logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Cookie
ಕುಕಿ
(ರೂಪಿಸಬೇಕಿದೆ)
ಜಾಲತಾಣಗಳು ತಮ್ಮ ಬಳಕೆದಾರರ ಕಂಪ್ಯೂಟರಿನಲ್ಲಿ ಉಳಿಸುವ ಕಡತ
'ಈ ಜಾಲತಾಣ ಕುಕಿಗಳನ್ನು ಬಳಸುತ್ತದೆ' ಎನ್ನುವ ಸಂದೇಶವನ್ನು ನೀವು ಹಲವು ಜಾಲತಾಣಗಳಲ್ಲಿ ನೋಡಿರಬಹುದು. ಜಾಲತಾಣಗಳು ತಮ್ಮ ಬಳಕೆದಾರರ ಕಂಪ್ಯೂಟರಿನಲ್ಲಿ ಉಳಿಸುವ ಪುಟ್ಟದೊಂದು ಕಡತಕ್ಕೆ ಕುಕಿ ಎಂದು ಹೆಸರು. ಜಾಲತಾಣ ಬಳಸುವ ಗ್ರಾಹಕರ ಅಯ್ಕೆಗಳನ್ನು ಉಳಿಸಿಟ್ಟುಕೊಳ್ಳಲು ಇವು ಬಳಕೆಯಾಗುತ್ತವೆ. ನಾಲ್ಕಾರು ಭಾಷೆಗಳಲ್ಲಿ ಲಭ್ಯವಿರುವ ಯಾವುದೋ ಜಾಲತಾಣದಲ್ಲಿ ನೀವು ಕನ್ನಡ ಭಾಷೆ ಆಯ್ದುಕೊಂಡಿದ್ದಿರಿ ಎನ್ನುವುದಾದರೆ ಅದು ನಿಮ್ಮದೇ ಕಂಪ್ಯೂಟರಿನಲ್ಲಿ ಒಂದು ಕಡೆ ಕುಕಿಯ ರೂಪದಲ್ಲಿ ಉಳಿದುಕೊಂಡಿರುತ್ತದೆ. ಅದೇ ಜಾಲತಾಣಕ್ಕೆ ನೀವು ಇನ್ನೊಮ್ಮೆ ಭೇಟಿಕೊಟ್ಟಾಗ ಆ ಕುಕಿಯ ಆಧಾರದ ಮೇಲೆ ಜಾಲತಾಣ ನೇರವಾಗಿ ಕನ್ನಡದಲ್ಲಿಯೇ ತೆರೆದುಕೊಳ್ಳುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕಾಣಿಸಿಕೊಳ್ಳುವ ಅನೇಕ ಜಾಹೀರಾತುಗಳಿಗೂ ಈ ಕುಕಿಗಳೇ ಆಧಾರ. ನೀವು ನವದೆಹಲಿ ಪ್ರವಾಸದ ಬಗೆಗಿನ ತಾಣಗಳನ್ನು ವೀಕ್ಷಿಸಿದ ಕೆಲವೇ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳ, ಹೋಟಲ್ಲುಗಳ ಜಾಹೀರಾತುಗಳೇ ಕಾಣಿಸಲು ಶುರುವಾಗುತ್ತವೆ ಎಂದರೆ ಅಲ್ಲೆಲ್ಲ ಬಹುತೇಕ ಕುಕಿಗಳದೇ ಕೈವಾಡವಿರುತ್ತದೆ. ಆನ್‌ಲೈನ್ ಶಾಪಿಂಗ್ ತಾಣಗಳೂ ತಮ್ಮ ಬಳಕೆದಾರರ ಆಸಕ್ತಿಯನ್ನು ತಿಳಿದುಕೊಳ್ಳಲು ಕುಕಿಗಳನ್ನು ವ್ಯಾಪಕವಾಗಿ ಬಳಸುತ್ತವೆ. ಆದರೆ ವೈರಸ್ಸುಗಳಿಂದ ತೊಂದರೆ ಉಂಟಾಗುವಂತೆ ಕುಕಿಗಳಿಂದ ನಿಮ್ಮ ಕಂಪ್ಯೂಟರಿನ ಸುರಕ್ಷತೆಗೆ ತೊಂದರೆಯಾಗುವ ಸಾಧ್ಯತೆ ಕಡಿಮೆ. ಆದರೆ ನಾವು ಜಾಲಲೋಕದಲ್ಲಿ ಏನೆಲ್ಲ ಮಾಡುತ್ತಿದ್ದೇವೆ ಎಂದು ಈ ಪುಟ್ಟ ಕಡತಗಳು ನಿಗಾವಹಿಸುವುದನ್ನು ಕೆಲವರು ತಮ್ಮ ಖಾಸಗಿತನಕ್ಕೆ ಧಕ್ಕೆಯೆಂದು ಭಾವಿಸಬಹುದು. ಅಂತಹ ಸಂದರ್ಭಗಳಲ್ಲಿ ನಮ್ಮ ಕಂಪ್ಯೂಟರಿನಲ್ಲಿ ಕುಕಿಗಳ ಬಳಕೆ ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧರಿಸುವುದು ಸಾಧ್ಯ. ನಿಮ್ಮ ಬ್ರೌಸರ್ ತಂತ್ರಾಂಶದಲ್ಲಿ ಇದಕ್ಕಾಗಿ ಲಭ್ಯವಿರುವ ಆಯ್ಕೆಗಳನ್ನು ತಿಳಿದುಕೊಳ್ಳಲು ಗೂಗಲ್ ಮಾಡಿ.

