದೂ ಕರೆಯುತ್ತಾರೆ.

Digital Library
ಡಿಜಿಟಲ್ ಲೈಬ್ರರಿ
(ರೂಪಿಸಬೇಕಿದೆ)
ವಿದ್ಯುನ್ಮಾನ ರೂಪದಲ್ಲಿರುವ ಪುಸ್ತಕಗಳ ಸಂಗ್ರಹ
ಪುಸ್ತಕಗಳ ಡಿಜಿಟಲ್ ರೂಪವನ್ನು ಇ-ಪುಸ್ತಕ ಅಥವಾ ಇ-ಬುಕ್ ಎಂದು ಕರೆಯುವುದು ನಮಗೆ ಗೊತ್ತು. ಭೌತಿಕ ಪುಸ್ತಕಗಳ ಗ್ರಂಥಾಲಯ ಇದ್ದಂತೆ ಇ-ಪುಸ್ತಕಗಳ ಗ್ರಂಥಾಲಯಗಳೂ ಇರುತ್ತವೆ. 'ಡಿಜಿಟಲ್ ಲೈಬ್ರರಿ' ಎಂದು ಕರೆಯುವುದು ಇಂತಹ ಗ್ರಂಥಾಲಯಗಳನ್ನೇ. ಪುಸ್ತಕಗಳೆಲ್ಲ ಇ-ರೂಪದಲ್ಲಿದ್ದಮೇಲೆ ಈ ಗ್ರಂಥಾಲಯ ನಾಲ್ಕು ಗೋಡೆಗಳ ಕೋಣೆಯೊಳಗಿರುವುದಿಲ್ಲ, ಕಂಪ್ಯೂಟರಿನೊಳಗಿರುತ್ತದೆ ಎನ್ನುವುದೊಂದೇ ಸಾಮಾನ್ಯ ಗ್ರಂಥಾಲಯಕ್ಕೂ ಡಿಜಿಟಲ್ ಗ್ರಂಥಾಲಯಕ್ಕೂ ಇರುವ ವ್ಯತ್ಯಾಸ. ಭೌತಿಕ ಜಗತ್ತಿನ ಪರಿಮಿತಿಗಳನ್ನೆಲ್ಲ ಮೀರಿ ಹೆಚ್ಚು ಓದುಗರನ್ನು ತಲುಪಲು ಸಾಧ್ಯವಾಗುವುದು, ಪಠ್ಯರೂಪದ ಮಾಹಿತಿಗೆ ಪೂರಕವಾಗಿ ಬಹುಮಾಧ್ಯಮ ಸಂಪನ್ಮೂಲಗಳನ್ನೂ ಒದಗಿಸಿಕೊಡುವುದು ಡಿಜಿಟಲ್ ಲೈಬ್ರರಿಯ ಹೆಗ್ಗಳಿಕೆ. ತಮ್ಮ ಆಸಕ್ತಿಯ ಕ್ಷೇತ್ರ ಕುರಿತ ಪುಸ್ತಕಗಳನ್ನು ಥಟ್ಟನೆ ಹುಡುಕಿಕೊಳ್ಳುವುದು, ನಿರ್ದಿಷ್ಟ ಮಾಹಿತಿಯನ್ನು ಯಾವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಪತ್ತೆಮಾಡುವುದೆಲ್ಲ ಡಿಜಿಟಲ್ ಲೈಬ್ರರಿಗಳಲ್ಲಿ ಬಹಳ ಸುಲಭ. ಅಷ್ಟೇ ಅಲ್ಲ, ಒಂದೇ ಪುಸ್ತಕವನ್ನು ಬೇರೆಬೇರೆ ಬಗೆಯ ಕಡತಗಳಾಗಿ (ಟೆಕ್ಸ್ಟ್, ಪಿಡಿಎಫ್, ಇಪಬ್ ಇತ್ಯಾದಿ) ನೀಡುವ ಅವಕಾಶವೂ ಇಲ್ಲಿದೆ. ಕಂಪ್ಯೂಟರಿನ ದೊಡ್ಡ ಪರದೆಗೆ, ಮೊಬೈಲಿನ ಸಣ್ಣ ಪರದೆಗೆಲ್ಲ ಪುಸ್ತಕದ ಗಾತ್ರ ತನ್ನಷ್ಟಕ್ಕೆ ತಾನೇ ಹೊಂದಿಕೊಳ್ಳುವಂತೆ ಮಾಡುವುದು, ಆ ಮೂಲಕ ಓದುವ ಅನುಭವ ಇನ್ನಷ್ಟು ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಕೂಡ ಸಾಧ್ಯ. ಭಾರತೀಯ ವಿಜ್ಞಾನಮಂದಿರದ ನೇತೃತ್ವದಲ್ಲಿ ರೂಪುಗೊಂಡಿರುವ 'ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ' ನಮ್ಮ ದೇಶದ ಅತಿದೊಡ್ಡ ಇ-ಗ್ರಂಥಾಲಯಗಳಲ್ಲೊಂದು. ಕಣಜ ಜ್ಞಾನಕೋಶದಲ್ಲೂ 'e-ಪುಸ್ತಕ' ಎಂಬ ಕನ್ನಡ ಪುಸ್ತಕಗಳ ಡಿಜಿಟಲ್ ಗ್ರಂಥಾಲಯ ಇದೆ. ಉಚಿತ ಸೇವೆ ಒದಗಿಸುವ ಇಂತಹ ಗ್ರಂಥಾಲಯಗಳ ಜೊತೆಗೆ ಹಲವು ವಾಣಿಜ್ಯ ಉದ್ದೇಶದ ಡಿಜಿಟಲ್ ಗ್ರಂಥಾಲಯಗಳೂ ಅಸ್ತಿತ್ವದಲ್ಲಿವೆ.

