logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Crash
ಕ್ರ್ಯಾಶ್
(ರೂಪಿಸಬೇಕಿದೆ)
ವಿದ್ಯುನ್ಮಾನ ಉಪಕರಣಗಳ ಕಾರ್ಯಾಚರಣೆಯಲ್ಲಿ ಎದುರಾಗುವ ಅನಿರೀಕ್ಷಿತ ಅಡಚಣೆ
ಕಂಪ್ಯೂಟರ್ ಆಗಲಿ ಮೊಬೈಲ್ ಫೋನ್ ಆಗಲಿ, ಬಳಕೆ ಸರಾಗವಾಗಿರಬೇಕಾದರೆ ಅದರ ಯಂತ್ರಾಂಶ - ತಂತ್ರಾಂಶಗಳೆರಡೂ ಸರಿಯಾಗಿ ಕೆಲಸಮಾಡುತ್ತಿರಬೇಕು. ಈ ಪೈಕಿ ಯಾವುದೇ ಕೈಕೊಟ್ಟರೂ ನಮ್ಮ ಬಳಕೆಯಲ್ಲಿ ಅಡಚಣೆ ಉಂಟಾಗುತ್ತದೆ. 'ಕ್ರ್ಯಾಶ್ ಆಯಿತು' ಎಂದು ಹೇಳುತ್ತೇವಲ್ಲ, ಅದು ಈ ಅಡಚಣೆಯನ್ನೇ ಕುರಿತದ್ದು. ಕಂಪ್ಯೂಟರಿನ ತಂತ್ರಾಂಶ, ಮೊಬೈಲಿನ ಆಪ್‌ಗಳ ಕಾರ್ಯಾಚರಣೆಯಲ್ಲಿ ಎದುರಾಗುವ ಅನಿರೀಕ್ಷಿತ ಅಡಚಣೆಗಳನ್ನು ಕ್ರ್ಯಾಶ್ ಎಂದು ಕರೆಯುತ್ತಾರೆ. ಹಾರ್ಡ್ ಡಿಸ್ಕ್‌ನಂತಹ ಯಂತ್ರಾಂಶಗಳು ವಿಫಲವಾದಾಗಲೂ ಅದನ್ನು 'ಕ್ರ್ಯಾಶ್' ಎಂದೇ ಗುರುತಿಸಲಾಗುತ್ತದೆ. ತಂತ್ರಾಂಶಗಳು ಕ್ರ್ಯಾಶ್ ಆದಾಗ ಅದು ಬಹಳಷ್ಟು ಸಾರಿ ತಾತ್ಕಾಲಿಕ ಅಡ್ಡಿಯಷ್ಟೇ ಆಗಿರುತ್ತದೆ. ಇಂತಹ ಅಡ್ಡಿಗಳಿಗೆ ಸಂಪನ್ಮೂಲಗಳ ಕೊರತೆ, ಸಂಪರ್ಕದ ಅಡಚಣೆ - ಹೀಗೆ ಅನೇಕ ಕಾರಣಗಳಿರಬಹುದು. ತಂತ್ರಾಂಶ ರಚನೆಯಲ್ಲಿನ ನ್ಯೂನತೆಯಿಂದಲೂ ತಂತ್ರಾಂಶಗಳು ಕ್ರ್ಯಾಶ್ ಆಗುತ್ತವೆ. ಹಲವು ತಂತ್ರಾಂಶ ನಿರ್ಮಾತೃಗಳು ಕ್ರ್ಯಾಶ್ ಆದ ಸಂದರ್ಭದ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ಆವೃತ್ತಿಗಳಲ್ಲಿ ಆ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ತಂತ್ರಾಂಶಗಳು ಕ್ರ್ಯಾಶ್ ಆಗುವ ಕೆಲ ಪರಿಚಿತ ಸಂದರ್ಭಗಳನ್ನು ನಿಭಾಯಿಸುವ ಕ್ಷಮತೆ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಇರುವುದೂ ಉಂಟು. ಯಂತ್ರಾಂಶಗಳು ಕ್ರ್ಯಾಶ್ ಆದಾಗ ಅವುಗಳಿಗೆ ಭೌತಿಕ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ ಹಾರ್ಡ್ ಡಿಸ್ಕ್ - ಮೆಮೊರಿ ಕಾರ್ಡ್ ಇತ್ಯಾದಿಗಳು ಕ್ರ್ಯಾಶ್ ಆದವೆಂದರೆ ಅವನ್ನು ಮತ್ತೆ ಬಳಸುವುದು ಸಾಧ್ಯವಾಗದೆ ಇರಬಹುದು. ಇನ್ನು ಕೆಲ ಸಂದರ್ಭಗಳಲ್ಲಿ ಬಾಹ್ಯ ನೆರವು ಪಡೆದುಕೊಂಡು ಅದರಲ್ಲಿರುವ ಮಾಹಿತಿಯನ್ನು ಹೊರತೆಗೆಯಬೇಕಾಗುತ್ತದೆ.

Click
ಕ್ಲಿಕ್
(ರೂಪಿಸಬೇಕಿದೆ)
ಮೌಸ್ ಬಳಸಿ ನಿರ್ದಿಷ್ಟ ಕೆಲಸಗಳನ್ನು ಸಾಧಿಸಿಕೊಳ್ಳಲು ಅದರ ಗುಂಡಿಗಳನ್ನು ಒತ್ತುವ ಕ್ರಿಯೆ. ಛಾಯಾಚಿತ್ರ ಸೆರೆಹಿಡಿಯಲು ಕ್ಯಾಮೆರಾ ಗುಂಡಿ ಒತ್ತುವುದನ್ನೂ ಕ್ಲಿಕ್ ಮಾಡುವುದು ಎಂದೇ ಗುರುತಿಸಲಾಗುತ್ತದೆ.
