logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Text to Speech
ಟೆಕ್ಸ್ಟ್ ಟು ಸ್ಪೀಚ್
(ರೂಪಿಸಬೇಕಿದೆ)
ಪಠ್ಯವನ್ನು ಧ್ವನಿಗೆ ಪರಿವರ್ತಿಸುವ ತಂತ್ರಜ್ಞಾನ. ಡಿಜಿಟಲೀಕರಿಸಿದ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಜ್ಞಾನದ ವೈಶಿಷ್ಟ್ಯ.
ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ನಮಗೆ ಮುಟ್ಟಿಸುವ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳತ್ತ ಒಮ್ಮೆ ನೋಡಿದರೆ ಈ ಪ್ರಪಂಚದಲ್ಲಿ ಅದೆಷ್ಟು ಪ್ರಮಾಣದ ಪಠ್ಯವನ್ನು ಡಿಜಿಟಲೀಕರಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಅಂತರಜಾಲದಲ್ಲಂತೂ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯಲ್ಲಿ ಬಹುದೊಡ್ಡ ಭಾಗ ಪಠ್ಯರೂಪದಲ್ಲೇ ಇರುತ್ತದೆ. ಇಷ್ಟೆಲ್ಲ ಪಠ್ಯ ನಮ್ಮ ಕಣ್ಣಮುಂದೆ ಕಾಣುವ ಬದಲು ಧ್ವನಿರೂಪದಲ್ಲಿ ನಮ್ಮ ಕಿವಿಯನ್ನು ತಲುಪುವಂತಿದ್ದರೆ ಅದನ್ನೆಲ್ಲ ಅರ್ಥಮಾಡಿಕೊಳ್ಳುವುದು ಇನ್ನಷ್ಟು ಸುಲಭವಾಗುತ್ತಿತ್ತು ಅಲ್ಲವೆ? ಈ ಆಲೋಚನೆಯ ಪರಿಣಾಮವೇ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಜ್ಞಾನ. ಡಿಜಿಟಲೀಕರಿಸಿದ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಜ್ಞಾನದ ವೈಶಿಷ್ಟ್ಯ. ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯ ಮೇಲೆ ಪುಟಗಟ್ಟಲೆ ಪಠ್ಯವನ್ನು ಓದಲು ಬೇಜಾರು ಎನ್ನುವವರಿಂದ ಹಿಡಿದು ದೃಷ್ಟಿ ಸವಾಲಿನ ದೆಸೆಯಿಂದ ಓದಲು ಸಾಧ್ಯವಿಲ್ಲದವರ ತನಕ ಈ ತಂತ್ರಜ್ಞಾನ ಎಲ್ಲರಿಗೂ ನೆರವಾಗಬಲ್ಲದು. ಪಠ್ಯರೂಪದ ಕಡತಗಳನ್ನು ಓದಲು ನಾವು ಬಳಸುವ 'ಅಡೋಬಿ ರೀಡರ್'ನಂತಹ ಹಲವು ತಂತ್ರಾಂಶಗಳಲ್ಲಿ ಟೆಕ್ಸ್ಟ್ ಟು ಸ್ಪೀಚ್ ಸೌಲಭ್ಯ ಇದೆ (ಕೆಲವು ಭಾಷೆಗಳಿಗೆ ಮಾತ್ರ). ಅಷ್ಟೇ ಅಲ್ಲ, ಪಠ್ಯವನ್ನು ಧ್ವನಿಗೆ ಪರಿವರ್ತಿಸುವ ಪ್ರತ್ಯೇಕ ತಂತ್ರಾಂಶಗಳು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿವೆ.

Tethering
ಟೆದರಿಂಗ್
(ರೂಪಿಸಬೇಕಿದೆ)
ಮೊಬೈಲ್ ಫೋನಿನ ಅಂತರಜಾಲ ಸಂಪರ್ಕವನ್ನು ಇನ್ನಿತರ ಸಾಧನಗಳೊಡನೆ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
ಮನೆಯ ಅಥವಾ ಕಚೇರಿಯಲ್ಲಿ ಮೂಲತಃ ಕಂಪ್ಯೂಟರ್ ಬಳಕೆಗೆಂದು ಪಡೆದುಕೊಂಡ ವೈ-ಫೈ ಸಂಪರ್ಕವನ್ನು ಮೊಬೈಲಿನಲ್ಲೂ ಬಳಸುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿದೆ. ಆದರೆ ಈಗ, ಮೊಬೈಲ್ ಅಂತರಜಾಲದ ವೇಗ ಹೆಚ್ಚಿ ಬೆಲೆಯಲ್ಲಿ ಸಾಕಷ್ಟು ಇಳಿಕೆ ಕಂಡ ನಂತರ ಮೊಬೈಲಿನ ಅಂತರಜಾಲ ಸಂಪರ್ಕವನ್ನು ಕಂಪ್ಯೂಟರ್ ಜೊತೆಗೆ ಹಂಚಿಕೊಳ್ಳಬೇಕಾದ ಸಂದರ್ಭಗಳೂ ಬರುತ್ತಿವೆ. ಇಂತಹ ಸಂದರ್ಭಗಳಲ್ಲಿ ನಮಗೆ ನೆರವಾಗುವ ಸೌಲಭ್ಯವೇ ಟೆದರಿಂಗ್. ಫೋನಿನ ಅಂತರಜಾಲ ಸಂಪರ್ಕವನ್ನು ಲ್ಯಾಪ್‌ಟಾಪ್ ಜೊತೆಗೋ ಡೆಸ್ಕ್‌ಟಾಪ್ ಜೊತೆಗೋ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ ಇದು. ಇಲ್ಲಿ ನಮ್ಮ ಮೊಬೈಲು ಕಂಪ್ಯೂಟರಿನ ಪಾಲಿಗೆ ಮೋಡೆಮ್‌ನಂತೆ ಕೆಲಸಮಾಡುತ್ತದೆ. ಟೆದರಿಂಗ್ ಸೌಲಭ್ಯವಿರುವ ಮೊಬೈಲುಗಳನ್ನು ಯುಎಸ್‌ಬಿ ಕೇಬಲ್ ಅಥವಾ ಬ್ಲೂಟೂತ್ ಮೂಲಕ ಕಂಪ್ಯೂಟರಿಗೆ ಜೋಡಿಸಿ ಅದಕ್ಕೂ ಅಂತರಜಾಲ ಸಂಪರ್ಕ ನೀಡುವುದು ಟೆದರಿಂಗ್‌ನ ವೈಶಿಷ್ಟ್ಯ. ಅಂತರಜಾಲ ಸಂಪರ್ಕ ಬೇಕಿರುವಷ್ಟು ಹೊತ್ತು ಮೊಬೈಲನ್ನು ಹೀಗೆ ಕಂಪ್ಯೂಟರಿಗೆ ಕಟ್ಟಿಹಾಕಿರುತ್ತೇವಲ್ಲ, ಇದಕ್ಕೆ 'ಟೆದರಿಂಗ್' ಎಂಬ ಹೆಸರು ಬರಲು ಕಾರಣವೇ ಅದು - 'ಟೆದರ್' ಎಂದರೆ 'ಮೇಯುವ ಪ್ರಾಣಿಗೆ ಕಟ್ಟುವ ಹಗ್ಗ' ಎಂದರ್ಥ! ಮೊಬೈಲ್ ಫೋನನ್ನು ವೈ-ಫೈ ಹಾಟ್‌ಸ್ಪಾಟ್‌ನಂತೆ ಉಪಯೋಗಿಸುವುದು ಸಾಧ್ಯವಾದ ನಂತರ ಟೆದರಿಂಗ್ ಬಳಕೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. 