Coupon Site
ಕೂಪನ್ ಸೈಟ್
(ರೂಪಿಸಬೇಕಿದೆ)
ಆನ್‌ಲೈನ್ ಶಾಪಿಂಗ್, ಪ್ರವಾಸ, ಬಿಲ್ ಪಾವತಿ ಮುಂತಾದ ಸೇವೆಗಳನ್ನು ಒದಗಿಸುವ ತಾಣಗಳಲ್ಲಿ ದೊರಕುವ ವಿಶೇಷ ಕೊಡುಗೆಗಳ ಕುರಿತು ಮಾಹಿತಿ ನೀಡುವ ತಾಣ
ಜಾಲತಾಣಗಳಲ್ಲಿ ಶಾಪಿಂಗ್ ಮಾಡುವಾಗ, ಬಿಲ್ ಪಾವತಿಸುವಾಗ, ಟಿಕೇಟು ಕಾಯ್ದಿರಿಸುವಾಗಲೆಲ್ಲ ಡಿಸ್ಕೌಂಟ್ ಕೂಪನ್ ಅಥವಾ ಕೂಪನ್ ಕೋಡ್ ದಾಖಲಿಸುವ ಅವಕಾಶವಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅಲ್ಲಿ ಸೂಕ್ತ ಕೋಡ್ ದಾಖಲಿಸಿದ್ದೇ ಆದರೆ ಬೆಲೆಯಲ್ಲಿ ರಿಯಾಯಿತಿಯೋ, ಪಾವತಿಸಿದ ಹಣದ ಮೇಲೆ ಕ್ಯಾಶ್‌ಬ್ಯಾಕ್ ಕೊಡುಗೆಯೋ ನಮಗೆ ದೊರಕುತ್ತದೆ. ನಿರ್ದಿಷ್ಟ ತಾಣಗಳಲ್ಲಿ ದಾಖಲಿಸಬಹುದಾದ ಕೂಪನ್ ಕೋಡ್‌ಗಳು ಪತ್ರಿಕೆಗಳ, ಸಮಾಜಜಾಲಗಳ ಇಲ್ಲವೇ ಎಸ್ಸೆಮ್ಮೆಸ್ ಸಂದೇಶಗಳ ಮೂಲಕ ನಮ್ಮನ್ನು ಕಾಲಕಾಲಕ್ಕೆ ತಲುಪುತ್ತಿರುತ್ತವೆ. ಆದರೆ ಎಲ್ಲ ತಾಣಗಳಲ್ಲೂ ನೋಂದಾಯಿಸಿಕೊಂಡಿರುವುದು, ಸಮಾಜಜಾಲದಲ್ಲಿ ಅವೆಲ್ಲವುಗಳನ್ನೂ ಗಮನಿಸುತ್ತಿರುವುದು ಸಾಧ್ಯವಿಲ್ಲವಲ್ಲ! ಈ ಸಮಸ್ಯೆಗೆ ಪರಿಹಾರ ಒದಗಿಸುವ ಜಾಲತಾಣಗಳನ್ನು 'ಕೂಪನ್ ಸೈಟ್'ಗಳೆಂದು ಕರೆಯುತ್ತಾರೆ. ಆನ್‌ಲೈನ್ ಶಾಪಿಂಗ್, ಪ್ರವಾಸ, ಬಿಲ್ ಪಾವತಿ ಮುಂತಾದ ಸೇವೆಗಳನ್ನು ಒದಗಿಸುವ ತಾಣಗಳಲ್ಲಿ ವಿಶೇಷ ಕೊಡುಗೆಗಳನ್ನು ಪಡೆಯಲು ಬಳಸಬಹುದಾದ ಕೂಪನ್‌ಗಳನ್ನು ಕುರಿತ ಮಾಹಿತಿ ನೀಡುವುದಷ್ಟೇ ಈ ಕೂಪನ್ ಸೈಟ್‌ಗಳ ಕೆಲಸ. ವಿಶೇಷ ಕೊಡುಗೆಗಳ ಹುಡುಕಾಟದಲ್ಲಿರುವವರು ನೇರವಾಗಿಯೋ ಗೂಗಲ್ ಮೂಲಕವೋ ಕೂಪನ್ ಸೈಟ್‌ಗಳಿಗೆ ಬರುವ ಸಾಧ್ಯತೆ ಹೆಚ್ಚು. ಕೊಡುಗೆಗಳ ಬಗ್ಗೆ ಮಾಹಿತಿ ಪಡೆಯುವ ಅವರು ಇಲ್ಲಿಂದ ಆಯಾ ತಾಣಗಳಿಗೆ ಹೋಗಿ ಶಾಪಿಂಗ್ ಮಾಡುವ ಸಾಧ್ಯತೆಯೂ ಹೆಚ್ಚು. ಈ ಮೂಲಕ ಬಳಕೆದಾರನಿಗೆ ಹೆಚ್ಚುವರಿ ಕೊಡುಗೆ ದೊರೆತ ಖುಷಿ ಸಿಗುತ್ತದೆ, ಶಾಪಿಂಗ್ ಜಾಲತಾಣಕ್ಕೆ ತನ್ನ ವಹಿವಾಟು ಹೆಚ್ಚಿದ ಸಂತೋಷವೂ ಆಗುತ್ತದೆ. ಇವೆರಡನ್ನೂ ಸಾಧ್ಯವಾಗಿಸಿದ ಕೂಪನ್ ಸೈಟ್ ಈ ಸೇವೆ ಒದಗಿಸಿದ್ದಕ್ಕಾಗಿ ಆ ಜಾಲತಾಣದಿಂದ ಕಮೀಶನ್ ಪಡೆದುಕೊಳ್ಳುತ್ತದೆ, ಇನ್ನಷ್ಟು ಕೊಡುಗೆಗಳ ಬಗ್ಗೆ ಗ್ರಾಹಕರಿಗೆ ತಿಳಿಸಲು ತಯಾರಾಗುತ್ತದೆ!

Captcha
ಕ್ಯಾಪ್ಚಾ
(ರೂಪಿಸಬೇಕಿದೆ)
ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ; 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ
ಹಲವು ಜಾಲತಾಣಗಳಲ್ಲಿ ಮಾಹಿತಿ ತುಂಬುವಾಗ ಅಕ್ಷರ-ಅಂಕಿಗಳ ಕಲಸುಮೇಲೋಗರದಂತೆ ಕಾಣುವ ಚಿತ್ರವೊಂದು ಕಾಣಿಸಿಕೊಳ್ಳುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ಸಂಗತಿ. ಆ ಅಕ್ಷರ-ಅಂಕಿಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪ್ ಮಾಡಿದಾಗಲಷ್ಟೇ ನಮ್ಮ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ. ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುವ ಈ ವಿಧಾನಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಇದು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆ ಇದು. ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ. ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ. ಇಂತಹ ಚಿತ್ರವಿಚಿತ್ರ ಕ್ಯಾಪ್ಚಾಗಳ ಬಳಕೆಯನ್ನು ನಿಲ್ಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ನಿರ್ದಿಷ್ಟ ಸ್ಥಳದಲ್ಲಿ ಕ್ಲಿಕ್ ಮಾಡುವ ಮೂಲಕ ನಾನು ರೋಬಾಟ್ ಅಲ್ಲ ಎಂದು ದೃಢೀಕರಿಸುವಂತೆ ಕೇಳುವ ಸರಳ ಕ್ಯಾಪ್ಚಾ ಇಂತಹ ಪ್ರಯತ್ನಗಳಿಗೊಂದು ಉದಾಹರಣೆ.