ಕಂಪ್ಯೂಟರ್ ಜೊತೆಗೆ ಮೌಸ್ ಬಳಸುವುದು ನಮಗೆಲ್ಲ ಚೆನ್ನಾಗಿಯೇ ಪರಿಚಯವಿರುವ ಸಂಗತಿ. ಹೀಗೆ ಬಳಸುವಾಗ ನಿರ್ದಿಷ್ಟ ಕೆಲಸಗಳನ್ನು ಸಾಧಿಸಿಕೊಳ್ಳಲು ಅದರ ಮುಂಭಾಗದಲ್ಲಿರುವ ಗುಂಡಿಗಳನ್ನು ಒತ್ತಬೇಕಾಗುತ್ತದೆ. 'ಕ್ಲಿಕ್' ಮಾಡುವುದು ಎಂದರೆ ಇದೇ. ತಂತ್ರಾಂಶಗಳನ್ನು ತೆರೆಯಲು, ಪಠ್ಯವನ್ನು ಆರಿಸಿಕೊಳ್ಳಲು, ಕಡತಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸಲು ನಾವು ಸಾಮಾನ್ಯವಾಗಿ ಮೌಸಿನ ಎಡಬದಿಯ ಗುಂಡಿಯನ್ನು ಬಳಸುತ್ತೇವೆ. ಈ ಪ್ರಕ್ರಿಯೆಯೇ 'ಲೆಫ್ಟ್ ಕ್ಲಿಕ್'. ಮೌಸ್‌ನ ಬಲಬದಿಯಲ್ಲೂ ಒಂದು ಗುಂಡಿ ಇರುತ್ತದಲ್ಲ, ಅದನ್ನು ಒತ್ತಿದಾಗ ನಾವು ಬಳಸುತ್ತಿರುವ ತಂತ್ರಾಂಶದಲ್ಲಿ ಲಭ್ಯವಿರುವ ಆಯ್ಕೆಗಳ ಪಟ್ಟಿ (ಮೆನು) ಕಾಣಿಸಿಕೊಳ್ಳುತ್ತದೆ. ಹೀಗೆ ಮೌಸ್‌ನ ಬಲಬದಿಯ ಬಟನ್ ಒತ್ತುವ ಪ್ರಕ್ರಿಯೆಯನ್ನು 'ರೈಟ್ ಕ್ಲಿಕ್' ಎಂದು ಗುರುತಿಸಲಾಗುತ್ತದೆ. ರೈಟ್ ಕ್ಲಿಕ್ ಮಾಡಿದಾಗ ಕಾಣಿಸಿಕೊಳ್ಳುವ ಮೆನು ಯಾವಾಗಲೂ ಎಲ್ಲ ತಂತ್ರಾಂಶಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಒಂದೇ ತಂತ್ರಾಂಶದಲ್ಲೂ ಆಗಿನ ಸಂದರ್ಭಕ್ಕೆ ಅನುಗುಣವಾಗಿ ಪಟ್ಟಿಯಲ್ಲಿ ಕಾಣುವ ಆಯ್ಕೆಗಳು ಬದಲಾಗುತ್ತವೆ (ಉದಾ: ಬ್ರೌಸರ್ ತಂತ್ರಾಂಶದಲ್ಲಿ ಸುಮ್ಮನೆ ರೈಟ್ ಕ್ಲಿಕ್ ಮಾಡಿದಾಗ ಬರುವ ಆಯ್ಕೆಗಳೂ ಒಂದಷ್ಟು ಪಠ್ಯವನ್ನು ಆರಿಸಿಕೊಂಡು ರೈಟ್ ಕ್ಲಿಕ್ ಮಾಡಿದಾಗ ಬರುವ ಆಯ್ಕೆಗಳೂ ಬೇರೆಬೇರೆಯಾಗಿರುತ್ತವೆ). ಆಯ್ಕೆಗಳ ಈ ಪಟ್ಟಿ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದರಿಂದಲೇ ಇದನ್ನು 'ಕಂಟೆಕ್ಸ್‌ಚುವಲ್ ಮೆನು' ಎಂದು ಕರೆಯುತ್ತಾರೆ (ಕಂಟೆಕ್ಸ್‌ಚುವಲ್ = ಸಾಂದರ್ಭಿಕ).