'ಹಾಟ್‌ಸ್ಪಾಟ್' ಆಯ್ಕೆಯನ್ನು (ಆ ಸೌಲಭ್ಯ ಇರುವ ಫೋನುಗಳಲ್ಲಿ) ಬಳಸುವ ಮೂಲಕ ಫೋನಿನ ಅಂತರಜಾಲ ಸಂಪರ್ಕವನ್ನು ವೈ-ಫೈ ಸೌಲಭ್ಯವಿರುವ ಕಂಪ್ಯೂಟರು, ಫೋನು, ಟ್ಯಾಬ್ಲೆಟ್ ಇತ್ಯಾದಿಗಳ ಜೊತೆಗೆಲ್ಲ ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ. ಮನೆಯ ವೈ-ಫೈ ಸಂಪರ್ಕದಲ್ಲಿ ಮಾಡಿದಂತೆ ಇದಕ್ಕೂ ನಮ್ಮ ಇಚ್ಛೆಯ ಪಾಸ್‌ವರ್ಡ್ ನಿಗದಿಪಡಿಸಿಕೊಳ್ಳುವುದು ಸಾಧ್ಯ.

Testing
ಟೆಸ್ಟಿಂಗ್
(ರೂಪಿಸಬೇಕಿದೆ)
ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಪೂರ್ಣವಾಗಿ ಪರೀಕ್ಷಿಸುವ ಪ್ರಕ್ರಿಯೆ
ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲೆಲ್ಲ ತಂತ್ರಾಂಶಗಳದೇ ಭರಾಟೆ. ಹಲವಾರು ಉದ್ದೇಶಗಳಿಗೆ ಹೊಸಹೊಸ ತಂತ್ರಾಂಶಗಳು ರೂಪುಗೊಳ್ಳುತ್ತಲೇ ಇರುತ್ತವೆ, ಬಳಕೆದಾರರನ್ನು ತಲುಪುತ್ತಲೇ ಇರುತ್ತವೆ. ತಂತ್ರಾಂಶಗಳು ರೂಪುಗೊಳ್ಳುವಾಗ ಅದರಲ್ಲಿ ಕುಂದುಕೊರತೆಗಳು ಉಳಿದುಕೊಳ್ಳುವುದು, ಕೆಲ ಸನ್ನಿವೇಶಗಳಲ್ಲಿ ಅದರ ವರ್ತನೆ ನಿರೀಕ್ಷೆಯಂತೆ ಇಲ್ಲದಿರುವುದು ಅಪರೂಪವೇನಲ್ಲ. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಬೇಕಾದ ಕ್ರಮಗಳನ್ನೂ ತಂತ್ರಾಂಶ ನಿರ್ಮಾತೃಗಳು ಕೈಗೊಳ್ಳುತ್ತಾರೆ. ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಪೂರ್ಣವಾಗಿ ಪರೀಕ್ಷಿಸುವ 'ಟೆಸ್ಟಿಂಗ್' ಪ್ರಕ್ರಿಯೆ ಇಂತಹ ಕ್ರಮಗಳಲ್ಲೊಂದು. ತಂತ್ರಾಂಶದ ಕಾರ್ಯಸಾಮರ್ಥ್ಯವನ್ನು ಪರೀಕ್ಷಿಸುವುದು, ಕೊರತೆಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಈ ಪ್ರಕ್ರಿಯೆಯ ಉದ್ದೇಶ. ಹಿಂದಿನ ಕಾಲದಲ್ಲಿ ಬಹುತೇಕ ತಂತ್ರಾಂಶಗಳ ಕಾರ್ಯಾಚರಣೆಗೆ ಅಂತರಜಾಲ ಸಂಪರ್ಕದ ಅಗತ್ಯ ಇರಲಿಲ್ಲ. ಆದರೆ ಈಗ ಹಾಗಲ್ಲ, ಹೆಚ್ಚೂಕಡಿಮೆ ಎಲ್ಲ ತಂತ್ರಾಂಶಗಳೂ ಒಂದಲ್ಲ ಒಂದು ರೀತಿಯಲ್ಲಿ ಅಂತರಜಾಲದ (ಅಥವಾ ಇನ್ನಾವುದೋ ಒಂದು ನೆಟ್‌ವರ್ಕಿನ) ಸಂಪರ್ಕಕ್ಕೆ ಬರುತ್ತವೆ. ಈ ಪರಿಸ್ಥಿತಿಯಲ್ಲಿ ಅವುಗಳ ಸುರಕ್ಷತೆಯ ಬಗೆಗೂ ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗುತ್ತದೆ. ತಂತ್ರಾಂಶದಲ್ಲಿ ಬಳಸಲಾಗುವ ಮಾಹಿತಿಯ ಕಳವು - ದುರ್ಬಳಕೆ ಇರಲಿ, ಕೆಟ್ಟ ಉದ್ದೇಶಗಳಿಗೆ ತಂತ್ರಾಂಶದ ಬಳಕೆಯೇ ಇರಲಿ, ಅದನ್ನೆಲ್ಲ ತಡೆಯಲು ತಂತ್ರಾಂಶದಲ್ಲಿರುವ ಸುರಕ್ಷತಾ ಕ್ರಮಗಳ ಪರಿಶೀಲನೆ ನೆರವಾಗುತ್ತದೆ. ಇದನ್ನು ಎಲ್ಲ ಸಂಭಾವ್ಯ ಆಯಾಮಗಳಿಂದಲೂ ಪರಿಶೀಲಿಸುವುದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಹಾಗಾಗಿ ತಂತ್ರಾಂಶ ನಿರ್ಮಾತೃಗಳು ಈ ಕೆಲಸದಲ್ಲಿ ತಮಗೆ ನೆರವಾಗುವಂತೆ ಪರಿಣತ ಬಳಕೆದಾರರಿಗೂ ಕರೆನೀಡುತ್ತಾರೆ; ಅವರಿಂದ ದೊರೆತ ಮಾಹಿತಿ ತಂತ್ರಾಂಶದ ಸುರಕ್ಷತಾ ಕೊರತೆಗಳನ್ನು ನೀಗಿಸಲು ನೆರವಾದರೆ ಅವರಿಗೆ ಬಹುಮಾನವನ್ನೂ ಕೊಡುತ್ತಾರೆ. 'ಬಗ್ ಬೌಂಟಿ' ಎಂದು ಕರೆಸಿಕೊಳ್ಳುವ ಇಂತಹ ಬಹುಮಾನಗಳ ಮೊತ್ತ ಲಕ್ಷಾಂತರ ರೂಪಾಯಿಗಳಷ್ಟಿರುವುದೂ ಉಂಟು.