Digital Signature
ಡಿಜಿಟಲ್ ಸಿಗ್ನೇಚರ್
(ರೂಪಿಸಬೇಕಿದೆ)
ಮಾಹಿತಿಯ ದೃಢೀಕರಣಕ್ಕೆ (ಅಥೆಂಟಿಕೇಶನ್) ಬಳಕೆಯಾಗುವ ವಿಧಾನ; ಡಿಜಿಟಲ್ ರೂಪದಲ್ಲಿರುವ ಯಾವುದೇ ಕಡತವನ್ನು ಯಾರು ದೃಢೀಕರಿಸಿದ್ದಾರೆ ಎಂದು ತಿಳಿದುಕೊಳ್ಳಲು ಇದು ನೆರವಾಗುತ್ತದೆ.
ಪತ್ರಗಳೂ ಕಡತಗಳೂ ಭೌತಿಕ ರೂಪದಲ್ಲಿದ್ದಾಗ ಅವುಗಳ ಅಧಿಕೃತತೆಯನ್ನು ಪರಿಶೀಲಿಸುವುದು ಸುಲಭವಿತ್ತು. ಪತ್ರದ ಕೊನೆಯಲ್ಲಿ ಯಾರ ಸಹಿಯಿದೆ, ಜೊತೆಗಿರುವ ಮೊಹರಿನಲ್ಲಿ ಅವರ ಹುದ್ದೆಯ ಯಾವ ವಿವರಗಳಿವೆ ಎನ್ನುವುದನ್ನು ನೋಡಿದರೆ ಪತ್ರ ಅಧಿಕೃತವೋ ಅಲ್ಲವೋ ಎನ್ನುವುದನ್ನು ನಾವು ಅಂದಾಜಿಸಬಹುದಿತ್ತು. ಆದರೆ ಈಗ ಪತ್ರಗಳು - ದಾಖಲೆಗಳು ಭೌತಿಕ ರೂಪದಲ್ಲಿರುವುದೇ ಅಪರೂಪ. ಇಂತಹ ಕಡತಗಳು ಅಧಿಕೃತವೋ ಅಲ್ಲವೋ ಎಂದು ತಿಳಿಯುವುದು ಹೇಗೆ? ಇದನ್ನು ಖಚಿತಪಡಿಸುವ ಮಾರ್ಗಗಳಲ್ಲೊಂದು 'ಡಿಜಿಟಲ್ ಸಿಗ್ನೇಚರ್' ಬಳಕೆ. ಯಾವುದೇ ಕಡತದಲ್ಲಿ ಡಿಜಿಟಲ್ ಸಹಿ ಇದ್ದರೆ ಆ ಸಹಿ ಯಾರು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ, ಕಡತ ಅಸಲಿಯೋ ಅಲ್ಲವೋ ಎಂದು ಅಂದಾಜಿಸುವುದೂ ಸುಲಭವಾಗುತ್ತದೆ. ಡಿಜಿಟಲ್ ಸಹಿ ಎಂದಮಾತ್ರಕ್ಕೆ ಅದು ಸಹಿಯ ಡಿಜಿಟಲ್ ಚಿತ್ರವೋ ಸ್ಕ್ಯಾನ್ ಮಾಡಿದ ರೂಪವೋ ಅಲ್ಲ, ಅದು ಮಾಹಿತಿಯ ದೃಢೀಕರಣಕ್ಕೆ (ಅಥೆಂಟಿಕೇಶನ್) ಬಳಕೆಯಾಗುವ ವಿಧಾನಗಳಲ್ಲೊಂದು. ಡಿಜಿಟಲ್ ಸಿಗ್ನೇಚರ್‌ಗಳನ್ನು ವಿತರಿಸುವ ಅಧಿಕಾರವಿರುವ ಸಂಸ್ಥೆಯಿಂದ ನಮ್ಮ ಸಿಗ್ನೇಚರ್ ಅನ್ನು ಪಡೆದುಕೊಂಡು, ಸೂಕ್ತ ತಂತ್ರಾಂಶ ಬಳಸಿ ಅದನ್ನು ನಮ್ಮ ಕಡತಗಳೊಡನೆ ಜೋಡಿಸಿದರೆ ಆಯಿತು - ಅದು ಪೆನ್ನಿನಿಂದ ಕಾಗದದ ಮೇಲೆ ಸಹಿ ಹಾಕಿದಂತೆಯೇ. ಹಾಗೆ ಸಹಿಮಾಡಿದ ಕಡತವನ್ನು ಕಳಿಸಿದರೆ ಪ್ರಪಂಚದಲ್ಲಿ ಯಾರಿಗೇ ಆದರೂ ಆ ಕಡತವನ್ನು ದೃಢೀಕರಿಸಿರುವುದು ನಾವೇ ಎನ್ನುವುದು ತಿಳಿಯುತ್ತದೆ. ಮೂಲ ಕಡತವನ್ನು ಬೇರೆ ಯಾರೋ ಬದಲಾಯಿಸಿ ನಮ್ಮ ಹೆಸರಿನಲ್ಲಿ ಕಳಿಸುವ ಅಪಾಯವೂ ಇಲ್ಲದಾಗುತ್ತದೆ. ವೈಯಕ್ತಿಕ ಕಡತಗಳಲ್ಲಷ್ಟೇ ಅಲ್ಲ, ಸರಕಾರಿ ಕಡತಗಳನ್ನೂ ಬ್ಯಾಂಕ್ ಮುಂತಾದ ದೊಡ್ಡ ಸಂಸ್ಥೆಗಳು ನೀಡುವ ಪತ್ರಗಳನ್ನೂ ದೃಢೀಕರಿಸಲು ಡಿಜಿಟಲ್ ಸಿಗ್ನೇಚರ್‌ಗಳು ಬಳಕೆಯಾಗುತ್ತಿವೆ.