Carrier Billing
ಕ್ಯಾರಿಯರ್ ಬಿಲ್ಲಿಂಗ್
(ರೂಪಿಸಬೇಕಿದೆ)
ಮೊಬೈಲ್ ಬಳಸಿ ಕೊಂಡ ವಸ್ತು-ಸೇವೆಗಳಿಗೆ ನೀಡಬೇಕಾದ ಹಣವನ್ನು ಮೊಬೈಲ್ ಬಿಲ್ ಜೊತೆಯಲ್ಲೇ ಪಾವತಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
ಕರೆಯ ರೂಪದಲ್ಲೋ ಸಂದೇಶದ ರೂಪದಲ್ಲೋ ಮೊಬೈಲ್ ಮೂಲಕ ನಾವು ರವಾನಿಸುವ ಮಾಹಿತಿ ತಲುಪಬೇಕಾದವರನ್ನು ತಲುಪುತ್ತದೆಯಲ್ಲ, ಅದಕ್ಕೆ ಮಾಧ್ಯಮವಾಗುವುದು ರೇಡಿಯೋ ಅಲೆಗಳು. ರೇಡಿಯೋ ಅಲೆಗಳ ಮೂಲಕ ಈ ಮಾಹಿತಿಯನ್ನು ಕೊಂಡೊಯ್ಯುವುದು ಮೊಬೈಲ್ ಸಂಸ್ಥೆಗಳ ಕೆಲಸ. ಸರಕು ಸಾಮಗ್ರಿಯನ್ನು ಲಗೇಜ್ ಕ್ಯಾರಿಯರ್‌ಗಳು ಹೊತ್ತೊಯ್ಯುವ ರೀತಿಯಲ್ಲಿಯೇ ನಮ್ಮ ಮಾಹಿತಿ ಕೊಂಡೊಯ್ಯುವ ಮೊಬೈಲ್ ಸಂಸ್ಥೆಗಳನ್ನು 'ಟೆಲಿಕಾಮ್ ಕ್ಯಾರಿಯರ್' ಎಂದು ಕರೆಯುತ್ತಾರೆ. ಈಚಿನ ದಿನಗಳಲ್ಲಿ ಅಂತರಜಾಲ ಸಂಪರ್ಕಕ್ಕಾಗಿ ಮೊಬೈಲ್ ಬಳಕೆ ಬಹಳ ವ್ಯಾಪಕವಾಗಿದೆ. ಮೊಬೈಲ್ ಬಳಸಿ ಹಲವು ವಸ್ತುಗಳನ್ನು, ಸೇವೆಗಳನ್ನು ಕೊಳ್ಳುವುದೂ ಈಗ ಸಾಮಾನ್ಯವಾಗಿರುವ ಸಂಗತಿ. ಹೀಗೆ ಕೊಂಡ ವಸ್ತುಗಳಿಗೆ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವ್ಯಾಲೆಟ್ ಮುಂತಾದ ಹಲವು ಸೌಲಭ್ಯಗಳಿರುವುದು ನಮಗೆ ಗೊತ್ತೇ ಇದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಈ ಸೌಲಭ್ಯಗಳನ್ನು ಬಳಸುವುದು ಕಷ್ಟ - ಕೆಲವು ಬಾರಿ ಅಷ್ಟೆಲ್ಲ ವಿವರ ದಾಖಲಿಸುವುದು ಕಿರಿಕಿರಿ ಎನಿಸಿದರೆ ಇನ್ನು ಕೆಲ ಬಾರಿ ನಮ್ಮ ಮಾಹಿತಿ ಇಲ್ಲಿ ಸುರಕ್ಷಿತವೇ? ಎಂಬ ಸಂಶಯ ಬರುತ್ತದೆ. ಇದಕ್ಕೆ ಸರಳ ಪರಿಹಾರ ಒದಗಿಸುವುದು 'ಕ್ಯಾರಿಯರ್ ಬಿಲ್ಲಿಂಗ್' ವ್ಯವಸ್ಥೆ. ಮೊಬೈಲ್ ಬಳಸಿ ಕೊಂಡ ವಸ್ತು-ಸೇವೆಗಳಿಗೆ ನೀಡಬೇಕಾದ ಹಣವನ್ನು ಮೊಬೈಲ್ ಬಿಲ್ ಜೊತೆಯಲ್ಲೇ ಪಾವತಿಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ಬ್ಯಾಂಕ್ ವಿವರದ ಬದಲು ಮೊಬೈಲ್ ಸಂಖ್ಯೆಯನ್ನಷ್ಟೇ ದಾಖಲಿಸಿ ಅದನ್ನು ಓಟಿಪಿ ಮೂಲಕ ದೃಢೀಕರಿಸಿದರೆ ಸಾಕು, ಮುಂದಿನ ಬಿಲ್ಲಿನಲ್ಲಿ ಅಷ್ಟು ಮೊತ್ತ ಸೇರಿಕೊಳ್ಳುತ್ತದೆ; ಪ್ರೀಪೇಯ್ಡ್ ಆಗಿದ್ದರೆ ಖಾತೆಯ ಬ್ಯಾಲೆನ್ಸಿನಲ್ಲಿ ಹಣ ಕಡಿತವಾಗುತ್ತದೆ. ಈ ವ್ಯವಸ್ಥೆ ಹಲವು ತಾಣಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ. ಈಚೆಗೆ ಗೂಗಲ್ ಪ್ಲೇಸ್ಟೋರ್‌ನಂತಹ ದೊಡ್ಡ ವ್ಯವಸ್ಥೆಗಳೂ ಕ್ಯಾರಿಯರ್ ಬಿಲ್ಲಿಂಗ್ ಪ್ರಾರಂಭಿಸಿರುವುದರಿಂದ ಮುಂದೆ ಈ ವ್ಯವಸ್ಥೆ ಇನ್ನೂ ಜನಪ್ರಿಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Cache
ಕ್ಯಾಶ್
(ರೂಪಿಸಬೇಕಿದೆ)
ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಬಳಕೆಯಾಗುವ ವ್ಯವಸ್ಥೆ