Timeout
ಟೈಮ್‌ಔಟ್
(ರೂಪಿಸಬೇಕಿದೆ)
ಕಂಪ್ಯೂಟರ್ ವ್ಯವಸ್ಥೆಗಳನ್ನು ಬಳಸುವಾಗ ಯಾವುದೇ ಪ್ರತಿಕ್ರಿಯೆಗಾಗಿ ಪೂರ್ವನಿರ್ಧಾರಿತ ಸಮಯದವರೆಗೆ ಮಾತ್ರ ಕಾಯುವ ಪರಿಕಲ್ಪನೆ. ಈ ಅವಧಿಯಲ್ಲಿ ಅಪೇಕ್ಷಿತ ಪ್ರತಿಕ್ರಿಯೆ ಬಾರದಿದ್ದಲ್ಲಿ ಅಂತಹ ವ್ಯವಹಾರವನ್ನು ಕೊನೆಗೊಳಿಸಲಾಗುತ್ತದೆ.
ಕಂಪ್ಯೂಟರ್ ಜಗತ್ತು ಎಷ್ಟೇ ಸೂಪರ್ ಫಾಸ್ಟ್ ಅನಿಸಿದರೂ ಇಲ್ಲಿ ಹಲವಾರು ಕೆಲಸಗಳಿಗೆ ಕಾಯುವುದು ಅನಿವಾರ್ಯ. ವೆಬ್‌ಸೈಟ್ ತೆರೆದುಕೊಳ್ಳಲು ಬಳಕೆದಾರ ಕಾಯುವುದು, ಬಳಕೆದಾರ ತನ್ನ ಆಯ್ಕೆ ದಾಖಲಿಸುವವರೆಗೂ ಎಟಿಎಂ ಕಾಯುವುದು - ಇಲ್ಲಿ ಸರ್ವೇಸಾಮಾನ್ಯ ಸಂಗತಿಗಳು. ಆದರೆ ಈ ಕಾಯುವಿಕೆಗೆ ಒಂದು ಮಿತಿ ಇರಬೇಕು. ಕೋರಿಕೆಗೆ ಸ್ಪಂದಿಸದ ವೆಬ್ ಸೈಟಿಗಾಗಿ ಕಾಯುವುದನ್ನು ತಪ್ಪಿಸಲು, ಮರೆತು ಹಾಗೆಯೇ ಬಿಟ್ಟುಹೋದ ನೆಟ್‌ಬ್ಯಾಂಕಿಂಗ್ ಪರದೆಯನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಇದು ಅತ್ಯಗತ್ಯ. ಇದನ್ನು ಸಾಧ್ಯವಾಗಿಸುವುದು 'ಟೈಮ್ ಔಟ್'ನ ಪರಿಕಲ್ಪನೆ. ಯಾವುದೇ ಪ್ರತಿಕ್ರಿಯೆಗಾಗಿ ಪೂರ್ವನಿರ್ಧಾರಿತ ಸಮಯದವರೆಗೆ ಮಾತ್ರ ಕಾಯುವುದು ಇದರ ಹೂರಣ. ವೆಬ್‌ಸೈಟ್ ತೆರೆಯಲು ಪ್ರಯತ್ನಿಸುವಾಗ ಕೆಲ ಸೆಕೆಂಡುಗಳಲ್ಲಿ ಅದು ತೆರೆದುಕೊಳ್ಳದಿದ್ದರೆ ನಮಗೊಂದು ಸಂದೇಶ ಕಾಣುತ್ತದಲ್ಲ, ಅದಕ್ಕೆ ಇದೇ ಕಾರಣ. ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್ ಆದಮೇಲೆ ಒಂದಷ್ಟು ಕಾಲ ಯಾವುದೇ ಚಟುವಟಿಕೆ ಇಲ್ಲದಿದ್ದರೆ ಅದು ತನ್ನಷ್ಟಕ್ಕೆ ತಾನೇ ಲಾಗ್‌ಔಟ್ ಆಗುವುದು, ಬಳಸಿ ಎತ್ತಿಟ್ಟ ಮೊಬೈಲ್ ಪರದೆ ಲಾಕ್ ಆಗಿ ಲೈಟ್ ಆರುವುದು - ಇವೆಲ್ಲದರ ಹಿನ್ನೆಲೆಯಲ್ಲೂ ಇದೇ ಪರಿಕಲ್ಪನೆ ಕೆಲಸಮಾಡುತ್ತದೆ. ಗ್ರಾಹಕರಿಂದ ಪ್ರತಿಕ್ರಿಯೆ ನಿರೀಕ್ಷಿಸುವ ವ್ಯವಸ್ಥೆಗಳಲ್ಲೂ ಈ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಎಟಿಎಂನಲ್ಲಿ ಪಿನ್ ದಾಖಲಿಸಲು ಇಂತಿಷ್ಟೇ ಸಮಯ ನೀಡಿರುವುದು, ಐವಿಆರ್ ವ್ಯವಸ್ಥೆಯಲ್ಲಿ ನಮ್ಮ ಆಯ್ಕೆ ಏನೆಂದು ತಿಳಿಸಲು ಸಮಯದ ನಿರ್ಬಂಧ ಇರುವುದನ್ನೆಲ್ಲ ಇಲ್ಲಿ ಉದಾಹರಿಸಬಹುದು.