Click bait
ಕ್ಲಿಕ್ ಬೇಯ್ಟ್
(ರೂಪಿಸಬೇಕಿದೆ)
ಉತ್ಪ್ರೇಕ್ಷಿತ ಅಥವಾ ಸುಳ್ಳು ಮಾಹಿತಿಯನ್ನು ಪ್ರದರ್ಶಿಸಿ ಓದುಗರಲ್ಲಿ ಕುತೂಹಲ ಹುಟ್ಟಿಸುವ, ಮತ್ತು ಆ ಮೂಲಕ ಅವರನ್ನು ತಮ್ಮ ತಾಣದೆಡೆಗೆ ಸೆಳೆಯಲು ಪ್ರಯತ್ನಿಸುವ ಅಭ್ಯಾಸ
ಸಮಾಜ ಜಾಲಗಳಲ್ಲಿ ವಿವಿಧ ರೀತಿಯ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತಿರುತ್ತದೆ. ಹೆಚ್ಚು ಓದುಗರ ಗಮನವನ್ನು ತಮ್ಮತ್ತ ಸೆಳೆಯಲು ಸ್ಪರ್ಧೆ ನಡೆಸುವ ಜಾಲತಾಣಗಳ ಜಾಹೀರಾತಿಗೂ ಸಮಾಜ ಜಾಲಗಳು ಒಳ್ಳೆಯ ಮಾಧ್ಯಮವಾಗಿ ಬೆಳೆದಿವೆ. ಹೆಚ್ಚು ಓದುಗರನ್ನು ತಾಣದತ್ತ ಆಕರ್ಷಿಸಿ ಅಲ್ಲಿ ಪ್ರದರ್ಶಿಸುವ ಜಾಹೀರಾತುಗಳ ಮೂಲಕ ಹೆಚ್ಚುಹೆಚ್ಚು ಹಣ ಸಂಪಾದಿಸುವುದು ಜಾಲತಾಣಗಳ ಉದ್ದೇಶ. ಆದರೆ ಈ ಉದ್ದೇಶವನ್ನಿಟ್ಟುಕೊಂಡ ಕೆಲ ತಾಣಗಳು ಓದುಗರನ್ನು ತಮ್ಮತ್ತ ಸೆಳೆಯಲು ಹಲವು ಕುತಂತ್ರಗಳನ್ನೂ ಬಳಸುತ್ತಿವೆ. ಜಾಹೀರಾತಿನಲ್ಲಿ ಲೇಖನ ಅಥವಾ ವೆಬ್ ಪುಟವೊಂದರ ಶೀರ್ಷಿಕೆ ಇರುವುದು ಸಾಮಾನ್ಯ ತಾನೇ, ಜನರನ್ನು ಸೆಳೆಯುವ ಉದ್ದೇಶದಿಂದ ಆ ಶೀರ್ಷಿಕೆಯನ್ನು ಅನಗತ್ಯವಾಗಿ ವೈಭವೀಕರಿಸುವ ಅಭ್ಯಾಸ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಸಣ್ಣ ವಿಷಯವನ್ನು ದೊಡ್ಡದಾಗಿಸುವ ಅಥವಾ ಇಲ್ಲದ್ದನ್ನು ಇದೆಯೆಂದು ತೋರಿಸಲು ಪ್ರಯತ್ನಿಸುವ ಮೂಲಕ ಓದುಗರಲ್ಲಿ ಕುತೂಹಲ ಹುಟ್ಟಿಸುವ, ಮತ್ತು ಆ ಮೂಲಕ ಅವರನ್ನು ತಮ್ಮ ತಾಣದೆಡೆಗೆ ಸೆಳೆಯಲು ಪ್ರಯತ್ನಿಸುವ ಈ ಅಭ್ಯಾಸವನ್ನು 'ಕ್ಲಿಕ್ ಬೇಯ್ಟ್' (ಬೇಯ್ಟ್ = ಪ್ರಲೋಭನೆ) ಎಂದು ಕರೆಯುತ್ತಾರೆ. "ಪ್ರಖ್ಯಾತರನ್ನು ಕುರಿತ ರಹಸ್ಯ ಬಯಲಾಗಿದೆ"ಯೆಂದೋ "ಆಮೇಲೆ ಏನಾಯಿತೆಂದು ನೀವು ಊಹಿಸಲೂ ಸಾಧ್ಯವಿಲ್ಲ"ವೆಂದೋ ಹೇಳುವ ಪೋಸ್ಟುಗಳು ನಮಗೆ ಕಾಣಸಿಗುತ್ತವಲ್ಲ, ಅವೆಲ್ಲ ಇದೇ ತಂತ್ರವನ್ನು ಬಳಸುತ್ತವೆ. ಇಂತಹ ಬಹುತೇಕ ಲಿಂಕುಗಳ ಮೇಲೆ ಕ್ಲಿಕ್ ಮಾಡಿದಾಗ ನಮಗೆ ಹೊಸ ವಿಷಯವೇನೂ ತಿಳಿಯುವುದಿಲ್ಲ, ಜೊತೆಗೆ ಸಮಯವೂ ವ್ಯರ್ಥವಾಗುತ್ತದೆ. ಇಂತಹ ಕೆಲವು ತಾಣಗಳಿಂದ ನಮ್ಮತ್ತ ಕುತಂತ್ರಾಂಶಗಳು ಬಂದರೂ ಆಶ್ಚರ್ಯವಿಲ್ಲ. ಫೇಸ್‌ಬುಕ್ ಸೇರಿದಂತೆ ಹಲವು ಸಮಾಜಜಾಲಗಳು ಇಂತಹ ತಂತ್ರ ಬಳಸುವ ತಾಣಗಳನ್ನು ನಿರ್ಬಂಧಿಸುವ ಮೂಲಕ ಕ್ಲಿಕ್ ಬೇಯ್ಟ್ ಪಿಡುಗಿಗೆ ತಡೆಹಾಕಲು ಹೊರಟಿವೆ.