DTT
ಡಿಟಿಟಿ
(ರೂಪಿಸಬೇಕಿದೆ)
ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಶನ್; ಸೀಮಿತ ವ್ಯಾಪ್ತಿಯ ಪ್ರದೇಶದಲ್ಲಿ ಟೀವಿ ಕಾರ್ಯಕ್ರಮಗಳನ್ನು ನೇರವಾಗಿ - ಉಪಗ್ರಹಗಳ ಅಗತ್ಯವಿಲ್ಲದೆ - ಪ್ರಸಾರಮಾಡುವ ವ್ಯವಸ್ಥೆ
ನಮ್ಮಲ್ಲಿ ಅನೇಕರು ಟೀವಿ ನೋಡಲು ಡಿಟಿಎಚ್ (ಡೈರೆಕ್ಟ್ ಟು ಹೋಮ್) ವ್ಯವಸ್ಥೆ ಬಳಸುತ್ತೇವೆ. ಈ ವ್ಯವಸ್ಥೆಯಲ್ಲಿ ಟೀವಿ ಪ್ರಸಾರ ಕೇಂದ್ರದಿಂದ ಹೊರಟ ಸಂಕೇತಗಳು ಅಂತರಿಕ್ಷಕ್ಕೆ ಚಿಮ್ಮಿ, ಉಪಗ್ರಹಗಳನ್ನು ತಲುಪಿ, ಅಲ್ಲಿಂದ ಮನೆ ಮೇಲಿನ ಡಿಶ್‌ಗೆ ಮರಳಿ ನಮ್ಮ ಟೀವಿಯನ್ನು ಮುಟ್ಟುತ್ತವೆ. ಒಂದೆರಡು ದಶಕದ ಹಿಂದೆ ಈ ವ್ಯವಸ್ಥೆ ಇರಲಿಲ್ಲ. ಆಗ ದೂರದರ್ಶನ ಕೇಂದ್ರದಿಂದ ಹೊರಟ ಸಂಕೇತಗಳು ಅಲ್ಲಿನ ಪ್ರಸಾರ ಯಂತ್ರದ ಮೂಲಕ ಸುತ್ತಲ ಪ್ರದೇಶಗಳಿಗೆ ತಲುಪುತ್ತಿದ್ದವು. ಒಂದು ಆಂಟೆನಾ ಜೋಡಿಸಿಬಿಟ್ಟರೆ ಸಾಕು, ಕಾರ್ಯಕ್ರಮಗಳು ನಮ್ಮ ಟೀವಿಯಲ್ಲಿ ಮೂಡುತ್ತಿದ್ದವು - ಯಾವುದೇ ಸಬ್ಸ್‌ಕ್ರಿಪ್ಷನ್ ಇತ್ಯಾದಿಗಳ ಗೊಡವೆಯಿಲ್ಲದೆ! ಈ ವ್ಯವಸ್ಥೆಗೆ ಡಿಟಿಟಿ (ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಶನ್) ಎಂದು ಹೆಸರು. ನಮ್ಮ ದೇಶದಲ್ಲಿ ಈ ವ್ಯವಸ್ಥೆ ಬಳಸುತ್ತಿರುವ ಸಂಸ್ಥೆಗಳ ಪೈಕಿ ಪ್ರಸಾರ ಭಾರತಿ (ದೂರದರ್ಶನ) ಅತ್ಯಂತ ಪ್ರಮುಖ ಹೆಸರು. ಈ ವ್ಯವಸ್ಥೆಯ ಬಳಕೆ ಹೆಚ್ಚಿದರೆ ಪ್ರತಿ ಊರಿಗೂ ಹಲವಾರು ಪ್ರತ್ಯೇಕ ಎಫ್‌ಎಂ ಚಾನೆಲ್ಲುಗಳಿರುವಂತೆ ಬೇರೆಬೇರೆ ಟೀವಿ ಚಾನೆಲ್ಲುಗಳೂ ಇರುವಂತೆ ಮಾಡುವುದು, ಅವನ್ನು ಕೇಬಲ್ ಸಂಪರ್ಕವಿಲ್ಲದೆಯೇ ನೋಡುವುದು ಸಾಧ್ಯವಾಗಲಿದೆ.