Tab
ಟ್ಯಾಬ್
(ರೂಪಿಸಬೇಕಿದೆ)
ಪ್ರತಿಬಾರಿ ಒತ್ತಿದಾಗಲೂ ಪರದೆಯ ಮೇಲೆ ಪೂರ್ವನಿರ್ಧಾರಿತ ಸ್ಥಾನಗಳಿಗೆ ಕೊಂಡೊಯ್ಯುವ ಕೀಲಿ; ಬ್ರೌಸರ್ ತಂತ್ರಾಂಶದ ಕಿಟಕಿಯೊಳಗೆ ಒಂದರ ಪಕ್ಕ ಒಂದರಂತೆ ತೆರೆದುಕೊಳ್ಳುವ ಪರದೆಗಳನ್ನೂ ಟ್ಯಾಬ್‌ಗಳೆಂದೇ ಕರೆಯುತ್ತಾರೆ.
ತಂತ್ರಜ್ಞಾನ ಲೋಕದಲ್ಲಿ ಕೆಲ ಪದಗಳು ಒಂದಕ್ಕಿಂತ ಹೆಚ್ಚು ಅರ್ಥಗಳಲ್ಲಿ ಬಳಕೆಯಾಗುತ್ತವೆ. ಅಂತಹ ಪದಗಳಿಗೆ 'ಟ್ಯಾಬ್' ಒಂದು ಉದಾಹರಣೆ. ಇದನ್ನು ಕೇಳಿದ ತಕ್ಷಣ ನಮ್ಮಲ್ಲಿ ಅನೇಕರಿಗೆ ಟ್ಯಾಬ್ಲೆಟ್ ಕಂಪ್ಯೂಟರ್ ನೆನಪಾಗುತ್ತದೆ ನಿಜ; ಆದರೆ ಟ್ಯಾಬ್ ಎನ್ನುವ ಪದಕ್ಕೆ ಇನ್ನೂ ಕೆಲ ಅರ್ಥಗಳಿವೆ. 'ಟ್ಯಾಬ್' ಹೆಸರಿನ ಕೀಲಿಯೊಂದು ಕಂಪ್ಯೂಟರಿನ ಕೀಬೋರ್ಡ್ ಎಡಬದಿಯಲ್ಲಿರುವುದನ್ನು ನೀವು ಗಮನಿಸಿರಬಹುದು. ಈ ಹೆಸರಿನ ಮೂಲ 'ಟ್ಯಾಬ್ಯುಲೇಟ್' (ಕೋಷ್ಟಕ ರೂಪದಲ್ಲಿ ಬರೆ, ಪಟ್ಟಿ ಮಾಡು) ಎನ್ನುವ ಪದ. ಮಾಹಿತಿಯನ್ನು ಕೋಷ್ಟಕ ರೂಪದಲ್ಲಿ ಟೈಪ್ ಮಾಡಲು ಟೈಪ್‌ರೈಟರಿನ ಕಾಲದಲ್ಲಿ ಬಹಳ ಕಷ್ಟಪಡಬೇಕಿತ್ತಲ್ಲ, ಅದನ್ನು ನಿವಾರಿಸಲು ರೂಪುಗೊಂಡಿದ್ದು ಟ್ಯಾಬ್ ಕೀಲಿ. ಪ್ರತಿಬಾರಿ ಒತ್ತಿದಾಗಲೂ ಪರದೆಯ ಮೇಲೆ ಪೂರ್ವನಿರ್ಧಾರಿತ ಸ್ಥಾನಗಳಿಗೆ ಕೊಂಡೊಯ್ಯುವುದು ಈ ಕೀಲಿಯ ಕೆಲಸ - ಅಂದು ಟೈಪ್ ರೈಟರಿನ ಅಚ್ಚನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದ ಈ ಕೀಲಿ ಈಗ ಕಂಪ್ಯೂಟರಿನ ಕರ್ಸರನ್ನು ಓಡಾಡಿಸುತ್ತಿದೆ ಅಷ್ಟೆ. ಮೈಕ್ರೋಸಾಫ್ಟ್ ಎಕ್ಸೆಲ್‌ನಂತಹ ಸ್ಪ್ರೆಡ್‌ಶೀಟ್ ತಂತ್ರಾಂಶಗಳಲ್ಲಿ ಒಂದು ಕೋಶದಿಂದ ಇನ್ನೊಂದಕ್ಕೆ ಹೋಗಲು, ಆನ್‌ಲೈನ್ ನಮೂನೆಗಳಲ್ಲಿ (ಫಾರ್ಮ್) ಒಂದು ಭಾಗದಿಂದ ಮತ್ತೊಂದಕ್ಕೆ ಹೋಗಲು ಕೂಡ ಟ್ಯಾಬ್ ಕೀಲಿ ನೆರವಾಗುತ್ತದೆ. ಹತ್ತು ಜಾಲತಾಣಗಳಿಗೆ ಹತ್ತು ಬ್ರೌಸರ್ ಕಿಟಕಿಗಳನ್ನು ತೆರೆಯದೆ ಒಂದೇ ಕಿಟಕಿಯೊಳಗೆ ಹತ್ತೂ ತಾಣಗಳು ಪಕ್ಕಪಕ್ಕದಲ್ಲಿ ತೆರೆದುಕೊಳ್ಳುವಂತೆ ಮಾಡುವುದು ಆಧುನಿಕ ಬ್ರೌಸರ್ ತಂತ್ರಾಂಶಗಳಲ್ಲಿ ಸಾಧ್ಯವಿದೆ - ಹೀಗೆ ತೆರೆದುಕೊಳ್ಳುವ ಪುಟಗಳಲ್ಲಿ ಒಂದು ಮಾತ್ರ ಪೂರ್ತಿ ಕಾಣಿಸಿಕೊಂಡು ಮಿಕ್ಕವುಗಳ ಶೀರ್ಷಿಕೆ ಮಾತ್ರ ಪಕ್ಕದಲ್ಲಿ ಕಾಣಿಸುತ್ತಿರುತ್ತದೆ. ಹೀಗೆ ತೆರೆದುಕೊಳ್ಳುವ ಪುಟಗಳನ್ನೂ 'ಟ್ಯಾಬ್'ಗಳೆಂದು ಕರೆಯುತ್ತಾರೆ. ಈ ಸೌಲಭ್ಯ ಬಳಸಿ ಬ್ರೌಸ್ ಮಾಡುವುದಕ್ಕೆ ಟ್ಯಾಬ್ಡ್ ಬ್ರೌಸಿಂಗ್ ಎಂಬ ಹೆಸರೂ ಇದೆ.