ಪದೇಪದೇ ಬೇಕಾಗುವ ವಸ್ತುಗಳನ್ನು ಸುಲಭಕ್ಕೆ ಕೈಗೆ ಸಿಗುವಂತೆ ಇಟ್ಟುಕೊಳ್ಳುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ ತಾನೇ? ಕಂಪ್ಯೂಟರು - ಮೊಬೈಲ್ ಫೋನುಗಳಿಗೂ ಈ ಅಭ್ಯಾಸ ಇದೆ. ತಮ್ಮ ಕಾರ್ಯನಿರ್ವಹಣೆಯಲ್ಲಿ ಆಗಾಗ್ಗೆ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಅವು 'ಕ್ಯಾಶ್' ಎನ್ನುವ ಪರಿಕಲ್ಪನೆಯನ್ನು ಬಳಸುತ್ತವೆ. ಇಲ್ಲಿ ಕ್ಯಾಶ್ ಎಂದರೆ ಹಣ (cash) ಅಲ್ಲ. Cache ಎನ್ನುವುದು ಈ ಕ್ಯಾಶ್‌ನ ಸ್ಪೆಲ್ಲಿಂಗು. ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಮೆಮೊರಿಯಲ್ಲಿ ಪ್ರತ್ಯೇಕವಾಗಿ ಉಳಿಸಿಟ್ಟುಕೊಳ್ಳುವ ಮೂಲಕ ಅವನ್ನು ಥಟ್ಟನೆ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವುದು ಕ್ಯಾಶ್‌ನ ಉದ್ದೇಶ. ಈ ಮೂಲಕ ಒಂದೇ ವಿಷಯವನ್ನು ಪದೇಪದೇ ಮೂಲದಿಂದ ಹೆಕ್ಕಿತರುವ ಅಗತ್ಯ ಇರುವುದಿಲ್ಲ; ಅಲ್ಲದೆ ಇದರಿಂದ ಸಂಪನ್ಮೂಲದ ಉಳಿತಾಯವೂ ಸಾಧ್ಯವಾಗುತ್ತದೆ. ಇತರ ತಂತ್ರಾಂಶಗಳೂ ಕ್ಯಾಶ್ ಪರಿಕಲ್ಪನೆಯನ್ನು ಬಳಸುತ್ತವೆ. ನಾವು ಆಗಾಗ್ಗೆ ನೋಡುವ ಜಾಲತಾಣಗಳಲ್ಲಿರುವ ಮಾಹಿತಿಯನ್ನು ಬ್ರೌಸರ್ ಕ್ಯಾಶ್‌ನಲ್ಲಿ ಉಳಿಸಿಟ್ಟುಕೊಳ್ಳುವ ಮೂಲಕ ಅದನ್ನು ಪದೇಪದೇ ಡೌನ್‌ಲೋಡ್ ಮಾಡುವ ಅನಿವಾರ್ಯತೆ ತಪ್ಪುತ್ತದೆ. ಪದೇಪದೇ ಬೇಕಾಗುವ ಇಂತಹ ಮಾಹಿತಿಯನ್ನು ಉಳಿಸಿಟ್ಟುಕೊಳ್ಳಲು ಮೊಬೈಲ್ ಆಪ್‌ಗಳೂ ಇದೇ ತಂತ್ರ ಬಳಸುತ್ತವೆ. ನಮ್ಮ ಬಳಕೆಗೆ ಅನುಗುಣವಾಗಿ ಕ್ಯಾಶ್‌ನಲ್ಲಿ ಉಳಿಯುವ ಮಾಹಿತಿ ಕ್ರಮೇಣ ಬದಲಾಗುತ್ತ ಹೋಗುತ್ತದೆ. ಆದರೂ ಅಗತ್ಯಬಿದ್ದಾಗ ಇಲ್ಲಿರುವ ಮಾಹಿತಿಯನ್ನು ನಾವೇ ಅಳಿಸಿಹಾಕುವುದು ಕೂಡ ಸಾಧ್ಯ. ನಾವು ಯಾವೆಲ್ಲ ತಾಣಗಳಲ್ಲಿ ಏನೆಲ್ಲ ಮಾಡಿದ್ದೇವೆ ಎನ್ನುವುದು ಬೇರೆಯವರಿಗೆ ಗೊತ್ತಾಗಬಾರದು ಎಂದಾಗ, ಕ್ಯಾಶ್‌ನಲ್ಲಿ ಉಳಿದ ಹಳೆಯ ಮಾಹಿತಿಯಿಂದಾಗಿ ಜಾಲತಾಣಗಳು ಸರಿಯಾಗಿ ಕೆಲಸಮಾಡದಿದ್ದಾಗ - ಹೀಗೆ ಅನೇಕ ಸಂದರ್ಭಗಳಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

Cashback
ಕ್ಯಾಶ್‌ಬ್ಯಾಕ್
(ರೂಪಿಸಬೇಕಿದೆ)
ನಿರ್ದಿಷ್ಟ ಸೇವೆಗಾಗಿ ಪಾವತಿಸಿದ ಹಣದ ಒಂದು ಭಾಗವನ್ನು ಗ್ರಾಹಕರಿಗೆ ಹಿಂದಿರುಗಿಸುವ ವ್ಯವಸ್ಥೆ
ನಮ್ಮ ಸೇವೆಯನ್ನು ಬಳಸಿ ನೀವು ಪಾವತಿಸುವ ಹಣದ ಒಂದು ಭಾಗವನ್ನು (ಶೇಕಡಾವಾರು ಲೆಕ್ಕ ಅಥವಾ ನಿರ್ದಿಷ್ಟ ಮೊತ್ತ) ನಿಮಗೆ ಹಿಂದಿರುಗಿಸುತ್ತೇವೆ ಎನ್ನುವುದು 'ಕ್ಯಾಶ್‌ಬ್ಯಾಕ್' ಪರಿಕಲ್ಪನೆಯ ಸಾರಾಂಶ. ಹೀಗೆ ಮರಳಿಸುವ ಹಣ ನೇರ ರಿಯಾಯಿತಿಯ (ಇನ್ಸ್‌ಟಂಟ್ ಕ್ಯಾಶ್‌ಬ್ಯಾಕ್) ರೂಪದಲ್ಲಿರಬಹುದು ಇಲ್ಲವೇ ವ್ಯಾಲೆಟ್‌ಗೆ ಮರಳಿ ಜಮೆಯಾಗಬಹುದು. ನೇರ ರಿಯಾಯಿತಿಯಲ್ಲದ ಕ್ಯಾಶ್‌ಬ್ಯಾಕ್ ಬಳಸುವುದರ ಮೇಲೆ ಸಂಸ್ಥೆಗಳು ಹಲವು ನಿರ್ಬಂಧಗಳನ್ನು ಹೇರುವುದು ಸಾಧ್ಯವಿದೆ. ನಿಮ್ಮ ಮುಂದಿನ ವಹಿವಾಟಿನ ಮೊತ್ತದ ಶೇ. ೫ಕ್ಕೋ ಶೇ. ೧೦ಕ್ಕೋ ಸೀಮಿತವಾದ ರಿಯಾಯಿತಿ ಪಡೆಯಲು ಈ ಹಣ ಬಳಸಿ ಎಂದು ಒಂದು ಸಂಸ್ಥೆ ಹೇಳಿದರೆ ಮುಂದಿನ ಮೂವತ್ತು ದಿನಗಳಲ್ಲಿ ಇದನ್ನು ಬಳಸಿಕೊಳ್ಳಿ ಎಂದು ಇನ್ನೊಂದು ಸಂಸ್ಥೆ ಹೇಳುವುದು ಸಾಧ್ಯವಿದೆ. ಇನ್ನು ಕೆಲವೆಡೆ ಈ ಮೊತ್ತವನ್ನು ಯಾವುದೇ ನಿರ್ಬಂಧವಿಲ್ಲದೆ ನಮ್ಮ ವ್ಯವಹಾರಕ್ಕೆ ಬಳಸಿಕೊಳ್ಳಬಹುದು. ಕೆಲ ವ್ಯಾಲೆಟ್ಟುಗಳಲ್ಲಿ ನಾವು ಜಮೆ ಮಾಡಿದ ಹಣವನ್ನು ಮರಳಿ ಬ್ಯಾಂಕಿಗೆ ಹಾಕಿಕೊಳ್ಳುವ ಸೌಲಭ್ಯವಿರುತ್ತದೆ. ಆದರೆ, ಕ್ಯಾಶ್‌ಬ್ಯಾಕ್ ರೂಪದಲ್ಲಿ ದೊರೆತ ಹಣವನ್ನು ಹಾಗೆ ಬ್ಯಾಂಕಿಗೆ ಹಾಕಲು ಅನುಮತಿ ಇರುವುದಿಲ್ಲ.

QR Code
ಕ್ಯೂಆರ್ ಕೋಡ್
(ರೂಪಿಸಬೇಕಿದೆ)
ಕ್ವಿಕ್ ರೆಸ್ಪಾನ್ಸ್ ಕೋಡ್; ಹಲವು ಬಗೆಯ ಮಾಹಿತಿಯನ್ನು ಪ್ರತಿನಿಧಿಸಬಲ್ಲ ಚೌಕಾಕಾರದ ಸಂಕೇತ. ಎರಡು ಆಯಾಮದ ಬಾರ್‌ಕೋಡ್.
"ಹೆಚ್ಚಿನ ಮಾಹಿತಿಗಾಗಿ ಈ ಸಂಕೇತವನ್ನು ಸ್ಕ್ಯಾನ್ ಮಾಡಿ" ಎನ್ನುವ ಸಂದೇಶದ ಜೊತೆಗೆ ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕಗಳು ಮುದ್ರಿತವಾಗಿರುವುದನ್ನು ನಾವು ಬಹಳಷ್ಟು ಕಡೆ ನೋಡುತ್ತೇವಲ್ಲ, ಆ ಸಂಕೇತದ ಹೆಸರು ಕ್ಯೂಆರ್ ಕೋಡ್. ಇಲ್ಲಿ ಕ್ಯೂಆರ್ ಎನ್ನುವುದು 'ಕ್ವಿಕ್ ರೆಸ್ಪಾನ್ಸ್' ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತಿರುತ್ತೇವೆ. ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ. ಬಾರ್‌ಕೋಡ್‌ಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ತನ್ನೊಳಗೆ ಇಟ್ಟುಕೊಂಡಿರುವುದು ಈ ಸಂಕೇತಗಳ ಹೆಚ್ಚುಗಾರಿಕೆ. ಅಂಗಡಿಯಲ್ಲಿಟ್ಟ ವಸ್ತುಗಳ ವಿವರಣಾ ಚೀಟಿಯಿಂದ ಪ್ರಾರಂಭಿಸಿ ಜಾಹೀರಾತುಗಳವರೆಗೆ ಕ್ಯೂಆರ್ ಕೋಡ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಜಾಲತಾಣಗಳ ವಿಳಾಸವನ್ನು ಸೂಚಿಸಲೂ ಇವನ್ನು ಬಳಸಬಹುದು. ನಮ್ಮ ಸಂಪರ್ಕ ವಿವರಗಳನ್ನು - ಇಮೇಲ್, ವೆಬ್‌ಸೈಟ್, ದೂರವಾಣಿ ಸಂಖ್ಯೆ ಇತ್ಯಾದಿ - ಪ್ರತಿನಿಧಿಸಲು ಕ್ಯೂಆರ್ ಕೋಡ್ ರೂಪಿಸಿಕೊಂಡು ಅದನ್ನು ನಮ್ಮ ವಿಸಿಟಿಂಗ್ ಕಾರ್ಡಿನಲ್ಲಿ ಮುದ್ರಿಸಿಕೊಳ್ಳುವುದೂ ಸಾಧ್ಯ (ಕ್ಯೂಆರ್ ಕೋಡ್ ರೂಪಿಸಿಕೊಡುವ ಅನೇಕ ಉಚಿತ ಸವಲತ್ತುಗಳು ವಿಶ್ವವ್ಯಾಪಿ ಜಾಲದಲ್ಲಿವೆ). ಕ್ಯೂಆರ್ ಕೋಡ್‌ಗಳು ಮೊದಲ ಬಾರಿ ಬಳಕೆಯಾದದ್ದು ಆಟೊಮೊಬೈಲ್ ಕ್ಷೇತ್ರದಲ್ಲಿ. ಇದರಲ್ಲಿ ಅಡಕವಾಗಿರುವ ಮಾಹಿತಿಯನ್ನು ಓದಲು ಮೊದಲಿಗೆ ಕ್ಯೂಆರ್ ಕೋಡ್ ರೀಡರ್ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲ ಸ್ಮಾರ್ಟ್‌ಫೋನುಗಳಲ್ಲೂ ಕ್ಯಾಮೆರಾ ಬಳಸಿ ಈ ಸಂಕೇತಗಳನ್ನು ಗುರುತಿಸುವ ತಂತ್ರಾಂಶ ಲಭ್ಯವಿರುವುದರಿಂದ ಪ್ರತ್ಯೇಕ ಉಪಕರಣದ ಆವಶ್ಯಕತೆ ಇಲ್ಲ (ಕ್ಯೂಆರ್ ಕೋಡ್ ಸ್ಕ್ಯಾನರ್ ತಂತ್ರಾಂಶವನ್ನು ನಿಮ್ಮ ಮೊಬೈಲಿನ ಆಪ್ ಸ್ಟೋರಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು).