">

Clipboard
ಕ್ಲಿಪ್‌ಬೋರ್ಡ್
(ರೂಪಿಸಬೇಕಿದೆ)
ಕಾಪಿ ಮಾಡಿಕೊಂಡ ಮಾಹಿತಿಯನ್ನು ಇನ್ನೊಂದೆಡೆ ಬಳಸುವವರೆಗೆ ಉಳಿಸಿಟ್ಟುಕೊಳ್ಳುವ ಸೌಲಭ್ಯ
ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ, ಡಿಜಿಟಲ್ ರೂಪದ ಮಾಹಿತಿಯನ್ನು ನಕಲಿಸಿಕೊಳ್ಳುವುದು ಹಾಗೂ ಇನ್ನೊಂದು ಕಡೆ ಬಳಸುವುದು ನಮಗೆಲ್ಲ ಚೆನ್ನಾಗಿಯೇ ಗೊತ್ತು. ಕಾಪಿ-ಪೇಸ್ಟ್ ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ನಕಲಿಸಿಕೊಂಡ ಮಾಹಿತಿಯನ್ನು ಇನ್ನೊಂದೆಡೆ ಬಳಸುವವರೆಗೆ ಅದು ಒಂದು ಕಡೆ ಉಳಿದಿರಬೇಕಲ್ಲ, ಅದಕ್ಕಾಗಿ ಬಳಕೆಯಾಗುವುದೇ 'ಕ್ಲಿಪ್‌ಬೋರ್ಡ್'. ಈ ಉದ್ದೇಶಕ್ಕಾಗಿ ಕಂಪ್ಯೂಟರಿನ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯ (ರ್‍ಯಾಮ್) ಒಂದು ಭಾಗವನ್ನು ಬಳಸಲಾಗುತ್ತದೆ. ಯಾವುದೇ ಮಾಹಿತಿಯನ್ನು ಕಾಪಿ ಮಾಡಿಕೊಂಡ ತಕ್ಷಣ ಅದು ಈ ಕ್ಲಿಪ್‌ಬೋರ್ಡಿಗೆ ವರ್ಗಾವಣೆಯಾಗುತ್ತದೆ. ಆ ಮಾಹಿತಿಯನ್ನು ಇನ್ನೊಂದೆಡೆ ಬಳಸಲು 'ಪೇಸ್ಟ್' ಆಯ್ಕೆ ಬಳಸುತ್ತೇವಲ್ಲ, ಆಗ ಅದೇ ಮಾಹಿತಿ ಕ್ಲಿಪ್‌ಬೋರ್ಡಿನಿಂದ ನಮ್ಮ ಆಯ್ಕೆಯ ತಂತ್ರಾಂಶಕ್ಕೆ ವರ್ಗಾವಣೆಯಾಗುತ್ತದೆ. ಈ ಮಾಹಿತಿಯೆಲ್ಲ ರ್‍ಯಾಮ್‌ನಲ್ಲಿರುತ್ತದಲ್ಲ, ಹಾಗಾಗಿ ಅದು ಬಳಕೆಗೆ ಲಭ್ಯವಿರುವುದು ಕಂಪ್ಯೂಟರಿಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ. ಬಹಳಷ್ಟು ಸಂದರ್ಭಗಳಲ್ಲಿ ಕ್ಲಿಪ್‌ಬೋರ್ಡಿನಲ್ಲಿರುವ ಮಾಹಿತಿ ನಮಗೆ ದೊರಕುವುದು ಬೇರೆಯ ಇನ್ನಷ್ಟು ಮಾಹಿತಿಯನ್ನು ಕಾಪಿ ಮಾಡಿಕೊಳ್ಳುವವರೆಗೆ ಮಾತ್ರ. ಕ್ಲಿಪ್‌ಬೋರ್ಡಿನಲ್ಲಿ ಮಾಹಿತಿಯ ಒಂದಕ್ಕಿಂತ ಹೆಚ್ಚು ತುಣುಕುಗಳನ್ನು ಏಕಕಾಲದಲ್ಲೇ ಉಳಿಸಿಡಲು ನೆರವಾಗುವ ತಂತ್ರಾಂಶಗಳೂ ಇವೆ - ಈ ಕುರಿತ ಮಾಹಿತಿಗಾಗಿ 'ಮಲ್ಟಿ ಕ್ಲಿಪ್‌ಬೋರ್ಡ್' ಅಥವಾ 'ಕ್ಲಿಪ್‌ಬೋರ್ಡ್ ಮ್ಯಾನೇಜರ್' ಎಂದು ಗೂಗಲ್ ಮಾಡಬಹುದು. ಇದೇ ಸೌಲಭ್ಯವನ್ನು ಮೊಬೈಲಿನಲ್ಲಿ ಒದಗಿಸುವ ಆಪ್‌ಗಳೂ ಇವೆ.

Client - Server
ಕ್ಲೈಂಟ್-ಸರ್ವರ್
(ರೂಪಿಸಬೇಕಿದೆ)
ನಿರ್ದಿಷ್ಟ ಮಾಹಿತಿಯನ್ನು ಅಪೇಕ್ಷಿಸುವ ಹಾಗೂ ಅದನ್ನು ಒದಗಿಸುವ ಸಾಧನಗಳ ಜೋಡಿ
ಜಾಲತಾಣವನ್ನು ತೆರೆದಾಗ, ಇಮೇಲ್ ಖಾತೆಗೆ ಲಾಗ್‌ಇನ್ ಆದಾಗ, ಕಡತವೊಂದನ್ನು ಡೌನ್‌ಲೋಡ್ ಮಾಡಿದಾಗಲೆಲ್ಲ ನಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿಗೆ ಬೇರೊಂದು ಕಂಪ್ಯೂಟರಿನಿಂದ ಮಾಹಿತಿ ಬರುತ್ತದೆ. ನಾವು ಅಪೇಕ್ಷಿಸಿದ ಸೇವೆ, ಅರ್ಥಾತ್ ಮಾಹಿತಿಯನ್ನು ನಮಗೆ ಒದಗಿಸುವ ಈ ಕಂಪ್ಯೂಟರನ್ನು 'ಸರ್ವರ್' ಎಂದು ಕರೆಯುತ್ತಾರೆ. ವೆಬ್ ಸರ್ವರ್, ಇಮೇಲ್ ಸರ್ವರ್, ಫೈಲ್ ಸರ್ವರ್‌ಗಳೆಲ್ಲ ಇಂತಹ ವ್ಯವಸ್ಥೆಗೆ ಉದಾಹರಣೆಗಳು. ಸರ್ವರ್‌ಗೆ ನಮ್ಮ ಪರವಾಗಿ ಬೇಡಿಕೆ ಸಲ್ಲಿಸುವುದು ನಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ತಾನೇ? ಹಾಗಾಗಿ ಈ ವ್ಯವಹಾರದಲ್ಲಿ ಗ್ರಾಹಕರ ಸ್ಥಾನ ಅವುಗಳದೇ. ನಿರ್ದಿಷ್ಟ ಸೇವೆಗೆ ಬೇಡಿಕೆ ಸಲ್ಲಿಸುವ ಈ ಸಾಧನಗಳನ್ನು 'ಕ್ಲೈಂಟ್'ಗಳೆಂದು ಗುರುತಿಸಲಾಗುತ್ತದೆ. ಸರ್ವರ್ ಹಾಗೂ ಕ್ಲೈಂಟ್ ಎಂಬ ಎರಡು ಸಾಧನಗಳ ನಡುವೆ ಮಾಹಿತಿಯ ವರ್ಗಾವಣೆಯನ್ನು ಸಾಧ್ಯವಾಗಿಸುವ ಈ ಏರ್ಪಾಡಿಗೆ 'ಕ್ಲೈಂಟ್ - ಸರ್ವರ್ (ಗ್ರಾಹಕ - ಸೇವಕ) ವಿನ್ಯಾಸ' ಎಂದೇ ಹೆಸರು. ನಾವು ದಿನನಿತ್ಯವೂ ಬಳಸುವ ಅನೇಕ ಸೌಲಭ್ಯಗಳು ಕ್ಲೈಂಟ್ - ಸರ್ವರ್ ವಿನ್ಯಾಸವನ್ನು ಆಧರಿಸಿಕೊಂಡೇ ಕೆಲಸಮಾಡುತ್ತವೆ. ಇಂತಹ ಸೌಲಭ್ಯಗಳಲ್ಲಿ ಸರ್ವರ್ ಅನ್ನು ಸಂಪರ್ಕಿಸಲು ನಾವು ವಿವಿಧ ತಂತ್ರಾಂಶ ಸೇವೆಗಳನ್ನು ಬಳಸುತ್ತೇವಲ್ಲ (ಉದಾ: ಇಮೇಲ್ ಖಾತೆಯ ಜಾಲತಾಣ ಅಥವಾ ಆಪ್), ಅವುಗಳನ್ನು 'ಕ್ಲೈಂಟ್ ಸಾಫ್ಟ್‌ವೇರ್' ಎಂದು ಕರೆಯುತ್ತಾರೆ. ಗ್ರಾಹಕರ ಹಾಗೂ ಸರ್ವರ್‌ಗಳ ನಡುವೆ ಸಂಪರ್ಕ ಏರ್ಪಡಿಸುವುದು ಇಂತಹ ತಂತ್ರಾಂಶಗಳ ಕೆಲಸ.

Cloud Computing
ಕ್ಲೌಡ್ ಕಂಪ್ಯೂಟಿಂಗ್
(ರೂಪಿಸಬೇಕಿದೆ)
ತಂತ್ರಾಂಶ, ಸಂಸ್ಕರಣಾ ಸಾಮರ್ಥ್ಯ, ಮಾಹಿತಿ ಸಂಗ್ರಹಣೆಗೆ ಸ್ಥಳಾವಕಾಶ ಮುಂತಾದ ಮೂಲಸೌಕರ್ಯಗಳನ್ನು ಅಂತರಜಾಲದ ಮೂಲಕ ನಮಗೆ ಬೇಕಾದಾಗ ಬೇಕಾದಂತೆ ಒದಗಿಸುವ ವ್ಯವಸ್ಥೆ
ಕ್ಲೌಡ್ ಕಂಪ್ಯೂಟಿಂಗ್ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನದಲ್ಲಿ ಕೊಂಚ ಗೊಂದಲವಾಗುವುದು ಸಹಜ. ಕ್ಲೌಡ್ ಅಂದರೆ ಮೋಡ ಎನ್ನುವುದು ನಿಜವಾದರೂ ಇಲ್ಲಿ ಕ್ಲೌಡ್ ಎಂದರೆ ಆಕಾಶದ ಮೋಡ ಅಲ್ಲ. ತಂತ್ರಾಂಶ, ಸಂಸ್ಕರಣಾ ಸಾಮರ್ಥ್ಯ, ಮಾಹಿತಿ ಸಂಗ್ರಹಣೆಗೆ ಸ್ಥಳಾವಕಾಶ ಮುಂತಾದ ಮೂಲಸೌಕರ್ಯಗಳನ್ನು ಅಂತರಜಾಲದ ಮೂಲಕ ನಮಗೆ ಬೇಕಾದಾಗ ಬೇಕಾದಂತೆ ಒದಗಿಸುವ ವ್ಯವಸ್ಥೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಇದನ್ನು ಬಳಸುವವರು ತಮಗೆ ಬೇಕಾದ ಕಂಪ್ಯೂಟರ್ ವ್ಯವಸ್ಥೆಯನ್ನು ಸ್ವತಃ ಹೊಂದಿಸಿಕೊಳ್ಳುವ ಬದಲು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವವರಿಂದ ಪಡೆದುಕೊಂಡು ತಮ್ಮ ಬಳಕೆಗೆ ಅನುಗುಣವಾದ ಶುಲ್ಕ ಪಾವತಿಸುತ್ತಾರೆ - ಇಷ್ಟು ಯೂನಿಟ್ಟಿಗೆ ಇಷ್ಟು ರೂಪಾಯಿಯ ಲೆಕ್ಕದಂತೆ ಲೈಟ್ ಬಿಲ್ ಕಟ್ಟುತ್ತೇವಲ್ಲ, ಹಾಗೆ! ಜಾಲತಾಣಕ್ಕೆ ಬೇಕಾದ ಸರ್ವರ್ ಸ್ಥಳಾವಕಾಶ, ಇಮೇಲ್ ನಿರ್ವಹಣೆಗೆ ಬೇಕಾದ ವ್ಯವಸ್ಥೆ, ಕಡತಗಳನ್ನು ಶೇಖರಿಸಿಡಲು ಜಾಗ ಮುಂತಾದನ್ನೆಲ್ಲ ನಾವೇ ಕೊಂಡು, ಕಾರ್ಯಗತಗೊಳಿಸಿ, ನಿರ್ವಹಿಸುವ ಬದಲಿಗೆ ಬಾಡಿಗೆಗೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಹಣ ಉಳಿತಾಯವಾಗುವುದರ ಜೊತೆಗೆ ನಿರ್ವಹಣೆಯ ತಲೆನೋವೂ ಕಡಿಮೆಯಾಗುತ್ತದೆ.