Troll
ಟ್ರಾಲ್
(ರೂಪಿಸಬೇಕಿದೆ)
ಅಂತರಜಾಲದ ಇತರ ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ಹೀಗಳೆಯುವ, ಅವಮಾನಿಸುವ ಅಥವಾ ಗೇಲಿಮಾಡುವ ವ್ಯಕ್ತಿ
ಅಂತರಜಾಲ ಸಂಪರ್ಕ ಸರ್ವವ್ಯಾಪಿಯಾಗಿ ಬೆಳೆದಂತೆ ಸಮಾಜಜಾಲಗಳಲ್ಲಿ (ಸೋಶಿಯಲ್ ನೆಟ್‌ವರ್ಕ್) ಸಕ್ರಿಯರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬೆಳವಣಿಗೆಯ ಜೊತೆಗೆ ಸಮಾಜಜಾಲಗಳಲ್ಲಿ ದುರ್ವರ್ತನೆಯ ಪ್ರಸಂಗಗಳೂ ಜಾಸ್ತಿಯಾಗುತ್ತಿವೆ. ಸಮಾಜಜಾಲಗಳಲ್ಲಿ ಇತರ ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ಹೀಗಳೆಯುವ, ಅವಮಾನಿಸುವ ಅಥವಾ ಗೇಲಿಮಾಡುವ ಪ್ರಸಂಗಗಳು ಇಂತಹ ದುರ್ವರ್ತನೆಯ ಉದಾಹರಣೆಗಳು. ಇಂತಹ ಯಾವುದೇ ಕ್ರಿಯೆಯನ್ನು ಟ್ರಾಲ್ ಮಾಡುವುದು ಅಥವಾ 'ಟ್ರಾಲಿಂಗ್' ಎಂದು ಗುರುತಿಸಲಾಗುತ್ತದೆ. ಈ ಕ್ರಿಯೆಯಲ್ಲಿ ತೊಡಗಿಕೊಂಡವರಿಗೂ ಟ್ರಾಲ್‌ಗಳೆಂದೇ ಹೆಸರು. ವೈಯಕ್ತಿಕ ದ್ವೇಷ, ನಿರ್ದಿಷ್ಟ ಸಿದ್ಧಾಂತದ ಕುರಿತ ವಿರೋಧ, ಇತರರನ್ನು ನೋಯಿಸಲೇಬೇಕೆಂಬ ಹಿಂಸಾಪ್ರವೃತ್ತಿ - ಹೀಗೆ ಟ್ರಾಲಿಂಗ್‌ಗೆ ಅನೇಕ ಕಾರಣಗಳಿರುವುದು ಸಾಧ್ಯ. ಟ್ರಾಲ್‌ಗಳ ಕಾಟ ಕೆಲವೊಮ್ಮೆ ಒಂದೆರಡು ಸಂದೇಶಗಳಿಗಷ್ಟೇ ಸೀಮಿತವಾಗಿದ್ದರೆ ಇನ್ನು ಕೆಲಬಾರಿ ಸುದೀರ್ಘ ಅವಧಿಯವರೆಗೆ ಮುಂದುವರೆಯುವುದೂ ಉಂಟು. ಟ್ರಾಲಿಂಗ್‌ನ ಕಾರಣ - ಸ್ವರೂಪ ಯಾವುದೇ ಆದರೂ ಟ್ರಾಲಿಂಗ್‌ಗೆ ಗುರಿಯಾದವರಿಗೆ ಇದರಿಂದ ತೊಂದರೆಯಾಗುವುದಂತೂ ನಿಜ (ಟ್ರಾಲ್‌ಗಳ ಕಾಟ ತಡೆಯಲಾರದೆ ಆತ್ಮಹತ್ಯೆಯ ಮೊರೆಹೋದವರೂ ಇದ್ದಾರೆ). ಸಿದ್ಧಾಂತಗಳ ನಡುವಿನ ಸಂಘರ್ಷದಲ್ಲಿ ಟ್ರಾಲಿಂಗ್ ಪ್ರವೇಶವಾದಾಗ ಅದು ವೈಯಕ್ತಿಕ ದ್ವೇಷಕ್ಕೆ ತಿರುಗುವ, ಕಾನೂನು ಕ್ರಮದಲ್ಲಿ ಕೊನೆಗೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ. ಅಂದಹಾಗೆ ಟ್ರಾಲಿಂಗ್ ಸಮಸ್ಯೆ ಟ್ವಿಟರ್ - ಫೇಸ್‌ಬುಕ್‌ಗಳಿಗಷ್ಟೇ ಸೀಮಿತವಲ್ಲ. ಯೂಟ್ಯೂಬ್‌ನಲ್ಲಿ, ಬ್ಲಾಗುಗಳಲ್ಲಿ, ವಾಟ್ಸ್‌ಆಪ್‌ನಲ್ಲಿ, ಕಡೆಗೆ ಇಮೇಲ್ ಮೂಲಕವೂ ಕಿರುಕುಳ ನೀಡುವ ಟ್ರಾಲ್‌ಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರು ನಮ್ಮ-ನಿಮ್ಮ ನಡುವೆಯೂ ಇರುವುದು, ಅವರ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವುದು ನಿಜಕ್ಕೂ ಆತಂಕದ ಸಂಗತಿಯೇ!