DDoS
ಡಿಡಿಓಎಸ್
(ರೂಪಿಸಬೇಕಿದೆ)
ಕುತಂತ್ರಾಂಶಗಳ ಸಹಾಯದಿಂದ ಕಂಪ್ಯೂಟರ್ ಜಾಲಗಳ ಹಾಗೂ ಜಾಲತಾಣಗಳತ್ತ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ, ಆ ಮೂಲಕ ಅವುಗಳ ಕಾರ್ಯಾಚರಣೆಗೆ ಅಡ್ಡಿಪಡಿಸುವ ಬ್ಲ್ಯಾಕ್‌ಮೇಲ್ ತಂತ್ರ
ತಂತ್ರಜ್ಞಾನ ಸರ್ವವ್ಯಾಪಿಯಾಗಿ ಬೆಳೆದಂತೆ ಸಮಾಜಮುಖಿ ಕೆಲಸಗಳ ಜೊತೆಗೆ ಸಮಾಜವಿರೋಧಿ ಕೃತ್ಯಗಳಲ್ಲೂ ಅದು ಬಳಕೆಯಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ನಡೆಯುವ ದುಷ್ಕೃತ್ಯಗಳಿಗೆ 'ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್' ದಾಳಿಗಳು ಒಂದು ಉದಾಹರಣೆ. ಡಿಡಿಓಎಸ್ ಎನ್ನುವುದು ಈ ಹೆಸರಿನ ಹ್ರಸ್ವರೂಪ. ಕುತಂತ್ರಾಂಶಗಳ ಸಹಾಯದಿಂದ ಕಂಪ್ಯೂಟರ್ ಜಾಲಗಳ ಹಾಗೂ ಜಾಲತಾಣಗಳತ್ತ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರ ಇದು. ಇಂತಹ ದಾಳಿಗೆ ಗುರಿಯಾದ ವ್ಯವಸ್ಥೆ ಅಪಾರ ಒತ್ತಡಕ್ಕೆ ಗುರಿಯಾಗುವುದರಿಂದ ಅದರ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ದಾಳಿ ಹೆಚ್ಚುಕಾಲ ಮುಂದುವರೆದದ್ದೇ ದಾಳಿಗೀಡಾದ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ (ಕ್ರ್ಯಾಶ್ ಆಗುವ) ಸಾಧ್ಯತೆಯೂ ಇರುತ್ತದೆ. ಹೀಗೆ ಮಾಹಿತಿಯ ಪ್ರವಾಹವನ್ನು ಸೃಷ್ಟಿಸಲು ಜಗತ್ತಿನ ಬೇರೆಬೇರೆ ಕಡೆಗಳಲ್ಲಿರುವ ಕಂಪ್ಯೂಟರುಗಳು - ಕಂಪ್ಯೂಟರ್ ಜಾಲಗಳು ಬಳಕೆಯಾಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ತಮ್ಮ ಕಂಪ್ಯೂಟರುಗಳು ದುರ್ಬಳಕೆಯಾಗುತ್ತಿರುವ ಸಂಗತಿ ಅವುಗಳ ಮಾಲೀಕರಿಗೆ ಗೊತ್ತೇ ಇರುವುದಿಲ್ಲ! ಇಂತಹ ದಾಳಿಗಳನ್ನು ನಡೆಸುವುದರಿಂದ ಅದರ ಹಿಂದಿರುವ ಕುತಂತ್ರಿಗಳಿಗೆ ಆಗುವ ಲಾಭಗಳು ಹಲವು ಬಗೆಯವು. ದಾಳಿಗೆ ತುತ್ತಾದ ಜಾಲತಾಣ ನಿಷ್ಕ್ರಿಯವಾದರೆ ಅವರ ಮೊದಲ ಉದ್ದೇಶ ಪೂರ್ಣವಾದಂತೆ - ಯಾವುದೋ ಸಂಘಸಂಸ್ಥೆಯ ತಾಣವಾದರೆ ಅವರಿಗೆ ಆಗುವ ಅವಮಾನ ಇಲ್ಲವೇ ವಾಣಿಜ್ಯ ಉದ್ದೇಶದ ತಾಣವಾದರೆ ಅವರಿಗೆ ಆಗುವ ನಷ್ಟ ಕುತಂತ್ರಿಗಳಿಗೆ ಸಮಾಧಾನ ನೀಡುತ್ತದೆ. ತಮ್ಮ ವಿರುದ್ಧ ಕೆಲಸಮಾಡುತ್ತಿರುವವರಿಗೆ ತೊಂದರೆ ಕೊಡಲು ಈ ತಂತ್ರ ಬಳಸುವ ದುಷ್ಕರ್ಮಿಗಳೂ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ದಾಳಿ ನಿಲ್ಲಿಸಿ ಜಾಲತಾಣ ಮತ್ತೆ ಕೆಲಸಮಾಡುವಂತೆ ಮಾಡಲು ಅವರು ಹಣಕ್ಕಾಗಿ ಬೇಡಿಕೆಯಿಡುವುದೂ ಉಂಟು.

DPI
ಡಿಪಿಐ
(ರೂಪಿಸಬೇಕಿದೆ)
ಡಾಟ್ಸ್ ಪರ್ ಇಂಚ್; ಮುದ್ರಿತ ಪ್ರತಿಯ ಒಂದು ಇಂಚಿನಲ್ಲಿ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕ
ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಡಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಡಾಟ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ. ಇಂಕ್‌ಜೆಟ್ ಪ್ರಿಂಟರಿನಲ್ಲಿ ಮುದ್ರಿತವಾದ ಚಿತ್ರವನ್ನು ನೋಡಿದರೆ ಅದು ಬೇರೆಬೇರೆ ಬಣ್ಣದ ಅಸಂಖ್ಯ ಚುಕ್ಕೆಗಳ ಜೋಡಣೆಯಿಂದ ರೂಪುಗೊಂಡಿರುವುದನ್ನು ಗಮನಿಸಬಹುದು. ಒಂದು ಇಂಚು ಜಾಗದಲ್ಲಿ ಅಂತಹ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕವೇ ಈ ಡಿಪಿಐ. ಬೇರೆಬೇರೆ ಬಗೆಯ ಪ್ರಿಂಟರುಗಳಲ್ಲಿ ಬೇರೆಬೇರೆ ಡಿಪಿಐ ಸಾಮರ್ಥ್ಯ ಇರುತ್ತದೆ. ಡಿಪಿಐ ಜಾಸ್ತಿಯಿದ್ದಷ್ಟೂ ಮುದ್ರಣ ಉತ್ತಮವಾಗಿರುತ್ತದೆ ಎನ್ನುವುದು ಒಂದು ಹಂತದವರೆಗೆ ಮಾತ್ರ ಸರಿ. ಏಕೆಂದರೆ ಡಿಪಿಐ ಲೆಕ್ಕದ ಜೊತೆಗೆ ಮೂಲ ಚಿತ್ರದ ಸ್ಪಷ್ಟತೆ, ಮುದ್ರಿಸುತ್ತಿರುವ ಗಾತ್ರ ಮುಂತಾದ ಹಲವು ಅಂಶಗಳು ಚಿತ್ರದ ಒಟ್ಟು ಗುಣಮಟ್ಟವನ್ನು ತೀರ್ಮಾನಿಸುತ್ತವೆ. ಮುದ್ರಣದ ವಿಷಯದಲ್ಲಿ ಡಾಟ್ಸ್ ಇದ್ದಂತೆ ಕಂಪ್ಯೂಟರಿನ ಚಿತ್ರಗಳಲ್ಲಿ 'ಪಿಕ್ಸೆಲ್'ಗಳಿರುತ್ತವೆ. ಫೋಟೋಶಾಪ್‌ನಂತಹ ತಂತ್ರಾಂಶಗಳಲ್ಲಿ ಚಿತ್ರವನ್ನು ರೂಪಿಸುವಾಗ ಅಲ್ಲಿರುವುದು 'ಪಿಕ್ಸೆಲ್ಸ್ ಪರ್ ಇಂಚ್' (ಪಿಪಿಐ) - ಚಿತ್ರದ ಪ್ರತಿ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿರುತ್ತವೆ ಎಂಬ ಲೆಕ್ಕ. ೧೦೦x೧೦೦ ಪಿಕ್ಸೆಲ್‌ನ ಚಿತ್ರಕ್ಕೆ ೧೦ ಪಿಪಿಐ ನಿಗದಿಪಡಿಸಿದರೆ ಅದು ೧೦ ಇಂಚು ಉದ್ದ-ಅಗಲದಲ್ಲಿ ಮುದ್ರಣವಾಗುತ್ತದೆ. ಅದೇ ೧೦೦ ಪಿಪಿಐ ಇಟ್ಟರೆ ಚಿತ್ರದ ಗಾತ್ರ ಒಂದೇ ಇಂಚು ಉದ್ದ-ಅಗಲಕ್ಕೆ ಇಳಿಯುತ್ತದೆ. ಇದನ್ನು ಪಿಕ್ಸೆಲ್ ಸಾಂದ್ರತೆ (ಪಿಕ್ಸೆಲ್ ಡೆನ್ಸಿಟಿ) ಎಂದೂ ಗುರುತಿಸಲಾಗುತ್ತದೆ. ಇದನ್ನೂ ಡಿಪಿಐ ಎಂದೇ ಕರೆಯುವುದು ಸಾಮಾನ್ಯ ಅಭ್ಯಾಸ ಅಷ್ಟೆ. ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆಯ ಗುಣಮಟ್ಟವನ್ನು ಸೂಚಿಸಲಿಕ್ಕೂ 'ಪಿಪಿಐ' ಬಳಕೆಯಾಗುತ್ತದೆ. ಹೆಚ್ಚು ಪಿಪಿಐ ಇರುವ ಪರದೆಯಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡುತ್ತವೆ.