QWERTY
ಕ್ವರ್ಟಿ
(ರೂಪಿಸಬೇಕಿದೆ)
ಸದ್ಯ ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಾಗುವ ಇಂಗ್ಲಿಷ್ ಕೀಲಿಮಣೆಗಳಲ್ಲಿರುವ ಕೀಲಿಗಳ ವಿನ್ಯಾಸವನ್ನು ಸೂಚಿಸುವ ಹೆಸರು
ಕಂಪ್ಯೂಟರಿನ ಕೀಬೋರ್ಡ್ ನಮಗೆಲ್ಲ ಗೊತ್ತು. ಇಂಗ್ಲಿಷ್ ಅಕ್ಷರ 'ಎ' ಪಕ್ಕದಲ್ಲಿ 'ಎಸ್', 'ಬಿ'-'ಸಿ'ಗಳ ನಡುವೆ 'ವಿ', 'ಡಿ' ನಂತರ 'ಎಫ್' - ಹೀಗೆ ಇಲ್ಲಿನ ಕೀಲಿಗಳ ಜೋಡಣೆ ತೀರಾ ವಿಚಿತ್ರ ಎನ್ನುವುದೂ ನಮ್ಮ ಗಮನಕ್ಕೆ ಬಂದಿರುತ್ತದೆ. ಕೀಲಿಮಣೆಯ ಮೊದಲ ಸಾಲಿನಲ್ಲಿ ಕಾಣುವ Q - W - E - R - T - Y ಯಂತೂ ಎಷ್ಟು ಪರಿಚಿತವೆಂದರೆ ಕೀಲಿಮಣೆಗಳನ್ನು 'ಕ್ವರ್ಟಿ ಕೀಬೋರ್ಡ್'ಗಳೆಂದು ಕರೆಯುವ ಅಭ್ಯಾಸವೇ ಬೆಳೆದುಬಂದಿದೆ. ಈ ಜೋಡಣೆ ಮೊದಲಿಗೆ ಕಾಣಿಸಿಕೊಂಡದ್ದು ಟೈಪ್‌ರೈಟರುಗಳಲ್ಲಿ, ಸುಮಾರು ಎರಡು ಶತಮಾನಕ್ಕೂ ಹಿಂದೆ! ಇದನ್ನು ರೂಪಿಸಿದ ಶ್ರೇಯ ಕ್ರಿಸ್ಟೋಫರ್ ಶೋಲ್ಸ್ (೧೮೧೯ - ೧೮೯೦) ಎಂಬಾತನಿಗೆ ಸಲ್ಲುತ್ತದೆ. ಟೈಪ್‌ರೈಟರಿನಲ್ಲಿ ಟೈಪಿಸುವಾಗ ಅಕ್ಷರದ ಅಚ್ಚುಗಳು ಒಂದಕ್ಕೊಂದು ಸಿಕ್ಕಿಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಅವನು ಈ ವಿನ್ಯಾಸ ರೂಪಿಸಿದನಂತೆ. ಜೊತೆಯಾಗಿ ಬಳಕೆಯಾಗುವ ಅಕ್ಷರಗಳು ಪರಸ್ಪರ ದೂರದಲ್ಲಿರುವಂತೆ ನೋಡಿಕೊಳ್ಳಲು ಅವನು ರೂಪಿಸಿದ ಸೂತ್ರವೇ ಕ್ವರ್ಟಿ. ಈ ಜೋಡಣೆ ಬಳಸಿದ ಟೈಪ್‌ರೈಟರ್ ವಿನ್ಯಾಸಕ್ಕೆ ಪೇಟೆಂಟ್ ದೊರೆತದ್ದು ೧೮೬೮ರಲ್ಲಿ. ಈ ವಿನ್ಯಾಸ ಟೈಪ್‌ರೈಟರುಗಳಲ್ಲಿ ಅದೆಷ್ಟು ಜನಪ್ರಿಯವಾಯಿತೆಂದರೆ ನಂತರದ ದಿನಗಳಲ್ಲಿ ಬಂದ ಕಂಪ್ಯೂಟರುಗಳೂ ಇದೇ ವಿನ್ಯಾಸವನ್ನು ಬಳಸಿದವು. ಟೈಪ್‌ರೈಟರುಗಳೊಡನೆ ದೂರದ ಸಂಬಂಧವೂ ಇರದ, ಭೌತಿಕ ಕೀಲಿಮಣೆಯೇ ಇಲ್ಲದ ಸ್ಮಾರ್ಟ್‌ಫೋನುಗಳಲ್ಲೂ ಈ ವಿನ್ಯಾಸ ಬಳಕೆಯಲ್ಲಿದೆ.