Trojan Horse
ಟ್ರೋಜನ್ ಹಾರ್ಸ್
(ರೂಪಿಸಬೇಕಿದೆ)
ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶ
ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ. ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ದತ್ತಾಂಶವನ್ನು ಅಥವಾ ಕಡತಗಳನ್ನು ಹಾಳುಮಾಡುವುದು, ಇತರ ಕುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವುದು - ಹೀಗೆ ಟ್ರೋಜನ್‌ಗಳಿಗೆ ಅನೇಕ ಉದ್ದೇಶಗಳಿರುವುದು ಸಾಧ್ಯ. ಇತರ ಕುತಂತ್ರಾಂಶಗಳಾದ ವೈರಸ್-ವರ್ಮ್‌ಗಳಂತೆ ಟ್ರೋಜನ್ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ತನ್ನಷ್ಟಕ್ಕೆ ತಾನೇ ಹರಡುವುದಿಲ್ಲ. ಬಳಕೆದಾರರು ಸಾಮಾನ್ಯವಾಗಿ ಟ್ರೋಜನ್ ಬಲೆಗೆ ಬೀಳುವುದು ಖೊಟ್ಟಿ ಜಾಹೀರಾತುಗಳ ಮೇಲೆ ಕ್ಲಿಕ್ಕಿಸುವ ಅಥವಾ ಸಂಶಯಾಸ್ಪದ ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಮೂಲಕ. ಯಾವುದೋ ಉಪಯುಕ್ತ ತಂತ್ರಾಂಶವನ್ನೋ ಕಡತವನ್ನೋ ಡೌನ್‌ಲೋಡ್ ಮಾಡುತ್ತಿದ್ದೇವೆ ಎಂದುಕೊಳ್ಳುವ ಅವರು ತಮಗೆ ತಿಳಿಯದಂತೆಯೇ ಕುತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಟ್ರೋಜನ್‌ಗಳಿಂದ ಪಾರಾಗುವುದೂ ಸುಲಭವೇ: ಅಪರಿಚಿತರಿಂದ ಬರುವ ಇಮೇಲ್ ಅಟ್ಯಾಚ್‌ಮೆಂಟುಗಳನ್ನು ತೆರೆಯದಿರುವುದು, ಸಂಶಯಾಸ್ಪದ ಜಾಹೀರಾತುಗಳನ್ನು ಕ್ಲಿಕ್ ಮಾಡದಿರುವುದು, ಆಂಟಿವೈರಸ್ ತಂತ್ರಾಂಶ ಬಳಸುವುದು - ಹೀಗೆ ಕೆಲವು ಸರಳ ಕ್ರಮಗಳನ್ನು ಕೈಗೊಂಡರೆ ಆಯಿತು!

Track
ಟ್ರ್ಯಾಕ್
(ರೂಪಿಸಬೇಕಿದೆ)
ಮಾಹಿತಿ ಶೇಖರಣೆಗೆ ಬಳಕೆಯಾಗುವ ಡಿಸ್ಕ್‌ಗಳ ಕೇಂದ್ರದಿಂದ ಪ್ರಾರಂಭಿಸಿ ಅದರ ಹೊರಭಾಗದವರೆಗೂ ಇರುವ, ಏಕಕೇಂದ್ರದ ವೃತ್ತಾಕಾರದ ಹಾದಿ; ಮಾಹಿತಿ ಶೇಖರವಾಗುವುದು ಈ ಹಾದಿಯಲ್ಲೇ.
ಹಿಂದಿನ ಫ್ಲಾಪಿಡಿಸ್ಕ್‌ಗಳಿಂದ ಇಂದಿನ ಹಾರ್ಡ್ ಡಿಸ್ಕ್, ಸಿ.ಡಿ., ಡಿವಿಡಿಗಳವರೆಗೆ ಹಲವಾರು ಶೇಖರಣಾ ಸಾಧನಗಳಲ್ಲಿ ಮಾಹಿತಿ ಶೇಖರವಾಗುವುದು ವೃತ್ತಾಕಾರದ ತಟ್ಟೆಗಳಂತಹ (ಡಿಸ್ಕ್) ಮಾಧ್ಯಮದ ಮೇಲೆ. ಇಂತಹ ತಟ್ಟೆಗಳಲ್ಲಿ, ಸಹಜವಾಗಿಯೇ, ಮಾಹಿತಿ ಶೇಖರವಾಗುವ ಹಾದಿಯೂ ವೃತ್ತಾಕಾರವಾಗಿಯೇ ಇರುತ್ತದೆ. ಡಿಸ್ಕ್‌ನ ಕೇಂದ್ರದಿಂದ ಪ್ರಾರಂಭಿಸಿ ಅದರ ಹೊರಭಾಗದವರೆಗೂ ಇರುವ, ಏಕಕೇಂದ್ರದ ಇಂತಹ ವೃತ್ತಗಳನ್ನು 'ಟ್ರ್ಯಾಕ್' ಎಂದು ಕರೆಯುತ್ತಾರೆ. ಫ್ಲಾಪಿ ಡಿಸ್ಕ್‌ನಂತಹ ಕಡಿಮೆ ಸಾಮರ್ಥ್ಯದ ಶೇಖರಣಾ ಸಾಧನಗಳಲ್ಲಿ ಟ್ರ್ಯಾಕ್‌ಗಳ ಸಂಖ್ಯೆ ಬಹಳ ಕಡಿಮೆಯಿರುತ್ತಿತ್ತು - ೮೦, ೧೬೦ ಹೀಗೆ. ಇದರ ಹೋಲಿಕೆಯಲ್ಲಿ ನೋಡಿದರೆ ಇಂದಿನ ಹಾರ್ಡ್ ಡಿಸ್ಕ್‌ಗಳ ಪ್ರತಿ ತಟ್ಟೆಯಲ್ಲೂ ಸಾವಿರಾರು ಸಂಖ್ಯೆಯ ಟ್ರ್ಯಾಕ್‌ಗಳಿರುತ್ತವೆ. ಇಂತಹ ಪ್ರತಿ ಟ್ರ್ಯಾಕ್ ಅನ್ನೂ ಹಲವು ಸಣ್ಣಸಣ್ಣ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ - ಪ್ರತಿ ರಸ್ತೆಯಲ್ಲೂ ಇಂತಿಷ್ಟು ಸಂಖ್ಯೆಯ ನಿವೇಶನಗಳಿರುತ್ತವಲ್ಲ, ಹಾಗೆ. ಇಂತಹ ಭಾಗಗಳಿಗೆ ಸೆಕ್ಟರ್ ಎಂದು ಹೆಸರು. ನಮ್ಮ ಕಡತಗಳಲ್ಲಿನ ಮಾಹಿತಿಯನ್ನು ಇಂತಹ ನೂರಾರು-ಸಾವಿರಾರು ಸೆಕ್ಟರ್‌ಗಳಲ್ಲಿ ಉಳಿಸಿಡಲಾಗುತ್ತದೆ. ಈ ಪೈಕಿ ಯಾವುದೇ ಸೆಕ್ಟರಿನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡರೆ, ಅಲ್ಲಿ ಮಾಹಿತಿಯನ್ನು ಉಳಿಸುವಾಗ ಏನಾದರೂ ತಪ್ಪಾಗಿದ್ದರೆ ಆ ಕಡತವನ್ನು ತೆರೆಯುವುದೇ ಅಸಾಧ್ಯವಾಗಬಹುದು. ಇಂತಹ ದೋಷಯುಕ್ತ ಸೆಕ್ಟರುಗಳನ್ನು 'ಬ್ಯಾಡ್ ಸೆಕ್ಟರ್' ಎಂದು ಗುರುತಿಸಲಾಗುತ್ತದೆ. ಬ್ಯಾಡ್‌ಸೆಕ್ಟರುಗಳನ್ನು ಪರಿಶೀಲಿಸಿ ಸರಿಪಡಿಸಲು ಪ್ರಯತ್ನಿಸುವ ಕೆಲ ತಂತ್ರಾಂಶಗಳಿವೆ. ಯಾಂತ್ರಿಕ ದೋಷವಿರುವ ಸೆಕ್ಟರುಗಳನ್ನು ಸರಿಪಡಿಸುವುದು ಬಹುತೇಕ ಅಸಾಧ್ಯವಾದ್ದರಿಂದ ಇಂತಹ ತಂತ್ರಾಂಶಗಳು ಮುಂದೆ ಅವನ್ನು ಬಳಸದಂತೆ ಗುರುತಿಸುತ್ತವೆ, ಅಷ್ಟೇ.