Device Driver
ಡಿವೈಸ್ ಡ್ರೈವರ್
(ರೂಪಿಸಬೇಕಿದೆ)
ಕಂಪ್ಯೂಟರಿಗೆ ಜೋಡಿಸಿದ ಯಂತ್ರಾಂಶಗಳು ಸಮರ್ಪಕವಾಗಿ ಕೆಲಸಮಾಡಲು ಅಗತ್ಯವಾದ ತಂತ್ರಾಂಶ
ಕೆಲ ವರ್ಷಗಳ ಹಿಂದೆ ಕಂಪ್ಯೂಟರಿಗೆ ಸಂಬಂಧಪಟ್ಟ ಯಾವುದೇ ಸಾಧನ ಕೊಂಡುಕೊಂಡರೂ ಅದರ ಜೊತೆಗೊಂದು ಸಿ.ಡಿ. ಇರುತ್ತಿತ್ತು. ಮೊದಲು ಆ ಸಿ.ಡಿ.ಯನ್ನು ಹಾಕಿ ಅದರಲ್ಲಿನ ತಂತ್ರಾಂಶಗಳನ್ನೆಲ್ಲ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿದ ನಂತರವಷ್ಟೇ ಹೊಸ ಸಾಧನ ಕೆಲಸಮಾಡಲು ಶುರುಮಾಡುತ್ತಿತ್ತು. ಆ ಸಿ.ಡಿ.ಯಲ್ಲಿರುತ್ತಿತ್ತಲ್ಲ, ಆ ತಂತ್ರಾಂಶದ ಹೆಸರೇ ಡಿವೈಸ್ ಡ್ರೈವರ್. ಬಸ್ಸು ಲಾರಿ ಮುಂದಕ್ಕೆ ಚಲಿಸಬೇಕಾದರೆ ಚಾಲಕನ ಅಗತ್ಯವಿರುವಂತೆಯೇ ಕಂಪ್ಯೂಟರಿಗೆ ಹೊಸ ಸಾಧನಗಳನ್ನು (ಡಿವೈಸ್) ಸಂಪರ್ಕಿಸಿದಾಗ ಅವು ಕೆಲಸಮಾಡಲು ಡಿವೈಸ್ ಡ್ರೈವರುಗಳು ಬೇಕಾಗುತ್ತವೆ. ಸಂಪರ್ಕಿಸುತ್ತಿರುವ ಹೊಸ ಸಾಧನವನ್ನು ಗುರುತಿಸಿ ಅದು ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯೊಡನೆ (ಓಎಸ್) ಸರಿಯಾಗಿ ಹೊಂದಿಕೊಂಡು ಕೆಲಸಮಾಡುವಂತೆ ನಿರ್ದೇಶಿಸುವುದು ಡಿವೈಸ್ ಡ್ರೈವರ್‌ನ ಕೆಲಸ. ನಾವು ಸಾಮಾನ್ಯವಾಗಿ ಬಳಸುವ ಹಲವು ಸಾಧನಗಳೊಡನೆ ಯಾವುದೇ ತಂತ್ರಾಂಶದ ಸಿ.ಡಿ. ಬರುವುದಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಹಾಗೆಂದಮಾತ್ರಕ್ಕೆ ಈಗ ಡಿವೈಸ್ ಡ್ರೈವರುಗಳ ಅಗತ್ಯವಿಲ್ಲ ಎಂದೇನೂ ಇಲ್ಲ: ವ್ಯಾಪಕ ಬಳಕೆಯಲ್ಲಿರುವ ಸಾಧನಗಳಿಗೆ ಬೇಕಾದ ಡ್ರೈವರುಗಳು ಈಗ ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯ ಅಂಗವೇ ಆಗಿಬಿಟ್ಟಿವೆ. ಇನ್ನಷ್ಟು ಡಿವೈಸ್ ಡ್ರೈವರುಗಳನ್ನು ಎಲ್ಲಿಂದ ಹೇಗೆ ಪಡೆದುಕೊಳ್ಳಬೇಕು ಎನ್ನುವ ಮಾಹಿತಿಯೂ ಇಂದಿನ ಕಾರ್ಯಾಚರಣ ವ್ಯವಸ್ಥೆಗಳಿಗೆ ಗೊತ್ತು. ಇವೆರಡೂ ಮಾರ್ಗಗಳಲ್ಲಿ ಪರಿಹಾರ ಸಿಕ್ಕದೆ ಹೋದಾಗ ಮಾತ್ರವೇ ನಾವು ಡಿವೈಸ್ ಡ್ರೈವರುಗಳನ್ನು ಪ್ರತ್ಯೇಕವಾಗಿ ಇನ್‌ಸ್ಟಾಲ್ ಮಾಡಬೇಕಾಗುತ್ತದೆ.