">

Crop
ಕ್ರಾಪ್
(ರೂಪಿಸಬೇಕಿದೆ)
ಡಿಜಿಟಲ್ ರೂಪದಲ್ಲಿರುವ ಚಿತ್ರಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕತ್ತರಿಸಿ ಸಣ್ಣದಾಗಿಸುವ ಪ್ರಕ್ರಿಯೆ
ಮೊಬೈಲ್ ಫೋನ್ - ಡಿಜಿಟಲ್ ಕ್ಯಾಮೆರಾಗಳನ್ನು ಬಳಸಿ ನಾವು ಕ್ಲಿಕ್ಕಿಸುವ ಫೋಟೋಗಳೆಲ್ಲ ನಮ್ಮ ಎಲ್ಲ ಅಗತ್ಯಗಳಿಗೂ ಹೊಂದಿಕೊಳ್ಳುವಂತಿರಬೇಕು ಎಂದೇನೂ ಇಲ್ಲ. ಮೊಬೈಲಿನಲ್ಲಿ ಕ್ಲಿಕ್ಕಿಸಿದ್ದನ್ನು ಪ್ರಿಂಟ್ ಹಾಕಿಸುವಾಗ, ನಮ್ಮ ಮುಖದ ಭಾಗವನ್ನಷ್ಟೇ ಆರಿಸಿ ಫೇಸ್‌ಬುಕ್ ಪ್ರೊಫೈಲ್ ಚಿತ್ರ ಮಾಡಿಕೊಳ್ಳುವಾಗೆಲ್ಲ ಮೂಲ ಚಿತ್ರದ ಹಲವು ಭಾಗಗಳನ್ನು ಕತ್ತರಿಸಬೇಕಾಗುತ್ತದೆ. ನಾವು ನಿರೀಕ್ಷಿಸದ ವಸ್ತು-ವಿಷಯಗಳೇನಾದರೂ ಚಿತ್ರದಲ್ಲಿ ಸೇರಿಕೊಂಡಿದ್ದರೆ (ಉದಾ: ಲಾಲ್‌ಬಾಗ್ ಕೆರೆಯ ಪಕ್ಷಿಯ ಪಕ್ಕದಲ್ಲಿ ಪ್ಲಾಸ್ಟಿಕ್ ಡಬ್ಬಿ) ಅದನ್ನು ನಿವಾರಿಸಿಕೊಳ್ಳಲೂ ಕತ್ತರಿಪ್ರಯೋಗ ಅನಿವಾರ್ಯವಾಗುತ್ತದೆ. ಹೀಗೆ ನಮ್ಮ ಅಗತ್ಯಕ್ಕೆ ತಕ್ಕಂತೆ ಚಿತ್ರಗಳನ್ನು ಕತ್ತರಿಸಿ ಸಣ್ಣದಾಗಿಸುವುದನ್ನು 'ಕ್ರಾಪ್' ಮಾಡುವುದು ಎಂದು ಕರೆಯುತ್ತಾರೆ. ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಚಿತ್ರಗಳನ್ನು ನೋಡಲು-ತಿದ್ದಲು ಬಳಕೆಯಾಗುವ ಬಹುತೇಕ ಎಲ್ಲ ತಂತ್ರಾಂಶಗಳಲ್ಲೂ ಈ ಆಯ್ಕೆ ಇರುತ್ತದೆ. ನಮ್ಮ ಇಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳುವುದಷ್ಟೇ ಅಲ್ಲ, ಮುದ್ರಣಕ್ಕೆ-ಪ್ರದರ್ಶನಕ್ಕೆ ಅಗತ್ಯವಾದ ನಿರ್ದಿಷ್ಟ ಆಸ್ಪೆಕ್ಟ್ ರೇಶಿಯೋಗೆ ಹೊಂದುವಂತೆ ಚಿತ್ರವನ್ನು ಕ್ರಾಪ್ ಮಾಡುವ ಸೌಲಭ್ಯವೂ ಇಂತಹ ತಂತ್ರಾಂಶಗಳಲ್ಲಿರುತ್ತದೆ. ಹಲವು ಜಾಲತಾಣಗಳಿಗೆ ಚಿತ್ರಗಳನ್ನು ಸೇರಿಸುವಾಗ (ಉದಾ: ಫೇಸ್‌ಬುಕ್ ಪ್ರೊಫೈಲ್ ಚಿತ್ರ) ನಿರ್ದಿಷ್ಟ ಆಕಾರಕ್ಕೆ ಚಿತ್ರವನ್ನು ಕ್ರಾಪ್ ಮಾಡಿಕೊಳ್ಳುವ ಸೌಲಭ್ಯವನ್ನು ಅಲ್ಲೇ ಕೊಟ್ಟಿರುತ್ತಾರೆ. ಅಂದಹಾಗೆ ಪೂರ್ತಿ ಚಿತ್ರವನ್ನು ಹಾಗೆಯೇ ಉಳಿಸಿಕೊಂಡು ಅದರ ಗಾತ್ರವನ್ನು ಕಡಿಮೆಮಾಡುವುದು, ಚಿತ್ರವನ್ನು ಕ್ರಾಪ್ ಮಾಡುವುದು ಎರಡೂ ಬೇರೆಬೇರೆ ಸಂಗತಿಗಳು. ಮೊದಲ ಸನ್ನಿವೇಶದಲ್ಲಿ ಚಿತ್ರದ ಉದ್ದ-ಅಗಲಗಳನ್ನು ಸಮಪ್ರಮಾಣದಲ್ಲಿ ಕಡಿಮೆಮಾಡುವುದರಿಂದ ಚಿತ್ರದ ಗಾತ್ರ-ಗುಣಮಟ್ಟಗಳೆರಡೂ ಕಡಿಮೆಯಾಗುತ್ತವೆ. ಕ್ರಾಪ್ ಮಾಡಿದಾಗ ಚಿತ್ರದ ಹಲವು ಭಾಗಗಳನ್ನು ತೆಗೆದುಹಾಕುತ್ತೇವಲ್ಲ, ಆಗಲೂ ಅದರ ಗಾತ್ರ ಕಡಿಮೆಯಾಗುತ್ತದೆ. ಆದರೆ ಅದರ ಗುಣಮಟ್ಟ (ರೆಸಲ್ಯೂಶನ್) ಮೂಲ ಚಿತ್ರದಷ್ಟೇ ಇರುತ್ತದೆ.