Chatbot
ಚಾಟ್‌ಬಾಟ್
(ರೂಪಿಸಬೇಕಿದೆ)
ಬಳಕೆದಾರರೊಡನೆ ಸ್ವಯಂಚಾಲಿತವಾಗಿ ಸಂಭಾಷಣೆ ನಡೆಸಬಲ್ಲ ತಂತ್ರಾಂಶ
ನಿಗದಿತ ಕೆಲಸವನ್ನು ಸ್ವಯಂಚಾಲಿತವಾಗಿ ಮಾಡುವ ತಂತ್ರಾಂಶವನ್ನು 'ಬಾಟ್' ಎಂದು ಕರೆಯುತ್ತಾರೆ. ಬಳಕೆದಾರರೊಡನೆ ಚಾಟ್ ಮಾಡಬಲ್ಲ ಇಂತಹ ಬಾಟ್‌ಗೆ 'ಚಾಟ್‌ಬಾಟ್' ಎಂದು ಹೆಸರು. ಯಂತ್ರಗಳ ಸಹಾಯದಿಂದ ಸ್ವಯಂಚಾಲಿತ ಗ್ರಾಹಕ ಸೇವೆ ಒದಗಿಸುವ ಉದ್ದೇಶದಿಂದ ಈ ಪರಿಕಲ್ಪನೆ ರೂಪುಗೊಂಡಿದೆ. ಚಾಟ್‌ಬಾಟ್‌ಗಳು ಗ್ರಾಹಕನ ಅಗತ್ಯಕ್ಕೆ ಸರಿಯಾಗಿ ಸ್ಪಂದಿಸಬೇಕಿರುವುದರಿಂದ ಸುಮ್ಮನೆ ಕೆಲಸಮಾಡುತ್ತಲೇ ಹೋಗುವ ಸಾಧಾರಣ ಬಾಟ್‌ಗಿಂತ ಇವು ಭಿನ್ನ ಹಾಗೂ ಹೆಚ್ಚು ಸಂಕೀರ್ಣ. ಚಾಟ್‌ಬಾಟ್‌ಗಳಲ್ಲಿ ಅನೇಕ ವಿಧಗಳಿರಬಹುದು. ಗ್ರಾಹಕನ ಪ್ರಶ್ನೆಯಲ್ಲಿರುವ ಪದಗಳನ್ನು ವಿಶ್ಲೇಷಿಸಿ ಅದಕ್ಕೆ ಹೊಂದುವಂತಹ ಉತ್ತರವನ್ನು ತಮ್ಮ ಸಂಗ್ರಹದಿಂದ ಆಯ್ದು ಕೊಡುವುದು ಈ ಪೈಕಿ ಕೆಲವು ಚಾಟ್‌ಬಾಟ್‌ಗಳು ಬಳಸುವ ತಂತ್ರ. ನಮ್ಮ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡಿಕೊಡುವ (ಉದಾ: ಟಿಕೇಟು ಕಾಯ್ದಿರಿಸುವುದು, ಟ್ಯಾಕ್ಸಿ ಕರೆಸುವುದು ಇತ್ಯಾದಿ) ಚಾಟ್‌ಬಾಟ್‌ಗಳೂ ಇವೆ. ಹಿಂದಿನ ಸಂವಾದಗಳ ಅನುಭವದ ಆಧಾರದಲ್ಲಿ ತಮ್ಮ ಮುಂದಿನ ಉತ್ತರಗಳನ್ನು ಉತ್ತಮಪಡಿಸಿಕೊಳ್ಳುವ ಚಾಟ್‌ಬಾಟ್‌ಗಳನ್ನೂ ರೂಪಿಸಲಾಗುತ್ತಿದೆ. ಇಂತಹ ಚಾಟ್‌ಬಾಟ್‌ಗಳು ಮುಂದೊಮ್ಮೆ ಗ್ರಾಹಕ ಸೇವಾ ವಿಭಾಗದ ಸಿಬ್ಬಂದಿಯ ಸ್ಥಾನ ತೆಗೆದುಕೊಳ್ಳುವ ಮಟ್ಟಕ್ಕೂ ಬೆಳೆಯಬಲ್ಲವು ಎಂದು ನಿರೀಕ್ಷಿಸಲಾಗಿದೆ.

Check-In
ಚೆಕ್-ಇನ್
(ರೂಪಿಸಬೇಕಿದೆ)
ನಾವು ಇರುವ ಸ್ಥಳದ ಬಗ್ಗೆ ಸಮಾಜಜಾಲಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಕ್ರಿಯೆ
ವಿಮಾನ ನಿಲ್ದಾಣ, ಹೋಟೆಲುಗಳಲ್ಲಿ ನಮ್ಮ ಪ್ರವೇಶವನ್ನು ದಾಖಲಿಸುವ ಪ್ರಕ್ರಿಯೆಗೆ 'ಚೆಕ್ ಇನ್' ಎಂದು ಹೆಸರು. ಈ ದಿನ ಇಷ್ಟುಹೊತ್ತಿಗೆ ಹೋಟಲಿಗೆ ಬಂದಿದ್ದೇವೆ ಎಂದೋ ಇಂತಹ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧವಾಗಿದ್ದೇವೆ ಎಂದೋ ಸಂಬಂಧಪಟ್ಟವರಿಗೆ ತಿಳಿಸುವ ಪ್ರಕ್ರಿಯೆ ಇದು. ಇದಕ್ಕೆ ನೇರ ಸಂಬಂಧವಿಲ್ಲದಿದ್ದರೂ ಇದೇ ಹೆಸರಿನ ಇನ್ನೊಂದು ಚಟುವಟಿಕೆ ಸಮಾಜಜಾಲಗಳ ಜಗತ್ತಿನಲ್ಲೂ ಚಾಲ್ತಿಯಲ್ಲಿದೆ. ನಾನು ಇಂತಹ ಸ್ಥಳದಲ್ಲಿದ್ದೇನೆ ಎಂದು ಸಮಾಜಜಾಲದ ಮಿತ್ರರಿಗೆ ಹೇಳಲು ಅನುವುಮಾಡಿಕೊಡುವ ಸೌಲಭ್ಯವನ್ನೂ 'ಚೆಕ್ ಇನ್' ಎಂದೇ ಕರೆಯುತ್ತಾರೆ. ಮೊದಲಿಗೆ ಈ ಸೌಲಭ್ಯವನ್ನಷ್ಟೇ ನೀಡುವ ಸಮಾಜಜಾಲಗಳು ಇದ್ದವಾದರೂ ಈಗ ಫೇಸ್‌ಬುಕ್‌ನಂತಹ ತಾಣಗಳಲ್ಲೂ ಈ ಸೇವೆ ಲಭ್ಯವಿದೆ. ನಾವು ಇರುವ ಸ್ಥಳದ ಬಗ್ಗೆ ನಾವೇ ಮಾಹಿತಿ ಸೇರಿಸುವುದು ಚೆಕ್ ಇನ್‌ನ ಸರಳ ವಿಧಾನ. ಇದಲ್ಲದೆ ಮೊಬೈಲಿನ ಜಿಪಿಎಸ್ ವ್ಯವಸ್ಥೆ ಬಳಸಿಕೊಂಡು ನಾವೆಲ್ಲಿದ್ದೇವೆ ಎಂದು ಪತ್ತೆಹಚ್ಚಿ ಹೆಸರಿಸುವ ಸೌಲಭ್ಯವೂ ಅನೇಕ ತಾಣಗಳಲ್ಲಿವೆ. ನಾವು ಸುಮ್ಮನೆ ಅನುಮತಿ ನೀಡಿದರೆ ಸಾಕು, ಈ ಮಾಹಿತಿ ಸಮಾಜಜಾಲದ ನಮ್ಮ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ನಮ್ಮ ಜೊತೆಯಲ್ಲಿ ಯಾರಿದ್ದಾರೆ ಎನ್ನುವ ಮಾಹಿತಿಯನ್ನೂ ಇಲ್ಲಿ ಸೇರಿಸುವುದು ಸಾಧ್ಯ. ರೈಲು - ಬಸ್ಸು - ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಮಾಡಿದರೆ ನಾವು ಎಲ್ಲಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಸೇರಿಸುವ ಆಯ್ಕೆಯೂ ಕಾಣಿಸಿಕೊಳ್ಳುತ್ತದೆ.