Disk Image
ಡಿಸ್ಕ್ ಇಮೇಜ್
(ರೂಪಿಸಬೇಕಿದೆ)
ಇನ್‌ಸ್ಟಾಲ್ ಆಗಿರುವ ತಂತ್ರಾಂಶಗಳೂ ಸೇರಿದಂತೆ ಹಾರ್ಡ್‌ಡಿಸ್ಕ್‌ನಲ್ಲಿರುವ ಅಷ್ಟೂ ಮಾಹಿತಿಯ ಯಥಾವತ್ ನಕಲು ಪ್ರತಿ; ಕಂಪ್ಯೂಟರಿನಲ್ಲಿ ಬೇಕಾದ ತಂತ್ರಾಂಶಗಳನ್ನೆಲ್ಲ ಅಳವಡಿಸಿಕೊಂಡ ನಂತರ ಡಿಸ್ಕ್ ಇಮೇಜ್ ತೆಗೆದಿಟ್ಟುಕೊಂಡರೆ ಅದನ್ನು ನೇರವಾಗಿ ಪ್ರತಿಮಾಡುವ ಮೂಲಕ ಇತರ ಕಂಪ್ಯೂಟರುಗಳನ್ನು ಥಟ್ಟನೆ ಸಜ್ಜುಗೊಳಿಸಬಹುದು.
ಹೊಸ ಕಂಪ್ಯೂಟರ್ ಕೊಂಡಾಗ ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಆಯ್ಕೆಯ ಕಾರ್ಯಾಚರಣ ವ್ಯವಸ್ಥೆ ಹಾಗೂ ಇತರ ತಂತ್ರಾಂಶಗಳನ್ನು ಅದರಲ್ಲಿ ಅಳವಡಿಸುವುದು. ಒಂದಾದನಂತರ ಒಂದರಂತೆ ಈ ತಂತ್ರಾಂಶಗಳನ್ನೆಲ್ಲ ಇನ್‌ಸ್ಟಾಲ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಕೆಲ ವರ್ಷಗಳಿಗೊಮ್ಮೆ ಕೊಳ್ಳುವ ಹೊಸ ಕಂಪ್ಯೂಟರನ್ನು ಸಜ್ಜುಗೊಳಿಸಲು ಇಷ್ಟೆಲ್ಲ ಶ್ರಮವಾದರೆ ಪರವಾಗಿಲ್ಲ ಎನ್ನಬಹುದು. ಆದರೆ ತನ್ನ ಉದ್ಯೋಗಿಗಳಿಗೆಂದು ಪದೇಪದೇ ಹೊಸ ಕಂಪ್ಯೂಟರುಗಳನ್ನು ಕೊಳ್ಳುವ ಸಂಸ್ಥೆಗಳಲ್ಲಿ ಈ ಕೆಲಸ ಭಾರೀ ಶ್ರಮದಾಯಕವಾಗಬಹುದಲ್ಲ? ಈ ಶ್ರಮ ತಪ್ಪಿಸಲು ಬಳಕೆಯಾಗುವ ತಂತ್ರಗಳಲ್ಲಿ 'ಡಿಸ್ಕ್ ಇಮೇಜ್' ಕೂಡ ಒಂದು. ಇನ್‌ಸ್ಟಾಲ್ ಆಗಿರುವ ತಂತ್ರಾಂಶಗಳೂ ಸೇರಿದಂತೆ ಹಾರ್ಡ್‌ಡಿಸ್ಕ್‌ನಲ್ಲಿರುವ ಅಷ್ಟೂ ಮಾಹಿತಿಯ ಯಥಾವತ್ ನಕಲು ಪ್ರತಿಯನ್ನು ಡಿಸ್ಕ್ ಇಮೇಜ್ ಎಂದು ಕರೆಯುತ್ತಾರೆ. ಒಂದು ಕಂಪ್ಯೂಟರಿನಲ್ಲಿ ನಮಗೆ ಬೇಕಾದ ತಂತ್ರಾಂಶಗಳನ್ನೆಲ್ಲ ಅಳವಡಿಸಿಕೊಂಡ ನಂತರ ಅದರ ಡಿಸ್ಕ್ ಇಮೇಜ್ ತೆಗೆದಿಟ್ಟುಕೊಂಡರೆ ಅದನ್ನು ನೇರವಾಗಿ ಪ್ರತಿಮಾಡುವ ಮೂಲಕ ಇತರ ಕಂಪ್ಯೂಟರುಗಳನ್ನು ಥಟ್ಟನೆ ಸಜ್ಜುಗೊಳಿಸಬಹುದು. ಅಷ್ಟೇ ಅಲ್ಲ, ಬಳಕೆಯಲ್ಲಿರುವ ಕಂಪ್ಯೂಟರುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೂ ಹಿಂದಿನ ಡಿಸ್ಕ್ ಇಮೇಜ್ ಬಳಸಿ ಅದು ಮೊದಲು ಇದ್ದಂತೆ ಮಾಡುವುದು ಸಾಧ್ಯ. ಈ ಪ್ರಕ್ರಿಯೆಯನ್ನು 'ರಿಇಮೇಜಿಂಗ್' ಎಂದು ಕರೆಯುತ್ತಾರೆ. ಅಂದಹಾಗೆ ಡಿಸ್ಕ್ ಇಮೇಜ್‌ಗಳು ಬಳಕೆಯಾಗುವುದು ಹಾರ್ಡ್ ಡಿಸ್ಕ್‌ಗಳಲ್ಲಿ ಮಾತ್ರವೇ ಅಲ್ಲ. ದೊಡ್ಡ ಸಂಖ್ಯೆಯಲ್ಲಿ ಸಿ.ಡಿ.-ಡಿವಿಡಿಗಳ ಪ್ರತಿಗಳನ್ನು ಸಿದ್ಧಪಡಿಸುವಾಗಲೂ ಅವುಗಳ ಡಿಸ್ಕ್ ಇಮೇಜ್ ಅನ್ನು ಬಳಸಲಾಗುತ್ತದೆ. ಡಿಸ್ಕ್ ಇಮೇಜ್ ಮಾಡಿಟ್ಟುಕೊಳ್ಳಲು, ಅದನ್ನು ಮತ್ತೆ ಬಳಸಲು ವಿಶೇಷ ತಂತ್ರಾಂಶಗಳ ನೆರವು ಬೇಕಾಗುತ್ತದೆ.