Cryptography
ಕ್ರಿಪ್ಟೋಗ್ರಫಿ
(ರೂಪಿಸಬೇಕಿದೆ)
ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನ
ಹಲವು ಸಂದರ್ಭಗಳಲ್ಲಿ ಮಾಹಿತಿ ವಿನಿಮಯಕ್ಕೆ ನೀಡುವಷ್ಟು, ಅಥವಾ ಅದಕ್ಕಿಂತ ಕೊಂಚ ಹೆಚ್ಚೇ, ಪ್ರಾಮುಖ್ಯವನ್ನು ಆ ವಿನಿಮಯ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಕೊಡಬೇಕಾಗುತ್ತದೆ. ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದ ಖಾಸಗಿ ಮಾಹಿತಿ ಮೂರನೆಯವರ ಕೈಸೇರದಂತೆ ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಕ್ರಿಪ್ಟೋಗ್ರಫಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ. ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನವೇ ಕ್ರಿಪ್ಟೋಗ್ರಫಿ. ಮಾಹಿತಿಯನ್ನು ಹೀಗೆ ಸುರಕ್ಷಿತ ರೂಪಕ್ಕೆ ಪರಿವರ್ತಿಸಲು ಎನ್‌ಕ್ರಿಪ್‌ಶನ್ (ಗೂಢಲಿಪೀಕರಣ) ಎಂಬ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಕಳುಹಿಸಲಾಗುವ ಮಾಹಿತಿಯನ್ನು ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವುದು (ಎನ್‌ಕ್ರಿಪ್ಟ್ ಮಾಡುವುದು) ಈ ಪ್ರಕ್ರಿಯೆಯ ಮೂಲ ಮಂತ್ರ. ಮಾಹಿತಿಯನ್ನು ಗೂಢಲಿಪಿಗೆ ಪರಿವರ್ತಿಸಿ ಸುರಕ್ಷಿತವಾಗಿ ಕಳಿಸುವ ಅಭ್ಯಾಸ ಹಿಂದಿನ ಕಾಲದಿಂದಲೇ ಇತ್ತು. ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಡಿಜಿಟಲ್ ರೂಪದ ಮಾಹಿತಿಯನ್ನು ಜೋಪಾನಮಾಡಲು, ಅದು ಅನಧಿಕೃತ ವ್ಯಕ್ತಿಗಳ ಕೈಸೇರದಂತೆ ತಡೆಯಲು ಕ್ರಿಪ್ಟೋಗ್ರಫಿಯನ್ನು ಬಳಸಲಾಗುತ್ತದೆ. ಜಾಲದ ಮೂಲಕ ರವಾನಿಸುವಾಗ ಮಾತ್ರವೇ ಅಲ್ಲ, ನಮ್ಮದೇ ಕಂಪ್ಯೂಟರಿನಲ್ಲಿರುವ ದಾಖಲೆಗಳನ್ನೂ ಗೂಢಲಿಪೀಕರಣ ಮಾಡಿ ಇಟ್ಟುಕೊಳ್ಳಬಹುದು. ಅಂದಹಾಗೆ ಕ್ರಿಪ್ಟೋಗ್ರಫಿಯ ದುರುಪಯೋಗ ಕೂಡ ಸಾಧ್ಯ. ಯಾರಾದರೂ ನಮ್ಮ ಕಂಪ್ಯೂಟರನ್ನು ಹ್ಯಾಕ್ ಮಾಡಿ ಅಲ್ಲಿರುವ ಮಾಹಿತಿಯನ್ನೆಲ್ಲ ಎನ್‌ಕ್ರಿಪ್ಟ್ ಮಾಡಿಟ್ಟರೆ ಆ ಮಾಹಿತಿಯನ್ನು ನಾವೇ ತೆರೆಯಲು ಸಾಧ್ಯವಾಗದಂತಹ ಪರಿಸ್ಥಿತಿ ರೂಪುಗೊಳ್ಳಬಹುದು (ರ್‍ಯಾನ್ಸಮ್‌ವೇರ್‌ಗಳು ಬಳಸುವುದು ಇದೇ ತಂತ್ರವನ್ನು). ಇಂತಹ ಸನ್ನಿವೇಶದಿಂದ ಪಾರಾಗಲು ನಾವು ಕೈಗೊಳ್ಳಬಹುದಾದ ಕೆಲವು ಕ್ರಮಗಳೆಂದರೆ: ಅಪರಿಚಿತರು ಕಳಿಸಿದ ಇಮೇಲ್-ಮೆಸೇಜುಗಳ ಮೂಲಕವಾಗಲಿ ಸಂಶಯಾಸ್ಪದ ಜಾಲತಾಣಗಳಿಂದಾಗಲಿ ಏನನ್ನೂ ಡೌನ್‌ಲೋಡ್ ಮಾಡದಿರುವುದು, ನಮ್ಮ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಹಾಗೂ ಸೂಕ್ತ ಆಂಟಿವೈರಸ್ ತಂತ್ರಾಂಶ ಬಳಸುವುದು.