GILT
ಜಿಐಎಲ್‌ಟಿ
(ರೂಪಿಸಬೇಕಿದೆ)
'ಗ್ಲೋಬಲೈಸೇಶನ್, ಇಂಟರ್‌ನ್ಯಾಶನಲೈಸೇಶನ್, ಲೋಕಲೈಸೇಶನ್, ಟ್ರಾನ್ಸ್‌ಲೇಶನ್' ಎನ್ನುವುದರ ಹ್ರಸ್ವರೂಪ; ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುವ ಕುರಿತು ನಮ್ಮ ಗಮನಸೆಳೆಯುವ ಪರಿಕಲ್ಪನೆ
ಇಂದಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸದವರು ಯಾರೂ ಇರಲಿಕ್ಕಿಲ್ಲ. ಹೀಗಾಗಿಯೇ ಇಂದಿನ ತಂತ್ರಾಂಶಗಳು ಪ್ರಪಂಚದಾದ್ಯಂತ ಬಳಕೆಯಾಗುತ್ತವೆ. ಆದರೆ ಒಂದೇ ತಂತ್ರಾಂಶವನ್ನು ಯಾವುದೇ ಬದಲಾವಣೆಯಿಲ್ಲದೆ ಎಲ್ಲರೂ ಬಳಸುವುದು ಕಷ್ಟ. ಬೇರೆಬೇರೆ ಪ್ರದೇಶಗಳ ಸ್ಥಳೀಯ ಅಗತ್ಯಗಳಿಗೆ ಹೊಂದಿಕೊಳ್ಳಲು ಕನಿಷ್ಟಪಕ್ಷ ಸಣ್ಣಪುಟ್ಟ ಬದಲಾವಣೆಗಳನ್ನಾದರೂ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಂತಹ ಬದಲಾವಣೆಗಳತ್ತ ನಮ್ಮ ಗಮನಸೆಳೆಯುವ ಪರಿಕಲ್ಪನೆಯೇ ಜಿಐಎಲ್‌ಟಿ, ಅಂದರೆ 'ಗ್ಲೋಬಲೈಸೇಶನ್, ಇಂಟರ್‌ನ್ಯಾಶನಲೈಸೇಶನ್, ಲೋಕಲೈಸೇಶನ್ ಮತ್ತು ಟ್ರಾನ್ಸ್‌ಲೇಶನ್'. ರೂಪಿಸಲು ಹೊರಟಿರುವ ಉತ್ಪನ್ನ ವಿಶ್ವ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದುವಂತಿರಬೇಕು ಎನ್ನುವುದು ಗ್ಲೋಬಲೈಸೇಶನ್‌ನ ಉದ್ದೇಶ. ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಭಾಷೆಗಳನ್ನು - ಮಾನಕಗಳನ್ನು ಬಳಸುವುದು ಅಗತ್ಯವಾಗುತ್ತದಲ್ಲ, ಇದೆಲ್ಲ ಇಂಟರ್‌ನ್ಯಾಶನಲೈಸೇಶನ್ ಅಡಿಯಲ್ಲಿ ಬರುತ್ತವೆ. ತಂತ್ರಾಂಶವಷ್ಟೇ ಸಿದ್ಧವಾದರೆ ಸಾಲದು; ಅದರಲ್ಲಿ ಬಳಕೆಯಾಗುವ ಬಣ್ಣ-ಚಿತ್ರ-ಉದಾಹರಣೆಗಳನ್ನು ಸ್ಥಳೀಯ ಸಂಸ್ಕೃತಿ - ಸಂಪ್ರದಾಯಗಳಿಗೆ ಹೊಂದುವಂತೆ ಬದಲಿಸುವುದೂ ಅಗತ್ಯ. ಇದು ಲೋಕಲೈಸೇಶನ್. ಇನ್ನು ಪಠ್ಯರೂಪದಲ್ಲಿರುವ ಮಾಹಿತಿಯನ್ನೆಲ್ಲ (ತಂತ್ರಾಂಶದ ಆಯ್ಕೆಗಳು, ಸಹಾಯ ಇತ್ಯಾದಿ) ಸ್ಥಳೀಯ ಭಾಷೆಗೆ ಅನುವಾದಿಸುವುದು ಟ್ರಾನ್ಸ್‌ಲೇಶನ್‌ನ ಕೆಲಸ. ವಿಶ್ವದಾದ್ಯಂತ ಬಳಕೆಯಲ್ಲಿರುವ ಅನೇಕ ತಂತ್ರಾಂಶಗಳನ್ನು ನಮ್ಮ ಬಳಕೆಗೆ ಒಗ್ಗಿಸಿಕೊಳ್ಳುವ ಇಂತಹ ಪ್ರಯತ್ನಗಳು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಜಾರಿಯಲ್ಲಿವೆ.


logo