Dongle
ಡಾಂಗಲ್
(ರೂಪಿಸಬೇಕಿದೆ)
ಯಾವುದೇ ವಿದ್ಯುನ್ಮಾನ ಸಾಧನಕ್ಕೆ ಜೋಡಿಸಿದಾಗ ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿಕೊಡುವ ಸಾಧನ
ಹಲವು ಕೆಲಸಗಳಿಗಾಗಿ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಂಗತಿ. ಈ ಅವಲಂಬನೆಯ ಅಂಗವಾಗಿ ವಿವಿಧ ವಿದ್ಯುನ್ಮಾನ ಸಾಧನಗಳನ್ನು ಬಳಸುವುದು ಕೂಡ ಅಷ್ಟೇ ಸಾಮಾನ್ಯ. ಇಂತಹ ಸಾಧನಗಳಲ್ಲಿ ನೂರೆಂಟು ಸೌಲಭ್ಯಗಳಿರುವುದು ನಿಜವೇ. ಆದರೆ ತಂತ್ರಜ್ಞಾನ ಜಗತ್ತು ಕೇಳಬೇಕಲ್ಲ, ಪ್ರತಿದಿನವೂ ಒಂದೊಂದು ಹೊಸ ಆವಿಷ್ಕಾರವನ್ನು ತಂದು ನಮ್ಮ ಮುಂದಿಡುತ್ತದೆ. ಅಲ್ಲಿಗೆ ನಮ್ಮ ಕಂಪ್ಯೂಟರಿನಲ್ಲಿ, ಟಿವಿಯಲ್ಲಿ ಈ ಸೌಲಭ್ಯ ಇಲ್ಲವೆಂಬ ಕೊರತೆ ನಮ್ಮನ್ನು ಕಾಡತೊಡಗುತ್ತದೆ. ಹಾಗೆಂದು ದಿನದಿನವೂ ಹೊಸ ಟೀವಿ - ಕಂಪ್ಯೂಟರ್ ಕೊಳ್ಳಲು ಸಾಧ್ಯವೇ? ಅಂತಹ ಪರಿಸ್ಥಿತಿಯನ್ನು ತಪ್ಪಿಸುವುದು ಹೇಗೆ? ಇದಕ್ಕೆ ಸ್ವಲ್ಪಮಟ್ಟಿಗಾದರೂ ಪರಿಹಾರ ಒದಗಿಸಿಕೊಡುವ ಸಾಧನವೇ 'ಡಾಂಗಲ್'. ಯಾವುದೇ ವಿದ್ಯುನ್ಮಾನ ಸಾಧನಕ್ಕೆ ಜೋಡಿಸಿದಾಗ ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿಕೊಡುವ ಪುಟಾಣಿ ಸಾಧನವೇ ಡಾಂಗಲ್. ಯುಎಸ್‌ಬಿ, ಎಚ್‌ಡಿಎಂಐ ಮುಂತಾದ ಯಾವುದೇ ಪೋರ್ಟ್ ಮೂಲಕ ಈ ಸಾಧನಗಳನ್ನು ನಾವು ಟೀವಿಗೋ ಕಂಪ್ಯೂಟರಿಗೋ ಜೋಡಿಸಿಕೊಳ್ಳಬಹುದು. ವೈ-ಫೈ ಸಂಪರ್ಕ ಪಡೆಯುವ ಸೌಲಭ್ಯವಿರಬಹುದು, ಬ್ಲೂಟೂತ್ ಸಂಪರ್ಕವಿರಬಹುದು ಅಥವಾ ಅಂತರಜಾಲ ಸಂಪರ್ಕವೇ ಇರಬಹುದು - ಡಾಂಗಲ್ ಬಳಸಿ ಕಂಪ್ಯೂಟರಿಗೆ ಹಲವು ಸೌಲಭ್ಯಗಳನ್ನು ಸೇರಿಸುವುದು ಸಾಧ್ಯ. ಇದೇ ರೀತಿ 'ಕ್ರೋಮ್ ಕಾಸ್ಟ್'ನಂತಹ ಸ್ಟ್ರೀಮಿಂಗ್ ಸಾಧನಗಳನ್ನು, ಇಂಟೆಲ್ ಕಂಪ್ಯೂಟ್ ಸ್ಟಿಕ್ - ಕ್ರೋಮ್ ಬಿಟ್ ಮುಂತಾದ ಪುಟಾಣಿ ಕಂಪ್ಯೂಟರುಗಳನ್ನು ಟೀವಿಗೆ ಜೋಡಿಸಿಕೊಳ್ಳುವುದೂ ಸಾಧ್ಯವಿದೆ.