Creative Commons
ಕ್ರಿಯೇಟಿವ್ ಕಾಮನ್ಸ್
(ರೂಪಿಸಬೇಕಿದೆ)
ನಾವು ರೂಪಿಸಿದ ಮಾಹಿತಿಯನ್ನು ಹೇಗೆಲ್ಲ ಬಳಸಬಹುದು ಎಂದು ನಿರ್ದಿಷ್ಟ ಪರವಾನಗಿಗಳ ಮೂಲಕ ನಮೂದಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
ಯಾವುದೇ ಮಾಹಿತಿ ವಿಶ್ವವ್ಯಾಪಿ ಜಾಲದಲ್ಲಿ ಇದೆ ಎಂದಾಕ್ಷಣ ಅದನ್ನು ನಮಗೆ ಬೇಕಾದಂತೆ ಬಳಸಿಕೊಳ್ಳಬಹುದೇ? ಯಾರೋ ಬರೆದ ಲೇಖನವನ್ನು ಲೇಖಕರ ಹೆಸರಿಲ್ಲದೆ ಹಂಚಿಕೊಳ್ಳುವುದು, ಛಾಯಾಚಿತ್ರಗಳನ್ನು ಬಳಸಿಕೊಳ್ಳುವಾಗ ಛಾಯಾಗ್ರಾಹಕರ ಹೆಸರು ಹಾಕದಿರುವುದು ಮುಂತಾದ ಅನೇಕ ಸಂಗತಿಗಳು ವಿವಾದ ಸೃಷ್ಟಿಸುವ ಹಿನ್ನೆಲೆಯಲ್ಲಿ ನಮಗೆ ಎದುರಾಗುವುದು ಇದೇ ಪ್ರಶ್ನೆ. ಹಕ್ಕುಸ್ವಾಮ್ಯ ಅಥವಾ ಕಾಪಿರೈಟ್ ಬಗೆಗಿನ ಇಂತಹ ಗೊಂದಲಗಳನ್ನು ಕಡಿಮೆಮಾಡಲು ನಡೆದಿರುವ ಪ್ರಯತ್ನಗಳ ಮುಂಚೂಣಿಯಲ್ಲಿರುವುದು ಕ್ರಿಯೇಟಿವ್ ಕಾಮನ್ಸ್ ಎಂಬ ಲಾಭಾಪೇಕ್ಷೆಯಿಲ್ಲದ ಜಾಗತಿಕ ಸಂಸ್ಥೆ. ಕ್ರಿಯೇಟಿವ್ ಕಾಮನ್ಸ್‌ನಡಿ ರೂಪಿಸಲಾಗಿರುವ ವಿವಿಧ ಪರವಾನಗಿಗಳನ್ನು (ಲೈಸನ್ಸ್) ಬಳಸಿ ನಾವು ರೂಪಿಸಿರುವ ಮಾಹಿತಿಯನ್ನು ಹೇಗೆಲ್ಲ ಬಳಸಬಹುದು ಎನ್ನುವ ಬಗ್ಗೆ ಸ್ಪಷ್ಟನೆ ಕೊಡುವುದು ಸಾಧ್ಯವಿದೆ. ಚಿತ್ರ, ಸಂಗೀತ, ಪಠ್ಯ - ಹೀಗೆ ಹಲವು ಬಗೆಯ ಮಾಹಿತಿಯ ಜೊತೆಗೆ ನಾವು ಈ ಪರವಾನಗಿಗಳನ್ನು ಬಳಸಬಹುದು. ನಮ್ಮ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದೇ, ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದೇ, ಅದನ್ನು ಬಳಸಿದಾಗ ನಮ್ಮ ಹೆಸರು ನಮೂದಿಸುವುದು ಅಪೇಕ್ಷಣೀಯವೇ - ನಿರ್ದಿಷ್ಟ ಪರವಾನಗಿಯನ್ನು ನಮೂದಿಸುವ ಮೂಲಕ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯ. ಯಾವುದೋ ಛಾಯಾಚಿತ್ರವನ್ನು ನಾವು ನಿರ್ದಿಷ್ಟ ಪರವಾನಗಿಯಡಿಯಲ್ಲಿ ನೀಡಿದ್ದೇವೆ ಎಂದುಕೊಂಡರೆ ಆ ಚಿತ್ರದ ಎಲ್ಲ ರೂಪಾಂತರಗಳನ್ನೂ ಅದೇ ಪರವಾನಗಿಯಲ್ಲಿ ನೀಡಬೇಕು ಎನ್ನುವುದನ್ನೂ ಸ್ಪಷ್ಟಪಡಿಸಲು ಅವಕಾಶವಿದೆ. ಮಾಹಿತಿಯನ್ನು ಯಾವುದೇ ನಿರ್ಬಂಧವಿಲ್ಲದೆ ಬಳಸಬಹುದೆಂದು ತಿಳಿಸುವ 'ಪಬ್ಲಿಕ್ ಡೊಮೈನ್ ಮಾರ್ಕ್' ಪರಿಕಲ್ಪನೆ ಕೂಡ ಕ್ರಿಯೇಟಿವ್ ಕಾಮನ್ಸ್‌ನದೇ ಸೃಷ್ಟಿ.


logo