Disk Drive
ಡಿಸ್ಕ್ ಡ್ರೈವ್
(ರೂಪಿಸಬೇಕಿದೆ)
ಡಿಸ್ಕ್‌ಗಳಲ್ಲಿ ಮಾಹಿತಿಯನ್ನು ಬರೆದಿಡುವ - ಅಗತ್ಯಬಿದ್ದಾಗ ಮತ್ತೆ ಓದುವ - ಬೇಡವಾದಾಗ ಅಳಿಸುವ ಸೌಕರ್ಯ ಒದಗಿಸುವ ವ್ಯವಸ್ಥೆ
ವೃತ್ತಾಕಾರದ ತಟ್ಟೆಯಂತಹ ಸಾಧನಗಳಲ್ಲಿ ಮಾಹಿತಿಯನ್ನು ಶೇಖರಿಸಿಡುವುದು ಕಂಪ್ಯೂಟರ್ ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯಾಸ. ಹಾರ್ಡ್ ಡಿಸ್ಕ್, ಕಾಂಪ್ಯಾಕ್ಟ್ ಡಿಸ್ಕ್ (ಸಿ.ಡಿ.), ಫ್ಲಾಪಿ ಡಿಸ್ಕ್ ಮುಂತಾದ ಸಾಧನಗಳ ಹೆಸರಿನಲ್ಲಿರುವ 'ಡಿಸ್ಕ್' ಇದೇ ಅಂಶವನ್ನು ಸೂಚಿಸುತ್ತದೆ. ಹಿಂದೆ ಬಳಕೆಯಲ್ಲಿದ್ದ ಫ್ಲಾಪಿಗಳಲ್ಲಿ, ಇಂದಿನ ಸಿ.ಡಿ.ಗಳಲ್ಲಿ ಇಂತಹ ಒಂದೇ ಒಂದು ಡಿಸ್ಕ್ ಬಳಕೆಯಾದರೆ ಹಾರ್ಡ್‌ಡಿಸ್ಕ್‌ನೊಳಗೆ ಅನೇಕ ಸಂಖ್ಯೆಯ ಡಿಸ್ಕ್‌ಗಳಿರುತ್ತವೆ. ಇಂತಹ ಡಿಸ್ಕ್‌ಗಳಲ್ಲಿ ಮಾಹಿತಿ ಶೇಖರವಾಗುತ್ತದೆ ಎನ್ನುವುದೇನೋ ಸರಿ. ಆದರೆ ಆ ಮಾಹಿತಿಯನ್ನು ಅಲ್ಲಿ ಬರೆದಿಡುವ - ಅಗತ್ಯಬಿದ್ದಾಗ ಮತ್ತೆ ಓದುವ - ಬೇಡವಾದಾಗ ಅಳಿಸುವ ಸೌಕರ್ಯ ಬೇಕಲ್ಲ, ಆ ಕೆಲಸ ಮಾಡುವ ವ್ಯವಸ್ಥೆಯೇ ಡಿಸ್ಕ್ ಡ್ರೈವ್. ಫ್ಲಾಪಿ ಡಿಸ್ಕ್‌ಗಳನ್ನು ಬಳಸಲು ನೆರವಾಗುತ್ತಿದ್ದ ಇಂತಹ ವ್ಯವಸ್ಥೆಗೆ ಫ್ಲಾಪಿ ಡಿಸ್ಕ್ ಡ್ರೈವ್ ಎಂಬ ಹೆಸರಿತ್ತು. ಇದೇ ರೀತಿ 'ಆಪ್ಟಿಕಲ್ ಡ್ರೈವ್'ಗಳು ಸಿ.ಡಿ. - ಡಿವಿಡಿಗಳನ್ನು ಉಪಯೋಗಿಸಲು ಸಹಾಯಮಾಡುತ್ತವೆ. ಹಾರ್ಡ್ ಡಿಸ್ಕ್‌ನಲ್ಲಿ ಬಳಕೆಯಾಗುವ ಈ ವ್ಯವಸ್ಥೆಗೆ ಹಾರ್ಡ್ ಡಿಸ್ಕ್ ಡ್ರೈವ್ ಎಂದು ಹೆಸರು. ಅಲ್ಲಿರುವ ಅಯಸ್ಕಾಂತೀಯ ಲೇಪನವಿರುವ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಆ ತಟ್ಟೆಗಳ ಮೇಲೆ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆ - ಇವೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ).


logo