Docking Station
ಡಾಕಿಂಗ್ ಸ್ಟೇಶನ್
(ರೂಪಿಸಬೇಕಿದೆ)
ಲ್ಯಾಪ್‌ಟಾಪ್ ಹಾಗೂ ಪೂರಕ ಸಾಧನಗಳ ನಡುವೆ ಸಂಪರ್ಕವನ್ನು ಸುಲಭವಾಗಿಸುವ ಸಾಧನ; ಮಾನಿಟರ್, ಪ್ರಿಂಟರ್ ಇತ್ಯಾದಿಗಳನ್ನೆಲ್ಲ ಇದಕ್ಕೆ ಸಂಪರ್ಕಿಸಿಟ್ಟು ಅಗತ್ಯಬಿದ್ದಾಗ ಲ್ಯಾಪ್‌ಟಾಪನ್ನೂ ಥಟ್ಟನೆ ಸಂಪರ್ಕಿಸುವುದು ಸಾಧ್ಯ.
ಬಂದರಿನಲ್ಲಿ ಹಡಗನ್ನು ಕಟ್ಟೆಗೆ ತರುವ ಪ್ರಕ್ರಿಯೆಯನ್ನು ಡಾಕಿಂಗ್ (docking) ಎಂದು ಕರೆಯುವ ಪರಿಪಾಠವಿದೆ. ಹಡಗಿನ ಓಡಾಟವನ್ನು ನಿರ್ಬಂಧಿಸಿ ಅದನ್ನು ಒಂದೆಡೆ ನಿಲ್ಲಿಸುವುದು ಇದರ ಉದ್ದೇಶ. ಹಡಗಿನಂತೆ, ಹಡಗಿನಷ್ಟು ಓಡಾಡದಿದ್ದರೂ ಕಂಪ್ಯೂಟರ್ ಪ್ರಪಂಚದ ಮಟ್ಟಿಗೆ ಲ್ಯಾಪ್‌ಟಾಪ್ ಸಂಚಾರಿಯೇ. ವೈಫೈ ಸಂಪರ್ಕವಿರುವ ಯಾವ ಜಾಗದಲ್ಲಿ ಬೇಕಿದ್ದರೂ ಅದನ್ನು ಬಳಸುವುದು ಸಾಧ್ಯ. ಕಿರಿಕಿರಿ ಶುರುವಾಗುವುದೇನಿದ್ದರೂ ಅದಕ್ಕೆ ಬೇರೆ ಸಾಧನಗಳನ್ನು ಸಂಪರ್ಕಿಸುವ ಅಗತ್ಯ ಬಿದ್ದಾಗ ಮಾತ್ರ: ಚಾರ್ಜರ್, ಮಾನಿಟರ್, ಪ್ರಿಂಟರ್, ನೆಟ್‌ವರ್ಕ್ ಕೇಬಲ್ಲುಗಳನ್ನೆಲ್ಲ ಜೋಡಿಸುತ್ತ ಹೋದಂತೆ ಒಂದು ದೊಡ್ಡ ಗೋಜಲೇ ಸೃಷ್ಟಿಯಾಗಿಬಿಡುತ್ತದೆ. ಇವನ್ನೆಲ್ಲ ಒಂದು ಸಾಧನಕ್ಕೆ ಜೋಡಿಸಿಟ್ಟು ಅಗತ್ಯಬಿದ್ದಾಗ ಅದಕ್ಕೆ ಲ್ಯಾಪ್‌ಟಾಪನ್ನು ಸಂಪರ್ಕಿಸುವಂತಿದ್ದರೆ ಈ ಕಿರಿಕಿರಿಯನ್ನು ತಪ್ಪಿಸಬಹುದಲ್ಲ? ಇದಕ್ಕಾಗಿ ಬಳಕೆಯಾಗುವ ಸಾಧನವೇ 'ಡಾಕಿಂಗ್ ಸ್ಟೇಶನ್'. ಸಮುದ್ರದಲ್ಲಿ ಓಡಾಡುವ ಹಡಗನ್ನು ಬಂದರಿನಲ್ಲಿ ಬಂಧಿಸುವಂತೆ ಸಂಚಾರಿ ಲ್ಯಾಪ್‌ಟಾಪನ್ನು ಇದು ಒಂದುಕಡೆ ಜೋಡಿಸಿಡುವುದರಿಂದಲೇ ಈ ಹೆಸರಿನಲ್ಲೂ 'ಡಾಕಿಂಗ್' ಬಂದಿದೆ. ವಿವಿಧ ಸಾಧನಗಳನ್ನು ಜೋಡಿಸಲು ಬೇಕಾದ ಪೋರ್ಟ್‌ಗಳು ಡಾಕಿಂಗ್ ಸ್ಟೇಶನಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುತ್ತವೆ. ಗೃಹಬಳಕೆಯ ಸನ್ನಿವೇಶದಲ್ಲಿ ಇಷ್ಟೆಲ್ಲ ಸಂಖ್ಯೆಯ ಸಾಧನಗಳನ್ನು ಜೋಡಿಸುವ ಅಗತ್ಯ ಬರುವುದು ಅಪರೂಪವಾದ್ದರಿಂದ ಡಾಕಿಂಗ್ ಸ್ಟೇಶನ್ ಬಳಕೆ ಕಚೇರಿಗಳಲ್ಲೇ ಹೆಚ್ಚು. ಬೇರೆಬೇರೆ ಸಂಸ್ಥೆಗಳ ಲ್ಯಾಪ್‌ಟಾಪ್‌ಗಳಿಗೆ ಬೇರೆಬೇರೆ ಡಾಕಿಂಗ್ ಸ್ಟೇಶನುಗಳನ್ನು ಬಳಸಬೇಕಾದ ಪರಿಸ್ಥಿತಿ ಹೋಗಲಾಡಿಸಲು ಯುಎಸ್‌ಬಿ ಡಾಕಿಂಗ್ ಸ್ಟೇಶನ್‌ಗಳನ್ನು ಪರಿಚಯಿಸಲಾಗಿದೆ. ಅಂದಹಾಗೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಹೈಬ್ರಿಡ್ ಕಂಪ್ಯೂಟರಿನಂತಹ ಸಾಧನಗಳ ಜೊತೆ ಬಳಸಲೂ ಡಾಕಿಂಗ್ ಸ್ಟೇಶನಿನಂತಹ ಸಾಧನಗಳು ದೊರಕುತ್ತವೆ; ಅವನ್ನು 'ಡಾಕ್'ಗಳೆಂದೂ ಗುರುತಿಸುವ ಅಭ್ಯಾಸವಿದೆ.


logo